ಶ್ಲೋಕ – 29
ಆಶ್ಚರ್ಯವತ್ ಪಶ್ಯತಿ ಕಶ್ಚಿದೇನಂ ಆಶ್ಚರ್ಯವದ್ ವದತಿ ತಥೈವ ಚಾನ್ಯಃ ।
ಆಶ್ಚರ್ಯವಚ್ಚೈನಮನ್ಯಃ ಶೃಣೋತಿ ಶ್ರುತ್ವಾSಪ್ಯೇನಂ ವೇದ ನಚೈವ ಕಶ್ಚಿತ್ ॥೨೯॥
ಆಶ್ಚರ್ಯವತ್ ಪಶ್ಯತಿ ಕಶ್ಚಿತ್ ಏನಮ್ ಆಶ್ಚರ್ಯವತ್ ವದತಿ ತಥಾ ಏವ ಚ ಅನ್ಯಃ ಆಶ್ಚರ್ಯವತ್ ಚ ಏನಮ್ ಅನ್ಯಃ ಶೃಣೋತಿ ಶ್ರುತ್ವಾ ಅಪಿ ಏನಮ್ ವೇದ ನ ಚ ಏವ ಕಶ್ಚಿತ್– ಯಾರಾದರೂ ಈ ಜೀವತತ್ವವನ್ನು ಅಥವಾ ಭಗವಂತನನ್ನು ಕಂಡುಕೊಂಡರೆ ಅದೊಂದು ಅಚ್ಚರಿಯಂತೆ. ಇನ್ನೊಬ್ಬ ಅಂದು ತೋರಿಸಿದರೆ ಅದೊಂದು ಅಚ್ಚರಿಯಂತೆ. ಮಗದೊಬ್ಬ ಅದನ್ನು ಕೇಳಿ ತಿಳಿದರೆ ಅದೂ ಒಂದಚ್ಚರಿಯಂತೆ.[ಯಾರೋ ಒಬ್ಬ ಭಗವಂತನನ್ನು ಅಚ್ಚರಿಗೊಂಡು ನೋಡುತ್ತಾನೆ. ಯಾರೋ ಒಬ್ಬ ಅಚ್ಚರಿಗೊಂಡು ಆಡುತ್ತಾನೆ. ಯಾರೋ ಒಬ್ಬ ಅವನನ್ನು ಅಚ್ಚರಿಗೊಂಡು ಕೇಳುತ್ತಾನೆ] ಎಷ್ಟು ಕೇಳಿದರೂ ಜೀವವನ್ನಾಗಲಿ, ಭಗವಂತನನ್ನಾಗಲಿ ಸರಿಯಾಗಿ ಅರಿತವನು ಯಾರೂ ಇಲ್ಲ.
ಇದು ಜೀವ ಹಾಗು ಭಗವಂತನ ಬಗ್ಗೆ ಇರುವ ಶ್ಲೋಕ. ಭಗವಂತನನ್ನು ಕಂಡವರು ವಿರಳ. ಒಂದು ವೇಳೆ ಬಹಳ ಸಾಧನೆಯಿಂದ ಆತನನ್ನು ಕಂಡುಕೊಂಡರೆ, ಕಂಡವರ ಉದ್ಗಾರ ಕೇವಲ ಅಚ್ಚರಿ. ಅದೊಂದು ವಿಸ್ಮಯ. ಈ ವಿಶ್ವವೇ ಒಂದು ಅದ್ಬುತ, ಹಾಗಿರುವಾಗ ವಿಶ್ವವನ್ನು ನಿರ್ಮಿಸಿದ ಆ ಭಗವಂತ ಅದೆಷ್ಟು ಅದ್ಬುತವಿರಬಹುದು? ಆದ್ದರಿಂದ ಆತನನ್ನು ಕಂಡವರು ಆತನ ಬಗ್ಗೆ ವರ್ಣಿಸಲಾರರು. ಒಂದು ವೇಳೆ ವರ್ಣಿಸಿದರೆ ಕೇಳುವವನಿಗೆ ಅದೊಂದು ಅಚ್ಚರಿ. ಯಾರು ಎಷ್ಟೇ ಕೇಳಲಿ ಕೊನೆಗೆ ಭಗವಂತ ಕೇವಲ ಅಚ್ಚರಿಯಾಗೇ ಉಳಿಯುತ್ತಾನೆ. ಏಕೆಂದರೆ ಭಗವಂತನನ್ನು ತಿಳಿಯುವುದು ಅಸಾಧ್ಯ.
ಇದೇ ರೀತಿ ಜೀವ. ಆತ್ಮ ಸಾಕ್ಷಾತ್ಕಾರ ಆದಾಗ ನಮಗಾಗುವುದು ಕೇವಲ ವಿಸ್ಮಯ. ಅದನ್ನು ವರ್ಣಿಸುವುದು ಅಸಾಧ್ಯ. ಜೀವ ಒಂದು ಬೆಳಕಿನ ಪುಂಜ. ಅದೊಂದು ಮಹಾನ್ ಅಚ್ಚರಿ. ಅದು ಸೂರ್ಯನಿಗಿಂತ ಪ್ರಖರ, ಚಂದ್ರನಿಗಿಂತ ತಂಪಾದ ಬೆಳಕು. ಜೀವ ತತ್ವದ ಬಗ್ಗೆ ಕೇಳಿ ಅದರ ಬಗ್ಗೆ ಖಚಿತವಾದ ತೀರ್ಮಾನಕ್ಕೆ ಬರುವುದು ಅಸಾಧ್ಯ.