Venugopala kasargod

ವೇಣುಗೋಪಾಲ ಕಾಸರಗೋಡು

ನೆರೆರಾಜ್ಯಕ್ಕೆ ಸೇರಿಹೋದ ಕನ್ನಡದ ಹೃದಯವುಳ್ಳ ಕಾಸರಗೋಡಿನಲ್ಲಿ ಕನ್ನಡದ ಉಸಿರನ್ನು ಜೀವಂತವಾಗಿಡಲು ನಿರಂತರ ಶ್ರಮಿಸಿದವರಲ್ಲಿ ವೇಣುಗೋಪಾಲ ಕಾಸರಗೋಡು ಒಬ್ಬ ಪ್ರಮುಖರು. 
ಸಾಹಿತ್ಯ ಮತ್ತು  ರಂಗಭೂಮಿಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಬಹುಮುಖ ಪ್ರತಿಭೆಯ ವೇಣುಗೋಪಾಲರು  ಕಾಸರಗೋಡಿನ ಕಾರಡ್ಕದಲ್ಲಿ ನವೆಂಬರ್ 10, 1948ರ ವರ್ಷದಲ್ಲಿ ಜನಿಸಿದರು.  ತಂದೆ ಪೊನ್ನೆಪ್ಪಲ ನಾರಾಯಣ ಭಟ್ಟರು ಮತ್ತು  ತಾಯಿ ಅದಿತಿ.
ವೇಣುಗೋಪಾಲ ಕಾಸರಗೋಡು ಅವರು ಕನ್ನಡದಲ್ಲಿ ಎಂ.ಎ. ಮತ್ತು ಎಂ.ಫಿಲ್. ಪದವಿಗಳನ್ನು ಗಳಿಸಿದ ನಂತರ ಕಾಸರಗೋಡಿನ ಸರಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ 1972 ರಲ್ಲಿ ವೃತ್ತಿಯನ್ನಾರಂಭಿಸಿ 2004 ರಲ್ಲಿ ನಿವೃತ್ತರಾಗುವವರೆವಿಗೂ ಅದೇ ಕಾಲೇಜಿನಲ್ಲಿದ್ದರು. ಅವರು ತಮ್ಮ ಕಡೆಯ ನಾಲ್ಕು ವರ್ಷಗಳ ಸೇವಾವಧಿಯಲ್ಲಿ  ಅನಾರೋಗ್ಯದ ನಿಮಿತ್ತ ರಜೆ ತೆಗೆದುಕೊಳ್ಳಬೇಕಾಯಿತು.
ವೇಣುಗೋಪಾಲರು ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಛಂದಸ್ಸು, ಜಾನಪದ ಮುಂತಾದ ಪಠ್ಯವನ್ನು ಬೋಧಿಸುವುದರ ಜೊತೆ ಜೊತೆಯಾಗಿ  ಕವಿಯಾಗಿ, ನಾಟಕಕಾರರಾಗಿ, ನಟರಾಗಿ ಕನ್ನಡದ ಹೋರಾಟಗಾರರಾಗಿ ವಿದ್ಯಾರ್ಥಿಗಳ ಮಧ್ಯೆ ಸದಾ  ತಮ್ಮನ್ನಿರಿಸಿಕೊಂಡಿದ್ದರು.
ವೇಣುಗೋಪಾಲ ಕಾಸರಗೋಡು ಅವರ ಕಾವ್ಯ ಕೃತಿಗಳೆಂದರೆ ಗರಿಮುರಿದ ಹಕ್ಕಿಗಳು, ಗೆರಿಲ್ಲಾ, ಬೊಗಸೆ ಮೀರಿದ ಬದುಕು ಮುಂತಾದವು;   ಆಹುತಿ, ಬಯಲಾಟ ಮುಂತಾದವು ಕಾದಂಬರಿಗಳು; ಯರ್ಮುಂಜ ರಾಮಚಂದ್ರ – ಬದುಕು ಬರೆಹ ಸಂಶೋಧನಾ ಕೃತಿ; ಮರೆಯಬಾರದ ಬರಹಗಾರ ಯರ್ಮುಂಜ, ಕವಿತೆ ಓದುವ ವಿಧಾನ ಮೊದಲಾದವು  ಸಂಪಾದಿತ ಕೃತಿಗಳು; ರಂಗ ಪಂಚಮ (5 ನಾಟಕಗಳು), ಕಾಸರಗೋಡು ಕವಿತೆಗಳು,ಸಾಹಿತ್ಯಧ್ವನಿ, ಉಪಸಂಸ್ಕೃತಿಯ ಮಾಲೆಯ 45 ಪುಸ್ತಕಗಳು (ಇತರರೊಡನೆ) ಇವು ಸಂಪಾದಿತ ಕೃತಿಗಳು. ಬಂಜೆನೆಲ, ಈಜಿನ ಮಲಯಾಳಂ ಕವಿತೆಗಳು ಮೊದಲಾದ ಅನುವಾದಗಳು ಮತ್ತು ಮಣ್ಣಿನ ಬೊಂಬೆ,ರಾಮಾಯಣ, ಮಹಾಭಾರತ, ಡ್ಯೂಟಿ ಅಂದ್ರೆ ಡ್ಯೂಟಿ, ಬಂಗಾರಾಂ (ಕುಸಿತ), ಹೀಗೂ ಆಗುತ್ತೆ, ನೀನಲ್ಲಾಂದ್ರೆ ನಿನ್ನಪ್ಪ, ಹುಲಿಬಂತು ಹುಲಿ, ಎಂ.ಡಿ.ಸಾಹೇಬರ ನಾಯಿ, ಶಿಲುಬೆ, ಯಜ್ಷಪಶು, ಬದುಕು ಜಟಕಾಬಂಡಿ, ಜಿಯಾ,ದೃಷ್ಟಿ, ಪ್ರಶ್ನೆ, ಮತ್ತು ನಾಟಕಗಳು ಮುಂತಾದ ನಾಟಕಗಳು; ಸಂಕಲನ ಹಾಲು ಕುಡಿದ ಗಣಪ ಹೀಗೆ ವೇಣುಗೋಪಾಲ ಕಾಸರಗೋಡು ಅವರದ್ದು ವೈವಿಧ್ಯಪೂರ್ಣ ಸಾಧನೆ.
ಹೀಗೆ ನಾನಾ ಕ್ಷೇತ್ರದಲ್ಲಿ ಎಡೆಬಿಡದೆ ದುಡಿಯುತ್ತಿದ್ದ ವೇಣುಗೋಪಾಲ ಕಾಸರಗೋಡು ಅವರು  ನವ್ಯ ಸಾಹಿತ್ಯ ಸಂಘ, ಹೊರನಾಡ ಕನ್ನಡ ಸಂಘ ಸಂಸ್ಥೆಗಳ ಒಕ್ಕೂಟ, ತಪಸ್ಯಾ, ಯವನಿಕಾ ಕಾಸರಗೋಡು, ಗೀತವಿಹಾರ, ನೃತ್ಯ ನಿಕೇತನ, ಕಾಸರಗೋಡು ಕನ್ನಡ ಬಳಗ, ಕಾಸರಗೋಡು ಕರ್ನಾಟಕ ಸಮಿತಿ, ಕನ್ನಡ ಸಂರಕ್ಷಣಾ ಸಮಿತಿ-ಕಾಸರಗೋಡು, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಮುಂತಾದವುಗಳಲ್ಲಿ ಸದಸ್ಯರಾಗಿ,ಉಪಾಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ದುಡಿದುದಲ್ಲದೆ ಕರ್ನಾಟಕ ನಾಟಕ ಅಕಾಡಮಿ ಸದಸ್ಯರಾಗಿ ಎರಡು ಬಾರಿ (1981-84 ಮತ್ತು 1986-90), ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯರಾಗಿ (1991-94), ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ (1996-99) ಮತ್ತು ಕೇರಳ ಸಂಗೀತ ನಾಟಕ ಅಕಾಡಮಿಯ ಸ್ಥಾಯಿ ಸಮಿತಿಯ ಸದಸ್ಯರಾಗಿ ಹೀಗೆ ವಿವಿಧಮುಖಿಯಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ.
ವೇಣುಗೋಪಾಲ ಕಾಸರಗೋಡು ಅವರು ಬೆಂಗಳೂರು, ಮಂಗಳೂರು, ಧಾರವಾಡ, ಮುಂಬಯಿ ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರಗಳ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.  ಅವರು ಅಂಗುಲಿಮಾಲ,ಬದುಕು ಜಟಕಾಬಂಡಿ, ಯಜ್ಞಪಶು, ಬಹದ್ದೂರ್ ಗಂಡು, ಪೋಲಿ ಕಿಟ್ಟಿ, ಕೆಥಾರ್ಸಿಸ್, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾವು, ರೊಟ್ಟಿ, ಮಹಾಭಾರತ, ಬಂದಾ ಬಂದಾ ಸರದಾರ ಮುಂತಾದ ನಾಟಕಗಳಲ್ಲಿ ನಟರಾಗಿ ಅಭಿನಯಿಸಿದ್ದಲ್ಲದೆ;ಅಂಗುಲಿಮಾಲ, ಬದುಕು ಜಟಕಾಬಂಡಿ, ಪೋಲಿಕಿಟ್ಟಿ, ಹುಚ್ಚು ಹೊಳೆ, ಕೆಥಾರ್ಸಿಸ್, ಮಹಾಭಾರತ, ಹೇಡಿಗಳು,ದೊರೆ ಈಡಿಪಸ್, ಮಣ್ಣಿನ ಬೊಂಬೆ ಮುಂತಾದ ನಾಟಕಗಳನ್ನು ನಿರ್ದೇಶಿಸುವ ಹೊಣೆಯನ್ನೂ ನಿರ್ವಹಿಸಿದ್ದರು.
ವೇಣುಗೋಪಾಲ ಕಾಸರಗೋಡು ಅವರು ಕೇರಳದ ತ್ರಿಚೂರಿನ ಸ್ಕೂಲ್ ಆಫ್ ಡ್ರಾಮದಲ್ಲಿ ಯವನಿಕಾ ಕಾಸರಗೋಡುಮತ್ತು ಅಪೂರ್ವ ಕಲಾವಿದರುರಂಗ ಸಂಸ್ಥೆಗಳನ್ನು ಸ್ಥಾಪಿಸಿ ಕರ್ನಾಟಕದಲ್ಲಷ್ಟೇ ಅಲ್ಲದೆ ಗೋವಾ, ಮುಂಬೈ, ಸೊಲ್ಲಾಪುರ, ಸೇಲಂ, ನವದೆಹಲಿ ಮುಂತಾದ ಕಡೆಗಳಲ್ಲೂ ನಾಟಕಗಳ ಪ್ರದರ್ಶನವನ್ನು ನೀಡಿದರು.
ಗರಿಮುರಿದ ಹಕ್ಕಿಗಳು ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಬೊಗಸೆ ಮಾರಿದ ಬದುಕು ಸಂಕಲನಕ್ಕೆ ಮುದ್ದಣ ಸ್ಮಾರಕ ಕಾವ್ಯ ಪ್ರಶಸ್ತಿ, ತಪ್ತಚೇತನ ಖಂಡಕಾವ್ಯಕ್ಕೆ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಸುವರ್ಣ ಪದಕ, ಯರ್ಮುಂಜ ರಾಮಚಂದ್ರ ವಿಮರ್ಶಾ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ರತ್ನಾಕರವರ್ಣಿ ಮುದ್ದಣ ಸ್ಮಾರಕ ಅನಾಮಿಕ ದತ್ತಿನಿಧಿ ಪ್ರಶಸ್ತಿ, ಸಾಹಿತ್ಯ ಮತ್ತು ರಂಗಭೂಮಿಗೆ ಸಲ್ಲಿಸಿದ ಸೇವೆಗಾಗಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಶಸ್ತಿ  ಮುಂತಾದ ಅನೇಕ ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದರು. ಇವುಗಳ ಜೊತೆಗೆ ಇವರು ನಿರ್ದೇಶಿಸಿದ ಹುಚ್ಚು ಹೊಳೆನಾಟಕಕ್ಕೆ ಕಣ್ಣಾನೂರು ನೆಹರು ಯುವಕ ಕೇಂದ್ರದ ಪ್ರಥಮ ಬಹುಮಾನ ಮತ್ತು ಹೇಡಿಗಳುನಾಟಕಕ್ಕೆ ಲಲಿತಕಲಾ ಸದನ ಏರ್ಪಡಿಸಿದ್ದ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಗಳೂ ಸಂದಿದ್ದವು. ಜೊತೆಗೆ ಶ್ರೇಷ್ಠ ಪ್ರತಿಭಾವಂತ ಯುವ ರಂಗ ಕರ್ಮಿ ಜೇಸಿ ಪ್ರಶಸ್ತಿ ಮತ್ತು ಕರ್ನಾಟಕ ನಾಟಕ ಅಕಾಡಮಿಯ ಪ್ರಶಸ್ತಿಗಳೂ ಅರಸಿ ಬಂದಿದ್ದವು.
ಸಾಹಿತ್ಯ, ನಾಟಕ, ಕವಿಗೋಷ್ಠಿ, ಕಮ್ಮಟ ಹೀಗೆ ನಾನಾ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಗಡಿನಾಡಿನಲ್ಲಿದ್ದರೂ ಬದುಕಿನುದ್ದಕ್ಕೂ ಕನ್ನಡಪರ ಕಾಳಜಿಯನ್ನೇ ರಕ್ತದಲ್ಲಿ ತುಂಬಿಕೊಂಡಿದ್ದ ವೇಣುಗೋಪಾಲ ಕಾಸರಗೋಡುರವರು ಕೆಲಕಾಲದ ಅನಾರೋಗ್ಯದ ನಂತರದಲ್ಲಿ ಮೇ 25, 2005ರ ವರ್ಷದಲ್ಲಿ ಈ ಲೋಕವನ್ನಗಲಿದರು.

ಇವುಗಳೂ ನಿಮಗಿಷ್ಟವಾಗಬಹುದು

A V Prakasha

ಎ.ವಿ. ಪ್ರಕಾಶ್‌

ಎ.ವಿ. ಪ್ರಕಾಶ್‌ (೧೫.೧೦.೧೯೪೫): ಪ್ರಖ್ಯಾತ ಕೊಳಲುವಾದಕರಾದ ಎ.ವಿ. ಪ್ರಕಾಶ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ಪ್ರಖ್ಯಾತ ಪಿಟೀಲು ವಿದ್ವಾಂಸರಾದ ಎ.ಕೆ. ವೆಂಕಟನಾರಾಯಣ, …

Leave a Reply

Your email address will not be published. Required fields are marked *