vishwanandini-018

ವಿಶ್ವನಂದಿನಿ ಲೇಖನ ಮಾಲೆ – 018

ದಾಸಸುರಭಿ

(ದಾಸಸಾಹಿತ್ಯದ ಕೃತಿಗಳ ಅರ್ಥವನ್ನು ವಿವರಿಸುವ ವಿಶ್ವನಂದಿನಿಯ ಭಾಗ)

ಶ್ರೀ ಹರಿಭಕ್ತಿಸಾರ- ಪದ್ಯ – 1

ಶ್ರೀ ಕನಕದಾಸರಿಂದ ವಿರಚಿತವಾದ ಶ್ರೀಹರಿಭಕ್ತಿಸಾರದ
ವ್ಯಾಖ್ಯಾನ
ಶ್ರೀ ವಿಷ್ಣುದಾಸರಿಂದ ರಚಿತವಾದ ಸಾರಾಮೃತ

ಪಾದಕೆರಗುವ ಭಕ್ತಜನರ
ಬಾಧೆಗಳ ಕಳೆಯುತ್ತ ನಿತ್ಯದಿ
ಮೋದ ನೀಡುವ ಗುರುಗಳಂತರ್ಯಾಮಿಗೊಂದಿಸುತ |
ಆದಿಕೇಶವದಾಸರೊರಿದಿಹ
ಮಾಧವಪ್ರಿಯವಾದ ಕೃತಿಯನು
ಆದರದಿ ವಿವರಿಸುವೆ ಶ್ರೀಹರಿಭಕ್ತಿಸಾರವನು ॥

ನಿರಂತರ ಭಗವತ್ಸ್ಮರಣಶೀಲರಾದ ದಾಸವರ್ಯ ಶ್ರೀಕನಕದಾಸರು ಭವಬಂಧಮೋಚಕವಾದ ಭಗವನ್ನಾಮಸ್ಮರಣೆ, ಗುಣಮಾಹಾತ್ಮ್ಯಚಿಂತನ ಮತ್ತು ಸರ್ವಾತ್ಮನಾ ಶರಣಾಗತಿ ಎಂಬ ಮೂರು ಸಾಧನಗಳನ್ನು ಕಲಿಕಾಲದಿಂದ ಕಲುಷಿತರಾದ ಜನರಿಗೆ ಮೋಕ್ಷಮಾರ್ಗವನ್ನಾಗಿ ತಿಳಿಸಲೋಸುಗ ಶ್ರೀಹರಿಭಕ್ತಿಸಾರ ಎಂಬ ಶ್ರೇಷ್ಠಕೃತಿಯನ್ನು ರಚನೆ ಮಾಡಲು ಉದ್ಯುಕ್ತರಾಗಿ ಈ ಹರಿಭಕ್ತಿಸಾರಗ್ರಂಥವು ನಿರ್ವಿಘ್ನವಾಗಿ ಪರಿಸಮಾಪ್ತಿಯಾಗಲು ಮತ್ತು ಭವಬಂಧನದಲ್ಲಿ ಸಿಲುಕಿದ ಸಜ್ಜನರಿಗೆ ದೊರೆಯುವಂತಾಗಲಿ ಎಂದು ಪರಮಾತ್ಮನನ್ನು ಪ್ರಾರ್ಥಿಸುತ್ತಾ ಪರಮಮಂಗಳವಾದ ಅವನ ನಾಮಸ್ಮರಣೆಯೊಂದಿಗೆ ಗ್ರಂಥವನ್ನು ಆರಂಭಿಸುತ್ತಿದ್ದಾರೆ.

ಶ್ರೀಯರಸ ಗಾಂಗೇಯನುತ ಕೌಂ-
ತೇಯವಂದಿತಚರಣ ಕಮಲದ-
ಳಾಯತಾಂಬಕ ರೂಪಚಿನ್ಮಯ ದೇವಕೀತನಯ |
ರಾಯ ರಘುಕುಲವರ್ಯ ಭೂಸುರ-
ಪ್ರೀಯ ವರಪುರನಿಲಯ೨ ಚೆನ್ನಿಗ-
ರಾಯ ಚತುರೋಪಾಯ ರಕ್ಷಿಸು ನಮ್ಮನನವರತ ॥ ೧ ॥

ಶ್ರೀಯ ಅರಸ ಶ್ರೀಯರಸ. ಶ್ರೀಯ ಲಕ್ಷ್ಮೀದೇವಿಯ ಅರಸ ಒಡೆಯ. ಬ್ರಹ್ಮರುದ್ರರಿಂದಾರಂಭಿಸಿ ಇಡಿಯ ಪ್ರಪಂಚಕ್ಕೆ ಸೌಭಾಗ್ಯವನ್ನು ಕರುಣಿಸುವ ಭಾಗ್ಯದೇವತೆಯನ್ನು ಪಾಲಿಸುವ ಮಹಾಮಹಿಮ.

ಮಾಧ್ವಸಾಹಿತ್ಯದಲ್ಲಿ ಲಕ್ಷ್ಮೀದೇವಿಯನ್ನು ಪ್ರತ್ಯೇಕವಾಗಿ ಸ್ತುತಿಸುವ ಪರಿಪಾಠವಿಲ್ಲ. ಕಾರಣ, ಲಕ್ಷ್ಮೀದೇವಿ ಪರಮಾತ್ಮನಿಂದ ಎಂದಿಗೂ ಎಂದೆಂದಿಗೂ ಬೇರೆಯಾಗುವದಿಲ್ಲ. ಸರ್ವಪ್ರದೇಶಗಳಲ್ಲಿಯೂ ಸರ್ವಕಾಲಗಳಲ್ಲಿಯೂ ಜತೆ ಜತೆಯಾಗಿಯೇ ಇರುವ ಆದಿದಂಪತಿಗಳು ಈ ಲಕ್ಷ್ಮೀನಾರಾಯಣರು. ‘ಅವರಿಬ್ಬರೂ ಬೇರೆಯಾದರು’ ಎಂಬ ಸಣ್ಣ ಚಿಂತನೆಯೂ ಮಹಾ ಅನರ್ಥಕ್ಕೀಡು ಮಾಡಿಬಿಡುತ್ತದೆ. ರಾಮನ ಕಾಲದ ಅಗಸರು ಈ ಚಿಂತನೆಯಿಂದಾಗಿಯೇ ತಮಸ್ಸನ್ನು ಪಡೆದುಬಿಟ್ಟರು. ಸ್ವಯಂ ಶ್ರೀಮದಾಚಾರ್ಯರು ತಾವು ಲಕ್ಷ್ಮೀಗುಣವರ್ಣನೆಗಾಗಿಯೇ ಒಂದು ಸ್ತೋತ್ರವನ್ನು ರಚಿಸಿದ್ದರೂ ಅವಳ ಪ್ರತಿಗುಣದಲ್ಲಿ ಭಗವಂತನ ಚಿಂತನೆಯನ್ನು ಮಾಡಿದ್ದಾರೆ. ಅವಳ ಸ್ತುತಿಯನ್ನು ಮಾಡದೆ ಸಾಧಕನಿಗೆ ಜ್ಞಾನ ದೊರೆಯುವದಿಲ್ಲ. ಆದರೆ ಅವಳ ಸ್ತುತಿಯನ್ನು ಪ್ರತ್ಯೇಕವಾಗಿ ಮಾಡಿದರೆ ಅವಳು ಜ್ಞಾನವನ್ನೇ ಕರುಣಿಸುವದಿಲ್ಲ. ಹೀಗಾಗಿ ನಾರಾಯಣನನ್ನು ಶ್ರೀಪತಿ ಎಂದು ಸ್ತುತಿಸುವದೇ ಲಕ್ಷ್ಮೀದೇವಿಯ ಸ್ತುತಿ. ಈ ಮಾತನ್ನು ಆಚಾರ್ಯರು ಗೀತಾತಾತ್ಪರ್ಯನಿರ್ಣಯದ ಹನ್ನೆರಡನೆಯ ಅಧ್ಯಾಯದಲ್ಲಿ ತಿಳಿಸಿದ್ದಾರೆ. ಆ ಆದೇಶವನ್ನು ಪಾಲಿಸುತ್ತಿರುವ ಕನಕದಾಸರು ಪರಮಾತ್ಮನನ್ನು ಶ್ರೀಯರಸ ಎಂದೇ ಸ್ತುತಿಸಿ ಲಕ್ಷ್ಮೀನಾರಾಯಣರಿಬ್ಬರ ಸ್ಮರಣೆಯನ್ನೂ ಮಾಡುತ್ತಿದ್ದಾರೆ.

ಶ್ರೀಯರಸ ಎಂಬ ಮಂಗಳಶಬ್ದದಿಂದ ತಮ್ಮ ಕೃತಿಯನ್ನು ಆರಂಭಿಸುತ್ತಿರುವ ಕನಕದಾಸರು ಈ ಕೃತಿಯನ್ನು ರಚಿಸುತ್ತಿರುವ ತಮಗೆ, ಅಧ್ಯಯನ ಮಾಡುವ ಜನರಿಗೆ ಜ್ಞಾನಾದಿ ಸಕಲ ಸದ್ಗುಣಗಳ ಮತ್ತು ಮೋಕ್ಷಪ್ರದ ಸಂಪತ್ತಿನ ಅಭಿವೃದ್ದಿಯಾಗಲಿ ಎಂದು ಹಾರೈಸುತ್ತಾರೆ, ಹರಸುತ್ತಾರೆ.

ಗಾಂಗೇಯನುತ : ಶರಶಯ್ಯೆಯಲ್ಲಿ ಮಲಗಿ ಅಪಾರಯಾತನೆಯನ್ನು ಅನುಭವಿಸುತ್ತಿದ್ದರೂ ಎದುರಿಗೆ ಬಂದು ನಿಂತ ಭಗವಂತನ ಮೂರು ರೂಪಗಳನ್ನು (ವ್ಯಾಸ-ಪರಶುರಾಮ-ಶ್ರೀಕೃಷ್ಣ) ಅನನ್ಯವಾಗಿ ಸ್ತುತಿಸಿ ಅವನ ಮಾಹಾತ್ಮ್ಯವನ್ನು ಅತ್ಯುತ್ಸಾಹದಿಂದ ಯುಷ್ಠಿರನ ಮುಂದೆ ನಿರೂಪಿಸಿದ ಭಾಗವತೋತ್ತಮರಾದ ಗಂಗಾಪುತ್ರ ಭೀಷ್ಮಾಚಾರ್ಯರ ನುಡಿಗಳಿಂದ ನುತನಾದವನು.
ಕೌಂತೇಯವಂದಿತಚರಣ : ಕುಂತಿಯ ಮಕ್ಕಳಾದ ಪಾಂಡವರಿಂದ ನಮಸ್ಕರಿಸಲ್ಪಟ್ಟ ಚರಣವುಳ್ಳವನು. ಹುಟ್ಟಿನಿಂದ ಅವಮಾನ, ಯಾತನೆಗಳಿಗೆ ಒಳಗಾದರೂ ಅವುಗಳಿಂದ ವಿಚಲಿತರಾಗದೆ ಸ್ವಬಾಹುಬಲದಿಂದ ರಾಜ್ಯವನ್ನು ಸಂಪಾದಿಸಿ, ಯಾರಿಗೂ ಮಾಡಲಾಗದ ರಾಜಸೂಯಯಾಗವನ್ನು ಮಾಡಿ, ಮತ್ತೆ ವಂಚನೆಗೊಳಗಾಗಿ ಎಲ್ಲವನ್ನು ಕಳೆದುಕೊಂಡರೂ, ಭಯಂಕರವಾಗಿ ರಣದಲ್ಲಿ ಕಾದಾಡಿ ಜಗದೇಕವೀರರನ್ನು ಮಣ್ಣಾಗಿಸಿ ಭೂಮಿಯ ಆಪತ್ಯವನ್ನು ಪಡೆದ ಮಹಾಶಕ್ತಿಶಾಲಿಗಳಾದ ಪಾಂಡವರಿಂದ ಭಕ್ತಿಪೂರ್ಣವಾಗಿ ಸೇವಿಸಲ್ಪಟ್ಟವನು.

ಕಮಲದಳಾಯತಾಂಬಕ : ಅಂಬಕ ಎಂದರೆ ಕಣ್ಣು. ಸಂಸ್ಕೃತದ ಶಬ್ದ. ಅಪರಿಚಿತ ಶಬ್ದವೇನಲ್ಲ. ಆದರೆ ಬಳಕೆಗೊಳಗಾಗದ ಶಬ್ದ. ತ್ರ್ಯಂಬಕ ಎಂದರೆ ಮೂರು ಕಣ್ಣುಳ್ಳ ಮುಕ್ಕಣ್ಣ ಎಂಬುದು ಎಲ್ಲರಿಗೂ ಗೊತ್ತು. ಆದರೆ ಅಂಬಕ ಎಂದರೆ ಕಣ್ಣು ಅಂತ ಮಾತ್ರ ಗೊತ್ತಿಲ್ಲ. ತಾವರೆಯ ಎಸಳಿನಂತೆ ಆಯತವಾದ ಅರ್ಥಾತ್ ವಿಶಾಲವಾದ ಕಣ್ಣುಳ್ಳವನು ಎಂದರ್ಥ. ಪುಂಡರೀಕಾಕ್ಷ.

ಒಡೆಯ ! ಭೀಷ್ಮನ ನುಡಿಗಳನ್ನು ಎದುರಿಗೆ ಒಂದಲ್ಲ ಮೂರು ರೂಪಗಳಲ್ಲಿ ನಿಂತು ಆಲಿಸಿದೆ. ಪಾಂಡವರ ಮನೆಯಲ್ಲಿಯೇ ವರ್ಷಗಟ್ಟಲೇ ವಾಸವಿದ್ದು ಅವರ ಸೇವೆಯನ್ನು ಸ್ವೀಕರಿಸಿದೆ. ಅವರಷ್ಟು ಹಿರಿಯ ಭಕ್ತ ನಾನಲ್ಲದಿದ್ದರೂ ನನ್ನ ಈ ನುಡಿಗಳನ್ನು ಪ್ರೇಮದಿಂದ ಆಲಿಸು. ಕಾರಣ ನಿನ್ನದು ಸಂಕುಚಿತ ದೃಷ್ಟಿಯಲ್ಲ. ನೀನು ಕಮಲದಳಾಯತಾಂಬಕ. ಪುಂಡರೀಕಾಕ್ಷ. ವಿಶಾಲವಾದ ಕಣ್ಣುಳ್ಳವ. ವಿಶಾಲವಾದ ದೃಷ್ಟಿಯುಳ್ಳವ. ನನ್ನನ್ನೂ ನಿನ್ನ ಭಕ್ತರಲ್ಲಿ ಸೇರಿಸು. ನನ್ನ ನುಡಿಗಳನ್ನೂ ಪ್ರೇಮದಿಂದ ಆಲಿಸು. ಆ ಕಮಲದ ಕಣ್ಗಳಿಂದಲೇ ನನ್ನನ್ನು ಪ್ರೀತಿಯಿಂದ ಹರಸು.

ರೂಪಚಿನ್ಮಯ : ಚಿತ್ ಎಂದರೆ ಜ್ಞಾನ. ಚಿನ್ಮಯ ಎಂದರೆ ಜ್ಞಾನಾತ್ಮಕ. ಜ್ಞಾನವೇ ಮೊದಲಾದ ಅನಂತ ಮಂಗಳಗುಣಗಳನ್ನೇ ರೂಪವನ್ನಾಗಿ ಅರ್ಥಾತ್ ದೇಹವನ್ನಾಗಿ ಉಳ್ಳವನು ಚಿನ್ಮಯರೂಪ. ಚಿನ್ಮಯರೂಪನೇ ರೂಪಚಿನ್ಮಯ. (ಸಂಸ್ಕೃತದಲ್ಲಿ ಈ ರೀತಿಯ ಪ್ರಯೋಗ ತುಂಬ ಸಹಜ.)

ಕನಕದಾಸರು ಹರಿಭಕ್ತಿಸಾರದಲ್ಲಿ ಈ ದೇಹದ ನಶ್ವರತೆಯನ್ನು, ಅಸಾರತೆಯನ್ನು ಬಹಳವಾಗಿ ಹೇಳಿದ್ದಾರೆ. ಈ ಸಾಂಸಾರಿಕವಾದ ದೇಹದ ಕುರಿತು ಅವರಿಗೆ ತಿರಸ್ಕಾರವಿದೆ. ಹೊಲೆಪದಾರ್ಥಗಳಿಂದ ನಿರ್ಮಾಣವಾಗುವ ಈ ದೇಹವನ್ನು ಮರಳಿ ಮರಳಿ ಹೊಂದಬಾರದು ಎಂಬ ನಿಶ್ಚಯವಿದೆ. ಆದರೆ ನಾನು ಸ್ತೋತ್ರ ಮಾಡುತ್ತಿರುವ ಭಗವಂತನಿಗೆ ಇಂಥ ಹೊಲಸು ದೇಹವಿಲ್ಲ. ಅವನದು ಅಪ್ರಾಕೃತ ಚಿನ್ಮಯ ಶರೀರ ಎಂದು ಮೊಟ್ಟ ಮೊದಲಿಗೇ ಸ್ಮರಿಸುತ್ತಾರೆ. ನಾವು ಭಗವಂತನನ್ನು ಹೇಗೆ ಉಪಾಸಿಸುತ್ತೇವೆಯೋ ಅದೇ ತರಹದ ಫಲವನ್ನು ಪಡೆಯುತ್ತೇವೆ ಎಂಬ ಗೀತೆಯ ಮಾತನ್ನು ನೆನಪಿಗೆ ತಂದುಕೊಂಡು ಭಗವಂತನ ಬಳಿಯಲ್ಲಿ ಶಾಶ್ವತವಾಗಿ ಬದುಕುವ ಬಯಕೆಯನ್ನು ಹೊಂದಿದ ದಾಸರು, ಅದಕ್ಕಾಗಿ ತಮ್ಮ ಅಪ್ರಾಕೃತ ಚಿನ್ಮಯಶರೀರದ ಆವಿರ್ಭಾವವನ್ನು ಬಯಸುವ ದಾಸರು ಪರಮಾತ್ಮನನ್ನು ರೂಪಚಿನ್ಮಯ ಎಂದೇ ಕರೆಯುತ್ತಾರೆ. ಅಷ್ಟೇ ಅಲ್ಲ. ಪರಮಾತ್ಮನಿಗೂ ಪರಮಾತ್ಮನ ರೂಪಕ್ಕೂ ವ್ಯತ್ಯಾಸವಿಲ್ಲ. ಪರಮಾತ್ಮನಿಗೂ ಪರಮಾತ್ಮನ ರೂಪ, ಗುಣ, ಕ್ರಿಯಾದಿಗಳಿಗೂ ಅಭೇದವಿದೆ ಎಂಬ ತತ್ವವನ್ನು ಚಿನ್ಮಯರೂಪ ಎಂದು ಹೇಳದೇ ರೂಪಚಿನ್ಮಯ ಎಂದು ಹೇಳುವದರ ಮುಖಾಂತರ ಅನುಸಂಧಾನ ಮಾಡುತ್ತಿದ್ದಾರೆ. (ರೂಪೇಣ ಚಿನ್ಮಯಃ)

ನಾನು ಸ್ತೋತ್ರಮಾಡುವವನು. ನೀನು ಸ್ತೋತ್ರ ಮಾಡಿಸಿಕೊಳ್ಳುವವನು. ನೀನು ಒಡೆಯ. ನಾನು ದಾಸ. ಯಾವ ದೇವತೆ ಮನುಷ್ಯರಿಗೂ ಇಲ್ಲದ ಚಿನ್ಮಯವಾದ ಶರೀರ ನಿನಗಿದೆ. ಹೀಗೆ ತಾನು ಬೇರೆ ಪರಮಾತ್ಮ ಬೇರೆ, ತನಗೂ ಪರಮಾತ್ಮನಿಗೂ ಎಣೆಯಿರದಷ್ಟು ವ್ಯತ್ಯಾಸವುಂಟು ಎನ್ನುವ ಭೇದಸಿದ್ಧಾಂತವನ್ನು, ಯಾವ ಚಿಂತನೆಯನ್ನು ಸದಾಕಾಲದಲ್ಲಿಯೂ ಅತ್ಯವಶ್ಯವಾಗಿ ಮಾಡಬೇಕೆಂದು ಶ್ರೀಮದಾಚಾರ್ಯರು ತಿಳಿಸಿದ್ದಾರೆಯೋ ಅಂತಹ ಭೇದಚಿಂತನೆಯನ್ನು ದಾಸರು ಆರಂಭದಲ್ಲಿಯೇ ಮಾಡುತ್ತಿದ್ದಾರೆ.

ದೇವಕೀತನಯ : ಭಗವಂತ ಇಂಥ ಅಪ್ರಾಕೃತಶರೀರದವನಾದರೂ, ಅವ್ಯಕ್ತಸ್ವಭಾವನಾದರೂ, ಮನುಷ್ಯರ ಕಣ್ಣಿಗೆ ದೇವಕಿ, ಕೌಸಲ್ಯಾ, ರೇಣುಕಾ, ಅದಿತಿಯರ ಮಗನಾಗಿ ಮನುಷ್ಯರ ಹಾಗೆಯೇ ತೋರುತ್ತಾನೆ. ಆದರೆ ಅವನಿಗೆ ಮಾನುಷ ಶರೀರವಿಲ್ಲ. ಪಂಚಭೂತಗಳ ಬಂಧನವಿಲ್ಲ. ದೇವಕೀತನಯನಾದರೂ ರೂಪಚಿನ್ಮಯ. ರೂಪಚಿನ್ಮಯನೇ ದೇವಕೀತನಯ. ಅರ್ಥಾತ್ ಅವತಾರರೂಪಗಳಲ್ಲಿಯೂ ಅವನು ಜ್ಞಾನ-ಅನಂದಮಯವಾದ ಅಪ್ರಾಕೃತ ಶರೀರವುಳ್ಳವನೇ. ವೀರ್ಯ-ರಕ್ತ-ಮಾಂಸ-ಎಲುವುಗಳಿಂದ ನಿರ್ಮಿತವಾದ ಶರೀರವುಳ್ಳವನಲ್ಲ.

ಈ ತತ್ವವನ್ನು ಹೇಳಲಿಕ್ಕಾಗಿಯೇ ದಾಸರು ರೂಪಚಿನ್ಮಯ ಎಂಬ ಶಬ್ದ ಬಳಸಿದ ತಕ್ಷಣ ಕೌಸಲ್ಯಾನಂದನ, ರೇಣುಕಾತ್ಮಜ, ಅದಿತಿತನುಜ ಮುಂತಾದವನ್ನು ಬಳಸದೆ ದೇವಕೀತನಯ ಎಂಬ ಶಬ್ದವನ್ನು ಬಳಸಿ ಶ್ರೀಕೃಷ್ಣರೂಪದ ಚಿಂತನೆಯನ್ನು ಮಾಡಿದ್ದಾರೆ. ಕಾರಣ, ಭಗವಂತ ದೇವಕಿಯ ಮಗನಾಗಿ ಅವತರಿಸುವ ಸಂದರ್ಭದಲ್ಲಿ ಮಗುವಾಗಿ ಅವತರಿಸಲಿಲ್ಲ. ದೇವಕಿಗೆ ಹೆರಿಗೆಯಾಯಿತು, ಅವಳ ಹೊಟ್ಟೆಯಿಂದ ಮಗು ಹೊರಬಂದಾಗಿದೆ, ಆದರೆ ಮಗು ಅಲ್ಲಿಲ್ಲ. ಶಂಖಚಕ್ರಗದಾಪದ್ಮಧಾರಿಯಾದ ಪೀತಾಂಬರವನ್ನುಟ್ಟ ಸಮಸ್ತಾಭರಣಭೂಷಿತನಾದ ಶ್ರೀಹರಿ ಅಲ್ಲಿದ್ದ. ‘‘ಸಶಂಖಚಕ್ರಾಬ್ಜಗದಃ ಸ ದೃಷ್ಟಃ’’ ವಸುದೇವನಿಂದ ದೇವಕಿಯಿಂದ ಸ್ತುತನಾದ ಬಳಿಕ, ಮುಂದೆ ಮಾಡಬೇಕಾದ ಕಾರ್ಯವನ್ನು ವಸುದೇವನಿಗೆ ಉಪದೇಶಿಸಿ, ದೇವಕಿಗೆ ಅಭಯವನ್ನಿತ್ತ ನಂತರ ಭಗವಂತ ಕಡುಗಪ್ಪುಬಣ್ಣದ ಮಗುವಾಗಿ ದೇವಕೀ ವಸುದೇವರಿಗೆ ತೋರುತ್ತಾನೆ. ಹೀಗಾಗಿ ಪರಮಾತ್ಮನ ದೇಹ ಶುಕ್ಲಶೋಣಿತದಿಂದ ನಿರ್ಮಿತವಾದದ್ದಲ್ಲ, ನಿರ್ಮಿತವಾಗಿದ್ದರೆ ಅವನು ಮಗುವಾಗಿಯೇ ತೋರಬೇಕಾಗಿತ್ತು, ಶಂಖಚಕ್ರಗಳೆಲ್ಲ ಎಲ್ಲಿಂದ ಬರಲು ಸಾಧ್ಯ? ಆದ್ದರಿಂದ ಶ್ರೀಕೃಷ್ಣನ, ಯಾವುದೇ ಅವತಾರದ ರೂಪ ಅಪ್ರಾಕೃತವೇ, ಚಿನ್ಮಯವೇ ಹೊರತು ಪಾಂಚಭೌತಿಕವಾದದ್ದಲ್ಲ ಎಂದು ಸಿದ್ಧವಾಯಿತು. ಹೀಗಾಗಿ ಪರಮಾತ್ಮ ದೇವಕೀತನಯನಾಗಿ ಅವತರಿಸಿದಾಗ ತನ್ನೆಲ್ಲ ಅವತಾರರೂಪಗಳೂ ಮೂಲರೂಪದಂತೆಯೇ ಚಿನ್ಮಯ ಅಪ್ರಾಕೃತವಾದದ್ದು ಎಂದು ಸಾರಿದ್ದಾನೆ. ದಾಸರು ಈ ತತ್ವವನ್ನು ಅನುಸಂಧಾನ ಮಾಡಲಿಕ್ಕಾಗಿಯೇ ರೂಪಚಿನ್ಮಯ ಎಂದು ಭಗವಂತನನ್ನು ಸ್ತುತಿಸಿದ ತಕ್ಷಣ ದೇವಕೀತನಯ ಎಂದು ಸ್ತುತಿಸಿದ್ದಾರೆ. ಭಗವಂತನ ಮೂಲರೂಪವಷ್ಟೇ ಅಲ್ಲ ಸಕಲ ರೂಪಗಳೂ ಚಿನ್ಮಯ ಅಪ್ರಾಕೃತಗಳೇ ಎಂದು.

ಸಾಮಾನ್ಯವಾಗಿ ಎಲ್ಲ ಲೌಕಿಕ ಕಾವ್ಯಗಳ ಕೃತಿಗಳ ಮೂಲ ಉದ್ದೇಶ, ರಾಜರನ್ನು ಅಧಿಕಾರಿಗಳನ್ನ್ನು, ಒಟ್ಟಿನಲ್ಲಿ ಹಣವಿದ್ದವರನ್ನು ಹೊಗಳುವದು. ಕಾವ್ಯಕ್ಕೊಂದು ನೀತಿಶಾಸ್ತ್ರವನ್ನು ರೂಪಿಸಿದ ದಂಡಿಯೇ ಈ ಮಾತನ್ನು ಹೇಳುತ್ತಾನೆ. ಹೀಗಾಗಿ ಕಾವ್ಯವನ್ನು ರಚಿಸಹೊರಟಿರುವ ನಿಮ್ಮ ನಾಯಕನ್ಯಾರು ಎಂಬ ಪ್ರಶ್ನೆಗೆ ಕನಕದಾಸರು ನೀಡಿದ ಉತ್ತರ ರಾಯ. ನಿಜ. ನಾನೂ ರಾಜನನ್ನೇ ಹೊಗಳಲಿಕ್ಕಾಗಿ ಅವನನ್ನೇ ಮೆಚ್ಚಿಸಲಿಕ್ಕಾಗಿ ಈ ಕೃತಿಯನ್ನು ರಚಿಸುತ್ತಿದ್ದೇನೆ. ಆದರೆ ಈ ರಾಜ ಎಲ್ಲ ರಾಜರಂತೆ ಕಾಲದ ದೇಶದ ಪರಿಮಿತಿಗೆ ಒಳಗಾಗುವವನಲ್ಲ. ಇಲ್ಲದ ಗುಣಗಳನ್ನು ಹೊಗಳಿಸಿ ಕೊಳ್ಳುವ ಹೊಗಳುಪ್ರಿಯನಲ್ಲ. ಹಣವಿದ್ದವರ, ಅಕಾರವಿದ್ದವರ, ರೂಪವಿದ್ದವರ, ಹೊಗಳುಭಟ್ಟರ ಪಕ್ಷಕ್ಕೆ ಸೇರುವವನಲ್ಲ. ಎಲ್ಲ ರಾಜರಿಗಿಂತ ವಿಲಕ್ಷಣನಾದವನು. ಕಾಲ ದೇಶಗಳ ಪರಿಮಿತಿಯನ್ನೂ ಮೀರಿ ಬರಿಯ ಜೀವಪ್ರಪಂಚವನ್ನಷ್ಟೇ ಅಲ್ಲ , ಸಕಲ ಜಡ ಪದಾರ್ಥಗಳನ್ನೂ ಅವುಗಳ ಸ್ವಭಾವವನ್ನೂ ಸಹ ನಿಯಮಿಸುವ ಮಹಾಸಾಮರ್ಥ್ಯದ ಮೂರ್ತಿ. ಅನಾಥರನ್ನು, ಶರಣಾಗತರನ್ನು ವಾತ್ಸಲ್ಯದಿಂದ ಸಲಹುವ ಕರುಣೆಯ ಕಡಲು. ಸಕಲಕಲ್ಯಾಣಗುಣಗಳ ಆಕರನಾದ ನಾರಾಯಣನೇ ನನ್ನ ಕಾವ್ಯನಾಯಕನಾದ ರಾಜ.
ಹೀಗೆ ಭಗವಂತನನ್ನು ಕಾವ್ಯನಾಯಕರಾದ ಸಕಲರಾಜರಿಂದ ವಿಲಕ್ಷಣನಾದ ರಾಜ ಎಂದು ತಿಳಿಸಲಿಕ್ಕಾಗಿಯೇ ರಾಜ ಎಂಬ ಪ್ರಸಿದ್ಧ ಶಬ್ದವನ್ನು ಬಳಸದೇ ರಾಯ ಎಂಬ ಶಬ್ದವನ್ನು ಬಳಸಿದ್ದಾರೆ.

