Srinivas Vydya

ಶ್ರೀನಿವಾಸ ವೈದ್ಯ

ಶ್ರೀನಿವಾಸ ವೈದ್ಯ (೦೪.೦೪.೧೯೩೬): ನಗೆಬರಹ, ಹಾಸ್ಯಪ್ರಧಾನ ಸಾಹಿತ್ಯ ಹಾಗೂ ಲಲಿತ ಪ್ರಬಂಧಗಳು ಮುಂತಾದ ಪ್ರಕಾರಗಳಿಂದ ಒಮ್ಮೆಲೆ ಗಂಭೀರ ಸಾಹಿತ್ಯದೆಡೆಗೆ ಜೀಕಿಕೊಂಡ ಶ್ರೀನಿವಾಸ ವೈದ್ಯರು ಹುಟ್ಟಿದ್ದು ಧಾರವಾಡದ ಜಿಲ್ಲೆಯ ನವಲಗುಂದದಲ್ಲಿ ೧೯೩೬ರ ಏಪ್ರಿಲ್ ೪ ರಂದು. ತಂದೆ ಬಿ.ಜಿ. ವೈದ್ಯ, ಸುಪ್ರಸಿದ್ಧ ವಕೀಲರು. ತಾಯಿ ಸ್ವಾತಂತ್ರ್ಯ ಹೋರಾಟಗಾರರ ಮನೆತನದಿಂದ ಬಂದ ಸುಂದರಾಬಾಯಿ.

ಪ್ರಾರಂಭಿಕ ಶಿಕ್ಷಣದಿಂದ ಹಿಡಿದು ಎಂ.ಎ.ವರೆಗೂ ಧಾರವಾಡದಲ್ಲೆ. ೧೯೫೯ರಲ್ಲಿ ಅರ್ಥಶಾಸ್ತ್ರ-ರಾಜ್ಯಶಾಸ್ತ್ರದಲ್ಲಿ ಪಡೆದ ಎಂ.ಎ. ಪದವಿಯ ಜೊತೆಗೆ ಬ್ಯಾಂಕಿಂಗ್ ಪರೀಕ್ಷೆಯಾದ ಸಿ.ಎ.ಐ.ಐ.ಬಿ ಮತ್ತು ಭಾರತೀಯ ವಿದ್ಯಾಭವನದಿಂದ (೧೯೮೦) ಪಡೆದ ಪತ್ರಿಕೋದ್ಯಮ ಡಿಪ್ಲೊಮ.

ಮನೆಯಲ್ಲಿದ್ದುದು ಸಾಹಿತ್ಯಕ, ಸಾಂಸ್ಕೃತಿಕ ವಾತಾವರಣ. ಬಿಡುವಿನ ವೇಳೆಯಲ್ಲೆಲ್ಲಾ ಕೈಯಲ್ಲೊಂದು ಕಾದಂಬರಿ ಹಿಡಿದು ಸದಾ ಓದಿನಲ್ಲಿ ಮಗ್ನರಾಗಿರುತ್ತಿದ್ದ ತಾಯಿ. ಇದು ವೈದ್ಯರ ಮೇಲೂ ಬೀರಿದ ಸಾಹಿತ್ಯದ ಪ್ರಭಾವ.

