Veeragase

ವೀರಗಾಸೆ’ ಕುಣಿತದ ಹಿನ್ನಲೆ ಬಗ್ಗೆ ಪ್ರಚಲಿತವಿರುವ ಒಂದು ಪೌರಾಣಿಕ ಪ್ರಸಂಗ

ಪೌರಾಣಿಕ ಕಥೆಯನ್ನು ಆಧಾರಿಸಿದ ಈ ವೀರಗಾಸೆ ಕುಣಿತವು ದಕ್ಷಬ್ರಹ್ಮ ಮತ್ತು ಈಶ್ವರನಿಗೆ ಸೇರಿದ ಒಂದು ಸುಂದರ ಕತನವಾಗಿದೆ. ಒಮ್ಮೆ ದಕ್ಷಬ್ರಹ್ಮನೂ ಒಂದು ಯಜ್ಞವನ್ನು ತನ್ನ ಮನೆಯಲ್ಲಿ ಇಟ್ಟುಕೊಂಡಾಗ ತನ್ನ ಮಗಳನ್ನು ಮತ್ತು ಅಳಿಯನನ್ನು ಕರೆಯುವುದಿಲ್ಲದಿರುವಾಗ ನಡೆಯುವ ಒಂದು ಘಟನಾವಾಳಿಯ ಚಿತ್ರಣ.

ದಕ್ಷಬ್ರಹ್ಮನಿಗೂ ಅವನ ಅಳಿಯನಾದ ಈಶ್ವರನಿಗೂ ವೈರತ್ವ ಬಂದು ದಕ್ಷಬ್ರಹ್ಮನು ತಾನು ಮಾಡುವ ಯಾಗಕ್ಕೆ ಈಶ್ವರನನ್ನು ಬಿಟ್ಟು ಉಳಿದ ದೇವಾನುದೇವತೆಗಳನ್ನು ಆಹ್ವಾನಿಸುತ್ತಾನೆ. ಯಜ್ಞದಲ್ಲಿ ಈಶ್ವರನಿಗೆ ನ್ಯಾಯವಾಗಿ ಸಲ್ಲಬೇಕಾದ ಆವಿರ್ಭಾಗವನ್ನು ಕೊಡದೆ ತಿರಸ್ಕರಿಸುತ್ತಾನೆ. ಈಶ್ವರನು ಬೇಡವೆಂದರೂ ತಂದೆ ಮಾಡುವ ಯಾಗದಲ್ಲಿ ಭಾಗವಹಿಸಲು ಪಾರ್ವತಿ ಬರುತ್ತಾಳೆ.

ದಕ್ಷಬ್ರಹ್ಮ ಅಳಿಯನ ಮೇಲಿನ ಕೋಪದಿಂದ, ಮಗಳೆಂಬ ಮಮತೆಯನ್ನೂ ತೊರೆದು, ಕಂಡೂ ಕಾಣದಂತೆ ತಿರಸ್ಕಾರವಾಗಿ ಕಾಣುತ್ತಾನೆ. ಅವಳೆದುರಿಗೆ ಈಶ್ವರನನ್ನು ನಿಂದಿಸುತ್ತಾನೆ. ಇದನ್ನು ಕೇಳಿದ ಪಾರ್ವತಿ ಸಹಿಸಲಾಗದೆ, ಪತಿನಿಂದೆಯನ್ನು ಹೊತ್ತು ಕೈಲಾಸಕ್ಕೆ ಹಿಂದಿರುಗಲಾಗದೆ ಅಗ್ನಿಕೊಂಡ ಹಾಳಾಗಿ ಹೋಗಲಿ, ನಿನ್ನ ಹೆಣ್ಣು ಮಕ್ಕಳು ಮುಂಡೆಯರಾಗಲಿ, ಆಗಸ ತೂಕದ ಚಿನ್ನವಿಲ್ಲದಂತಾಗಲಿ, ಭೂಮಿ ತೂಕದ ಬೆಳ್ಳಿಯಿಲ್ಲದಂತಾಗಲಿ ಎಂದು ತಂದೆಗೆ ಶಾಪವನ್ನು ಕೊಟ್ಟು ಅಗ್ನಿಕುಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಆಗ ಇದೆಲ್ಲವನ್ನೂ ಏಕದೃಷ್ಟಿಯಿಂದ ಗಮನಿಸಿದ ಈಶ್ವರನು ಉಗ್ರವಾಗಿ ತಾಂಡವ ನೃತ್ಯವನ್ನು ಮಾಡುವಾಗ ಹಣೆಯ ಮೇಲೆ ಬಂದ ಬೆವರಿನ ಹನಿಗಳನ್ನು ಸೆಳೆದು ತೆಗೆದು ನೆಲಕ್ಕೆ ಅಪ್ಪಳಿಸುತ್ತಾನೆ.

ನೂರೊಂದು ಆಯುಧಗಳನ್ನು ಧರಿಸಿದಂತಹ ವೀರಭದ್ರನ ಜನನವಾಗುತ್ತದೆ. ಆಗ ಸಪ್ತ ಸಮುದ್ರಗಳು ಬತ್ತಿಹೋದವು. ಹುಟ್ಟಿದ ಮರುಕ್ಷಣದಲ್ಲಿಯೇ ವೀರಭದ್ರನು ಲೋಕವನ್ನೇ ಬಿಲ್ಲು ಮಾಡಿಕೊಂಡು, ಭೂಮಿಯನ್ನೇ ಬಾಣವನ್ನಾಗಿ ಮಾಡಿಕೊಂಡು, ತಂದೆಯೇ ನಮಗೆ ವೈರಿ ಯಾರು? ಎಂದು ಕೇಳುತ್ತಾನೆ. ಅದಕ್ಕೆ ಶಿವನು ದಕ್ಷಬ್ರಹ್ಮನೆಂದು ಹೇಳಿ ಅವನದು ಮುನ್ನೂರ ಅರವತ್ತು ಗಾವುದ ಪಟ್ಟಣ, ಅದಕ್ಕೆ ಮುನ್ನೂರ ಅರವತ್ತು ಬಾಗಿಲು, ಒಂದೊಂದು ಬಾಗಿಲಿಗೂ ಒಬ್ಬೊಬ್ಬ ರಾಕ್ಷಸರು ಕಾವಲಿರುತ್ತಾರೆ. ಆ ರಾಕ್ಷಸರ ಒಂದೊಂದು ತೊಟ್ಟು ರಕ್ತ ಬಿದ್ದರೆ ಒಂದು ಕೋಟಿ ರಾಕ್ಷಸರು ಜನಿಸುತ್ತಾರೆ ಎಂದು ಹೇಳಿ ಅವನ ಹಿಂದೆಯೇ ಜನಿಸಿದ ಚೌಡೇಶ್ವರಿಯನ್ನು ಸಹಾಯಕ್ಕಾಗಿ ಕಳುಹಿಸಿ ಕೊಡುತ್ತಾನೆ.

ವೀರಗಾಸೆ ಕುಣಿತಕ್ಕೆ ಸಜ್ಜಾದ ಕಲಾವಿದ
ವೀರಗಾಸೆ ಕುಣಿತಕ್ಕೆ ಸಜ್ಜಾದ ಕಲಾವಿದ

ವೀರಭದ್ರನು ರಾಕ್ಷಸರನ್ನು ಸಂಹರಿಸಿದ ನಂತರ ದಕ್ಷಬ್ರಹ್ಮನ ಯಾಗ ಶಾಲೆಗೆ ಹೋಗಿ ಅವನ ತಲೆಯನ್ನು ಚಂಡಾಡುತ್ತಾನೆ. ತಲೆ ಅಗ್ನಿಕುಂಡಕ್ಕೆ ಬಿದ್ದು ಸುಟ್ಟು ಕರಿಕಾಗುತ್ತದೆ. ಇದನ್ನು ಕಂಡ ದಕ್ಷಬ್ರಹ್ಮನ ಮಡದಿಯು ವೀರಭದ್ರನಿಗೆ ಆರತಿ ಬೆಳಗಿ ಪತಿಭಿಕ್ಷೆಯನ್ನು ಬೇಡುತ್ತಾಳೆ. ಶಿವನು ಯುದ್ಧಕ್ಕೆ ಕಳುಹಿಸುವಾಗ ಶರಣು ಹೊಕ್ಕವರನ್ನು ಕಾಯಿ ಎಂದು ಹೇಳಿದ್ದನ್ನು ನೆನದುಕೊಂಡು, ಅವನಿಗೆ ಪ್ರಾಣದಾನ ಮಾಡಲು ರುಂಡವಿಲ್ಲದಿರುವುದನ್ನು ಗಮನಿಸಿ, ಉತ್ತರ ದಿಕ್ಕಿಗೆ ಮುಖ ಮಾಡಿ ಮಲಗಿರುವ ಯಾವುದಾದರೂ ಪ್ರಾಣಿಯ ತಲೆಯನ್ನು ಕತ್ತರಿಸಿ ತನ್ನಿ ಎಂದು ಹೇಳಿ ಕಳುಹಿಸುತ್ತಾನೆ.

