ಶ್ಲೋಕ – 15
ಯಂ ಹಿ ನ ವ್ಯಥಯನ್ತ್ಯೇತೇ ಪುರುಷಂ ಪುರುಷರ್ಷಭ ।
ಸಮದುಃಖಸುಖಂ ಧೀರಂ ಸೋಮೃತತ್ವಾಯ ಕಲ್ಪತೇ ॥೧೫॥
ಯಂ ಹಿ ನ ವ್ಯಥಯಂತಿ ಏತೇ ಪುರುಷಂ ಪುರುಷ ಋಷಭ ಸಮ ದುಃಖ ಸುಖಮ್ ಧೀರಮ್ ಸಃ ಅಮೃತತ್ವಾಯ ಕಲ್ಪತೇ–ಓ ಗಂಡುಗಲಿಯೇ, ಯಾವ ಶರೀರವನ್ನು[ಜ್ಞಾನಿಯನ್ನು] ಇವು ಕಾಡಲಾರವೋ, ಅವನು ಸುಖ-ದುಃಖವನ್ನು ಸಮನಾಗಿ ಕಾಣಬಲ್ಲ ಧೀರ. ಅಂತವನು ಸಾವಿಲ್ಲದ ತಾಣವನ್ನು ಸೇರಲು ತಕ್ಕವನಾಗುತ್ತಾನೆ.
ಕೃಷ್ಣ ಮುಂದುವರಿದು ಹೇಳುತ್ತಾನೆ, “ಯಾವ ಪುರುಷನಿಗೆ ‘ಮಾತ್ರಾ ಸ್ಪರ್ಶ’ ಕಾಡುವುದಿಲ್ಲವೋ ಅವನು ಸುಖ-ದುಃಖವನ್ನು ಸಮನಾಗಿ ಕಾಣಬಲ್ಲ ಧೀರ” ಎಂದು. ಇಲ್ಲಿ “ಪುರುಷ” ಎನ್ನುವ ಪದ ಬಂದಿದೆ. ‘ಪುರುಷ ಎಂದರೆ ಗಂಡಸು, ಗಂಡಸರಿಗೆ ಮಾತ್ರ ಸಾಧನೆ-ಮೋಕ್ಷ’-ಎನ್ನುವ ಮೂಢನಂಬಿಕೆ ನಮ್ಮಲ್ಲಿದೆ. ಆದರೆ ಪುರುಷ ಎಂದರೆ “ಪುರದಲ್ಲಿ ಇರುವ ಜೀವ”. ಪುರ ಎಂದರೆ ಪೂರ್ಣವಾದ ದೇಹ. ಅಂದರೆ ಮಾನವ ದೇಹ. ಆದ್ದರಿಂದ ಪುರುಷ ಎಂದರೆ ಮಾನವರು(Human being) ಅಥವಾ ಸಾಧಕ ಜೀವ. ಸ್ಥೂಲ ಶರೀರದಲ್ಲಿದ್ದೂ ಕೂಡಾ ಯಾರಿಗೆ ಮಾತ್ರಾಸ್ಪರ್ಶದಿಂದ ಬರುವ ಸುಖ-ದುಃಖ ಬೇರೆ-ಬೇರೆಯಾಗಿ ಕಾಣುವುದಿಲ್ಲವೋ, ಆತ ಸುಖ ದುಃಖವನ್ನು ಸಮನಾಗಿ ಕಾಣಬಲ್ಲ ಧೀರನೆನಿಸುತ್ತಾನೆ.
