ರಾವಣನನ್ನು ಸಂಹಾರ ಮಾಡುವ ನೆಪದಿಂದಲಾದರೂ ನೀನು ಇಲ್ಲಿಗೆ ಬಂದೆಯಲ್ಲ, ಇಲ್ಲ ಅಂದರೆ ಎಲ್ಲಿ ಬರುತ್ತಿದ್ದೆ ಸ್ವಾಮಿ?
ಶ್ರೀರಾಮ ಸ್ವಲ್ಪ ಗಂಭೀರ ಆಗ್ತಾರೆ:
ಅಮ್ಮಾ, ರಾಮ ಬರೀ ರಾವಣನ ವಧೆಗೆ ಬಂದಿದ್ದಾನೆ ಅಂತ ತಿಳಿಯಬೇಡ, ರಾವಣನನ್ನು ನನ್ನ ತಮ್ಮ ಅವನ ಕಾಲಿನಿಂದ ಬಾಣ ಬಿಟ್ಟು ಸಾಯಿಸಬಲ್ಲ. ರಾಮ ಹದಿನಾಲ್ಕು ವರ್ಷಗಳ ಕಾಲ ವನವಾಸ ಮಾಡಿದ್ದು, ಈ ನಾಡಿನಲ್ಲಿ ಸಾವಿರಗಟ್ಟಲೆ ಮೈಲು ನಡೆದಾಡಿರುವುದು, ಬರೀ ತನ್ನ ಪಿತೃವಾಕ್ಯ ಪರಿಪಾಲನೆಗಾಗಿ ಮಾತ್ರವಲ್ಲದೆ, ಜನರ ಕಷ್ಟಕೋಟಲೆಗಳ ಅರಿಯುವ ಸಲುವಾಗಿ, ಋಷಿಮುನಿಗಳ ಯಜ್ಞಯಾಗಾದಿಗಳಿಗೆ ಉಪಟಳ ಕೊಡುವ ರಾಕ್ಷಸರನ್ನು ಸಂಹರಿಸುವ ಸಲುವಾಗಿ, ಸಜ್ಜನರನ್ನು, ಸಾಧು, ಸಂತರನ್ನು ದುಷ್ಟರಿಂದ ರಕ್ಷಿಸುವ ಸಲುವಾಗಿ, ನಿನ್ನ ಭೇಟಿ ಆಗುವ ಸಲುವಾಗಿ, ಮುಂದೆ ಭರತ ಭೂಮಿಯಲ್ಲಿ ಯಾರಾದರೂ ಪಾಖಂಡಿ ರಾಮನ ಅಸ್ತಿತ್ವದ ಬಗ್ಗೆ ಪ್ರಶ್ನೆ ಎತ್ತಿದರೆ ಇತಿಹಾಸವೇ ಕೂಗಿ ಕೂಗಿ ಹೇಳಬೇಕು, ಈ ದೇಶದ ರಾಜನೊಬ್ಬ ಅವನ ಅರಣ್ಯವಾಸಿ ತಾಯಿಯನ್ನೂ ಕೂಡಾ ಭೇಟಿಯಾಗಿ ಪ್ರೀತಿಯಿಂದ, ಮಾತೃವಾತ್ಸಲ್ಯದಿಂದ ಅವಳಿತ್ತಿದ್ದ ಹಣ್ಣುಹಂಪಲುಗಳನ್ನು ಸ್ವೀಕರಿಸಿದ್ದ ಅಂತ. ನಾಳೆ ಯಾರಾದರೂ ಕಪಟಿ ಇಲ್ಲಿಯ ಪರಂಪರೆ ಬಗ್ಗೆ ಪ್ರಶ್ನೆ ಎತ್ತಿದರೆ ಕಾಲವೇ ಅವನ ಕತ್ತು ಹಿಡಿದು ಹೇಳಬೇಕು. ಒಬ್ಬ ಕ್ಷತ್ರಿಯ ರಾಜ ಒಬ್ಬ ಅರಣ್ಯವಾಸಿ ‘ದಟ್ಟ ದರಿದ್ರ’ ಅಜ್ಜಿಯನ್ನು ತನ್ನ ಹದಿನಾಲ್ಕು ವರ್ಷಗಳ ವನವಾಸದಲ್ಲಿ ಹುಡುಕಿಕೊಂಡು ಹೋಗಿ ಭೇಟಿಯಾಗಿ ಅವಳ ಸವಿಯಾದ ಆತಿಥ್ಯ ಸ್ವೀಕರಿಸಿ ಅವಳ ಬಹುಕಾಲದ ಮನೋಭಿಲಾಷೆ ಈಡೇರಿಸಿದ್ದ ಅಂತ. ರಾಮ ಯಾಕೆ ಬಂದಿದ್ದಾನೆ ಅಂದರೆ ಇದು ಅಖಂಡ ಭೂಮಂಡಲದಲ್ಲಿ ಎಂತಹ ದೇಶ ಅಂತ ಹೆಸರಾಗಬೇಕು ಅಂದರೆ ಇಲ್ಲಿ ರಾಜ ತನ್ನ ಸಾವಿರಾರು ಮೈಲುಗಳ ಸಂಚಾರದಲ್ಲಿ ಸಮಾಜದ ಕಟ್ಟ ಕಡೆಯ ಪ್ರಜೆಯನ್ನೂ ಸಹ ಭೇಟಿಯಾಗಿದ್ದ ಅಂತ ಆಗಬೇಕು. ಭವಿಷ್ಯದಲ್ಲಿ ಎಲ್ಲರಿಗೂ ಅನಿಸಬೇಕು ಎಲ್ಲರ ಆಶಯಗಳು ಈಡೇರುತ್ತವೆ ಅಂತ.. ಆಗಲೇ ಇದು ರಾಮರಾಜ್ಯ ಅಮ್ಮಾ….
ಶಬರಿ ಒಂದು ಕ್ಷಣ ಮೂಕವಿಸ್ಮಿತಳಾಗುತ್ತಾಳೆ…
ರಾಮ ಮುಂದುವರೆಸುತ್ತಾ…
ರಾಮನ ವನವಾಸ ರಾವಣನ ಜೊತೆ ಯುದ್ಧಕ್ಕಾಗಿ ಅಲ್ಲ ತಾಯಿ, ರಾಮನ ವನವಾಸ ಭವಿಷ್ಯದ ಭರತ ಭೂಮಿಯ ಆದರ್ಶಗಳ ಸ್ಥಾಪನೆಗಾಗಿ, ರಾಮ ಬಂದಿದ್ದು ಅನ್ಯಾಯಗಳ ಅಂತ್ಯಕ್ಕಾಗಿ, ಧರ್ಮ ಸ್ಥಾಪನೆಗಾಗಿ. ವಿದೇಶದಲ್ಲಿ ಕುಳಿತ ವೈರಿಗಳನ್ನ ಸದೆಬಡಿಯುವ ಮೊದಲು ದೇಶದ ಒಳಗೆ ಇರುವ ಅವರ ಸಮರ್ಥಕರಾದ ಶೂರ್ಪನಖಿಯಂತವರ ಮೂಗು ಕತ್ತರಿಸಿ, ಖರದೂಷಣನಂತವರ ಕೊಬ್ಬು ಕರಗಿಸುವುದು ಅವಶ್ಯಕ ಅಂತ ತೋರಿಸುವುದಕ್ಕಾಗಿ, ರಾವಣನನ್ನು ರಾಮ ಮಾತ್ರ ಅಲ್ಲ, ನಿನ್ನಂತವರ ಆಶೀರ್ವಾದದಿಂದ ಸಹ ಗೆಲ್ಲಬಹುದು ಅಂತ ತೋರಿಸುವುದಕ್ಕಾಗಿ.
ಶಬರಿಯ ಕಣ್ಣಲ್ಲಿ ಸಹಜವಾಗಿ ಆನಂದ ಭಾಷ್ಪದಿಂದ ಕೇಳುತ್ತಾಳೆ ಬೋರೆ ಹಣ್ಣು ತಿನ್ನುತೀರಾ ಪ್ರಭು?
ತಿನ್ನದೇ ಇಲ್ಲಿಂದ ಹೋಗುವ ಪ್ರಶ್ನೆಯೇ ಇಲ್ಲ ತಾಯಿ ಅಂತಾರೆ ಶ್ರೀರಾಮ.
ಶಬರಿ ಕುಟೀರದಿಂದ ಸೆರಗಿನಲ್ಲಿ ಬೋರೆ ಹಣ್ಣು ತಂದು ಇಡುತ್ತಾರೆ. ರಾಮ,ಲಕ್ಷ್ಮಣ ಇಬ್ಬರೂ ತಿಂತಾರೆ.
ಸಿಹಿ ಇದೆಯಾ ಪ್ರಭು? ಅಂತ ಕೇಳುತ್ತಾಳೆ ಶಬರಿ.
ರಾಮ: ನನಗೆ ಇಲ್ಲಿಗೆ ಬಂದ ಮೇಲೆ ಸಿಹಿ, ಖಾರ ಯಾವುದು ಅನ್ನೋದೇ ಮರೆತು ಹೋಗಿದೆ.. ಆದರೆ ಇಷ್ಟು ಹೇಳಬಹುದು.. ಇದು ಅಮೃತ ಇದ್ದ ಹಾಗೆ ಇದೆ.
ಶಬರಿ ಮುಗುಳ್ನಗೆ ಬೀರುತ್ತಾ ಹೇಳುತ್ತಾಳೆ..
“ನೀನು ನಿಜವಾಗಿಯೂ ಮರ್ಯಾದಾ ಪುರುಷೋತ್ತಮ.. ಗುರುಗಳು ನಿಜಾನೆ ಹೇಳಿದ್ದರು.“