ಭಗವಂತ ಅನಂತಕೋಟಿಬ್ರಹ್ಮಾಂಡನಾಯಕನಾಗಿರಬಹುದು. ಅಪರಿಮಿತ ಸಾಮರ್ಥ್ಯವಿರಬಹುದು. ಅದರೆ ಅವನು ಬ್ರಹ್ಮಾಂಡ ನಾಯಕನಾದ್ದರಿಂದ ಸಕಲಚರಾಚರಪದಾರ್ಥನಿಯಾಮಕನಾದ್ದರಿಂದ ಅವನಲ್ಲಿ ಆ ಗುಣವಿದೆ. ಅದು ಅತಿಶಯವಲ್ಲ. ಅಷ್ಟಾದ ಮಾತ್ರಕ್ಕೆ ಅವನು ಹಿರಿಯನಾಗಬೇಕಿಲ್ಲ. ಉಳಿದ ರಾಜರೂ ಅವರವರ ಮಟ್ಟಿಗೆ ಪರಿಪೂರ್ಣರೇ. ಕಾರಣ ಒಬ್ಬ ರಾಜನಲ್ಲಿರಬೇಕಾದ ಔದಾರ್ಯ, ಪರಾಕ್ರಮ, ಶೀಲ, ಸೌಂದರ್ಯ, ಪ್ರಜಾವಾತ್ಸಲ್ಯ ಮುಂತಾದ ಎಲ್ಲ ಗುಣಗಳೂ ನಹುಷ, ಪೃಥು, ಯಯಾತಿ, ಹರಿಶ್ಚಂದ್ರ, ಭರತ ಮುಂತಾದವರಲ್ಲಿ ಇದ್ದೇ ಇವೆ. ರಾಜರಲ್ಲಿರಬೇಕಾದ ಎಲ್ಲ ಗುಣಗಳೂ ಅವರಲ್ಲಿ ಪೂರ್ಣವಾಗಿಯೇ ಇವೆ. ಹೀಗಾಗಿ ಕೇವಲ ರಾಜಪದವಿಗೆ ಯೋಗ್ಯವಾದ ಗುಣಗಳನ್ನಿಟ್ಟು ಅಳತೆ ಮಾಡಿದಲ್ಲಿ ಶ್ರೀಹರಿ ಉಳಿದ ರಾಜರಿಗಿಂತ ಹಿರಿಯನೇನಲ್ಲ. ಅವನಲ್ಲಿ ಉಳಿದ ಮಹಾಮಾಹಾತ್ಮ್ಯಗಳಿರಬಹುದು, ಅದರೆ ರಾಜ ಎಂದು ಕರೆಸಿಕೊಳ್ಳಲು ಬೇಕಾದ ಗುಣಗಳನ್ನು ಉಳಿದ ಅನೇಕರೂ ಪಡೆದಿದ್ದಾರೆ ಎಂಬ ಆಕ್ಷೇಪಕ್ಕೆ ಉತ್ತರವನ್ನು ನೀಡುತ್ತಾ ಕನಕದಾಸರು ಶ್ರೀಮದಾಚಾರ್ಯರು ಹೇಳಿಕೊಟ್ಟ ಪರಮಾತ್ಮನ ಸರ್ವವಿಲಕ್ಷಣತ್ವ ಎಂಬ ಗುಣದ ಅನುಸಂಧಾನವನ್ನು ರಘುಕುಲವರ್ಯ ಎಂಬ ಶಬ್ದದಿಂದ ಮಾಡುತ್ತಾರೆ.

ಅವರು ಈ ಶಬ್ದದ ಬಳಕೆಯಿಂದ ಮೇಲಿನ ಆಕ್ಷೇಪಕ್ಕೆ ಹೀಗೆ ಉತ್ತರವನ್ನು ನೀಡುತ್ತಿದ್ದಾರೆ ಇಲ್ಲ. ಮೊದಲಿಗೆ ಎಲ್ಲ ರಾಜರಲ್ಲಿಯೂ ರಾಜಪದವಿಗೆ ಯೋಗ್ಯವಾದ ಸಕಲಗುಣಗಳೂ ತುಂಬಿಲ್ಲ. ತಾರತಮ್ಯವಿದ್ದೇ ಇದೆ. ಪೃಥುಚಕ್ರವರ್ತಿ ರಾಜ್ಯವಾಳಿದ ಹಾಗೆ ನಹುಷ ರಾಜ್ಯವಾಳಲಿಲ್ಲ. ಭರತನಷ್ಟು ಎತ್ತರವನ್ನೇರಲು ಯಯಾತಿಗೆ ಸಾಧ್ಯವಾಗಲಿಲ್ಲ. ಹರಿಶ್ಚಂದ್ರನಿಗೆ ಮಾಡಲಿಕ್ಕೆ ಸಾಧ್ಯವಾದ ರಾಜಸೂಯಯಜ್ಞವನ್ನು ಭರತನಿಗೆ ಮಾಡಲು ಸಾಧ್ಯವಾಗಲಿಲ್ಲ. ಗುಣಗಳ ತಾರತಮ್ಯ ಸ್ಪಷ್ಟವಾಗಿ ಗೋಚರಿಸುತ್ತದೆ. ಇನ್ನು ಒಂದೊಂದು ಗುಣಗಳಲ್ಲಿ ಅತ್ಯುತ್ಕೃಷ್ಟರಾದ ರಾಜರನ್ನು ಪ್ರತ್ಯೇಕವಾಗಿ ಗುರುತಿಸಿ ಅವರೆಲ್ಲರ ಒಂದು ದೊಡ್ಡ ಗುಂಪನ್ನೇ ಮಾಡಿ ಆ ಚಕ್ರವರ್ತಿಗಳ ಗುಂಪಿನ ಜತೆಯಲ್ಲಿ ರಾಜನಾಗಿ ಅವತರಿಸಿಬಂದ ಶ್ರೀರಾಮಚಂದ್ರನನ್ನು ತುಲನೆ ಮಾಡಿದರೂ ಶ್ರೀಹರಿಯ ಅವತಾರನಾದ ಶ್ರೀರಾಮಚಂದ್ರನೇ ಸಮಸ್ತರಾಜರಿಗಿಂತಲೂ ಮಿಗಿಲಾಗುತ್ತಾನೆ. ಭರತ ಮೊದಲಾದ ಎಲ್ಲ ರಾಜರೂ ದಿಗ್ವಿಜಯವನ್ನು ಮಾಡಿದವರೇ. ಅವರೆಲ್ಲರ ದಿಗ್ವಿಜಯಕ್ಕೆ ಸಮುದ್ರವೇ ಸೀಮೆ. ಆದರೆ ರಾಮಚಂದ್ರ ಆ ಸಮುದ್ರಕ್ಕೇ ಒಂದು ಸೇತುವೆಯನ್ನು ಕಟ್ಟಿ ಯಾರಿಗೂ ಮಾಡಲಾಗದ ಪರಾಕ್ರಮವನ್ನು ತೋರಿದ. ಎಲ್ಲ ರಾಜರೂ ಯುದ್ಧ ಮಾಡಬೇಕಾದರೆ ಹುರಿಗಟ್ಟಿದ ಸೈನಿಕರ ಸೈನ್ಯವನ್ನು ಜತೆಯಲ್ಲಿಟ್ಟುಕೊಂಡು, ತರಬೇತುಗೊಳಿಸಿದ ಬಲಿಷ್ಠ ಕುದುರೆ ಆನೆಗಳನ್ನು ಮುಂದಿಟ್ಟುಕೊಂಡು, ಹರಿತವಾದ ಆಯುಧಗಳನ್ನು ತುಂಬಿಟ್ಟುಕೊಂಡು ಯುದ್ಧ ಮಾಡುತ್ತಾರೆ. ಆದರೆ ಶ್ರೀರಾಮಚಂದ್ರ ಗೆಡ್ಡೆ ಗೆಣಸು ತಿಂದು ಮರದಿಂದ ಮರಕ್ಕೆ ನೆಗೆಯುತ್ತಾ, ವಿಚಿತ್ರ ವಿಚಿತ್ರ ಚೇಷ್ಟೆಗಳನ್ನು ಮಾಡುತ್ತಾ ಕುಣಿದಾಡುವ ಕೋತಿಗಳನ್ನು ಜತೆಯಲ್ಲಿಟ್ಟುಕೊಂಡು ಸಮುದ್ರದಾಚೆಯ ಲಂಕೆಯನ್ನು, ಅದರಲ್ಲಿದ್ದ ಅಸಂಖ್ಯ ರಾಕ್ಷಸರನ್ನು ಗೆದ್ದು ಬಂದ. ಎಲ್ಲ ಯುದ್ಧಗಳಲ್ಲಿ ಸೈನಿಕರು ಪಲಾಯನ ಮಾಡಿದರೆ ರಾಜರೂ ಪಲಾಯನ ಮಾಡುತ್ತಾರೆ, ಇಲ್ಲವೇ ಸೆರೆಸಿಕ್ಕು ಬಿಡುತ್ತಾರೆ, ಅಥವಾ ಒಬ್ಬರೇ ಹೋರಾಡಿ ಮಡಿಯುತ್ತಾರೆ. ಆದರೆ ರಾವಣ ಮುನ್ನೂರು ಕೋಟಿ ಸೈನಿಕರನ್ನು ಕರೆದುಕೊಂಡು ಅಂತಿಮಯುದ್ಧಕ್ಕೆ ಸಿದ್ಧನಾಗಿ ಬಂದಾಗ ಸಕಲ ಕಪಿಗಳೂ ಪಲಾಯನಗೈದಾಗ ತಾನೊಬ್ಬನೇ ಮುನ್ನೂರು ಕೋಟಿಗಿಂತಲೂ ಮಿಗಿಲಾದ ರೂಪಗಳನ್ನು ತೆಗೆದುಕೊಂಡು ಕಾದಾಡುತ್ತಾನೆ. ತನ್ನ ಅದ್ಭುತ ಯೋಗಶಕ್ತಿಯನ್ನು ಪ್ರದರ್ಶಿಸುತ್ತಾನೆ. ರಾಜ್ಯವಾಳಿ ವನಕ್ಕೆ ನಡೆದು ಯೋಗಶಕ್ತಿಯನ್ನು ಸಂಪಾದಿಸಿದವರಿದ್ದಾರೆ. ದತ್ತಾತ್ರೇಯ ಮುಂತಾದ ಮಹಾಯೋಗಿವರ್ಯರ ಸೇವೆಯಿಂದ ಸ್ವಲ್ಪ ಮಟ್ಟಿನ ಯೋಗಶಕ್ತಿಯನ್ನು ತಂದು ಕೊಂಡ ಕಾರ್ತವೀರ್ಯಾರ್ಜುನನಂತಹ ರಾಜರಿದ್ದಾರೆ. ಆದರೆ ತಾರುಣ್ಯದ ಸಮಯದಲ್ಲಿಯೇ, ಯಾರ ಸೇವೆಯನ್ನು ಮಾಡದೆಯೇ ಇಂಥ ಅತ್ಯಪೂರ್ವ ಯೋಗಶಕ್ತಿಯನ್ನು ಪ್ರದರ್ಶಿಸಿದ ರಾಜ ಒಬ್ಬನೇ ಅದು ಶ್ರೀರಾಮಚಂದ್ರ.

ಎಲ್ಲ ರಾಜರೂ ರಾಜನೀತಿಯನ್ನು ಬಲ್ಲವರೇ. ಚ ತು ತಪ್ಪದೇ ಅನುಸರಿಸಿದವರೇ. ಶತ್ರುವನ್ನು, ಶತ್ರುವಿನ ಸಂಬಂಯನ್ನು , ಶತ್ರುವಿನ ಪಾಳೆಯದಲ್ಲಿದ್ದು ಬಂದವನನ್ನು ಸರ್ವಥಾ ನಂಬಬಾರದು ಎಂಬ ತತ್ವವನ್ನು ಪಾಲಿಸಿದವರೇ. ಶತ್ರುವನ್ನು ಕೊಂದ ಬಳಿಕ ಆ ರಾಜ್ಯದಲ್ಲಿ ತನ್ನ ಮಗನನ್ನೋ, ಸಂಬಂಯನ್ನೋ ರಾಜನನ್ನಾಗಿಸಿದವರೇ. ಆದರೆ ರಾಮಚಂದ್ರ ಶತ್ರುಪಾಳೆಯದಿಂದ ಬಂದ ಶತ್ರುವಿನ ತಮ್ಮ ವಿಭೀಷಣನನ್ನು ತನ್ನವನನ್ನಾಗಿಸಿಕೊಂಡ. ರಾವಣನನ್ನು ಕೊಂದ ಬಳಿಕ ವಿಭೀಷಣನನ್ನೇ ರಾಜನನ್ನಾಗಿಸಿದ.

