ಶ್ರೀಕನಕದಾಸರ ಹರಿಭಕ್ತಿಸಾರ
ವಿಷ್ಣುದಾಸರ ಸಾರಾಮೃತವ್ಯಾಖ್ಯಾನದೊಂದಿಗೆ
ಪದ್ಯ – ೨
ದೇವದೇವ ಜಗದ್ಭರಿತ ವಸು-
ದೇವಸುತ ಜಗದೇಕನಾಥ ರ-
ಮಾವಿನೋದಿತ ಸಜ್ಜನಾನತ ನಿಖಿಲಗುಣಭರಿತ |
ಭಾವಜಾರಿಪ್ರಿಯ ನಿರಾಮಯ
ರಾವಣಾಂತಕ ರಘುಕುಲಾನ್ವಯ
ದೇವ ಅಸುರವಿರೋಧಿ ರಕ್ಷಿಸು ನಮ್ಮನನವರತ ॥ ೨ ॥
(ಹಿಂದಿನ ಲೇಖನದಿಂದ ಮುಂದುವರೆದ ಭಾಗ)
ಭಗವಂತನ ಯಾವುದೇ ಅವತಾರರೂಪದಲ್ಲಿ ನಾವು ಮೊಟ್ಟಮೊದಲಿಗೆ ಮಾಡಬೇಕಾದ ಚಿಂತನೆ ಅದು ಮೂಲರೂಪದಿಂದ ಮತ್ತು ಉಳಿದ ಯಾವುದೇ ಅವತಾರರೂಪದಿಂದ ಪೂರ್ಣವಾಗಿ ಅಭಿನ್ನ ಎಂದು. ಮೂಲರೂಪ ಹಿರಿದಾದದ್ದು ಅವತಾರರೂಪಗಳು ಕಡಿಮೆಗುಣಗಳದ್ದು, ಅಥವಾ ಶ್ರೀಕೃಷ್ಣ ಪರಮಪರಿಪೂರ್ಣನಾದವನು, ಉಳಿದ ರೂಪವೆಲ್ಲವೂ ಆ ರೂಪಕ್ಕಿಂತ ಕಡಿಮೆಯಾದದ್ದು ಎಂಬ ಚಿಂತನೆಯನ್ನು ಮಾಡಿದಲ್ಲಿ ಎಂದಿಗೂ ಉತ್ಥಾನವಿಲ್ಲದ ದುಃಖದ ಮಡುವಿನಲ್ಲಿ ಬೀಳಬೇಕಾಗುತ್ತದೆ ಎಂದು ಶ್ರೀಮದಾಚಾರ್ಯರು ಪ್ರಮಾಣಪುರಸ್ಸರವಾಗಿ ಪ್ರತಿಪಾದಿಸಿ ಎಚ್ಚರಿಸುತ್ತಾರೆ. ಹೀಗಾಗಿ ಸಮಸ್ತದೇವರ ದೇವನಾದ, ಸಕಲ ಚರಾಚರಪ್ರಪಂಚದಲ್ಲಿ ವ್ಯಾಪಿಸಿದ ಪರಿಪೂರ್ಣನಾದ ಶ್ರೀಹರಿಯೇ ವಸುದೇವನ ಮಗನಾಗಿ ಅವತರಿಸಿ ಬಂದಿದ್ದಾನೆ. ಅವನ ಮೂಲರೂಪಕ್ಕೂ ಅವತಾರರೂಪಕ್ಕೂ ಎಳ್ಳಿನಷ್ಟು ವ್ಯತ್ಯಾಸವೂ ಇಲ್ಲ ಎಂಬ ಈ ಮಹಾಪ್ರಮೇಯದ ಅನುಸಂಧಾನವನ್ನು ದಾಸರಾಯರು ‘‘ಜಗದೇಕನಾಥ’’ ಎಂಬ ಪದದಿಂದ ಮಾಡುತ್ತಾರೆ. ವಸುದೇವನ ಮಗನಾಗಿ ಅವತರಿಸಿದ ಶ್ರೀಕೃಷ್ಣನೊಬ್ಬನೇ ಈ ಜಗತ್ತಿಗೆ ಒಡೆಯ ಎಂದು ಅದರರ್ಥ.
