ಶೇಣಿಗೋಪಾಲ ಕೃಷ್ಣಭಟ್ (೦೭-೪-೧೯೧೮ – ೧೮.೭.೨೦೦೬ ): ಯಕ್ಷಗಾನ ಕ್ಷೇತ್ರದ ಮಾತಿನ ಮಾಂತ್ರಿಕ, ವೇಷಧಾರಿ, ಪ್ರಸಂಗಕರ್ತೃ, ಮೇಳದಯಜಮಾನ ಹೀಗೆ ಹಲವು ಹತ್ತು ಮುಖಗಳ ಪ್ರತಿಭೆಯ ಸಂಗಮವಾಗಿದ್ದ ಗೋಪಾಲಕೃಷ್ಣ ಭಟ್ ರವರು ಹುಟ್ಟಿದ್ದು ಕಾಸರಗೋಡು ತಾಲ್ಲೂಕಿನ ಕುಂಬಳೆಯ ಎಡನಾಡುಗ್ರಾಮದಲ್ಲಿ. ತಂದೆ ನಾರಾಯಣಭಟ್ಟ, ತಾಯಿ ಲಕ್ಷ್ಮೀಅಮ್ಮ. ಮೂರು ವರ್ಷ ತುಂಬುವ ಮುನ್ನವೇ ಪಿತೃವಾತ್ಸಲ್ಯದಿಂದ ವಂಚಿತರು. ತಾಯಿ, ಅಜ್ಜಿಯ ಆಸರೆ. ತಾಯಿ ಕುಮಾರವ್ಯಾಸ ಭಾರತ, ತೊರವೆ ರಾಮಾಯಣ, ಭಾಗವತ ಗ್ರಂಥಗಳ ಸುಶ್ರಾವ್ಯ ಹಾಡುಗಾರ್ತಿ.
ಬೇಳದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಆಗಲೇ ಶ್ರೀ ಸುಬ್ರಹ್ಮಣ್ಯ ಕೃಪಾ ಪೋಷಿತ ನಾಟಕ ಮಂಡಲಿಯ ಬಾಲನಟನಾಗಿ ರಂಗಪ್ರವೇಶ. ಭಕ್ತಿ ಸಾಮ್ರಾಜ್ಯ, ಸದಾರಮೆ, ಹರಿಶ್ಚಂದ್ರ, ಮೃಚ್ಛಕಟಿಕ, ಗಿರಿಜಾಕಲ್ಯಾಣ, ಪ್ರಹ್ಲಾದ ಚರಿತ ಮುಂತಾದ ನಾಟಕಗಳಲ್ಲಿ ಅಭಿನಯಿಸಿ ಪಡೆದ ಖ್ಯಾತಿ.
ಮುಂದೆ ಓದಿದ್ದು ಮಹಾರಾಜ ಸಂಸ್ಕೃತ ಕಾಲೇಜಿನಲ್ಲಿ (ಪೆರಡಾಲ) ಕವಿ ವೆಂಕಪ್ಪ ಶೆಟ್ಟಿ, ಮಾಸ್ತರ್ ವಿಷ್ಣುಭಟ್ಟರ ಅರ್ಧಗಾರಿಕೆಗೆ ಮಾರುಹೋಗಿ ಅರ್ಥಧಾರಿಯಾಗಿ ಪಡೆದ ಪ್ರಸಿದ್ಧಿ. ಮಲ್ಪೆ ಶಂಕರನಾರಾಯಣ ಸಾಮಗರೊಂದಿಗೆ ಯಕ್ಷಗಾನ ಜೋಡಿಯಾಟ. ಶೇಣಿ-ಸಾಮಗರ ರಾವಣಕಥೆ, ವಾಲಿವಧೆ ಪ್ರಸಂಗಗಳು ಜನಪ್ರಿಯವಾಗಿ ಜೋಡಿಯಕ್ಷಗಾನ ಪಟುಗಳಿಗೆ ಹೆಸರು ತಂದವುಗಳು.
ಮದ್ದಲೆ ನುಡಿಸುವುದು ಮತ್ತು ಹಾಡುಗಾರಿಕೆಯ ಜೊತೆಗೆ ಬೆಳೆದ ಸಾಹಿತ್ಯದ ಒಲವು, ಮೇಘನಾದ, ಗೃಹಿಣಿ, ರಾಮಾಂಜನೇಯ, ಮಾತೃಭಕ್ತಿ, ಇವರು ರಚಿಸಿದ ಯಕ್ಷಗಾನ ಪ್ರಸಂಗಗಳು. ಕನ್ನಡ ಭಾಷೆ, ಸಂಸ್ಕೃತಿ ಉಳಿವಿಗಾಗಿ ರಚಿಸಿದ್ದು, ’ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ನಾಟಕಸಭಾ’ ಇದಲ್ಲದೆ ಸುರತ್ಕಲ್, ಕುಂಡಾವು, ಕೊಡ್ಲು, ಧರ್ಮಸ್ಥಳ ಮುಂತಾದ ಮೇಳಗಳಲ್ಲೂ ಅಭಿನಯ. ತುಳುನಾಡಸಿರಿ. ತಿರುಪತಿ ಮಹಾತ್ಯ್ಮ, ಚಂದ್ರಾವಳಿ ವಿಲಾಸ, ಕಡುಗಲಿ ಕುಮಾರರಾಮ, ಮಂತ್ರಾಲಯ ಮಹಾತ್ಮ್ಯ, ರಾಜಾಯಯಾತಿ ಇವರನ್ನು ನಟನೆಯಲ್ಲಿ ಉತ್ತುಂಗಕ್ಕೇರಿಸಿದ ಪಾತ್ರಗಳು. ಸಂದ ಪ್ರಶಸ್ತಿಗೌರವಗಳು ಹಲವಾರು. ಕರ್ನಾಟಕ, ಕೇರಳ, ಎರಡು ರಾಜ್ಯಗಳಿಂದಲೂ ರಾಜ್ಯಪ್ರಶಸ್ತಿ ಗಳಿಸಿದ ಯಕ್ಷಗಾನ ಕಲಾವಿದರೆಂಬ ಹೆಗ್ಗಳಿಕೆಯ ಜೊತೆಗೆ ಕ್ಯಾಸೆಟ್ ಲೋಕದಲ್ಲಿ ಅವರ ಅನೇಕ ಕ್ಯಾಸೆಟ್‌ಗಳ ದಾಖಲೆಯ ಮಾರಾಟ.
ಲೇಖಕರು: ವೈ.ಎನ್. ಗುಂಡೂರಾವ್, ಕಣಜ
ಶ್ರೇಯಾಂಕ
ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.