ಶ್ಲೋಕ – 20
ನ ಜಾಯತೇ ಮ್ರಿಯತೇ ವಾ ಕದಾಚಿತ್ ನಾ[S]ಯಂ ಭೂತ್ವಾ ಭವಿತಾ ವಾ ನ ಭೂಯಃ ।
ಅಜೋ ನಿತ್ಯಃ ಶಾಶ್ವತೋSಯಂ ಪುರಾಣೋ ನ ಹನ್ಯತೇ ಹನ್ಯಮಾನೇ ಶರೀರೇ ॥೨೦॥
ನ ಜಾಯತೇ ಮ್ರಿಯತೇ ವಾ ಕದಾಚಿತ್ ನ ಅಯಮ್ ಭೂತ್ವಾ ಭವಿತಾ ವಾ ನ ಭೂಯಃ ಅಜಃ ನಿತ್ಯಃ ಶಾಶ್ವತಃ ಅಯಮ್ ಪುರಾಣಃ ನ ಹನ್ಯತೇ ಹನ್ಯಮಾನೇ ಶರೀರೇ– ಈ ಜೀವ ಎಂದೂ ಹುಟ್ಟುವುದಿಲ್ಲ; ಸಾಯುವುದೂ ಇಲ್ಲ. ಭಗವಂತನ ಅರಿವಿನಂತೆ ಹುದುಗಿದ್ದು ಮತ್ತಾಗುವವನೂ ಅಲ್ಲ. ಇವನು ಹುಟ್ಟಿರದ, ಸಾವಿರದ, ಮಾರ್ಪಡದ-ಭಗವಂತನ ಪಡಿಯಚ್ಚು.[ಈ ಪರಮ ಪುರುಷ ಎಂದೂ ಹುಟ್ಟುವುದಿಲ್ಲ; ಸಾಯುವುದೂ ಇಲ್ಲ. ಸ್ವರೂಪದಿಂದಿದ್ದು ದೇಹದಿಂದ ಹುಟ್ಟುತ್ತಾನೆ ಎನ್ನುವುದೂ ಸಲ್ಲ. ಈ ಜೀವ ಕೂಡ ಹುಟ್ಟದ, ಸಾಯದ, ಬದಲಾಗದ ತತ್ವ.] ದೇಹದಿಂದ ದೇಹಕ್ಕೆ ಅಲೆವ ಈ ಜೀವ ದೇಹ ಅಳಿದರೂ ತಾನಳಿಯುವುದಿಲ್ಲ.
ಇಲ್ಲಿ ಕೃಷ್ಣ ‘ಜೀವ ಸ್ವರೂಪ’ ಅಂದರೆ ಏನೆಂದು ವಿವರಿಸಿದ್ದಾನೆ. ಈ ಜೀವ ಸ್ವರೂಪತಃ ಎಂದೂ ಹುಟ್ಟುವುದಿಲ್ಲ ಮತ್ತು ಎಂದೂ ನಾಶವಾಗುವುದಿಲ್ಲ. ಅದು ಸದಾ ಏಕರೂಪದಲ್ಲಿರುತ್ತದೆ. ಏಕೆಂದರೆ ಜೀವಸ್ವರೂಪ ಭಗವಂತನ ಪ್ರತಿಬಿಂಬ. ಭಗವಂತನಿಗೆ ಹುಟ್ಟಿಲ್ಲ. ಅವನು ನಿತ್ಯ ಹಾಗು ಶಾಶ್ವತ. ಜೀವ ಸದಾ ಶರೀರದಿಂದ ಶರೀರಕ್ಕೆ ಸಂಚರಿಸುತ್ತಿರುತ್ತದೆ(ಪುರ-ಅಣ). ಆದರೆ ದೇಹ ಬದಲಾದಂತೆ ಜೀವಸ್ವರೂಪ ಬದಲಾಗುವುದಿಲ್ಲ. ಭೌತಿಕ ಶರೀರಕ್ಕೆ ಮುದಿತನವಿದ್ದಂತೆ ಜೀವ ಸ್ವರೂಪಕ್ಕೆ ಮುದಿತನವಿಲ್ಲ. ಅದು ಸದಾ ಏಕರೂಪದಲ್ಲಿರುತ್ತದೆ. ಆದರೆ ಪ್ರಭಾವದಿಂದ ಬಂದ ನಂಬಿಕೆ ಬದಲಾಗಬಹುದು. ಉದಾಹರಣೆಗೆ ಒಂದು ಜನ್ಮದಲ್ಲಿ ನಾಸ್ತಿಕನಾಗಿರುವವ ಇನ್ನೊಂದು ಜನ್ಮದಲ್ಲಿ ಪೂರ್ಣ ಆಸ್ತಿಕನಾಗಬಹುದು. ಸ್ವಭಾವ ವಿಶಿಷ್ಟನಾದ ಜೀವ ಎಂದೂ ಬದಲಾಗದೆ, ನಾಶವಾಗದೆ ಉಳಿಯುತ್ತಾನೆ.