Shantarasa

ಶಾಂತರಸ

ಶಾಂತರಸ (೦೭.೦೪.೧೯೨೪ – ೧೩.೦೪.೨೦೦೮): ಸಾಹಿತ್ಯದ ಬೆಳವಣಿಗೆ, ಭಾಷೆಯ ಉಳಿವಿಗೆ, ಸಂಸ್ಕೃತಿಯ ಪ್ರಸಾರಕ್ಕೆ ನಿಜಾಮಶಾಹಿ ವಿರುದ್ಧದ ಹೋರಾಟದಲ್ಲಿ, ಗೋಕಾಕ ಚಳವಳಿಯಲ್ಲಿ – ಹೀಗೆ ನಾಡಿನ ಉಳಿವಿಗಾಗಿ ಆರು ದಶಕಗಳಿಗೂ ಮಿಕ್ಕು ಹೋರಾಟದಲ್ಲಿ ತೊಡಿಗಿಸಿಕೊಂಡಿದ್ದ ಶಾಂತರಸ (ಶಾಂತಯ್ಯ)ರವರು ಹುಟ್ಟಿದ್ದು ರಾಯಚೂರು ಜಿಲ್ಲೆಯ ಹೆಂಬೆರಾಳ ಗ್ರಾಮದಲ್ಲಿ ೧೯೨೪ರ ಏಪ್ರಿಲ್ ೭ರಂದು. ತಂದೆ ಚನ್ನಬಸವಯ್ಯ ಹಿರೇಮಠ, ಕನ್ನಡ-ಸಂಸ್ಕೃತ ಪಂಡಿತರು, ಜ್ಯೋತಿಷಿಗಳು. ಹನುಮದೇವರ ಗುಡಿಯಲ್ಲಿ ಶಾಲೆ ನಡೆಸುತ್ತಿದ್ದರು. ತಾಯಿ ಸಿದ್ಧಸಿಂಗಮ್ಮ.

ಪ್ರಾರಂಭಿಕ ಶಿಕ್ಷಣ ತಿಮ್ಮಾಪುರ, ಹೆಂಬೆರಾಳ, ಶಿರಿವಾರ, ಮುಷ್ಕರಗಳಲ್ಲಿ, ಮಹಾರಾಷ್ಟ್ರದ ಲಾತೂರಿನಲ್ಲಿ ಮಾಧ್ಯಮಿಕ ಶಿಕ್ಷಣ. ೧೯೪೪ರಲ್ಲಿ ಮೆಟ್ರಿಕ್ ತೇರ್ಗಡೆಯಾದ ನಂತರ ಉದ್ಯೋಗಕ್ಕಾಗಿ ಸೇರಿದ್ದು ರಾಯಚೂರಿನಲ್ಲಿ, ಸಂಗೀತಜ್ಞ, ಶಿಕ್ಷಣ ತಜ್ಞರೆನಿಸಿದ್ದ ಪಂಡಿತ ತಾರಾನಾಥರು ೧೯೨೦ರ ಉಗಾದಿಯಂದು ಪ್ರಾರಂಭಿಸಿದ್ದ ಹಮ್‌ದರ್ದ್‌ ಸಂಸ್ಥೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ.

ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಉರ್ದು ಮಾಧ್ಯಮದಲ್ಲಿ ಬಿ.ಎ. ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎಡ್. ಪದವಿ ಮತ್ತು ಕನ್ನಡ ಎಂ.ಎ. ಪದವಿಗಳು. ಹಮ್‌ದರ್ದ್‌ ಸಂಸ್ಥೆಯಲ್ಲಿಯೇ ಹೈಸ್ಕೂಲು ಶಿಕ್ಷಕರಾಗಿ, ಪದವಿ ಪೂರ್ವ ಕಾಲೇಜಿನ ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ೧೯೮೧ರಲ್ಲಿ ನಿವೃತ್ತಿ.

ತಂದೆ ಜ್ಯೋತಿಷಿಯಾಗಿದ್ದರೂ ಇವರು ಎಂದಿಗೂ ಜ್ಯೋತಿಷ್ಯವನ್ನು ನಂಬುತ್ತಿಲ್ಲದಿದ್ದುದರ ಜೊತೆಗೆ ಚಿಕ್ಕಂದಿನಿಂದಲೂ ಅದು ಸುಳ್ಳೆಂದು ಪ್ರತಿಭಟಿಸುತ್ತಿದ್ದರು. ಹೀಗೆ ಪ್ರತಿಭಟನಾ ಮನೋಭಾವವನ್ನು ಸಣ್ಣ ವಯಸ್ಸಿನಿಂದಲೇ ರೂಢಿಸಿಕೊಂಡಿದ್ದರು. ೧೯೪೨ರಲ್ಲಿಯೇ ಕಥೆ, ಕವನಗಳ ಮೂಲಕ ಬರವಣಿಗೆಯನ್ನು ಆರಂಭಿಸಿದ್ದು, ಇವರ ಬರಹಗಳಿಗೆ ಗಾಢ ಪ್ರಭಾವ ಬೀರಿದ್ದು ವಚನಗಳು. ಕವಿ ಹರಿಹರ ಮತ್ತು ಕುವೆಂಪುರವರು. ಹರಿಹರನ ಕಾವ್ಯದಲ್ಲಿ ಬರುವ ಬಹುಪಾಲು ನಾಯಕರು ಕೆಳವರ್ಗದವರೇ ಆಗಿದ್ದು ಇವರೆಗೆ ಮೆಚ್ಚಿಗೆಯಾದ ವಿಷಯವಾಗಿತ್ತು.

ರಾಯಚೂರಿನಲ್ಲಿ ವೀರಶೈವ ಬೋರ್ಡಿಂಗ್‌ನಲ್ಲಿ ವಿದ್ಯಾರ್ಥಿಗಳೇ ನಡೆಸುತ್ತಿದ್ದ ಕೈಬರಹ ‘ಸರ್ವಜ್ಞ’ ಎಂಬ ಪತ್ರಿಕೆಯ ಸಂಪಾದಕರಾಗಿ ಕಥೆ, ಕವನಗಳನ್ನು ತಾವಷ್ಟೇ ಬರೆದುದಲ್ಲದೆ ಸ್ನೇಹಿತರು ಬರೆಯಲು ಹುರಿದುಂಬಿಸುತ್ತಿದ್ದರು. ‘ಅನುಭವ ಮಂಟಪ’ ಎಂಬ ಸಂಸ್ಥೆ ಸ್ಥಾಪಿಸಿ ಹಲವಾರು ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸಿದರು. ೧೯೪೭ರಲ್ಲಿಯೇ ಸ್ನೇಹಿತರುಗಳು ಬರೆದ ಕಥೆ, ಪ್ರಬಂಧ, ಕವನಗಳನ್ನು ಸಂಪಾದಿಸಿ ‘ಮುಸುಕುತೆರೆ’ ಎಂಬ ಸಂಕಲನವನ್ನು ಹೊರತಂದರು. ಉದಯೋನ್ಮುಖ ಬರಹಗಾರರ ಕೃತಿಗಳನ್ನು ಪ್ರಕಟಿಸುವವರು ಮುಂದೆ ಬಾರದಾದಾಗ ತಾವೇ ‘ಸತ್ಯಸ್ನೇಹಿ’ ಎಂಬ ಪ್ರಕಾಶನವನ್ನೇ ಪ್ರಾರಂಭಿಸಿ ಇತರರ ಹಲವಾರು ಕೃತಿಗಳನ್ನು ಪ್ರಕಟಿಸಿದರು.

ಕನ್ನಡ, ಉರ್ದು, ಪಾರ್ಸಿ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದ ಶಾಂತರಸರವರು ಕನ್ನಡದಲ್ಲಿ ಕವಿತಾಸಂಕಲನ, ಕಥಾ ಸಂಕಲನಗಳು, ಕಾದಂಬರಿ, ನಾಟಕ, ಪ್ರಬಂಧ, ಸಂಪಾದನೆ-ಸಂಶೋಧನೆ, ಅನುವಾದ- ಹೀಗೆ ಎಲ್ಲ ಪ್ರಕಾರಗಳಲ್ಲಿಯೂ ಸಾಹಿತ್ಯ ರಚನೆ ಮಾಡಿದ್ದಾರೆ.

ಆರ್ಥಿಕ ಶೋಷಣೆಗಿಂತ ಸಾಂಸ್ಕೃತಿಯ ಶೋಷಣೆಯೇ ಅಪಾಯಕಾರಿ ಎಂದು ಅನ್ಯಾಯ, ಶೋಷಣೆಯ ವಿರುದ್ಧ ಬದುಕಿನುದ್ದಕ್ಕೂ ಹೋರಾಟವನ್ನು ನಡೆಸುತ್ತಾ ಬಂದವರು. ಪ್ರಗತಿ ಪರ ಧೋರಣೆಯನ್ನು ರೂಢಿಸಿಕೊಂಡವರು. ಸ್ವಾತಂತ್ರ್ಯಾನಂತರ ಹೈದರಾಬಾದ್ ಕರ್ನಾಟಕದಲ್ಲಿ ನಡೆದ ಅನೇಕ ಹೋರಾಟಗಳಲ್ಲಿ ಪ್ರಮುಖ ಪಾತ್ರವಹಿಸಿದಂತೆ ಗೋಕಾಕ ಚಳವಳಿಯಲ್ಲಿಯೂ ಮುಂಚೂಣಿಯಲ್ಲಿ ನಿಂತವರು.

ಧರ್ಮಸ್ಥಳದಲ್ಲಿ ೧೯೭೯ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯು ಕೊಂಚದರಲ್ಲಿ ಸಿಂಪಿ ಲಿಂಗಣ್ಣನವರಿಗೆ ತಪ್ಪಿಹೋಗಿ ಕವಿ ಗೋಪಾಲಕೃಷ್ಣ ಅಡಿಗರು ಆಯ್ಕೆಯಾದಾಗಿನಿಂದಲೂ ಸಿಂಪಿಯವರನ್ನು ಅಧ್ಯಕ್ಷರನ್ನಾಗಿಸಲು ಸತತ ಹೋರಾಟ ನಡೆಸಿ ೧೯೯೨ರಲ್ಲಿ ಇವರನ್ನೇ ಅಧ್ಯಕ್ಷರನ್ನಾಗಿ ಅಯ್ಕೆಮಾಡುವ ಸೂಚನೆಗಳು ದೊರೆತಾಗ, ಸಿಂಪಿಯವರ ಪರ ಪ್ರಚಾರಮಾಡಿ ಅಧ್ಯಕ್ಷರಾಗಿ (ಕೊಪ್ಪಳ) ಆಯ್ಕೆಯಾಗುವಂತೆ ಮಾಡುವಲ್ಲಿ ಸಫಲರಾಗಿದ್ದರು.

೧೯೭೦ರಲ್ಲಿ ಲಂಕೇಶ ‘ಅಕ್ಷರ ಹೊಸಕಾವ್ಯ’, ೧೯೭೧ರಲ್ಲಿ ಬುದ್ಧಣ ಹಿಂಗಮಿರೆಯವರ ‘ಹೊಸಜನಾಂಗದ ಕವಿತೆ’ಗಳಲ್ಲಿ ಹೈದರಾಬಾದ್ ಕರ್ನಾಟಕದ ಕವಿಗಳಿಗೆ ಪ್ರಾತಿನಿಧ್ಯ ದೊರೆಯಲಿಲ್ಲವೆಂದು ಪ್ರತಿಭಟಿಸಿ ಸ್ವಂತ ಹಣದಿಂದ ೨೭ ಕವಿಗಳ ೧೬೨ ಕವಿತೆಗಳ ಸಂಕಲನ ‘ಬೆನ್ನಹಿಂದಿನ ಬೆಳಕು’ ಕೃತಿಯನ್ನು (೧೯೭೨) ಪ್ರಕಟಿಸಿ ಹೊಸ ಚರ್ಚೆಗೆ ನಾಂದಿ ಹಾಡಿದರು.

ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗಲೇ ಗಜಲ್‌ಗಳ ಬಗ್ಗೆ ಆಸಕ್ತಿ ಬೆಳೆದು, ದೀರ್ಘ ಅಧ್ಯಯನ ನಡೆಸಿ, ಕವಿ ಮನೋಧರ್ಮದ ತತ್ತ್ವದರ್ಶನ ಮೂಡಿಸಲು ೧೯೮೦ರಿಂದಲೂ ಗಜಲ್‌ಗಳನ್ನು ಬರೆಯತೊಡಗಿದರು. ಪರ್ಶಿಯನ್ ಮೂಲದ ಗಜಲ್‌ಗಳಂತೆ ವ್ಯಕ್ತಿಪ್ರಶಂಸೆ, ದಾರ್ಶನಿಕತೆ, ಪ್ರೇಮೋಲ್ಲಾಸ, ಉದ್ದೀಪನೆ, ವಿರಹತಾಪ, ಶೃಂಗಾರ-ಭಕ್ತಿ ಮುಂತಾದವುಗಳನ್ನು ತಂದು ಕನ್ನಡದ ಗಜಲ್‌ಗಳಿಗೆ ಹೊಸ ಆಯಾಮ ತೋರಿದರು.

ಜಿಗಿದು ಹೋದವು ತಾರೆ ಎಂದೋ ನೀಲಾಂಬರದ ಅಂಗಳಕೆ
ಯಾರು ತರುವರು ಮರಳಿ ಈ ನೆಲಕೆ ರಂಗೋಲಿ ಹಾಕಲಿಕೆ

ಹೀಗೆ ಗಜಲ್‌ಗಳ ಆಂತರ್ಯ, ಬಾಹ್ಯಬಂಧ, ರೂಪಗಳೊಂದಿಗೆ ಸಮಗ್ರವಾಗಿ ಅರಿತಿದ್ದರು. ಇವರ ಗಜಲ್‌ ಪರಂಪರೆಯನ್ನು ಮಗಳಾದ ಎಚ್.ಎಸ್. ಮುಕ್ತಾಯಕ್ಕನವರು ಮುಂದುವರೆಸಿದ್ದಾರೆ.

ಇವರ ಮೊದಲ ಕೃತಿ (೧೯೬೧) ಹರಿಹರನ ಮಲಹರಣನ ರಗಳೆಯನ್ನು ಗೀತನಾಟಕವಾಗಿ ಪರಿವರ್ತಿಸಿದ ಕೃತಿ. “ಸತ್ಯಸ್ನೇಹಿ” (ಸಿಂಪಿ ಲಿಂಗಣ್ಣನವರ ಅರವಿಂದ ಗ್ರಂಥಮಾಲೆಯಿಂದ ಪ್ರಕಟಿತ). ನಂತರದ ನಾಟಕದ ಕೃತಿಗಳು ‘ನಂಜುನೊರೆವಾಲು’, ‘ಮರೆಯಾದ ಮಾರಮ್ಮ’ (ಗೊರೂರರ ಕಥೆಯನ್ನು ಆಧರಿಸಿದ್ದು ಆರ್. ನಾಗೇಶ್‌ರವರ ನಿರ್ದೇಶನಲ್ಲಿ ಪ್ರಯೋಗಗೊಂಡಿದೆ) ಮತ್ತು ಶರಣ ಬಸವೇಶ್ವರ (ರೇಡಿಯೋ ನಾಟಕ).

ಕವಿತಾ ಸಂಕಲನಗಳು: ಮಾನಸಗಳ್ಳಿ, ಬಯಲು ಸೀಮೆಯ ಬಿಸಿಲು, ಕನ್ನಡದ ಗಜಲ್ ಮತ್ತು ಸಮಗ್ರ ಕಾವ್ಯ. ಕಾದಂಬರಿ – ‘ಸಣ್ಣಗೌಡಸಾನಿ’.
ಕಥಾಸಂಕಲನಗಳು: ಬಡೇಸಾಬು ಪುರಾಣ, ನಾಯಿ ಮತ್ತು ಪಿಂಚಣಿ, ಸ್ವಾತಂತ್ರ್ಯವೀರ, ಉರಿದ ಬದುಕು ಮತ್ತು ಸಮಗ್ರ ಕಥೆಗಳು. ಪ್ರಬಂಧ-ಬಹುರೂಪ.
ಸಿದ್ಧರಾಮ, ಆಯ್ದಕ್ಕಿ ಮಾರಯ್ಯ ದಂಪತಿಗಳು, ನಾರದ ಗೆಡ್ಡೆ ಚನ್ನಬಸವ ಸ್ವಾಮಿಗಳು, ಬಸರೀಗಿಡದ ವೀರಪ್ಪ, ಕಲಬುರ್ಗಿಯ ದೊಡ್ಡಪ್ಪ ಅಪ್ಪ ಮುಂತಾದ ಜೀವನ ಚರಿತ್ರೆಗಳನ್ನು ಪ್ರಕಟಿಸಿದ್ದಾರೆ.

ಬಸವ ಪೂರ್ವ ಯುಗದ ಶರಣರು, ಮೊದಲ ವಚನಕಾರ ಮಾದಾರ ಚನ್ನಯ್ಯ, ಎಡೆದೊರೆನಾಡಿನ ಅನುಭಾವೀ ಕವಿಗಳು, ಬಳ್ಳಾರಿ ಜಿಲ್ಲೆಯ ಶಿವಶರಣರು ಮೊದಲಾದ ಸಂಶೋಧನ ಕೃತಿಗಳು; ಸಂಗ ವಿಭುಚರಿತ, ‘ಮೂರು ಶತಕ’, ವೀರಭದ್ರ ಕವಿ ವಿರಚಿತ ಅರವತ್ತಮೂರು ಪುರಾತನ ಪುರಾಣ, ಕೂಡಲೂರು ಬಸವಲಿಂಗ ಶರಣರ ಸ್ವರ ವಚನಗಳು, ಕಲ್ಲೂರು ಲಿಂಗಣ್ಣ ಒಡೆಯರ ವಿರಚಿತ ‘ಬಾರಾಮಾಸ’ ಮುಂತಾದ ಸಂಪಾದಿತ ಕೃತಿಗಳೊಡನೆ, ಇತರರೊಡನೆ ಸೇರಿ ಮುಸುಕು ತೆರೆ (ವಿವಿಧ ಲೇಖಕರು), ಕಲ್ಯಾಣ ದೀಪ (ಪ್ರಬಂಧಗಳು) ರಸಿಕಚಕ್ರಿ ಹರಿಹರದೇವ (ವಿಮರ್ಶಾತ್ಮಕ ಲೇಖನಗಳು), ‘ನಮನ’ ಮತ್ತು ‘ಭಾಲ್ಕಿ ಚನ್ನಬಸವ ಪಟ್ಟದ್ದೇವರ ಗೌರವಗ್ರಂಥ’ (ಸಂಭಾವನ ಗ್ರಂಥಗಳು) ಮುಂತಾದವುಗಳನ್ನು ಸಂಪಾದಿಸಿದ್ದಾರೆ.

ಉರ್ದು ಅನುವಾದದಲ್ಲೂ ಪರಿಣತರಾಗಿ ‘ಉಮ್ರಾನ್ ಜಾನ್ ಅದಾ’ (ಉರ್ದು ಕಾದಂಬರಿ) ಮತ್ತು ಅನೇಕ ಉರ್ದು ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ.

ಕನ್ನಡ ಸಾಹಿತ್ಯಕ್ಕೆ ಬಹುಮುಖ ಕೊಡುಗೆ ನೀಡಿದ ಶಾಂತರಸರನ್ನು ಹುಡುಕಿಕೊಂಡು ಬಂದ ಗೌರವಗಳು ಹಲವಾರು. ೧೯೯೨ರಲ್ಲಿ ನಡೆದ ರಾಯಚೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಬೀದರ್‌ನಲ್ಲಿ ನಡೆದ (೨೦೦೬) ಅಖಿಲಭಾರತ ೭೨ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಪದವಿ, (೧೯೯೫-೯೮), ಕನ್ನಡ ಸಾಹಿತ್ಯ ಪರಿಷತ್ತು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆ ಮುಂತಾದವುಗಳ ಫೆಲೊಶಿಪ್, ಕರ್ನಾಟಕ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮೈಸೂರು ಸರಕಾರದ ಬಹುಮಾನ, ತಮ್ಮಣ್ಣರಾವ ಅಮ್ಮಿನಭಾವಿ ಸ್ಮಾರಕ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಫೆಲೋಶಿಪ್, ನಾಡೋಜ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮುಂತಾದ ಪ್ರಶಸ್ತಿ, ಗೌರವಗಳು.

ಒಡಲಾಳದಲ್ಲಿ ಜ್ವಾಲಾಮುಖಿಯನ್ನೇ ತುಂಬಿಕೊಂಡು, ಅನ್ಯಾಯವೆನಿಸಿದಾಗ ಸಿಡಿದೆದ್ದು, ನಾಡು-ನುಡಿಗಾಗಿ ಸದಾಕಾಲ ಹೋರಾಟದ ಬದುಕನ್ನೇ ಪ್ರೀತಿಸುತ್ತಿದ್ದ ಅಶಾಂತ ಸಂತ ಶಾಂತರಸರವರ ಬದುಕು ಸ್ತಬ್ದವಾಗಿ ಹೋದದ್ದು ೨೦೦೮ರ ಏಪ್ರಿಲ್ ೧೩ರಂದು.
ಲೇಖಕರು: ವೈ.ಎನ್. ಗುಂಡೂರಾವ್‌
ಕಣಜ

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 2.99 ( 3 votes)

ಇವುಗಳೂ ನಿಮಗಿಷ್ಟವಾಗಬಹುದು

Indira Halambi

ಇಂದಿರಾ ಹಾಲಂಬಿ (ಗಿರಿವಾಸಿನಿ)

ಇಂದಿರಾ ಹಾಲಂಬಿ (ಗಿರಿವಾಸಿನಿ) (೧೫.೧೦.೧೯೩೪): ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿರುವರಲ್ಲದೆ ಪ್ರಕಾಶಕಿಯಾಗಿಯೂ ಕನ್ನಡ ಸಾಹಿತ್ಯದ …

Leave a Reply

Your email address will not be published. Required fields are marked *