ತತ್ವಸುರಭಿ
(ಶ್ರೀಮನ್ ಮಧ್ವಸಿದ್ಧಾಂತದ ಮಹೋನ್ನತತತ್ವಗಳನ್ನು ತಿಳಿಸುವ ವಿಶ್ವನಂದಿನಿಯ ಭಾಗ)
ಹದಿನಾರು ಕಲೆಗಳು
ಸಂಸಾರದಲ್ಲಿ ಬಿದ್ದಿರುವ ಜೀವನನ್ನು ಉದ್ದರಿಸಿ ಅವನಿಗೆ ಮೋಕ್ಷ ನೀಡುವ ಅಂತರ್ಯಾಮಿಯ ಹದಿನಾರು ಕಾರುಣ್ಯದ ಮುಖಗಳು.
ಬನ್ನಂಜೆ ಈ ಹದಿನಾರು ಕಲೆಗಳನ್ನು ಬೇಲಿಗಳು ಎಂದು ಕರೆಯುತ್ತಾರೆ, ಮತ್ತು ಅವನ್ನು ದಾಟಿದಾಗ ಹದಿನೇಳನೆಯ ಲಕ್ಷ್ಮೀದೇವಿ ಸಿಗುತ್ತಾಳೆ, ಹದಿನೆಂಟನೆಯವನು ಭಗವಂತ ಎಂದು ಹೇಳುತ್ತಾರೆ.
ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರ ಸಿದ್ಧಾಂತಕ್ಕೆ ವಿರುದ್ಧವಾದ ಮಾತುಗಳಿವು, ನಮ್ಮನ್ನು ತಮಸ್ಸಿಗೆ ಕರೆದೊಯ್ಯುವಂತಹ ಅಪಸಿದ್ಧಾಂತಗಳು.
ಈ ಷೋಡಶಕಲೆಗಳ ಬಗ್ಗೆ ಷಟ್ಪ್ರಶ್ನ ಉಪನಿಷತ್ತು, ಅದರ ಭಾಷ್ಯ ಮತ್ತು ಟೀಕಾಗ್ರಂಥಗಳಲ್ಲಿ ನಮಗೆ ನಿಖರವಾದ ಮಾಹಿತಿ ದೊರೆಯುತ್ತದೆ.
ಷೋಡಶಕಲಃ ಪುರುಷಃ (ಹದಿನಾರು ಕಲೆಗಳುಳ್ಳ ಪುರುಷ) ಎಂಬ ಉಪನಿಷತ್ತಿನ ಮಾತಿಗೆ ಶ್ರೀ ವಾದಿರಾಜರು ಹದಿನಾರು ಕಲೆಗಳನ್ನು ಸೃಷ್ಟಿಮಾಡಿ ತನ್ನ ಅಧೀನದಲ್ಲಿ ಇಟ್ಟುಕೊಳ್ಳುವ ಭಗವಂತ ಎಂದು ಅರ್ಥವನ್ನು ಹೇಳಿದ್ದಾರೆ. ಅಂದರೆ, ಹದಿನಾರು ಕಲೆಗಳುಳ್ಳವನು ಜೀವನಲ್ಲ, ಭಗವಂತ! ಅವನಿಗೆ ಇವು ಬೇಲಿಗಳು ಎಂದರೆ ಪರಮಾತ್ಮನಿಗೆ ಪ್ರತಿಬಂಧಕ ಎಂದಾಯಿತು. ಸ್ವತಂತ್ರನಾದ ಪರಮಾತ್ಮನನ್ನು ಬೇಲಿಗಳ ಮಧ್ಯದಲ್ಲಿ ಇದ್ದಾನೆ ಎಂದು ತಿಳಿಯುವದು ತಮಃಸಾಧನವಾದ ತಿಳುವಳಿಕೆ.
ಕಲಾ ಎನ್ನುವ ಶಬ್ದಕ್ಕೆ ಹದಿನಾರನೆಯ ಒಂದು ಅಂಶ ಎಂದರ್ಥ. ಅಂಶಗಳಲ್ಲಿ ಎರಡು ವಿಧ. ಅಭಿನ್ನವಾದ ಅಂಶ ಮತ್ತು ಭಿನ್ನವಾದ ಅಂಶ ಎಂದು. ಹಾಲಿನಲ್ಲಿ ಹಾಲು ಎಂಬ ದ್ರವ್ಯ, ಬಿಳಿ ಎಂಬ ಗುಣ, ರುಚಿ ಎಂಬ ಗುಣ ಎಂಬ ವಿಭಾಗಗಳು- ಅಂಶಗಳು ಇವೆ. ಇವು ಅಭಿನ್ನಾಂಶಗಳು. ಕಾರಣ ಹಾಲನ್ನು ಅದರ ರುಚಿ ಮತ್ತು ಬಣ್ಣ ಗಳಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಮರಕ್ಕೆ ಬೇರು, ಕಾಂಡ, ರೆಂಬೆ ಎಲೆ, ಹೂ, ಹಣ್ಣು ಇತ್ಯಾದಿ ಅಂಶಗಳಿವೆ. ಅವನ್ನು ನಾವು ಮರದಿಂದ ಕತ್ತರಿಸಿ ತೆಗೆಯಬಹುದು, ಅದಕ್ಕಾಗಿ ಅವು ಅಭಿನ್ನಾಂಶಗಳು.
