ಶ್ಲೋಕ – 14
ಮಾತ್ರಾಸ್ಪರ್ಶಾಸ್ತು ಕೌಂತೇಯ ಶೀತೋಷ್ಣಸುಖದುಃಖದಾಃ ।
ಆಗಮಾಪಾಯಿನೋನಿತ್ಯಾಸ್ತಾಂಸ್ತಿತಿಕ್ಷಸ್ವ ಭಾರತ ॥೧೪॥
ಮಾತ್ರಾ ಸ್ಪರ್ಶಾಃ ತು ಕೌಂತೇಯ ಶೀತ ಉಷ್ಣ ಸುಖ ದುಃಖ ದಾಃ ಆಗಮ ಅಪಾಯಿನಃ ಅನಿತ್ಯಾಃ ತಾನ್ ತಿತಿಕ್ಷಸ್ವ ಭಾರತ — ಕೌಂತೇಯ, ವಿಷಯ ಸಂಪರ್ಕಗಳೆ ತಂಪು-ಬಿಸಿಗಳ, ಸುಖ-ದುಃಖಗಳ ಅನುಭವ ನೀಡುವಂಥವು. ಇವು ಬಂದು ಹೋಗುವಂಥವು. ನಿರಂತರವಾಗಿ ಇರುವಂಥವಲ್ಲ. ಓ ಭಾರತ, ಅವುಗಳನ್ನು ಸಹಿಸಿಕೋ.
ನಾವು ಬಾಲ್ಯದ ದೇಹವನ್ನು ಕಳೆದುಕೊಂಡು ಯೌವನದ ದೇಹವನ್ನು ಪಡೆಯುತ್ತೇವೆ. ಯೌವನದ ದೇಹವನ್ನು ಕಳೆದುಕೊಂಡು ಮುಪ್ಪಿನ ದೇಹವನ್ನು ಪಡೆಯುತ್ತೇವೆ. ಆದರೆ ಈ ಕಾರಣಕ್ಕಾಗಿ ಯಾರೂ ದುಃಖಿಸುವುದಿಲ್ಲ. ಆದರೆ ಸಾವಿನಲ್ಲಿ ‘ಕಾಣುವ’ ಇನ್ನೊಂದು ದೇಹ ಇಲ್ಲವಾಗುತ್ತದೆ-ಆಗ ದುಃಖ. ಯಾವ ದೇಹದ ಮೂಲಕ ಭಾಂದವ್ಯದ ನಂಟನ್ನು ಬೆಳೆಸಿಕೊಂಡಿರುತ್ತೇವೋ , ಅದು ಇಲ್ಲವಾಗುತ್ತದಲ್ಲಾ ಎನ್ನುವ ದುಃಖ ಸಾಮಾನ್ಯವಾಗಿ ನಮ್ಮನ್ನು ಕಾಡುತ್ತದೆ.
ಜೀವನದಲ್ಲಿ ನಾವು ಅನುಭವಿಸುವ ಸುಖ ಮತ್ತು ದುಃಖದ ಮೂಲ “ಮಾತ್ರಾ ಸ್ಪರ್ಶಾ”. ಇದು ಎಲ್ಲವುದರ ಮೂಲ. ನಾವು ಯಾವುದನ್ನು ನಮ್ಮ ಇಂದ್ರಿಯಗಳ ಮೂಲಕ ಗ್ರಹಿಸುತ್ತೇವೋ ಅದು ಮಾತ್ರೆ. ಶಬ್ದ, ಸ್ಪರ್ಶ, ರೂಪ, ರಸ ಗಂಧ ಇವೇ ನಮ್ಮ ಸುಖ-ದುಃಖಗಳಿಗೆ ಕಾರಣವಾದ ಐದು ಮಾತ್ರೆಗಳು.
ಸುಖ-ದುಃಖಗಳಿಗೆ ಒಂದು ವ್ಯವಸ್ಥೆ ಇಲ್ಲ. ಒಬ್ಬರಿಗೆ ಸುಖವಾದದ್ದು ಇನ್ನೊಬ್ಬರಿಗೆ ದುಃಖವಾಗಬಹುದು. ವಿಷಯಗಳ ಸ್ಪರ್ಶದಿಂದ ಸುಖ-ದುಃಖ ಬರುತ್ತದೆ. ಅದು ಶೀತೊಷ್ಣದಂತೆ. ಮೊದಲು ಸುಖಕೊಟ್ಟ ವಸ್ತುವೇ ಮುಂದೆ ದುಃಖವಾಗಿ ಪರಿಣಮಿಸಬಹುದು. ಸುಖ-ದುಃಖ ಜೀವದ ಧರ್ಮವಲ್ಲ. ಅದು ಬಂದು ಹೋಗುವಂತದ್ದು. ಅದು ನಮ್ಮ ಮಾನಸಿಕ ಕಲ್ಪನೆಯ ಫಲ. “ನನ್ನ” ಎನ್ನುವುದು ದುಃಖಕ್ಕೆ ಮೂಲ ಕಾರಣ. ನಿದ್ದೆಯಲ್ಲಿ ನಮಗೆ “ನನ್ನ” ಎನ್ನುವುದು ಇಲ್ಲ. ಆದ್ದರಿಂದ ಎಂದೂ ನಿದ್ದೆಯಲ್ಲಿ ದುಃಖವಿಲ್ಲ. ಎಚ್ಚರ ಮತ್ತು ಕನಸಿನಲ್ಲಿ ಮಾತ್ರ ಈ ಸಮಸ್ಯೆ. ನಿದ್ದೆಯಲ್ಲಿ ಎಲ್ಲವೂ ನಿರ್ಮಲ.
ನಾವೇ ನಮ್ಮ ಮಾನಸಿಕ ಭಾವನೆಗಳಿಂದ ಮತ್ತು ಅನುಭವಗಳಿಂದ ನಿರ್ಮಿಸಿಕೊಂಡಿರುವುದು ಈ ಸುಖ-ದುಃಖ. ಇದರಿಂದ ಪಾರಾಗುವ ಉಪಾಯವನ್ನು ನಾವೇ ಕಲಿತುಕೊಳ್ಳಬೇಕು. ದುಃಖದ ಮೂಲದ ಅನ್ವೇಷಣೆ ಮಾಡಿದಾಗ ದುಃಖ ಸಹ್ಯವಾಗುತ್ತದೆ. ನಾವು ನಮ್ಮ ಭಾವನೆಗಳನ್ನು ಸಹನೆ ಮಾಡಿಕೊಳ್ಳುವುದನ್ನು ಕಲಿತುಕೊಳ್ಳಬೇಕು. ಯಾವುದು ಬಂತೋ ಅದನ್ನು ಸ್ವೀಕರಿಸುವುದನ್ನು ಕಲಿತುಕೊಳ್ಳಬೇಕು. ನನಗೆ ‘ಅದೇ ಬೇಕು’, ‘ಹೀಗೆ ಆಗಬೇಕು’ ಎನ್ನುವ ಚಿಂತನೆ ದುಃಖಕ್ಕೆ ಮೂಲ ಕಾರಣ. ಬಂದಿದ್ದನ್ನು ಬಂದಂತೆ ಎದುರಿಸುತ್ತೇನೆ ಎನ್ನುವ ಆತ್ಮ ಸ್ಥೈರ್ಯವಿದ್ದರೆ ದುಃಖವಿಲ್ಲ.