ದಾರಿಯಲ್ಲಿ ಉತ್ತರ ದಿಕ್ಕಿಗೆ ತಲೆ ಹಾಕಿ ಒಂದು ಟಗರು ಮಲಗಿರುತ್ತದೆ. ಅದರ ರುಂಡವನ್ನೇ ಕತ್ತರಿಸಿ ತರುತ್ತಾರೆ. ಅದನ್ನೇ ದಕ್ಷನ ಮುಂಡಕ್ಕೆ ಜೋಡಿಸಿ ಪ್ರಾಣದಾನ ಮಾಡುತ್ತಾನೆ. ಈ ಸಂದರ್ಭದಲ್ಲಿ ವೀರಭದ್ರನು ತೋರಿದ ಪ್ರತಾಪದ ಪ್ರತೀಕವೇ ವೀರಗಾಸೆ ಹಿಂದಿನ ಕಥೆಯಾಗಿದೆ, ಅಂದಿನಿಂದಲೇ ಈ ಕಲೆ ಬೆಳೆದು ಬಂದಿತೆಂದೂ ಕಲಾವಿದರು ಹೇಳುತ್ತಾರೆ.

ಹಬ್ಬ ಹರಿದಿನಗಳಲ್ಲಿ ಜಾತ್ರೆ ಉತ್ಸವಗಳಲ್ಲಿ, ಕಾರ್ತೀಕ ಶ್ರಾವಣ ಸೋಮವಾರಗಳಲ್ಲಿ ಕಲಾವಿದರು (ಇವರಿಗೆ ಲಿಂಗದ ವೀರರು ಎಂದು ಹೇಳುತ್ತಾರೆ) ತಪ್ಪದೆ ಕಲೆಯನ್ನು ಪ್ರದರ್ಶಿಸುತ್ತಾರೆ. ಲಿಂಗದ ವೀರರನ್ನು ಊರಿಗೆ ಕರೆಸಿ ವೀರಭದ್ರನ ಪ್ರತಾಪದ ಬಗ್ಗೆ ಖಡ್ಗ ಹೇಳಿಸಿ ಕಥೆ ಕೇಳುವುದರಿಂದ ಗ್ರಾಮಕ್ಕೆ ಒಳ್ಳೆಯದಾಗುತ್ತದೆಂದೂ ದನಕರುಗಳಿಗೆ ರೋಗರುಜಿನಗಳಿದ್ದರೆ ಅವು ನಿವಾರಣೆಯಾಗುತ್ತವೆಂದೂ ನಂಬಿಕೆಯಿದೆ.

