ಅನುಷ್ಠಾನ ಸುರಭಿ
(ವಿಷ್ಣುಭಕ್ತರು ಮಾಡಬೇಕಾದ ಅನುಷ್ಠಾನ, ಅನುಸಂಧಾನಗಳ ಕುರಿತು ತಿಳಿಸುವ ವಿಶ್ವನಂದಿನಿಯ ಭಾಗ)
ಪ್ರತೀ ಸತ್ಕರ್ಮದ ಆರಂಭದಲ್ಲಿ ಮಾಡಬೇಕಾದ ಸಂಕಲ್ಪದ ಅರ್ಥ
ಪ್ರತಿಯೊಂದು ಕರ್ಮದ ಆರಂಭದಲ್ಲಿ ಸಂಕಲ್ಪವನ್ನು ಮಾಡಬೇಕು. ಅಂತ್ಯದಲ್ಲಿ ಅದನ್ನು ಸಮರ್ಪಣೆ ಮಾಡಬೇಕು. ಇದನ್ನು ಸಾಮಾನ್ಯವಾಗಿ ಎಲ್ಲ ವೈದಿಕ ಮತಗಳ ಧಾರ್ಮಿಕರೂ ಆಚರಿಸುವ ಕರ್ಮ. ಆರಂಭದಲ್ಲಿ ದೇಶ-ಕಾಲಗಳನ್ನು ಹೇಳಿ, ಇಂಥಹ ಪ್ರದೇಶದಲ್ಲಿ, ಇಂತಹ ಸಮಯದಲ್ಲಿ ಇಂತಹ ಪ್ರಯೋಜನಕ್ಕಾಗಿ ಇಂತಹ ಸತ್ಕರ್ಮವನ್ನು ಅನುಷ್ಠಾನ ಮಾಡುತ್ತಿದ್ದೇನೆ, ಎನ್ನುವದು ಸಂಕಲ್ಪ. ಇಂತಹ ಸತ್ಕರ್ಮವನ್ನು ಮಾಡಿದ್ದೇನೆ, ಅದರ ಫಲ ನನಗೆ ದೊರೆಯಲಿ ಎನ್ನುವದು ಅಂತ್ಯದಲ್ಲಿ ಮಾಡುವ ಸಮರ್ಪಣೆ.
ಮೊದಲಿಗೆ ಕರ್ಮದ ಆರಂಭದಲ್ಲಿ, ಯಾವ ಪ್ರದೇಶದಲ್ಲಿ ನಾವು ಕರ್ಮದ ಆಚರಣೆಯನ್ನು ಮಾಡುತ್ತಿದ್ದೇವೆ ಎನ್ನುವದನ್ನು ಸ್ಮರಿಸಬೇಕು. ಯಾವ ಪ್ರದೇಶದಲ್ಲಿ ಕರ್ಮದ ಆಚರಣೆ ಮಾಡಬೇಕು ಎಂದು ಹೇಳಿದ್ದಾನೆಯೋ ಆ ಪ್ರದೇಶದಲ್ಲಿ ಕರ್ಮದ ಅನುಷ್ಠಾನ ಮಾಡಿದಾಗ ಮಾತ್ರ ಅದರಿಂದ ಸತ್ಫಲ ದೊರೆಯುತ್ತದೆ. ಶ್ರೀಕೃಷ್ಣ ಸ್ಪಷ್ಟವಾಗಿ ಭಗವದ್ಗೀತೆಯಲ್ಲಿಯೇ ಈ ಮಾತನ್ನು ಹೇಳುತ್ತಾನೆ. “ಅದೇಶಕಾಲೇ ಯದ್ದಾನಮಪಾತ್ರೇಭ್ಯಶ್ಚ ದೀಯತೇ ।ಅಸತ್ಕೃತಮವಜ್ಞಾತಂ ತತ್ ತಾಮಸಮುದಾಹೃತಮ್” ಯಾವ ದೇಶ, ಕಾಲಗಳು ಕರ್ಮಾನುಷ್ಠಾನಕ್ಕೆ ಯೋಗ್ಯವಲ್ಲವೋ, ಆ ದೇಶ ಕಾಲಗಳಲ್ಲಿ ಮಾಡುವ ದಾನ, ಅಪಾತ್ರರಿಗೆ ಮಾಡುವ ದಾನ, ದಾನ ತೆಗೆದುಕೊಂಡು ನಮ್ಮ ಪಾಪ ಪರಿಹರಿಸುವ ಮಹನೀಯರಿಗೆ ಗೌರವ ಸಲ್ಲಿಸದೇ ಮಾಡುವ ದಾನ, ತಿರಸ್ಕಾರದಿಂದ ಮಾಡುವ ದಾನ ತಾಮಸದಾನ ಎಂದು ಕರೆಸಿಕೊಳ್ಳುತ್ತಾನೆ ಎನ್ನುತ್ತಾನೆ, ಗೀತಾಚಾರ್ಯ.
ಹೀಗಾಗಿ, ಯಾವ ಪ್ರದೇಶದಲ್ಲಿ ಮತ್ತು ಯಾವ ಕಾಲದಲ್ಲಿ ಕರ್ಮಾನುಷ್ಠಾನ ಮಾಡುತ್ತೇವೆಯೋ, ಆ ದೇಶ, ಕಾಲಗಳನ್ನು ಅದರ ಅಭಿಮಾನಿ ದೇವತೆಗಳನ್ನು ಭಕ್ತಿಯಿಂದ ಸ್ಮರಿಸಬೇಕು.
ಯಾವುದೇ ಕರ್ಮದ ಅನುಷ್ಠಾನಕ್ಕೆ ಬೇಕಾದ ಸಂಕಲ್ಪ ಹೀಗಿರಬೇಕು. (ಈ ಬಾರಿಯ ಏಕಾದಶಿಯ ದಿವಸಕ್ಕೆ ಸಂಕಲ್ಪವನ್ನು ಬರೆದಿದ್ದೇನೆ. ದಿವಸ-ತಿಥಿಗಳನ್ನು ಬದಲಿಸಿಕೊಂಡು ಪ್ರತಿಯೊಂದು ಕರ್ಮದಲ್ಲಿಯೂ ಇದನ್ನು ಅನುಷ್ಠಾನ ಮಾಡಬೇಕು.
