ಶ್ಲೋಕ – 13
ದೇಹಿನೋSಸ್ಮಿನ್ ಯಥಾ ದೇಹೇ ಕೌಮಾರಂ ಯೌವನಂ ಜರಾ ।
ತಥಾ ದೇಹಾಂತರಪ್ರಾಪ್ತಿರ್ಧೀರಸ್ತತ್ರ ನ ಮುಹ್ಯತಿ ॥೧೩॥
ದೇಹಿನಃ ಅಸ್ಮಿನ್ ಯಥಾ ದೇಹೇ ಕೌಮಾರಮ್ ಯೌವನಮ್ ಜರಾ ತಥಾ ದೇಹಾಂತರ ಪ್ರಾಪ್ತಿ ಧೀರಃ ತತ್ರ ನ ಮುಹ್ಯತಿ—ದೇಹದಲ್ಲಿರುವ ಜೀವಕ್ಕೆ ಈ ದೇಹದಲ್ಲೆ ಎಳೆತನ, ಹರಯ, ಮುಪ್ಪು ಹೇಗೆ-ಹಾಗೇ ದೇಹದ ಬದಲಾವಣೆ ಕೂಡಾ. ಇಂಥಲ್ಲಿ ಧೀರನಾದವನು ಕಂಗೆಡುವುದಿಲ್ಲ.
ದೇಹ ನಾಶವೆಂದರೆ ಸ್ವರೂಪ ನಾಶವಲ್ಲ. ಈ ದೇಹದಲ್ಲಿರುವ ಜೀವ ಪ್ರತಿ ಕ್ಷಣದಲ್ಲಿ ತನ್ನ ದೇಹ ಪರಿವರ್ತನೆಯನ್ನು ಅನುಭವಿಸುತ್ತಿರುತ್ತದೆ. ಬಾಲ್ಯದಲ್ಲಿನ ದೇಹ ಯೌವನದಲ್ಲಿಲ್ಲ, ಯೌವನದಲ್ಲಿನ ದೇಹ ಮುಪ್ಪಿನಲ್ಲಿಲ್ಲ. ಸತ್ತ ಬಳಿಕ ಮತ್ತೆ ಮರುಹುಟ್ಟಿನೊಂದಿಗೆ ಹೊಸ ದೇಹ. ಆದರೆ ನಮಗೆ ನಾವು ಎಲ್ಲಿಂದ ಬಂದೆವು ಹಾಗು ಎಲ್ಲಿಗೆ ಹೋಗುತ್ತಿದ್ದೇವೆ ಎನ್ನುವ ಅರಿವು ಮಾತ್ರ ಇಲ್ಲ. ನಮಗೆ ತಿಳಿದಿರುವುದು ನಮ್ಮ ಈಗಿನ ಅಸ್ತಿತ್ವ ಮಾತ್ರ. ದೇಹ ನಾಶವಾಗಿ ಹೊಸ ದೇಹ ಬರಬಹುದು. ಆದರೆ ಎಂದೂ ನಾಶವಾಗದ ಚೈತನ್ಯ ಈ ‘ಜೀವ’. ಒಂದು ದಿನ ನಾಶವಾಗುವ ಈ ದೇಹದ ಬಗ್ಗೆ ಧೀರನಾದವನು ಎಂದೂ ಅಳುವುದಿಲ್ಲ ಎನ್ನುತ್ತಾನೆ ಕೃಷ್ಣ. ಇಲ್ಲಿ ಧೀರ ಎಂದರೆ ಅರಿವಿನ ಆನಂದವನ್ನು ಅನುಭವಿಸುವ ಜ್ಞಾನಿ(ಧೀ+ರಃ). ಎಲ್ಲಿ ಜ್ಞಾನವಿದೆಯೋ ಅಲ್ಲಿ ದುಃಖವಿಲ್ಲ.