vishwanandini-015

ವಿಶ್ವನಂದಿನಿ ಲೇಖನ ಮಾಲೆ – 015

ಗುರುಕಥಾಸುರಭಿ

(ನಮ್ಮ ಭವ್ಯ ಮಾಧ್ವಪರಂಪರೆಯ ಮಹೋನ್ನತ ಜ್ಞಾನಿಗಳ ಚರಿತ್ರಚಿತ್ರಣ ಮಾಡುವ ವಿಶ್ವನಂದಿನಿಯ ಭಾಗ)

ಗುರುಭಕ್ತಿ ಎಂದರೆ ಹೀಗಿರಬೇಕು…

ನಮ್ಮ ಮಾಧ್ವಪರಂಪರೆಯ ಜ್ಞಾನಿವರೇಣ್ಯರು ಶಾಸ್ತ್ರ ಹೇಳುವ ಮಹೋನ್ನತ ಸಿದ್ದಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಿದವರು. ಶ್ರೀಮದಾಚಾರ್ಯರು ತಮ್ಮ ಗ್ರಂಥಗಳಲ್ಲಿ ಹೇಳಿದ ಸೂಕ್ಷ್ಮ ವಿಷಯಗಳನ್ನೂ, ಎಷ್ಟೋ ಬಾರಿ ಸಾಮಾನ್ಯರಿಗೆ ಮಾಡಲು ಸಾಧ್ಯವೇ ಇಲ್ಲದ ಆಚರಣೆಗಳನ್ನು ಲೀಲೆಯಿಂದ ಮಾಡಿದವರು. ಅದಕ್ಕಾಗಿಯೇ ಅವರ ಜೀವನಚರಿತ್ರೆಯೂ ಪರಮಾದ್ಭುತವಾಗುತ್ತದೆ.

ಸಾಧನಮಾರ್ಗದಲ್ಲಿ ಗುರುಗಳಿಗಿರುವ ಸ್ಥಾನ ಮತ್ತ್ಯಾರಿಗೂ ಇಲ್ಲ. ನಮಗೆ ಗುರುವೇ ಪರದೈವ. ಗುರುವಿನಲ್ಲಿಯೇ ಪರದೈವ. ಇದೊಂದು ಮಹೋನ್ನತ ಸಿದ್ಧಾಂತ. ಶ್ರೀಮದಾಚಾರ್ಯರು ನಮಗೆ ಗೀತಾಭಾಷ್ಯದ ಏಳನೆಯ ಅಧ್ಯಾಯದಲ್ಲಿ ಕಾರುಣ್ಯದಿಂದ ತಿಳಿಸಿಕೊಟ್ಟ ಸಿದ್ಧಾಂತ.

ಪರಮಾತ್ಮ ಎಲ್ಲರಿಗೂ ಸಾಕ್ಷಾತ್ತಾಗಿ ಉಪದೇಶ ಮಾಡುವದಿಲ್ಲ. ಎಲ್ಲರನ್ನೂ ಸಾಕ್ಷಾತ್ತಾಗಿ ಉದ್ಧರಿಸುವದಿಲ್ಲ. ಗುರುಗಳ ಮುಖಾಂತರವೇ ಉದ್ಧರಿಸುತ್ತಾನೆ. ನಾವು ಆ ಗುರುಗಳಲ್ಲಿಯೇ ಪರಮಾತ್ಮನನ್ನು ಕಾಣಬೇಕು. ಆ ಗುರುಗಳಿಗೇ ಕರ್ಮಸಮರ್ಪಣೆಯನ್ನು ಮಾಡಬೇಕು. ಆ ಗುರುಗಳನ್ನೇ ನಿರಂತರ ಸ್ಮರಿಸಬೇಕು. ನಮಗೆ ಅವರ ಪೂಜೆಯೇ ಹರಿಪೂಜೆ. ನಮಗೆ ಅವರ ಸ್ತೋತ್ರವೇ ಹರಿಸ್ತೋತ್ರ. ಅವರ ಅನುಗ್ರಹವೇ ಪರಮಾತ್ಮನ ಅನುಗ್ರಹ. ಗುರುಗಳಿಲ್ಲದೇ ಏನೂ ಇಲ್ಲ.

ಗುರುಗಳ ಕುರಿತಾಗಿ ನನ್ನ ಇಡಿಯ ವಿಶ್ವನಂದಿನಿಯ ವಾಙ್ಮಯದಲ್ಲಿ ಬರೆಯುತ್ತ ಹೋಗುತ್ತೇನೆ. ಎಷ್ಟು ಬರೆದರೂ ಸಾಧ್ಯವಿಲ್ಲ. ಕಾರಣ, ಸಾಧನೆಯ ಶ್ರೀಕಾರದಿಂದ ಹಿಡಿದು ಮೋಕ್ಷದವರೆಗೆ ನಮಗೆ ಗುರುಗಳು ಬೇಕು. ಆ ಗುರುಗಳನ್ನು ನಾವು ಅನನ್ಯವಾಗಿ ಆರಾಧಿಸಿದರೆ ಮಾತ್ರ ನಮ್ಮ ಉದ್ಧಾರವಾಗುತ್ತದೆ. ಅವರನ್ನು ಒಬ್ಬ ಉಪಾಧ್ಯಾಯರಂತೆ ಕಂಡರೆ, ಒಬ್ಬ ಸಾಮಾನ್ಯ ಉಪದೇಶಕರಂತೆ ಕಂಡರೆ ಉದ್ಧಾರ ಸಾಧ್ಯವಿಲ್ಲ.

ಸುಮಾರು ತಿಂಗಳ ಹಿಂದೆ ನನ್ನ ಮನೆಗೆ ಒಬ್ಬ ವ್ಯಕ್ತಿ ಬಂದಿದ್ದರು. ಒಳ್ಳೆಯವರೇ, ಸಜ್ಜನರೇ. ಸ್ವಲ್ಪಮಟ್ಟಿಗೆ ಶಾಸ್ತ್ರಗಳನ್ನು ಓದಿಕೊಂಡಿದ್ದವರು. ಆದರೆ, ಶಾಸ್ತ್ರದ ಪರಿಣಾಮವಾಗಿಲ್ಲ. ಕಾರಣ, ಅವರು ಒಬ್ಬ ಪಂಡಿತರ ಹೆಸರು ಹೇಳಿ ನಿಮಗಿವರು ಗೊತ್ತಾ ಎಂದರು. ನಾನು ಗೊತ್ತು ಎಂದರೆ. ಮತ್ತೆ ಆ ಪಂಡಿತರ ಹೆಸರು ಹೇಳಿ ನಾನು ಅವರ ಬಳಿ ಇಂಥಿಂಥಾ ಗ್ರಂಥಗಳನ್ನು ಓದಿದ್ದೇನೆ, ಎಂದರು. ನಾನಂದುಕೊಂಡೆ, ಯಾವ ವ್ಯಕ್ತಿಯ ಬಳಿ ಸೂತ್ರಭಾಷ್ಯ ಓದಿದ್ದೇನೆ ಎಂದು ಇವರು ಹೇಳುತ್ತಾರೆಯೋ, ಅವರ ಹೆಸರನ್ನು ಪಕ್ಕದ ಮನೆಯವರ ಹೆಸರನ್ನು ತೆಗೆದುಕೊಳ್ಳುವಂತೆ ಇವರು ತೆಗೆದುಕೊಳ್ಳುತ್ತಿದ್ದಾರಲ್ಲಾ, ಎಂದು. ಕಾರಣ, ಈ ದಿವಸ ನೀವು ಇಂಜಿನಿಯರಂಗ್ ಕಲಿಯಲು ಹೋಗಿ, ಮೆಡಿಸಿನ್ ಕಲಿಯಲು ಹೋಗಿ. ಲಕ್ಷಗಟ್ಟಲೆ ಹಣ ಖರ್ಚಾಗುತ್ತದೆ. ಅಂಥಹುದರಲ್ಲಿ ಇಡಿಯ ಶಾಸ್ತ್ರಪ್ರಪಂಚದಲ್ಲಿಯೇ ಸರ್ವೋತ್ತಮವಾದ ಶಾಸ್ತ್ರ ವೇದಾಂತಶಾಸ್ತ್ರವನ್ನು ಯಾವ ಪ್ರತಿಫಲಾಪೇಕ್ಷೆಯಿಲ್ಲದೆ, ನಿಮ್ಮ ಮೇಲಿನ ಪ್ರೀತಿಯಿಂದ ಕಾರುಣ್ಯದಿಂದ ಉಪದೇಶ ಮಾಡುವ ಶ್ರೇಷ್ಠ ಚೇತನರನ್ನು ಹೆಸರು ಹಿಡಿದು ಕರೆಯಬಾರದು ಎನ್ನುವಷ್ಟೂ ಸಹ ತಿಳುವಳಿಕೆ ಇವತ್ತಿನ ಮಾಧ್ವರು ಕಳೆದುಕೊಳ್ಳುತ್ತಿದ್ದಾರಲ್ಲಾ ಎಂದು ಬಹಳ ದುಃಖವಾಯಿತು. ಬಿಡಿ, ನಮ್ಮ ಆದಿಗುರುಗಳಾದ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರನ್ನೇ, ಅಚಾರ್ಯಮಧ್ವ ಎಂದು ಹೆಸರು ಹಿಡಿದು ಕರೆಯುವ, ಸರ್ವಜ್ಞಕಲ್ಪರಾದ ಶ್ರೀಮಟ್ಟೀಕಾಕೃತ್ಪಾದರನ್ನು ಜಯತೀರ್ಥರು ಎಂದು ಕರೆಯುವ ಪರಿಸ್ಥಿತಿಯನ್ನು ನಮ್ಮವರು ಮುಟ್ಟಿರುವಾಗ ಇನ್ನು ಸಾಮಾನ್ಯ ಗುರುಗಳಿಗೆ ಗೌರವ ನೀಡಿ ಎನ್ನುವದು ಹಾಸ್ಯಾಸ್ಪದವಾದ ವಿಷಯ.

ಆದರೆ, ನಮ್ಮ ಪ್ರಾಚೀನರು ಹೀಗಿರಲಿಲ್ಲ. ನಮ್ಮ ಮಾಧ್ವಪರಂಪರೆಯ ಮಹಾನುಭಾವರು ಹೀಗಿರಲಿಲ್ಲ. ಅವರಿಗೆ ಗುರುಗಳೇ ಸರ್ವಸ್ವ. ಗುರುಗಳ ಮಾತನ್ನು ಎಂದಿಗೂ ಯಾವ ಕಾರಣಕ್ಕೂ ಮೀರುತ್ತಿರಲಿಲ್ಲ. ಅವರಿಗೆ ಗುರುವಾಕ್ಯವೇ ವೇದವಾಕ್ಯ. ಅಷ್ಟು ವಿಶ್ವಾಸವನ್ನು ಅವರು ಗುರುಗಳಲ್ಲಿ ಮಾಡುತ್ತಿದ್ದವರು.