ಶ್ರೀ ಗೋವಿಂದ ಗೋವಿಂದ ಶ್ರೀಮದ್ಭಗವತೋ ಮಹಾಪುರುಷಸ್ಯ ವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ ಆದ್ಯ ಬ್ರಹ್ಮಣಃ ದಿ್ವತೀಯಪರಾರ್ಧೇ
ಶ್ರೀಶ್ವೇತವರಾಹಕಲ್ಪೇ ವೈವಸ್ವತಮನ್ವಂತರೇ ಅಷ್ಟಾವಿಂಶತಿತಮೇ ಕಲಿಯುಗೇ ಪ್ರಥಮಪಾದೇ
ಮೇರೋಃ ದಕ್ಷಿಣಪಾರ್ಶ್ವೇ ಜಂಬೂದ್ವೀಪೇ ಭರತವರ್ಷೇ ಭರತಖಂಡೇ ದಂಡಕಾರಣ್ಯೇ ಗೊದಾವರ್ಯಾಃ ದಕ್ಷಿಣೇ ತೀರೇ
ಶಾಲೀವಾಹನಶಕೇ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್
ಚಾಂದ್ರಮಾನೇನ ಮನ್ಮಥನಾಮಸಂವತ್ಸರಸ್ಯ ಉತ್ತರಾಯಣೇ ವಸಂತರ್ತೌ ಚೈತ್ರಮಾಸೇ ಕೃಷ್ಣಪಕ್ಷೇ ಏಕಾದಶ್ಯಾಂ ತಿಥೌ
ಅಸ್ಮದ್ಗುರ್ವಂತರ್ಗತ ಪರಮಗುರ್ವಂತರ್ಗತ ಶ್ರೀರಾಘವೇಂದ್ರಶ್ರೀಮಚ್ಚರಣಾದಿ ಸಮಸ್ತಗುರ್ವಂತರ್ಗತ ಸಮಸ್ತತತ್ವಾಭಿಮಾನಿದೇವತಾಂತರ್ಗತ ಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀವಿಷ್ಣುಪ್ರೇರಣಯಾ ಶ್ರೀವಿಷ್ಣುಪ್ರೀತ್ಯರ್ಥಂ
ಏಕಾದಶ್ಯುಪವಾಸಂ ಅಹಮಾಚರಿಷ್ಯೇ.
ವಿವರಣೆ
ಶ್ರೀ ಗೋವಿಂದ ಗೋವಿಂದ ಶ್ರೀಮದ್ಭಗವತೋ ಮಹಾಪುರುಷಸ್ಯ ವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ ಆದ್ಯಬ್ರಹ್ಮಣಃ ದಿ್ವತೀಯಪರಾರ್ಧೇ
ಇಲ್ಲಿ, ಶುಭೇ ಶೋಭನಮುಹೂರ್ತೇ ಎಂದು ಹೇಳುವ ಪದ್ಧತಿಯಿದೆ. ಅದು ವಿವಾಹಾದಿ ಸಂದರ್ಭಗಳಲ್ಲಿ ಹೇಳಬೇಕು. ಆದರೆ, ಪ್ರತೀನಿತ್ಯದ ಕಾರ್ಯಗಳಲ್ಲಿ ಶ್ರೀ ಗೋವಿಂದ ಗೋವಿಂದ ಎಂದು ಹೇಳುವದು ಅನುಸಂಧಾನಕ್ಕೆ ಹೆಚ್ಚು ಹತ್ತಿರ. ಯಾವುದೇ ಕಾರ್ಯವನ್ನು ಆರಂಭಿಸಬೇಕಾದರೂ, ಮಾಡಬೇಕಾದರೂ, ಮುಗಿಸಬೇಕಾದರೂ ವಿಷ್ಣುಸ್ಮರಣೆಯನ್ನು ಮಾಡಲೇಬೇಕು. ಮತ್ತು ಸಂಕಲ್ಪದಲ್ಲಿ ಹೇಳಲಾಗುವ ಎಲ್ಲ ವಿಷಯವನ್ನೂ ಸಾಮಾನ್ಯರಿಗೆ ಒಮ್ಮೆಲೇ ಬುದ್ಧಿಗೆ ತಂದುಕೊಳ್ಳುವದು ಬಹಳ ಕಷ್ಟ. ಹೀಗಾಗಿ ಪರಮಮಂಗಳವಾದ ಪರಮಾತ್ಮನ ಸ್ಮರಣೆಯನ್ನು ಮಾಡಿ ಸಂಕಲ್ಪ ಆರಂಭಿಸಿದರೆ ಅದರ ಅರ್ಥವೂ ಹೊಳೆಯುತ್ತದೆ, ಮಾಡುವ ಸಂಕಲ್ಪವೂ ವಿಷ್ಣುಪ್ರೀತಿಕರವಾಗುತ್ತದೆ.
ಆ ಬಳಿಕ ಕೆಲವರು ಕೇವಲ ವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ ಎಂದಷ್ಟೇ ಹೇಳುತ್ತಾರೆ. ಅದು ತಪ್ಪು. ಶ್ರೀಮದ್ಭಗವತೋ ಮಹಾಪುರುಷಸ್ಯ ಎನ್ನುವದನ್ನು ಹೇಳಲೇ ಬೇಕು. ಕಾರಣ, ಈ ಮಾತು ಬೃಹದಾರಣ್ಯಕ ಉಪನಿಷತ್ತಿನಲ್ಲಿ ಬಂದ ಶ್ರೇಷ್ಠ ತತ್ವದ ಅನುಸಂಧಾನ. ಬ್ರಹ್ಮಾಂಡದ ಆಚೆಯಿರುವ ಸಮಗ್ರ ಬ್ರಹ್ಮಾಂಡವನ್ನು ಸೃಷ್ಟಿಮಾಡಿದ ಶ್ರೀಹರಿಗೆ ಮಹಾಪುರುಷ ಎಂದು ಹೆಸರು. ಪರಮಾತ್ಮನ ಆಜ್ಞೆಯಿಂದಲೇ ಎಲ್ಲ ದೇಶ-ಕಾಲಗಳೂ ಅಸ್ತಿತ್ವದಲ್ಲಿದೆ ಎಂಬ ಉತ್ತಮೋತ್ತಮ ತತ್ವದ ಅನುಸಂಧಾನ ಇಲ್ಲಾಗುತ್ತದೆ.
