ವೆಬ್ ಡಿಸೈನ್‌ನಲ್ಲಿದೆ ಬದುಕಿನ ವಿನ್ಯಾಸ

ವೆಬ್ ಡಿಸೈನ್‌ನಲ್ಲಿದೆ ಬದುಕಿನ ವಿನ್ಯಾಸ

ವೆಬ್ ಡಿಸೈನ್‌: ಜಾಗತೀಕರಣ ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಎಂಟ್ರಿಯಿಂದಾಗಿ ಭಾರತೀಯ ಉದ್ಯೋಗ ಮಾರುಕಟ್ಟೆ ಕ್ಷಣ ಕ್ಷಣಕ್ಕೂ ಬದಲಾವಣೆಯನ್ನು ದಾಖಲಿಸಿಕೊಳ್ಳುತ್ತಿದೆ. ಉದ್ಯೋಗಾರ್ಥಿಗಳ ಹಾಟ್‌ಸ್ಪಾಟ್ ಎಂದೇ ಭಾರತವನ್ನು ಬಿಂಬಿಸಲಾಗುತ್ತಿದೆ. ವಿಶ್ವದ ಮಾರುಕಟ್ಟೆಯಲ್ಲಿ ಭಾರತೀಯ ಕಂಪನಿಗಳು ಮೊದಲ ಸ್ಥಾನದಲ್ಲಿ ನಿಂತು ವಿಶ್ವದ ಉದ್ಯೋಗ ಮಾರುಕಟ್ಟೆಯನ್ನು ಮುನ್ನಡೆಸುವಂತಹ ಛಾತಿಯನ್ನು ಪ್ರದರ್ಶಿಸುತ್ತಿವೆ. ಇಂತಹ ಬೆಳವಣಿಗೆಗಳನ್ನು ಆಧರಿಸಿಕೊಂಡು ವೆಬ್ ಡಿಸೈನ್ ಹೊಸದಾಗಿ ತಲೆ ಎತ್ತಿ ಉದ್ಯೋಗದ ಮಾರುಕಟ್ಟೆಯಲ್ಲಿ ಮುನ್ನಡೆಯುತ್ತಿದೆ.

ವೆಬ್ ಡೆವಲಪ್‌ಮೆಂಟ್ ಕಂಪನಿಯೊಂದು ಏನನ್ನು ಬಯಸುತ್ತದೆ ಅನ್ನೋದನ್ನು ಇಲ್ಲಿ ನೋಡಬಹುದಾಗಿದೆ. ಮುಖ್ಯವಾಗಿ ವೆಬ್ ಡಿಸೈನರ್, ಫ್ಲಾಶ್ ಡಿಸೈನರ್ ಮತ್ತು ಗೇಮ್ ಸ್ಪೆಷಲಿಸ್ಟ್, ವೆಬ್ ಮಾಸ್ಟರ್ ಮತ್ತು ಪೊರ್ಟಲ್ ಮ್ಯಾನೇಜರ್.

ವೆಬ್‌ಸೈಟ್‌ನ್ನು ಗ್ರಾಹಕರ ಇಚ್ಛೆಯಂತೆ ಡಿಸೈನ್ ಮಾಡೋದು ಆತನ ಕರ್ತವ್ಯವಾಗಿರುತ್ತದೆ. ಇದರಲ್ಲಿ ಲೋಗೋ, ಬ್ಯಾನರ್, ಜಾಹೀರಾತುಗಳನ್ನು ಹಾಕೋದು ಮುಖ್ಯವಾಗಿ ಈತ ಮಾಡಬೇಕಾದ ಕೆಲಸ. ಈ ಡಿಸೈನ್ ಕಾರ‌್ಯದ ಪ್ರಮುಖ ಉದ್ದೇಶವೆಂದರೆ ವೆಬ್ ನೋಡುವ ವರ್ಗದವರನ್ನು ಸೂಜಿಗಲ್ಲಿನಂತೆ ಸೆಳೆಯುವ ತಾಕತ್ತು. ಅದಕ್ಕಾಗಿ ಒಬ್ಬ ವೆಬ್ ಡಿಸೈನರ್ ಎನಿಸಿಕೊಂಡವ ಮಾಡಬೇಕಾದ ಮೊದಲ ಕೆಲಸವೆಂದರೆ ಯಾರು ಸೈಟ್‌ನಲ್ಲಿ ಇದ್ದಾರೋ ಅವರನ್ನು ಹೆಚ್ಚು ಆಕರ್ಷಿಸುವ ಹಾಗೂ ಪದೇ ಪದೆ ನೋಡುವಂತಹ ಡಿಸೈನ್‌ಗಳನ್ನು ಆತ ಸೃಷ್ಟಿ ಮಾಡಬೇಕಾಗುತ್ತದೆ. ಗ್ರಾಹಕರನ್ನು ಸೆಳೆಯುವಂತಹ ಡಿಸೈನ್‌ಗಳನ್ನು ಸೃಷ್ಟಿ ಮಾಡೋದು ಆತನ ಪ್ರಮುಖ ಜವಾಬ್ದಾರಿ ಎನಿಸಿಕೊಳ್ಳುತ್ತದೆ.

ಡಿಸೈನರ್ ಎನಿಸಿಕೊಂಡವರು ಉತ್ತಮವಾದ ಸಂವಹನ ಸಂಪರ್ಕವನ್ನು ಹೊಂದಿರಬೇಕು. ಡಿಸೈನ್ ಬಗ್ಗೆ ಇರುವ ಜ್ಞಾನ, ತಂತ್ರಜ್ಞಾನದ ಕುರಿತು ಸಂಪೂರ್ಣವಾದ ಮಾಹಿತಿ, ಡಿಸೈನ್ ಕ್ಷೇತ್ರದಲ್ಲಾಗುವ ಹೊಸ ಹೊಸ ಬೆಳವಣಿಗೆಗಳ ಅರಿವು ಹಾಗೂ ಅದನ್ನು ತನ್ನ ವೃತ್ತಿ ಬದುಕಿನಲ್ಲಿ ಅಳವಡಿಸಿಕೊಳ್ಳುವ ಸಾಮರ್ಥ್ಯವನ್ನು ಪಡೆದುಕೊಂಡಿರಬೇಕು.

ಎಚ್‌ಟಿಎಂಎಲ್, ಡಿಎಚ್‌ಟಿಎಂಎಲ್, ಸಿಎಸ್‌ಎಸ್, ಜಾವಾ ಸ್ಕ್ರಿಪ್ಟ್, ಡ್ರೀಮ್‌ವೇರ್, ಫ್ಲಾಶ್, ಫ್ಲಾಶ್ ಆಕ್ಷ್ಯನ್ ಸ್ಕ್ರಿಪ್ಟ್ ಬಗ್ಗೆ ಪಕ್ಕಾ ಜ್ಞಾನ ಹೊಂದಿರಬೇಕು. ಮಲ್ಟಿಪಲ್ ವೆಬ್ ಬ್ರೌಸರ್‌ಗಳಾದ ಒಪೆರಾ, ಇಂಟರ್‌ನೆಟ್ ಎಕ್ಸ್‌ಪ್ಲೋರರ್, ಮೋಝಿಲಾ ಫೈರ್‌ಫೋಕ್ಸ್‌ಗಳನ್ನು ಸರಿಯಾಗಿ ತಿಳಿದುಕೊಂಡಿರಬೇಕು.

ಫ್ಲಾಶ್ ಡಿಸೈನರ್ ಮತ್ತು ಗೇಮ್ ಸ್ಪೆಶಾಲಿಸ್ಟ್

ಈತನ ಬಹುಮುಖ್ಯವಾದ ಕರ್ತವ್ಯ ಎಂದರೆ ವೆಬ್‌ಗೆ ಭೇಟಿ ನೀಡುವ ಗ್ರಾಹಕರನ್ನು ಸೆಳೆಯುವಂತಹ ಆ್ಯನಿಮೇಷನ್‌ಗಳನ್ನು ಸೃಷ್ಟಿ ಮಾಡಿಕೊಡುವುದು. ಅದಕ್ಕಾಗಿಯೇ ಇರುವ 2ಡಿ, 3ಡಿ ಡಿಸೈನ್‌ಗಳನ್ನು ಬಳಸಿಕೊಂಡು ಮೈಕ್ರೋಮಿಡಿಯಾ ಫ್ಲಾಶ್ ಮತ್ತು ಆ್ಯಕ್ಷನ್ ಸ್ಕ್ರಿಪ್ಟ್‌ಗಳನ್ನು ತಯಾರಿಸುವುದು.