ಹಾಗೆಯೇ ಪರಮಾತ್ಮ ಹದಿನಾರು ಕಲೆಗಳನ್ನು ಸೃಷ್ಟಿ ಮಾಡಿ, ತನ್ನ ಅಧೀನದಲ್ಲಿಟ್ಟುಕೊಂಡು ಅವುಗಳಿಂದ ಅನಂತಜೀವರಿಗೆ ಸಾಧನೆಯನ್ನು ಮಾಡಿಸುತ್ತಾನೆ. ಹೀಗಾಗಿ ಈ ಹದಿನಾರು ಕಲೆಗಳು ಪರಮಾತ್ಮನ ಕೈಯಲ್ಲಿರುವ ಉಪಕರಣದಂತೆ ಪರಮಾತ್ಮನ ಅಂಶಗಳು ಎಂದು ಉಪನಿಷತ್ತು ಕರೆಯುತ್ತದೆ. ಪರಮಾತ್ಮನ ಭಿನ್ನಾಂಶಗಳು.
ಪರಮಾತ್ಮ ಸೃಷ್ಟಿ ಮಾಡುವ ಆರಂಭದಲ್ಲಿ ಹೀಗೆ ಆಲೋಚಿಸುತ್ತಾನೆ – ನಾನೀಗ ಜೀವರನ್ನು ಸೃಷ್ಟಿ ಮಾಡಿ ಅವರಿಂದ ಸಾಧನೆಯನ್ನು ಮಾಡಿಸಬೇಕಾಗಿದೆ. ಆ ಜೀವನ ಅಂತರ್ಯಾಮಿಯಾಗಿ ನಾನಿರುತ್ತೇನೆ. ಆ ಸಾಧನೆಗಾಗಿ ಜೀವನಿಗೆ ಹದಿನಾರು ಪದಾರ್ಥಗಳ ಆವಶ್ಯಕತೆಯಿದೆ. ಆ ಹದಿನಾರು ಪದಾರ್ಥಗಳನ್ನು, ಅದರ ಅಭಿಮಾನಿ ದೇವತೆಗಳನ್ನು ಸೃಷ್ಟಿಸಿ ಅವನ್ನು ಜೀವನಿಗೆ ನೀಡಿ ಸಾಧನೆಯನ್ನು ಮಾಡಿಸುತ್ತೇನೆ ಎಂದು. ಮತ್ತು ನಾನು ಆ ಎಲ್ಲ ಕಾರ್ಯಗಳನ್ನು ಮಾಡುವಾಗ ಯಾರು ನನ್ನ ಸಾಚಿವ್ಯವನ್ನು ವಹಿಸಬಲ್ಲರೋ, ಅಂತಹವರನ್ನು ಮೊದಲಿಗೆ ಸೃಷ್ಟಿಸಬೇಕು, ಯಾರಿದ್ದಾಗ ನಾನು ಜೀವರ ಶರೀರದಲ್ಲಿರುತ್ತೇನೆಯೋ, ಯಾರಿಲ್ಲದಿದ್ದಾಗ ನಾನು ಆ ಶರೀರದಲ್ಲಿರುವದಿಲ್ಲವೋ ಅಂತಹವನನ್ನು ಮೊದಲಿಗೆ ಸೃಷ್ಟಿಸಬೇಕು ಎಂದು ಆಲೋಚಿಸಿ ಪರಮಾತ್ಮ ಪ್ರಾಣದೇವರನ್ನು ಸೃಷ್ಟಿಸುತ್ತಾನೆ. ಅವನು ನಮ್ಮ ಅಂತರ್ಯಾಮಿಯ ಮೊದಲನೆಯ ಕಲೆ.
೧. ಪ್ರಾಣ – ಜೀವಸ್ವರೂಪ – ಅದರ ನಿಯಾಮಕ ಪ್ರಾಣದೇವರು – ಮೊದಲನೆಯ ಕಲೆ.
ವಾಯುದೇವರು ಜೀವನ ಸ್ವರೂಪಕ್ಕೆ ಅಭಿಮಾನಿ ಮತ್ತು ನಿಯಾಮಕರು. ಜೀವ ಸ್ವರೂಪವೇ ಇಲ್ಲವೆಂದಾದ ಬಳಿಕ ಸಾಧನೆಯೇನು, ಮೋಕ್ಷವೇನು? ಹೀಗಾಗಿ ಸಂಸಾರ, ಸಾಧನೆ ಮತ್ತು ಮೋಕ್ಷ ಈ ಮೂರೂ ಅವಲಂಬಿತವಾಗಿರುವದು ಜೀವಸ್ವರೂಪದ ಮೇಲೆ. ಅದನ್ನು ನಿಯಮಿಸುವ ಪ್ರಾಣದೇವರು ಪರಮಾತ್ಮನಿಂದ ಸೃಷ್ಟವಾದ ಹದಿನಾರು ಕಲೆಗಳಲ್ಲಿ ಮೊದಲನೆಯ ಕಲೆ.
