ಶ್ಲೋಕ – 36
ಅವಾಚ್ಯವಾದಾಂಶ್ಚ ಬಹೂನ್ ವದಿಷ್ಯಂತಿ ತವಾಹಿತಾಃ ।
ನಿಂದಂತಸ್ತವ ಸಾಮರ್ಥ್ಯಂ ತತೋ ದುಃಖತರಂ ನು ಕಿಮ್ ॥೩೬॥
ಅವಾಚ್ಯ ವಾದಾನ್ ಚ ಬಹೂನ್ ವದಿಷ್ಯಂತಿ ತವ ಅಹಿತಾಃ ನಿಂದಂತಃ ತವ ಸಾಮರ್ಥ್ಯಮ್ ತತಃ ದುಃಖತರಮ್ ನು ಕಿಮ್ –ನಿನಗಾಗದವರು ನಿನ್ನ ಕೆಚ್ಚನ್ನು ಹೀಗಳೆಯುತ್ತ, ಬಾಯಿ ತುಂಬ ಆಡಬಾರದ ಮಾತುಗಳನ್ನಾಡುತ್ತಾರೆ. ಅದಕ್ಕು ಮಿಗಿಲಾದ ಸಂಕಟ ಏನುಂಟು ?
“ಯಾರು ನಿನ್ನನ್ನು ದೊಡ್ಡ ವೀರ ಎಂದು ಕೈ ಮುಗಿದು ತಲೆಬಾಗಿ ನಿಲ್ಲುತ್ತಿದ್ದರೋ, ಅವರು ನಿನ್ನನ್ನು ಹುಲ್ಲಿಗಿಂತ ಕಡೆಯಾಗಿ ನೋಡುತ್ತಾರೆ. ಸಮಾಜದಲ್ಲಿ ಉನ್ನತ ಪುರುಷನಾಗಿರುವ ನೀನು ಅವಮಾನಿತನಾಗಿ ಬದುಕಬೇಕಾಗುತ್ತದೆ. ಆಡಬಾರದ ಅಸಭ್ಯ ಮಾತುಗಳು ಹುಟ್ಟಿಕೊಳ್ಳುತ್ತವೆ. ಇದರಿಂದ ಈ ಹಿಂದಿನ ಸರ್ವ ಸಾಧನೆಯೂ ಸುಳ್ಳು ಎಂದು ಹೀಗಳೆದು ಆಡಿಕೊಳ್ಳುತ್ತಾರೆ”.
ಒಬ್ಬ ‘ಉತ್ತಮ ನ್ಯಾಯಾಧೀಶ ‘ ಎಂದು ಹೆಸರು ಪಡೆದ ವ್ಯಕ್ತಿ, ಯಾವುದೋ ಒಂದು ಸಂದರ್ಭದಲ್ಲಿ ತನ್ನ ಆತ್ಮೀಯ ಬಂಧುವಿಗೋಸ್ಕರ ಕೆಟ್ಟ ತೀರ್ಪನ್ನು ಕೊಟ್ಟರೆ, ಆತ ತನ್ನ ಸಂಪೂರ್ಣ ವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತಾನೆ. ಆತನ ಹಿಂದಿನ ಎಲ್ಲಾ ಸಾಧನೆಗಳು ಒಂದೇ ಕ್ಷಣದಲ್ಲಿ ಮಣ್ಣುಪಾಲಾಗುತ್ತದೆ. ಆತನಿಂದ ಶಿಕ್ಷೆಗೊಳಗಾದ ಅಪರಾಧಿಗಳು ಅಸಭ್ಯವಾಗಿ ಆತನನ್ನು ನಿಂದಿಸುತ್ತಾರೆ. ಇಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಈ ಸಾಮಾಜಿಕ ಅರಿವನ್ನು ಕೊಡುತ್ತಿದ್ದಾನೆ.