Sukanyamaruthi

ಶ್ರೀಮತಿ ಸುಕನ್ಯಾಮಾರುತಿ

ಶ್ರೀಮತಿ ಸುಕನ್ಯಾಮಾರುತಿ (೧-೩-೧೯೫೬): ಕವಯಿತ್ರಿ, ಅನುವಾದಕಿ, ಮಹಿಳಾ ಹೋರಾಟಗಾರ್ತಿ ಸುಕನ್ಯಾಮಾರುತಿಯವರು ಹುಟ್ಟಿದ್ದು ಕೊಟ್ಟೂರಿನಲ್ಲಿ. ಪ್ರಾಥಮಿಕ ಶಾಲೆ ಓದಿದ್ದು ಕೊಟ್ಟೂರಿನ ಆಂಜನೇಯಶಾಲೆ, ಮಾಧ್ಯಮಿಕ ಶಾಲೆಗೆ ಸೇರಿದ್ದು ಗಚ್ಚಿನ ಮಠದ ಶಾಲೆ. ಹೈಸ್ಕೂಲು ವಿದ್ಯಾಭ್ಯಾಸ, ಹೆಣ್ಣು ಮಕ್ಕಳ ಹೈಸ್ಕೂಲಿನಲ್ಲಿ. ಪಿ.ಯು.ದಿಂದ ಪದವಿಯವರೆಗೆ ಓದಿದ್ದು ಕೊಟ್ಟೂರೇಶ್ವರ ಕಾಲೇಜು, ಕೊಟ್ಟೂರು. ಎಂ.ಎ. ಪದವಿಗಳಿಸಿದ್ದು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ.

ಉದ್ಯೋಗಕ್ಕೆ ಸೇರಿದ್ದು ಜೆ.ಎಸ್.ಎಸ್. ಕಾಲೇಜು, ಧಾರವಾಡದಲ್ಲಿ ಕನ್ನಡ ಅಧ್ಯಾಪಕಿಯಾಗಿ. ಚಿಕ್ಕಂದಿನಿಂದಲೂ ಓದುವ, ಬರೆಯುವ ಚಟದಿಂದ ಕನ್ನಡ ಸಾಹಿತ್ಯದಲ್ಲಿ ಪಡೆದ ವಿಸ್ತಾರವಾದ ಅನುಭವ. ವಿದ್ಯಾರ್ಥಿನಿಯಾಗಿದ್ದಾಗಲೇ ಬರವಣಿಗೆ ಪ್ರಾರಂಭ. ನಾಡಿನ ಪ್ರಖ್ಯಾತ ಪತ್ರಿಕೆಗಳಾದ ಸುಧಾ, ತರಂಗ, ಕಸ್ತೂರಿ, ತುಷಾರ, ಮಲ್ಲಿಗೆ, ಪ್ರಜಾವಾಣಿ, ಉದಯವಾಣಿ ಪತ್ರಿಕೆಗಳಿಗಾಗಿ ಬರೆದ ಕವನಗಳು ಪ್ರಕಟಿತ. ಹಲವಾರು ಹಿರಿ-ಕಿರಿಯ ಕವಿಗಳಿಂದ ಮೆಚ್ಚುಗೆ. ೧೯೭೮ರಲ್ಲಿ ಪ್ರಕಟವಾದ ಮೊದಲ ಕವನ ಸಂಕಲನ ‘ಪರಿಸರದಲ್ಲಿ.’ ಸ್ನೇಹಿತರ ಒತ್ತಾಸೆ, ದೊರೆತ ಬೆಂಬಲ, ಉತ್ತೇಜನದಿಂದ ೧೯೮೩ರಲ್ಲಿ ಹೊರತಂದ ಕವನ ಸಂಕಲನ ‘ಪಂಚಾಗ್ನಿ ಮಧ್ಯೆ.’ ೧೯೮೫ರಲ್ಲಿ ಪ್ರಕಟವಾದ ಕಾವ್ಯಕೃತಿ ‘ನಾನು ನನ್ನವರು.’ ೧೯೯೨ರಲ್ಲಿ ಪ್ರಕಟವಾದ ಕವನ ಸಂಕಲನ ‘ತಾಜಮಹಲಿನ ಹಾಡು’ ಇವು ಸ್ವತಂತ್ರ ಕೃತಿಗಳಾದರೆ ಇತರರೊಡನೆ ಸಂಪಾದಕಿಯಾಗಿ ಹೊರತಂದ ಸಂಸ್ಕೃತಿ, ಪ್ರಶಾಂತ, ಪ್ರಣಯಿನಿ ಕೃತಿಗಳು ಪ್ರಕಟಿತ. ಮತ್ತೊಂದು ಲೇಖನ ಸಂಗ್ರಹ ‘ಬಿಂಬದೊಳಗಿನ ಮಾತು’ ಪ್ರಕಟಿತ. ಮಹಿಳೆಯರ ಆಶೋತ್ತರಗಳನ್ನು ಬಿಂಬಿಸುವ ‘ಗ್ರಾಮಿಣಿ’ ಧ್ವನಿಸುರಳಿಯಲ್ಲಿ ಇವರ ಕವನಗಳಿಗೆ ಧ್ವನಿ ಕೊಟ್ಟು ಹೆಂಗಸರ ಹಕ್ಕಿನ ಸಂಘ ಹೊರತಂದಿದೆ.