ಧಾರವಾಡದ ಕರ್ನಾಟಕ ಹೈಸ್ಕೂಲಿನಲ್ಲಿದ್ದಾಗಲೇ ಬರವಣಿಗೆಯ ಬಗ್ಗೆ ಆಸ್ಥೆ ಬೆಳೆದು ಪ್ರಾರಂಭಿಸಿದ ಕೈಬರಹದ ಪತ್ರಿಕೆ ‘ನಂದಾದೀಪ’. ಇವರ ಪತ್ರಿಕೆಗೆ ಸಹ ಸಂಪಾದಕರಾಗಿದ್ದವರು, ಕವನಗಳನ್ನು ಬರೆಯುತ್ತಿದ್ದವರು ಮಹಾದೇವ ಬಣಕಾರರು. ಕಾಲೇಜಿನಲ್ಲಿಯೂ ಕಾರ್ಯದರ್ಶಿಯಾಗಿ ನಡೆಸಿದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು. ಗಗ್ಗಯ್ಯನ ಗಡಿಬಿಡಿ, ದಾಂಪತ್ಯದ ಬೊಂಬೆ, ತಿರುವು-ಮುರುವು ಮುಂತಾದ ನಾಟಕಗಳ ಪಾತ್ರಧಾರಿ. ವಿದ್ಯಾವರ್ಧಕ ಸಂಘದವರು ಏರ್ಪಡಿಸುತ್ತಿದ್ದ ಸಾಹಿತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪಡೆದ ಹಲವಾರು ಬಹುಮಾನಗಳು.

ಕಾಲೇಜು ಓದುತ್ತಿದ್ದಾಗ ವಿ.ಕೃ.ಗೋಕಾಕರ ಪ್ರಭಾವಕ್ಕೆ ಒಳಗಾದವರು. ತಾವೂ ಅವರಂತೆ ಪ್ರೊ. ಆಗಬೇಕೆಂದು ಬಯಸಿದವರು. ಆದರೆ ಮನೆತನದ ವೈದ್ಯ ವೃತ್ತಿಗೂ ಸೇರದೆ, ತಂದೆಯ ವಕೀಲಿ ವೃತ್ತಿಯನ್ನೂ ಹಿಡಿಯದೆ ಸೇರಿದ್ದು ಮುಂಬಯಿಯ ಷಹರದಲ್ಲಿ ಪಿಎಚ್.ಡಿ. ಮಾಡಲು. ಆದರೆ ೧೯೫೯ರಲ್ಲಿ ಮುಂಬಯಿಯಲ್ಲಿ ಕೆನರಾ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಸೇರಿ ಬೆಳಗಾವಿ, ಗೋವಾ, ಧಾರವಾಡ, ದೆಹಲಿ, ಚೆನ್ನೈ ಮತ್ತು ಬೆಂಗಳೂರುಗಳಲ್ಲಿ ಕಾರ್ಯನಿರ್ವಹಿಸಿ ೧೯೯೬ರಲ್ಲಿ ನಿವೃತ್ತಿಯ ನಂತರ ಬೆಂಗಳೂರು ಬದುಕು.

ಇವರು ಬರವಣಿಗೆ ಪ್ರಾರಂಭಿಸಿದ ಸಂದರ್ಭವೂ ಒಂದು ವಿಶಿಷ್ಟ ಸನ್ನಿವೇಶದಿಂದ. ೧೯೮೪ರ ಸುಮಾರಿನಲ್ಲಿ ಡಾ. ಶಿವರಾಂ (ರಾಶಿ-ಕೊರವಂಜಿ ಪತ್ರಿಕೆಯ ಸಂಪಾದಕರು)ರವರು ತೀರಿಕೊಂಡಾಗ ಅವರ ಮಗ ಶಿವಕುಮಾರ್‌ರವರಿಗೆ ಬರೆದ ಸಾಂತ್ವನ ಪತ್ರದ ಭಾಷೆ, ಭಾವನೆಗಳನ್ನು ಮೆಚ್ಚಿದ ಶಿವಕುಮಾರ್, ಅ.ರಾ.ಸೇ., ಕೇಫ (ಅಷ್ಟರಲ್ಲಿ ಕೊರವಂಜಿ ನಿಂತುಹೋಗಿ ಅಪರಂಜಿಯಾಗಿ ಹೊರಬಂದಿತ್ತು)ರವರುಗಳು ಅಪರಂಜಿ ಪತ್ರಿಕೆಗೆ ಬರೆಯಲು ಒತ್ತಾಯಿಸಿದರು. ಹಾಸ್ಯಬರಹಗಳಿಗೇ ಮೀಸಲಾಗಿದ್ದ ಅಪರಂಜಿ ಪತ್ರಿಕೆಗೆ ಮುಂಬಯಿಯಲ್ಲಿ ಕಂಡ ನಿತ್ಯ ಬದುಕಿನ ಸಣ್ಣಪುಟ್ಟ ಘಟನೆಗಳಿಗೆ ನಗೆಲೇಪ ಹಚ್ಚಿ ಬರೆಯುತ್ತಾ ಹೋದರು. ಇವರು ಬರೆದ ಮೊಟ್ಟಮೊದಲ ಹಾಸ್ಯಲೇಖನ ‘ಸ್ಯಾರಿಗಾರ್ಡ್’.

