ಶ್ಲೋಕ – 25
ಅವ್ಯಕ್ತೋSಯಮಚಿಂತ್ಯೋSಯಮವಿಕಾರ್ಯೋSಯಮುಚ್ಯತೇ ।
ತಸ್ಮಾದೇವಂ ವಿದಿತ್ವೈನಂ ನಾನುಶೋಚಿತುಮರ್ಹಸಿ ॥೨೫॥
ಅವ್ಯಕ್ತಃ ಅಯಮ್ ಅಚಿಂತ್ಯಃ ಅಯಮ್ ಅವಿಕಾರ್ಯಃ ಅಯಮ್ ಉಚ್ಯತೇ ತಸ್ಮಾತ್ ಏವಮ್ ವಿದಿತ್ವಾ ಏನಮ್ ನ ಅನುಶೋಚಿತುಮ್ ಅರ್ಹಸಿ– ಭಗವಂತ ಕಣ್ಣಿಗೆ ಕಾಣದವನು; ಇವನು ಚಿಂತನೆಗೆ ನಿಲುಕದವನು; ಇವನು ಬದಲಾಗದವನು-ಎಂದು ವೇದ ಸಾರುತ್ತದೆ. ಅದರಿಂದ ಅವನ[ಮತ್ತು ಜೀವನ] ಪರಿಯನ್ನು ಹೀಗೆ ಅರಿತ ಮೇಲೆ ಕೊರಗುವುದು ತರವಲ್ಲ.
ಭಗವಂತ ಅವ್ಯಕ್ತ. ಆತನ ಪ್ರತಿಬಿಂಬವಾದ ಜೀವ ಭೌತಿಕ ಶರೀರದಲ್ಲಿದ್ದರೂ ಕೂಡಾ ಅವ್ಯಕ್ತ. ಈ ಕಾರಣದಿಂದ ಭಗವಂತ ಹಾಗು ಜೀವ ನಮ್ಮ ಚಿಂತನೆಗೆ ನಿಲುಕದ್ದು. ನಾನು ಯಾರು? ಎಲ್ಲಿಂದ ಬಂದೆ ? ನಾನೇನು? ಎನ್ನುವುದೇ ನಮಗೆ ಗೊತ್ತಿಲ್ಲ. ಭಗವಂತ ಹಾಗು ಜೀವಸ್ವರೂಪ ಎಂದೂ ಬದಲಾಗದಿದ್ದರೂ ಕೂಡಾ, ಅದು ನಮ್ಮ ಚಿಂತನೆಗೆ ಎಟುಕುವುದಿಲ್ಲ. ಈ ಕಟು ಸತ್ಯವನ್ನು ತಿಳಿದ ಮೇಲೆ ಜೀವ ನಾಶವಾಗುತ್ತದೆ ಎಂದು ದುಃಖಿಸುವ ಅಗತ್ಯವಿಲ್ಲ.