ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 02

ಶ್ಲೋಕ – 2

ಶ್ರೀಭಗವಾನುವಾಚ ।
ಕುತಸ್ತ್ವಾ ಕಶ್ಮಲಮಿದಂ ವಿಷಮೇ ಸಮುಪಸ್ಥಿತಮ್ ।
ಅನಾರ್ಯಜುಷ್ಟಮಸ್ವರ್ಗ್ಯಮಕೀರ್ತಿಕರಮರ್ಜುನ ॥೨॥

ಶ್ರೀ ಭಗವಾನ್ ಉವಾಚ-ಭಗವಂತ ಹೇಳಿದನು:

ಕುತಃ ತ್ವಾ ಕಶ್ಮಲಮ್ ಇದಮ್ ವಿಷಮೇ ಸಮುಪಸ್ಥಿತಮ್ ಅನಾರ್ಯ ಜುಷ್ಟಮ್ ಅಸ್ವರ್ಗ್ಯಮ್ ಅಕೀರ್ತಿ ಕರಮ್ ಅರ್ಜುನ – ಅರ್ಜುನ, ಇಂಥ ಸಂಕಟದಲ್ಲಿ ಬಲ್ಲವರು ಮೆಚ್ಚದ, ಅಲ್ಲಿ ಸ್ವರ್ಗಕ್ಕೆ ಸಲ್ಲದ, ಇಲ್ಲಿ ಹೆಸರುಗೆಡಿಸುವ ಈ ಕೊಳೆ ನಿನ್ನನ್ನೇಕೆ ಕವಿಯಿತು?

“ಎಲ್ಲಿಂದ ಬಂತು ನಿನಗೆ ಈ ಬುದ್ಧಿ? ಈ ಭೌತಿಕ ಕೊಳೆ ನಿನಗೆ ಹೇಗೆ ಅಂಟಿತು? ಇಂತಹ ತುರ್ತುಪರಿಸ್ಥಿತಿಯಲ್ಲಿ, ತಕ್ಷಣ ಕಾರ್ಯಪ್ರವೃತ್ತರಾಗಬೇಕಾದ ಈ ಕ್ಷಣದಲ್ಲಿ ಇದೇನು ಹೊಲಸು ಯೋಚನೆ? ಆರ್ಯರಾದವರು ಯಾರೂ ಈ ರೀತಿ ಎಂದೂ ಯೋಚಿಸುವುದಿಲ್ಲ. ಇಂಥಹ ವಿಚಾರದಾರೆಯಿಂದ- ಪರದಲ್ಲಿ ಸ್ವರ್ಗವಿಲ್ಲ ಹಾಗು ಇಹದಲ್ಲಿ ಕೀರ್ತಿ ಇಲ್ಲ. ತಿಳಿದವರು, ಜ್ಞಾನಿಗಳು, ಹಿರಿಯರು ಎಂದೂ ಈ ರೀತಿ ಯೋಚನೆ ಮಾಡುವುದಿಲ್ಲ”-ಎಂದು ನಿಷ್ಠುರವಾಗಿ ಅರ್ಜುನನ ಸಂಪೂರ್ಣ ವಾದವನ್ನು ಒಂದೇ ಮಾತಿನಲ್ಲಿ ಹೊಡೆದು ಹಾಕಿದ ಕೃಷ್ಣ. ಇಲ್ಲಿ ಬಳಕೆಯಾದ “ಆರ್ಯ” ಎನ್ನುವ ಪದ ಜನಾಂಗ ವಾಚಕ ಪದ ಅಲ್ಲ. ಆರ್ಯ ಎಂದರೆ ತಿಳುವಳಿಕೆ ಇರುವವರು, ವಯೋವೃದ್ಧ ಜ್ಞಾನಿಗಳು, ಗೌರವಾನ್ವಿತರು ಎಂದರ್ಥ. ಕನ್ನಡದಲ್ಲಿ ‘ಅಯ್ಯಾ’ ಎನ್ನುವ ಪದಕ್ಕೆ ಇದೇ ಅರ್ಥವಿದೆ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *