(ವೈಷ್ಣವಬಾಂಧವರೇ, ಶ್ರೀ ಹರಿಭಕ್ತಿಸಾರ ಭಗವಂತನ ಮುಂದೆ ಭಕ್ತವರೇಣ್ಯರಾದ ಶ್ರೀ ಕನಕದಾಸರ ಮಾಡಿಕೊಂಡ ನಿವೇದನೆ ಎಂದು ಹಿಂದೆಯೇ ತಿಳಿಸಿದೆ. ಇದನ್ನು ಉಳಿದ ವಿಶ್ವನಂದಿನಿಯ ಲೇಖನಗಳಂತೆ ಓದಬೇಡಿ. ನಿಮ್ಮ ಕೊಠಡಿಯ ಕದವಿಕ್ಕಿಕೊಂಡು, ಅಥವಾ ಸಾಧ್ಯವಾದರೆ ದೇವರ ಮುಂದೆ ಕುಳಿತು ಸುತ್ತಲಿನ ಪ್ರಪಂಚವನ್ನು ಮರೆತು ಓದುತ್ತ ಹೋಗಿ. ಎದುರಿನಲ್ಲಿ ನಿಮ್ಮೊಡೆಯ ಕುಳಿತಿದ್ದಾನೆ, ನಿಮ್ಮ ಭಕ್ತಿಯ ಮಾತನ್ನು ಕೇಳುತ್ತಿದ್ದಾನೆ ಎನ್ನುವ ನಿಶ್ಚಯದಿಂದ ಓದುತ್ತ ಹೋಗಿ, ಶ್ರೀ ಕನಕದಾಸರ ದಿವ್ಯವಾದ ಮಾತುಗಳಲ್ಲಿ ತತ್ವಾಭಿಮಾನಿದೇವತೆಗಳ ಸನ್ನಿಧಾನವಿದೆ, ಶ್ರೀಮದಾಚಾರ್ಯರ ಸಿದ್ಧಾಂತದ ಸಾರವಿದೆ ಹೀಗಾಗಿ ಪರಮಾತ್ಮ ಪ್ರೀತಿಯಿಂದ ಅದನ್ನು ಕೇಳುತ್ತಾನೆ. ನಿಮ್ಮ ಪ್ರಾರ್ಥನೆಯನ್ನು ಸ್ವೀಕರಿಸುತ್ತಾನೆ. ನಿಮ್ಮೊಳಗಿನ ಭಕ್ತಿಯನ್ನು ಜಾಗೃತಗೊಳಿಸುತ್ತಾನೆ. )
ದಾಸಸುರಭಿ
(ಹರಿದಾಸಸಾಹಿತ್ಯದ ಅರ್ಥವನ್ನು ವಿವರಿಸುವ ವಿಶ್ವನಂದಿನಿಯ ಭಾಗ)
ಶ್ರೀ ಹರಿಭಕ್ತಿಸಾರ – ಪದ್ಯ – ೨
ಶ್ರೀಹರಿಯ ಸರ್ವವಿಲಕ್ಷಣತ್ವ, ಸರ್ವೋತ್ತಮತ್ವ ಮುಂತಾದ ಅನಂತ ಕಲ್ಯಾಣಗುಣಮಾಹಾತ್ಮ್ಯಚಿಂತನಪೂರ್ವಕವಾದ ನಾಮಸ್ಮರಣೆ ಮತ್ತು ಸಕಲಶೋಭನಪದಾರ್ಥಗಳಲ್ಲಿ ಮಾಡುವ ಪ್ರೇಮಕ್ಕಿಂತಲೂ ಅತ್ಯಧಿಕವಾಗಿ ಮತ್ತು ನಿರವಧಿಕವಾಗಿ ಅವನಲ್ಲಿ ಪ್ರೇಮ ಮಾಡಿ ಸರ್ವವನ್ನೂ ಅವನಲ್ಲಿ ಸಮರ್ಪಿಸಿಕೊಳ್ಳುವ ಶರಣಾಗತಿಯ ನಿವೇದನೆಯನ್ನು ಹರಿಭಕ್ತಿಸಾರದ ಮೂಲಕ ಶ್ರೀಕನಕದಾಸರು ಮಾಡುತ್ತಿದ್ದಾರೆ ಎಂಬ ಮಾತನ್ನು ಈ ಹಿಂದೆಯೇ ತಿಳಿದೆವು. ಅವುಗಳಲ್ಲಿ ನಾಮಸ್ಮರಣವು ಮೋಕ್ಷಪ್ರದ, ಸರ್ವಪಾಪವಿನಾಶಕ, ಗಂಗಾದಿಸಕಲತೀರ್ಥಸೇವನಕ್ಕಿಂತಲೂ ಅಧಿಕ ಪುಣ್ಯಪ್ರದ ಮತ್ತು ಸರ್ವಥಾ ಕರ್ತವ್ಯವಾದ ಶ್ರೇಷ್ಠ ಸತ್ಕರ್ಮ ಎಂದು ಶ್ರೀಕೃಷ್ಣಾಮೃತಮಹಾರ್ಣವ ಮುಂತಾದ ಶಾಸ್ತ್ರಗಳು ಸಾರಿ ಹೇಳಿರುವದರಿಂದ ಹಾಗೂ ಆ ನಾಮಸ್ಮರಣದ ಆಸ್ವಾದನೆಯಲ್ಲಿ ಅತ್ಯಕವಾದ ಅಭಿರುಚಿ ಇದ್ದುದರಿಂದಲೂ ಶ್ರೀಕನಕದಾಸರು ಭಕ್ತಿಪರವಶರಾಗಿ ತನ್ಮಯತೆಯಿಂದ ಭಗವಂತನ ಗುಣಗಳ ಅನುಸಂಧಾನವನ್ನು ಮಾಡುತ್ತಾ ಅದ್ಭುತವಾದ ಕ್ರಮದಲ್ಲಿ ಅತ್ಯಾದರದಿಂದ ಶ್ರೀಹರಿನಾಮಸ್ಮರಣೆಯನ್ನು ಮುಂದಿನ ಶ್ಲೋಕದಿಂದ ಆರಂಭಿಸುತ್ತಾರೆ
ದೇವದೇವ ಜಗದ್ಭರಿತ ವಸು-
ದೇವಸುತ ಜಗದೇಕನಾಥ ರ-
ಮಾವಿನೋದಿತ ಸಜ್ಜನಾನತ ನಿಖಿಲಗುಣಭರಿತ |
ಭಾವಜಾರಿಪ್ರಿಯ ನಿರಾಮಯ
ರಾವಣಾಂತಕ ರಘುಕುಲಾನ್ವಯ
ದೇವ ಅಸುರವಿರೋಧಿ ರಕ್ಷಿಸು ನಮ್ಮನನವರತ ॥ ೨ ॥
ಶ್ರೀಹರೇ, ನಿನ್ನ ಗುಣಮಾಹಾತ್ಮ್ಯಗಳನ್ನು ಚಿಂತನೆ ಮಾಡುತ್ತಾ ನಿನ್ನ ನಾಮಸ್ಮರಣೆ ಮಾಡಲು ಉದ್ಯುಕ್ತನಾಗಿದ್ದೇನೆ. ಹಾಸ್ಯಾಸ್ಪದ. ಕಾರಣ, ನಿನ್ನ ಅನಂತವಾದ ಗುಣಗಳನ್ನು ತಿಳಿಯುವ ಯೋಗ್ಯತೆ ನನಗೆಲ್ಲಿಯದು ? ಏಕೆಂದರೆ ನೀನು ದೇವದೇವ. ಯಾರ ಮಾಹಾತ್ಮ್ಯಗಳನ್ನು ತಿಳಿಯಲಿಕ್ಕೇ ಮನುಷ್ಯರಾದ ನಮಗೆ ಅಸಾಧ್ಯವೋ ಅಂತಹ ಪೃಥ್ವೀ – ವರುಣ – ಅಗ್ನಿ – ಗಣಪತಿ – ಸೂರ್ಯ- ಇಂದ್ರ – ರುದ್ರ – ಪ್ರಾಣ – ಚತುರ್ಮುಖ – ಲಕ್ಷ್ಮೀ ಮುಂತಾದ ದೇವತೆಗಳಿಗೇ ದೇವನಾದ, ಅವರಿಗಿಂತಲೂ ಅನಂತಾನಂತ ಪಟ್ಟು ಮಿಗಿಲಾದ ಮಾಹಾತ್ಮ್ಯವುಳ್ಳ ದೇವರ ದೇವ ನೀನು. ಆ ಮಹಾಮಹಿಮರಿಗೇ ನಿನ್ನನ್ನು ತಿಳಿಯಲು ಅಸಾಧ್ಯವಾಗಿರುವಾಗ ನಾನು ನಿನ್ನನ್ನು ತಿಳಿಯುತ್ತೇನೆ, ತಿಳಿದು ಸ್ಮರಿಸುತ್ತೇನೆ ಎಂಬ ಮಾತಿಗೆ ಅರ್ಥವಿದೆಯೇ ?