ಎಲ್ಲ ರಾಜರೂ ಪ್ರಜೆಗಳನ್ನು ಪಾಲಿಸುತ್ತಾರೆ. ಆದರೆ ಭಗವಂತ ಪ್ರಜೆಗಳನ್ನಷ್ಟೇ ಅಲ್ಲ, ಅವರ ಆಯುಷ್ಯ, ಆರೋಗ್ಯ, ಬುದ್ದಿ, ಆಲೋಚನೆ ಎಲ್ಲವನ್ನೂ ನಿಯಮಿಸಿದ. ರಾಮನ ಆಡಳಿತದಲ್ಲಿ ಒಂದೇ ಒಂದು ಅಕಾಲಮೃತ್ಯು, ಅಪಮೃತ್ಯು ಯಾವುದೂ ಸಂಭವಿಸಲಿಲ್ಲ. ‘‘ಸರ್ವೇ ಸಹಸ್ರಾಯುಷಃ’’ ಎಲ್ಲರೂ ಪೂರ್ಣ ಒಂದು ಸಾವಿರ ಆಯುಷ್ಯವನ್ನೂ ರೋಗರಹಿತರಾಗಿ ಸರ್ವಸಮೃದ್ಧಿಯಿಂದ ಕಳೆದು ಪೂರ್ಣತೃಪ್ತಿಯಿಂದ ದೇಹತ್ಯಾಗವನ್ನು ಮಾಡುತ್ತಿದ್ದರು. ಎಲ್ಲರೂ ಸಜ್ಜನರಾಗಿಯೇ ಬದುಕಿದವರು. ಪರಮವೈಷ್ಣವರಾಗಿ ಬಾಳಿದವರು. ಈ ರಾಮರಾಜ್ಯವನ್ನು ಜಗತ್ತಿನ ಯಾವ ರಾಜನಿಗೂ ನೀಡಲು ಸಾಧ್ಯವಾಗಿಲ್ಲ, ಸಾಧ್ಯವಾಗುವದೂ ಇಲ್ಲ.

ಪ್ರತಿಯೊಬ್ಬ ರಾಜ ತನ್ನ ಜೀವಿತದ ಅವಯಲ್ಲಿ ಅತೀವೃಷ್ಟಿ ಅನಾವೃಷ್ಟಿಗಳ ಸಂಕಷ್ಟವನ್ನು ಎದುರಿಸಿದವನೇ. ಪ್ರಜೆಗಳ ದಾರಿದ್ರ್ಯವನ್ನು ಪೂರ್ಣವಾಗಿ ನಿವಾರಿಸಲಿಕ್ಕಾಗದೇ ಪರಿತಪಿಸಿದವನೇ. ರಾಮನ ರಾಜ್ಯದಲ್ಲಿ ಎಂದಿಗೂ ಅತೀವೃಷ್ಟಿಯಾಗಲಿಲ್ಲ. ಅನಾವೃಷ್ಟಿಯ ಬಾಧೆ ತಗುಲಲಿಲ್ಲ. ಗೋವುಗಳು ಹಾಲನ್ನು ನೀಡದಿರಲಿಲ್ಲ. ಒಟ್ಟಾರೆ ರಾಮನ ರಾಜ್ಯದಲ್ಲಿ ಸಕಲವೂ ಸಮೃದ್ಧವಾಗಿತ್ತು. ಪರಿಶುದ್ದವಾಗಿತ್ತು.
ಅಕಾರ ಬಂದಾಕ್ಷಣ ಎಲ್ಲ ರಾಜರೂ ಭೋಗಾಸಕ್ತರಾದವರೇ. ಅನೇಕ ಬಾರಿ ನಿಷಿದ್ಧಭೋಗಗಳನ್ನೂ ಅನುಭವಿಸಿದವರೇ. ಆದರೆ ಶ್ರೀರಾಮಚಂದ್ರ ಮಾತ್ರ ಈ ಭೂಮಂಡಲ ಕಂಡ ಸರ್ವೋತ್ತಮ ಪರಾಕ್ರಮಿ, ಸುಂದರ ರಾಜನಾದರೂ ಸೀತೆಯನ್ನು ಹೊರತು ಪಡಿಸಿ ಮತ್ತೊಬ್ಬ ಹೆಣ್ಣನ್ನು ಕಣ್ಣೆತ್ತಿಯೂ ನೋಡಲಿಲ್ಲ. ಮತ್ತು ಆಡಳಿತದ ಕಾರ್ಯಗಳಲ್ಲಿ ಮರೆತು ಹೆಂಡತಿಯನ್ನು ಕಡೆಗಣಿಸಲಿಲ್ಲ. ಯಾರೂ ಅನುಭವಿಸಲಿಕ್ಕಾದಷ್ಟು ಸುಖವನ್ನು ಅವಳಿಗೆ ರಾಮಚಂದ್ರ ನೀಡಿದ, ತಾನೂ ಅನಂತವಾದ ಪೂರ್ಣವಾದ ಸುಖವನ್ನು ಅನುಭವಿಸಿದ.

ಇನ್ನು ಭೃತ್ಯವಾತ್ಸಲ್ಯದಲ್ಲಿ, ಭ್ರಾತೃವಾತ್ಸಲ್ಯದಲ್ಲಿ, ಪ್ರಜಾವಾತ್ಸಲ್ಯದ್ಲಲ್ಲಿ ರಾಮನ ಉತ್ತಮತೆಯನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಲೋಕಪ್ರಸಿದ್ಧವಾದದ್ದು. ನಾಯಿ ಮತ್ತು ಗೂಬೆಗಳಿಗೆ ನ್ಯಾಯ ಒದಗಿಸಿದ ಕಥೆಗಳಿಂದ ಅವನ ರಾಜ್ಯದಲ್ಲಿ ಪ್ರಾಣಿಗಳಿಗೂ ಎಂಥಹ ಗೌರವವಿತ್ತು, ನ್ಯಾಯ ದೊರೆಯುತ್ತಿತ್ತುಎಂದು ತಿಳಿಯಲ್ಪಡುತ್ತದೆ. ಪ್ರಜಾವತ್ಸಲರಾದ ನೂರಾರು ರಾಜರು ಇತಿಹಾಸದಲ್ಲಿ ಆಗಿಹೋಗಿದ್ದಾರೆ. ಪ್ರಾಣಿವತ್ಸಲನಾದ, ವೃಕ್ಷಗಳಿಗೆ ಪ್ರೀತಿಪಾತ್ರನಾಗಿ ಬದುಕಿದ, ಇರುವೆ, ಚಿಟ್ಟೆಗಳಂತಹ ಕೀಟಗಳಿಗೂ ಪ್ರಿಯನಾಗಿ ಭೂಮಿಯನ್ನು ಆಳಿದ ರಾಜನೊಬ್ಬನೇ. ಅದು ಶ್ರೀರಾಮಚಂದ್ರ.

ಹೀಗೆ ಪರಮಾತ್ಮ ಕೇವಲ ಜ್ಞಾನ ಆನಂದಾದಿ ಗುಣಗಳಿಂದಷ್ಟೇ ಹಿರಿಯನಲ್ಲ. ರಾಜನಲ್ಲಿ ಇರಬೇಕಾದ ಸಕಲ ಸದ್ಗುಣಗಳನ್ನು ಅತಿಶಯಿತವಾಗಿ ಹೊಂದಿದ ಸರ್ವಶ್ರೇಷ್ಠ ರಾಜ ಎಂಬ ಅನುಸಂಧಾನವನ್ನು ಕನಕದಾಸರು ಇಲ್ಲಿ ರಘುಕುಲವರ್ಯ ಎಂಬ ಶಬ್ದದಿಂದ ಮಾಡುತ್ತಿದ್ದಾರೆ. ಈ ಎಲ್ಲ ಗುಣಗಳನ್ನು ಅನುಸಂಧಾನ ಮಾಡುವದಕ್ಕಾಗಿಯೇ ದಾಸರು ರಾಮಚಂದ್ರ, ದಾಶರಥಿ ಎಂಬ ಶಬ್ದಗಳನ್ನು ಬಳಸದೆ ರಘುಕುಲವರ್ಯ ಎಂಬ ಶಬ್ದವನ್ನು ಬಳಸಿದ್ದಾರೆ. ಇತಿಹಾಸದಲ್ಲಿ ಉತ್ತಮೋತ್ತಮರಾಜರಲ್ಲಿನ ಬಹುಪಾಲು ರಾಜರು ರಘುಕುಲಕ್ಕೆ ಸೇರಿದವರು. ಸೂರ್ಯವಂಶಕ್ಕೆ ಕಳಂಕ ತರುವಂತಹ ಒಬ್ಬನೇ ರಾಜನೂ ಆ ವಂಶದಲ್ಲಿ ಆಗಲಿಲ್ಲ. ಅಂತಹ ಸರ್ವಶ್ರೇಷ್ಠ ವಂಶದ ಸಕಲರಾಜರ ಮಧ್ಯದಲ್ಲಿಯೇ ಶ್ರೀರಾಮಚಂದ್ರ ವರ್ಯನಾದವನು ಅರ್ಥಾತ್ ಶ್ರೇಷ್ಠನಾದವನು.

ಹೀಗೆ ರಾಜಪದವಿಗೆ ಯೋಗ್ಯವಾದ ಸಕಲಗುಣಗಳಲ್ಲಿಯೂ ಪರಮಾತ್ಮ ಸರ್ವೋತ್ತಮನಾದವನು, ಭಗವಂತ ರಾಜನಾಗಿ ಬರಲಿ, ಗೋವಳನಾಗಿ ಬರಲಿ, ಬ್ರಾಹ್ಮಣನಾಗಿ ಬರಲಿ, ಋಷಿಯಾಗಿ ಬರಲಿ ಅವನಿಗೆ ಸಮಾನರಾದವರು ಅಥವಾ ಅವನಿಗಿಂತ ಉತ್ತಮರಾದವರು ಈ ಜಗತ್ತಿನಲ್ಲಿ ಇಲ್ಲ ಎಂಬ ಸರ್ವವಿಲಕ್ಷಣತ್ವ ಎಂಬ ಶ್ರೀಮದಾಚಾರ್ಯರು ಹೇಳಿಕೊಟ್ಟ ಭಗವಂತನ ಸರ್ವೋತ್ತಮಗುಣವನ್ನು ದಾಸರಾಯರು ಇಲ್ಲಿ ಅನುಸಂಧಾನಮಾಡುತ್ತಿದ್ದಾರೆ.

ಹೀಗೆ ಪರಮಾತ್ಮನನ್ನು ಲಕ್ಷ್ಮೀಪತಿ ಮತ್ತು ಸರ್ವವಿಲಕ್ಷಣ ಎಂದು ಚಿಂತಿಸಿದ ದಾಸರಾಯರು ಭಗವಂತನನ್ನು ಗುರ್ವಂತರ್ಗತನನ್ನಾಗಿ ಗುರುಪ್ರಿಯನನ್ನಾಗಿ ‘‘ಭೂಸುರಪ್ರಿಯ’’ ಎಂಬ ಶಬ್ದದಿಂದ ಸ್ಮರಿಸುತ್ತಾರೆ. ಭೂಸುರರು ಎಂದರೆ ಬ್ರಾಹ್ಮಣರು. ಬ್ರಾಹ್ಮಣರಿಗೆ ಪ್ರಿಯನಾದವನು ಎಂದರ್ಥ.

ಕನಕದಾಸರು ಜನ್ಮತಃ ಶೂದ್ರರು. ಶ್ರೀಮದಾಚಾರ್ಯರು ಶೂದ್ರರು ಯಾವ ರೀತಿಯಲ್ಲಿ ಬದುಕಬೇಕೆಂದು ತಿಳಿಸಿದ್ದಾರೆಯೋ ಆ ಕ್ರಮವನ್ನು ಶ್ರೀವ್ಯಾಸತೀರ್ಥರಿಂದ ತಿಳಿದು ಅದರಂತೆಯೇ ಬದುಕಿದವರು. ಶ್ರೀ ವ್ಯಾಸತೀರ್ಥರು, ಶ್ರೀವಾದಿರಾಜರು, ಶ್ರೀಪುರಂದರದಾಸರಂತಹ ಮಹನೀಯರೂ ಸಹಿತ ಶ್ರೀಮದಾಚಾರ್ಯರು ಭಗವದ್ಭಕ್ತರಾದ ಶೂದ್ರರನ್ನು ಯಾವ ರೀತಿ ಆದರ ಮಾಡಬೇಕೆಂದು ತಿಳಿಸಿದ್ದಾರೆಯೋ ಅದೇ ಕ್ರಮದಲ್ಲಿ ಪರಿಪೂರ್ಣ ಪ್ರೇಮದಿಂದ ಆದರದಿಂದ ಕನಕದಾಸರನ್ನು ನಡೆಸಿಕೊಂಡವರು. ಈ ಮಹನೀಯರೆಲ್ಲರ ಸಾಂಗತ್ಯದ ಕಥೆಗಳು ಇಂದಿಗೂ ಜನಜನಿತವಾಗಿವೆ. ಹೀಗೆ ಕನಕದಾಸರು ಶೂದ್ರರಾದ್ದರಿಂದ ತಮ್ಮ ಶೂದ್ರಧರ್ಮವನ್ನು ಅತ್ಯುತ್ಕೃಷ್ಟವಾಗಿ ಪಾಲಿಸಲೋಸುಗ ಭಗವಂತನನ್ನು ಭೂಸುರಪ್ರಿಯ ಎಂದು ಚಿಂತನೆ ಮಾಡುತ್ತಾರೆ. ಶೂದ್ರವರ್ಣದವರಿಗೆ ಬ್ರಾಹ್ಮಣರೇ ತತ್ವೋಪದೇಶಮಾಡುವ ಗುರುಗಳು. ಗುರುಗಳಲ್ಲಿಯೇ ಭಗವಂತನ ಚಿಂತನೆ ಮಾಡಬೇಕಾದ್ದು ಕರ್ತವ್ಯ. ಹೀಗಾಗಿ ಕನಕದಾಸರು ತಮಗೆ ಗುರುಸ್ಥಾನೀಯರಾದ ಶ್ರೇಷ್ಠ ಬ್ರಾಹ್ಮಣರಲ್ಲಿ ಭಗವಂತನ ಚಿಂತನೆಯನ್ನು ಮಾಡುತ್ತಿದ್ದಾರೆ.

ಗುರುಗಳೆಂದು ಕೇವಲ ಶ್ರೀವ್ಯಾಸತೀರ್ಥರನ್ನೇ ಉಲ್ಲೇಖಿಸಿ ಅವರಲ್ಲಿ ಭಗವಂತನ ಚಿಂತನೆಯನ್ನು ಮಾಡಬಹುದಾದರೂ ಕನಕದಾಸರು ಒಟ್ಟಾರೆ ಸಕಲ ಬ್ರಾಹ್ಮಣರ ಅಂತರ್ಯಾಮಿಯಾದ ಭಗವಂತನನ್ನು ಸ್ಮರಿಸುತ್ತಾರೆ. ಅದಕ್ಕೊಂದು ಮಹತ್ತ್ವದ ಕಾರಣವಿದೆ. ಮೊದಲನೆಯದು ತುಂಬ ಶ್ರೇಷ್ಠರಾದ ಗುರುಗಳು ನಮಗೆ ದೊರೆತಾಗ ಆ ಗುರುಗಳನ್ನು ಮಾತ್ರ ಭಜಿಸಿ, ಆ ಗುರುಗಳಿಗಿಂತ ಕಡಿಮೆಯವರಾದ ಆದರೆ ತನಗಿಂತಲೂ ಉತ್ತಮರಾದ ವೈಷ್ಣವರನ್ನು ಗೌರವಿಸದೇ ಇರಬಾರದು. ತಿರಸ್ಕಾರವನ್ನಂತೂ ಮಾಡಲೇ ಬಾರದು. ಇದೊಂದು ಮಹಾವೈಷ್ಣವಧರ್ಮ. ತನಗಿಂತಲೂ ಗುಣಗಳಲ್ಲಿ ಅಧಮನಾದ ವೈಷ್ಣವನನ್ನು ತಿರಸ್ಕರಿಸಿದರೇ ಮನುಷ್ಯ ವೈಷ್ಣವಧರ್ಮದಿಂದ ಚ್ಯುತನಾಗುತ್ತಾನೆ, ದುರ್ವಾಸರು ಅಂಬರೀಷನನ್ನು ಅವಮಾನಿಸಿ ಕ್ಲೇಶಕ್ಕೊಳಗಾದ ಹಾಗೆ. ಇನ್ನು ಗುರುಗಳಿಗಿಂತ ಕಡಿಮೆಯವರಾಗಿದ್ದಾರೆ ಎಂಬ ಕಾರಣಕ್ಕೆ ತನಗಿಂತ ಉತ್ತಮರನ್ನು ತಿರಸ್ಕರಿಸಿಬಿಟ್ಟರಂತೂ ಘೋರ ಅನರ್ಥವಾಗಿಬಿಡುತ್ತದೆ. ಹೀಗಾಗಿ ಶ್ರೀವ್ಯಾಸತೀರ್ಥರಂತಹ ಉತ್ತಮಗುರುಗಳು ತಮಗೆ ದೊರೆತಿದ್ದರೂ ಭಗವಂತ ಮಾಡಿದ ವ್ಯವಸ್ಥೆಯಂತೆ ತಮಗಿಂತ ಉತ್ತಮರಾದ ಸಕಲ ಸದ್ವೈಷ್ಣವ ಬ್ರಾಹ್ಮಣರಲ್ಲಿ ಕನಕದಾಸರು ಶ್ರೀಹರಿಯ ಚಿಂತನೆಯನ್ನು ಮಾಡುತ್ತಿದ್ದಾರೆ. ಶಾಸ್ತ್ರೋಕ್ತವಾದ ಈ ಚಿಂತನೆಯಲ್ಲಿ ದಾಸರಾಯರಿಗೆ ಎಷ್ಟು ವಿಶ್ವಾಸವೆಂದರೆ, ಈ ರೀತಿ ಸಮಸ್ತ ಭಗವದ್ಭಕ್ತರಲ್ಲಿ ಆದರ ಗೌರವವನ್ನು ಮಾಡದವರಿಗೆ ಸದ್ಗತಿಯಾಗಲು ಸಾಧ್ಯವೇ ಇಲ್ಲ ಎಂದು ಮುಂದೆ ಅತಿಖಚಿತವಾದ ಧ್ವನಿಯಲ್ಲಿ ಅವರು ಉದ್ಘೋಷಿಸುತ್ತಾರೆ ‘‘ಭಾಗವತರಾದೆಲ್ಲರಿಗೆ ವಂದಿಸದ ಕುಜನರಿಗಿಲ್ಲ ಸದ್ಗತಿ’’(ಶ್ಲೋಕ ೪೭) ಎಂದು.

ಹೀಗೆ ಕನಕದಾಸರು ಭಗವಂತನನ್ನು ಲಕ್ಷ್ಮೀಪತಿ, ಭಾಗವತೋತ್ತಮರಿಂದ ಉಪಾಸಿತ, ಭಕ್ತವತ್ಸಲ, ಮೂಲ ಅವತಾರರೂಪಗಳಲ್ಲಿಯೂ ಅಪ್ರಾಕೃತ ಶರೀರದವನು ಎಂದು ಚಿಂತಿಸುವದರ ಮೂಲಕ ತಾವು ತಮ್ಮ ಕೃತಿಯಲ್ಲಿ ಸ್ತುತಿಸ ಹೊರಟಿರುವ ಶ್ರೀಮನ್ನಾರಾಯಣ ಉಳಿದ ಯಾವ ದೇವತೆಯೂ ಹೊಂದಿರದ ಮಹಾ ವೈಶಿಷ್ಟ್ಯವನ್ನು ಹೊಂದಿದ್ದಾನೆ, ಅದಕ್ಕಾಗಿಯೇ ಅವನ ಸ್ತುತಿರೂಪವಾದ ಈ ಕೃತಿಯನ್ನು ರಚಿಸುತ್ತಿದ್ದೇನೆ ಎಂಬ ಧ್ವನಿಯನ್ನು ಸೂಚಿಸಿದರು.

ಬಳಿಕ, ಭಗವಂತ ಇಷ್ಟೆಲ್ಲ ಗುಣಗಳನ್ನು ಹೊಂದಿದ್ದರೂ ಕಾವ್ಯನಾಯಕರಾಗುವ ಅರ್ಹತೆಯುಳ್ಳ ಇತರ ರಾಜರಿಗಿಂತ ಪೂರ್ಣ ವಿಲಕ್ಷಣನಲ್ಲ ಎಂಬ ಆಕ್ಷೇಪಕ್ಕೆ ಉತ್ತರವಾಗಿ ‘‘ರಾಯ ರಘುಕುಲವರ್ಯ’’ ಎಂಬ ಶಬ್ದಗಳನ್ನು ಬಳಸಿ, ರಘುಕುಲದಲ್ಲಿ ಶ್ರೀರಾಮಚಂದ್ರನಾಗಿ ಅವತರಿಸಿದ ಶ್ರೀಮನ್ನಾರಾಯಣನಲ್ಲಿ ಕಾವ್ಯನಾಯಕನಾಗುವ ಎಲ್ಲ ಗುಣಗಳೂ ಅತ್ಯತಿಶಯವಾಗಿ, ನಿರವಕವಾಗಿ ಇವೆ. ಆದ್ದರಿಂದ ಅವನ ಕುರಿತು ಕೃತಿ ರಚಿಸುವದೇ ಶ್ರೇಷ್ಠ ಎಂಬ ತತ್ವವನ್ನು ತಿಳಿಸಿದರು.

ಹೀಗೆ ಭಕ್ತವತ್ಸಲತೆ ಮುಂತಾದ ಗುಣಗಳಿಂದ ಶ್ರೀಹರಿ ಮಹಾವೈಶಿಷ್ಟ್ಯಯುಕ್ತನಾದವನು, ಸ್ತುತಿಯೋಗ್ಯವಾದ ಅನಂತಗುಣಗಳಿಂದ ಪರಿಪೂರ್ಣನಾದ್ದರಿಂದ ಗ್ರಂಥವಿಷಯನಾಗಲು ಅಕೃತನಾದವನು ಎನ್ನುವ ಮಾತನ್ನು ತುಂಬ ಸೊಗಸಾಗಿ ನಿರೂಪಿಸಿ ಶ್ರೀಮನ್ನಾರಾಯಣ ನನಗೆ ಅತ್ಯಂತ ಪ್ರಿಯನಾದ ಇಷ್ಟದೈವವೂ ಹೌದು, ಅದಕ್ಕಾಗಿ ಅವನ ಮಾಹಾತ್ಮ್ಯವರ್ಣನದಲ್ಲಿ ತೊಡಗಿದ್ದೇನೆ ಎಂಬ ಮಾತನ್ನು ‘‘ವರಪುರನಿಲಯ ಚೆನ್ನಿಗರಾಯ’’ ಎಂಬ ಶಬ್ದಗಳಿಂದ ತಿಳಿಸುತ್ತಿದ್ದಾರೆ.

ಕಾಗಿನೆಲೆಯ ಆದಿಕೇಶವ ನನ್ನ ಇಷ್ಟದೈವ. ಅದೇ ಕೇಶವ ಭಗವಂತನ ಭಗವದ್ಭಕ್ತರ ಸನ್ನಿಧಾನದಿಂದ ಶ್ರೇಷ್ಠವಾದ ನಗರಿ ಬೇಲೂರಿನಲ್ಲಿ ಚೆನ್ನಿಗರಾಯನಾಗಿ ಚನ್ನಕೇಶವನಾಗಿ ಕಂಗೊಳಿಸುತ್ತಿದ್ದಾನೆ. ಅವನ ಗುಣಮಾಹಾತ್ಮ್ಯವರ್ಣನರೂಪವಾದ ಕೃತಿಯಿದು.

‘‘ಶ್ರೀಹರಿಯ ಸಕಲ ರೂಪಗಳೂ ಪರಸ್ಪರ ಅಭಿನ್ನ. ಅವನ ಯಾವುದೇ ರೂಪದಲ್ಲಿ, ಯಾವ ರೀತಿಯಲ್ಲಿಯೂ ಎಳ್ಳಿನಷ್ಟು ವ್ಯತ್ಯಾಸವೂ ಇಲ್ಲ’’ ಎಂಬ ಶ್ರೀಮಧ್ವಸಿದ್ಧಾಂತದ ಮಹೋನ್ನತ ಪ್ರಮೇಯವನ್ನು ಅನುಸಂಧಾನ ಮಾಡುತ್ತಾ ದಾಸರಾಯರು ತಮ್ಮ ಆದಿಕೇಶವನನ್ನು ವರಪುರ ಬೇಲೂರಿನ ಚೆನ್ನಕೇಶವನನ್ನಾಗಿ ಸ್ತುತಿಸುತ್ತಾರೆ.

ಶ್ರೀಕನಕದಾಸರು ತಮ್ಮ ಕಡೆಯ ಕಾಲಕ್ಕೆ ಎಲ್ಲ ಕ್ಷೇತ್ರಗಳನ್ನು ಸಂಚರಿಸಿ ತಮ್ಮ ಸಾಧನಭೂಮಿಯಾದ ಕಾಗಿನೆಲೆಗೆ ಹಿಂತಿರುಗುತ್ತಾರೆ. ಯಾತ್ರೆಯ ಸಂದರ್ಭದಲ್ಲಿ ಬೇಲೂರಿಗೆ ಬಂದಾಗ ಅಲ್ಲಿಯೇ ಈ ಹರಿಭಕ್ತಿಸಾರವನ್ನು ರಚಿಸುತ್ತಾರೆ. ಹೀಗಾಗಿ ಚೆನ್ನಕೇಶವನ ಸ್ತುತಿಯೊಂದಿಗೇ ಗ್ರಂಥವನ್ನು ಆರಂಭಿಸಿ ‘‘ಚೆನ್ನಿಗರಾಯ ಸುಖಗಳನೀವನನವರತ’’ ‘‘ಚೆನ್ನಿಗರಾಯ ರಕ್ಷಿಸು ನಮ್ಮನನವರತ’’ ಎಂದು ಕೃತಿಯ ಉಪಾಂತ್ಯ ಶ್ಲೋಕಗಳಲ್ಲಿಯೂ ಸ್ತುತಿಸುತ್ತಾರೆ. ತಮ್ಮ ಗುರುಗಳಾದ ಶ್ರೀ ವ್ಯಾಸತೀರ್ಥರು ಶ್ರೀರಂಗದಲ್ಲಿದ್ದು ತಾತ್ಪರ್ಯಚಂದ್ರಿಕಾಗ್ರಂಥವನ್ನು ರಚಿಸುವಾಗ ‘‘ನಮೋನಮೋ ಭಕ್ತಮುಕ್ತಿದಾಯಿನೇ ಶೇಷಶಾಯಿನೇ’’ ಎಂದು ಶೇಷಶಾಯಿಯಾದ ರಂಗನಾಥನನ್ನು ಸ್ತುತಿಸಿದ ಹಾಗೆ.

ಸುರಪುರನಿಲಯ ಎಂಬ ಪಾಠ ತಪ್ಪು. ಹಸ್ತಪ್ರತಿಗಳಲ್ಲಿ ‘‘ವರಪುರನಿಲಯ’’ ಎಂದೇ ಪಾಠವಿದೆ. ಮುಂದೆ ೧೦೪ನೆಯ ಶ್ಲೋಕದಲ್ಲಿ ‘‘ಆದಿಮೂರುತಿ ವರಪುರಾಪನೊಲಿವನನವರತ’’ ಎಂದೇ ದಾಸರಾಯರು ಸ್ತುತಿಸಿದ್ದಾರೆ. ಆ ನುಡಿಗೆ ಎಲ್ಲಿಯೂ ಪಾಠಾಂತರ ದೊರೆಯುವದಿಲ್ಲ. ಪ್ರತಿಯೊಬ್ಬರೂ ಸರಿಯಾಗಿಯೇ ಮುದ್ರಿಸಿದ್ದಾರೆ. ಹೀಗಾಗಿ ವರಪುರನಿಲಯ ಎಂಬ ಪಾಠವೇ ಸರಿ.

ಮತ್ತು ಚೆನ್ನಿಗರಾಯನ ಗುಡಿಯಿರುವ ‘‘ಸುರಪುರ’’ ಎಂಬ ಹೆಸರಿನ ಊರು ಎಲ್ಲಿಯೂ ಇಲ್ಲ. ಗುಲ್ಬರ್ಗಾಪ್ರಾಂತದಲ್ಲಿ ಸುರಪುರ ಎಂಬ ಸಣ್ಣ ರಾಜಸಂಸ್ಥಾನವಿತ್ತು. ಅದು ದಾಸರಾಯರು ಕಾಲವಾಗಿ ಎರಡು ಶತಮಾನಗಳ ನಂತರ ಹುಟ್ಟಿಕೊಂಡದ್ದು. ಅದಕ್ಕೂ ದಾಸರಿಗೂ ಯಾವ ಸಂಬಂಧವೂ ಇಲ್ಲ. ಮತ್ತು ಅಲ್ಲಿ ಚೆನ್ನಿಗರಾಯನ ಮಂದಿರವೂ ಇಲ್ಲ.

ಹೀಗೆ ಬೇಲೂರಿನ ಚೆನ್ನಕೇಶವನಲ್ಲಿ ತಮ್ಮ ಇಷ್ಟದೈವ ಕಾಗಿನೆಲೆಯ ಆದಿಕೇಶವನ ಅಭೇದವನ್ನು ಚಿಂತಿಸುತ್ತಿರುವ ದಾಸರು ಆ ಕೇಶವರೂಪಿಯಾದ ಭಗವಂತ ತಮ್ಮ ಮೇಲೆ ಮಾಡಿದ ಭೂರಿ ಅನುಗ್ರಹವನ್ನು ‘‘ಚತುರೋಪಾಯ’’ ಎಂಬ ಶಬ್ದದಿಂದ ಸ್ಮರಿಸುತ್ತಾರೆ.

ಶ್ರೀಹರಿಯ ಚರಣದಾಸ್ಯದ ದೀಕ್ಷೆಯನ್ನು ಪಡೆಯಲಿಕ್ಕಿಂತ ಮುಂಚೆ ಕನಕದಾಸರು ಒಂದು ಪ್ರಾಂತದ ಅಧಿಪತಿಗಳಾಗಿದ್ದವರು. ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದವರು. ಅವರಲ್ಲಿ ಸ್ವಾಭಾವಿಕವಾಗಿ ಶೌರ್ಯ ಪರಾಕ್ರಮಗಳು ಮನೆ ಮಾಡಿದ್ದವು. ‘‘ಕನಕ ದಳದಲಿ ಬಂದು ಕಲೆತನೆಂದರೆ ಫೌಜು ಕನಕುಮನಕಾಗುವದು’’ ಎಂದು ತಮ್ಮ ಹಿಂದಿನ ಪರಾಕ್ರಮವನ್ನು ಒಂದು ಪದ್ಯದಲ್ಲಿ ದಾಖಲಿಸಿಟ್ಟಿದ್ದಾರೆ. ಕಾಳಗ ಮಾಡುತ್ತಿದ್ದ ಸೈನ್ಯದ ಮಧ್ಯಕ್ಕೆ ವೀರಧ್ವನಿ ಮಾಡುತ್ತಾ ಕನಕನಾಯಕ ನುಗ್ಗಿದರೆ ಶತ್ರುಸೈನಿಕರು ಕಾಳಿನಿಂದ ಬೇರ್ಪಟ್ಟ ಊಬಿನಂತೆ, ಭತ್ತದಿಂದ ಅಕ್ಕಿಯನ್ನು ಹೊರತೆಗೆದಾಗ ಉಳಿಯುವ ನೆಲ್ಲಿನಂತೆ, ಮೈಯಲ್ಲಿನ ಕಸುವನ್ನೆಲ್ಲಾ ಕಳೆದುಕೊಂಡು ಮಂಕಾಗಿಬಿಡುತ್ತಿದ್ದರು. (ಕಂಕು ಎಂದರೆ ಕಾಳು ತೆಗೆದ ಮೇಲೆ ಉಳಿಯುವ ಊಬು. ಕಂಕು ಎನ್ನುವದನ್ನೇ ಕನಕು, ಮಂಕು ಎನ್ನುವದನ್ನೇ ಮನಕು ಎಂದು ದಾಸರು ಬಳಸಿದ್ದಾರೆ.) ಇಂಥಾ ಶೌರ್ಯವಿದ್ದ ಮೇಲೆ ದರ್ಪ ಗರ್ವಗಳೂ ಸಹಜ. ಅದನ್ನೂ ದಾಸರಾಯರು ಹೇಳಿಕೊಳ್ಳುತ್ತಾರೆ ‘‘ಧ್ವನಿಮುಖಾರ್ಭಟ ಮನಸಿಗಾನಂದವಿಪ್ಪ ದುರ್ಗುಣವೆಲ್ಲ ಕಳೆದೆ ಹರಿಯೇ’’ ಎಂದು.

ಪಾರಂಪರಿಕವಾಗಿ ಬಂದಿದ್ದ ದೊರೆತನ, ದೇಹವನ್ನು ಹುರಿಗಟ್ಟಿಸಿ ತಂದುಕೊಂಡಿದ್ದ ಬೆರಗಿನ ಆಳ್ತನ, ಅದಕ್ಕೆ ಕಲಶವಿಟ್ಟಂತೆ ಸ್ವಾಭಾವಿಕವಾಗಿದ್ದ ಅಪ್ರತಿಮ ಧೈರ್ಯ ಪರಾಕ್ರಮಗಳು ಇವೆಲ್ಲದರ ಫಲವಾಗಿ ದೊರೆತಿದ್ದ ಆಳರಸರ ಪ್ರೀತಿ ವಾತ್ಸಲ್ಯ ವಿಶ್ವಾಸಗಳು, ಈ ಎಲ್ಲದರಿಂದ ಮೆರೆಯುತ್ತಿದ್ದ ಕನಕನಾಯಕನನ್ನು ಶ್ರೀಹರಿ ಅತೀ ಚತುರತೆಯಿಂದ ‘‘ನಿನ್ನ ಈ ಪ್ರತಿಯೊಂದು ಗುಣವೂ ಯಾತಕ್ಕೂ ಉಪಯೋಗಕ್ಕೆ ಬಾರದ ವಸ್ತು’’ ಎಂಬುದನ್ನು ಮನಗಾಣಿಸಿ ತನ್ನ ದಾಸನನ್ನಾಗಿ ಮಾಡಿಕೊಳ್ಳುತ್ತಾನೆ. ಕನಕನಾಯಕ ಕನಕದಾಸರಾಗಿ ಬದಲಾಗಲಿಕ್ಕಾಗಿ ನಡೆದ ಘಟನೆಗಳೇ ತುಂಬ ರೋಚಕ. ಶ್ರೀಹರಿ ಎಷ್ಟು ಚತುರತೆಯಿಂದ, ಎಷ್ಟು ಕಕ್ಕುಲತೆಯಿಂದ ಸಂಸಾರದ ಮತ್ತು ಸಾಂಸಾರಿಕ ಪದಾರ್ಥಗಳ ನಶ್ವರತೆಯನ್ನು ತಮಗೆ ಮನಗಾಣಿಸಿದ ಎಂಬುದನ್ನು ದಾಸರೇ ಅನೇಕ ಪದ್ಯಗಳಲ್ಲಿ ಹೇಳಿಕೊಂಡಿದ್ದಾರೆ. ನೂರಾರು ಯೋಧರ ಜತೆಯಲ್ಲಿ ಕಾದಾಡಿ ಗೆದ್ದು ಸಾವಿರಾರು ಜನರನ್ನು ಕಾಪಿಡುವಷ್ಟು ತೋಳ್ಬಲವಿದ್ದ ತಮಗೆ, ತಮ್ಮನ್ನೇ ಕಾಪಾಡಿಕೊಳ್ಳಲು ಅಸಾಧ್ಯವಾಗುವ ಹಾಗೆ ಮಾಡಿದ, ದೇಹದಿಂದ ಪ್ರಾಣಪಕ್ಷಿ ಹಾರಿಹೋದರೂ ಮತ್ತೆ ಜೀವಪ್ರದಾನವನ್ನು ಮಾಡಿ ತಮಗೆ ತನ್ನ ಅಸ್ತಿತ್ವದ ಅನುಭವವನ್ನು ಮಾಡಿಸಿದ, ಯುದ್ಧಪ್ರಿಯನಾಗಿ, ಆಡಳಿತಾಸಕ್ತನಾಗಿ, ಲೋಕರತಿಯಲ್ಲಿ ಬಾಳುತ್ತಿದ್ದ ತಮ್ಮನ್ನು ತುಂಬ ವಿಚಿತ್ರರೀತಿಗಳಲ್ಲಿ ಅವೆಲ್ಲದರಿಂದ ಬಿಡಿಸಿದ, ಬಿಡಿಸಿ ವ್ಯಾಸತೀರ್ಥರ ದಾಸ್ಯವನ್ನು ಕೊಡಿಸಿದ, ಆ ಬಳಿಕ ವಿಧವಿಧವಾಗಿ ತಮ್ಮಿಂದ ಸ್ತುತನಾಗಿ, ಆರಾತನಾಗಿ, ಈ ದಿವಸ ತಮ್ಮಿಂದ ಈ ‘‘ಹರಿಭಕ್ತಿಸಾರ’’ ಎಂಬ ಅದ್ಭುತ ಕೃತಿಯನ್ನು ರಚಿಸಿಸುವ ಮೂಲಕ ತನ್ನ ಪೂಜೆಯನ್ನು ಮಾಡಿಸಿಕೊಳ್ಳುತ್ತಿರುವ ಆ ಕರುಣಾಳು ಕೇಶವನನ್ನು ಈ ಕೇಶವದಾಸರು ಪ್ರೇಮಪೂರ್ವಕವಾಗಿ ‘‘ಚತುರೋಪಾಯ’’ ಎಂದು ನೆನೆಯುತ್ತಿದ್ದಾರೆ.

ಶ್ರೀಹರಿಯ ಕಾರುಣ್ಯವನ್ನು ಸಾಕ್ಷಾತ್ತಾಗಿ ಮತ್ತು ನಿರಂತರವಾಗಿ ಅನುಭವಿಸಿದ ದಾಸರ ಈ ಉದ್ಗಾರದ ಹಿಂದೆ ಅದೆಷ್ಟು ಘಟನೆಗಳಿವಿಯೋ, ಅದರ ಅರ್ಥವ್ಯಾಪ್ತಿ ಅದೆಷ್ಟು ಹಿರಿದಾಗಿದೆಯೋ, ಬಲ್ಲವರಾರು ? ಭಾಗವತೋತ್ತಮರ ಮತ್ತು ಭಗವಂತನ ಮಧ್ಯೆ ನಡೆಯುವ ಅದ್ಭುತ ಲೀಲಾವ್ಯಾಪಾರಗಳನ್ನು ಪೂರ್ಣವಾಗಿ ತಿಳಿಯುವ ಅರ್ಹತೆಯಾದರೂ ನಮಗೆಲ್ಲಿಯದು ? ಈ ಚತುರೋಪಾಯ ಎಂಬ ಶಬ್ದವೇ ದಾಸರ ಅನುಭಾವ ಎಷ್ಟು ಆಳವಾದದ್ದು ಮತ್ತು ಮಹತ್ತಾದದ್ದು ಎನ್ನುವದನ್ನು ನಮಗೆ ಪರಿಚಯಿಸುತ್ತದೆ.

ಹೀಗೆ ಮೊದಲ ಶ್ಲೋಕದಲ್ಲಿಯೇ ಪರಮಾದ್ಭುತವಾಗಿ ಶ್ರೀಹರಿಯನ್ನು ಸ್ತುತಿಗೈದ ಕನಕದಾಸರು ಅವನಿಗೆ ಸರ್ವಾತ್ಮನಾ ಶರಣಾಗತರಾಗಿ ಸರ್ವಕಾಲದಲ್ಲಿಯೂ ನನ್ನನ್ನು ರಕ್ಷಿಸು ಎಂದು ಅನನ್ಯವಾಗಿ ಪ್ರಾರ್ಥಿಸುತ್ತಾರೆ. ಈ ಶರಣಾಗತಿಯ ಈ ಪ್ರಾರ್ಥನೆ ದಾಸರಾಯರಿಗೆ ಅದೆಷ್ಟು ಪ್ರಿಯವೆಂದರೆ ತಮ್ಮ ಹರಿಭಕ್ತಿಸಾರದ ಎಲ್ಲ ಪದ್ಯಗಳನ್ನು ಇದೇ ಪ್ರಾರ್ಥನೆಯಿಂದಲೇ ಮುಗಿಸುತ್ತಾರೆ. ಕಾರಣ, ಭಗವಂತ ನಮ್ಮನ್ನು ರಕ್ಷಿಸಿಯೇ ರಕ್ಷಿಸುತ್ತಾನೆ, ಎಂದಿಗೂ ಕೈ ಬಿಡುವದಿಲ್ಲ ಎಂಬ ವಿಶ್ವಾಸವೇ ಮೋಕ್ಷಪ್ರದ ಎಂದು ಶ್ರೀಮದಾಚಾರ್ಯರು ಗೀತಾತಾತ್ಪರ್ಯನಿರ್ಣಯದಲ್ಲಿ ತಿಳಿಸುತ್ತಾರೆ

‘‘ರಕ್ಷತೀತ್ಯೇವ ವಿಶ್ವಾಸಃ ತದೀಯೋಧಿಹಮಿತಿ ಸ್ಮೃತಿಃ |
ಶರಣಾಗತಿರೇಷಾ ಸ್ಯಾದ್ ವಿಷ್ಣೌ ಮೋಕ್ಷಫಲಪ್ರದಾ’’
ಎಂದು. ಈ ಕಾರಣದಿಂದ ಕನಕದಾಸರು ಈ ಚಿಂತನೆಯನ್ನು ಇಡಿಯ ಹರಿಭಕ್ತಿಸಾರದಲ್ಲಿ ಅನುಸ್ಯೂತವಾಗಿ ಮಾಡುತ್ತಾರೆ ॥ ೧ ॥

– ವಿಷ್ಣುದಾಸ ನಾಗೇಂದ್ರಾಚಾರ್ಯ



ಇವುಗಳೂ ನಿಮಗಿಷ್ಟವಾಗಬಹುದು

vishwanandini-020

ವಿಶ್ವನಂದಿನಿ ಲೇಖನ ಮಾಲೆ – 020

ಶ್ರೀಕನಕದಾಸರ ಹರಿಭಕ್ತಿಸಾರ ವಿಷ್ಣುದಾಸರ ಸಾರಾಮೃತವ್ಯಾಖ್ಯಾನದೊಂದಿಗೆ ಪದ್ಯ – ೨ ದೇವದೇವ ಜಗದ್ಭರಿತ ವಸು- ದೇವಸುತ ಜಗದೇಕನಾಥ ರ- ಮಾವಿನೋದಿತ ಸಜ್ಜನಾನತ …

Leave a Reply

Your email address will not be published. Required fields are marked *