ಶ್ಲೋಕ – 38
ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ ।
ತತೋ ಯುದ್ಧಾಯ ಯುಜ್ಯಸ್ವ ನೈವಂ ಪಾಪಮವಾಪ್ಸ್ಯಸಿ ॥೩೮॥
ಸುಖ ದುಃಖೇ ಸಮೇ ಕೃತ್ವಾ ಲಾಭ ಅಲಾಭೌ ಜಯ ಅಜಯೌ ತತಃ ಯುದ್ಧಾಯ ಯುಜ್ಯಸ್ವ ನ ಏವಮ್ ಪಾಪಮ್ ಅವಾಪ್ಸ್ಯಸಿ–ಸುಖ-ದುಃಖಗಳನ್ನು, ಗಳಿಕೆ-ಇಳಿಕೆಗಳನ್ನು, ಸೋಲು-ಗೆಲುವನ್ನು ಒಂದೇ ನಿಟ್ಟಿನಿಂದ ಕಂಡು ಮತ್ತೆ ಹೋರಾಡತೊಡಗು. ಆಗ ನಿನಗೆ ಯಾವ ಪಾಪವೂ ತಟ್ಟದು.
ಜೀವನದಲ್ಲಿ ಸುಖ-ದುಃಖ ಎನ್ನುವುದು ಅನಿವಾರ್ಯ. ಸುಖ-ದುಃಖ, ಗಳಿಕೆ-ಇಳಿಕೆ, ಸೋಲು-ಗೆಲುವು ಎಲ್ಲವನ್ನು ಸಮನಾಗಿ ಕಾಣುವವನಿಗೆ ಯಾವ ಪಾಪವೂ ಅಂಟದು. ಎಲ್ಲವನ್ನು ಸಮದೃಷ್ಟಿಯಿಂದ ಕಾಣುತ್ತ, ಕೇವಲ ಕರ್ತವ್ಯ ಪ್ರಜ್ಞೆಯಿಂದ ಹೋರಾಟ ಮಾಡುವುದು ಬದುಕಿನ ಯಶಸ್ವಿನ ಸೂತ್ರ. ಜಯಿಸಬೇಕು ಎನ್ನುವ ಸ್ವಾರ್ಥವಿಲ್ಲದೆ; ನಾವೇ ಲಾಭ ಗಳಿಸಬೇಕು-ಅವರು ಮಣ್ಣು ಮುಕ್ಕಲಿ ಎನ್ನುವ ದ್ವೇಷವಿಲ್ಲದೆ, ಎಲ್ಲವೂ ಭಗವಂತನ ಪ್ರಸಾದ ಎನ್ನುವ ಮನೋಭಾವನೆಯಿಂದ ಹೋರಾಡು ಎನ್ನುತ್ತಾನೆ ಕೃಷ್ಣ. ಭಗವಂತನ ಈ ನುಡಿಯನ್ನು ಮನುಷ್ಯ ತನ್ನ ಜೀವನದಲ್ಲಿ ಅಳವಡಿಸಿಕೊಂಡರೆ ಆತ ಎಂದೂ ದುಃಖಿ ಆಗಲಾರ. “ಬಂದದ್ದೆಲ್ಲಾ ಬರಲಿ ಗೋವಿಂದನ ದಯೆಯೊಂದಿರಲಿ” ಎಂದು ಧರ್ಮ ಮಾರ್ಗದಲ್ಲಿ ಮುನ್ನುಗ್ಗುವವನಿಗೆ ಸದಾ ಸ್ವರ್ಗದ ಬಾಗಿಲು ತೆರೆದಿರುತ್ತದೆ. ಆತನಿಗೆ ದುಃಖ-ದುಃಖವಾಗಿ ಕಾಣಲಾರದು, ಸೋಲು-ಸೋಲಾಗಿ ಕಾಣಲಾರದು. ಆತನಿಗೆ ಇಹವೂ-ಸ್ವರ್ಗ ಪರವೂ-ಸ್ವರ್ಗ.ಇಲ್ಲಿಯವರೆಗೆ ಕೃಷ್ಣ ಆತ್ಮ ತತ್ವದ ಬಗೆಗೆ ಸಾಕಷ್ಟು ವಿವರಣೆಯನ್ನು ಅರ್ಜುನನಿಗೆ ಹೇಳಿದ. ಬದುಕು ಅಂದರೇನು? ಸಾವು ಅಂದರೇನು? ಆತ್ಮ-ಪರಮಾತ್ಮ, ಆ ತತ್ವಗಳ ಅಂತರಂಗದ ರಹಸ್ಯವೇನು? ಇವು ಹೇಗೆ ಯಾವ ಬದಲಾವಣೆ ಇಲ್ಲದೆ ಅನಾದಿನಿತ್ಯ ಎನ್ನುವುದನ್ನು ವಿವರಿಸಿ, ಯುದ್ಧದ ಅವಶ್ಯಕತೆಯನ್ನು ಹೇಳಿದ. ಇಲ್ಲಿಂದ ಮುಂದೆ ಕೃಷ್ಣ ಸಾಂಖ್ಯದಿಂದ ಕರ್ಮದ ಕಡೆ ತಿರುಗುತ್ತಾನೆ.