ಕಲಾವಿದರಲ್ಲಿಯೂ ಈ ಕಲೆಯನ್ನು ಬಿಟ್ಟರೆ ತಮಗೆ ದರಿದ್ರ ಬರುತ್ತದೆ ಎಂಬ ಭಾವನೆ ಇದೆ. ಕಲಾವಿದರು ಎಷ್ಟೇ ಶ್ರೀಮಂತರಾಗಿದ್ದರೂ ಶಿವರಾತ್ರಿ, ಯುಗಾದಿ ಹಬ್ಬದಂದು ಕಾವಿ ಧರಿಸಿ ಮೂರು ಮನೆಗಾದರೂ ಕ್ವಾರಣ್ಯಕ್ಕೆ ಹೋಗಬೇಕು. ಇವರನ್ನು ವೀರಭದ್ರನ ಅವತಾರವೆಂದೇ ಭಾವಿಸಿರುವ ಗ್ರಾಮೀಣರು ಎಂದೂ ಬರಿಗೈಯಲ್ಲಿ ಕಳುಹಿಸದೆ ಭಿಕ್ಷೆ ನೀಡಿ ನಮಸ್ಕರಿಸುತ್ತಾರೆ.
ಕಲಾವಿದರ ವೇಷಭೂಷಣ ವೈಶಿಷ್ಟ್ಯಪೂರ್ಣ. ತಲೆಗೆ ಬಿಳಿಯ ಚೌಲಿಯನ್ನು ಹಾಕಿಕೊಂಡಿರುತ್ತಾರೆ. ಕಾವಿ ಅಂಗಿ, ಕಾವಿ ಕಾಸೆಪಂಚೆ, ಕಿವಿಗೆ ರುದ್ರಾಕ್ಷಿ, ಹಣೆ ಹುಬ್ಬು, ಕಿವಿಗಳಿಗೆ ವಿಭೂತಿ, ಕೊರಳು ತೋಳು ಮುಂಗೈಗಳಲ್ಲಿ ರುದ್ರಾಕ್ಷಿ ಮಾಲೆ, ನಾಗಾಭರಣ, ಎದೆಯ ಹತ್ತಿರ ವೀರಭದ್ರಸ್ವಾಮಿಯ ಹಲಗೆ- ಇಷ್ಟನ್ನು ಧರಿಸಿರುತ್ತಾರೆ. ಸೊಂಟದಲ್ಲಿ ಚೌಲಿ ಹಾಕಿದ ಹಿತ್ತಾಳೆಯ ನರಸಿಂಹ ಮತ್ತು ದಕ್ಷಬ್ರಹ್ಮನ ಶಿರಗಳನ್ನು ಕಟ್ಟಿಕೊಂಡಿರುತ್ತಾರೆ.

ಮೊಣಕಾಲಿಗೆ ಜಂಗು ಧರಿಸಿರುತ್ತಾರೆ. ಬಲಗೈಯಲ್ಲಿ ಕತ್ತಿ, ಎಡಗೈಯಲ್ಲಿ ವೀರಭದ್ರನ ಹಲಗೆಯನ್ನು ಹಿಡಿದಿರುತ್ತಾರೆ. ದೇವರ ಉತ್ಸವದ ಮುಂದೆ ಕರಡಿ ಮತ್ತು ಚಮಾಳ ವಾದ್ಯದ ಗತ್ತಿಗೆ ಲಯಬದ್ಧವಾಗಿ ಕುಣಿಯುತ್ತಾರೆ. ಕುಣಿತದ ಮಧ್ಯೆ ವೀರಭದ್ರನ ಒಡಪುಗಳನ್ನು ಹೇಳುತ್ತಾರೆ. ಜಾತ್ರೆ ಉತ್ಸವಗಳಲ್ಲಿ ಇವರು ಕೊಂಡ ಹಾಯ್ದನಂತರ, ಇವರ ಹಿಂದೆ ಕಳಸದವರು ಹಾಗೂ ಹರಕೆ ಹೊತ್ತ ಭಕ್ತರು ಹಾಯುತ್ತಾರೆ. ಶಾಸ್ತ್ರ ಪವಾಡ ನಡೆಸುವುದು ವೀರಗಾಸೆಯವರ ಮತ್ತೊಂದು ವಿಶೇಷ.

ಆಧಾರ: bangalorewaves

Review Overview

User Rating: 4.63 ( 6 votes)

ಇವುಗಳೂ ನಿಮಗಿಷ್ಟವಾಗಬಹುದು

ಅಲೆಮಾರಿಗಳ ‘ಬುಡ್ಗನಾದ’

ಅಲೆಮಾರಿಗಳ ‘ಬುಡ್ಗನಾದ’: ಜಾನಪದ ಕಲೆಯನ್ನು ರಕ್ತಗತವಾಗಿ ಅಳವಡಿಸಿಕೊಂಡಿರುವ ಅಲೆಮಾರಿ, ಬುಡಕಟ್ಟುಗಳು ದೇಶದಲ್ಲಿ 612ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದು 15 ಕೋಟಿಗೂ ಮೀರಿದ …

One comment

  1. superrr i was needed this answer only and thank you.

Leave a Reply

Your email address will not be published. Required fields are marked *