ಫ್ಲಾಶ್ ಆನಿಮೇಟರ್‌ಗಳು ಡೆಮೊಗಳನ್ನು ತಯಾರಿಸುವುದು. ಜಾಹೀರಾತು ಮತ್ತು ಅನಿಮೇಷನ್‌ಗಳಲ್ಲಿ ತಮ್ಮ ಚಾಕಚಕ್ಯತೆಯನ್ನು ಪ್ರದರ್ಶನ ಮಾಡೋದು. ಸೃಜನಶೀಲತೆ ಹಾಗೂ ವ್ಯಾಪಾರಿ ಚಿಂತನೆಗಳನ್ನು ಸಂಬಂಧಪಟ್ಟ ಗ್ರಾಹಕರನ್ನು ತಲುಪುವಲ್ಲಿ ಇವರ ಕೆಲಸ ಮಹತ್ವದಾಗಿರುತ್ತದೆ. ಈ ವೃತ್ತಿಗೆ ಹೆಚ್ಚಾಗಿ ಹೊಸದಾದ ಆನಿಮೇಟರ್‌ಗಳನ್ನು ನೇಮಕ ಮಾಡಿದರೆ ಉತ್ತಮ. ಕಾರಣ ಅವರಲ್ಲಿರುವ ಹೊಸ ಚಿಂತನೆಗಳು, ಪ್ರಯೋಗಗಳು ವೃತ್ತಿಯನ್ನು ಇನ್ನಷ್ಟು ಕಲರ್‌ಫುಲ್ ಮಾಡುವ ಸಾಧ್ಯತೆ ಇದೆ.

ಇದರ ಜತೆಗೆ ವಿಶ್ಯುವಲ್, ಇಲ್ಲಸ್ಟ್ರೇಟೆಡ್ ಸ್ಟೋರಿ ಬೋರ್ಡ್‌ಗಳನ್ನು ತಯಾರಿಸುವುದು. ಕೋರಲ್ ಡ್ರಾ, ಸೌಂಡ್‌ಫೋರೆಜ್, ಫ್ಲಾಶ್ ಆ್ಯಕ್ಷನ್ ಸ್ಕ್ರಿಪ್ಟಿಂಗ್(ಎಸ್2.0 ಮತ್ತು ಎಸ್ 3.0)ಗಳ ಪಕ್ಕಾ ಅರಿವು. ವಿಡಿಯೋ ಹಾಗೂ ಆಡಿಯೋ ಸಂಕಲನ, ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಸಾಮರ್ಥ್ಯ ಹೊಂದಿರುವುದು ಅತಿ ಅವಶ್ಯವಾಗಿರುತ್ತದೆ.

ವೆಬ್ ಮಾಸ್ಟರ್ ಮತ್ತು ಪೊರ್ಟಲ್ ಮ್ಯಾನೇಜರ್

ವೆಬ್ ಡಿಸೈನ್‌ಈತನನ್ನು ವೆಬ್ ನಿರ್ಮಾತ, ವೆಬ್ ಡೆವಲಪರ್, ವೆಬ್‌ಸೈಟ್ ಬರಹಗಾರ ಅಥವಾ ವೆಬ್‌ಸೈಟ್ ನಿರ್ವಹಣಾಧಿಕಾರಿ ಮೊದಲಾದ ಹೆಸರಿನಿಂದ ಕರೆಯಲಾಗುತ್ತಿದೆ. ಈತನ ಬಹುಮುಖ್ಯವಾದ ಕಾರ‌್ಯ ಯೋಜನೆ ಎಂದರೆ ಡಿಸೈನಿಂಗ್, ಮಾರ್ಕೆಟಿಂಗ್, ವೆಬ್‌ಸೈಟ್ ಮೈಂಟೆನೆನ್ಸ್. ಈತನನ್ನು ಇಡೀ ವೆಬ್ ಲೋಕದ ಕಾರ‌್ಯ ನಿರ್ವಹಣೆ ಮಾಡುವ ಟೀಮ್ ಲೀಡರ್ ಎಂದೇ ಪರಿಗಣಿಸಬಹುದು.

ಈತನನ್ನು ಇಂಟರ್‌ನೆಟ್ ಬ್ರಹ್ಮ, ವೆಬ್ ಎಂಜಿನಿಯರ್, ವೆಬ್ ಆಡ್ಮಿನಿಸ್ಟ್ರೇಟರ್ ಎಂದೂ ಪರಿಗಣಿಸಬಹುದು. ಇದೇ ರೀತಿಯ ಕಾರ‌್ಯನಿರ್ವಹಣೆಯನ್ನು ಪೊರ್ಟಲ್ ಮ್ಯಾನೇಜರ್ ಕೂಡ ಮಾಡುತ್ತಾರೆ. ಆದರೆ ಅವರ ಕಾರ‌್ಯ ಯೋಜನೆಯಲ್ಲಿ ಸ್ವಲ್ಪ ಭಿನ್ನತೆ ಇದೆ. ವೆಬ್‌ಸೈಟ್‌ನಲ್ಲಿ ಮಾಹಿತಿಗಳನ್ನು ವಿವಿಧ ಮೂಲಗಳಿಂದ ಪಡೆದುಕೊಂಡು ಅದನ್ನು ಅಪ್‌ಲೋಡ್ ಮಾಡುವ ಕಾರ‌್ಯ ಈತನಿಂದ ಆಗಬೇಕಾಗಿದೆ.