೨. ಶ್ರದ್ಧಾ – ಜೀವನ ಆಸ್ತಿಕ್ಯಬುದ್ಧಿ – ಅದರ ನಿಯಾಮಕಳು ಭಾರತೀದೇವಿ – ಎರಡನೆಯ ಕಲೆ.
ಜೀವಸ್ವರೂಪಕ್ಕೆ ಅಭಿಮಾನಿಯಾದ ಪ್ರಾಣನಿಂದ, ಜೀವನ ಶ್ರದ್ಧೆಗೆ ಅಭಿಮಾನಿಯಾದ ಭಾರತೀದೇವಿಯನ್ನು ಭಗವಂತ ಸೃಷ್ಟಿಸುತ್ತಾನೆ. ಶ್ರದ್ಧೆ ಎಂದರೆ ಆಸ್ತಿಕ್ಯಬುದ್ಧಿ. ಅಂದರೆ, ಶಾಸ್ತ್ರದಲ್ಲಿ ಹೇಳಿದ್ದು ಸತ್ಯ, ಗುರುಗಳು ಹೇಳಿದ್ದು ಸತ್ಯ ಎನ್ನುವ ಬುದ್ಧಿಯನ್ನು ನೀಡುವ ದೇವತೆ ಭಾರತೀದೇವಿ. ಆ ಬುದ್ಧಿ ಇಲ್ಲವಾದರೆ ಸಾಧನೆಯೇ ಆಗಲು ಸಾಧ್ಯವಿಲ್ಲ. ಗುರುಗಳು ಸಾವಿರ ತತ್ವಗಳನ್ನು ತಿಳಿಸಿ ಹೇಳಿದರೂ, ಅವರು ಹೇಳುವ ಮಾತನ್ನು ಒಪ್ಪಿ ಅನುಸರಿಸುವ ಬುದ್ಧಿಯೇ ನಮಗಿರಬೇಕು. ಅದನ್ನು ನೀಡುವದು ಭಾರತೀದೇವಿ. ಅವಳು ಹದಿನಾರು ಕಲೆಗಳಲ್ಲಿ ಎರಡನೆಯ ಕಲೆ.
೩. ಮನಸ್ಸು – ಜೀವನ ಸಂಸಾರ-ಮೋಕ್ಷಕ್ಕೆ ಪ್ರಧಾನ ಸಾಧನ – ಅದರ ನಿಯಾಮಕರು ಗರುಡ-ಶೇಷ-ರುದ್ರ-ಕಾಮಾದಿಗಳು – ಮೂರನೆಯ ಕಲೆ.
ಜೀವನ ಸಕಲ ವ್ಯಾಪಾರವೂ ಮನಸ್ಸಿನ ಮುಖಾಂತರವೇ. ಮನಸ್ಸಿಲ್ಲದಿದ್ದರೆ ಸಾಧನೆಯೂ ಇಲ್ಲ, ಭೋಗವೂ ಇಲ್ಲ, ಮೋಕ್ಷವೂ ಇಲ್ಲ. ಹೀಗಾಗಿ ಪರಮಾತ್ಮ ಜೀವನ ಮನಸ್ಸನ್ನು ಸೃಷ್ಟಿಸಲು ಮುಂದಾದ. ಆ ಮನಸ್ಸನ್ನು ನಿಯಮಿಸಲು ಗರುಡ-ಶೇಷ-ರುದ್ರ-ಕಾಮ ಈ ನಾಲ್ಕು ಜನರನ್ನು ಸೃಷ್ಟಿಸಿದ. ಮನಸ್ಸಿಗೆ ನಿಯಾಮಕರಾದ ಈ ನಾಲ್ಕು ಮನೋಭಿಮಾನಿಗಳು ಹದಿನಾರು ಕಲೆಗಳಲ್ಲಿ ಮೂರನೆಯವರು.
೪. ಇಂದ್ರಿಯ – ಜೀವನ ಸಂಸಾರ-ಮೋಕ್ಷಕ್ಕೆ ಸಾಧನ – ಅದರ ನಿಯಾಮಕರು ಇಂದ್ರ, ಸೂರ್ಯ ಮೊದಲಾದ ಹತ್ತು ಜನ ದೇವತೆಗಳು – ನಾಲ್ಕನೆಯ ಕಲೆ.
ಮನಸ್ಸು ಕೆಲಸ ಮಾಡುವದು ಇಂದ್ರಿಯಗಳ ಮುಖಾಂತರ. ಇಂದ್ರಿಯಗಳಿಲ್ಲದೆ, ಮನಸ್ಸು ನೇರವಾಗಿ ಜಗತ್ತಿನ ಜತೆ ಸಂಪರ್ಕವನ್ನು ಹೊಂದಲು ಸಾಧ್ಯವಿಲ್ಲ. ಪರಮಾತ್ಮನ ರೂಪವನ್ನು ಕಾಣಲಿಕ್ಕಾಗಿ ಕಣ್ಣು, ಅವನ ಕಥೆಯನ್ನು ಕೇಳಲಿಕ್ಕಾಗಿ ಕಿವಿ, ಅವನುಚ್ಚಿಷ್ಟವನ್ನು ಸವಿಯುವ ನಾಲಿಗೆ, ಅವನನ್ನು ಮುಟ್ಟಲು ಚರ್ಮ, ಅವನ ಪ್ರಸಾದವನ್ನು ಆಘ್ರಾಣಿಸಲು ಗಂಧ ಹೀಗೆ, ಐದು ಜ್ಞಾನೇಂದ್ರಿಯಗಳು, ಅವನ ಕುರಿತು ಮಾತಾಡಲು ವಾಗಿಂದ್ರಿಯ, ಅವನನ್ನು ಅರ್ಚಿಸಲು ಕೈಗಳು, ಅವನ ಕ್ಷೇತ್ರದಲ್ಲಿ ಓಡಾಡಲು ಕಾಲುಗಳು, ಅವನು ಸೃಷ್ಟಿ ಮಾಡಿದ ಜಗತ್ತನ್ನು ಮುಂದುವರೆಸಲು ಜನನೇಂದ್ರಿಯ, ಅವನಿತ್ತ ದೇಹದ ರಕ್ಷಣೆಗಾಗಿ ಗುದೇಂದ್ರಿಯ ಹೀಗೆ ಐದು ಕರ್ಮೇಂದ್ರಿಯಗಳು ಒಟ್ಟು ಈ ಹತ್ತು ಇಂದ್ರಿಯಗಳನ್ನು ಆ ಇಂದ್ರಿಯಗಳಿಗೆ ಅಭಿಮಾನಿಗಳಾದ ಸೂರ್ಯ ಮುಂತಾದ ಹತ್ತು ದೇವತೆಗಳನ್ನು ಭಗವಂತ ಸೃಷ್ಟಿಸಿದ.
೫. ಅನ್ನ – ಜೀವನ ಬದುಕಿಗೆ ಕಾರಣವಾದ ವಸ್ತು – ಇದರ ಒಡೆಯ ಚಂದ್ರ – ಇವನು ಪರಮಾತ್ಮನ ಐದನೆಯ ಕಲೆ.
ಜೀವ ದೇಹವನ್ನು ಪಡೆದ ಬಳಿಕ ಅವನು ಬದುಕಿರಲು ಆಹಾರ ಬೇಕು. ಆ ಆಹಾರಕ್ಕೆ ಅಭಿಮಾನಿಯಾದ ದೇವತೆ ಚಂದ್ರ. ಅವನು ಪರಮಾತ್ಮನೆ ಐದನೆಯ ಭಿನ್ನಾಂಶ.
೬. ವೀರ್ಯ – ತಿಂದ ಅನ್ನದಿಂದ ದೇಹದಲ್ಲಿ ಉಂಟಾಗುವ ಸಾಮರ್ಥ್ಯ, Energy. – ಇದರ ಒಡೆಯ ವರುಣ. ಇವನು ಶ್ರೀಹರಿಯ ಆರನೆಯ ಅಂಶ.
ತಿಂದ ಅನ್ನ ಶಕ್ತಿಯಾಗಿ ಪರಿವರ್ತಿತವಾದಾಗ ಮಾತ್ರ ಜೀವ ಸಾಧನೆಯನ್ನು ಮಾಡಬಲ್ಲ. ಆ ಪರಿವರ್ತನೆ ಗೊಳಿಸುವ ದೇವತೆ, ಪರವರ್ತನೆಗೊಂಡ ವೀರ್ಯದ ನಿಯಾಮಕ ದೇವತೆ ವರುಣ. ಅವನನ್ನು ಪರಮಾತ್ಮನ ಆರನೆಯ ಅಂಶ – ಭಿನ್ನವಾದ ಅಂಶ – ಎಂದು ಉಪನಿಷತ್ತು ಕರೆಯುತ್ತದೆ.
೭. ತಪಸ್ – ಜೀವ ಮಾಡುವ ಸಾಧನೆ – ಅಗ್ನಿ – ಇವನು ಅಂತರ್ಯಾಮಿಯ ಏಳನೆಯ ಅಂಶ
ಜೀವನಿಂದ ಸಾಧನೆ ಮಾಡಿಸುವ, ಮಾಡಿದ ಸಾಧನೆಯನ್ನು ಕಾಪಾಡುವ ದೇವತೆ, ನಮ್ಮ ತಪಸ್ಸಿನ ಒಡೆಯ ಅಗ್ನಿ. ಅವನು ನಾರಾಯಣನ ಏಳನೆಯ ಕಲೆ.
೮. ಆಕಾಶ – ಜೀವ ದೇಹದಲ್ಲಿರಬೇಕಾದರೆ ಬೇಕಾದ ಅವಕಾಶ – ಅದರ ದೇವತೆ ಗಣಪತಿ. ಇವನು ಅಂತರ್ಯಾಮಿಯ ಎಂಟನೆಯ ಅಂಶ
ಜೀವ ದೇಹದ ಹೃದಯದಲ್ಲಿ ಮಾತ್ರ ಕುಳಿತಿದ್ದರೆ ಸಾಕಾಗುವದಿಲ್ಲ. ಅಡಿಯಿಂದ ಮುಡಿಯವರೆಗೆ ಅವನು ವ್ಯಾಪಿಸಿರಬೇಕು. ಜೀವನನ್ನು ಆ ರೀತಿ ಇಡಿಯ ದೇಹದಲ್ಲಿ ಇರಗೊಡಿಸುವ ದೇವತೆ ಗಣಪತಿ. ಅವನು ಪರಮಾತ್ಮನ ಎಂಟನೆಯ ಅಂಶ.
೯. ವಾಯು – ದೇಹದಲ್ಲಿನ ಗಾಳಿ – ಅದರ ದೇವತೆ ಮರೀಚಿ – ಇವನು ಪರಮಾತ್ಮನ ಒಂಭತ್ತನೆಯ ಕಲೆ.
ದೇಹದಲ್ಲಿ ಗಾಳಿಯಿದ್ದಾಗ ಮಾತ್ರ ದೇಹ ಬದುಕಲು ಸಾಧ್ಯ. ಆ ಗಾಳಿಯನ್ನು ಇಡಿಯ ದೇಹದಲ್ಲಿ ಓಡಾಡಿಸಿ ದೇಹವನ್ನು ಬದುಕಿಸುವ ದೇವತೆ ಮರೀಚಿ. ಇವನು ಮುಖ್ಯಪ್ರಾಣದೇವರ ಮಗ. ಅಂತರ್ಯಾಮಿಯ ಒಂಭತ್ತನೆಯ ಅಂಶ.
೧೦. ಅಗ್ನಿ – ದೇಹದ ಉಷ್ಣತೆ – ಇದರ ದೇವತೆ ಪಾವಕ- ಇವನು ಅಂತರ್ಯಾಮಿಯ ಹತ್ತನೆಯ ಕಲೆ.
ದೇಹ ಬದುಕಿರಬೇಕಾದರೆ ಅದಕ್ಕೊಂದು ಉಷ್ಣತೆ ಬೇಕು. ಅದನ್ನು ಕಾಪಾಡುವ ದೇವತೆ ಪಾವಕ. ಇವನು ಅಗ್ನಿಯ ಮೊದಲ ಮಗ. ಪರಮಾತ್ಮನ ಹತ್ತನೆಯ ಅಂಶ.
೧೧. ಲೋಕ – ಜೀವ ಇರುವ ಸ್ಥಳ – ಅದರ ನಿಯಾಮಕ ಪರ್ಜನ್ಯ – ಪರಮಾತ್ಮನ ಹನ್ನೊಂದನೆಯ ಕಲೆ
ಪ್ರತಿಯೊಬ್ಬ ಜೀವನಿಗೂ ಅವನು ಇಂಥಹ ಸ್ಥಳದಲ್ಲಿಯೇ ಸಾಧನೆ ಮಾಡಬೇಕು ಎಂದು ಮೊದಲೇ ನಿಯತವಾಗಿರುತ್ತದೆ. ಉದಾಹರಣೆ ಗುರುಗಳಿಗೆ ಕುಮಾರಪರ್ವತ. ಜೀವನನ್ನು ಅವನ ಸಾಧನೆಯ ಪ್ರದೇಶಕ್ಕೆ ಕರೆದೊಯ್ಯುವ, ಅವನನ್ನು ಅಲ್ಲಿರಿಸಿ ಸಾಧನೆ ಮಾಡಿಸುವ ದೇವತೆ ಪರ್ಜನ್ಯ. ಇವನ ಅನುಗ್ರಹವಿಲ್ಲದಿದ್ದರೆ ನಾವು ಎಲ್ಲೆಲ್ಲಿಯೋ ಹುಟ್ಟಿ ಸಾಧನೆಯಿಲ್ಲದೆ ಒದ್ದಾಡುತ್ತೇವೆ. ನಮ್ಮ ಮೇಲೆ ಪರಮಾನುಗ್ರಹ ಮಾಡುವ ಈ ಪರ್ಜನ್ಯ ಪರಮಾತ್ಮನ ಹನ್ನೊಂದನೆಯ ಕಲೆ.
೧೨. ಮಂತ್ರ – ನಮ್ಮ ಉಪಾಸನೆ, ನಮ್ಮ ಮಂತ್ರಗಳು – ಇದರ ಒಡತಿ ಅಗ್ನಿಯ ಪತ್ನಿಯಾದ ಸ್ವಾಹಾದೇವಿ – ಇವಳು ಪರಮಾತ್ಮನ ಹನ್ನೆರಡನೆಯ ಕಲೆ
ಪ್ರತಿಯೊಬ್ಬ ಜೀವನಿಗೂ ಅವನು ಅಧ್ಯಯನ ಮಾಡುವ ಗ್ರಂಥ, ಮಾಡಬೇಕಾದ ಉಪಾಸನೆ, ಪಠಿಸಬೇಕಾದ ಮಂತ್ರ ಇವೆಲ್ಲವೂ ಪ್ರತ್ಯೇಕ. ಜೀವನಿಂದ ಜೀವನಿಗೆ ವಿಭಿನ್ನ. ಅವನ್ನು ನಮಗೆ ನಮ್ಮ ಗುರುಗಳಿಂದ ನೀಡಿಸುವ, ಬಳಿಕ ನಮ್ಮಿಂದ ಅದರ ಅನುಷ್ಠಾನ ಮಾಡಿಸುವ ದೇವತೆ ಸ್ವಾಹಾದೇವಿ. ಇವಳು ಪರಮಾತ್ಮನ ಹನ್ನೆರಡನೆಯ ಕಲೆ.
೧೩. ನೀರು – ದೇಹದ ಜಲ – ಇದರ ದೇವತೆ ಬುಧ. ಇವನು ಅಂತರ್ಯಾಮಿಯ ಹದಿಮೂರನೆಯ ಕಲೆ.
ಪಂಚಭೂತಗಳು ಬ್ರಹ್ಮಾಂಡದಲ್ಲಿರುವಂತೆ ಪಿಂಡಾಂಡದಲ್ಲಿಯೂ ಇವೆ. ಅವಲ್ಲಿ, ಅಕಾಶ, ವಾಯು, ಅಗ್ನಿಗಳು ಮುಗಿದವು. ಈಗ ನೀರು. ದೇಹದಲ್ಲಿ ರಕ್ತ ಮುಂತಾದ ಜಲ ಪದಾರ್ಥಗಳಿವೆ. ಅವನ್ನು ನಿಯಮಿಸುವ ದೇವತೆ, ಬುಧ. ನಮಗೆ ಮೋಕ್ಷ ನೀಡಿಸಲು ನಮ್ಮ ಹೃದಯದಲ್ಲಿ ಕುಳಿತ ಪರಮಾತ್ಮನ ಹದಿಮೂರನೆಯ ಅಂಶ ಈ ಬುಧ.
೧೪. ನಾಮ – ಹೆಸರು – ಇದರ ಅಭಿಮಾನಿನೀ ಉಷಾದೇವೀ – ಅಂತರ್ಯಾಮಿಯ ಹದಿನಾಲ್ಕನೆಯ ಕಲೆ
ಪ್ರತಿಯೊಬ್ಬ ಜೀವನಿಗೂ ಅವನದೇ ಆದ ಒಂದು ಹೆಸರಿರುತ್ತದೆ. ಆ ಹೆಸರಿನಿಂದಲೇ ಅವನು ಸಾಧನೆಯನ್ನು ಮಾಡಬೇಕು. ಆ ಹೆಸರನ್ನು ನಮ್ಮ ಗುರುಗಳ ಮುಖಾಂತರ ನಮಗೆ ತಿಳಿಸಿ, (ಆಚಾರ್ಯರು ಗುರುಗಳಿಗೆ ವಿಷ್ಣುತೀರ್ಥ ಎಂದು ಹೆಸರು ನೀಡಿದಂತೆ) ನಮ್ಮಿಂದ ಸಾಧನೆ ಮಾಡಿಸುವವಳು ಉಷಾದೇವಿ. ಇವಳು ನಮ್ಮೊಡೆಯನ ಕರುಣೆಯ ಕುರುಹಾದ ಹದಿನಾಲ್ಕನೆಯ ಅಂಶ.
೧೫. ಪೃಥಿವೀ – ದೇಹದ ಗಟ್ಟಿಯಾದ ಅಂಶ – ಇದರ ದೇವತೆ ಶನಿ. – ಅಂತರ್ಯಾಮಿಯ ಹದಿನೈದನೆಯ ಕಲೆ
ಪಂಚಭೂತಗಳಲ್ಲಿ ಕಡೆಯದು. ನಮ್ಮ ದೇಹದಲ್ಲಿರುವ ಗಟ್ಟಿಯ ಅಂಶವೆಲ್ಲ ಪೃಥಿವೀ ಎಂದು ಕರೆಸಿಕೊಳ್ಳುತ್ತದೆ. ಅದನ್ನು ನಿಯಮಿಸುವ ದೇವತೆ, ಶನೈಶ್ಚರ. ಪರಮಾತ್ಮನ ಹದಿನೈದನೆಯ ಕಲೆ
೧೬. ಕರ್ಮ – ಪುಷ್ಕರ – ಅಂತರ್ಯಾಮಿಯ ಹದಿನಾರನೆಯ ಕಲೆ.