ನಾವು ಮನಸ್ಸಿನಲ್ಲಿ ವೇದಾಂತವನ್ನು ಎಷ್ಟು ರೂಢಿಸಿಕೊಂಡರೂ, ತತ್ಕಾಲದ ಮನುಷ್ಯನ ದುಃಖ ಅದಮ್ಯವಾಗಿರುತ್ತದೆ-ಎನ್ನುವುದನ್ನು ಗೀತೆ ಸ್ಪಷ್ಟವಾಗಿ ತಿಳಿಸುತ್ತದೆ. ಭಗವಂತನಿಂದ ಗೀತೆಯ ಉಪದೇಶವನ್ನು ಪಡೆದ ಅರ್ಜುನ, ತನ್ನ ಮಗ ಅಭಿಮನ್ಯು ಯುದ್ಧದಲ್ಲಿ ಸತ್ತಾಗ ಪುನಃ ವಿಚಲಿತನಾಗುವುದನ್ನು ನಾವು ಮಹಾಭಾರತದಲ್ಲಿ ಕಾಣುತ್ತೇವೆ. ಪೂರ್ಣವಾದ ಆತ್ಮಸಾಕ್ಷಾತ್ಕಾರ ಪಡೆಯುವುದು ಅಷ್ಟು ಸುಲಭದ ವಿಷಯವಲ್ಲ. ಆತ್ಮ ಅಜರ-ಅಮರ ಎಂದು ತಿಳಿದರಷ್ಟೇ ಸಾಲದು, ಪೂರ್ಣವಾಗಿ ತಿಳಿಯಬೇಕು. ಅಂತಹ ಸ್ಥಿತಿಯಲ್ಲಿ ಎಲ್ಲಾ ದುಃಖವನ್ನು ಮರೆತು ಇರಬಹುದು. ಆದರೆ ಈ ಆತ್ಮ ತತ್ವವನ್ನು ತಿಳಿಯುವ ಬಗೆ ಹೇಗೆ? ಆತ್ಮದ ಜ್ಞಾನವನ್ನು ಪಡೆಯುವ ಸಾಧನವೇನು? ಕೇಳಿದ ತಕ್ಷಣ ಸಾಕ್ಷಾತ್ಕಾರವಾಗಿ ಮನಸ್ಸಿನಲ್ಲಿ ಗಟ್ಟಿಯಾಗಿ ನಿಲ್ಲುವ ವಿಷಯ ಇದಲ್ಲ. ಅಂದಮೇಲೆ ಮಾನಸಿಕವಾಗಿ ಈ ಉತ್ತುಂಗದ ಸ್ಥಿತಿಯನ್ನು ತಲುಪುವುದು ಹೇಗೆ ಎಂದು ಕೃಷ್ಣ ಮುಂದೆ ವಿವರಿಸುತ್ತಾನೆ.