ಹೀಗೆ ಬರೆದ ಲೇಖನಗಳ ಸಂಕಲನವೇ ‘ತಲೆಗೊಂದು ತರತರ’ (೧೯೯೪) ಪ್ರಕಟವಾಯಿತು. ಧಾರವಾಡದ ಭಾಷೆಯನ್ನು ವಿಶಿಷ್ಟ ರೀತಿಯಲ್ಲಿ ಪ್ರಯೋಗಿಸಿ ಬರೆದ ಬರಹಗಳ ಮೊದಲ ಸಂಕಲನವೇ ವೈದ್ಯರಿಗೆ ಸಾಕಷ್ಟು ಹೆಸರನ್ನು ತಂದುಕೊಟ್ಟಿತು.

‘ವರ ಹ್ಯಾಂಗಿದ್ದ ಅಂದರ ಗುದ್ದೀ ಗುದ್ದೀ ಮಾಡಿದ ಸದ್ದಾಂ ಹುಸೇನನ ಗತೆ ಇದ್ದ’, ‘ನಮ್ಮ ಗುಂಡಮ್ಮ ಸಮತಟ್ಟು ನೆಲದ ಮೇಲೆ ಬಿದ್ದಾಗ ಅಲ್ಲೊಂದು ಹಳ್ಳ ಆತು’, ‘ಕನ್ನಡದ ೭, ೫, ೬ ಅಂಕಿಗಳಂತೆ ದೇಹವನ್ನು ಮಡಚಿ ಗಂಟು ಹಾಕಿಕೊಂಡಿದ್ದ ಅಷ್ಟವಕ್ರ ಯೋಗಭಾಸ ಮಂದಿರದಲ್ಲಿ ಕಂಡೆ’, ‘ಮಂಗನ ಬೆನ್ನೇರಿಬಂದ ಕಲ್ಪನಾ ವಿಲಾಸ’ ಇಂತಹ ವಾಕ್ಯಗಳ ಪ್ರಯೋಗಳಿಂದ ಓದುಗರನ್ನು ತಮ್ಮತ್ತ ಸೆಳೆದುಕೊಂಡರು.

ಎರಡನೆಯ, ಲಲಿತ ಪ್ರಬಂಧಗಳ ಸಂಕಲನ ‘ಮನಸುಖರಾಯನ ಮನಸು’ (೧೯೯೭), ಮತ್ತು ಮೂರನೆಯ ಹಾಸ್ಯ ಪ್ರಬಂಧಗಳ ಸಂಕಲನ ‘ರುಚಿಗೆ ಹುಳಿಯೊಗರು’ (೨೦೦೩) ಪ್ರಕಟಗೊಂಡಿದ್ದು, ಮೇಲಿನ ಮೂರು ಕೃತಿಗಳೂ ಮೂರ್ನಾಲ್ಕು ಮುದ್ರಣಗಳನ್ನು ಕಂಡಿರುವುದೇ ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಲಘು-ಗಂಭೀರ ಬರಹಗಳೆಂದು ವಿಭಾಗ ಮಾಡಲಾಗದ ಹಾಗೂ ಕಥೆ, ಪ್ರಬಂಧಗಳೆಂದು ಪ್ರತ್ಯೇಕಿಸಲಾಗದ ವಿಶಿಷ್ಟ ರೀತಿಯ ಬರಹಗಳನ್ನು ಶ್ರೀನಿವಾಸ ವೈದ್ಯರು ಹುಟ್ಟುಹಾಕಿದರು (ಮೊದಲ ಓದು-ಕೆ.ವಿ. ಅಕ್ಷರ).

