ಶ್ಲೋಕ – 33
ಅಥ ಚೇತ್ ತ್ವಂ ಧರ್ಮ್ಯಮಿಮಂ ಸಂಗ್ರಾಮಂ ನ ಕರಿಷ್ಯಸಿ ।
ತತಃ ಸ್ವಧರ್ಮಂ ಕೀರ್ತಿಂ ಚ ಹಿತ್ವಾ ಪಾಪಮವಾಪ್ಸ್ಯಸಿ ॥೩೩॥
ಅಥ ಚೇತ್ ತ್ವಮ್ ಧರ್ಮ್ಯಮ್ ಇಮಮ್ ಸಂಗ್ರಾಮಮ್ ನ ಕರಿಷ್ಯಸಿ ತತಃ ಸ್ವಧರ್ಮಮ್ ಕೀರ್ತಿಮ್ ಚ ಹಿತ್ವಾ ಪಾಪಮ್ ಅವಾಪ್ಸ್ಯಸಿ– ಒಂದೊಮ್ಮೆ, ನ್ಯಾಯದಿಂದ ಒದಗಿ ಬಂದ ಈ ಕಾಳಗವನ್ನು ನೀನು ಕೈಗೊಳ್ಳದಿದ್ದರೆ, ಆಗ , ನಿನ್ನ ಧರ್ಮವನ್ನೂ ಹೆಸರನ್ನೂ ಕಳೆದುಕೊಂಡು ಪಾಪವನ್ನು ಗಳಿಸುವೆ.
ಮುಂದುವರಿದು ಕೃಷ್ಣ ಅರ್ಜುನನಲ್ಲಿ ಹೇಳುತ್ತಾನೆ: “ನೀನು ಪಾಪದ ಭಯದಿಂದ ಯುದ್ಧ ಬೇಡ ಎಂದು ಹೇಳುತ್ತಿರುವೆ. ಆದರೆ ಯುದ್ಧ ಮಾಡಿದರೆ ಮಾತ್ರ ಧರ್ಮ ಉಳಿಯುತ್ತದೆ, ಹಾಗು ನಿನಗೆ ಸ್ವರ್ಗದ ಬಾಗಿಲು ತೆರೆಯುತ್ತದೆ. ಇಲ್ಲದೆ ಇದ್ದಲ್ಲಿ ನರಕದ ಬಾಗಿಲು ನಿನ್ನನ್ನು ಸ್ವಾಗತಿಸಲಿದೆ” ಎಂದು.
ಇಲ್ಲಿ ನೆಡೆಯುತ್ತಿರುವುದು ಒಂದು ಧರ್ಮ ಸಂಗ್ರಾಮ. ಅರ್ಜುನ ಧರ್ಮದ ಪರ ನಿಂತ ಮಹಾರಥಿ. ಆತ ಇಂತಹ ಧರ್ಮ ಸಂಗ್ರಾಮದಲ್ಲಿ ಧರ್ಮದ ಪರ ಹೋರಾಡದಿದ್ದರೆ ಸಹಜ ಧರ್ಮಕ್ಕೆ ವಿರುದ್ಧವಾಗಿ ಹಾಗು ಸಾಮಾಜಿಕ ಧರ್ಮವನ್ನು ಬಿಟ್ಟು ನೆಡೆದುಕೊಂಡಂತೆ. ಇದೊಂದು ಕಳಂಕ ಮತ್ತು ಮಹಾ ಪಾಪವಾಗುತ್ತದೆ. ಈ ರೀತಿ ಪಾಪದ ಭಯದಿಂದ ಬಳಲುತ್ತಿರುವ ಅರ್ಜುನನಿಗೆ ಕೃಷ್ಣ ಯಾವುದು ನಿಜವಾದ ಪಾಪ ಎನ್ನುವುದನ್ನು ಮನವರಿಕೆ ಮಾಡಿಸುತ್ತಿದ್ದಾನೆ.
ಪಾಪ ಕೃತ್ಯ ಯಾವುದು ಎನ್ನುವುದನ್ನು ಸಂದರ್ಭ ನಿರ್ಧರಿಸುತ್ತದೆ. ಉದಾಹರಣೆಗೆ ‘ಸತ್ಯ ನುಡಿಯುವುದು ಪುಣ್ಯದ ಕೆಲಸ’ ಎಂದು ಹೇಳಲಾಗದು. ಅದು ಪಾಪವೋ ಪುಣ್ಯವೋ ಎನ್ನುವುದನ್ನು ಸಂದರ್ಭ ನಿರ್ಣಯಿಸುತ್ತದೆ. ದರೋಡೆಕೋರರಿಂದ ತಪ್ಪಿಸಿಕೊಳ್ಳಲು ಆಶ್ರಯ ಕೇಳಿ ಬಂದ ವ್ಯಕ್ತಿಯನ್ನು ಅಡಗಿಸಿಟ್ಟು, ದರೋಡೆಕೋರರು ಬಂದು ಪ್ರಶ್ನಿಸಿದಾಗ ಸತ್ಯ ನುಡಿಯುವುದು ಪಾಪದ ಕೆಲಸ. ಅಡಗಿಸಿಟ್ಟ ವ್ಯಕ್ತಿಯ ರಕ್ಷಣೆಗೋಸ್ಕರ ಸುಳ್ಳನ್ನು ಹೇಳುವುದು ಪುಣ್ಯದ ಕೆಲಸ. ಇದೇ ರೀತಿ ಇಲ್ಲಿ ಅರ್ಜುನನಿಗೆ ಧರ್ಮದ ರಕ್ಷಣೆಗೋಸ್ಕರ ಗುರು-ಪಿತಾಮಹರನ್ನು ಎದುರಿಸಿ ಹೋರಾಡುವುದೊಂದೇ ಮಹಾ ಪುಣ್ಯದ ಕೆಲಸ ಎನ್ನುವುದನ್ನು ಕೃಷ್ಣ ಮನವರಿಕೆ ಮಾಡಿಸುತ್ತಿದ್ದಾನೆ.