ಶ್ಲೋಕ – 8
ಭವಾನ್ ಭೀಷ್ಮಶ್ಚ ಕರ್ಣಶ್ಚ ಕೃಪಶ್ಚ ಸಮಿತಿಂಜಯಃ ।
ಅಶ್ವತ್ಥಾಮಾ ವಿಕರ್ಣಶ್ಚ ಸೌಮದತ್ತಿಸ್ತಥೈವ ಚ ॥೮॥
ಭವಾನ್ ಭೀಷ್ಮಃ ಚ ಕರ್ಣಃ ಚ ಕೃಪಃ ಚ ಸಮಿತಿಮ್ ಜಯಃ ಅಶ್ವತ್ಥಾಮಾ ವಿಕರ್ಣಃ ಚ ಸೌಮದತ್ತಿಃ ತಥಾ ಏವ ಚ- ಪೂಜ್ಯನಾದ ನೀನು, ಭೀಷ್ಮ ಮತ್ತು ಕರ್ಣ, ಕೃಪ ಕೂಡಾ ಗೆಲುಗಾರ. ಅಶ್ವತ್ಥಾಮಾ ಮತ್ತು ವಿಕರ್ಣ; ಸೋಮದತ್ತನ ಮಗ ಭೂರಿಶ್ರವ ಕೂಡಾ.
ಪಾಂಡವ ಸೇನೆಯಲ್ಲಿ-ಸೇನಾಧಿಪತಿ, ಹನ್ನೊಂದು ಮಂದಿ ಮಹಾ ವೀರರು ಹಾಗು ಪಾಂಡವರ ಆರು ಮಂದಿ ಮಕ್ಕಳ ವೀರತ್ವವನ್ನು ವಿವರಿಸಿದ ದುರ್ಯೋಧನನಿಗೆ, ತನ್ನ ಕಡೆಯಲ್ಲಿರುವ ವೀರರು ಕಾಣಿಸುವುದೇ ಇಲ್ಲ! ಇಲ್ಲಿ ಆತ ಕುಹಕವಾಗಿ ತನ್ನ ಕಡೆಯ ಏಳು ಮಂದಿ ವೀರರ ಹೆಸರನ್ನು ಹೇಳುತ್ತಾನೆ. ‘ಭವಾನ್’ ಅಂದರೆ ತಾವು(ಪಾಂಡವರ ಆಚಾರ್ಯರು ಎನ್ನುವಂತೆ !); ಯುದ್ಧಕ್ಕೆ ಮೊದಲು ಧರ್ಮರಾಯನಿಗೆ ಜಯವಾಗಲಿ ಎಂದು ಆಶೀರ್ವಾದ ಮಾಡಿದ ಭೀಷ್ಮಾಚಾರ್ಯ! ; ‘ಭೀಷ್ಮ ಯುದ್ಧಭೂಮಿಯಲ್ಲಿ ಇರುವ ತನಕ ತಾನು ಹೋರಾಟ ಮಾಡುವುದಿಲ್ಲ’ ಎಂದು ಶಪತಮಾಡಿ ಕುಳಿತ ಕರ್ಣ; ವೇದ ಪಾರಾಂಗತ ಆಚಾರ್ಯ ಕೃಪಾ; ವಿಕ್ಷಿಪ್ತ ಮನಸ್ಸಿನ ಅಶ್ವತ್ಥಾಮ; ದ್ರೌಪದಿಯ ಮಾನಭಂಗವನ್ನು ಖಂಡಿಸಿ ಅದರಿಂದ ಲಾಭ ಪಡೆಯಲೆತ್ನಿಸಿದ ವಿಕರ್ಣ; ದಾಕ್ಷಿಣ್ಯಕ್ಕಾಗಿ ಬಂದ ಭೀಷ್ಮಾಚಾರ್ಯರ ತಂದೆ-ಶಂತನುವಿನ ಅಣ್ಣನ ಮಗ-ಸೋಮದತ್ತನ ಮಗ ಭೂರಿಶ್ರವ! ಈ ರೀತಿ ತನ್ನ ಕಡೆಯ ಏಳು ಮಂದಿ ವೀರರ ಹೆಸರನ್ನು ಕುಹಕವಾಗಿ ದುರ್ಯೋಧನ ಭೀಷ್ಮಾಚಾರ್ಯರಿಗೆ ಕೇಳಿಸುವಂತೆ ದ್ರೋಣಾಚಾರ್ಯರಲ್ಲಿ ಹೇಳುತ್ತಾನೆ.