ನಂತರ ಗಂಭೀರ ಸಾಹಿತ್ಯದಲ್ಲಿ ಹೊರಳಿದ ವೈದ್ಯರು ಬರೆದದ್ದು ಅನೇಕ ಕಥೆಗಳು ಹಾಗೂ ಒಂದು ಕಾದಂಬರಿ, ಜಂಟಿ ಕುಟುಂಬದಲ್ಲಿದ್ದ ಹಿರಿಯ ವ್ಯಕ್ತಿತ್ವದ ಅಜ್ಜ ಬೀರಿದ ಪ್ರಭಾವದಿಂದ ಕಾದಂಬರಿ ರಚಿಸಲು ಮುಂದಾಗಿ ಬರೆದ ಕಾದಂಬರಿಯೆ ‘ಹಳ್ಳ ಬಂತು ಹಳ್ಳ’ (೨೦೦೪). ಮಳೆಗಾಲದಲ್ಲಿ ಒಮ್ಮೆಗೆ ಉಕ್ಕಿಹರಿದ ಸರ್ವಸ್ವವನ್ನೂ ತನ್ನೊಡಲೊಳಗೆ ಸೆಳೆದುಕೊಂಡು, ಎರಡು ದಿವಸಗಳ ನಂತರ ಪ್ರವಾಹ ಇಳಿದು, ಏನೂ ಆಗಿಲ್ಲವೆನ್ನುವಂತೆ ಶಾಂತವಾಗಿ ಹರಿಯುವ ನದಿ. ಹಿರಿಯರ ನಂಬಿಕೆಗಳು, ಆಚಾರ-ವಿಚಾರ, ಜಾತಿಯ ಕಟ್ಟುಪಾಡುಗಳು, ಮಾನವೀಯತೆ, ಸೌಹಾರ್ದ ಬದುಕು, ಸರಳತೆ ಇಲ್ಲವನ್ನೂ ಕೊಚ್ಚಿಕೊಂಡು ಹೋಗಿ ಬದುಕಿನ ಗತಿಯನ್ನೇ ಬದಲಿಸಿ ಬಿಡುವ ಆಧುನಿಕತೆಯನ್ನು ಹಳ್ಳಕ್ಕೆ ಹೋಲಿಸಿದ್ದಾರೆ. ಈ ಕಾದಂಬರಿಯು ೨೦೦೪ರಲ್ಲಿ ಮನೋಹರ ಗ್ರಂಥಮಾಲೆಯಿಂದ ಪ್ರಕಟವಾಗಿದೆ.

ಅಂಕಿತ ಪುಸ್ತಕ ಪ್ರಕಾಶನವು ಹೊರತಂದ ಸಣ್ಣ ಕತೆಗಳ ಸಂಕಲನ ‘ಅಗ್ನಿಕಾರ್ಯ’ (೨೦೦೭). “ಬರವಣಿಗೆ ಎಂದರೆ ಸೋದಿಶ್ಯವಾದ ಒಂದು ಬಹಿರಂಗ ಬೌದ್ಧಿಕ ಕಸರತ್ತು ಅಥವಾ ತೀರಾ ಖಾಸಗಿಯಾದ ಒಂದು ಆತ್ಮಶೋಧದ ಗೀಳು ಎಂಬ ಎರಡು ಅತಿರೇಕಗಳ ಹಂಗು ಕಳೆದುಕೊಂಡು, ಯಾವ ಹಪಾಹಪಿಯೂ ಇಲ್ಲದೆ, ನಿವೃತ್ತಿಯ ನಂತರವೇ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ವೈದ್ಯರ ಕಥೆ, ಕಾದಂಬರಿಗಳನ್ನು ಓದುವುದೆಂದರೆ ಎಲ್ಲೋ ಕಾಣೆಯಾಗಿದ್ದ ಬಂಧು-ಬಳಗದವರನ್ನು ಮತ್ತೆ ಭೇಟಿಯಾದಂತೆ” (ದೇಶಕಾಲ-ಜಯಂತ ಕಾಯ್ಕಿಣಿ).

