ಶ್ಲೋಕ – 31
ಸ್ವಧರ್ಮಮಪಿ ಚಾವೇಕ್ಷ್ಯ ನ ವಿಕಂಪಿತುಮರ್ಹಸಿ ।
ಧರ್ಮ್ಯಾದ್ಧಿ ಯುದ್ಧಾಚ್ಛ್ರೇಯೋSನ್ಯತ್ ಕ್ಷತ್ರಿಯಸ್ಯ ನ ವಿದ್ಯತೇ ॥೩೧॥
ಸ್ವಧರ್ಮಮ್ ಅಪಿ ಚ ಅವೇಕ್ಷ್ಯ ನ ವಿಕಂಪಿತುಮ್ ಅರ್ಹಸಿ ಧರ್ಮ್ಯಾತ್ ಹಿ ಯುದ್ಧಾತ್ ಶ್ರೇಯಃ ಅನ್ಯತ್ ಕ್ಷತ್ರಿಯಸ್ಯ ನ ವಿದ್ಯತೇ — ನಿನ್ನ ಧರ್ಮವನ್ನು ಕಂಡಾದರೂ ನೀನು ಎದೆಗೆಡಬಾರದು ಕ್ಷತ್ರಿಯನಾದವನಿಗೆ ನ್ಯಾಯದಿಂದ ಒದಗಿ ಬಂದ ಕಾಳಗಕ್ಕಿಂತ ಮಿಗಿಲಾದ ಏಳಿಗೆಯಿಲ್ಲ.
ಇಲ್ಲಿ ಅರ್ಜುನನ ಸನಾತನ ಧರ್ಮ ಯಾವುದು? ಸಮಾಜ ಧರ್ಮ ಯಾವುದು? ಹಾಗು ಸ್ವಧರ್ಮ ಯಾವುದು? ಸನಾತನ ಧರ್ಮ ಹೇಳುತ್ತದೆ: ‘ಅನ್ಯಾಯದ ವಿರುದ್ಧ ಹೋರಡಲೇ ಬೇಕು’ ಎಂದು; ಸಮಾಜ ಧರ್ಮ ಹೇಳುತ್ತದೆ: ಕ್ಷತ್ರಿಯನಾದವನು ಅಧರ್ಮದ ವಿರುದ್ಧ ಹೋರಾಡಬೇಕು, ಸಮಾಜದ ರಕ್ಷಣೆ ಮಾಡಬೇಕು ಹಾಗು ಈ ಪುಣ್ಯ ಕಾರ್ಯದಲ್ಲಿ ‘ತನ್ನವರು’ ಎಂದು ನೋಡಬಾರದು ಎಂದು. ಇನ್ನು ಅರ್ಜುನ ಮೂಲತಃ ಕ್ಷತ್ರಿಯನಾದ್ದರಿಂದ ಆತನ ಸ್ವಧರ್ಮ ‘ಅನ್ಯಾಯದ ವಿರುದ್ಧ ಹೋರಾಟ’. ಇಲ್ಲಿ ವ್ಯಕ್ತಿಧರ್ಮ, ಸಮಾಜಧರ್ಮ ಹಾಗು ಸನಾತನಧರ್ಮ ಏಕವಾಗಿದೆ. ಆದ್ದರಿಂದ ಅನ್ಯಾಯದ ವಿರುದ್ಧ ಹೋರಾಡುವುದು ಮಹಾ ಪುಣ್ಯದ ಕೆಲಸ. ಸಮಾಜ ಸುರಕ್ಷತೆಗಾಗಿ ಹೋರಾಡುವುದು ಕ್ಷತ್ರಿಯನ ಮಹಾ ತಪಸ್ಸು. ಇದಕ್ಕಿಂತ ಪುಣ್ಯಕಾರ್ಯ ಇನ್ನೊಂದಿಲ್ಲ.