ಶ್ಲೋಕ – 10
ತಮುವಾಚ ಹೃಷೀಕೇಶಃ ಪ್ರಹಸನ್ನಿವ ಭಾರತ ।
ಸೇನಯೋರುಭಯೋರ್ಮಧ್ಯೇ ವಿಷೀದಂತಮಿದಂ ವಚಃ ॥೧೦॥
ತಮ್ ಉವಾಚ ಹೃಷೀಕೇಶಃ ಪ್ರಹಸನ್ ಇವ ಭಾರತ ಸೇನಯೋಃ ಉಭಯೋಃ ಮಧ್ಯೇ ವಿಷೀದಂತಮ್ ಇದಮ್ ವಚಃ -ಓ ಭರತ ವಂಶದ ದೊರೆಯೆ, ಎರಡು ಪಡೆಗಳ ನಡುವೆ ತಳಮಳಗೊಂಡಿರುವ ಅವನನ್ನು ಕುರಿತು ಕೃಷ್ಣ ಮೆಲುನಗುತ್ತ ಈ ಮಾತು ನುಡಿದ.
ಅರ್ಜುನ ಸಂಪೂರ್ಣ ಶರಣಾಗಿ ತನ್ನಮುಂದೆ ಅಂಗಲಾಚಿ ನಿಂತಾಗ, ಶ್ರೀಕೃಷ್ಣ ನಸುನಗುತ್ತ ತನ್ನ ಮಾತನ್ನು ಆರಂಭಿಸುತ್ತಾನೆ.
ಇಲ್ಲಿ ಅರ್ಜುನ ಕೃಷ್ಣ ಹೇಳುವುದನ್ನು ಸ್ವೀಕರಿಸುವ ಹಂತವನ್ನು ತಲುಪಿದ್ದಾನೆ. ಆತನಲ್ಲಿ ಭಾವಾವೇಶ ಹೊರಟುಹೋಗಿ ಶರಾಣಗತಿ ಬಂದಿದೆ. ಭಗವಂತ ನಮಗೆ ಮಾರ್ಗದರ್ಶನ ಮಾಡಬೇಕಾದರೆ ನಾವು ನಮ್ಮ ಅಹಂಕಾರವನ್ನು ತೊರೆದು, ಆತನಲ್ಲಿ ಸಂಪೂರ್ಣ ಶರಣಾಗಬೇಕು. ಆಗ ಖಂಡಿತ ನಮಗೆ ಮಾರ್ಗದರ್ಶನ ಸಿಗುತ್ತದೆ. ಇಲ್ಲಿ ಕೃಷ್ಣ ಅರ್ಜುನನಿಗೆ ಮಾಡುವ ಉಪದೇಶ ನಮ್ಮೆಲ್ಲರಿಗೆ ಆತ ಮಾಡಿದ ಉಪದೇಶ. ಈ ಅಂಶವನ್ನು ಮನಸ್ಸಿನಲ್ಲಿಟ್ಟುಕೊಂಡು ಕೃಷ್ಣನ ಉಪದೇಶವನ್ನು ಆಲಿಸೋಣ ಬನ್ನಿ.