ನೀವೆಲ್ಲ ಶ್ರೀಮದ್ಭಾಗವತವನ್ನು ಕೇಳುವಾಗ ಒಂದು ಕಥೆಯನ್ನು ಕೇಳಿದ್ದೀರಿ. ಗಜೇಂದ್ರನ ಪೂರ್ವಜನ್ಮದ ಕಥೆ. ಅವನು ಇಂದ್ರದ್ಯುಮ್ನನಾಗಿದ್ದಾಗ ನಡೆದ ಘಟನೆ. ಅವನ ಮೌನವ್ರತವನ್ನು ಆಚರಿಸುತ್ತ ಪರಮಾತ್ಮನ ಆರಾಧನೆಯಲ್ಲಿ ತಲ್ಲೀನನಾಗಿರುತ್ತಾನೆ. ಆ ಸಮಯಕ್ಕೆ ಮಹಾಮಹಿಮರಾದ ಅಗಸ್ತ್ಯರು ಅಲ್ಲಿಗೆ ಬರುತ್ತಾರೆ. ಇಂದ್ರದ್ಯುಮ್ನ ಅಗಸ್ತ್ಯರನ್ನು ಕಂಡೂ ಕಾಣದಂತೆ ಸುಮ್ಮನಾಗಿ ತಾನು ಮಾಡುತ್ತಿರುವ ಪೂಜೆಯನ್ನು ಮುಂದುವರೆಸುತ್ತಾನೆ. ಅಶಾಸ್ತ್ರೀಯವಾದ ರೀತಿಯಲ್ಲಿ ನಡೆಯುತ್ತಿರುವ ಅವನಿಗೆ ಅಗಸ್ತ್ಯರು ಶಾಪ ನೀಡುತ್ತಾರೆ, ಆನೆಯಾಗಿ ಹುಟ್ಟು ಎಂದು.

ಇಂದ್ರದ್ಯುಮ್ನ ಬೇರೆ ಯಾವುದೋ ಹರಟೆಯಲ್ಲಿ ಮೈಮರೆತಿರಲಿಲ್ಲ. ಮತ್ತೇನೋ ಕೆಲಸ ಮಾಡುತ್ತಿರಲಿಲ್ಲ. ಮಾಡುತ್ತಿದ್ದುದು ಭಗವದುಪಾಸನೆಯೇ “ರಹಸ್ಯುಪಾಸೀನಮ್” ಆದರೆ, ಒಂದು ಮಹತ್ತ್ವದ ಮಾತನ್ನೇ ಮರೆತಿದ್ದ. ಇಂದ್ರದ್ಯುಮ್ನ ಆರಾಧಿಸುವ ಪ್ರತಿಮೆಯಲ್ಲಿ ಪರಮಾತ್ಮ ಬಂದು ಸನ್ನಿಹಿತನಾಗಬೇಕು. ಅವನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುವ ವಾಸನಮಯಮೂರ್ತಿಯಲ್ಲಿಯೂ ಭಗವಂತ ಬಂದು ನೆಲೆಗೊಳ್ಳಬೇಕು. ಇಡಿಯ ಜೀವದ ಭಕ್ತಿಯಿಂದ ಇಂದ್ರದ್ಯುಮ್ನ ತಾನು ಪರಮಾತ್ಮನನ್ನು ಆವಾಹಿಸಿದರೆ ಎಷ್ಟು ಸನ್ನಿಧಾನ ಆ ಪ್ರತಿಮೆಗಳಲ್ಲಿ ಬರಲು ಸಾಧ್ಯವೋ ಅದಕ್ಕಿಂತ ಮಿಗಿಲಾದ ಸನ್ನಿಧಾನ, ಇಂದ್ರದ್ಯುಮ್ನನಿಗೆ ಎಂದಿಗೂ ಮತ್ತೊಂದು ಪ್ರತಿಮೆಯಲ್ಲಿ ತಾರಲಿಕ್ಕೆ ಸಾಧ್ಯವಿಲ್ಲದ ಭಗವಂತನ ಸನ್ನಿಧಾನ, ಶ್ರೀಮದಗಸ್ತ್ಯಮುನಿಗಳಲ್ಲಿದೆ. ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಂಡ ಮಹಾನುಭಾವರು. ಅಪರೋಕ್ಷಜ್ಞಾನದ ಸಾಮರ್ಥ್ಯದಿಂದ ಲೋಕೋತ್ತರಪ್ರಭಾವವನ್ನು ತೋರಿದವರು. ಅಂತಹ ಮಹಾಮಹಿಮರು ಬಂದಾಗ ಮಾಡುತ್ತಿದ್ದ ಪೂಜೆಯನ್ನು ಬಿಟ್ಟು ಅವರ ಬಳಿ ಧಾವಿಸಿ ಅವರಿಗೆ ಗೌರವ ಸಲ್ಲಿಸಬೇಕು. ಇದು ಶಾಸ್ತ್ರೀಯವಾದ ಕ್ರಮ. ಇಂದ್ರದ್ಯುಮ್ನ ಮರೆತ, ಗುರುಗಳನ್ನು ತಿರಸ್ಕರಿಸಿದ, ಆನೆಯಾಗಿ ಹುಟ್ಟಿದ. ಆದರೆ, ಅಗಸ್ತ್ಯರು ಕರುಣಾಮಯಿಗಳು. ಅವರ ನಿಗ್ರಹವೂ ಅನುಗ್ರಹವೇ, ಆ ಗಜೇಂದ್ರನಿಗೆ ಉತ್ತಮ ಗತಿಯನ್ನೇ ನೀಡಿಸಿದರು.

ದೇವರ ಪೂಜೆ ಮಾಡುವಾಗ ಒಂದು ನಿಯಮವಿದೆ. ಬಿಂಬರೂಪವನ್ನು ಪ್ರತಿಮೆಯಲ್ಲಿ ಆವಾಹಿಸಿದ ಬಳಿಕ, ಅವನನ್ನು ಮತ್ತೆ ಹೃದಯದಲ್ಲಿ ಹಿಂತಿರುಗಿಸಿ ಪ್ರತಿಷ್ಠಾಪಿಸುವವರೆಗೆ, ಅರ್ಥಾತ್ ಹದಿನಾರು ಉಪಚಾರಗಳನ್ನು ಪೂರ್ಣ ಮುಗಿಸುವವರೆಗೆ ಭಾರತೀಶನನ್ನು ಬಿಟ್ಟು ಮತ್ತೊಬ್ಬರನ್ನು ಪೂಜಿಸುವ ಹಾಗಿಲ್ಲ. ಪರಮಾತ್ಮನನ್ನು ಭುಜಂಗಿಸಿದ ಬಳಿಕವೇ ರುದ್ರಾದಿಗಳಿಗೆ ನೈವೇದ್ಯ, ರುದ್ರಾದಿಗಳಿಗೆ ಪೂಜೆ. ಶಾಸ್ತ್ರ ಹೀಗಿದ್ದರೂ, ನಮಗೆ ವೇದಾಂತಶಾಸ್ತ್ರವನ್ನು ಉಪದೇಶ ಮಾಡಿದ ಗುರುಗಳು, ಮಹಾಭಾಗವತೋತ್ತಮರಾದ ವೈಷ್ಣವೋತ್ತಮರಾದ ಗುರುಗಳು ನಾವು ಪೂಜೆ ಮಾಡುವ ಕಾಲಕ್ಕೆ ಬಂದರೆ, ಪೂಜೆಯನ್ನು ಬಿಟ್ಟು ಎದ್ದು ಬಂದು ಅವರ ಕಾಲುಮುಟ್ಟಿ ನಮಸ್ಕರಿಸಿ, ಅವರಿಗೆ ಗೌರವ ಸಲ್ಲಿಸಿ ಅವರ ಆಜ್ಞೆಯನ್ನು ಪಡೆದು ಪೂಜೆಯನ್ನು ಮುಂದುವರೆಸಬೇಕು. ಕಾರಣ, ಪರಮಾತ್ಮ ಪ್ರತಿಮೆಯಲ್ಲಿದ್ದು ನಮ್ಮ ಮೇಲೆ ಮಾಡುವ ಅನುಗ್ರಹಕ್ಕಿಂತ ನಮ್ಮ ಗುರುಗಳಲ್ಲಿದ್ದು ಮಾಡುವ ಅನುಗ್ರಹ ಹೆಚ್ಚು. ಹೀಗಾಗಿ ಅವರಿಗೆ ಗೌರವವನ್ನು ಸಲ್ಲಿಸುವದು ಅತ್ಯವಶ್ಯವಾದ ಕರ್ತವ್ಯ.

ಸುಮಾರು ನಾಲ್ಕು ಶತಮಾನಗಳ ಹಿಂದಿನ ಮಾತು. ಶ್ರೀ ಪಾಂಡುರಂಗೀ ಬಾಬಾಚಾರ್ಯರು ಎಂಬ ಪರಮಸಾತ್ವಿಕ ವಿದ್ವಾಂಸರಿದ್ದರು. ಶೇಷವಾಕ್ಯಾರ್ಥಚಂದ್ರಿಕಾ ಎಂಬ ಪರಮಾದ್ಭುತಗ್ರಂಥವನ್ನು ರಚಿಸಿದ ಶ್ರೀ ಪಾಂಡುರಂಗೀ ಕೇಶವಾಚಾರ್ಯರ ಮೊಮ್ಮಕ್ಕಳು. ಸಿಟ್ಟನ್ನು ಗೆದ್ದಿದ್ದ ಮಹಾನುಭಾವರು. ಪ್ರತಿಯೊಬ್ಬ ವೈಷ್ಣವನಲ್ಲಿಯೂ ಪ್ರೀತಿಯನ್ನು ತೋರುತ್ತಿದ್ದ ವಾತ್ಸಲ್ಯಮೂರ್ತಿ. ಪಾಂಡುರಂಗೀಮನೆತನದ ವಿದ್ವಾಂಸರೆಲ್ಲ ನಿರಂತರ ಅಗ್ನಿಹೋತ್ರದ ಆಚರಣೆಯನ್ನು ಮಾಡುತ್ತಿದ್ದವರು. ಪೂರ್ವೀಕರ ಆಶೀರ್ವಾದದಿಂದ ಶ್ರೀ ಬಾಬಾಚಾರ್ಯರೂ ಸಹ ಅಗ್ನಿಯಲ್ಲಿ ಭಗವದಾರಾಧನೆಯನ್ನು ಮತ್ತಷ್ಟು ಅದ್ಭುತವಾಗಿ ಆಚರಿಸುತ್ತಿದ್ದವರು. ನಿರಂತರ ಯಜ್ಞಾದಿಗಳಲ್ಲಿ ಆಸಕ್ತರಾಗಿದ್ದವರು. ಶ್ರೀಹರಿ ಅವರ ಕರ್ಮಾನುಷ್ಠಾನದಿಂದ ಸುಪ್ರೀತನಾಗಿದ್ದ. ಅವರಿಗೆ ಪೂರ್ಣಫಲ ನೀಡಲು ಅದ್ಭುತವಾದ ಲೀಲೆಯೊಂದನ್ನು ತೋರಿದ.

ಪರಮಾತ್ಮನ ಅನುಗ್ರಹವೇ ಹಾಗೆ. ತನ್ನ ಭಕ್ತರಿದ್ದೆಡೆಗೆ ತಾನೇ ಹುಡುಕಿಕೊಂಡು ಬರುತ್ತಾನೆ. ಪರಮಾತ್ಮನ ಸನ್ನಿಧಾನವಿರುವ ಗುರುಗಳೂ ಹಾಗೆಯೇ. ತಮ್ಮ ಶಿಷ್ಯರಿದ್ದೆಡೆ ತಾವೇ ಹುಡುಕಿಕೊಂಡು ಬರುತ್ತಾರೆ. ಶ್ರೀಮದಾಚಾರ್ಯರೂ ಸಹ ಸಜ್ಜನರಿದ್ದೆಡೆಗೆ ಹೋಗಿ ತತ್ವೋಪದೇಶವನ್ನು ಮಾಡುತ್ತಿದ್ದರು ಎನ್ನುವ ಮಾತನ್ನು ಮಧ್ವವಿಜಯದ ಒಂಭತ್ತನೆಯ ಸರ್ಗದಲ್ಲಿ ಕೇಳುತ್ತೇವೆ – “ನಿಮ್ನಭೂರಿವ ಸತೀಃ ಪ್ರಜಾ ವ್ರಜನ್” ಎಂದು. ಹಾಗೆ, ಶ್ರೀ ಪಾಂಡುರಂಗೀ ಬಾಬಾಚಾರ್ಯರ ಸತ್ಕರ್ಮಗಳ ಫಲವನ್ನು ನೀಡಲು ಸ್ವಯಂ ಶ್ರೀ ಸತ್ಯಪೂರ್ಣತೀರ್ಥಶ್ರೀಪಾದಂಗಳವರೇ ರಾಜಮನ್ನಾರಿಗೆ ಆಗಮಿಸುತ್ತಾರೆ. ಹರಿದ್ರಾತೀರದಲ್ಲಿ ಶ್ರೀ ಬಾಬಾಚಾರ್ಯರು ಯಜ್ಞದಲ್ಲಿ ದೀಕ್ಷಿತರಾಗಿ ಕುಳಿತಿರುತ್ತಾರೆ. ಆಗ, ಶ್ರೀ ಸತ್ಯಪೂರ್ಣರು ತಮ್ಮ ವಿದ್ವಾಂಸಶಿಷ್ಯರ ಕೈಯಲ್ಲಿ ಬಾಬಾಚಾರ್ಯರಿಗೆ ಕರೆ ಕಳುಹಿಸುತ್ತಾರೆ, ಯಜ್ಞದ ಪದಾರ್ಥಗಳನ್ನೆಲ್ಲ ನದಿಯಲ್ಲಿ ಹಾಕಿ ಈಗಲೇ ಹೊರಟು ಬರಲು ತಿಳಿಸು ಎಂದು. ಆ ವಿದ್ವಾಂಸರು ಬಂದು ಶ್ರೀ ಬಾಬಾಚಾರ್ಯರಿಗೆ ವಿನಯದಿಂದ ಈ ಮಾತನ್ನು ತಿಳಿಸುತ್ತಾರೆ. ಶ್ರೀ ಸತ್ಯಪೂರ್ಣರು ಹೇಳಿದ್ದಾರೆ ಎಂದು ಕೇಳಿದ ತಕ್ಷಣ ಯಜ್ಞದೀಕ್ಷಿತರಾಗಿದ್ದ ಶ್ರೀ ಬಾಬಾಚಾರ್ಯರು ಯಜ್ಞದ ಸಮಗ್ರ ಸಾಮಗ್ರಿಗಳನ್ನೂ ಹರಿದ್ರಾನದಿಯಲ್ಲಿ ವಿಸರ್ಜಿಸಿ ಹಾಗೆಯೇ ಗುರುಗಳ ದರ್ಶನಕ್ಕೆ ಹೊರಟು ಬರುತ್ತಾರೆ.

ಅವರನ್ನು ಪ್ರೀತಿಯಿಂದ ಬರಮಾಡಿಕೊಂಡ ಶ್ರೀ ಸತ್ಯಪೂರ್ಣರು ಅವರಿಗೆ ಫಲವನ್ನು ನೀಡಿ, “ರಾಮದೇವರ ಪೂಜೆಗೆ ಸಿದ್ಧರಾಗಿ, ಸಂನ್ಯಾಸವನ್ನು ಸ್ವೀಕರಿಸಿ” ಎಂದು ಅದೇಶಿಸುತ್ತಾರೆ. ಪರಮಾನುಗ್ರಹ ಎಂದು ನುಡಿದು ಸಾಷ್ಟಾಂಗವೆರಗಿದ ಶ್ರೀ ಬಾಬಾಚಾರ್ಯರು ಸಂನ್ಯಾಸವನ್ನು ಸ್ವೀಕರಿಸುತ್ತಾರೆ, ಶ್ರೀ ಸತ್ಯವಿಜಯತೀರ್ಥರಾಗಿ ವೇದಾಂತಸಾಮ್ರಾಜ್ಯದ ಅಧಿಪತಿಗಳಾಗುತ್ತಾರೆ.

ಗುರುಗಳ ಮಾತಿಗೆ ಪ್ರತಿಯಾಡದೆ ನಡೆದ ಶ್ರೀ ಸತ್ಯವಿಜಯರ ಮಾಹಾತ್ಮ್ಯವಿದು. ಅವರ ಗುರುಭಕ್ತಿಯ ಕುರಿತು ಮಾತನಾಡುವದಕ್ಕಿಂತ ಮುಂಚೆ ಒಂದು ತಾತ್ವಿಕ ಪ್ರಶ್ನೆಗೆ ಉತ್ತರವನ್ನು ಪಡೆದುಕೊಳ್ಳೋಣ.

ಶ್ರೀ ಬಾಬಾಚಾರ್ಯರು ಗುರುಗಳ ಮಾತಿನಂತೆ ಯಜ್ಞದ ಸಾಮಗ್ರಿಗಳನ್ನೆಲ್ಲ ನದಿಗೆ ಹಾಕಿದರು, ಸರಿ. ಆದರೆ, ಯಜ್ಞದಂತಹ ಶ್ರೇಷ್ಠ ಸತ್ಕರ್ಮವನ್ನು ಶ್ರೀ ಸತ್ಯಪೂರ್ಣರು ಯಾಕಾಗಿ ನಿಲ್ಲಿಸಿದರು? ಅದು ತಪ್ಪಲ್ಲವೇ? ಯಜ್ಞದ ಮಧ್ಯದಲ್ಲಿಯೇ ಬಂದು ತಮ್ಮನ್ನು ಕಂಡು ಹೋಗಿ ಎನ್ನಬಹುದಾಗಿತ್ತು, ಆದರೆ, ಯಜ್ಞದ ಸಾಮಗ್ರಿಗಳನ್ನೇ ನದಿಗೆ ಹಾಕಿಸಿದ್ದು ಎಷ್ಟರ ಮಟ್ಟಿಗೆ ಸರಿ?

ತುಂಬ ಮಹತ್ತ್ವದ ಪ್ರಶ್ನೆಯಿದು. ಆದರೆ ಶ್ರೀಮದಾಚಾರ್ಯರು ಪರಿಹರಿಸದ ಸಮಸ್ಯೆಯಿಲ್ಲ, ಉತ್ತರ ನೀಡದ ಪ್ರಶ್ನೆಯಿಲ್ಲ.

ನೋಡಿ, ಗೃಹಸ್ಥನಿಗೇನು ಶಾಸ್ತ್ರಗಳಲ್ಲಿ ವಿವಿಧಕರ್ಮಗಳನ್ನು ವಿಧಿಸಲಾಗಿದೆ, ಅದರ ಫಲ ಮನಸ್ಸಿನ ಪರಿಶುದ್ಧಿ. ಅದು ದೊರೆತಾದ ಬಳಿಕ ಮಾತ್ರ ಮನುಷ್ಯ ಸಂನ್ಯಾಸಕ್ಕೆ ಅರ್ಥಾತ್ ಕರ್ಮತ್ಯಾಗಕ್ಕೆ ಅರ್ಹನಾಗುತ್ತಾನೆ. ಮಾನಸಿಕಶುದ್ಧಿಯಿಲ್ಲದ ವ್ಯಕ್ತಿ ಸಂನ್ಯಾಸ ತೆಗೆದುಕೊಳ್ಳವದು ಎಂದು ಅತ್ಯಂತ ನಿಂದನೀಯ ಎಂದು ಶಾಸ್ತ್ರಗಳಲ್ಲಿದೆ. ಶ್ರೀಮದಾಚಾರ್ಯರು ಐತರೇಯದ ಭಾಷ್ಯದಲ್ಲಿ ಹೇಳುತ್ತಾರೆ – “ಕರ್ಮಭಿಃ ಶುದ್ಧಸತ್ವಾನಾಂ ಕರ್ಮತ್ಯಾಗೋ ವಿಧೀಯತೇ” ಯಾರು ಕರ್ಮಗಳ ಸತತ ಅನುಷ್ಠಾನವನ್ನು ಮಾಡಿ ಮನಸ್ಸನ್ನು ಪರಿಶುದ್ಧಗೊಳಿಸಿಕೊಂಡಿದ್ದಾರೆಯೋ ಅವರು ಮಾತ್ರ ಕರ್ಮತ್ಯಾಗಕ್ಕೆ ಅರ್ಥಾತ್ ಸಂನ್ಯಾಸಕ್ಕೆ ಅರ್ಹರಾಗುತ್ತಾರೆ. ಕರ್ಮತ್ಯಾಗವನ್ನು ಮಾಡಿ ಶ್ರೇಷ್ಠ ಸಂನ್ಯಾಸಧರ್ಮವನ್ನು ಪಾಲನೆ ಮಾಡುತ್ತಿದ್ದ ಶ್ರೀ ಸತ್ಯಪೂರ್ಣತೀರ್ಥಶ್ರೀಪಾದಂಗಳವರೂ ಇದನ್ನು ಅರಿತಿದ್ದರು. ಮನಃಶುದ್ಧಿಯನ್ನು ನೀಡು ಸ್ವಾಮಿ ಎಂದು ಪ್ರಾರ್ಥನೆ ಮಾಡುತ್ತಲೇ ಕರ್ಮಾನುಷ್ಠಾನ ಮಾಡುತ್ತಿದ್ದ ಶ್ರೀ ಪಾಂಡುರಂಗೀ ಬಾಬಾಚಾರ್ಯರೂ ಅರಿತಿದ್ದರು. ಹೀಗಾಗಿ ಶ್ರೀ ಸತ್ಯಪೂರ್ಣರು ಯಜ್ಞವನ್ನು ನಿಲ್ಲಿಸಿ ಮಧ್ಯದಲ್ಲಿ ಬರಲು ಹೇಳುವದಿಲ್ಲ. ಅವರ ಕರ್ಮಗಳ ಸತ್ಫಲವನ್ನು ನೀಡಲಿಕ್ಕಾಗಿಯೇ “ಕರ್ಮತ್ಯಾಗವನ್ನು” ಅರ್ಥಾತ್ “ಮಾಡುತ್ತಿದ್ದ ಯಜ್ಞದ ತ್ಯಾಗವನ್ನು” ಮಾಡಲು ಆದೇಶಿಸುತ್ತಾರೆ. ಈ ರೀತಿಯ ಗುರುಗಳ ಆಜ್ಞೆಗಾಗಿಯೇ ತವಕದಿಂದ ಕಾಯುತ್ತಿದ್ದ ಶ್ರೀ ಬಾಬಾಚಾರ್ಯರು ಸಮಗ್ರ ಯಜ್ಞಸಾಮಗ್ರಿಗಳನ್ನು ಹರಿದ್ರಾನದಿಯಲ್ಲಿ ತ್ಯಾಗ ಮಾಡಿ ಗುರುಗಳ ಸನ್ನಿಧಾನಕ್ಕೆ ಧಾವಿಸುತ್ತಾರೆ.

ಶ್ರೀ ಬಾಬಾಚಾರ್ಯರು, “ಯಜ್ಞದಲ್ಲಿ ದೀಕ್ಷಿತನಾಗಿರುವದು ಗೊತ್ತಿಲ್ಲವೇನು, ಯಜ್ಞ ಮುಗಿದ ಮೇಲೆ ಬರುತ್ತೇನೆ ಎಂದು ಹೇಳು” ಎಂದು ಉತ್ತರಿಸಿದ್ದರೆ ಅವರು ಶ್ರೀ ಸತ್ಯವಿಜಯರಾಗಲು, ಅರ್ಥಾತ್ ವೇದಾಂತಪೀಠದ ಸಾರ್ವಭೌಮರಾಗಲು ಸಾಧ್ಯವಿರುತ್ತಿರಲಿಲ್ಲ. ಶ್ರೀ ಸತ್ಯಪೂರ್ಣರೂ ಅವರಿಗೆ ಸಂನ್ಯಾಸವನ್ನು ನೀಡುತ್ತಿರಲಿಲ್ಲ. ಸರ್ವಥಾ ನೀಡುತ್ತಿರಲಿಲ್ಲ.

ಮತ್ತೂ, ಯಾವ ಕರ್ಮದಿಂದ, ಎಷ್ಟು ಕರ್ಮಗಳಿಂದ ಯಾವ ಫಲ ಉಂಟಾಗಬೇಕೋ ಆ ಫಲ ಆ ಕರ್ಮದ ಕಟ್ಟಕಡೆಯ ಕ್ಷಣಕ್ಕೆ ಉಂಟಾಗಿಯೇ ಬಿಡುತ್ತದೆ ಎನ್ನವದಕ್ಕೂ ಶ್ರೀಸತ್ಯವಿಜಯರ ಚರಿತ್ರೆ ದೃಷ್ಟಾಂತ. ಆರು ತಿಂಗಳ ಕಾಲ ಸತತವಾಗಿ ಧ್ಯಾನ ಮಾಡುತ್ತಿದ್ದ ಧ್ರುವನಿಗೆ ಒಮ್ಮೆಲೇ ಧ್ಯಾನಭಂಗವಾಗುತ್ತದೆ, ಕಣ್ಣುಬಿಡುತ್ತಾನೆ, ಕಲ್ಪನೆಯಲ್ಲಿ ಕಾಣುತ್ತಿದ್ದ ಸ್ವಾಮಿ ಸಾಕ್ಷಾತ್ತಾಗಿ ಎದುರಿಗೆ ನಿಂತಿದ್ದಾನೆ. ಹಿರಣ್ಯಕಶಿಪು ಕತ್ತಿ ಬೀಸಿ ಮಗನನ್ನು ಕೊಲ್ಲಲು ಉದ್ಯುಕ್ತನಾಗುತ್ತಾನೆ. ಕೊಲ್ಲಲಿಕ್ಕಿಂತ ಮುಂಚೆ ಇವನ ಸೊಕ್ಕನ್ನಡಗಿಸಿ ಕೊಲ್ಲೋಣ ಎಂದು ಕಂಬಕ್ಕೆ ಝಾಡಿಸಿ ಒದೆಯುತ್ತಾನೆ, ಸ್ವಾಮಿ ಕಂಬ ಸೀಳಿ ಪ್ರತ್ಯಕ್ಷನಾಗುತ್ತಾನೆ. ಹಾಗೆ, ಶ್ರೀ ಬಾಬಾಚಾರ್ಯರು ತಮ್ಮ ಕರ್ಮಗಳಿಂದ ಎಷ್ಟು ಫಲವನ್ನು ಪಡೆಯಬೇಕಾಗಿತ್ತೋ ಅದನ್ನು ಪಡೆಯವ ಕ್ಷಣ ಒದಗಿತ್ತು. ಮುಂದಿನದು ಆವಶ್ಯಕತೆಯಿರಲಿಲ್ಲ. ಇದನ್ನು ತಿಳಿದ ಶ್ರೀ ಸತ್ಯಪೂರ್ಣತೀರ್ಥಶ್ರೀಪಾದಂಗಳವರು ಆಚಾರ್ಯರಿಗೆ ಹೇಳಿ ಕಳುಹಿಸುತ್ತಾರೆ. ಜನ್ಮಾಂತರಗಳಿಂದ ಈ ಆಜ್ಞೆಗೆ ಕಾಯುತ್ತಿದ್ದ ಬಾಬಾಚಾರ್ಯರು ಸಕಲವನ್ನೂ ತೊರೆದು ಗುರುಗಳ ಸನ್ನಿಧಿಗೆ ಓಡಿ ಬರುತ್ತಾರೆ.

ಗುರುಭಕ್ತಿಯ, ಶಾಸ್ತ್ರಜ್ಞಾನದ ಮತ್ತು ಸತ್ಕರ್ಮಗಳ ಪರಿಪಾಕದ ಅವಸ್ಥೆಯಿದು.

ಅವರಿಗೆ ಗುರುಭಕ್ತಿ ಇರಲಿಲ್ಲವಾಗಿದ್ದರೆ, ಆಮೇಲೆ ಹೋದರಾಯಿತು ಎಂದು ಸುಮ್ಮನಾಗುತ್ತಿದ್ದರು. ಅವರಿಗೆ ಶಾಸ್ತ್ರಜ್ಞಾನವಿರಲಿಲ್ಲವಾಗಿದ್ದರೆ, ಕರ್ಮವನ್ನು ಬಿಡುವದೆಂತು ಎಂದು ಸಂದೇಹಕ್ಕೆ ಒಳಗಾಗುತ್ತಿದ್ದರು. ಅವರಿಗೆ ಸತ್ಕರ್ಮಾನುಷ್ಠಾನದ ಫಲ ದೊರೆತಿರಲಿಲ್ಲವಾಗಿದ್ದರೆ ಶ್ರೀ ಸತ್ಯಪೂರ್ಣರು ಸಂನ್ಯಾಸವನ್ನೇ ನೀಡುತ್ತಿರಲಿಲ್ಲ.

ನಮ್ಮ ಪರಂಪರೆಯ ಪ್ರತಿಯೊಬ್ಬ ಮಹಾನುಭಾವರೂ ಹೀಗೆಯೇ. ನಮ್ಮ ಶ್ರೀಮದಾಚಾರ್ಯರ ಒಂದೊಂದು ವಚನಕ್ಕೆ ಸಾಕ್ಷಿಯಾಗಿ ಅವರ ಜೀವನವೇ ನಿಲ್ಲುತ್ತದೆ. ಅಥವಾ ಶ್ರೀಮದಾಚಾರ್ಯರ ಒಂದೊಂದು ವಚನದ ಮಾಹಾತ್ಮ್ಯವನ್ನು ತಮ್ಮ ಜೀವನದಿಂದಲೇ ತೋರುವದಕ್ಕಾಗಿಯೇ ಅವತರಿಸಿದ ಮಹಾನುಭಾವರು. ಆ ಪರಿ ಶಾಸ್ತ್ರತತ್ವಗಳನ್ನು ತಮ್ಮ ಜೀವನದಲ್ಲಿ ಮೈಗೂಡಿಸಿಕೊಂಡ ಪುಣ್ಯಮೂರ್ತಿಗಳು. ನಮಗೆ ಶ್ರೀಮಧ್ವಶಾಸ್ತ್ರದಲ್ಲಿ, ಗುರುಗಳಲ್ಲಿ, ಸತ್ಕರ್ಮಗಳಲ್ಲಿ ನಿಷ್ಠೆಯನ್ನು ನೀಡಲಿಕ್ಕಾಗಿಯೇ ಅವತರಿಸಿಬಂದ ಕಾರಣಪುರುಷರು.

ಗುರುಭಕ್ತಿಯ ಸಾಕಾರಮೂರ್ತಿಗಳಾಗ ಶ್ರೀ ಸತ್ಯವಿಜಯರ ಆರಾಧನೆ ಇಂದು. ಭಕ್ತಿಯಿಂದ ಅವರನ್ನು ಸ್ಮರಿಸಿ. ನಿಮ್ಮ ಮನೆಯಲ್ಲಿ ನೀವು ಯಾವುದೇ ಹೋಮ, ಪೂಜೆಯನ್ನು ಆರಂಭಿಸುವದಕ್ಕಿಂತ ಮುಂಚೆ ಶ್ರೀಸತ್ಯವಿಜಯತೀರ್ಥಗುರುಭ್ಯೋ ನಮಃ ಎಂಬ ಮಂಗಳಮಂತ್ರವನ್ನು ಜಪ ಮಾಡಿ ಕರ್ಮಾನುಷ್ಠಾನವನ್ನು ಆರಂಭಿಸಿ. ನಿಮ್ಮ ಕರ್ಮಗಳಿಗೆ ಫಲ ದೊರೆಯುತ್ತದೆ. ಜೀವನದಲ್ಲಿ ಮೇಲಿಂದಮೇಲೆ ಸೋಲನ್ನನುಭವಿಸುತ್ತಿದ್ದರೆ, ಮುಟ್ಟಿದ್ದೆಲ್ಲ ಮಣ್ಣಾಗುತ್ತಿದ್ದರೆ, ಮಾಡುತ್ತಿರುವ ಕೆಲಸವನ್ನು ಬದಿಗೊತ್ತಿ ಶ್ರೀ ಸತ್ಯವಿಜಯನಗರದಲ್ಲಿರುವ ಶ್ರೀಗುರುಗಳ ವೃಂದಾವನದ ಬಳಿಗೆ ಹೋಗಿ. ಮೂರು ದಿವಸ, ಐದು ದಿವಸ, ಅವರ ವೃಂದಾವನಕ್ಕೆ ಮೈದಣಿಯುವಷ್ಟು ನಮಸ್ಕಾರ ಮಾಡಿ ಬನ್ನಿ. ಗೆಲುವು ನಿಮ್ಮದಾಗುತ್ತದೆ.

ಈಗ ತಾನೇ ಹೊಸದಾಗಿ ಉದ್ಯಮ ಆರಂಭಿಸುತ್ತಿರುವವರು, ಕೆಲಸ ಆರಂಭಿಸುತ್ತಿರುವವರು, ಸಹೋದ್ಯೋಗಿಗಳಿಂದ ಕಿರಿಕಿರಿ ಅನುಭವಿಸುತ್ತಿರುವವರು ಶ್ರೀಗುರುಗಳ ದರ್ಶನ ಪಡೆದು, ಸೇವೆ ಮಾಡಿ ಬನ್ನಿ ಶ್ರೀಸತ್ಯವಿಜಯರು ನಿಮಗೆ ವಿಜಯವನ್ನು ದಯಪಾಲಿಸುತ್ತಾರೆ.

ಅವರ ಅನುಗ್ರಹ ಸಮಗ್ರ ಮಾಧ್ವ ಸಮುದಾಯದ ಮೇಲಿರಲಿ ಎಂದು ಇಡಿಯ ಜೀವದ ಭಕ್ತಿಯಿಂದ ಅವರಲ್ಲಿ ಪ್ರಾರ್ಥನೆ ಮಾಡಿಕೊಂಡು ಈ ಗುರುಸ್ಮರಣೆಯ ಫಲವನ್ನು ನನ್ನ ಗುರುಗಳ ಪಾದಕ್ಕೊಪ್ಪಿಸಿಕೊಳ್ಳುತ್ತೇನೆ.

ಗುರ್ವಂತರ್ಗತ-ಮಧ್ವಾಂತರ್ಗತ-ಶ್ರೀಕೃಷ್ಣಾರ್ಪಣಮಸ್ತು.

– ವಿಷ್ಣುದಾಸ ನಾಗೇಂದ್ರಾಚಾರ್ಯ

ಇವುಗಳೂ ನಿಮಗಿಷ್ಟವಾಗಬಹುದು

vishwanandini-020

ವಿಶ್ವನಂದಿನಿ ಲೇಖನ ಮಾಲೆ – 020

ಶ್ರೀಕನಕದಾಸರ ಹರಿಭಕ್ತಿಸಾರ ವಿಷ್ಣುದಾಸರ ಸಾರಾಮೃತವ್ಯಾಖ್ಯಾನದೊಂದಿಗೆ ಪದ್ಯ – ೨ ದೇವದೇವ ಜಗದ್ಭರಿತ ವಸು- ದೇವಸುತ ಜಗದೇಕನಾಥ ರ- ಮಾವಿನೋದಿತ ಸಜ್ಜನಾನತ …

Leave a Reply

Your email address will not be published. Required fields are marked *