ಪುರುಷಃ ಎಂದರೆ ಎಲ್ಲಕ್ಕಿಂತ ದೊಡ್ಡವನಾದ ದೇವರನ್ನು ತಿಳಿದವ. ನಮಗೆ ಸುಖ-ದುಃಖ ಏಕೆ ಬರುತ್ತದೆ ಎನ್ನುವ ಜ್ಞಾನವಿದ್ದಾಗ, ನಾವು ಸುಖ ಬಂದಾಗ ಹಿಗ್ಗುವುದಿಲ್ಲ, ದುಃಖ ಬಂದಾಗ ಕುಗ್ಗುವುದಿಲ್ಲ. ನಮ್ಮ ಜೀವನದಲ್ಲಿ ಬರುವ ಪ್ರತಿಯೊಂದು ಸುಖ-ದುಃಖಕ್ಕೂ ಒಂದು ಕಾರಣವಿದೆ. ಸುಖ-ದುಃಖ ಜೀವನದಲ್ಲಿ ಬರುವ ಅಲೆಗಳು. ಇದರಲ್ಲಿ ಒಂದು ಬೇಕು, ಇನ್ನೊಂದು ಬೇಡ ಎನ್ನುವ ಆಯ್ಕೆ ಸರಿಯಲ್ಲ. ಯಾವುದು ಬಂತೋ ಅದಿರಲಿ ಎಂದು ಬದುಕಬೇಕು. ನಮಗೆ ಸುಖ-ದುಃಖವನ್ನು ಇನ್ನೊಬ್ಬರು ದ್ವೇಷದಿಂದ ಕೊಡುವುದಲ್ಲ. ಅದು ನಮ್ಮ ಕರ್ಮ ಫಲ. ಸುಖ-ದುಃಖವನ್ನು ನಮಗೆ ಕೊಡುವವನು ಭಗವಂತ. ತಾಯಿ ತನ್ನ ಮಗುವಿನ ಉದ್ಧಾರಕ್ಕಾಗಿ ಹೇಗೆ ಶಿಕ್ಷೆ ಕೊಡುತ್ತಾಳೋ, ಹಾಗೇ ಭಗವಂತ ನಮ್ಮ ಉದ್ಧಾರಕ್ಕಾಗಿ ನಮಗೆ ದುಃಖವನ್ನು ಕೊಡುತ್ತಾನೆ. ಇದು ಶಿಕ್ಷೆ ಅಲ್ಲ-ಶಿಕ್ಷಣ. ಮನುಷ್ಯ ದುಃಖದಲ್ಲಿ ಬೆಳೆದಾಗ ಗಳಿಸುವ ಅನುಭವ ಎಂದೂ ಸುಖದಲ್ಲಿ ಗಳಿಸಲಾರ. ದುಃಖ ಜೀವನದ ನಿಜವಾದ ಅನುಭವ. ಇದು ನಮಗೆ ಕೊಡುವ ದುಃಖದ ಹಿಂದೆ ಭಗವಂತನಿಟ್ಟ ಮಹಾ ಕಾರುಣ್ಯ. ಈ ಜ್ಞಾನವಿದ್ದಾಗ ಮಾತ್ರ ನಮಗೆ ಸುಖ-ದುಃಖವನ್ನು ಏಕರೂಪದಲ್ಲಿ ಕಾಣುವ ಮನಃಸ್ಥಿತಿ ಬರುತ್ತದೆ. ಇಂತಹ ಜ್ಞಾನವಿರುವವನು ಧೀರನಾಗುತ್ತಾನೆ. ತಿಳುವಳಿಕೆಯಿಂದ ಧೈರ್ಯ ಬರುತ್ತದೆ. ಯಾರು ಒಂದು ಜನ್ಮದಲ್ಲಿ ಸುಖ-ದುಃಖವನ್ನು ಸಮನಾಗಿ ಕಾಣಬಲ್ಲ ತಿಳುವಳಿಕೆ ಹಾಗು ಧೈರ್ಯವನ್ನು ಗಳಿಸುತ್ತಾರೋ, ಅವರು ಮುಂದೆಂದೂ ಈ ಸಂಸಾರ ಬಂಧದಲ್ಲಿ ಮರಳಿ ಹುಟ್ಟುವುದಿಲ್ಲ. ಇಂತಹ ಮಾನಸಿಕ ಸಮತೋಲನದ ಮೂಲಕ ಭಗವಂತನನ್ನು ತಿಳಿದು ಮೋಕ್ಷವನ್ನು ಪಡೆಯತ್ತಾರೆ.