ಆದರೂ ಸ್ಮರಿಸುತ್ತೇನೆ ಒಡೆಯ. ಕಾರಣ ನೀನು ದೇವರ ದೇವ. ತಾವು ಮಹಾಮಹಿಮಾಶಾಲಿಗಳಾದರೂ, ತಮ್ಮನ್ನು ಅತ್ಯಲ್ಪವಾದರೂ ಆದರೆ ಪರಿಶುದ್ಧವಾಗಿ ತಿಳಿದು ಭಜಿಸುವವರನ್ನು ದೇವತೆಗಳು ಕಾರುಣ್ಯದಿಂದ ಕಾಯುತ್ತಾರೆ. ಇಡಿಯ ಖಾಂಡವವನ್ನು ಸುಟ್ಟು ಭಸ್ಮ ಮಾಡುವಾಗಲೂ ತನ್ನನ್ನು ಸ್ತುತಿಸಿದ ನಾಕು ಹಕ್ಕಿಗಳನ್ನು ಅಗ್ನಿ ರಕ್ಷಿಸಲಿಲ್ಲವೇ ? ಗುರುಗಳಿಂದ ಪರಿತ್ಯಕ್ತರಾದರೂ ತನ್ನನ್ನು ಅನನ್ಯವಾಗಿ ಯಥಾರ್ಥವಾಗಿ ಸೇವಿಸಿದ ಯಾಜ್ಞವಲ್ಕ್ಯರಿಗೆ ಬ್ರಹ್ಮಜ್ಞಾನವನ್ನು ನೀಡಿ ಸೂರ್ಯ ಪೊರೆಯಲಿಲ್ಲವೇ ? ಯಮಧರ್ಮನೇ ಕೊಲ್ಲಲು ಬಂದಾಗ ಶರಣು ಬಂದ ಮಾರ್ಕಂಡೇಯರನ್ನು ಪರಶಿವ ಬಿಗಿದಪ್ಪಿ ಕಾಯಲಿಲ್ಲವೇ ? ಅಂತಹುದರಲ್ಲಿ ನೀನು ದೇವರ ದೇವ. ಈ ಎಲ್ಲ ದೇವತೆಗಳಲ್ಲಿ ಕಾರುಣ್ಯ ಎಂಬ ಗುಣ ಒಂದು ಹನಿಯಷ್ಟಿದ್ದರೆ ನೀನು ಕರುಣೆಯ ಕಡಲು. ನಿನ್ನನ್ನು ಭಕ್ತಿಯಿಂದ ಭಜಿಸಿದರೆ ಕರುಣೆಯಿಂದ ರಕ್ಷಿಸುತ್ತ, ಮೋಕ್ಷವನ್ನೇ ನೀಡುತ್ತೀ ಎಂದು ಶಾಸ್ತ್ರಗಳು ಸಾರಿ ಸಾರಿ ಹೇಳುತ್ತವೆ. ‘‘ಸ್ಮರತಸ್ತು ವಿಮುಕ್ತಿಪದಂ ಪರಮಮ್’’ ಆದ್ದರಿಂದ ನಿನ್ನೆಲ್ಲ ಗುಣಗಳನ್ನು ತಿಳಿದು ಹೊಗಳಿ ಮುಗಿಸಲಿಕ್ಕಾಗದಿದ್ದರೂ ನಿನ್ನ ಕಾರುಣ್ಯವನ್ನು ಸಂಪಾದಿಸಲಿಕ್ಕಾಗಿ ನಾನು ನಿನ್ನನ್ನು ಸ್ಮರಿಸುತ್ತೇನೆ.
ಮತ್ತು, ಈ ಸ್ಮರಿಸುತ್ತೇನೆ, ಸ್ತುತಿಸುತ್ತೇನೆ, ತಿಳಿಯುತ್ತೇನೆ ಎಂಬ ಮಾತೇ ತಪ್ಪು. ಕಾರಣ, ನೀನು ದೇವ ದೇವ. ಬಹಳ ಅದ್ಭುತವಾದ ರೀತಿಯಲ್ಲಿ ಆಟವಾಡುವ ಆಟಗಾರ ನೀನು. (ದೇವ ಎನ್ನುವ ಶಬ್ದಕ್ಕೆ ಆಟವಾಡುವವನು ಎಂಬ ಅರ್ಥವನ್ನು ಶ್ರೀಮದಾಚಾರ್ಯರು ಗೀತಾಭಾಷ್ಯದ ಏಳನೆಯ ಅಧ್ಯಾಯದಲ್ಲಿ ತಿಳಿಸಿ ಹೇಳಿದ್ದಾರೆ) ಈ ಸಮಸ್ತ ಚರಾಚರಪ್ರಪಂಚವೇ ನಿನ್ನ ಕ್ರೀಡಾಭೂಮಿ. ಈ ಪ್ರಕೃತಿಯಲ್ಲಿ ನಡೆಯುವ ಸಮಸ್ತವ್ಯಾಪಾರಗಳೂ ನಿನ್ನ ಕ್ರೀಡೆಯೇ. ಬಹಳ ವಿಚಿತ್ರವಾದ ಕ್ರೀಡೆ. ಏಕೆಂದರೆ, ಆಟದ ಭೂಮಿಯೂ ನೀನೆ. ಆಟದ ಆಟಿಕೆಯೂ ನೀನೆ. ಆಟವಾಡುವ ಆಟಗಾರನೂ ನೀನೆ. ಆಟ ನೋಡುವ ನೋಟಗಾರನೂ ನೀನೆ. ಆಟ ಎನ್ನುವ ಪದಾರ್ಥವೂ ನೀನೆ. ಅಪರಿಚ್ಛಿನ್ನವಾದ ಪ್ರಕೃತಿಯಿಂದಾರಂಭಿಸಿ ಈ ಮಣ್ಣು ಮಡಿಕೆಯವರೆಗಿನ ಸಕಲ ಜಡಪದಾರ್ಥಗಳಲ್ಲಿ ಲಕ್ಷ್ಮೀದೇವಿಯಿಂದಾರಂಭಿಸಿ ತೃಣ ಕೀಟ ಜೀವಗಳವರೆಗಿನ ಸಕಲ ಚೇತನರಲ್ಲಿ ಆಯಾ ರೂಪ ಆಕಾರ ಗುಣಗಳನ್ನು ಪ್ರಕಟ ಮಾಡುತ್ತಾ ಅದ್ಭುತವಾದ ‘‘ಸೃಷ್ಟಿ-ಸ್ಥಿತಿ-ಲಯ’’ ಎಂಬ ಆಟವಾಡುವ ಆಟಗಾರ ನೀನು. ನನ್ನಲ್ಲಿ ಕನಕದಾಸ ಎಂಬ ಹೆಸರಿನಿಂದ ನಿಂತವನು ನೀನೆ. ನನ್ನ ಚೈತನ್ಯದಲ್ಲಿ, ಹೃದಯದಲ್ಲಿ, ಮನಸ್ಸಿನಲ್ಲಿ, ಬುದ್ಧಿಯಲ್ಲಿ, ನಾಲಿಗೆಯಲ್ಲಿ, ವಿಧ ವಿಧ ರೂಪಗಳಿಂದ ನಿಂತವನು ನೀನೆ. ಮನಸ್ಸಿನಲ್ಲಿ ಶುಭ್ರಪೀತಾಂಬರಧಾರಿಯಾಗಿ ಶಂಖಚಕ್ರಗದಾಪದ್ಮಗಳನ್ನು ಹೊತ್ತು ಕಂಗೊಳಿಸುವವನು ನೀನೆ. ಎದುರಿನ ಚೆನ್ನಕೇಶವನ ಪ್ರತಿಮೆಯಲ್ಲಿ ಸನ್ನಿಹಿತನಾದ ಚೆಲುವ ಚನ್ನಿಗರಾಯನೂ ನೀನೆ. ನನ್ನ ನಾಲಿಗೆಯಿಂದ ಒಂದೊಂದು ಅಕ್ಷರದ ರೂಪದಲ್ಲಿ ಹೊರಹೊಮ್ಮುವವನೂ ನೀನೆ. ಹೀಗೆ ಸ್ತೋತೃವಿನಲ್ಲಿ ಸ್ತೋತಾರನಾಗಿ, ಸ್ತುತಿಯಲ್ಲಿ ಸ್ತುತಿರೂಪದಿಂದ ಸನ್ನಿಹಿತನಾಗಿ, ಸ್ವಯಂ ಸ್ತುತನಾಗುವವನೂ ನೀನೆ. ದೇವ ದೇವ. ಸ್ತೋತೃವೂ ದೇವನೇ. ಸ್ತುತಿಯೂ ದೇವನೇ. ಸ್ತುತ್ಯನೂ ದೇವನೇ. ಈ ನಿನ್ನ ಅದ್ಭುತ ಕ್ರೀಡೆಯಲ್ಲಿ ನನ್ನನ್ನು ಅಧಿಷ್ಠಾನವನ್ನಾಗಿ ಮಾಡಿಕೊಂಡು ಅದರ ಫಲವಾಗಿ ಮೋಕ್ಷವನ್ನು ಕರುಣಿಸುವ ಕರುಣಾಳು ನೀನು. ಹೀಗಾಗಿ ನಾನು ಸ್ತುತಿಸುತ್ತೇನೆ ಎಂಬ ಮಾತೇ ತಪ್ಪು. ನಿನ್ನದೇ ವ್ಯಾಪಾರವಿದು. ನಿನ್ನದೇ ಕ್ರೀಡೆಯಿದು.
ಹೀಗೆ ನನ್ನಲ್ಲಿ ನೀನೇ ನಿಂತು ನಿನ್ನನ್ನು ನೀನೇ ಸ್ತುತಿಸಿಕೊಂಡರೂ, ನನ್ನ ನಾಲಿಗೆಯಿಂದಲೇ ಆ ಶಬ್ದಗಳು ಹೊರಹೊಮ್ಮಿದರೂ ನನ್ನ ಯೋಗ್ಯತೆಯ ಅನುಸಾರವಾಗಿಯೇ ನೀನು ನನಗೆ ತೋರುತ್ತಿ. ನಿನ್ನನ್ನು ಸಾಕಲ್ಯೇನ ತಿಳಿಯಲು ನನಗೆ ಸಾಧ್ಯವಿಲ್ಲ. ಕಾರಣ ನೀನು ಜಗದ್ಭರಿತ. ನನ್ನಲ್ಲಿ, ನನ್ನ ಇಂದ್ರಿಯಗಳಲ್ಲಿ ಸನ್ನಿಹಿತನಾಗಿರುವಂತೆಯೇ ನೀನು ಸಕಲ ಜಗತ್ತಿನಲ್ಲಿ ಸನ್ನಿಹಿತನಾಗಿರುವಿ. ನನ್ನಲ್ಲಿ ನೀನು ಸನ್ನಿಹಿತನಾಗಿರುವೆ, ಬಿಂಬನಾದ ನಿನ್ನ ಕ್ರಿಯೆಯಂತೆ ನನ್ನ ಕ್ರಿಯೆಯಿದೆ ಎಂದು ತಿಳಿಯುವದಕ್ಕೇ ನನಗೆ ಸಾವಿರ ಸಾವಿರ ಜನ್ಮಗಳು ಬೇಕಾದವು. ಅದೂ ಸ್ವತಂತ್ರವಾಗಿ ಅಲ್ಲ. ಗುರುಗಳು ಕಾರುಣ್ಯದಿಂದ ಬಳಿ ಕರೆಸಿಕೊಂಡು ಉಪದೇಶ ಮಾಡಿದ್ದರಿಂದ. ಇನ್ನು, ಮರಳಿನಲ್ಲಿ ಮರಳಾಗಿ, ಮಣ್ಣಿನಲ್ಲಿ ಮಣ್ಣಾಗಿ, ಕಲ್ಲಿನಲ್ಲಿ ಕಲ್ಲಾಗಿ, ಗುಡ್ಡವಾಗಿ, ಬೆಟ್ಟವಾಗಿ, ಪರ್ವತವಾಗಿ, ನೀರಾಗಿ, ಕೊಳವಾಗಿ, ನದಿಯಾಗಿ, ಸಮುದ್ರವಾಗಿ, ಭೂಮಿಯಾಗಿ, ಬೆಂಕಿಯಾಗಿ, ಗಾಳಿಯಾಗಿ, ಮಹತ್ತಾದ ಆಕಾಶವಾಗಿ, ಈ ಸಮಸ್ತ ಪ್ರಕೃತಿಯನ್ನೂ ಒಳ ಹೊರಗೆ ವ್ಯಾಪಿಸಿ ‘‘ಜಗದ್ಭರಿತ’’ ಎಂದು ಕರೆಸಿಕೊಂಡು ಅನ್ಯಾದೃಶವಾಗಿ ವಿಹರಿಸುವ ನಿನ್ನನ್ನು ಪೂರ್ಣವಾಗಿ ತಿಳಿದ ತಿಳಿಯುವ ಚೈತನ್ಯ ಯಾರಿಗಿದೆ ? ಎಲ್ಲರೂ ಅವರವರ ಯೋಗ್ಯತೆಯಂತೆ ಮಾತ್ರ ನಿನ್ನನ್ನು ತಿಳಿದವರು. ನಿನ್ನನ್ನು ಪೂರ್ಣವಾಗಿ ಬಲ್ಲವ ನೀನೊಬ್ಬನೆ.