ಇಲ್ಲಿ ಆದ್ಯಬ್ರಹ್ಮಣಃ ಎಂದೇ ಹೇಳಬೇಕು. ಅದ್ಯ ಬ್ರಹ್ಮಣಃ ಎನ್ನುವದು ಸುತರಾಂ ತಪ್ಪು. ಕಾರಣ, ಸೃಷ್ಟಿಯ ಆರಂಭದಲ್ಲಿ ಬ್ರಹ್ಮದೇವರು ಅನೇಕ ಬಾರಿ ಹುಟ್ಟಿಬರುತ್ತಾರೆ. ಪದ್ಮದಲ್ಲಿ ಹುಟ್ಟುವ, ನಾಕು ಮುಖಗಳ ಬ್ರಹ್ಮವದೇವರೇನಿದ್ದಾರೆ, ಅದು ಅವರ ನಾಲ್ಕನೆಯ ಜನ್ಮ. ಅವರ ಲೆಕ್ಕದಲ್ಲಿ ಅಲ್ಲ ನಾವು ಸಂಕಲ್ಪ ಮಾಡಬೇಕಾದ್ದು, ಆದ್ಯಬ್ರಹ್ಮನ, ಮೊಟ್ಟ ಮೊದಲಿಗೆ ಹುಟ್ಟಿದ ಬ್ರಹ್ಮದೇವರ ಲೆಕ್ಕದಲ್ಲಿ.
ಇದನ್ನು ಸ್ವಲ್ಪ ವಿವರಿಸುತ್ತೇನೆ.
ಕೃತ-ತ್ರೇತಾ-ದ್ವಾಪರ-ಕಲಿ ಈ ನಾಲ್ಕರ ಕಾಲವನ್ನು ಯುಗ ಎನ್ನುತ್ತಾರೆ. ಅವು ನಾಲ್ಕೂ ಒಟ್ಟಿಗೇ ಕೂಡಿಸಿದ ಕಾಲವನ್ನು ಮಹಾಯುಗ ಎನ್ನುತ್ತಾರೆ. ಅದರ ಪರಿಮಾಣ 43 ಲಕ್ಷದ 20 ಸಾವಿರ ವರ್ಷಗಳು. ಆ ರೀತಿಯ ಮಹಾಯುಗಗಳು ಒಂದು ಸಾವಿರಬಾರಿ ಆದರೆ ಬ್ರಹ್ಮದೇವರ ಒಂದು ದಿವಸ. ಅದನ್ನು ದಿನಕಲ್ಪ ಎನ್ನುತ್ತಾರೆ. ಅಷ್ಟೇ ಸಮಯ (1000 ಮಹಾಯುಗಗಳು) ಒಂದು ರಾತ್ರಿ. ಅದನ್ನು ರಾತ್ರಿಕಲ್ಪ ಎನ್ನುತ್ತಾರೆ. ಆ ರೀತಿಯ ದಿನ-ಕಲ್ಪಗಳು 360 ಆದರೆ ಬ್ರಹ್ಮದೇವರಿಗೆ ಒಂದು ವರ್ಷ. ಅದನ್ನು ಬ್ರಹ್ಮವತ್ಸರ ಎನ್ನುತ್ತಾರೆ. ಆ ರೀತಿಯ ವರ್ಷಗಳು ನೂರಾದರೆ ಅದನ್ನು ಬ್ರಹ್ಮಕಲ್ಪ ಎನ್ನುತ್ತಾರೆ, ಅಥವಾ ಪರ ಎನ್ನುತ್ತಾರೆ. ಅಂದರೆ ನಮ್ಮ ಲೆಕ್ಕದಲ್ಲಿ 311 ಲಕ್ಷಕೋಟಿ ಚಿಲ್ಲರೆ ವರ್ಷಗಳು. ಇದನ್ನು ಪರ ಎನ್ನುತ್ತಾರೆ. ಈ ಪರ ಎನ್ನುವ ಕಾಲದಲ್ಲಿ ಈಗ ಅರ್ಧಭಾಗ ಕಳೆದಿದೆ. ಅಂದರೆ ಮೊಟ್ಟಮೊದಿಲಿಗೆ ಹುಟ್ಟಿದ ಬ್ರಹ್ಮದೇವರಿಗೆ ಐವತ್ತು ವರ್ಷಗಳು ಕಳೆದು ಐವತ್ತೊಂದನೆಯ ವರ್ಷ ನಡೆಯುತ್ತಿದೆ. ಆದ್ದರಿಂದ ಆದ್ಯಬ್ರಹ್ಮಣಃ ಎಂದೇ ಹೇಳಬೇಕು, ಅದ್ಯ ಬ್ರಹ್ಮಣಃ ಎಂದು ಹೇಳಬಾರದು.
ಶ್ರೀಶ್ವೇತವರಾಹಕಲ್ಪೇ
ಬ್ರಹ್ಮದೇವರ ಒಂದೊಂದು ದಿನಕಲ್ಪಕ್ಕೂ ಒಂದೊಂದು ಹೆಸರಿದೆ. ನಮ್ಮ ಒಂದೊಂದು ದಿವಸಕ್ಕೂ ಸೋಮವಾರ, ಮಂಗಳವಾರ ಎಂದು ಹೆಸರಿದ್ದಂತೆ. ಇವತ್ತಿನ ಬ್ರಹ್ಮದೇವರ ದಿವಸದ ಹೆಸರು ಶ್ವೇತವರಾಹಕಲ್ಪ. ಯಾಕಾಗಿ ಈ ಹೆಸರು ಎನ್ನುವದಕ್ಕೆ ಶಾಸ್ತ್ರದಲ್ಲಿ ಮಹತ್ತ್ವದ ಉತ್ತರಗಳಿವೆ. ಅದನ್ನು ಪ್ರತ್ಯೇಕವಾಗಿ ಮತ್ತೊಮ್ಮೆ ತಿಳಿಸುತ್ತೇನೆ.
ವೈವಸ್ವತಮನ್ವಂತರೇ
ಬ್ರಹ್ಮದೇವರ ಒಂದು ಹಗಲಿನಲ್ಲಿ ಹದಿನಾಲ್ಕು ಮನ್ವಂತರಗಳು ನಡೆಯುತ್ತವೆ. ಈಗ ನಡೆಯುತ್ತಿರುವದು ಏಳನೆಯ ವೈವಸ್ವತ ಮನ್ವಂತರ.
ಅಷ್ಟಾವಿಂಶತಿತಮೇ ಕಲಿಯುಗೇ ಪ್ರಥಮಪಾದೇ
ಕೃತ-ತ್ರೇತಾ-ದ್ವಾಪರ-ಕಲಿ ಈ ನಾಲ್ಕುಯುಗಗಳ ಸಮೂಹಕ್ಕೆ ಮಹಾಯುಗ ಎನ್ನುತ್ತಾರೆ. ಆ ರೀತಿಯ ಮಹಾಯುಗಗಳು ಒಂದು ಮನ್ವಂತರದಲ್ಲಿ 71 ಬಾರಿ ಘಟಿಸುತ್ತವೆ. ಈಗ ಇಪತ್ತೆಂಟನೆಯ ಮಹಾಯುಗ ನಡೆಯುತ್ತಿದೆ. ಅದರಲ್ಲಿಯೂ ಮೊದಲ ಮೂರು ಯುಗಗಳು ಮುಗಿದು ನಾಲ್ಕನೆಯ ಕಲಿಯುಗ ನಡೆಯುತ್ತಿದೆ.
ಒಂದೊಂದು ಯುಗದ ಪರಿಮಾಣವನ್ನೂ ನಾಲ್ಕು ವಿಭಾಗ ಮಾಡಿದಾಗ ಅವು ಒಂದೊಂದು ಪಾದ ಎಂದು ಕರೆಸಿಕೊಳ್ಳುತ್ತದೆ. ಕಲಿಯುಗದಲ್ಲಿ ನಾಲ್ಕು ಲಕ್ಷದ 32 ಸಾವಿರ ವರ್ಷಗಳಿವೆ. ಹೀಗಾಗಿ ಮೊದಲ ಒಂದುಲಕ್ಷದ ಎಂಟು ಸಾವಿರವರ್ಷಗಳು ಮೊದಲ ಪಾದ. ಅದರಲ್ಲಿ ಐದು ಸಾವಿರ ವರ್ಷಗಳು ಕಳೆದಿವೆ. ಹೀಗಾಗಿ ನಾವು ಕಲಿಯುಗದ ಪ್ರಥಮಪಾದದಲ್ಲಿದ್ದೇವೆ. ಕಲಿಯುಗದಲ್ಲಿ 5117ನೆಯ ವರ್ಷ ನಡೆಯುತ್ತಿದೆ.
ಇಷ್ಟು ಮಹಾಕಾಲದ ಚಿಂತನೆಯಾಯಿತು. ಈಗ ದೇಶದ ಚಿಂತನೆ.
ಮೇರೋಃ ದಕ್ಷಿಣಪಾರ್ಶ್ವೇ ಜಂಬೂದ್ವೀಪೇ ಭರತವರ್ಷೇ ಭರತಖಂಡೇ ದಂಡಕಾರಣ್ಯೇ ಗೊದಾವರ್ಯಾಃ ದಕ್ಷಿಣೇ ತೀರೇ
ನಾವಿರುವ ಭೂಮಿಯ ಮಧ್ಯದಲ್ಲಿ ಮೇರುಪರ್ವತವಿದೆ. (ಇವತ್ತಿನ ವಿಜ್ಞಾನ ನೀಡುವ ಭೂಮಿಯ ಕಲ್ಪನೆ ತೀರ ಅಸಂಗತವಾದದ್ದು. ಸದ್ಯಕ್ಕೆ ಅದರ ಬಗ್ಗೆ ಚಿಂತೆ ಬಿಡಿ. ಅದು ವಿವಾದದ ವಿಷಯ. ಶ್ರೀ ವೇದವ್ಯಾಸದೇವರು ತಿಳಿಸಿರುವ ಪರಮಪರಿಶುದ್ಧವಾದ ಭೂಗೋಲ ಖಗೋಲಗಳನ್ನು ಇವತ್ತಿನ ಜಗತ್ತಿನ ಮುಂದೆ ಸಾಬೀತು ಪಡಿಸಬೇಕಾದ ಮಹತ್ತರ ಜವಾಬ್ದಾರಿ ಇಂದಿನ ವಿದ್ವಾಂಸರ ಮೇಲಿದೆ. ಶ್ರೀಮದಾಚಾರ್ಯರ ಪರಮಾನುಗ್ರಹದಿಂದ ಆ ಕಾರ್ಯವೂ ಆಗುತ್ತದೆ.)
ಭೂಮಿಯ ಮಧ್ಯದಲ್ಲಿರುವ ಮೇರುಪರ್ವತದ ಸುತ್ತಲೂ ಏಳು ಸಮುದ್ರಗಳು ಏಳು ದ್ವೀಪಗಳು ಇವೆ. ಮೊದನೆಯ ದ್ವೀಪ ಜಂಬೂದ್ವೀಪ. ಮೊದಲನೆಯ ಸಮುದ್ರ ಉಪ್ಪಿನ ನೀರಿನ ಸಮುದ್ರ. ಈ ಜಂಬೂದ್ವೀಪವೂ ಮೇರುವಿನ ಸುತ್ತಲೂ ಇದೆ. ಮೇರುವಿನ ಪೂರ್ವಕ್ಕೆ, ದಕ್ಷಿಣಕ್ಕೆ, ಪಶ್ಚಿಮಕ್ಕೆ ಮತ್ತು ಉತ್ತರಕ್ಕೆ. ನಾವು ಮೇರುವಿನ ದಕ್ಷಿಣದ ಭಾಗದಲ್ಲಿರುವ ಜಂಬೂದ್ವೀಪದಲ್ಲಿದ್ದೇವೆ.
ಈ ಜಂಬೂದ್ವೀಪದಲ್ಲಿಯೂ ಆರು ವಿಭಾಗಗಳಿವೆ. ಇವುಗಳನ್ನು ವರ್ಷಗಳು ಎನ್ನುತ್ತಾರೆ. ಅದರಲ್ಲಿ ನಾವು ಭಾರತವರ್ಷದಲ್ಲಿದ್ದೇವೆ. ಖಂಡ ಎಂದರೆ ತುಂಡು. ಭಾರತವರ್ಷದ ಒಂದು ಭಾಗವಾದ ದಂಡಕಾರಣ್ಯದ ಪ್ರದೇಶದಲ್ಲಿದ್ದೇವೆ.
ಗಂಗಾ, ಗೋದಾವರೀಗಳನ್ನು ಸೀಮೆಯ ನದಿಗಳು ಎನ್ನುತ್ತಾರೆ. ಗೋದಾವರಿಯ ಮೇಲ್ಭಾಗದಲ್ಲಿರುವವರು ಗಂಗಾಯಾ ದಕ್ಷಿಣೇ ಪಾರ್ಶ್ವೇ ಎನ್ನಬೇಕು. ಗೋದಾವರಿಯ ದಕ್ಷಿಣ ಭಾಗದಲ್ಲಿರುವವರು ಗೋದಾವರಿಯ ದಕ್ಷಿಣದಲ್ಲಿ ಎನ್ನಬೇಕು.
ಈಗ ಮತ್ತೆ ಕಾಲದ ಚಿಂತನೆ.
ಶಾಲೀವಾಹನಶಕೇ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್
ನಮ್ಮ ಕಲಿಯಗದಲ್ಲಿ ಆರು ಜನ ರಾಜರು ಶಕಪುರುಷರು, ಶಕನಿರ್ಮಾತೃಗಳು ಎಂದು ಕರೆಸಿಕೊಳ್ಳುತ್ತಾರೆ. ಮೊದಲಿಗೆ ಹಸ್ತಿನಾವತಿಯ ಮಹಾರಾಜ ಯುಧಿಷ್ಠಿರನ ಶಕೆ. 3044 ವರ್ಷಗಳು. ಆ ಬಳಿಕ ಉಜ್ಜಯನಿಯ ರಾಜ ವಿಕ್ರಮನ ಶಕೆ. 135 ವರ್ಷಗಳು. ಆ ಬಳಿಕ ಪ್ರತಿಷ್ಠಾನಗರದ ರಾಜ ಶಾಲೀವಾಹನನ ಶಕೆ, 18000 ಸಾವಿರವರ್ಷಗಳು. ಮುಂದೆ ವೈತರಣೀತೀರದ ವಿಜಯಾಭಿನಂದನ ರಾಜನ ಶಕೆ 10 ಸಾವಿರ ವರ್ಷಗಳು. ಆ ನಂತರ ಕಾವೇರೀತೀರದ ನಾಗಾರ್ಜುನನ ಶಕೆ ನಾಲ್ಕು ಲಕ್ಷ ವರ್ಷಗಳು. ಕಡೆಯಲ್ಲಿ ಕಲ್ಕಿನಾರಾಯಣನ ಶಕೆ 821 ವರ್ಷಗಳು.
ನಾವೀಗ ಶಾಲೀವಾಹನನ ಶಕೆಯಲ್ಲಿದ್ದೇವೆ. ಆ 18 ಸಾವಿರವರ್ಷಗಳಲ್ಲಿ ಈಗ 1938ನೆಯ ವರ್ಷ ನಡೆಯುತ್ತಿದೆ.
ಬೌದ್ಧಾವತಾರವಾದದ್ದು ಯುಧಿಷ್ಠಿರನ ಶಕೆಯಲ್ಲಿ. ಮುಂದೆ ಕಲ್ಕಿಯ ಅವತಾರವಾಗುವವರೆಗೂ ಬುದ್ಧನ ಅವತಾರದ ಘಟ್ಟದಲ್ಲಿ ಎಂದೇ ಹೇಳಬೇಕು.
ರಾಮಕ್ಷೇತ್ರೆ = ಶ್ರೀರಾಮಚಂದ್ರ ಪಾಲಿಸಿದ
ಅಸ್ಮಿನ್ = ಈ ಪವಿತ್ರ ಭೂಮಿಯಲ್ಲಿ
ಪರಶುರಾಮದೇವರು ನಿರ್ಮಾಣ ಮಾಡಿದ ಪವಿತ್ರ ಭೂಮಿಯಲ್ಲಿದ್ದಾಗ ಪರಶುರಾಮಕ್ಷೇತ್ರೇ ಎನ್ನಬೇಕು.
ಚಾಂದ್ರಮಾನೇನ ಮನ್ಮಥನಾಮಸಂವತ್ಸರಸ್ಯ ಉತ್ತರಾಯಣೇ ವಸಂತರ್ತೌ ಚೈತ್ರಮಾಸೇ ಕೃಷ್ಣಪಕ್ಷೇ ಏಕಾದಶ್ಯಾಂ ತಿಥೌ
ಕರ್ಮಗಳ ಅನುಷ್ಠಾನವನ್ನು ಚಾಂದ್ರಮಾನದಿಂದಲೇ ಮಾಡಬೇಕು ಎನ್ನುವದು ಶ್ರೀಮದಾಚಾರ್ಯರ ನಿರ್ಣಯ ಮತ್ತು ಆದೇಶ. ಆ ಚಾಂದ್ರಮಾನದ ಪ್ರಕಾರ ಈ ಮನ್ಮಥನಾಮಸಂವತ್ಸರ ನಡೆಯುತ್ತಿದೆ. (60 ಸಂವತ್ಸರಗಳಲ್ಲಿ ಇಪ್ಪತ್ತೊಂಭತ್ತನೆಯದು.) ಒಂದು ಸಂವತ್ಸರದಲ್ಲಿ ಎರಡು ಅಯನಗಳಿರುತ್ತವೆ. ಉತ್ತರಾಯಣ ಮತ್ತು ದಕ್ಷಿಣಾಯನ ಎಂದು. ಈಗ ಉತ್ತರಾಯಣ ನಡೆಯುತ್ತಿದೆ. ಒಂದು ವರ್ಷದಲ್ಲಿ ಆರು ಋತುಗಳಿರುತ್ತವೆ, ಈಗ ಮೊದಲನೆಯ ವಸಂತ ಋತು ನಡೆಯುತ್ತಿದೆ. ಒಂದು ಋತುವಿನಲ್ಲಿ ಎರಡು ಮಾಸಗಳಿರುತ್ತವೆ, ಈಗ ಚೈತ್ರ ಮಾಸ ನಡೆಯುತ್ತಿದೆ. ಒಂದು ಮಾಸದಲ್ಲಿ ಎರಡು ಪಕ್ಷಗಳಿರುತ್ತವೆ. ಈಗ ಕೃಷ್ಣಪಕ್ಷ. ಒಂದು ಪಕ್ಷದಲ್ಲಿ ಹದಿನೈದು ತಿಥಿಗಳಿರುತ್ತವೆ. ಇಂದು ಒಂಭತ್ತನೆಯ ನವಮೀ ತಿಥಿ. (ಶ್ರೇಷ್ಠವಾದ ಏಕಾದಶಿಗಾಗಿ ಸಂಕಲ್ಪವನ್ನು ಬರೆದಿದ್ದೇನೆ.)
ಆ ಬಳಿಕ ಪಂಚಾಂಗವನ್ನು ನೋಡಿ ನಕ್ಷತ್ರ ಯೋಗ ಕರಣಗಳನ್ನೂ ಹೇಳಬೇಕು.
ಶತಭಿಷಾ ನಕ್ಷತ್ರೇ, ಶುಕ್ಲಯೋಗೇ, ಬಾಲವಕರಣೇ (ಏಕಾದಶಿಯಂದು)
ನಮ್ಮಲ್ಲಿ ತಿಥಿಯನ್ನು ಹೇಳಿ ಶುಭಯೋಗ ಶುಭಕರಣ ಎಂದು ಹೇಳಿ ಸುಮ್ಮನಾಗಿಬಿಡುತ್ತಾರೆ. ನಕ್ಷತ್ರದ ಸಂಕೀರ್ತನೆ ಮಾಡುವದರಿಂದ ನಮಗೆ ಆಪತ್ತು ಪರಿಹಾರವಾಗುತ್ತದೆ. ಯೋಗವನ್ನು ಹೇಳುವದರಿಂದ ಸಂಪತ್ತು ದೊರೆಯುತ್ತದೆ ಮತ್ತು ಕರಣವನ್ನು ಹೇಳುವದರಿಂದ ಕಾರ್ಯಗಳೆಲ್ಲ ನಿರ್ವಿಘ್ನವಾಗಿ ನಡೆಯುತ್ತವೆ. ಹೀಗಾಗಿ, ಅ ನಕ್ಷತ್ರ ಯೋಗ ಕರಣಗಳನ್ನು ತಿಳಿದು ಹೇಳಬೇಕು.
ಅಸ್ಮದ್ಗುರ್ವಂತರ್ಗತ ಪರಮಗುರ್ವಂತರ್ಗತ ಶ್ರೀರಾಘವೇಂದ್ರಶ್ರೀಮಚ್ಚರಣಾದಿ ಸಮಸ್ತಗುರ್ವಂತರ್ಗತ ಸಮಸ್ತತತ್ವಾಭಿಮಾನಿದೇವತಾಂತರ್ಗತ ಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀವಿಷ್ಣುಪ್ರೇರಣಯಾ ಶ್ರೀವಿಷ್ಣುಪ್ರೀತ್ಯರ್ಥಂ
ಹೀಗೆ ದೇಶ-ಕಾಲಗಳನ್ನ ಚಿಂತಿಸಿ ನಮ್ಮ ಗುರುಗಳಿಂದ ಆರಂಭಸಿ ಪರಮಾತ್ಮನವರೆಗಿನ ತಾರತಮ್ಯವನ್ನು ಚಿಂತಿಸಬೇಕು. ನಮ್ಮ ಗುರುಗಳ ಅಂತರ್ಯಾಮಿಯಾದ, ಪರಮಗುರುಗಳ ಅಂತರ್ಯಾಮಿಯಾದ, ಶ್ರೀರಾಘವೇಂದ್ರಸ್ವಾಮಿಗಳೇ ಮುಂತಾದ ಸಮಸ್ತ ಗುರುಗಳ ಅಂತರ್ಯಾಮಿಯಾದ, ಎಲ್ಲ ತತ್ವಾಭಿಮಾನಿದೇವತೆಗಳ ಅಂತರ್ಯಾಮಿಯಾದ ಭಾರತೀರಮಣಮುಖ್ಯಪ್ರಾಣನ ಅಂತರ್ಯಾಮಿಯಾದಿ ಶ್ರೀವಿಷ್ಣು ಅಂದರೆ ಲಕ್ಷ್ಮೀನಾರಾಯಣನ ಪ್ರೇರಣೆಯಿಂದ ಅವನ ಪ್ರೀತಿಗಾಗಿ
ಉಪವಾಸವ್ರತಂ ಅಹಂ ಆಚರಿಷ್ಯೇ.
ಯಾವ ಸತ್ಕರ್ಮವನ್ನು ಮಾಡುತ್ತಿದ್ದೇವೆಯೋ ಆ ಕರ್ಮದ ಹೆಸರನ್ನು ಹೇಳಿ ಅದನ್ನು ಮಾಡುತ್ತೇನೆ ಎನ್ನಬೇಕು. ಸಂಧ್ಯಾವಂದನೆಯಿದ್ದರೆ, ಪ್ರಾತಃಸಂಧ್ಯಾಮುಪಾಸಿಷ್ಯೇ ಎನ್ನಬೇಕು. ದೇವರ ಪೂಜೆ ಮಾಡುವಾಗ ವಿಷ್ಣೋಃ ಷೋಡಶೋಪಚಾರಪೂಜಾಂ ಕರಿಷ್ಯೇ ಎನ್ನಬೇಕು. ಗೋದಾನವನ್ನು ಮಾಡುವಾಗ ಗೋದಾನಮಹಮಾಚರಿಷ್ಯೆ ಎನ್ನಬೇಕು. ಸ್ನಾನ ಮಾಡುವಾಗ ಪ್ರಾತಃಸ್ನಾನಮಹಮಾಚರಿಷ್ಯೇ ಎನ್ನಬೇಕು.
ವಿಷಯವನ್ನು ಹೇಳಿಯಾಯಿತು. ಈಗ ಒಂದೊಂದೇ ಶಬ್ದವನ್ನು ಹೇಳಿ ಅರ್ಥವನ್ನು ತಿಳಿಸುತ್ತೇನೆ.
- ಶ್ರೀ ಗೋವಿಂದ ಗೋವಿಂದ = ಮೊಟ್ಟ ಮೊದಲಿಗೆ ಸಮಸ್ತವೇದಪ್ರತಿಪಾದ್ಯನಾದ ಭಗವಂತನ ಸ್ಮರಣೆ. ಶ್ರೀ ಗೋವಿಂದ ಗೋವಿಂದ ಎಂದು.