ಇಲ್ಲಿ ನಾವು ವಿವರವಾಗಿ ನೋಡಿದರೆ ಕೌರವನ ಕಡೆಯಲ್ಲಿ ಹನ್ನೊಂದು ಅಕ್ಷೋಹಿಣಿ ಸೈನ್ಯವನ್ನು ಮುನ್ನೆಡೆಸಬಲ್ಲ ವೀರರಿದ್ದರು. ಆತನ ತೊಬತ್ತೊಂಬತ್ತು ಮಂದಿ ತಮ್ಮಂದಿರರಿದ್ದರು. ಶಲ್ಯ ಭಗದತ್ತರಂತಹ ವೀರಾದಿವೀರರು ದುರ್ಯೋಧನನ ಕಡೆಗಿದ್ದರು. ಆದರೆ ಪಾಂಡವರ ಸೈನ್ಯವನ್ನು ನೋಡಿ ಭಯಗೊಂಡು, ಇದನ್ನೆಲ್ಲವನ್ನು ಮರೆತ ದುರ್ಯೋಧನ, ತನ್ನ ಕಡೆ ಇರುವ ಮಹಾ ವೀರರ ಬಗೆಗೆ ಕೇವಲವಾಗಿ ಮಾತನಾಡುತ್ತಾನೆ! ಇಲ್ಲಿ ಮಾನಸಿಕವಾಗಿ ದುರ್ಯೋಧನ ಎಷ್ಟೊಂದು ವಿಚಲಿತನಾಗಿದ್ದ ಎನ್ನುವುದು ನಮಗೆ ಸ್ಪಷ್ಟವಾಗಿ ಕಾಣುತ್ತದೆ. ಯುದ್ಧ ಪರಿಣಾಮದ ಬಗ್ಗೆ ಯೋಚಿಸುತ್ತ, ಆತ ತನ್ನ ಕರ್ತವ್ಯವನ್ನೇ ಮರೆತಿದ್ದ!
ಸೊಬಗು – Sobagu ಕರ್ನಾಟಕದ ಗತವೈಭವ ಸಾರುತ್ತಿರುವ ತಾಣ – ನಮ್ಮ ಕನ್ನಡ ನಾಡು
ಜೈ ಶ್ರೀ ರಾಮ್
ನೀವು ಭಗವದ್ಗೀತೆಯನ್ನು ವಿಶ್ಲೇಷಿಸಿದ ರೀತಿ ತುಂಬಾ ಹಿಡಿಸಿತು. ಇದನ್ನು ಎಲ್ಲರಿಗೂ ತಲುಪಿಸುವ ಉದ್ದೇಶ ನನ್ನದು. ನಿಮ್ಮ ವೆಬ್ ಪೇಜಿನ ಲಿಂಕನ್ನೂ ನನ್ನ ಪ್ರತೀ ಪೋಸ್ಟಿನಲ್ಲೂ ಹಾಕಿರುತ್ತೇನೆ. ಇದು ನಿಮ್ಮ ಕಾಪಿರೈಟಿಗೆ ನನಗೆ ಯಾವುದೇ ತೊಂದರೆ ಆಗುವುದಿಲ್ಲ ಅಂದುಕೆಳ್ಳುತ್ತೇನೆ. ಹಾಗೇನಾದರೂ ಇದ್ದರೆ ತಿಳಿಸಿ. ನನ್ನ ಉದ್ದೇಶ ಹೆಚ್ಚಿನ ಜನರಿಗೆ ಗೀತೆಯ ತಾತ್ಪರ್ಯ ತಿಳಿಸುವುದೇ ಆಗಿರುತ್ತದೆ. ಇದರಲ್ಲಿ ಯಾವುದೇ ಆರ್ಥಿಕ ದೃಷ್ಟಿ ಇಲ್ಲ. ನಿಮ್ಮ ಉತ್ತರಕ್ಕೆ ಕಾಯುತ್ತೇನೆ