ಹಲವಾರು, ಕಥೆ, ಹಾಸ್ಯಬರಹಗಳನ್ನು ನಾಟಕಕ್ಕೆ ಅಳವಡಿಸಿ ರಂಗದ ಮೇಲೆ ಪ್ರದರ್ಶಿತಗೊಂಡಿವೆ. ಅವುಗಳಲ್ಲಿ ಶ್ರದ್ಧಾ ಮತ್ತು ಹಣತೆಗಳು, ಬದುಕಲು ಕಲಿಯಿರಿ, ಕ್ರಯಸ್ಥ, ಬಿದ್ದೂರಿನ ಬಿಗ್‌ಬೆನ್‌, ದತ್ತೋಪಂತನ ಪತ್ತೇದಾರಿ, ಗಂಢಭೇರುಂಡ, ಮನಸುಖರಾಯನ ಮನಸು ಮುಂತಾದವುಗಳು.

ಹೆಗ್ಗೋಡಿನ ನಿನಾಸಂ, ಬೆಂಗಳೂರಿನ ವಿನಾಯಕ ಜೋಶಿ ತಂಡ, ಮೈಸೂರಿನ ರಂಗಾಯಣ, ಕುಂದಾಪುರದ ಭಂಡಾರ್ಕರ್ ಕಾಲೇಜು, ಬೆಂಗಳೂರಿನ ಯುಕೊ ಬ್ಯಾಂಕ್ ಕನ್ನಡ ಸಂಘ, ಯುವ ಜನೋತ್ಸವ ಸಂದರ್ಭದಲ್ಲಿ ಧಾರವಾಡದ ತಂಡ ಮುಂತಾದವುಗಳಿಂದ ಅಭಿನಯಿಸಲ್ಪಟ್ಟಿದೆ.

ಮನಸುಖರಾಯನ ಮನಸು ಕೃತಿಗೆ ಪರಮಾನಂದ ಪ್ರಶಸ್ತಿ (೨೦೦೩), ‘ಹಳ್ಳ ಬಂತು ಹಳ್ಳ’ ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ (೨೦೦೪) ಮತ್ತು ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ (೨೦೦೮), ರಾಜ್ಯೋತ್ಸವ ಪ್ರಶಸ್ತಿ (೨೦೧೦) ಪುರಸ್ಕೃತರಾಗಿರುವ ‘ಸಂವಾದ ಟ್ರಸ್ಟ್’ನ್ನು ೧೯೯೭ರಲ್ಲಿ ಸ್ಥಾಪಿಸಿದ್ದು, ನಾಡಿನ ಖ್ಯಾತ ಬರಹಗಾರರಿಂದ ಭಾಷಣ, ವಾಚನ, ಸಂವಾದ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಕ್ರಿಯಾಶೀಲರಾಗಿದ್ದಾರೆ.
ಲೇಖಕರು: ವೈ.ಎನ್. ಗುಂಡೂರಾವ್‌
ಕಣಜ

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 4.9 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

Indira Halambi

ಇಂದಿರಾ ಹಾಲಂಬಿ (ಗಿರಿವಾಸಿನಿ)

ಇಂದಿರಾ ಹಾಲಂಬಿ (ಗಿರಿವಾಸಿನಿ) (೧೫.೧೦.೧೯೩೪): ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿರುವರಲ್ಲದೆ ಪ್ರಕಾಶಕಿಯಾಗಿಯೂ ಕನ್ನಡ ಸಾಹಿತ್ಯದ …

Leave a Reply

Your email address will not be published. Required fields are marked *