ಅರೆ, ವೇದ ಭಾರತ ಪುರಾಣಗಳೆಲ್ಲವೂ ಲಕ್ಷ್ಮೀಪತಿಯಾದ ಶ್ರೀಮನ್ನಾರಾಯಣನೇ ಸಕಲ ಜಗತ್ತಿಗೂ ನಾಥ ಎಂದು ತಿಳಿಸುತ್ತವೆ. ಶ್ರೀಕೃಷ್ಣ ಹೇಗೆ ಒಡೆಯನಾಗಲಿಕ್ಕೆ ಸಾಧ್ಯ ? ನಿಜ. ಶ್ರೀಹರಿಯೇ ಜಗನ್ನಾಥ. ಇದರಲ್ಲಿ ಸಂಶಯವಿಲ್ಲ. ಆದರೆ ಅದೇ ಶ್ರೀಹರಿಯೇ ಶ್ರೀಕೃಷ್ಣನಾಗಿ ಅವತರಿಸಿದವರನು. ಮೂಲರೂಪದ ಶ್ರೀಮನ್ನಾರಾಯಣನಿಗೆ ಎಷ್ಟು ಗುಣ ಮಾಹಾತ್ಮ್ಯಗಳಿವಿಯೋ ಅಷ್ಟೇ ಗುಣ ಮಾಹಾತ್ಮ್ಯಗಳು ಮತ್ಸ್ಯ, ಕೂರ್ಮ, ನೃಸಿಂಹ, ವಾಮನ, ಬುದ್ಧ, ಕಲ್ಕಿ ಮುಂತಾದ ಅನಂತ ರೂಪಗಳಲ್ಲಿಯೂ ಇವೆ. ಶ್ರೀಕೃಷ್ಣ ಶ್ರೀರಾಮ ರೂಪಗಳಲ್ಲಿಯೂ ಇವೆ. ಈಷತ್ ವ್ಯತ್ಯಾಸವೂ ಇಲ್ಲ. ಹೀಗಾಗಿ ಶ್ರೀಹರಿ ಜಗದೇಕನಾಥನಾದ್ದರಿಂದ ಶ್ರೀಕೃಷ್ಣನೂ ಜಗದೇಕನಾಥ. ಶ್ರೀರಾಮನೂ ಜಗದೇಕನಾಥ. ಸಂಶಯವಿಲ್ಲ.
ಇಲ್ಲ, ಹೀಗೆ ಒಪ್ಪಲು ಸಾಧ್ಯವಿಲ್ಲ. ದೇವತೆಗಳು ಭೂಮಿಯಲ್ಲಿ ಅವತರಿಸಿಬಂದಾಗ ಅವರಿಗೆ ಶಕ್ತಿ ಜ್ಞಾನ ಆನಂದ ಸಾಮರ್ಥ್ಯ ಮುಂತಾದ ಗುಣಗಳಲ್ಲ ಹ್ರಾಸವುಂಟಾಗುತ್ತದೆ. ಹೀಗಾಗಿ ದೇವತೆಗಳ ಮೂಲ ಅವತಾರ ರೂಪಗಳಲ್ಲಿ ವ್ಯತ್ಯಾಸ ಸ್ಪಷ್ಟವಾಗಿ ತೋರುತ್ತದೆ. ಮತ್ತು, ಮನುಷ್ಯರ ಮಧ್ಯದಲ್ಲಿ ದೇವತೆಗಳು ಅವತರಿಸಿ ಬರುವದರಿಂದ ಆ ಮನುಷ್ಯರಿಗೆ ಯೋಗ್ಯವಾದಷ್ಟು ಗುಣಗಳನ್ನು ಪ್ರಕಟ ಮಾಡಬೇಕಾದ ಅನಿವಾರ್ಯತೆ ಇದೆ. ಸೂರ್ಯನ ಪ್ರಕಾಶಕ್ಕಿಂತಲೂ ಅತ್ಯಕ ಪ್ರಕಾಶವುಳ್ಳ ಇಂದ್ರ ಪರಶಿವರು ಭೂಮಿಯಲ್ಲಿ ಅರ್ಜುನ ಅಶ್ವತ್ಥಾಮರಾಗಿ ಬಂದಾಗ ಆ ಪ್ರಖರ ಪ್ರಕಾಶವನ್ನು ತೋರಿಬಿಟ್ಟರೆ ಭೂಮಿಯೇ ಬೆಂದು ಹೋಗುತ್ತದೆ. ಹೀಗಾಗಿ ಅನಂತಗುಣಮಾಹಾತ್ಮ್ಯದ ಶ್ರೀಹರಿಯೂ ತನ್ನ ಗುಣಗಳನ್ನು ಸಂಕೋಚಗೊಳಿಸಿಯೇ ಭೂಮಿಯ ಮೇಲೆ ಅವತರಿಸಬೇಕಲ್ಲವೇ ? ಎಂಬ ಆಕ್ಷೇಪಕ್ಕೆ ಉತ್ತರವಾಗಿ ಕನಕದಾಸರು
‘‘ದೇವಾನಾಂ ಹಿ ನೃಜಾತಾನಾಮಲ್ಪಂ ವ್ಯಕ್ತಂ ಭವೇದ್ ಬಲಮ್ |
ಇಚ್ಛಯಾ ವ್ಯಕ್ತತಾಂ ಯಾತಿ ವಾಯೋರನ್ಯೇಷು ತಚ್ಚ ನ |
ನಿತ್ಯಂ ವ್ಯಕ್ತಾ ಗುಣಾ ವಿಷ್ಣೋರಿತಿ ಶಾಸ್ತ್ರಸ್ಯ ನಿರ್ಣಯಃ ’’
ಎಂಬ ಶ್ರೀಮದಾಚಾರ್ಯರ ಮಹಾಭಾರತತಾತ್ಪರ್ಯನಿರ್ಣಯದ ಮಾತಿನ ಅನುಸಾರವಾಗಿ ‘‘ಶ್ರೀಹರಿಯು ಸಕಲರೂಪಗಳಲ್ಲಿಯೂ ಸದಾ ಅನಂತಗುಣಗಳನ್ನು ಪ್ರಕಟಿಸುವ ಮಹಾ ಮಾಹಾತ್ಮ್ಯವುಳ್ಳವನು’’ ಎಂಬ ಮಂಗಳಮಯ ಪ್ರಮೇಯವನ್ನು ‘‘ರಮಾವಿನೋದಿತ’’ ಎಂಬ ಶಬ್ದದಿಂದ ಅನುಸಂಧಾನ ಮಾಡುತ್ತಾರೆ. ಮೇಲಿನ ಆಕ್ಷೇಪಕ್ಕೆ ಉತ್ತರವಾಗಿ ಈ ಶಬ್ದವನ್ನು ಬಳಸುತ್ತಿರುವ ಕನಕದಾಸರ ಅಭಿಪ್ರಾಯ ಹೀಗಿದೆ
ನಿಜ. ದೇವತೆಗಳ ಮೂಲರೂಪಕ್ಕೂ ಅವತಾರ ರೂಪಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಮನುಷ್ಯರ ಮಧ್ಯದಲ್ಲಿ ಅವರು ಅವತರಿಸಿದಾಗ ಅವರ ಗುಣಗಳ ಸ್ವಲ್ಪ ಭಾಗವಷ್ಟೇ ಅಭಿವ್ಯಕ್ತವಾಗುತ್ತದೆ. ವಿವಾದವಿಲ್ಲ. ಆದರೆ, ಭಗವಂತನ ವಿಷಯದಲ್ಲಿ ಹೀಗಿಲ್ಲ. ಅವನು ‘‘ಪೂರ್ಣಮದಃ ಪೂರ್ಣಮಿದಮ್’’ ಮೂಲರೂಪದಲ್ಲಿಯೂ ಪರಿಪೂರ್ಣ. ಅವತಾರರೂಪದಲ್ಲಿಯೂ ಪರಿಪೂರ್ಣ. ಏಕೆ ಹೀಗೆ ಎಂದರೆ, ಭಗವಂತ ಸ್ವತಂತ್ರನಾದವನು. ದೇವತೆಗಳ ಹಾಗೆ ವೇದಗಳ ವಿ ನಿಷೇಧಕ್ಕೆ ಒಳಪಡುವವನಲ್ಲ. ಭೂಮಿಯಲ್ಲಿ ಅವತರಿಸಿದಾಗ ಸಕಲ ಗುಣಗಳನ್ನೂ ಪ್ರಕಟಿಸಬಾರದು ಎನ್ನುವದು ದೇವತೆಗಳಿಗೆ ವೇದ ವಿಸಿರುವ ನಿಯಮ. ವೇದಗಳನ್ನೇ ನಿಯಂತ್ರಿಸುವ, ಯಾರ ಅಂಕೆಗೂ ಒಳಪಡದ ನಾರಾಯಣನಿಗೆ ಈ ವಿಧಿಯಿಲ್ಲ. ಅವನ ಅಣತಿಯೇ ವೇದಗಳು ಹೊರತು ಅದರ ಅಣತಿಯಂತೆ ಅವನಿರಬೇಕಾಗಿಲ್ಲ.
ಹಾಗಾದರೆ, ಅನಂತಗುಣಪೂರ್ಣನಾದ ಶ್ರೀಕೃಷ್ಣ ತನ್ನ ಅಷ್ಟೂ ಪ್ರಭೆಯನ್ನು ತೋರಿಸಲಿಲ್ಲ ಎಂದರೆ, ತಪ್ಪು. ಶ್ರೀಕೃಷ್ಣ ತನ್ನ ಸಕಲಗುಣಗಳನ್ನೂ ಸದಾ ಅಭಿವ್ಯಕ್ತಗೊಳಿಸಿಯೇ ಇದ್ದ. ಆದರೆ ಅದನ್ನು ತಿಳಿಯುವ ಯೋಗ್ಯತೆಯಿದ್ದವರಿಗೆ ಮಾತ್ರ ಅದು ತಿಳಿಯುತ್ತಿತ್ತು. ಅದೂ ಯೋಗ್ಯತಾನುಸಾರವಾಗಿ. ಕುರುಕ್ಷೇತ್ರದ ಮಧ್ಯದಲ್ಲಿಯೇ ಶ್ರೀಕೃಷ್ಣ ತನ್ನ ವಿಶ್ವರೂಪವನ್ನು ತೋರಿದರೂ ಅದು ದರ್ಯೋಧನಾದಿಗಳಿಗೆ ಕಾಣಲಿಲ್ಲ, ಅರ್ಜುನಾದಿಗಳಿಗೆ ಮಾತ್ರ ತೋರಿತು. ಹಾಗೆಯೇ ತನ್ನ ಪುಟ್ಟದಾದ ಬಾಯಲ್ಲಿ ಅನಂತವಾದ ಪ್ರಕೃತಿಯನ್ನೂ ಯಶೋದೆಗೆ ತೋರಿದ. ‘‘ಪ್ರಕೃತಿವಿಕೃತಿಯುಕ್ ಸಾ ಜಗತ್ ಪರ್ಯಪಶ್ಯತ್’’ ಯಶೋದೆ ಸ್ಪಷ್ಟವಾಗಿಯೇ ಅದನ್ನು ಕಂಡಳು. ಮೂರಡಿಯ ದೇಹವನ್ನು ಪ್ರಕಟ ಮಾಡಿ ಗೋವಳರ ಜತೆಯಗಲ್ಲಿ ಕರುಗಳನ್ನು ಮೇಯಿಸಲು ಹೋಗುತ್ತಿದ್ದ ಶ್ರೀಕೃಷ್ಣನನ್ನು ‘‘ಕೃಷ್ಣಸ್ಯ ಗರ್ಭಜಗತಃ’’ ಎಂದೇ ವ್ಯಾಸರು ಉಲ್ಲೇಖಿಸುತ್ತಾರೆ. ಆದ್ದರಿಂದ ಶ್ರೀಕೃಷ್ಣನ ಅನಂತಗುಣಗಳೂ ಪ್ರಕಟವಾಗಿಯೇ ಇದ್ದವು. ವ್ಯಾಸಾದಿ ರೂಪಗಳಿಂದ ಸ್ವಯಂ ಭಗವಂತ ಅದನ್ನು ತಿಳಿಯುತ್ತಿದ್ದ. ಉಳಿದಂತೆ ತಿಳಿಯುವ ಯೋಗ್ಯತೆಯಿದ್ದವರು ಮಾತ್ರ ಯೋಗ್ಯತೆಯಂತೆ ಅವನ್ನು ತಿಳಿಯುತ್ತಿದ್ದರು.
ಇದೆಲ್ಲ ಸರಿ. ಆದರೆ ‘‘ರಮಾವಿನೋದಿತ’’ ಎಂಬ ಶಬ್ದದಿಂದ ಈ ಪ್ರಮೇಯ ಹೇಗೆ ಸೂಚಿತವಾಗಲು ಸಾಧ್ಯ ?
ಹೀಗೆ – ಒಬ್ಬ ದೇವತೆ ಅವತರಿಸಿ ಬಂದಾಗ ಅವನ ಗುಣ ಮಾಹಾತ್ಮ್ಯಗಳು ಎಷ್ಟು ಪ್ರಕಟವಾಗಿ ಎಷ್ಟು ಪ್ರಕಟವಾಗಿಲ್ಲ ಎನ್ನುವದು ಸಾಮಾನ್ಯ ಮನುಷ್ಯರಿಗೆ ತಿಳಿಯಲು ಸಾಧ್ಯವಾಗುವದಿಲ್ಲ. ಅವರ ಮೂಲರೂಪದ ಗುಣಗಳ ಮತ್ತು ಅವತಾರರೂಪದ ಗುಣಗಳ ಪರಿಚಯವಿದ್ದವರು ಮಾತ್ರ, ಅರ್ಥಾತ್ ದೇವತೆಗಳು ಮಾತ್ರ ತಿಳಿಯಬಲ್ಲರು. ಒಂದು ಉದಾಹರಣೆಯ ಮುಖಾಂತರ ಈ ತತ್ವವನ್ನು ಅರ್ಥಮಾಡಿಕೊಳ್ಳೋಣ
ವರುಣ ಮನುಷ್ಯರ ಮಧ್ಯದಲ್ಲಿ ಶಂತನುವಾಗಿ ಅವತರಿಸಿ ಬಂದಿರುತ್ತಾನೆ. ವರುಣನ ಮಡದಿಯಾದ ಗಂಗೆ ತನ್ನ ದೇವತಾರೂಪದಿಂದಲೇ ಅವನ ಪತ್ನಿಯಾಗುತ್ತಾಳೆ. ಒಂದು ಮಹತ್ತ್ವದ ದೇವಕಾರ್ಯದ ಸಿದ್ಧಿಗಾಗಿ ಅನೇಕ ವರ್ಷಗಳ ಕಾಲ ಅವನ ಜತೆಯಲ್ಲಿದ್ದು ಅದು ಮುಗಿದ ತಕ್ಷಣ ಶಂತನು ಮನುಷ್ಯನಾಗಿ ಹುಟ್ಟಿಬಂದವನು ಎಂಬ ಕಾರಣಕ್ಕೆ ಅವನನ್ನು ತೊರೆದು ಮೂಲರೂಪವಾದ ವರುಣನ ಬಳಿಗೇ ಹೋಗುತ್ತಾಳೆ. ಏಕೆಂದರೆ, ಶಂತನುರೂಪದಲ್ಲಿ ವರುಣರೂಪದಲ್ಲಿರುವಷ್ಟು ಗುಣಗಳಿರುವದಿಲ್ಲ. ಶ್ರೀಮದಾಚಾರ್ಯರು ಈ ತತ್ವವನ್ನು ಮಹಾಭಾರತತಾತ್ಪರ್ಯನಿರ್ಣಯದಲ್ಲಿ ತಿಳಿಸುತ್ತಾರೆ
‘‘ಅವಸ್ಥಿತಿರ್ನಾತಿಸುಖಾಯ ಮಾನುಷೇ
ಯತಃ ಸುರಾಣಾಮತ ಏವ ಗಂತುಮ್ |
ಐಚ್ಛನ್ನ ತಸ್ಯಾ ಹಿ ಬಭೂವ ಮಾನುಷೋ
ದೇಹೋ ನರೋತ್ಥೋ ಹಿ ತದಾಸ ಶಂತನೋಃ’’
‘‘ಅತಃ ಸಾ ವರುಣಂ ದೇವಂ ಪೂರ್ವಭರ್ತಾರಮಪ್ಯಮುಮ್ |
ನೃಜಾತಂ ಶಂತನುಂ ತ್ಯಕ್ತ್ವಾ ಪ್ರಯಯೌ ವರುಣಾಲಯಮ್’’ ಎಂದು.
