ಗೀತಾಸಾರ ಸಂಗ್ರಹ ಶ್ಲೋಕ – 1
ಯುದ್ಧ ಮಾಡುವುದಿಲ್ಲ ಎಂದು ಕೈಚಲ್ಲಿ ರಥದಲ್ಲಿ ಕುಸಿದು ಕುಳಿತ ಅರ್ಜುನನಿಗೆ ಶ್ರೀಕೃಷ್ಣನ ಉಪದೇಶ ಎರಡನೇ ಅಧ್ಯಾಯದಿಂದ ಆರಂಭವಾಗುತ್ತದೆ. ಈ ಅಧ್ಯಾಯ ಇಡೀ ಭಗವದ್ಗೀತೆಗೆ ಪಂಚಾಂಗ ರೂಪದಲ್ಲಿದ್ದು, ಸಮಗ್ರ ಸಂದೇಶದ ಸಾರವನ್ನು ವ್ಯಾಸರು ಇಲ್ಲಿ ಸೆರೆ ಹಿಡಿದಿದ್ದಾರೆ.ಇಲ್ಲಿ ಬರುವ ಉಪದೇಶದ ವಿಸ್ತಾರ ರೂಪವೇ ಇತರ ಹದಿನಾರು ಅಧ್ಯಾಯಗಳು.
ಸಂಜಯ ಉವಾಚ ।
ತಂ ತಥಾ ಕೃಪಯಾSSವಿಷ್ಟಮಶ್ರುಪೂರ್ಣಾಕುಲೇಕ್ಷಣಮ್ ।
ವಿಷೀದಂತಮಿದಂ ವಾಕ್ಯಮುವಾಚ ಮಧುಸೂದನಃ ॥೧॥
ಸಂಜಯ ಉವಾಚ-ಸಂಜಯ ಹೇಳಿದನು:
ತಮ್ ತಥಾ ಕೃಪಯಾ ಆವಿಷ್ಟಮ್ ಅಶ್ರು ಪೂರ್ಣ ಅಕುಲ ಈಕ್ಷಣಮ್ ವಿಷೀದಂತಮ್ ಇದಮ್ ವಾಕ್ಯಮ್ ಉವಾಚ ಮಧುಸೂದನಃ -ಹಾಗೆ ಕಾರುಣ್ಯಕ್ಕೊಳಗಾಗಿ ಕಂಬನಿ ತುಂಬಿ ಕಣ್ಣು ಮಸುಕಾಗಿ ಉಮ್ಮಳಿಸುತ್ತಿರುವ ಅವನನ್ನು ಕಂಡು ಕೃಷ್ಣ ಈ ಮಾತು ನುಡಿದ.
ಅರ್ಜುನನಿಗೆ ಇಡೀ ಸಮಾಜದ, ಜನಾಂಗದ ಮೇಲೆ ಅನುಕಂಪ. ಯುದ್ಧ ಮಾಡುವುದರಿಂದ ಜನಾಂಗ ಹತ್ಯೆಗೆ ಕಾರಣವಾಗುತ್ತೇವೆ ಎನ್ನುವುದು ಆತನ ತಲೆಯಲ್ಲಿ ತುಂಬಿ ಹೋಗಿದೆ. ಕೃಪೆಯ ಆವೇಶದಿಂದ ಕಣ್ಣಲ್ಲಿ ನೀರಿಳಿಯುತ್ತಿದೆ. ಅಜ್ಞಾನದ ಮಂಜು ಮನಸ್ಸನ್ನು ವಿಕ್ಷಿಪ್ತಗೊಳಿಸಿದೆ. ತರ್ಕದ ಮೂಲಕ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ನೋಡುತ್ತಿದ್ದಾನೆ. ಇದು ಸಹಜ ಪ್ರವೃತ್ತಿ ಅಲ್ಲ, ಇದೊಂದು ಆವೇಶ. ಇದಕ್ಕೆ ಕೃಷ್ಣ ನಿಷ್ಠುರವಾಗಿ ಉತ್ತರಿಸುತ್ತಾನೆ.