Wednesday , 22 May 2024

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 02

ಶ್ಲೋಕ – 32

ಯದೃಚ್ಛಯಾ ಚೋಪಪನ್ನಂ ಸ್ವರ್ಗದ್ವಾರಮಪಾವೃತಮ್ ।
ಸುಖಿನಃ ಕ್ಷತ್ರಿಯಾಃ ಪಾರ್ಥ ಲಭಂತೇ ಯುದ್ಧಮೀದೃಶಮ್ ॥೩೨॥

ಯದೃಚ್ಛಯಾ ಚ ಉಪಪನ್ನಮ್ ಸ್ವರ್ಗ ದ್ವಾರಮ್ ಅಪಾವೃತಮ್ ಸುಖಿನಃ ಕ್ಷತ್ರಿಯಾಃ ಪಾರ್ಥ ಲಭಂತೇ ಯುದ್ಧಮ್ ಈದೃಶಮ್–ಇಂಥ ಕಾಳಗವೆಂದರೆ ದೈವೇಚ್ಛೆಯಿಂದ ಕೂಡಿಬಂದ, ತೆರೆದಿಟ್ಟ ಸ್ವರ್ಗದ ಬಾಗಿಲು. ಪಾರ್ಥ, ಭಾಗ್ಯವಂತರಾದ ಕ್ಷತ್ರಿಯರು ಮಾತ್ರವೇ ಇಂಥ ಅವಕಾಶ ಪಡೆಯುತ್ತಾರೆ.

ಕಾಲು ಕೆದಕಿ ಯುದ್ಧ ಮಾಡುವುದು ತಪ್ಪು. ಆದರೆ ಇಲ್ಲಿ ಸಮಷ್ಟಿಯಾಗಿ ಬಂದ ಯುದ್ಧದ ಹೊಣೆಗಾರಿಕೆ ಪಾಂಡವರದ್ದಲ್ಲ. ತನ್ನಷ್ಟಕ್ಕೆ ಬಂದು ಎರಗಿದ ಈ ಯುದ್ಧ ದೈವೇಚ್ಛೆ. ಈಶ್ವರನ ಇಚ್ಚೆಯಂತೆ ಎಲ್ಲವೂ ಆಗುವಾಗ, ಏನು ಬಂತೋ ಅದನ್ನು ಹಾಗೇ ಸ್ವೀಕರಿಸಬೇಕು. ಅನ್ಯಾಯದ ವಿರುದ್ಧ ಧರ್ಮಯುದ್ಧ ಮಾಡಿದವನಿಗೆ ಸ್ವರ್ಗದ ಬಾಗಿಲು ಸದಾ ತೆರೆದಿರುತ್ತದೆ. ಇಂತಹ ಯುದ್ಧದ ಅವಕಾಶ ಒಬ್ಬ ಕ್ಷತ್ರಿಯನಿಗೆ ಬರಬೇಕಾದರೆ ಆತ ಪುಣ್ಯ ಮಾಡಿರಬೇಕು. ಇಂತಹ ಸಮಯದಲ್ಲಿ ಕ್ಷತ್ರಿಯನಾದವನು ಕಣ್ಮುಚ್ಚಿ ಕುಳಿತುಕೊಳ್ಳುವುದು ಮಹಾಪಾಪ.

ಇಲ್ಲಿ ನಮಗೆ ಕೃಷ್ಣ ಅರ್ಜುನನಲ್ಲಿ ಯುದ್ಧಮಾಡು ಎಂದು ಏಕೆ ಹೇಳುತ್ತಿದ್ದಾನೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಪ್ರತಿಯೊಬ್ಬ ಮಾನವನೂ ಸನಾತನಧರ್ಮ, ಅದಕ್ಕನುಗುಣವಾಗಿ ಸಮಾಜಧರ್ಮ ಹಾಗು ಸಮಾಜ ಮತ್ತು ಸನಾತನ ಧರ್ಮಕ್ಕನುಗುಣವಾಗಿ ಸ್ವಧರ್ಮ-ಈ ನೆಲೆಯಲ್ಲಿ ತನ್ನ ಕರ್ತವ್ಯ ನಿರ್ವಹಿಸಬೇಕು. ಈ ನೆಲೆಯಲ್ಲಿ ಮಾಡಿದ ಯಾವ ಕಾರ್ಯವೂ ಪಾಪ ಕಾರ್ಯವಾಗದು. ಮುಂದಿನ ಶ್ಲೋಕದಲ್ಲಿ ಈ ಬಗ್ಗೆ ಇನ್ನೂ ಹೆಚ್ಚಿನ ವಿವರವನ್ನು ಕೃಷ್ಣ ಕೊಡುತ್ತಾನೆ. ಸನಾತನಧರ್ಮ, ಸಮಾಜಧರ್ಮ ಮತ್ತು ಸ್ವಧರ್ಮ ಅಂದರೆ ಏನು ಎನ್ನುವುದನ್ನು ಈಗಾಗಲೇ ಅಧ್ಯಾಯ ಒಂದರಲ್ಲಿ (ಶ್ಲೋಕ-೪೦) ವಿವರವಾಗಿ ವಿಶ್ಲೇಷಿಸಲಾಗಿದೆ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *