Shravana Maasa

ಶ್ರಾವಣ ಮಾಸ ಹಬ್ಬಗಳ ಮಾಸ

ಶ್ರಾವಣ ಮಾಸದ ಹಬ್ಬಗಳು: ಭಾರತ ಧಾರ್ಮಿಕ ಪರಂಪರೆಯನ್ನು ಹೊಂದಿದ ಸುಸಂಸ್ಕ್ಕತಿಯ ದೇಶ. ಇಲ್ಲಿ ತನ್ನದೇ ಆದ ಧಾರ್ಮಿಕ ಆಚರಣೆಗಳು ವೃತ ನೇಮಾದಿಗಳು ಜರುಗುವ ಮೂಲಕ ದೈವೀ ಆರಾಧನೆ ಜರುಗುತ್ತಿದ್ದು ಇಲ್ಲಿನ ಧರ್ಮಕ್ಕೆ ಮೂರು ನೆಲೆಗಳು 1) ಮೂಲಭೂತ ತತ್ವಗಳ ಅಥವ ಸಿದ್ದಾಂತದ ನೆಲೆ 2) ಆ ತತ್ವಗಳನ್ನು ಜನಸಾಮಾನ್ಯಕ್ಕೆ ನಿರೂಪಿಸುವ ಪೌರಾಣಿಕ ನೆಲೆ. 3) ಆ ತತ್ವ ಸಿದ್ದಿಗಾಗಿ ಕಲ್ಪ ಅಂದರೆ ವಿಧಿ=ನಿಷೇಧಗಳನ್ನೊಳಗೊಂಡ ನಿತ್ಯ ನೈಮಿತ್ತಿಕ ಕರ್ಮಗಳ ಶ್ರದ್ದಾಪೂರ್ಣ ಆಚರಣೆ.

ವ್ರತಗಳು ಉತ್ಸವಗಳು ಎಂಬ ಉಭಯ ಅಂಗಗಳನ್ನೊಳಗೊಂಡ ಹಿಂದೂ ಹಬ್ಬಗಳ ಮತ್ತು ಪವಿತ್ರ ದಿನಗಳ ಆಚರಣೆಯನ್ನು ವಿಧಿಸಿರುವುದು ಮಾನವ ಚೇತನ ಅನಿತ್ಯವಾದ ಲೌಕಿಕ ಸ್ತರದಿಂದ ನಿತ್ಯವಾದ ಪಾರಮಾರ್ಥಿಕ ಸ್ತರಕ್ಕೆ ಏರುವುದಕ್ಕಾಗಿಯೇ.

ನಮ್ಮ ಪ್ರಾಚೀನ ಮಹರ್ಷಿಗಳು ನಮ್ಮ ಪ್ರತಿಯೊಂದು ಹಬ್ಬಕ್ಕೂ ಖಗೋಳಿಕ ನಿತ್ಯ ಸತ್ಯಗಳ ಪ್ರೇರಕಾಂಶಗಳನ್ನು ಸಮ್ಮಿಲಿತಗೊಳಿಸಿದ್ದಾರೆ ಇದರಿಂದ ಚರಾಚರ ಜಗತ್ತಿನ ಸೂತ್ರದ ಕೊಂಡಿಯನ್ನು ಸುಂದರವಾಗಿ ಹೆಣೆದಿದ್ದಾರೆ ಎನ್ನಬಹುದು.

ಕನ್ನಡದ ಕಾವ್ಯಾನಂದರು ತಮ್ಮ ವಚನೋದ್ಯಾನದಲ್ಲಿ ಹೀಗೆ ಹೇಳಿರುವರು.

ತಂತಿಗಳಲ್ಲಿ ಸುನಾದವಿದೆ
ಸೋರೆ ದಂಡಿಗಳಿಗೆ ಬಿಗಿದಾಗ ಮಾತ್ರ
ಚರ್ಮದಲ್ಲಿ ಸುನಾದವಿದೆ
ವಾದ್ಯಗಳ ಮೈಗಳಿಗೆ ಬಿಗಿದಾಗ ಮಾತ್ರ
ಬಿಲ್ಲಿನಲ್ಲಿ ಬಾಣ ಬಿಡುವ ಶಕ್ತಿಯಿದೆ
ನಾರಿನಿಂದ ಬಿಗಿದಾಗ ಮಾತ್ರ
ನನ್ನಲ್ಲಿಯೂ ನಿನ್ನರಿವ ಶಕ್ತಿಯಿದೆ
ನಿನ್ನಡಿಗಳಿಗೆ ನನ್ನ ಬಿಗಿದಾಗ ಮತ್ರ

ಹೀಗೆ ಪರಮಾತ್ಮನ ಪಾದಾರವಿಂದಗಳಲ್ಲಿ ನಮ್ಮನ್ನು ನಾವು ಬಿಗಿದುಕೊಂಡು ಆರಾಧಿಸಲು ಹಬ್ಬ ಹರಿದಿನಗಳೂ ಅತ್ಯಂತ ಸಹಾಯಕವಾಗಿವೆ ಎನ್ನಬಹುದು.ಅದರಲ್ಲೂ ಶ್ರಾವಣ ಮಾಸ ಪ್ರಾರಂಭವಾಯಿತೆಂದರೆ ಸಾಲು ಸಾಲು ಹಬ್ಬ ಹರಿದಿನಗಳನ್ನು ತನ್ನೊಡಲೊಳಗೆ ಅಡಗಿಸಿಕೊಂಡು ಬಿಚ್ಚಿಡುತ್ತಾ ಇಡೀ ಮಸ ವಿಶಿಒಷ್ಟಪೂರ್ಣ ಆಚರಣೆಯೊಂದಿಗೆ ಸಾಗುವುದು.