ವೆಬ್‌ಪೊರ್ಟಲ್ ಮುಖ್ಯವಾಗಿ ಈ ಎಲ್ಲ ಸೇವೆಗಳನ್ನು ನೀಡುತ್ತದೆ. ಮ್ಯಾಟ್ರಿಮೋನಿಯಲ್ ಸರ್ವಿಸ್, ಇ-ಮೇಲ್, ನ್ಯೂಸ್, ಸ್ಪೋರ್ಟ್ಸ್, ಶಾಪಿಂಗ್, ಟ್ರಾವೆಲ್ ಆ್ಯಂಡ್ ಟೂರ್ಸ್‌, ಸ್ಟಾಕ್ ಮಾರ್ಕೆಟ್, ಕೆರಿಯರ್ ಕೇರ್ ಮಾಹಿತಿ. ಇಂತಹ ಸೇವೆಯನ್ನು ನೀಡುವ ಬಹುಮುಖ್ಯವಾದ ಪೊರ್ಟಲ್‌ಗಳೆಂದರೆ ರೆಡಿಫ್.ಕಾಮ್, ಯಾಹೂ.ಕಾಮ್, ಗೂಗಲ್.ಕಾಮ್, ಇಂಡಿಯಟೈಮ್ಸ್.ಕಾಮ್, ಡೆಕ್ಕನ್ ಟೈಮ್.ಕಾಮ್, ಇಂಡಿಯಾ.ಜಿ ಒವಿ.ಇನ್ ಇತ್ಯಾದಿಗಳು.

ದೇಶಕ್ಕೆ ಎಂಟ್ರಿ ನೀಡುತ್ತಿರುವ ವಿವಿಧ ಬಹುರಾಷ್ಟ್ರೀಯ ಕಂಪನಿಗಳಿಂದ ಈ ಕ್ಷೇತ್ರ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ ಎನ್ನೋದು ಈ ಕ್ಷೇತ್ರದ ತಜ್ಞರ ಅಭಿಪ್ರಾಯ.

ಸ್ಯಾಲರಿ ಹೇಗೆ ಅಂತೀರಾ?

ವೆಬ್‌ಸೈಟ್ ಡಿಸೈನ್ ಮಾಡುವ ವಿಧಾನದ ಮೇಲೆ ಒಬ್ಬ ಡಿಸೈನರ್ ಸ್ಯಾಲರಿ ಪಡೆಯುತ್ತಾನೆ. ಒಂದು ವೆಬ್‌ಸೈಟ್ ಡಿಸೈನ್‌ಗೆ 10 ರಿಂದ ಹಿಡಿದು ಲಕ್ಷ ಗಟ್ಟಲೆ ಸಂಪಾದಿಸುವ ಅವಕಾಶ ಇರುತ್ತದೆ. ಸ್ಟ್ಯಾಟಿಕ್ ಮತ್ತು ಡೈನಮಿಕ್ ಎನ್ನುವ ಎರಡು ವಿಧಾನಗಳ ಆಧಾರದಲ್ಲಿ ಒಬ್ಬ ಡಿಸೈನರ್ ಪಡೆಯುವ ಸಂಬಳವನ್ನು ಲೆಕ್ಕಹಾಕಬಹುದು. ಈ ಕ್ಷೇತ್ರದಲ್ಲಿ ನಿರಂತರ ಪೈಪೋಟಿ ಇರುವುದರಿಂದ ನಿರ್ದಿಷ್ಟವಾಗಿ ಇಷ್ಟೇ ಸಂಬಳ ಪಡೆಯುತ್ತಾನೆ ಎನ್ನುವ ಹಾಗಿಲ್ಲ. ಆದರೆ ತನ್ನ ಸುತ್ತಮುತ್ತ ಸ್ಥಾಪನೆ ಮಾಡಿರುವ ಗ್ರಾಹಕರ ನೆಟ್‌ವರ್ಕ್ ಹಾಗೂ ಡಿಸೈನ್ ಮಾಡುವ ರೀತಿಯಿಂದ ಸಂಬಳವನ್ನು ಜೇಬಿಗೆ ತುಂಬಿಸಿಕೊಳ್ಳಬಹುದು.

https://vijaykarnataka.indiatimes.com/lavalavk/jobs/-/articleshow/38876356.cms

ಇವುಗಳೂ ನಿಮಗಿಷ್ಟವಾಗಬಹುದು

ಗೌತಮ ಬುದ್ಧನ ನುಡಿಮುತ್ತುಗಳು

ಗೌತಮ ಬುದ್ಧನ ಅರ್ಥಪೂರ್ಣ ನುಡಿಮುತ್ತುಗಳು.

Leave a Reply

Your email address will not be published. Required fields are marked *