vishwanandini-014

ವಿಶ್ವನಂದಿನಿ ಲೇಖನ ಮಾಲೆ – 014

ದಾಸಸುರಭಿ

ಶ್ರೀ ಪುರಂದರದಾಸರ “ಮೂರ್ಖರಾದರು ಲೋಕದೊಳಗೆ” ಎಂಬ ಹಾಡಿನ ಅರ್ಥ – ಭಾಗ – ೩

ಹಿಂದಿನ ಎರಡು ಪದ್ಯಗಳಲ್ಲಿ ಎರಡು ರೀತಿಯ ಮೂರ್ಖರನ್ನು ಉಲ್ಲೇಖಿಸಿದ ಶ್ರೀ ಪುರಂದರದಾಸರು ಈ ಮೂರನೆಯ ಪದ್ಯದಲ್ಲಿ ಮತ್ತೆ ಎರಡು ರೀತಿಯ ಮೂರ್ಖರನ್ನು ಉಲ್ಲೇಖಿಸುತ್ತಾರೆ.

ಮಾಡಲಿಕ್ಕಾಗದ ಕೆಲಸವನ್ನು ಮಾಡುವವನು ಮೂರ್ಖ, ಮಾಡಬೇಕಾದ ಕೆಲಸವನ್ನು ಮಾಡಿದಿರುವವನೂ ಮೂರ್ಖ ಎನ್ನುತ್ತಾರೆ, ಪುರಂದರದಾಸರು.

ಮುಪ್ಪಿನಲಿ ಮದುವೆ ಮಾಡಿ ಮಾಡಿಕೊಂಬುವ ಮೂರ್ಖ
ಸರ್ಪದಲಿ ಸರಸವಾಡುವನೇ ಮೂರ್ಖ
ಇಪ್ಪತ್ತು ಒಂದು ಕುಲ ಉದ್ಧರಿಸದವ ಮೂರ್ಖ
ಅಪ್ಪರಂಗಯ್ಯ ಭಜಿಸದವ ಮೂರ್ಖನಯ್ಯ ।। ೩ ।।

“ಮುಪ್ಪಿನಲಿ ಮದುವೆ ಮಾಡಿಕೊಂಬುವ ಮೂರ್ಖ”

ತುಂಬ ವಿವರಣೆ ಬೇಕಿಲ್ಲ. ಸಮಾಜದಲ್ಲಿ ಈ ರೀತಿಯ ಮೂರ್ಖರನ್ನೂ, ಅವರ ಮೂರ್ಖತನವನ್ನೂ ಕಾಣುತ್ತಲೇ ಇರುತ್ತೇವೆ.

ಮದುವೆ ಎನ್ನುವದು ಒಂದು ಹೊಸ ಜೀವನದ ಆರಂಭ. ಜೀವನವೇ ಮುಗಿಯುವ ಕಾಲದಲ್ಲಿ ಜೀವನ ಆರಂಭ ಮಾಡುವದು ಮೂರ್ಖತನವಲ್ಲವೇ?

ಮದುವೆ ಎನ್ನುವದು ಮಹತ್ತರ ಜವಾಬ್ದಾರಿ. ತನ್ನ ಜವಾಬ್ದಾರಿಯನ್ನೇ ಮತ್ತೊಬ್ಬರು ಹೊರಬೇಕಾದ ಅನಿವಾರ್ಯತೆ ಇರುವ ವಯಸ್ಸಿನಲ್ಲಿ ಮತ್ತೊಂದು ಜೀವದ ಜವಾಬ್ದಾರಿ ಹೊರುವದು ಮೂರ್ಖತನವಲ್ಲವೇ ?