ಕಾರಹುಣ್ಣಿಮೆ ಹಬ್ಬಗಳ ಕರಕೊಂಡು ಬಂತು ಹೋಳಿ ಹುಣ್ಣಿಮೆ ಹೊಯ್ದುಕೊಂಡು ಹೋಯ್ತು ಎಂಬ ಹಿರಿಯರ ನುಡಿ ಎಷ್ಟು ಸತ್ಯ.ವೈಶಾಖದ ಬಿಸಿಲ ಬೇಗೆಯಿಂದ ತಂಪಿನೆಡೆಗೆ ಮೋಡಗಳನ್ನು ನೋಡುತ್ತಾ ಮಳೆಯಾದೊಡನೆ ಬೀಜ ಬಿತ್ತುವ ತವಕದಿಂದ ರೈತ ಇರುವಾಗ ಮಳೆಮೋಡಗಳ ಮೂಲಕ ಬರುವುದು ಶ್ರಾವಣ ಮಾಸ, ಇದನ್ನು ವರಕವಿ ಬೇಂದ್ರೆ

ಶ್ರಾವಣ ಬಂತು ಕಾಡಿಗೆ;ಬಂತು ನಾಡಿಗೆ
ಬಂತು ಬೀಡಿಗೆ;ಶ್ರಾವಣಾ ಬಂತು
ಕಡಲಿಗೆ ಬಂತು ಶ್ರಾವಣಾ;ಕುಣಿದಾಂಗ ರಾವಣಾ
ಕುಣಿದಾವ ಗಾಳಿ;ಬೈರವನ ರೂಪ ತಾಳಿ

ಎಂದು ಹೇಳುವ ಮೂಲಕ ಶ್ರಾವಣದ ವೈಭವವನ್ನು ಹಾಡಿ ಹೊಗಳಿದ್ದಾರೆ. ಶ್ರಾವಣ ಮಾಸ ಎಂದರೆ ಏನೋ ಒಂದು ರೀತಿಯ ರೋಮಾಂಚನ ಉಂಟಾಗುತ್ತದೆ. ಆಸ್ತಿಕರ ಪಾಲಿನ ಆನಂದ ಚೇತನ ಸ್ವರೂಪವಾಗಿದೆ ಈ ಮಾಸ. ಈ ಮಾಸದಲ್ಲಿ ಪ್ರತಿದಿನವೂ ಪುಣ್ಯದಿನ, ವ್ರತ, ಪೂಜೆ, ನಾಡಹಬ್ಬ, ಪುಣ್ಯ ಆರಾಧನೆ ಏನಾದರೂ ನಿತ್ಯ ನಿರಂತರವಾಗಿರುತ್ತವೆ,ಏನೇ ಮಾಡಿದರೂ ಶ್ರಾವಣ ಮಾಸದಲ್ಲಿ ಮಾಡು ಒಳ್ಳೆಯದಾಗುತ್ತದೆ ಎಂಬ ರೂಢಿಯುಂಟು. ಈ ಮಾಸ ಪೂರ್ತಿ ಮನೆಯ ಮುಂಭಾಗಿಲಿನಲ್ಲಿ ತೋರಣ ಹಸಿರಾಗಿರುತ್ತದೆ.ದೇವರ ಮಂಟಪದಲ್ಲಿ ನಂದಾದೀಪ ಬೆಳಗುತ್ತಿರುತ್ತದೆ.ಮುತ್ತೈದೆಯರು ಮಂಗಳ ರೂಪಿಣಿಯರಾಗಿ ಕಂಗೊಳಿಸುತ್ತ ಹಬ್ಬವನ್ನು ಶೃದ್ದೆ,ಭಕ್ತಿ,ಉತ್ಸಾಹದಿಂದ ಆಚರಿಸುತ್ತಾರೆ.

ಸರ್ವ ಹಬ್ಬಗಳ ಸಮನ್ವಯ ಸಂಯೋಗ ಮಾಸ ಶ್ರಾವಣ ಮಾಸ ಆಷಾಢ ಮಾಸದಲ್ಲಿ ಸಂಪ್ರದಾಯದ ಪ್ರಕಾರ ದೂರ ಆಗಿರುವ ದಂಪತಿಗಳು ಒಂದಾಗುತ್ತಾರೆ,ಅತ್ತೆ=ಸೊಸೆ, ಮಾವ=ಅಳಿಯ ಸೇರುವ ಮಾಸವಿದು.ಹಾಗಾದರೆ ಶ್ರಾವಣ ಮಾಸದಲ್ಲಿ ಬರುವ ಹಬ್ಬಗಳು ಹೇಗಿವೆ ನೋಡಿ

1)ಮಂಗಳಗೌರಿ ವ್ರತ 2)ನಾಗಚತುರ್ಥಿ/ಪಂಚಮಿ 3)ಬಸವ ಪಂಚಮಿ 4)ಶುಕ್ರಗೌರಿ ಪೂಜೆ 5)ವೈಷ್ಣವ ಶ್ರಾವಣ ಶನಿವಾರದ ಪೂಜೆ 6)ಅಂಗಾರಕ ಜಯಂತಿ 7)ಶ್ರೀ ವರಮಹಾಲಕ್ಷ್ಮೀ ವ್ರತ 8)ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ 9)ಗಾಯತ್ರಿ ಆರಾಧನೆ 10)ಪ್ರತಿ ಸೋಮವಾರ ವಿಶೇಷ ಶ್ರಾವಣ ಸೋಮವಾರ ಆಚರಣೆ 11)ಉಪಾಕರ್ಮ 12)ಶ್ರೀ ಕೃಷ್ಣ ಜನ್ಮಾಷ್ಟಮಿ 13) ರಕ್ಷಾಬಂಧನ 14)ಸಿರಿಯಾಳ ಷಷ್ಠಿ

ಹೀಗೆ ಎಲ್ಲ ಹಿಂದೂ ಹಬ್ಬಗಳು ಆಚರಿಸಲ್ಪಡುವುದು ಈ ಶ್ರಾವಣ ಮಾಸದಲ್ಲಿಯೇ. ಅಬ್ಬ..ಎಷ್ಟೊಂದು ಹಬ್ಬಗಳು ಬೇರೆ ಯಾವ ಮಾಸದಲ್ಲಿಯೂ ಸಹ ಶ್ರಾವಣದ ಸಂಭ್ರಮ ಮತ್ತು ಇಷ್ಟೊಂದು ಹಬ್ಬಗಳ ಆಚರಣೆ ಇರುವುದಿಲ್ಲ.

ಶ್ರಾವಣಾ ಬಂತು ಘಟ್ಟಕ್ಕೆ;ರಾಜ್ಯ ಪಟ್ಟಕ್ಕೆ
ಬಾನ ಮಟ್ಟಕ್ಕೆ
ಏರ್ಯಾವ ಮುಗಿಲು ರವಿ ಕಾಣೆನು ಹಾಡೆ ಹಗಲು

ಎನ್ನುವ ವರಕವಿ ಬೇಂದ್ರೆ ಗುಡುಗು ಮಿಂಚು,ಮೇಘಾವಳಿ ಭಾರತದ ಭೂಮಿಕೆಯ ಮೇಲೆ ಆಗುವ ಅಗಾಧವನ್ನು ಕುರಿತು ಈ ಕವಿತೆಯಲ್ಲಿ ಚಿತ್ರಿಸಿರುವರು.ಇಲ್ಲಿ ಜೀವರಾಶಿಗಳ ಜೀವನ ಚೈತನ್ಯವಾಗಿದೆ ಭಾರತದ ವಿವಿಧ ಪ್ರದೇಶಗಳ ಜನರು ಇದನ್ನು ಆಯಾ ಭಾಗದಲ್ಲಿ ತಮ್ಮದೇ ರೀತಿಯಲ್ಲಿ ಆಚರಿಸುತ್ತಾರೆ,ಹಿಮಾಚಲ ಪ್ರದೇಶದಲ್ಲಿರುವ “ದಖರೈವ”ಎಂಬ ಹೆಸರಿಂದ ಕಾಳಿಕಾಮಾತೆಯನ್ನು ಪೂಜಿಸುವ ಮೂಲಕ ಆಚರಿಸಿದರೆ ಪಂಜಾಬಿನವರು”ತಿಯಾನ್ ಬಾಗಿ”ಎಂದು, ಉತ್ತರಪ್ರದೇಶದಲ್ಲಿ” ಸಾವನ್. ಕಾಶ್ಮೀರದಲ್ಲಿ “ರುಥಾ” ನೃತ್ಯವನ್ನು ಮಾಡುತ್ತ ಆಚರಿಸುತ್ತಾರೆ.

ಬೆಟಗೇರಿ ಕೃಷ್ಣಶರ್ಮರ ನಲ್ವಾಡುಗಳಲ್ಲಿ “ಶ್ರಾವಣ”ಕುರಿತು ವಿಭಿನ್ನ ಶೈಲಿಯಲ್ಲಿ ವರ್ಣಿಸಲಾಗಿದೆ.ಇದನ್ನು ಗೀತರೂಪಕದಲ್ಲಿ ಬಿಂಬಿಸಲಾಗಿದ್ದು ಆಷಾಢಮಾಸದ ಕೊನೆಯ ದಿನ ರಾತ್ರಿಯ ಕೊನೆಯ ಯಾಮದ ಆರ್ಧ ಭಾಗ ಕಳೆಯುವದರೊಂದಿಗೆ ಮುಂಜಾವಿನ ಕೋಳಿಗಳ ಕೂಗಿನೊಂದಿಗೆ ಆರಂಭವಾಗುವ

ಏಳು ಶ್ರಾವಣ ರಾಜ,ಏಳು ಭೂವನದೋಜ
ಏಳು ಜೀವನತೇಜ,ಕಾಲಸುರಭೂಜ
ಪಡುಹಗಲು ನಿನಗೆಂದೆ ಪಡೆದಿಹುದು ಜಡಿಮೋಡ
ನಡುಬಾನಿಗವನು ಎಳೆತರುವರಾರೋ

ಎನ್ನುವ ಮೂಲಕ ಆರಂಭವಾಗುವ ಶ್ರಾವಣಗೀತೆ ಶ್ರಾವಣದ ಆಗಮನ ಕೃಷಿಕರ ಮನದಲ್ಲಿ,ನದಿದೇವತೆಗಳ ಮನದಲ್ಲಿ,ವಿವಿಧ ಹೂವುಗಳಲ್ಲಿ,ಹೊಸದಾಗಿ ವಿವಾಹವಾದ ಯುವತಿಯು ತನ್ನ ಗೆಳತಿಯೊಡನೆ ತವರು ಮನೆಯ ಹಂಬಲದ ಇಚ್ಛೆ ವ್ಯಕ್ತಪಡಿಸುವ ರೀತಿ,ತನ್ನ ಸಹೋದರಿಯನ್ನು ತವರಿಗೆ ಕರೆತರಲು ಬರುವ ಅಣ್ಣನ ಭಾವನೆಗಳನ್ನು,ನಿರೂಪಕನೊಡನೆ ಶ್ರಾವಣದ ಸಂವಾದರೂಪದಲ್ಲಿ ಮೂಡಿ ಬಂದಿಹುದು ಇದರಲ್ಲಿನ “ಪಂಚಮಿ ಹಬ್ಬಾ ಉಳಿತವ್ವ ನಾಕ ದಿನಾ,ಅಣ್ಣ ಬರಲಿಲ್ಲ ಯಾಕೋ ಕರೀಲಾಕ” ಎಂಬ ಹಾಡು ಇಂದಿಗೂ ಗ್ರಾಮೀನ ಜನರ ನಾಲಿಗೆಯಲ್ಲಿ ನಲಿದಾಡುತ್ತಿದೆ.

ನಾಗ ಚತುರ್ಥಿ: ಪುರಾಣ ಕಾವ್ಯ ಮಹಾಕಾವ್ಯಗಳಲ್ಲಿ ನಾಗ=ಗರುಡರಿಗೆ ಸಂಬಂಧಿಸಿದ ಹಲವಾರು ಉಲ್ಲೇಖಗಳಿವೆ.ತೈತ್ತರೀಯದಲ್ಲಿ ನಾಗಪೂಜೆಗೆ ಸಂಬಂಧಿಸಿದ ಶ್ಲೌಕಗಳಿವೆ.ಭಾರತದ ಇತಿಹಾಸದಲ್ಲಿ ನಾಗಾ ಜನಾಂಗವಿರುವ ಒಂದು ಪ್ರಾಂತವೇ ಇದೆ.ನಾಗವಂಶೀಯರು ಕೇರಳ.ಆಸ್ಸಾಂ,ನಾಗಾಲ್ಯಾಂಡಗಳಲ್ಲಿದ್ದಾರೆ.ಜನಮೇಜಯ ಮಹಾರಾಜನು ತಾನು ಮಾಡುತ್ತಿದ್ದ ಸರ್ಪಯಜ್ಞವನ್ನು ನಿಲ್ಲಿಸಿ ಮಹಾಭಾರತವನ್ನು ಕೇಳಲು ಪ್ರಾರಂಬಿಸಿದುದು ಈ ಶ್ರಾವಣ ಮಾಸದ ಶುದ್ದಪಂಚಮಿಯ ದಿನ.ಇಂಥ ದಿನವನ್ನು ನಾಗಪಂಚಮಿ ಎಂದು ನಾಗ ಮೂರ್ತಿಗೆ/ಹುತ್ತಕ್ಕೆ ಹಾಲೆರೆಯುವ ಮೂಲಕ ನಾಗ ಪಂಚಮಿಯನ್ನು ಈ ಶ್ರಾವಣ ಮಾಸದಲ್ಲಿ ಆಚರಿಸುವರು

ಶ್ರಾವಣ ಶುಕ್ರವಾರ: ಪ್ರತಿ ಶುಕ್ರವಾರ ಶುಕ್ರಗೌರಿ ವ್ರತವನ್ನು ಕೈಗೊಳ್ಳುವುದರಿಂದ ಸಂತಾನಪ್ರಾಪ್ತಿ ಹಾಗೂ ದೀರ್ಘಾಯುಷ್ಯನಾದ ಮಕ್ಕಳನ್ನು ಪಡೆದ ಕಥೆಗಳು ಈ ಪೂಜೆಯ ಕಥಾಶ್ರವಣ ಮಾಡುವುದರಿಂದ ತಿಳಿದು ಬರುತ್ತವೆ.

ಮಂಗಳ ಗೌರಿ ವ್ರತ: ಶ್ರಾವಣ ಮಸದ ಮೊದಲ ಮಂಗಳವಾರದ ಪುಣ್ಯ ದಿನದಿಂದ ನಾಲ್ಕು ಮಂಗಳವಾರ ಮಂಗಳಗೌರಿ ವ್ರತನ್ನು ಮಾಡುತ್ತಾರೆ ಹೊಸದಾಗ ಮದುವೆ ಆಗಿರುವ ಹೆಣ್ಣು ಮಕ್ಕಳು ತವರು ಮನೆಗೆ ಬಂದು ಶ್ರದ್ದೆ ಮತ್ತು ಭಕ್ತಿಯಿಂದ ಮಂಗಳಗೌರಿ ವ್ರತವನ್ನು ಮಾಡುವ ಮೂಲಕ ಮಾಂಗಲ್ಯಭಾಗ್ಯ,ಸಂಸಾರದ ಕ್ಷೇಮ,ಪತಿಯ ಆಯುಸ್ಸು,ಆರೋಗ್ಯ,ಐಶ್ವರ್ಯ,ಕೀರ್ತಿಯು ವೃದ್ದಿಸಲೆಂದು ಸಂಕಲ್ಪದಿಂದ ಈ ವ್ರತ ಮಾಡಿ ಪ್ರತಿ ವಾರವೂ ಸಹ ಮುತ್ತೈದೆಯರಿಗೆ ಬಾಗಿನ ಕೊಡುತ್ತಾರೆ.ಕೊನೆಯ ಮಂಗಳವಾರ ವ್ರತ ಮುಗಿದ ಮೇಲೆ ಮುತ್ತೈದೆಯರಿಗೆ ಭೋಜನದ ವ್ಯವಸ್ಥೆ ಮಾಡಿ ಪುನಃ ಬಾಗಿನ ಮತ್ತು ದಕ್ಷಿಣೆ ಕೊಡುವ ಮೂಲಕ ಆಚರಿಸುತ್ತಾರೆ.

ಸಿರಿಯಾಳ ಷಷ್ಠಿ: ಶ್ರಾವಣ ಶುದ್ದಷ್ಷಠಿಯು ಶಿವಭಕ್ತ ಸಿರಿಯಾಳನ ಸವಿನೆನಪಿನ ದಿನ.ಇವನೊಬ್ಬ ನಿಷ್ಠಾವಂತ ಭಕ್ತನಾಗಿದ್ದು ಈತನ ಕಥೆ ತೆಲಗು,ತಮಿಳು,ಮತ್ತು ಕನ್ನಡ ಶೈವ-ವೀರಶೈವದಲ್ಲಿ ಬಹುಮುಖವಾಗಿ ಕಾಣಿಸುತ್ತದೆ.ಗಂಡು ಮಕ್ಕಳನ್ನು ಹೆತ್ತ ತಾಯಿ ಈ ವ್ರತನ್ನು ಮಕ್ಕಳ ಆಯುಸ್ಸು,ಆರೋಗ್ಯ ಐಶ್ವರ್ಯ ಮತ್ತು ಕೀರ್ತಿಯ ಅಭಿವೃದ್ದಿಗಾಗಿ ಮಾಡುತ್ತಾರೆ.ಶ್ರಾವಣ ಮಾಸದ ಶುಕ್ಲಪಕ್ಷದ ಷಷ್ಠಿಯ ದಿವಸ ಈ ವ್ರತವನ್ನು ಮಾಡಲಾಗುತ್ತದೆ.

ಶ್ರಾವಣ ಶನಿವಾರ: ಶ್ರೀ ವೆಂಕಟೇಶಾಯ ಮಂಗಳಂ
ಶ್ರೀ ಶ್ರೀನಿವಾಸಾಯ ಮಂಗಳಂ
ಶ್ರೀ ನಾರಾಯಣಾ ಗೋವಿಂದಾ…ಗೋವಿಂದ

ಎಂದು ಹೇಳುತ್ತ ವೆಂಕಟಸ್ವಾಮಿ ಒಕ್ಕಲಿನವರು ನಾಮವನ್ನು ಧರಿಸಿ ಧಾರ್ಮಿಕ ಬಿಕ್ಷೆ ಬೇಡುವುದು ಈ ಶನಿವಾರ ದಿನದ ವಿಶೇಷ.

ಉಪಾಕರ್ಮ: ಶ್ರಾವಣ ಮಾಸದ ಶ್ರವಣ ನಕ್ಷತ್ರದಂದು ಅಶ್ವಲಾಯನ ಮತ ಆಪಸ್ಥಂಭ ಉಪಾಕರ್ಮ ವ್ರತಗಉ ಬರುತ್ತವೆ.ಈ ಉಪಕರ್ಮಗಳನ್ನು ಶಾಸ್ತ್ತ್ರೌಸ್ತ ಆಚರಿಸುವರು.ಬ್ರಾಹ್ಮಣ,ವೈಶ್ಯ,ಜೈನ,ದೇವಾಂಗ,ವಿಶ್ವಕಮ ಮೊದಲಾದ ಧರ್ಮದವರು ಉಪಾಕರ್ಮ ನಡೆಸುವರು.ಇದನ್ನು ಜನಿವಾರದ ಹಬ್ಬ ಎಂದೂ ಕರೆಯುವರು.ದೇವಾಲಯದಲ್ಲಿ ಸಾಮೂಹಿಕವಾಗಿ ಆಚರಿಸಲಾಗುತ್ತದೆ.

