ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 02

ಶ್ಲೋಕ – 17

ಅವಿನಾಶಿ ತು ತದ್ವಿದ್ಧಿ ಯೇನ ಸರ್ವಮಿದಂ ತತಮ್ ।
ವಿನಾಶಮವ್ಯಯಸ್ಯಾಸ್ಯ ನ ಕಶ್ಚಿತ್ಕರ್ತುಮರ್ಹತಿ ॥೧೭॥

ಅವಿನಾಶಿ ತು ತತ್ ವಿದ್ಧಿ ಯೇನ ಸರ್ವಮ್ ಇದಮ್ ತತಮ್ ವಿನಾಶಮ್ ಅವ್ಯಯಸ್ಯ ಆಸ್ಯ ನ ಕಶ್ಚಿತ್ ಕರ್ತುಮ್ ಅರ್ಹತಿ–ಯಾವುದು ಈ ಎಲ್ಲವನ್ನು ವ್ಯಾಪಿಸಿದೆ ಅದು ಅಳಿವಿಲ್ಲದ್ದು ಎಂದು ತಿಳಿ. ಬದಲಾಗದ ‘ಅವನ’ ಅಳಿವು ಯಾರ ಅಳಿವಿಗೂ ಎಟಕುವುದಲ್ಲ.

ಯಾವುದು ಎಲ್ಲಾ ಕಡೆ ವ್ಯಾಪಿಸಿದೆಯೋ ಅದಕ್ಕೆ ನಾಶವಿಲ್ಲ. ರೂಪಾತ್ಮಕ ಪ್ರಪಂಚದಂತೆ ನಾಮಾತ್ಮಕ ಪ್ರಪಂಚವಿದೆ. ಅದು ನಿತ್ಯ. ಇಲ್ಲಿ ನಾಮಾತ್ಮಕ ಎಂದರೆ ‘ಅಕ್ಷರ’ ; ಅ ದಿಂದ ಕ್ಷ ತನಕ ಇರುವ ಐವತ್ತೊಂದು ವರ್ಣಗಳು. ಈ ಐವತ್ತೊಂದು ಅಕ್ಷರಗಳೇ ಮೂಲಭೂತವಾಗಿರುವ ಇಡೀ ಶಬ್ದ ಪ್ರಪಂಚ. ಅದು ನಾಶ ಮಾಡಲಾಗದ ತತ್ವ. ಆದ್ದರಿಂದ ಭಗವಂತ, ಪ್ರಕೃತಿ, ಜೀವ ಹಾಗು ಈ ಎಲ್ಲಾ ತತ್ವಗಳನ್ನು ಪ್ರತಿಪಾದಿಸುವ ಶಬ್ದ ಅನಾದಿನಿತ್ಯ. ಇದನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ. ಈ ನಾಮಾತ್ಮಕ ಪ್ರಪಂಚದಲ್ಲಿನ ವೇದ ವಾಙ್ಮಯನಾದ ಭಗವಂತ ಅವಿನಾಶಿ ಆತನಿಗೆ ಯಾವುದೇ ರೀತಿಯ ನಾಶವಿಲ್ಲ. ಸ್ವರೂಪ ನಾಶ, ದೇಹ ನಾಶ, ದುಃಖಪ್ರಾಪ್ತಿ, ಅಪೂರ್ಣತ್ವ ಇದು ಭಗವಂತನಿಗಿಲ್ಲ. ಆತ ಕಾಲತಃ, ದೇಶತಃ, ಗುಣತಃ ವ್ಯಾಪ್ತನಾಗಿರುವ ಅನಂತ ಸ್ವರೂಪ. ಆತ ಅವ್ಯಯ, ಯಾವ ವಿಕಾರ ಬದಲಾವಣೆಗೆ ಒಳಗಾಗದ, ಅನಾದಿನಿತ್ಯ ಸ್ವರೂಪ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *