ಶ್ಲೋಕ – 16
ನಾಸತೋ ವಿದ್ಯತೇ ಭಾವೋ ನಾಭಾವೋ ವಿದ್ಯತೇ ಸತಃ ।
ಉಭಯೋರಪಿ ದೃಷ್ಟೋನ್ತಸ್ತ್ವನಯೋಸ್ತತ್ತ್ವದರ್ಶಿಭಿಃ ॥೧೬॥
ನ ಅಸತಃ ವಿದ್ಯತೇ ಭಾವಃ ನ ಅಭಾವಃ ವಿದ್ಯತೇ ಸತಃ ಉಭಯೋ ಅಪಿ ದೃಷ್ಟಃ ಅನ್ತಃ ತು ಅನಯೋ ತತ್ವ ದರ್ಶಿಭಿಃ — ಪ್ರಕೃತಿಗೂ ಅಳಿವಿಲ್ಲ; ಭಗವಂತನಿಗೂ ಅಳಿವಿಲ್ಲ. [ಕೆಡುಕು ಮಾಡಿ ಒಳಿತಾಗದು, ಒಳಿತಿನಿಂದ ಕೆಡುಕಾಗದು]. ನಿಜವ ಕಂಡವರು ಈ ಎರಡರ ತೀರ್ಮಾನವನ್ನು ಬಲ್ಲರು.
ಸುಖ-ದುಃಖವನ್ನು ಮೀರಿ ನಿಲ್ಲಬಹುದು. ಅದೊಂದು ಮಾನಸಿಕ ಸ್ಥಿತಿ. ಆದರೆ ತನ್ನ ಗುರು-ಹಿರಿಯರನ್ನು ಕೊಲ್ಲುವುದು ಪಾಪವಲ್ಲವೇ? ಈ ಪ್ರಶ್ನೆಗೆ ಇಲ್ಲಿ ಉತ್ತರವಿದೆ. “ಸತ್ತಿನಿಂದ ಅಭಾವವಿಲ್ಲ, ಅಸತ್ತಿನಲ್ಲಿ ಭಾವವಿಲ್ಲ” ಅಂದರೆ ಒಳ್ಳೆಯ ಕೆಲಸ ಮಾಡುವುದರಿಂದ ಎಂದೂ ದುಃಖವಿಲ್ಲ, ಕೆಟ್ಟ ಕೆಲಸ ಮಾಡಿದರೆ ಸುಖವಿಲ್ಲ. ಕೆಲವೊಮ್ಮೆ ಕೆಟ್ಟ ಕೆಲಸ ಮಾಡುವವರು ಸುಖಪಡುತ್ತಿರುವಂತೆ ಭಾಸವಾದರೂ ಕೂಡಾ, ಅದು ತಾತ್ಕಾಲಿಕ. ಅಧರ್ಮದ ಹಾದಿಯನ್ನು ತುಳಿದವ ಎಂದೂ ಯಶಸ್ಸನ್ನು ಕಾಣಲು ಸಾಧ್ಯವಿಲ್ಲ. ಮಹಾಭಾರತ ಯುದ್ಧವನ್ನು ವಿಶ್ಲೇಷಣೆ ಮಾಡಿದರೆ ಅಲ್ಲಿ ಯುದ್ಧಕ್ಕೆ ಕಾರಣರಾದವರು ಪಾಂಡವರಲ್ಲ. ಪಾಂಡವರು ಧರ್ಮ ರಕ್ಷಣೆಯ ಹೊಣೆಗಾರಿಕೆಯಿಂದ ಯುದ್ಧಕ್ಕೆ ಸಜ್ಜಾಗಿರುವುದು. ಇಲ್ಲಿ ಕೃಷ್ಣ ಸ್ಪಷ್ಟವಾಗಿ ಹೇಳುತ್ತಾನೆ: “ಒಳ್ಳೆಯ ಕೆಲಸ ಮಾಡುವಾಗ ಯಾರ ಭಯವೂ ಬೇಡ ಹಾಗು ಅದರಿಂದ ದುಃಖವಿಲ್ಲ” ಎಂದು. ಧರ್ಮ ರಕ್ಷಣೆಯ ಹಾದಿಯಲ್ಲಿ ‘ನನ್ನವರು’ ಎನ್ನುವುದು ಸಲ್ಲದು. ಜಗತ್ತಿನ ತತ್ವವನ್ನು ಸಾಕ್ಷಾತ್ಕಾರ ಮಾಡಿಕೊಂಡ ಜ್ಞಾನಿಗಳು ಕಂಡುಕೊಂಡ ಕೊನೆಯ ಸತ್ಯವಿದು.
ಮಹಾಭಾರತದ ಪ್ರತಿಯೊಂದು ಶ್ಲೋಕಕ್ಕೂ ಹತ್ತು ಅರ್ಥಗಳಿವೆಯಂತೆ. ಇನ್ನೊಂದು ಆಯಾಮದಲ್ಲಿ ಈ ಶ್ಲೋಕವನ್ನು ನೋಡಿದರೆ- “ನ ಅಸತಃ ಅಭಾವಃ ಸತಃ ಅಭಾವಃ ನ ವಿದ್ಯತಿ” ಅಂದರೆ ಸತ್ತಿಗೂ ಅಭಾವವಿಲ್ಲ ಅಸತ್ತಿಗೂ ಅಭಾವವಿಲ್ಲ ಎಂದರ್ಥ. ಅಸತ್ ಎಂದರೆ ಸ್ಥೂಲ ಪ್ರಪಂಚಕ್ಕೆ ಕಾರಣವಾಗಿರುವ, ಸೂಕ್ಷ್ಮವಾಗಿರುವ ಮೂಲಪ್ರಕೃತಿ. ಪ್ರಕೃತಿ ಅನಾದಿನಿತ್ಯ. ಈ ಪ್ರಕೃತಿಯನ್ನು ಸೃಷ್ಟಿಮಾಡಿದ ಭಗವಂತ(ಪುರುಷ) ಅನಾದಿನಿತ್ಯ. ಪ್ರಕೃತಿ ಮತ್ತು ಪುರುಷನಿಗೆ ಅಧೀನವಾಗಿರುವ ಜೀವ ಕೂಡಾ ಅನಾದಿನಿತ್ಯ. ಜೀವಕ್ಕೆಈ ಸ್ಥೂಲ ದೇಹ ಬರುವ ಮೊದಲೂ ಜೀವ ಇತ್ತು. ಹಾಗು ಮುಂದೆ ಕೂಡಾ ಇರುತ್ತದೆ. ಪಾಂಚಭೌತಿಕ ಶರೀರದಲ್ಲಿ ಜೀವ ಕೇವಲ ಅತಿಥಿ. ಹೀಗಿರುವಾಗ ದೇಹಾಭಿಮಾನ ಸಲ್ಲದು.