ನೂಲು ಹುಣ್ಣಿಮೆ: ಶ್ರಾವಣ ಮಾಸದ ಹುಣ್ಣಿಮೆಗೆ ನೂಲು ಹುಣ್ಣಿಮೆ ಎಂದು ಹೆಸರು.ಈ ಪೌರ್ಣಿಮೆಯ ದಿನ ಅಥವಾ ಅದರ ಹಿಂದಿನ ಶುಕ್ರವಾರ ವರಮಹಾಲಕ್ಷ್ಮೀ ವ್ರತ ಬರುವುದು.ಮಾನವ ಜನಾಂಗದ ಮರ್ಯಾದೆಯ ರಕ್ಷಣೆಗೆ ಆಧಾರಭೂತವಾದುದು ಬಟ್ಟೆ ಈ ಬಟ್ಟೆಯನ್ನು ನೇಯುವ ಕಾಯಕದವರಾದ ದೇವಾಂಗವಂಶಿಕರು ಈ ದಿನ ನೂಲನ್ನು ಪೂಜೆ ಮಾಡುವ ಶ್ರೇಷ್ಟತೆಯು ಮಹತ್ವಪೂರ್ಣವಾದುದು.

ರಕ್ಷಾಬಂಧನ: ಶ್ರಾವಣ ಮಾಸದ ಹುಣ್ಣಿಮೆಯ ದಿನ ಆಚರಿಸಲಾಗುವ ಈ ಹಬ್ಬವನ್ನು “ರಕ್ಷಾಬಂಧನ””ರಕ್ಷಾ ಪೂರ್ಣಿಮೆ””ನೂಲು ಹುಣ್ಣಿಮೆ”ಎಂದೆಲ್ಲಾ ಕರೆಯುವರು,ಈ ದಿನ ಸಹೋದರ ಸಹೋದರಿಯಯರು ತಮ್ಮ ಮಾನ ಪ್ರಾಣಗಳನ್ನು ಸದಾ ರಕ್ಷಿಸಿರೆಂದು ಮುಂಗೈಗೆ “ರೇಷ್ಮೆಯ ದಾರದ ಎಳೆ’ಗಳನ್ನು ಕಟ್ಟುತ್ತಾರೆ.ಉತ್ತರ ಭಾರತದಲ್ಲಿ ಇದು ಅತ್ಯಂತ ಜನಪ್ರೀಯವಾದ ಹಬ್ಬ,ಹಿಂದೆ ರಶಜ ಮಹಾರಾಜರ ಕಾಲದ ಯುದ್ದದ ಸಂದರ್ಭದಲ್ಲಿ ತಮ್ಮ ಪತಿಯ ಮಾನ ಪ್ರಾಣ ರಕ್ಷಣೆಯಾಗಲೆಂದು ಪತಿಗೆ ಶ್ರೀ ರಕಷೆಯೆಂದು ರಕ್ಷಾಎಳೆಗಳನ್ನು ಕಟ್ಟುವ ವಾಡಿಕೆ ಇತ್ತು. ಇಂದು ರಾಖಿ ಕಟ್ಟುವ ಸಂಪ್ರದಾಯ ಸಹೋದರ ಸಹೋದರಿಯರಲ್ಲಿ ಇದೆ.

ಶ್ರೀ ರಾಘವೇಂದ್ರರ ಆರಾಧನೆ: ಶ್ರಾವಣ ಮಾಸದ ಕೃಷ್ಣಪಕ್ಷದ ಬಹುಳ ಬಿದಿಗೆಯ ಪುಣ್ಯದಿನದಂದು ಗುರು ಸಾರ್ವಭೌಮ ರಾಘವೇಂದ್ರರ ಆರಾಧನೆ ನಡೆಯುತ್ತದೆ.ಇದು ರಾಯರ ಮಠದಲ್ಲಿ ಮೂರು ದಿನಗಳ ಕಾಲ ಭಕ್ತಿ,ಶ್ರದ್ದೆ ಮತ್ತು ವೈಭವದಿಂದ ನಡೆಯುತ್ತದೆ.ರಾಯರು ಬೃಂದಾವನವನ್ನು ಸೇರಿದ ಪುಣ್ಯ ದಿನವನ್ನು ಮಧ್ಯಮ ಆರಾಧನೆ ಎಂದು ಕರೆಯುತ್ತಾರೆ.ಸಾಮಾನ್ಯವಾಗಿ ರಾಯರ ಎಲ್ಲಾ ಮಠಗಳಲ್ಲಿಯೂ ಭಕ್ತರಿಗೆ ಪ್ರಸಾದ ರೂಪವಾಗಿ ಅನ್ನ ಸಂತರ್ಪಣೆ ನಡೆಯುವುದು.

ಶ್ರೀ ಕೃಷ್ಣ ಜನ್ಮಾಷ್ಟಮಿ: ಕೃಷ್ಣನು ವಿಷ್ಣುವಿನ ಎಂಟನೆಯ ಅವತಾರ.ಶ್ರಾವಣ ಮಾಸದಲ್ಲಿ ಬರುವ ಕೃಷ್ಣಪಕ್ಷದ ಅಷ್ಟಮಿಯ ದಿನ ರೋಹಿಣಿ ನಕ್ಷತ್ರ ಬರುವ ಪುಣ್ಯ ಕಾಲದಲ್ಲಿ ಶ್ರೀ ಕೃಷ್ಣನ ಅವತಾರ ಆಗಿದ್ದರಿಂದ ಈ ಪೂಜೆಯನ್ನು ಮಧ್ಯ ರಾತ್ರಿಯ ವೇಳೆಯಲ್ಲಿ ಮಾಡುವುದು ರೂಢಿಯಲ್ಲಿದೆ.ಭಗವದ್ಗೀತೆಯನ್ನು ಲೋಕಕ್ಕೆ ನೀತಿಯಾಗಿ ಹೇಳಿದ ದ್ವಾಪರ ಯುಗದಲ್ಲಿ ದೈವ ಕೃಷ್ಣನನ್ನು ಭಕ್ತರು ಭಕ್ತಿಯಿಂದ ಪೂಜಿಸುತ್ತಾರೆ.

ಶ್ರಾವಣ ಮಾಸದ ಸೋಮವಾರ: ಶ್ರಾವಣ ಮಾಸ ಆರಂಭವಾಯಿತೆಂದರೆ ವಿಶೇಷವಾಗಿ ಶಿವನ ಆಲಯಗಳಲ್ಲಿ ಭಕ್ತಿ ಪೂರ್ವಕವಾಗಿ ಬಿಲ್ವಪತ್ತಿಯನ್ನು ಶಿವಭಕ್ತರು ಅರ್ಪಿಸುವ ಮೂಲಕ ಪ್ರತಿ ಸೋಮವಾರ ಓಂ ನಮಃ ಶಿವಾಯ ಎನ್ನುವ ಮಂತ್ರೌಚ್ಛಾರಣೆಯೊಂದಿಗೆ ಶ್ರಾವಣ ಸೋಮವಾರ ಆಚರಿಸುವುದು ರೂಢಿಯಲ್ಲುಂಟು,ಅಷ್ಟೇ ಅಲ್ಲದೇ ಕೊನೆಯ ಸೋಮವಾರ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅಸನ್ನಸಂತರ್ಪಣೆ ಜರುಗಿಸುವ ಸತ್ಸಂಪ್ರದಾಯ ಉತ್ತರಕರ್ನಾಟಕ ಭಾಗದಲ್ಲಿದೆ.

ಗಾಯತ್ರಿ ಆರಾಧನೆ: ಗಾಯತ್ರಿ ದೇವಿಯು ಭಗವಂತನ ಸ್ತರೀರೂಪ,ಭಗವಂತನನ್ನು ಜಗನ್ಮಾತೆಯ ರೂಪದಲ್ಲಿ ಉಪಾಸನೆ ಮಡುವುದರಿಂದ ಮಧುರಭಾವ ಉಂಟಾಗುತ್ತದೆಲ್ಲದೇ ಮಾತೃಪೂಜೆಯಿಂದ ಸಮಸ್ತ ನಾರೀ ರೂಪದ ಬಗೆಗೂ ಪವಿತ್ರತೆ ಸದಾಚಾರ ಸದ್ಬಾವಗಳು ಮೂಡುತ್ತವೆ.ಗಾಯತ್ರಿ ಮಂತ್ರವು ಸಕಲ ಸದ್ಬಕ್ತರಿಗೆ ಕಲ್ಪತರುವಾಗಿದೆ.