ಆದರೆ ಭಗವಂತ ನರಸಿಂಹನಾಗಿ, ಶ್ರೀರಾಮನಾಗಿ, ಶ್ರೀಕೃಷ್ಣನಾಗಿ ಯಾವುದೇ ರೂಪಗಳಿಂದ ಅವತರಿಸಿಬಂದರೂ ಮಹಾಲಕ್ಷ್ಮೀದೇವಿ ಆ ರೂಪಗಳ ಜತೆಯಲ್ಲಿ ಶಾಶ್ವತವಾಗಿ ನೆಲೆಗೊಳ್ಳುತ್ತಾಳೆ. ಅವಳು ಅವತಾರರೂಪದ ಶ್ರೀಕೃಷ್ಣನನ್ನು ತೊರೆದು ನಾರಾಯಣನ ರೂಪಗಳ ಬಳಿ ಹೋಗಿದ್ದರೆ ಶ್ರೀಮನ್ನಾರಾಯಣನ ರೂಪಕ್ಕಿಂತಲೂ ಶ್ರೀಕೃಷ್ಣನ ರೂಪ ವಿಭಿನ್ನ ಎಂದು ತಿಳಿಯಬಹುದಿತ್ತು. ಗಂಗೆಯ ಪ್ರಸಂಗದಲ್ಲಿ ಶಂತನುರೂಪವನ್ನು ವರುಣರೂಪಕ್ಕಿಂತ ಅಧಮ ಎಂದು ತಿಳಿದ ಹಾಗೆ. ಆದರೆ ಮಹಾಲಕ್ಷ್ಮೀದೇವಿ ಎಂದಿಗೂ ಅವತಾರರೂಪದ ಶ್ರೀಹರಿಯನ್ನು ತೊರೆದು ಹೋಗಲಿಲ್ಲ, ಹೋಗುವದೂ ಇಲ್ಲ. ಆದ್ದರಿಂದ ಇಡಿಯ ಚೇತನಸಮುದಾಯದಲ್ಲಿಯೇ ಪರಮಾತ್ಮನನ್ನು ಅತ್ಯಕವಾಗಿ ತಿಳಿಯುವ ರಮಾದೇವಿಯೇ ಪರಮಾತ್ಮನ ರೂಪಗಳಲ್ಲಿ ವ್ಯತ್ಯಾಸ ಭೇದಗಳನ್ನು ತಿಳಿದಿಲ್ಲ. ಅಂದಮೇಲೆ ಆ ರೂಪಗಳಲ್ಲಿ ವ್ಯತ್ಯಾಸವಿಲ್ಲ ಎಂದೇ ಸಿದ್ಧವಾಯಿತು.
ಮತ್ತೂ, ‘‘ರಮಾವಿನೋದಿತ’’ ಎಂದೇ ದಾಸರು ಭಗವಂತನನ್ನು ಸ್ಮರಿಸುವಲ್ಲಿ ಮತ್ತೊಂದು ಮಹತ್ತ್ವದ ಕಾರಣವಿದೆ. ದೇವತೆಗಳ ಜತೆಯಲ್ಲಿ ಅವರ ಪತ್ನಿಯರೂ ಅವತರಿಸಿ ಬಂದಾಗ ಅವರ ಗುಣ ಮಾಹಾತ್ಮ್ಯಗಳೂ ಸಂಕುಚಿತಗೊಳ್ಳುತ್ತವೆ. ಹೀಗಾಗಿ ಕಡೆಯವರೆಗೆ ಅವರು ತಮ್ಮ ಮಾನುಷರೂಪದ ಪತಿಯ ಜತೆಯಲ್ಲಿಯೇ ಇರುತ್ತಾರೆ. ಶೇಷ ವಾರುಣಿಯರು ಬಲರಾಮ ರೇವತಿಯರಾಗಿ ಬಂದಾಗ ಜತೆಯಲ್ಲಿದ್ದಂತೆ. ಇಂದ್ರ ಶಚಿಯರು ವಾಲಿ ತಾರೆಯರಾಗಿ ಬಂದಾಗ ಜತೆಯಲ್ಲಿದ್ದಂತೆ. ಕಶ್ಯಪ ಅದಿತಿಯರು ವಸುದೇವ ದೇವಕಿಯರಾದಾಗ ಜತೆಯಲ್ಲಿದ್ದಂತೆ. ಇವರ ಹಾಗೆಯೇ ಲಕ್ಷ್ಮೀದೇವಿಯೂ ರುಕ್ಮಿಣೀ ಸತ್ಯಭಾಮಾ ಮುಂತಾಗಿ ಅವತರಿಸಿ ಬಂದದ್ದರಿಂದ ಅವಳ ಗುಣಗಳೂ ಸಂಕುಚಿತವಾಗಿ ಅವಳು ಶ್ರೀಕೃಷ್ಣನ ಜತೆಯಲ್ಲಿದ್ದವಳು. ಹೀಗಾಗಿ ಲಕ್ಷ್ಮೀದೇವಿಯು ಸದಾಕಾಲದಲ್ಲಿ ಜತೆಯಲ್ಲಿದ್ದು ಸೇವೆ ಮಾಡಿದ ಮಾತ್ರಕ್ಕೆ ಶ್ರೀಹರಿಯ ರೂಪಗಳಲ್ಲಿ ಅಭೇದ ಸಿದ್ದವಾಗುವದಿಲ್ಲವೆಂಬ ಆಕ್ಷೇಪಕ್ಕೂ ಉತ್ತರವನ್ನು ನೀಡಲು