ಜೀವ ಮಾಡುವ ಸಕಲ ಕರ್ಮಗಳನ್ನು ಲೆಕ್ಕವಿಟ್ಟು ಅದರ ಫಲವನ್ನು ನಮಗೆ ನೀಡಿಸುವ ದೇವತೆ ಪುಷ್ಕರ. ಅವನು ಪರಮಾತ್ಮನ ಹದಿನಾರನೆಯ ಕಲ
- 1. ಪ್ರಾಣ – ವಾಯುದೇವರು
- ಶ್ರದ್ಧಾ – ಭಾರತೀದೇವಿ
- ಮನಸ್ – ಗರುಡ-ಶೇಷ-ರುದ್ರ-ಕಾಮರು
- ಇಂದ್ರಿಯ – ಇಂದ್ರ-ಸೂರ್ಯಾದಿಗಳು
- ಅನ್ನ- ಚಂದ್ರ
- ವೀರ್ಯ – ವರುಣ
- ತಪಸ್ಸು – ಅಗ್ನಿ
- ಆಕಾಶ- ಗಣಪತಿ
- ಗಾಳಿ- ಮರೀಚಿ
- ಅಗ್ನಿ- ಪಾವಕ
- ಲೋಕ-ಪರ್ಜನ್ಯ
- ಮಂತ್ರ-ಸ್ವಾಹಾ
- ನೀರು-ಬುಧ
- ನಾಮ-ಉಷಾ
- ಪೃಥಿವೀ-ಶನಿ
- ಕರ್ಮ-ಪುಷ್ಕರ
ಇವರು ಕ್ರಮವಾಗಿ ಹಿಂದಿನವರಿಗಿಂತ ಮುಂದಿನವರು ಸಣ್ಣವರು. ಇವರು ನಮ್ಮಿಂದ ಸಾಧನೆಯನ್ನು ಮಾಡಿಸಿ ಮೋಕ್ಷವನ್ನು ನೀಡಲು ಬಯುಸುತ್ತಿರುವ ಪರಮಾತ್ಮನ ಕೈಯಲ್ಲಿನ ಸಾಧನಗಳು. ಪರಮಾತ್ಮನ ಹದಿನಾರು ಅಂಶಗಳು. ಇವರು ಸಂಸಾರದಲ್ಲಿಯಷ್ಟೇ ಅಲ್ಲ. ಮೋಕ್ಷದಲ್ಲಿಯೂ ನಮ್ಮ ಸ್ವರೂಪದೇಹವನ್ನು ಹೀಗೇ ನಿಯಮಿಸಿ ನಮಗೆ ಆನಂದವನ್ನು ನೀಡುವ ದೇವತೋತ್ತಮರು.
ಇವರನ್ನು ಬೇಲಿ ಎಂದು ಕರೆಯುವದು ತಪ್ಪಲ್ಲವೇ? ನಾವು ಇವರನ್ನು ಆಶ್ರಯಿಸಿ ಸಂಸಾರವನ್ನು ದಾಟಬೇಕಾಗಿದೆ. ಇವರೇ ನಮಗೆ ಪರಮಾತ್ಮನನ್ನು ತೋರಗೊಡಬೇಕಾಗಿದೆ. ಅಂಥ ಈ ದೇವತೋತ್ತಮರನ್ನು, ನಮ್ಮ ದೇಹದಲ್ಲಿ ಸತತ ನೆಲೆಸಿ ನಮ್ಮಿಂದ ಸಾಧನೆ ಮಾಡಿಸುವವರನ್ನು ಬೇಲಿಗಳು ಎಂದು ಕರೆಯುವದು ಮೊಕ್ಷನೀಡುವ ಕರುಣಾಳು ಪರಮಾತ್ಮನನ್ನು ನಮ್ಮನ್ನು ಹಿಂಸಿಸುವ ಕ್ರೂರಿ ಎಂದು ಕರೆದಷ್ಟೇ ಪಾಪ. ನಿಶ್ಚಿತವಾಗಿ ತಮಸ್ಸಾಧನ.