- ಶ್ರೀಮದ್ಭಗವತಃ = ಲಕ್ಷ್ಮೀಸಮೇತನಾಗಿ, ಅನಂತಗುಣಗಳಿಂದ ಪೂರ್ಣನಾದ
- ಮಹಾಪುರುಷಸ್ಯ = ಮಹಾಪುರುಷ ಎಂಬ ಹೆಸರುಳ್ಳ
- ವಿಷ್ಣೋಃ = ವಿಷ್ಣುವಿನ
- ಆಜ್ಞಯಾ = ಆಜ್ಞಾಶಕ್ತಿಯಿಂದ
- ಪ್ರವರ್ತಮಾನಸ್ಯ = ಸಕಲಜಗತ್ತನ್ನು ನಡೆಸುವ ಮಹಾಕಾರ್ಯವನ್ನು ಮಾಡುತ್ತಿರುವ
- ಆದ್ಯಬ್ರಹ್ಮಣಃ = ಮೊಟ್ಟಮೊದಲಿಗೆ ಹುಟ್ಟಿದ ಬ್ರಹ್ಮದೇವರ
- ದ್ವಿತೀಯಪರಾರ್ಧೇ = ಪರ ಎಂಬ ಆಯುಷ್ಯದ ಎರಡನೆಯ ಭಾಗದಲ್ಲಿ (ಐವತ್ತೊಂದನೆಯ ವರ್ಷದಲ್ಲಿ)
- ಶ್ರೀಶ್ವೇತವರಾಹಕಲ್ಪೇ = ಶ್ವೇತವರಾಹಕಲ್ಪ ಎಂಬ ಹೆಸರಿರುವ ಬ್ರಹ್ಮದೇವರ ದಿವಸದಲ್ಲಿ (ನಡೆಯುತ್ತಿರುವ)
- ವೈವಸ್ವತಮನ್ವಂತರೇ = ಏಳನೆಯ ವೈವಸ್ವತಮನ್ವಂತರದಲ್ಲಿ
- ಅಷ್ಟಾವಿಂಶತಿತಮೇ ಕಲಿಯುಗೇ ಪ್ರಥಮಪಾದೇ = ಇಪ್ಪತ್ತೆಂಟನೆಯ ಕಲಿಯುಗದ ಮೊದಲ ಪಾದದಲ್ಲಿ
- ಮೇರೋಃ ದಕ್ಷಿಣಪಾರ್ಶ್ವೇ = ಮೇರುವಿನ ದಕ್ಷಿಣದಿಕ್ಕಿನಲ್ಲಿರುವ
- ಜಂಬೂದ್ವೀಪೇ = ಜಂಬೂದ್ವೀಪದಲ್ಲಿನ
- ಭರತವರ್ಷೇ = ಆರನೆಯ ಭರತವರ್ಷದಲ್ಲಿ
- ಭರತಖಂಡೇ ದಂಡಕಾರಣ್ಯೇ = ಭರತವರ್ಷದ ಒಂದು ಭಾಗವಾದ ದಂಡಕಾರಣ್ಯದಲ್ಲಿ
- ಗೋದಾವರ್ಯಾಃ = ಗೋದಾವರೀ ನದಿಯ
- ದಕ್ಷಿಣೇ ತೀರೇ = ದಕ್ಷಿಣದ ತೀರದಲ್ಲಿ
- ಶಾಲೀವಾಹನಶಕೇ = ಶಾಲೀವಾಹನರಾಜನ ಶಕೆಯಲ್ಲಿ
- ಬೌದ್ಧಾವತಾರೇ = ಬುದ್ಧಾವತಾರದ ನಂತರದಲ್ಲಿ
- ರಾಮಕ್ಷೇತ್ರೇ = ಶ್ರೀರಾಮಚಂದ್ರ ಪಾಲಿಸಿದ
- ಅಸ್ಮಿನ್ = ಈ ಪ್ರದೇಶದಲ್ಲಿ
- ಚಾಂದ್ರಮಾನೇನ = ಚಾಂದ್ರಮಾನದ ಪ್ರಕಾರ
- ಮನ್ಮಥನಾಮಸಂವತ್ಸರೇ = ಮನ್ಮಥ ಎಂಬ ಸಂವತ್ಸರದ
- ಉತ್ತರಾಯಣೇ = ಉತ್ತರಾಯಣದ
- ವಸಂತರ್ತೌ = ವಸಂತಋತುವಿನ
- ಚೈತ್ರಮಾಸೇ = ಚೈತ್ರಮಾಸದ
- ಕೃಷ್ಣಪಕ್ಷೇ = ಕೃಷ್ಣಪಕ್ಷದ
- ಏಕಾದಶ್ಯಾಂ ತಿಥೌ = ಏಕಾದಶೀತಿಥಿಯಲ್ಲಿ
- ಶತಭಿಷಾನಕ್ಷತ್ರೇ = ಶತಭಿಷಾನಕ್ಷತ್ರದಲ್ಲಿ
- ಶುಕ್ಲಯೋಗೇ = ಶುಕ್ಲಯೋಗದಲ್ಲಿ
- ಬಾಲವಕರಣೇ = ಬಾಲವಕರಣದಲ್ಲಿ
- ಅಸ್ಮದ್ಗುರ್ವಂತರ್ಗತ = ನಮ್ಮ ಗುರುಗಳ ಅಂತರ್ಯಾಮಿಯಾದ
- ಪರಮಗುರ್ವಂತರ್ಗತ = ಪರಮಗುರುಗಳ ಅಂತರ್ಯಾಮಿಯಾದ
- ಶ್ರೀರಾಘವೇಂದ್ರಶ್ರೀಮಚ್ಚರಣಾದಿ ಸಮಸ್ತಗುರ್ವಂತರ್ಗತ = ಶ್ರೀರಾಘವೇಂದ್ರಸ್ವಾಮಿಗಳೇ ಮುಂತಾದ ಸಮಸ್ತ ಗುರುಗಳ ಅಂತರ್ಯಾಮಿಯಾದ
- ಸಮಸ್ತತತ್ವಾಭಿಮಾನಿದೇವತಾಂತರ್ಗತ = ಎಲ್ಲ ತತ್ವಾಭಿಮಾನಿದೇವತೆಗಳ ಅಂತರ್ಯಾಮಿಯಾದ
- ಭಾರತೀರಮಣಮುಖ್ಯಪ್ರಾಣಾಂತರ್ಗತ = ಭಾರತೀರಮಣಮುಖ್ಯಪ್ರಾಣನ ಅಂತರ್ಯಾಮಿಯಾದ
- ಶ್ರೀವಿಷ್ಣುಪ್ರೇರಣಯಾ ಶ್ರೀವಿಷ್ಣುಪ್ರೀತ್ಯರ್ಥಂ= ಶ್ರೀ ಲಕ್ಷ್ಮೀನಾರಾಯಣನ ಪ್ರೇರಣೆಯಿಂದ ಅವನ ಪ್ರೀತಿಗಾಗಿ
- ಉಪವಾಸವ್ರತಂ = ಉಪವಾಸವ್ರತವನ್ನು
- ಅಹಂ = ನಾನು
- ಆಚರಿಷ್ಯೇ = ಆಚರಿಸುತ್ತೇನೆ.
ಇದು ನಾವು ಪ್ರತಿಯೊಂದು ಕರ್ಮದ ಆರಂಭದಲ್ಲಿಯೂ ಅವಶ್ಯವಾಗಿ ಮಾಡುವ ಸಂಕಲ್ಪ. ಇದನ್ನು ಮತ್ತೆಮತ್ತೆ ಓದಿ, ಮನನ ಮಾಡಿ. ಒಮ್ಮೆ ತಲೆಯಲ್ಲಿ ಕುಳಿತರೆ ನೀವು ಅದನ್ನು ಹೇಳುವಾಗ ಅನಾಯಾಸವಾಗಿ ಮನಸ್ಸಿಗೆ ತೊರುತ್ತದೆ.