ದಾಸರು, ರುಕ್ಮಿಣೀವಿನೋದಿತ, ಸತ್ಯಾಸಂತೋಷಿತ, ಸೀತಾಸಂಪೂಜಿತ ಎಂದೆಲ್ಲ ಪದಗಳನ್ನು ಬಳಸದೇ ರಮಾವಿನೋದಿತ ಎಂಬ ಪದವನ್ನೇ ಬಳಸುತ್ತಾರೆ. ಆ ಮುಖಾಂತರ ಲಕ್ಷ್ಮೀದೇವಿಯ ಅವತಾರರೂಪಗಳೂ ಮೂಲರೂಪದಲ್ಲಿರುವಂತೆ ಸಕಲಗುಣಗಳ ಅಭಿವ್ಯಕ್ತಿಯನ್ನು ಪಡೆದಿರುತ್ತವೆ ಎಂಬ ತತ್ವವನ್ನು ಅನುಸಂಧಾನ ಮಾಡುತ್ತಾರೆ, ಮತ್ತು ಲಕ್ಷ್ಮೀದೇವಿಯು ರುಕ್ಮಿಣೀ ಸತ್ಯಾ ಮೊದಲಾದ ಕೆಲವೇ ರೂಪಗಳಿಂದ ಅವತರಿಸಿ ಶ್ರೀಕೃಷ್ಣಾದಿರೂಪಗಳನ್ನು ಆರಾಸಿದ್ದು, ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವ್ಯಾಸ, ಧನ್ವಂತರಿ, ದತ್ತ ಮುಂತಾದ ಅನಂತಗಳಲ್ಲಿ ಮೂಲರೂಪದಿಂದಲೇ ಪರಮಾತ್ಮನನ್ನು ಸೇವಿಸಿದ್ದಾಳೆ. ಸೀತಾರೂಪದಲ್ಲಿ ಮನುಷ್ಯಯೋನಿಯಲ್ಲಿ ಹುಟ್ಟದೇ ಅಯೋನಿಜಳಾಗಿ ಆವಿರ್ಭೂತಳಾಗಿದ್ದಾಳೆ. ಆದ್ದರಿಂದ ಮೂಲರೂಪದ ಮಹಾಲಕ್ಷ್ಮೀದೇವಿ ಮೂಲರೂಪದ ಶ್ರೀಮನ್ನಾರಾಯಣನನ್ನು ಹೇಗೆ ಸ್ತೋತ್ರ, ಸೇವಾ, ಪೂಜಾದಿಗಳಿಂದ ಸಂತೋಷಪಡಿಸುತ್ತಾಳೆಯೋ ಹಾಗೆಯೇ ಅವತಾರರೂಪದ ಶ್ರೀಕೃಷ್ಣ ಶ್ರೀರಾಮ ನರಸಿಂಹ ವ್ಯಾಸ ಮತ್ಸ್ಯ ಮುಂತಾದ ಸಕಲರೂಪಗಳನ್ನೂ ಸೇವಿಸುತ್ತಾಳೆ. ಆದ್ದರಿಂದಲೇ ಶ್ರೀಹರಿಯ ಮೂಲ ಅವತಾರರೂಪಗಳಿಗೂ ಅಭೇದವಿದೆ ಎನ್ನು ಸಿದ್ಧವಾಗಿಬಿಡುತ್ತದೆ.
ಈ ರೀತಿಯಲ್ಲಿ ಮಹಾಲಕ್ಷ್ಮೀದೇವಿ ಸದಾ ಸಕಲ ಭಗವದ್ರೂಪಗಳ ಜತೆಯಲ್ಲಿ ಇರುತ್ತಾಳೆ, ಮೂಲರೂಪವನ್ನು ಸೇವಿಸುವ ಹಾಗೆಯೇ ಸಮಸ್ತ ಅವತಾರರೂಪಗಳನ್ನೂ ಸೇವಿಸುತ್ತಾಳೆ ಮತ್ತು ಸಮಸ್ತ ಭಗವದ್ರೂಪಗಳನ್ನೂ ಅಭಿನ್ನ ಎಂದು ತಿಳಿಯುತ್ತಾಳೆ ಎಂದು ಭಗವದ್ರೂಪಗಳಲ್ಲಿ ಪರಸ್ಪರ ಅಭೇದವಿದೆ ಎಂದು ಚಿಂತನೆ ಮಾಡಿದ ದಾಸರು, ಪರಮಾತ್ಮನ ಮೂಲ ಅವತಾರರೂಪಗಳ್ನು ಕಂಡ ಬ್ರಹ್ಮಾದಿ ಸಮಸ್ತ ಸಜ್ಜನರೂ ಪರಮಾತ್ಮನ ರೂಪಗಳಲ್ಲಿ ಅಭೇದವನ್ನೇ ತಿಳಿದು ಅವನನ್ನು ಭಜಿಸಿದ್ದಾರೆ ಎಂಬ ಕಾರಣಕ್ಕೂ ಪರಮಾತ್ಮನ ರೂಪಗಳು ಅಭಿನ್ನ ಎಂದು ಎಂದು ಮುಂದಿನ ಶಬ್ದಗಳಿಂದ ಹೇಳುತ್ತಿದ್ದಾರೆ ಸಜ್ಜನಾನತ ನಿಖಿಲಗುಣಭರಿತ.