ಓ, ಜಗದ್ಭರಿತ ! ನಿನ್ನನ್ನು ನಿನ್ನ ಕ್ರೀಡೆಯನ್ನು ಪೂರ್ಣವಾಗಿ ತಿಳಿಯುವ ಮಾತಿರಿಲಿ, ಬ್ರಹ್ಮಾದಿ ದೇವತೆಗಳಂತೆ, ವಸಿಷ್ಠಾದಿ ಋಷಿಪುಂಗವರಂತೆ ಸಹ ನಿನ್ನನ್ನು ನನಗೆ ತಿಳಿಯಲು ಸಾಧ್ಯವಿಲ್ಲ. ಕಡೆಗೆ ವೇದಾಧ್ಯಯನ ಮಾಡಿ ಸ್ತುತಿಸುವ ಸದ್ಬ್ರಾಹ್ಮಣನೂ ನಾನಲ್ಲ. ಶೂದ್ರಯೋನಿಯಲ್ಲಿ ಹುಟ್ಟಿ ಬಂದವನು ನಾನು. ನನ್ನಂಥವನ ಉದ್ಧೃತಿಗಾಗಿಯೇ ನೀನು ಬಾದರಾಯಣನಾಗಿ ಅವತರಿಸಿ ಮಹಾಭಾರತವನ್ನು ರಚಿಸಿದ್ದಿ. ಆ ಮಹಾಭಾರತದಲ್ಲಿ ಶ್ರೀರಾಮ ಶ್ರೀಕೃಷ್ಣರೂಪಗಳ ಅದ್ಭುತ ಚರಿತ್ರೆಯನ್ನು ಹೆಣೆದು ನೀಡಿದ್ದಿ. ಅಷ್ಟು ತಿಳಿದು ನಿನ್ನನ್ನು ಭಜಿಸಿದರೆ ನಿಮಗೆ ಮೋಕ್ಷವನ್ನೇ ನೀಡುತ್ತೇನೆ ಎಂದು ಅಲ್ಲಿಯೇ ಉದ್ಘೋಷಿಸಿದ್ದಿ. ಆದ್ದರಿಂದ ದೇವದೇವನಾದ ಜಗದ್ಭರಿತನಾದ ನಿನ್ನನ್ನು ನಾನು ಶ್ರೀಕೃಷ್ಣನನ್ನಾಗಿ ಶ್ರೀರಾಮನನ್ನಾಗಿ ಸ್ತುತಿಸುತ್ತೇನೆ. ನನ್ನ ಬುದ್ಧಿಗೆ ಎಟಕುವಷ್ಟೇ ನಿನ್ನನ್ನು ಸ್ತುತಿಸುತ್ತೇನೆ, ಎಂಬ ಅಭಿಪ್ರಾಯದಿಂದ ಶ್ರೀಕನಕದಾಸರು ‘‘ವಸುದೇವಸುತ’’ ಎಂಬ ಶಬ್ದದೊಂದಿಗೆ ಶ್ರೀಕೃಷ್ಣ ಶ್ರೀರಾಮರೂಪಗಳ ಚಿಂತನೆಯನ್ನು ಆರಂಭಿಸುತ್ತಾರೆ.
– ಮುಂದುವರೆಸುತ್ತೇನೆ
– ವಿಷ್ಣುದಾಸ ನಾಗೇಂದ್ರಾಚಾರ್ಯ