ಅಂದರೆ ಲೋಕದ ಪ್ರಾಣನಾದ ಸರ್ವವ್ಯಾಪಿಯಾದ ಆ ಪರಮಾತ್ಮನು ನಮ್ಮ ಬಿಧ್ದಿಯನ್ನು ಪ್ರಚೋದಿಸಲಿ, ಪ್ರೇರಿಸಲಿ ಆ ಪವಿತ್ರದೇವನು ನಮ್ಮ ಜನರನ್ನು ಅವರ ಕರ್ಮಗಳನ್ನು ಸದಾ ಡಸನ್ಮಾರ್ಗದಲ್ಲಿ ಪ್ರವರ್ತಿಸುವಂತೆ ಪವಿತ್ರವಾದ ಪ್ರೇರಣೆಯನ್ನು ಕೊಡಲಿ ಎಂದು ಪ್ರಾರ್ಥಿಸುವುದಾಗಿದೆ. ಗಾಶಯತ್ರೀ ಮಂತ್ರವು ಒಂದು ರತ್ನಕೋಶವಿದ್ದಂತೆ ಈ ಮಹಾಮಂತ್ರದಲ್ಲಿ 24 ಅಕ್ಷರಗಳುಂಟು ಪ್ರತಿ ಅಕಷರಕ್ಕೆ ಒಂದೊಂದು ದೇವತೆಯಂತೆ 24 ದೇವತೆಗಳನ್ನು ಜಪಿಸಿದ ಮಹಾಂತ್ರವಾಗುತ್ತದೆ. ಪ್ರಾಚೀನ ಋುಉಷಿಮುನಿಗಳೆಲ್ಲರೂ ಈ ಮಂತ್ರದ ಮಹತ್ವವನ್ನು ಸಾಕ್ಷಾತ್ಕರಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಉತ್ಸವ ಪ್ರಿಯನಾದ ಮನುಷ್ಯರಲ್ಲಿ ವಾಕ್ಶುದ್ದಿ,ವಸನಶುದ್ದಿ, ಚಿತ್ತ ಶುದ್ದಿ,ದೇಹ ಶುದ್ದಿ,ವಾತಾವರಣ ಶುದ್ದಿ ಆತ್ಮ ಶುದ್ದಿ ಇವೆಲ್ಲಾ ಶ್ರಾವಣ ಮಾಸದಲ್ಲಿ ಆಗುತ್ತವೆ ಎಂದರೆ ತಪ್ಪಾಗಲಿಕ್ಕಿಲ್ಲ, ದಿನವೂ ಸ್ನಾನ ಮಾಡದವರು ಹಬ್ಬ ಹರಿದಿನಗಳಂದು ಸ್ನಾನ ಮಡುತ್ತಾರೆ ಇದರಿಂದ ದೇಹಶುದ್ದಿ, ಶುಭ್ರಬಟ್ಟೆ ಧರಿಸುತ್ತಾರೆ ಇದರಿಂದ ವಸನಶುದ್ದಿ, ಇನ್ನು ಕೆಟ್ಟ ಶಬ್ದಗಳನ್ನು ಆಡುವುದಿಲ್ಲ ದೇವರ ನಾಮ ನಾಲಿಗೆಯ ಜಪಿಸುವರು ಇದು ಚಿತ್ ಶುದ್ದಿ,ಇಂಥ ಕಾರ್ಯಗಳನ್ನು ಹೆಚ್ಚಾಗಿ ಜರುಗಿಸುವ ಶ್ರಾವಣ ಮಸ ಮಾನವರಲ್ಲಿ ಒಳ್ಳೆಯ ಬುದ್ದಿಯನ್ನು ಸಾತ್ವಿಕತೆಯನ್ನು ಹೆಚ್ಚಿಸುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ. ನಮ್ಮ ಪೂರ್ವಜರು ಹಬ್ಬದ ನೆಪದಲ್ಲಿ ಮಾಮೂಲಿ ಕೆಲಸಕ್ಕೆ ಬಿಡುವು ನೀಡುವ ಜೊತೆಗೆ ಎಲ್ಲ ಕಸುಬಿನವರಿಗೂ ಹುಮ್ಮಸ್ಸು ಇಮ್ಮಡಿ ಹೆಚ್ಚಿ ಮತ್ತೆ ಕಾರ್ಯಪ್ರವೃತ್ತರಾಗಲು ಪ್ರೇರಣೆ ಉಂಟಾಗುವಂತೆ ಆಯಾ ಕಾಲಮಾನಕ್ಕೆ ಪರಿಸರಕ್ಕೆ ತಕ್ಕಂತೆ ಹಬ್ಬಗಳನ್ನು ಯೋಜಿಸಿರುವುದು ವೈಜ್ಞಾನಿಕವಾಗಿಯೂ ಕೂಡ ಮಹತ್ವದ್ದಾಗಿದೆ.ಅಂತೆಯೇ ನಮ್ಮ ಭಾತರೀಯ ಸಂಸ್ಕ್ಕತಿ ಜಾಗತಿಕ ಸಂಸ್ಕ್ಕತಿಯಲ್ಲಿ ವಿಶೇಷ ಸ್ಥಾನಪಡೆದಿದೆ.

http://kannadamma.net/?p=45830

ಶ್ರೇಯಾಂಕ

ಮತ ನೀಡಿ ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 2.65 ( 2 votes)

ಇವುಗಳೂ ನಿಮಗಿಷ್ಟವಾಗಬಹುದು

ನಾಗರಪಂಚಮಿ ಆಚರಣೆ ಮತ್ತು ಮಹತ್ವ

ಅನಂತಂ ವಾಸುಕಿಂ ಶೇಷಂಪದ್ಮನಾಭಂ ಚ ಕಂಬಲಮ್ || ಶಂಖಪಾಲಂ ಧಾರ್ತರಾಷ್ಟ್ರಂತಕ್ಷಕಂ ಕಾಲಿಯಂ ತಥಾ || ಏತಾನಿ ನವನಾಮಾನಿನಾಗಾನಂ ಚ ಮಹಾತ್ಮನಾಮ್ …

Leave a Reply

Your email address will not be published. Required fields are marked *