ಬರವಣಿಗೆ ಕೈಂಕರ‍್ಯದ ಜೊತೆಗೆ ಹಲವಾರು ಸಾಹಿತ್ಯಿಕ ಚಟುವಟಿಕೆಗಳಲ್ಲೂ ಭಾಗಿ. ಮೈಸೂರು ದಸರಾ ಕವಿಗೋಷ್ಠಿ, ಸಿರಸಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಧಾರವಾಡ ಆಕಾಶವಾಣಿ ನಿಲಯದ ಭಾರತೀಯ ಭಾಷೆಗಳ ಕವಿಗೋಷ್ಠಿ, ಗುಲಬರ್ಗಾದ ಅಖಿಲ ಕರ್ನಾಟಕ ಕವಯಿತ್ರಿಯರ ಸಮ್ಮೇಳನ, ಭದ್ರಾವತಿ ಆಕಾಶವಾಣಿ ಕವಿಗೋಷ್ಠಿ, ಧಾರವಾಡದ ಆಕಾಶವಾಣಿ ರಾಜ್ಯೋತ್ಸವ ಕವಿಗೋಷ್ಠಿ, ಚೈತ್ರಪಲ್ಲವ ವಿಶೇಷ ಕಾರ‍್ಯಕ್ರಮ, ಮುಂತಾದ ಹಲವಾರು ಟಿ.ವಿ. ಆಕಾಶವಾಣಿ ಕಾರ‍್ಯಕ್ರಮದಲ್ಲಿ ಭಾಗಿ.

ಕರ್ನಾಟಕ ಸಾಹಿತ್ಯ ಅಕಾಡಮಿ, ಮೈಸೂರು ವಿಶ್ವವಿದ್ಯಾಲಯ, ಖಾಸಗಿ ಪ್ರಕಾಶಕರಿಗಾಗಿ ಹಲವಾರು ಕೃತಿಗಳ ಭಾಷಾಂತರ. ಧಾರವಾಡದ ದಲಿತ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ವಿಶ್ವ ವಿದ್ಯಾಲಯ ಸೆನೆಟ್ ಸದಸ್ಯೆ, ಅಖಿಲ ಕರ್ನಾಟಕ ಕ್ರಿಯಾ ಸಮಿತಿ ಕಾರ‍್ಯದರ್ಶಿಯಾಗಿ, ಪಿ.ಯು. ಬೋರ್ಡ್ ಸಮಿತಿಯ ಸದಸ್ಯೆಯಾಗಿ, ಕರ್ನಾಟಕ ಅಧ್ಯಾಪಕರ ಪರಿಷತ್ತಿನ ಸಹಕಾರ‍್ಯದರ್ಶಿಯಾಗಿ ಕನ್ನಡ ಅಭಿವೃದ್ಧಿ ಪ್ರಾಕಾರದ ಸದಸ್ಯೆಯಾಗಿ ಕಾರ‍್ಯನಿರ್ವಹಣೆ. ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿಯ ಜೊತೆ ಹಲವಾರು ಪ್ರಶಸ್ತಿಗಳೂ ಸಂದಿವೆ.
ಲೇಖಕರು: ವೈ.ಎನ್. ಗುಂಡೂರಾವ್‌
ಕಣಜ

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: Be the first one !

ಇವುಗಳೂ ನಿಮಗಿಷ್ಟವಾಗಬಹುದು

Indira Halambi

ಇಂದಿರಾ ಹಾಲಂಬಿ (ಗಿರಿವಾಸಿನಿ)

ಇಂದಿರಾ ಹಾಲಂಬಿ (ಗಿರಿವಾಸಿನಿ) (೧೫.೧೦.೧೯೩೪): ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿರುವರಲ್ಲದೆ ಪ್ರಕಾಶಕಿಯಾಗಿಯೂ ಕನ್ನಡ ಸಾಹಿತ್ಯದ …

Leave a Reply

Your email address will not be published. Required fields are marked *