ಮದುವೆ ಎನ್ನುವದು ಇರುವ ಕನಸುಗಳನ್ನು ನನಸಾಗಿಸಲು, ಹೊಸ ಕನಸುಗಳನ್ನು ಕಟ್ಟಿ ಅವನ್ನೂ ನನಸಾಗಿಸಲು ಹೊರಡುವ ಸಾಹಸಿಯ ಊರುಗೋಲು. ನಡೆಯಲಿಕ್ಕೈ ಊರುಗೋಲು ಬೇಕಾದ ವಯಸ್ಸಿನಲ್ಲಿ ಸಾಹಸದ ಕೆಲಸಕ್ಕಿಳಿಯುವದು ಮೂರ್ಖತನವಲ್ಲವೇ?

ಮದುವೆ ಎನ್ನುವದು ದೇಹದ ಕಾವನ್ನು ಆರಿಸಲಿಕ್ಕೆ ಇರುವ ತಂಪನೆಯ ನೀರು. ದೇಹದಲ್ಲಿ ಕಾವೇ ಇಲ್ಲದಮೇಲೆ ನೀರನ್ನು ತಂದಿಟ್ಟುಕೊಳ್ಳುವದು ಮೂರ್ಖತನವಲ್ಲವೇ?

ಮದುವೆ ಎನ್ನುವದು ನಮ್ಮನ್ನು ನಂಬಿ ಬಂದ ಹೆಣ್ಣಿಗೆ ಸುಖ, ಸಂತೋಷ, ನೆಮ್ಮದಿ, ಗೌರವ, ಸಮಾಜದಲ್ಲಿ ಸ್ಥಾನಮಾನ ಇವೆಲ್ಲವನ್ನು ನೀಡುವ ಹೊಣೆಗಾರಿಕೆ. ಅವನ್ನೆಲ್ಲ ಅವಳಿಂದ ಕಸಿದುಕೊಳ್ಳುವ ಕೆಲಸ ಮೂರ್ಖತನವಷ್ಟೇ ಅಲ್ಲ, ಅಪರಾಧ ಸಹಿತ.

ಮುಪ್ಪು ಎನ್ನುವದು ಭಗವಂತನ ಕುರಿತು ವಿಚಾರ ಮಾಡಲು ಮನುಷ್ಯನಿಗಿರುವ ಕಟ್ಟ ಕಡೆಯ ಕಾಲ. ಅದನ್ನು ಮಾಡದೇ ಮದುವೆ ಮಾಡಿಕೊಳ್ಳುವದು ಮೂರ್ಖತನವಲ್ಲದೇ ಮತ್ತೇನು?

ಮುಪ್ಪು ಎನ್ನುವದು ನಮ್ಮ ಜೀವನದ ಅನುಭವಗಳಿಂದ ನಮ್ಮ ಮುಂದಿನವರಿಗೆ ಪಾಠ ಹೇಳುವ ಸಮಯ. ಆ ಸಮಯದಲ್ಲಿ ಬೇರೆಯವರಿಂದ ಬುದ್ಧಿಮಾತು ಕೇಳುವ ಹೀನ ಪರಿಸ್ಥಿತಿ ಮೂರ್ಖತನವಲ್ಲದೇ ಮತ್ತೇನು?

ಮುಪ್ಪು ಬಂದವನನ್ನು ಹೆಣ್ಣುಮಕ್ಕಳು ಅಕ್ಕರೆಯಿಂದ ಕಾಣುತ್ತಾರೆ. ಗೌರವಿಸುತ್ತಾರೆ. ಅಂತಹ ಅಕ್ಕರೆ ಗೌರವಗಳನ್ನು ಪಡೆಯಬೇಕಾದ ವಯಸ್ಸಿನಲ್ಲಿ ಮತ್ತೇನನ್ನೋ ಪಡೆಯ ಹೋಗುವದು ಮೂರ್ಖತನವಲ್ಲದೇ ಮತ್ತೇನು ?

ಮುಪ್ಪು ಎನ್ನುವದು ತಾನು ಹಿಂದೆ ಮಾಡಿದ ತಪ್ಪುಗಳನ್ನು ನೆನೆದು, ಅದರ ಪರಿಹಾರಕ್ಕಾಗಿ ಪರಮಾತ್ಮನನ್ನು ಪ್ರಾರ್ಥಿಸಬೇಕಾದ ಸುಕಾಲ. ಆಗಲೂ ಇಂತಹ ದೊಡ್ಡ ತಪ್ಪನ್ನು ಮಾಡುವದು ಮೂರ್ಖತವನಲ್ಲದೇ ಮತ್ತೇನು?

ಮುಪ್ಪು ಎನ್ನುವದು ಮನುಷ್ಯ ಜೀವನದ ಅಸ್ಥಿರತೆಯನ್ನು ಸಾರಿ ಹೇಳುವ ದೇಹದ ಅವಸ್ಥೆ. ಅದನ್ನು ಮುಟ್ಟಿಯೂ ಮನುಷ್ಯ ವಿವೇಕಕ್ಕೆ ಬಾರದೆ ಮದುವೆಯಾಗಲಿಕ್ಕೆ ಹೋಗುವದು ಮೂರ್ಖತನವಲ್ಲದೇ ಮತ್ತೇನು?

ಮುಪ್ಪು ಎನ್ನುವದು ಎಲ್ಲರಿಂದ ಗೌರವವನ್ನು ಪಡೆಯಬೇಕಾದ ಸಮಯ. ಆ ಸಮಯದಲ್ಲಿ ಹತ್ತು ಜನರ ಅಸಹ್ಯಕ್ಕೆ ಗುರಿಯಾಗುವದು ಮೂರ್ಖತನವಲ್ಲದೇ ಮತ್ತೇನು?

“ಸರ್ಪನೊಳು ಸರಸವಾಡುವನೇ ಮೂರ್ಖ”

ಮಾಡಲಿಕ್ಕಾಗದ ಕೆಲಸವನ್ನು ಎಂದಿಗೂ ಮಾಡಲಿಕ್ಕೆ ಹೋಗಬಾರದು. ಮುಪ್ಪಿನಲಿ ಮದುವೆಯಾಗುವದರಿಂದ ಮರ್ಯಾದೆ ಹೋಗುತ್ತದೆ. ಆದರೆ, ಹಾವಿನೊಟ್ಟಿಗೆ ಸರಸದಂತಹ ಕೆಲಸದಿಂದ ಮನುಷ್ಯನ ಜೀವಕ್ಕೇ ಕುತ್ತುಂಟಾಗುತ್ತದೆ. ಅಂತಹ ಅವಿವೇಕದ ಕೆಲಸವನ್ನು ಮಾಡುವವನು ಮೂರ್ಖ.

ನಮ್ಮ ಜೀವನದಲ್ಲಿ ನಾವು ಅನೇಕ ಪರಿಸ್ಥಿತಿಗಳನ್ನು ಎದುರಿಸುತ್ತೇವೆ. ಕೆಲವು ಬಾರಿ ನಮ್ಮ ಕೈಮೀರಿದ ವಿಷಯಗಳು ಎದುರಾಗುತ್ತವೆ. ಮನುಷ್ಯ ಆ ಪರಿಸ್ಥಿತಿಯನ್ನು ಎದುರಿಸುವದಕ್ಕಿಂತ ಮುಂಚೆ ತನಗದು ಸಾಧ್ಯವೇ ಎಂದು ಹತ್ತಾರು ಬಾರಿ ಯೋಚಿಸಬೇಕು. ವಿವೇಕಿಯಾದವನು ತನ್ನ ಕೈಮೇರಿದ ಕಾರ್ಯಕ್ಕೆ ಕೈ ಹಾಕುವದಿಲ್ಲ.

ಮಹಾಭಾರತದಲ್ಲಿ ಜರಾಸಂಧನನ್ನು ಕೊಲ್ಲುವ ಸಂದರ್ಭ. ಕೃಷ್ಣ, ಭೀಮ, ಅರ್ಜುನರು ಬ್ರಾಹ್ಮಣರ ವೇಷದಲ್ಲಿ ಜರಾಸಂಧನ ಅರಮನೆಗೇ ಹೋಗಿರುತ್ತಾರೆ, ಅಲ್ಲಿ ಜರಾಸಂಧನನ್ನು ಕೃಷ್ಣ ಯುದ್ಧಕ್ಕೆ ಆಹ್ವಾನಿಸುತ್ತಾನೆ. ನಮ್ಮ ಮೂವರಲ್ಲಿ ಯಾರೊಟ್ಟಿಗಾದರೂ ಕದನಕ್ಕಿಳಿ ಎನ್ನುತ್ತಾನೆ. ಆಗ ಜರಾಸಂಧ ಅರ್ಜುನನ್ನು ನೋಡಿ, ಇವನು ಸಣ್ಣ ಹುಡುಗ, ಇವನೊಟ್ಟಿಗೆ ನಾನು ಕಾದುವದಿಲ್ಲ ಎನ್ನುತ್ತಾನೆ. ಅರ್ಜುನನಿಗೆ ಆಗ ಸರಿಯಾಗಿ ಐವತ್ತೈದು ವರ್ಷ. ಗಾಂಡೀವದಿಂದ ಇಂದ್ರನನ್ನೇ ಗೆದ್ದು ಖಾಂಡವವನ್ನು ಅಗ್ನಿಗೆ ನೀಡಿದ ಸಾಹಸಿ. ದ್ರುಪದನನ್ನು ಹೆಡೆಮುರಿ ಕಟ್ಟಿ ದ್ರೋಣರ ಕಾಲಿಗೊಪ್ಪಿಸಿದ ವೀರ. ಇಷ್ಟಾದರೂ ಜರಾಸಂಧ ತನ್ನನ್ನು ಬಾಲಕ ಎಂದು ಕರೆದಾಗ ಅರ್ಜುನ ಸುಮ್ಮನಾಗುತ್ತಾನೆ. ಏನನ್ನೂ ಮಾತನಾಡುವದಿಲ್ಲ. “ಮೊದಲಿಗೆ ಕಾದು ಬಾ, ಆಮೇಲೆ ಹುಡುಗ ಯಾರು ಎಂದು ತೋರಿಸುತ್ತೇನೆ” ಎಂದು ಪೌರುಷದ ಮಾತನ್ನಾಡುವದಿಲ್ಲ. ಜರಾಸಂಧ ನನಗಿಂತ ಸಾಹಸಿ ಇದ್ದಾನೆ. ಅವನನ್ನು ನನಗೆ ಗೆಲ್ಲಲಿಕ್ಕೆ ಸಾಧ್ಯವಾಗದಿರಬಹುದು ಎಂದು ಸುಮ್ಮನಾಗುತ್ತಾನೆ. ಆ ಬಳಿಕ ಜರಾಸಂಧ ಭೀಮನನ್ನು ಆರಿಸಿಕೊಳ್ಳುತ್ತಾನೆ, ಭೀಮ ಅವನನ್ನು ಎರಡು ಹೋಳು ಮಾಡಿ ಮಣ್ಣಾಗಿಸುತ್ತಾನೆ.

ನಾವು ತಿಳಿಯಬೇಕಾದ ಅಂಶ, ನಮಗೆಷ್ಟೋ ವಿಷಯದಲ್ಲಿ ಸಾಹಸವಿರುತ್ತದೆ. ಸಾಮರ್ಥ್ಯವಿರುತ್ತದೆ. ಆದರೆ ಎಲ್ಲ ವಿಷಯದಲ್ಲಿಯೂ ಇರುವದಿಲ್ಲ. ನಾವು ಹಿಡಿಯಲಿರುವ ಕಾರ್ಯವನ್ನು ಪೂರ್ಣ ಮಾಡುತ್ತೇವೆ ಎಂಬ ವಿಶ್ವಾಸವಿದ್ದಾಗ ನಾವು ಆ ಕಾರ್ಯಕ್ಕೆ ಕೈ ಹಾಕಬೇಕು. ಜೀವಕ್ಕೇ ಕುತ್ತಿರುವ ಕೆಲಸವನ್ನು ಮಾಡಲಿಕ್ಕಿಂತ ಮುಂಚೆಯಂತೂ ಸಾವಿರಬಾರಿ ಯೋಚಿಸಬೇಕು. ನಮ್ಮ ದರ್ಪ, ಪ್ರತಿಷ್ಠೆಗಳಿಗೆ ಹೆದರಿ ಜೀವಕ್ಕೆ ಕುತ್ತು ತಂದುಕೊಳ್ಳಬಾರದು.

ಹಾವು, ಅತ್ಯಂತ ಕೋಪಿಷ್ಠವಾದ ಮತ್ತು ವೇಗದ ಆಕ್ರಮಣ ಸಾಮರ್ಥ್ಯವುಳ್ಳ ಜಂತು. ಅದು ತನ್ನ ರಕ್ಷಣೆಗೆ ಕಡೆಯವರೆಗೆ ಹೊರಾಡುತ್ತದೆ. ಅದು ಸಾವನ್ನು ಅಪ್ಪಿಕೊಳ್ಳುತ್ತದಯೇ ಹೊರತು ಸೋಲನ್ನು ಒಪ್ಪಿಕೊಳ್ಳುವದಿಲ್ಲ. ಹತ್ತು ಜನ ಕೋಲು ಹಿಡಿದು ಸುತ್ತ ನಿಂತರೂ ಹೆಡೆ ಬಿಚ್ಚಿ ಆಕ್ರಮಣದ ತಂತ್ರವನ್ನು ಹೂಡುತ್ತದೆ. ಮನುಷ್ಯ ಮೋಸದಿಂದ ಹಿಂದಿನಿಂದ ಹೊಡೆದು ಬಡಿದು ಸಾಯಿಸುತ್ತಾನೆ. ಆದರೆ, ಅದರ ಎದುರಾಗಿ ನಿಂತು ಹೋರಾಡಿದರೆ ಮನುಷ್ಯನಿಗೇ ಸಾವು, ಹಾವಿಗಲ್ಲ.

ಹಾವು ಮುಂಗುಸಿಗಳು ಬಡಿದಾಡುವದನ್ನು ನೋಡಿರುವವರಿಗೆ ಇದು ಚಿರಪರಿಚಿತ. ಹಾವನ್ನು ಹತ್ತು ರೀತಿಯಲ್ಲಿ ಆಕ್ರಮಣ ಮಾಡುತ್ತದೆ ಮುಂಗಿಸಿ. ಮೈಗೆಲ್ಲ ಗಾಯವಾಗಿದ್ದರೂ ಹಾವು ಓಡಿ ಹೋಗುವದಿಲ್ಲ, ಅಲ್ಲೇ ಹೆಡೆ ಬಿಚ್ಚಿ ನಿಂತು ಅಪ್ರತಿಮವೀರನಂತೆ ಹೋರುತ್ತದೆ. ಮುಂಗುಸಿಯ ಬಲ ಹಾವಿನಕ್ಕಿಂತ ಜಾಸ್ತಿ ಎನ್ನುವ ಕಾರಣಕ್ಕೆ, ಮತ್ತು ಮುಂಗುಸಿಗೆ ಹಾವನ್ನು ಹೇಗೆ ಮಣಿಸಬೇಕು, ಕೊಲ್ಲಬೇಕು ಎನ್ನುವ ತಂತ್ರ ಗೊತ್ತಿದೆ ಎನ್ನುವ ಕಾರಣಕ್ಕೆ ಹಾವು ಸತ್ತು ಬೀಳುತ್ತದೆ. ರಾಜಕುಮಾರರಿಗೆ ಯುದ್ದವಿದ್ಯೆಯನ್ನು ಹೇಳಿಕೊಡುವಾಗ ಈ ಹಾವು ಮುಂಗುಸಿಗಳ ಹೋರಾಟದ ಪಾಠ ಅತೀ ಮುಖ್ಯವಾದದ್ದು. ಅದರಿಂದ ಕಲಿಯಬೇಕಾದ ಪಾಠಗಳು ಬಹಳಷ್ಟಿವೆ. ಕ್ಷಾತ್ರದ ಗುಣವನ್ನು ಮೈಗೂಡಿಸುವ ರೋಮಾಂಚದ ವಿಷಯಗಳನ್ನು ಈ ಹಾವು ಮುಂಗುಸಿಗಳು ಕಲಿಸುತ್ತವೆ.

ಸರ್ಪದೊಡನೆ ಸರಸ ಎಂದರೆ ಸರ್ಪದೊಡ ನೆ ಯುದ್ಧ ಎಂದೇ ಅರ್ಥ. ಕಾರಣ, ಸರ್ಪ ಯುದ್ಧವನ್ನು ಸರಸದಂತೆಯೇ ಲೀಲೆಯಿಂದ ಮಾಡುತ್ತದೆ!

ಹೀಗೆ ಸಾಧ್ಯವಿಲ್ಲದ ಕೆಲಸವನ್ನು ಮಾಡಲಿಕ್ಕೆ ಹೋಗಿ ಅವಮಾನಿತವಾಗುವ ಮುಪ್ಪಿನ ಮದುವೆ, ಮತ್ತು ಪ್ರಾಣಕ್ಕೇ ಕುತ್ತಿರುವ ಕೆಲಸವನ್ನು ಮಾಡ ಹೋಗಿ ಮಣ್ಣಾಗುವ ಸರ್ಪದೊಡನೆ ಸರಸ ಇವೆರಡನ್ನು ಹೇಳಿದ ಪುರಂದರದಾಸರು ಮಾಡಬೇಕಾದ ಕೆಲಸವನ್ನು ಮಾಡದವರೂ ಮೂರ್ಖರು ಎಂಬ ಮಾತನ್ನು ಹೇಳುತ್ತಾರೆ.

ಇಪ್ಪತ್ತು ಒಂದು ಕುಲ ಉದ್ಧರಿಸದವ ಮೂರ್ಖ

ಮನುಷ್ಯಜನ್ಮದ ಸಾರ್ಥಕತೆ ಇರುವದೇ ಭಗವಂತನನ್ನು ತಿಳಿಯುವದರಲ್ಲಿ. ಭಗವಂತನನ್ನು ತಿಳಿದ ಮನುಷ್ಯ ತಾನೊಬ್ಬನೇ ಅಲ್ಲ, ತನ್ನ ಹಿಂದಿನವರನ್ನೂ ಸಹ ಉದ್ಧರಿಸುತ್ತಾನೆ. ಭಾಗವತದಲ್ಲಿ ಪರಮಾತ್ಮನೇ ಈ ಮಾತನ್ನು
ಹೇಳುತ್ತಾನೆ. ಹಿರಣ್ಯಕಶಿಪುವನ್ನು ಕೊಂದು ಸಿಂಹಾಸನಾರೂಢನಾಗಿ ಕುಳಿತ ನರಸಿಂಹ ಪ್ರಹ್ಲಾದನ ಸ್ತೋತ್ರವನ್ನು ಆಲಿಸಿದ ಬಳಿಕ,

“ತ್ರಿಃಸಪ್ತಭಿಃ ಪಿತಾ ಪೂತಃ ಪಿತೃಭಿಃ ಸಹ ತೆsನಘ ।
ಯತ್ ಸಾಧೊsಸ್ಯ ಗೃಹೇ ಜಾತೋ ಭವಾನ್ ವೈ ಕುಲಪಾವನಃ”

ಪ್ರಹಾ್ಲದ, ನಿನ್ನ ಸಾಧನೆಯಿಂದ ನಿನ್ನ ಈ ಜನ್ಮದ ಮತ್ತು ಹಿಂದಿನ ಜನ್ಮಗಳ ಇಪ್ಪತ್ತೊಂದು ಕುಲದವರು ಉದ್ಧಾರವಾಗಿದ್ದಾರೆ. ನೀನು ಕುಲಪಾವನ.

ಎಂದು ಹೇಳುತ್ತಾನೆ. ಮನುಷ್ಯಜನ್ಮದ ಸಾರ್ಥಕತೆ ಇದು. ನಾವು ಹುಟ್ಟಿದ ಕುಲವನ್ನು ಉದ್ಧರಿಸುವದು ನಮ್ಮ ಆದ್ಯ ಕರ್ತವ್ಯ. ಪುತ್ರ ಎನ್ನುವ ಶಬ್ದಕ್ಕೇ ತಂದೆಯನ್ನು ನರಕದಿಂದ ಪಾರು ಮಾಡುವವನು ಎಂದರ್ಥ. ನಮ್ಮ ತಂದೆಯನ್ನು, ನಮ್ಮ ಕುಲವನ್ನು ಉದ್ಧರಿಸದಿದ್ದವ ಮೂರ್ಖ.

ಸಗರನ ಮಕ್ಕಳು ಕಪಿಲರೂಪಿ ಪರಮಾತ್ಮನಿಗೆ ದ್ರೋಹ ಮಾಡಿ ಸತ್ತು ಬೀಳುತ್ತಾರೆ. ಅವರನ್ನು ಉದ್ಧರಿಸಲು ಅವರ ಮುಂದೆ ಹುಟ್ಟಿಬರುವ ಪ್ರತಿಯೊಬ್ಬರೂ ಪ್ರಯತ್ನ ಪಡುತ್ತಾರೆ. ಅವರೆಲ್ಲರ ಪ್ರಯತ್ನದ ಫಲವಾಗಿ ಭಗೀರಥ ಹುಟ್ಟಿಬರುತ್ತಾನೆ. ಅವನು ಪರಿಪೂರ್ಣ ಸಾಧನೆಯನ್ನು ಮಾಡಿ ಗಂಗೆಯನ್ನು ಧರೆಗಿಳಿಸಿ ಆ ಗಂಗೆಯನ್ನು ಅವರ ಬೂದಿಯ ಮೇಲೆ ಹರಿಸಿ ಅವರನ್ನು ಉದ್ಧರಿಸುತ್ತಾನೆ. ಇದು ಮಕ್ಕಳ ಕರ್ತವ್ಯ. ನಮ್ಮ ಕರ್ತವ್ಯ. ಇದು ಮನುಷ್ಯನ ಆದ್ಯ ಕರ್ತವ್ಯ. ಇಂತಹ ದೊಡ್ಡ ಕರ್ತವ್ಯದಿಂದ ವಿಮುಖನಾಗುವದು ಮೂರ್ಖತನ ಎನ್ನುತ್ತಾರೆ, ಶ್ರೀದಾಸರು.

ಉದ್ಧಾರ ಮಾಡುವ ಬಗೆ ಏನು ಎನ್ನುವದನ್ನೂ ದಾಸರೇ ತಿಳಿಸಕೊಡುತ್ತಾರೆ.

ಅಪ್ಪ ರಂಗಯ್ಯನ ಭಜಿಸದವ ಮೂರ್ಖನಯ್ಯ

ನಮ್ಮಪ್ಪನನ್ನು ಉದ್ಧರಿಸಲಿಕ್ಕೆ ಎಲ್ಲರ ಅಪ್ಪ ರಂಗಪ್ಪನನ್ನು ಭಜಿಸಬೇಕು. ರಂಗನನ್ನು ಭಜಿಸಿದರೆ ನಾವಷ್ಟೇ ಉದ್ಧಾರವಾಗುವದಲ್ಲ. ಇಡಿಯ ಕುಲ ಉದ್ಧಾರವಾಗುತ್ತದೆ.
ಮನುಷ್ಯಜನ್ಮ ದೊರೆಯುವದು ದುರ್ಲಭ. ದೊರೆತರೂ ಪವಿತ್ರವಾದ ಭರತಭೂಮಿಯಲ್ಲಿ ಜನ್ಮದೊರೆಯುವದು ದುರ್ಲಭ. ಅದು ದೊರೆತರೂ ಸಾಧನೆಗೆ ಉಪಯೋಗ ಬೀಳುವ ಜನ್ಮ ದೊರೆಯುವದು ಅತ್ಯಂತ ದುರ್ಲಭ. ಸಾಧನೆ ಮಾಡಬೇಕು ಎನ್ನುವ ತಿಳುವಳಿಕೆ ಇದ್ದರೂ ಸಾಧನೆ ಮಾಡುವದು ಅತ್ಯಂತ ದುರ್ಲಭ. ಇಷ್ಟು ದುರ್ಲಭವಾದ ಯೋಗಗಳು ಒಂದೇ ಬಾರಿ ದೊರೆತಾಗ, ಜೀವಸಂಕುಲದಲ್ಲಿಯೇ ಅತ್ಯುತ್ತಮ ಜನ್ಮ ದೊರೆತಾಗ ಅದನ್ನು ನೀಡಿದ ನಮ್ಮಪ್ಪ ರಂಗಯನನ್ನು ಭಜಿಸದಿರುವದು ಕಡುಮೂರ್ಖತನವಲ್ಲವೇ?

ಮನುಷ್ಯಜನ್ಮ ಬಂದಾಗ ಮೂರ್ಖರಾಗಬಾರದು, ತಿಳುವಳಿಕೆಯುಳ್ಳವರಾಗಿ ಉದ್ಧಾರವನ್ನು ಕಂಡುಕೊಳ್ಳಬೇಕು.

ಅಷ್ಟೇ ಅಲ್ಲ, ಎಲ್ಲ ದೇವರೂ ಒಂದೇ ತಾನೆ ಎಂಬ ದುರ್ವಾದಿಗಳ ದುರ್ಮತವನ್ನು ಆಶ್ರಯಿಸಿ ಕಂಡಕಂಡ ಕಾಕುದೈವಗಳ ಹಿಂದೆ ಬಿದ್ದೆವೋ, ನಮ್ಮ ವಿನಾಶ ನಿಶ್ಚಿತ. ಪುರಂದರದಾಸರು ಅಂತಹವರನ್ನು ನಿರ್ದಾಕ್ಷಿಣ್ಯವಾಗಿ ಮೂರ್ಖರು ಎಂದು ಉದ್ಘೋಷಿಸುತ್ತಾರೆ.

“ಏಕದೈವವ ಬಿಟ್ಟು ಕಾಕುದೈವವ ಭಜಿಸಿ ಮೂರ್ಖರಾದರು ಲೋಕದೊಳಗೆ” ಎಂದು.

ಕ್ಷುದ್ರ ಅಪೇಕ್ಷೆಗಳನ್ನು ಪೂರೈಸಿಕೊಳ್ಳಲೋಸುಗ ಕ್ಷುದ್ರದೇವತೆಗಳ ಹಿಂದೆ ಹೋಗುವ ಮುನ್ನ ಪುರಂದರದಾಸರ ಈ ಮಾತು ಎಚ್ಚರಕ್ಕೆ ಬರಬೇಕು.

– ವಿಷ್ಣುದಾಸ ನಾಗೇಂದ್ರಾಚಾರ್ಯ

ಇವುಗಳೂ ನಿಮಗಿಷ್ಟವಾಗಬಹುದು

vishwanandini-020

ವಿಶ್ವನಂದಿನಿ ಲೇಖನ ಮಾಲೆ – 020

ಶ್ರೀಕನಕದಾಸರ ಹರಿಭಕ್ತಿಸಾರ ವಿಷ್ಣುದಾಸರ ಸಾರಾಮೃತವ್ಯಾಖ್ಯಾನದೊಂದಿಗೆ ಪದ್ಯ – ೨ ದೇವದೇವ ಜಗದ್ಭರಿತ ವಸು- ದೇವಸುತ ಜಗದೇಕನಾಥ ರ- ಮಾವಿನೋದಿತ ಸಜ್ಜನಾನತ …

One comment

  1. ವಿಶ್ವನಂದಿನಿ ಲೇಖನ ಮಾಲೆ – 014

Leave a Reply

Your email address will not be published. Required fields are marked *