ಪರಮಾತ್ಮ ಮೂಲರೂಪದಲ್ಲಿಯಾಗಲೀ ಅವತಾರರೂಪದಲ್ಲಿಯಾಗಲೀ ಸಜ್ಜನರಿಂದ ನಿಖಿಲಗುಣಗಳಿಂದ ಭರಿತನಾದವನು ಎಂದೇ ಆನತನಾಗಿದ್ದಾನೆ ನಮಸ್ಕರಿಸಲ್ಪಟ್ಟಿದ್ದಾನೆ. ಪರಮಾತ್ಮನನ್ನು ಬ್ರಹ್ಮಾದಿ ದೇವತೆಗಳು ಮೂಲರೂಪದಲ್ಲಿಯೂ ಸ್ತುತಿಸಿದ್ದಾರೆ, ಅವತಾರರೂಪದಲ್ಲಿಯೂ ಸ್ತುತಿಸಿದ್ದಾರೆ. ಅವರು ಮೂಲರೂಪವನ್ನು ಹೇಗೆ ಸ್ತುತಿಸುತ್ತಾರೆಯೋ ಹಾಗೆಯೇ ಅವತಾರರೂಪವನ್ನೂ ಸ್ತುತಿಸುತ್ತಾರೆ. ಶ್ರೀಮದ್ಭಾಗವತ, ಮಹಾಭಾರತ, ರಾಮಾಯಣ ಮುಂತಾದ ಗ್ರಂಥಗಳಲ್ಲಿ ದೊರೆಯುವ ಎಲ್ಲ ಸ್ತೋತ್ರಗಳಲ್ಲಿಯೂ ರಾಮ ಕೃಷ್ಣ ಮತ್ಸ್ಯಾದಿ ಅವತಾರಗಳನ್ನು ಇವರು ಪರಿಪೂರ್ಣ ಎಂದೇ ಸ್ತುತಿಸುತ್ತಾರೆ. ಶ್ರೀಕೃಷ್ಣ ದೇವಕಿಯ ಗರ್ಭದಲ್ಲಿದ್ದಾಗ ಬ್ರಹ್ಮ ರುದ್ರರು ಮಾಡಿದ ಸ್ತೋತ್ರದಲ್ಲಿ, ಅವತರಿಸಿದ ತಕ್ಷಣ ದೇವಕೀ ವಸುದೇವರು ಮಾಡಿದ ಸ್ತೋತ್ರದಲ್ಲಿ, ಗರ್ಗಾಚಾರ್ಯರು ನಂದಗೋಪನೊಡನೆ ಶ್ರೀಕೃಷ್ಣನ ಕುರಿತು ಮಾತನಾಡುವಾಗ, ಕಾಳಿಯನ ಪತ್ನಿಯರು ಮತ್ತು ಕಾಳಿಯ ಮಾಡಿದ ಸ್ತೋತ್ರದಲ್ಲಿ, ಗೋವರ್ಧನವನ್ನು ಎತ್ತಿ ಗೋಕುಲವನ್ನು ರಕ್ಷಿಸಿದಾಗ ಇಂದ್ರ ಬಂದು ಮಾಡಿದ ಸ್ತೋತ್ರದಲ್ಲಿ, ತಮ್ಮೊಡನೆ ವಿಹಾರವನ್ನು ಮಾಡಿ ತಮ್ಮ ಅಹಂಕಾರವನ್ನು ಕಂಡು ಅಂತರ್ಹಿತನಾದ ಶ್ರೀಕೃಷ್ಣನನ್ನು ಮತ್ತೆ ಕಾಣಿಸಿಕೊಳ್ಳುವಂತೆ ಪ್ರಾರ್ಥಿಸುತ್ತಾ ಗೋಪಿಯರು ಹಾಡಿದ ಹಾಡಿನಲ್ಲಿ, ಯಮುನೆಯ ನೀರಿನಲ್ಲಿ ಶೇಷಶಾಯಿಯಾಗಿ ಪರಮಾತ್ಮನನ್ನು ಕಂಡು ಸಂತುಷ್ಟನಾದ ಅಕ್ರೂರ ಮಾಡಿದ ಸ್ತೋತ್ರದಲ್ಲಿ, ಸಾವಿರಾರು ವರ್ಷಗಳ ನಿದ್ರೆಯಿಂದ ಎಚ್ಚೆತ್ತ ಮುಚುಕುಂದ ಭಕ್ತಿಪೂರ್ಣವಾಗಿ ಮಾಡಿದ ಸ್ತೋತ್ರದಲ್ಲಿ, ತನ್ನನ್ನು ಮದುವೆಯಾಗು ಎಂದು ಪ್ರಾರ್ಥಿಸಿ ರುಕ್ಮಿಣೀದೇವಿ ಪರಮಾತ್ಮನಿಗೆ ಕಳುಹಿಸಿದ ಪತ್ರದಲ್ಲಿ, ರಾಜಸೂಯದ ಮಹಾಸಭೆಯಲ್ಲಿ ಸಮಸ್ತ ರಾಜರ ಸಮ್ಮುಖದಲ್ಲಿ ಶ್ರೀಕೃಷ್ಣನ ಸರ್ವೋತ್ತಮತ್ವವನ್ನು ಪ್ರತಿಪಾದಿಸಿದ ಭೀಷ್ಮಾಚಾರ್ಯರ ನುಡಿಗಳಲ್ಲಿ, ಕುರುಕ್ಷೇತ್ರದ ರಣಾಂಗಣದ ಮಧ್ಯದಲ್ಲಿ ಪರಮಾತ್ಮನ ವಿಶ್ವರೂಪವನ್ನು ಕಂಡ ಅರ್ಜುನ ಮಾಡಿದ ಸ್ತೋತ್ರದಲ್ಲಿ ಮತ್ತು ಶ್ರೀಕೃಷ್ಣನ ಜತೆಯಲ್ಲಿ ಮಾತನಾಡಿದ ಪ್ರತಿಯೊಬ್ಬ ಸಜ್ಜನನ ಪ್ರತೀ ಮಾತಿನಲ್ಲಿ ಶ್ರೀಕೃಷ್ಣನೇ ಪರಬ್ರಹ್ಮ, ಆ ಪರಬ್ರಹ್ಮನ ಸಕಲರೂಪಗಳೂ ಅತ್ಯಂತ ಅಭಿನ್ನ ಎಂಬ ಮಾತು ಅನುಸ್ಯೂತವಾಗಿ ಹರಿದು ಬಂದಿದೆ. ಹೀಗೆ ಬ್ರಹ್ಮದೇವರಿಂದಾರಂಭಿಸಿ ತ್ರಿವಕ್ರೆಯ ವರೆಗಿನ ಸಮಸ್ತರನ್ನೂ, ಅವರ ಅನುಭವವನ್ನೂ ಸಂಗ್ರಹಿಸುವದಕ್ಕಾಗಿ ದಾಸರು ಸಜ್ಜನ ಎಂಬ ಶಬ್ದವನ್ನು ಬಳಸುತ್ತಾರೆ. ಕೇವಲ ದೇವತೆಗಳಲ್ಲ, ಮನುಷ್ಯರೂ ಸಹ ಪರಮಾತ್ಮನ ರೂಪಗಳಲ್ಲಿ ಅಭೇದವನ್ನು ಪ್ರತ್ಯಕ್ಷವಾಗಿ ಕಂಡವರು, ಅದಕ್ಕಾಗಿಯೇ ರಾಮ, ಕೃಷ್ಣ, ವೇದವ್ಯಾಸರನ್ನು ನಿಖಿಲಗುಣಭರಿತ ಎಂದೇ ನಮಸ್ಕರಿಸಿದವರು ಎಂದು.
ಯಾವುದೇ ಭಗವಂತನ ಗುಣವನ್ನು ಯುಕ್ತಿಪೂರ್ವಕವಾಗಿ ನಿರ್ಣಯ ಮಾಡಿಕೊಂಡು ಉಪಾಸಿಸುವದು ಪರಮಾತ್ಮನಿಗೆ ಅತ್ಯಂತ ಪ್ರಿಯಕರ ಎಂದು ಶ್ರೀಮದಾಚಾರ್ಯರು ತತ್ವನಿರ್ಣಯದಲ್ಲಿ ತಿಳಿಸುತ್ತಾರೆ. ಆ ಮಾತಿನಂತೆ ಕನಕದಾಸರು, ಹೀಗೆ, ಸಕಲ ಅವತಾರರೂಪಗಳನ್ನೂ ಲಕ್ಷ್ಮೀದೇವಿ ಮೂಲರೂಪವನ್ನು ಸೇವಿಸುವ ಹಾಗೆಯೇ ಸೇವಿಸುತ್ತಾಳೆ ಎಂಬ ಕಾರಣದಿಂದ ಮತ್ತು ವೇದದ್ರಷ್ಟಾರರಾದ ಋಷಿಗಳಿಂದಾರಂಭಿಸಿ ಚತುರ್ಮುಖಬ್ರಹ್ಮದೇವರವರೆಗಿನ ಸಮಸ್ತಸಜ್ಜನರೂ ಪರಮಾತ್ಮನ ನಿಖಿಲರೂಗಳನ್ನೂ ನಿಖಿಲಗುಣಭರಿತ ಎಂದು ತಿಳಿದೇ ಆರಾಧಿಸಿದ್ದಾರೆ ಎಂಬ ಕಾರಣದಿಂದಲೂ ಪರಮಾತ್ಮನಲ್ಲಿ ‘‘ಸ್ವಗತಭೇದವಿವರ್ಜಿತತ್ವ’’ ಎಂಬ ಗುಣವನ್ನು ಯುಕ್ತಿಪೂರ್ವಕವಾಗಿ ಅನುಸಂಧಾನ ಮಾಡಿ ಮುಂದಿನ ಮಾತುಗಳಲ್ಲಿ ಪರಮಾತ್ಮನ ಉಳಿದ ಗುಣಗಳ ಚಿಂತನೆಯನ್ನು ಆರಂಭಿಸುತ್ತಾರೆ.
– ವಿಷ್ಣುದಾಸ ನಾಗೇಂದ್ರಾಚಾರ್ಯ