ಒಂದು ಮಾತು. ನಮ್ಮ ಮಾಧ್ವರಲ್ಲಿ ಎರಡು ತರಹದ ಜನರಿದ್ದಾರೆ. ನಾವು ಹೇಳುವ ಪ್ರತಿಯೊಂದನ್ನೂ ಅರ್ಥ ತಿಳಿದು ಮಾಡಬೇಕು, ಇಲ್ಲದಿದ್ದರೆ ಮಾಡಬಾರದು ಎಂದು ಹೇಳುವವರು, ಆದರೆ ಅರ್ಥ ತಿಳಿಯಲು ಪ್ರಯತ್ನವನ್ನೇ ಪಡೆದವರು.
ಎರಡನೆಯ ಗುಂಪಿನವರು ನಮ್ಮ ಗುರುಪರಂಪರೆ ಅನುಷ್ಠಾನ ಹೇಳಿಕೊಟ್ಟ ಮಾತನ್ನು ಅನುಷ್ಠಾನ ಮಾಡೋಣ, ಅವರು ಕೃಪೆ ಮಾಡಿ ಅರ್ಥವನ್ನೂ ತಿಳಿಸುತ್ತಾರೆ ಎಂದು ಶ್ರದ್ದೆಯಿಂದ ಅನುಷ್ಠಾನ ಮಾಡುತ್ತ ಅರ್ಥವನ್ನು ತಿಳಿಯಲು ಪ್ರಾಮಾಣಿಕ ಪ್ರಯತ್ನ ಮಾಡುವವರು.
ನೀವು ಮೊದಲನೆಯ ಗುಂಪಿನವರಾದರೆ, ಮೇಲಿನ ಎಲ್ಲ ವಿಷಯಗಳ ಮೇಲೆ ಸುಮ್ಮನೇ ಕಣ್ಣಾಡಿಸಿ ಕೆಳಗೆ ಬಂದಿರುತ್ತೀರಿ. ಇದೆಲ್ಲ ನನಗೆ ಈಗಲೇ ಗೊತ್ತು ಇದೇನು ಹೊಸದು ಎಂದು ಕೊಂಡಿರುತ್ತೀರಿ.
ಎರಡನೆಯ ಗುಂಪಿನವರಾದರೆ ಅದನ್ನು ಮತ್ತಮತ್ತೆ ಓದಿ ಅರ್ಥವನ್ನು ಮನಸ್ಸಿನಲ್ಲಿ ನಾಟಿಸಿಕೊಳ್ಳುರಿ. ಇಷ್ಟು ದಿವಸ ಹುಡುಕುತ್ತಿದ್ದ ಅರ್ಥ ದೊರೆಯಿತು ಎಂದು ಸಂತೋಷಪಟ್ಟು ಅರ್ಥ ನೀಡಿಸಿದ ಗುರು-ದೇವತೆಗಳನ್ನು ಭಕ್ತಿಯಿಂದ ಸ್ಮರಿಸುತ್ತೀರಿ.
ನಾನು ಇದನ್ನು ಬರೆದಿರುವದು ಆ ಎರಡನೆಯ ಗುಂಪಿನವರಿಗಾಗಿ.
ಮಾಧ್ವ ಸಾಧ್ವಿಯರಲ್ಲಿ ಒಂದು ವಿನಮ್ರ ವಿನಂತಿ.
ಈ ಸಂಕಲ್ಪವನ್ನು ಅವಶ್ಯವಾಗಿ ಹೆಣ್ಣುಮಕ್ಕಳೂ ಹೇಳಬೇಕು. ನೀವು ಇದನ್ನು ಓದಿ, ಅರ್ಥ ಮಾಡಿಕೊಂಡು ಪ್ರತೀನಿತ್ಯ ಹೇಳಿ. ಸ್ನಾನ ಮಾಡಬೇಕಾದರೆ, ಹೂ ಬಿಡಿಸಬೇಕಾದರೆ, ಹೂ ಕಟ್ಟ ಬೇಕಾದರೆ, ಅಡಿಗೆ ಮಾಡಬೇಕಾದರೆ ಮನೆಯನ್ನು ಸ್ವಚ್ಛವಾಗಿಡಬೇಕಾದರೆ ಒಟ್ಟಾರೆ ಸಕಲ ಸತ್ಕರ್ಮಗಳನ್ನು ಆಚರಿಸಬೇಕಾದರೆ ಈ ಸಂಕಲ್ಪವನ್ನು ಹೇಳಿ ಪರಮಾತ್ಮನ ಪೂಜೆ ಎಂದು ಕರ್ಮಗಳನ್ನು ಆಚರಿಸಿ.
ಅದಕ್ಕಿಂತ ಮುಖ್ಯವಾಗಿ, ನಿಮ್ಮ ಪುಟ್ಟ ಕೂಸಿಗೆ ಇದನ್ನು ಹೇಳಿಕೊಡಿ. ಇದರ ಅರ್ಥವನ್ನು ಹೇಳಿಕೊಡಿ. ಮಧ್ಯದಲ್ಲಿ ಅರ್ಥವಾಗದ ವಿಷಯವಿದ್ದರೆ, ಪ್ರಶ್ನೆಯಿದ್ದರೆ ಅವಶ್ಯವಾಗಿ ನನ್ನನ್ನು ಕೇಳಿ ಉತ್ತರಿಸುತ್ತೇನೆ. ಮಾಧ್ವಸಮಾಜದಲ್ಲಿ ಧರ್ಮವನ್ನು ಉಳಿಸಬೇಕಾದವರೇ ನೀವು. ತಾಯಿ ಮಗುವಿಗೆ ಹೇಳಿದ ಪಾಠ ಸಾಯುವವರೆಗೆ ನೆನಪಿರುತ್ತದೆ. ನಿಮ್ಮ ಮಗ/ಮಗಳು, ಮೊಮ್ಮಗ/ಮೊಮ್ಮಗಳು ಮಾಡುವ ಎಲ್ಲ ಸತ್ಕರ್ಮಗಳಿಗೂ ನೀವು ಅದು ಪುಟ್ಟ ಕೂಸಾಗಿದ್ದಾಗಲೇ ಬೀಜ ಬಿತ್ತಿ.
ಧರ್ಮವನ್ನು ಉಳಿಸೋಣ, ಧರ್ಮ ನಮ್ಮನ್ನು ಉಳಿಸುತ್ತದೆ.
– ವಿಷ್ಣುದಾಸ ನಾಗೇಂದ್ರಾಚಾರ್ಯ.