ನಮಗೆ ಜನ್ಮ ನೀಡಿ, ಹಾಲು ನೀಡಿ, ಅನ್ನ, ಆಹಾರ ವಸ್ತ್ರಗಳನ್ನು ನೀಡಿ, ವಿದ್ಯೆಯನ್ನು ನೀಡಿದ ತಂದೆ ತಾಯಿಯರನ್ನು ನಮ್ಮ ಶತ್ರುಗಳು ಎಂದು ಕರೆದರೆ ಎಷ್ಟು ಪಾಪವೋ ಅದಕ್ಕಿಂತ ಮಿಗಿಲಾದ ಅಪಚಾರ. ಏಕೆಂದರೆ, ಒಂದು ವೇಳೆ ನಮ್ಮ ತಂದೆ ತಾಯಿಯರು ನಮಗೆ ಒಳ್ಳೆಯದನ್ನು ಮಾಡದೇ ಕೆಟ್ಟದ್ದನ್ನು ಮಾಡಿರಬಹುದು, ಆದರೆ, ಅನಾದಿಕಾಲದಿಂದ ಸಂಸಾರದಲ್ಲಿ ಬಿದ್ದಿರುವ ನಮ್ಮನ್ನು ಭಗವಂತನೆಡೆಗೆ ಕರೆದೊಯ್ಯಲು ಸತತವಾಗಿ ಪ್ರಯತ್ನಿಸುತ್ತಿರುವ ಈ ಮಹಾ ಕರುಣಾಳು ದೇವತೆಗಳನ್ನು ನಮ್ಮ ಸಂಸಾರದಲ್ಲಿಟ್ಟ ಬೇಲಿಗಳು ಎಂದು ಕರೆಯುವದು ತಮಸ್ಸಾಧನವಲ್ಲದೇ ಮತ್ತೇನು. ಹಾಗೆ ಹೇಳುವದೂ ತಪ್ಪು. ಹಾಗೆ ಹೇಳಿದ್ದನ್ನು ಕೇಳುವದೂ ತಪ್ಪು.
ನಾನು ಮೇಲೆ ಹೇಳಿದ ಈ ಮಾತನ್ನು ಒಂದಲ್ಲ, ಎರಡಲ್ಲ, ನೂರಾರು ಬಾರಿ ಆಲೋಚಿಸಿ ಇಂಥಾ ಮಹಾ ದೇವೆತೆಗಳ ಬಗ್ಗೆ, ಪರಮಾತ್ಮನ ಕೈಯಲ್ಲಿನ ಉಪಕರಣಗಳಂತಿರುವ ಈ ಷೋಡಶ ಕಲೆಗಳನ್ನು ಬೇಲಿ ಎಂದು ತಿಳಿಯುವದರಿಂದ ಎಷ್ಟು ಪಾಪ ಬರುತ್ತದೆಯೋ ಆಲೋಚಿಸಿ.
ಶ್ರೀನಿವಾಸನನ್ನು ದೇವರು ಎಂದು ತಿಳಿದರೂ, ಅವನಿಗೆ ತಲೆ ಒಡೆದು ಪೆಟ್ಟಾಗಿದೆ ಎಂದು ಪರಮಾತ್ಮನನ್ನು ತಪ್ಪಾಗಿ ತಿಳಿದದ್ದಾಕ್ಕಾಗಿ ಅಲ್ಲವೇ ಚೋಳರಾಜನಿಗೆ ದುರ್ಗತಿ ಬಂದೊದಗಿದ್ದು.
ನಾನೇ ಕೃಷ್ಣ ಎಂಬ ಜ್ಞಾನದಿಂದಲೇ ಪೌಂಢ್ರಕ ವಾಸುದೇವನಿಗೆ ತಮಸ್ಸಾಯಿತು ಎಂದು ಆಚಾರ್ಯರು ಹೇಳುತ್ತಾರೆ, “ಸ ಚ ಬ್ರಹ್ಮಾಹಂ ವಾಸುದೇವೋsಸ್ಮಿ ನಿತ್ಯಮಿತಿ ಜ್ಞಾನಾದಾಗಾತ್ ತತ್ ತಮೋsಂಧಮ್” ಎಂದು. ದೇವತೆಗಳನ್ನು ತಪ್ಪಾಗಿ ತಿಳಿದರೆ ತಮಸ್ಸಾಗುತ್ತದೆ ಎಂದು ಅನುವ್ಯಾಖ್ಯಾನದಲ್ಲಿ ಪರಿಸ್ಪಷ್ಟವಾಗಿ ಪ್ರತಿಪಾದಿಸುತ್ತಾರೆ.
ಹೀಗಾಗಿ ನಮ್ಮನ್ನು ಸಂಸಾರಸಾಗರದಿಂದ ದಾಟಿಸುವ ಈ ಕಲೆಗಳನ್ನು ಬೇಲಿಗಳು ಎಂದು ತಿಳಿಯುವದು ಅನರ್ಥಸಾಧನ, ಸಂಶಯವಿಲ್ಲ.
ಸಕಲವೈಷ್ಣವರಿಗೂ ಶ್ರೀಮದಾಚಾರ್ಯರ ಸಿದ್ದಾಂತದ ಪರಿಶುದ್ಧ ಜ್ಞಾನ ದೊರೆಯಲಿ ಎಂದು ಗುರುಗಳನ್ನು ಹಾಗೂ ಈ ಹದಿನಾರು ಜನ ದೇವತೆಗಳನ್ನು ಪ್ರಾರ್ಥಿಸುತ್ತೇನೆ.
– ವಿಷ್ಣುದಾಸ ನಾಗೇಂದ್ರಾಚಾರ್ಯ