ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 02

ಶ್ಲೋಕ – 30

ದೇಹೀ ನಿತ್ಯಮವಧ್ಯೋSಯಂ ದೇಹೇ ಸರ್ವಸ್ಯ ಭಾರತ ।
ತಸ್ಮಾತ್ ಸರ್ವಾಣಿ ಭೂತಾನಿ ನ ತ್ವಂ ಶೋಚಿತುಮರ್ಹಸಿ ॥೩೦॥

ದೇಹೀ ನಿತ್ಯಮ್ ಅವಧ್ಯಃ ಅಯಮ್ ದೇಹೇ ಸರ್ವಸ್ಯ ಭಾರತ ತಸ್ಮಾತ್ ಸರ್ವಾಣಿ ಭೂತಾನಿ ನ ತ್ವಮ್ ಶೋಚಿತುಮ್ ಅರ್ಹಸಿ – -ಓ ಭಾರತ, ಎಲ್ಲರ ದೇಹದಲ್ಲೂ ಇರುವ ಈ ಜೀವ ಎಂದೂ ಕೊಲ್ಲಲಾಗದ್ದು.[ಈ ಜೀವವನ್ನು ಕೊಲ್ಲುವುದು ಎಂದೂ ಸಾಧ್ಯವಿಲ್ಲ. ಏಕೆಂದರೆ ಎಲ್ಲರ ದೇಹದಲ್ಲೂ ಭಗವಂತ ಜೀವಕ್ಕೆ ಕಾವಲಿದ್ದಾನೆ] ಆದ್ದರಿಂದ ಎಲ್ಲ ಜೀವಿಗಳಿಗಾಗಿ ನೀನು ಅಳುವುದು ತರವಲ್ಲ.

ಮೂಲಭೂತವಾಗಿ ಯಾರ ದೇಹದಲ್ಲಿರುವ ಜೀವವನ್ನೂ ಸಾಯಿಸುವುದು ಸಾಧ್ಯವಿಲ್ಲ. ದೇಹ ಸಾಯಬೇಕು ಎನ್ನುವುದು ವಿಧಿ ನಿಯಮ, ಹಾಗು ಅದಕ್ಕಾಗಿ ದುಃಖಪಡಬೇಕಾಗಿಲ್ಲ. ತನ್ನ ಸ್ವಂತ ಇಚ್ಛೆಯಿಂದ ದೇಹ ತ್ಯಜಿಸಲು ಸಾಧ್ಯವಿಲ್ಲ, ಹಾಗು ತ್ಯಜಿಸದೆ ಇರಲೂ ಸಾಧ್ಯವಿಲ್ಲ. “ಅಯಮ್ ದೇಹೇ ಸರ್ವಸ್ಯ ಭಾರತ” – “ರಕ್ಷಣೆ ಮಾಡುವ ಭಗವಂತ ಒಳಗೆ ಕುಳಿತಿರುವಾಗ ಹುಟ್ಟು ಸಾವಿಗೆ ನೀನು ಹೊಣೆಗಾರನಾಗಲಾರೆ. ಭರತ ವಂಶದಲ್ಲಿ ಹುಟ್ಟಿ ಬಂದ ನೀನು ಈ ಸತ್ಯವನ್ನು ಅರಿತುಕೊ” ಎನ್ನುತ್ತಾನೆ ಕೃಷ್ಣ. ಜೀವವೆಂಬ ಬೆಳಕಿನ ಕಿಡಿಯನ್ನು ತಿಳಿದಾಗ, ಅದರ ಅರಿವು ಬಂದಾಗ ಹುಟ್ಟು ಸಾವಿನ ಮರ್ಮ ತಿಳಿಯುತ್ತದೆ. ಆಗ ಸಾವು ಒಂದು ಆನಂದದ ಅನುಭವವಾಗುತ್ತದೆ.

ಕೃಷ್ಣನ ಈ ಎಲ್ಲಾ ವಿಶ್ಲೇಷಣೆಯನ್ನು ಕೇಳಿದಾಗ ನಮ್ಮಲ್ಲಿ ಒಂದು ಅಭಿಪ್ರಾಯ ಮೂಡಬಹುದು . “ಕೊಲ್ಲುವುದು ತಪ್ಪಲ್ಲ, ಏಕೆಂದರೆ ಜೀವಕ್ಕೆ ಸಾವಿಲ್ಲ. ಎಲ್ಲವೂ ದೈವೇಚ್ಛೆ. ಯಾರು ಯಾರನ್ನು ಬೇಕಾದರೂ ಕೊಲ್ಲಬಹುದು” ಎಂದು. ಆದರೆ ಅದು ಸರಿಯಲ್ಲ. ಏಕೆಂದರೆ ಈವರೆಗೆ ನಾವು ನೋಡಿದ ವಿಷಯ ಕೇವಲ ಬದುಕಿನ ಒಳನೋಟ. ಸಮಾಜ ಜೀವಿಗಳಾದ ನಾವು ಒಳಗಿನ ಅರಿವನ್ನು ಸಮಾಜದ ವಿರುದ್ಧ ಬಳಸುವುದು ಅಧರ್ಮ. ಶಾಸ್ತ್ರಕ್ಕೆ ಅನುಗುಣವಾಗಿರುವ ಸಮಾಜ ಧರ್ಮವನ್ನು ಪ್ರತಿಯೊಬ್ಬರೂ ಪಾಲಿಸಲೇಬೇಕು. ಮುಂದಿನ ಶ್ಲೋಕದಲ್ಲಿ ಕೃಷ್ಣ ಈ ವಿಚಾರವನ್ನು ಅರ್ಜುನನ ಮುಖೇನ ನಮಗೆ ಸ್ಪಷ್ಟಪಡಿಸುತ್ತಾನೆ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *