vishwanandini-012

ವಿಶ್ವನಂದಿನಿ ಲೇಖನ ಮಾಲೆ – 012

ಜೀವನಸುರಭಿ

ನಮ್ಮ ಮಕ್ಕಳ ಪ್ರತಿಭೆಯನ್ನು ಇನ್ನೊಬ್ಬರ ಮುಂದೆ ಜಾಹೀರು ಪಡಿಸುವದಕ್ಕಿಂತ ಮುಂಚೆ

ನನಗೆ ಈ ಜಗತ್ತಿನಲ್ಲಿ ತುಂಬ ಆಶ್ಚರ್ಯವಾಗಿ ತೋರುವ ವಸ್ತು ಎಂದರೆ ಮನುಷ್ಯನ ದಡ್ಡತನ. ಮನುಷ್ಯ ಯಾಕಿಷ್ಟು ಮೂರ್ಖನಂತೆ ವರ್ತಿಸುತ್ತಾನೆ, ಇನ್ನೊಬ್ಬ ಮೂರ್ಖನನ್ನು ಅನುಸರಿಸುತ್ತಾನೆ ಎನ್ನುವದು ನನಗಿನ್ನೂ ಅರ್ಥವಾಗದ ವಿಷಯ.

ಒಂದು ಕಥೆ ಇದೆ, ಅದರಲ್ಲೊಂದು ತತ್ವ, ಅದರಲ್ಲಿ ಕೆಲವು ಬದುಕಿನ ಪಾಠಗಳಿವೆ, ಓದಿ.

ಶ್ರೀಮದಾಚಾರ್ಯರು ಇನ್ನೂ ಪುಟ್ಟ ಕೂಸು. ಶ್ರೀ ಮಧ್ಯಗೇಹಾರ್ಯರು ಅಕ್ಷರಾಭ್ಯಾಸ ಮಾಡಿಸುತ್ತಾರೆ. ಮೊದಲ ದಿವಸ ಅ ಆ ಇ ಈ ಎಂದು ತಿದ್ದಿ ಹೇಳಿಕೊಡುತ್ತಾರೆ. ಮಾರನೆಯ ದಿವಸ ಮನೆಯ ಮುಂದಿನ ಜಗುಲಿಯ ಮೇಲೆ ಕುಳಿತು ಹಿಂದಿನ ದಿವಸದ ಪಾಠವನ್ನು ಮತ್ತಿ ತಿದ್ದಲು ಮಗ ವಾಸುದೇವನಿಗೆ ನೀಡುತ್ತಾರೆ. ವಾಸುದೇವ, ಅಪ್ಪಾ ನಿನ್ನೆ ಹೇಳಿದ ಪಾಠವೇ ಯಾಕೆ ಹೇಳುತ್ತೀರಿ, ಮುಂದಿನ ಪಾಠವನ್ನು ಹೇಳಿ ಎನ್ನುತ್ತಾನೆ. ಮೂರು ವರ್ಷದ ಕೂಸು. ಒಂದು ಬಾರಿ ಕಲಿತ ಪಾಠ ಬೇಡ, ಮುಂದಿನ ಪಾಠ ಹೇಳಿ ಎನ್ನುತ್ತಿದೆ.

ನಾವೆಲ್ಲ, ಆಚಾರ್ಯರು ಭಾರತೀಶ, ಇದು ಆಶ್ಚರ್ಯವೇ ಅಲ್ಲ ಎಂದು ಸುಮ್ಮನಾಗಿಬಿಡುತ್ತೇವೆ. ಆದರೆ, ಆ ಕೂಸು ಭಾರತೀಶ ಎಂದು ಶ್ರೀ ಮಧ್ಯಗೇಹಾರ್ಯರಿಗೆ ಆ ದಿವಸ ಗೊತ್ತಿರಲಿಲ್ಲ. ಸರ್ವಥಾ ಗೊತ್ತಿರಲಿಲ್ಲ. ಮಗ ಆ ರೀತಿ ಹೇಳಿದಾಗ, ಶ್ರೀ ಮಧ್ಯಗೇಹಾರ್ಯರು ನಡೆದುಕೊಂಡ ರೀತಿ ನಮಗೆ ಬದುಕಿನ ಪಾಠವನ್ನು ಕಲಿಸುತ್ತದೆ.

ಪರೀಕ್ಷೆಯ ಸಮಯ. ಮಕ್ಕಳು ಚನ್ನಾಗಿ ಮಾಡಿರುತ್ತಾರೆ. ನೂರು ಜನರಿಗೆ ದೂರವಾಣಿ ಮಾಡಿ ಹೇಳುತ್ತೇವೆ, ಮಕ್ಕಳ ಮುಂದೆಯೇ ಹೆಮ್ಮೆಯಿಂದ ಬೀಗುತ್ತೇವೆ. ಎಷ್ಟು ಚನ್ನಾಗಿ ಮಾಡಿದ್ದಾನೆ ನೋಡಿ ಅಂತ. ಮುಂದಿನ ವರ್ಷ ಮಕ್ಕಳು ಸ್ವಲ್ಪ ಹಿಂದಾಗುತ್ತಾರೆ, ನಮಗೆ ಕಸಿವಿಸಿ. ಮಕ್ಕಳನ್ನು ಹಿಡಿದು ಹೊಡೆಯುತ್ತೇವೆ. ನಿನಗಾಗಿ ಎಷ್ಟು ಖರ್ಚು ಮಾಡುತ್ತೇನೆ, ನೀನು ಓದುವದೇ ಇಲ್ಲ ಎನ್ನುತ್ತೇವೆ. ಪರೀಕ್ಷೆ ಚನ್ನಾಗಿ ಮಾಡಿದಾಗ ಅವನ ಆಟದ ವೈಖರಿಯನ್ನೂ ಹೊಗಳಿದ ನಾವು ಅವನು ಸ್ವಲ್ಪ ಹಿಂದಾದರೆ ಅವನ ಒಳ್ಳೆಯ ಗುಣಗಳನ್ನೂ ಬೈಯುತ್ತೇವೆ. ಪರಮಮೂರ್ಖತನ.

ನಮ್ಮ ಮಗು ಶ್ಲೋಕವೊಂದನ್ನೋ, ಹಾಡನ್ನೋ ಮತ್ತೇನನ್ನೋ ಕಲಿತಿರುತ್ತದೆ. ನಿಜವಾಗಿಯೂ ಪ್ರತಿಭಾವಂತ ಮಗು. ನಾವು ಹೋದಲ್ಲೆಲ್ಲಾ ಅದರ ಕೈಯಲ್ಲಿ ಅದನ್ನೇ ಹಾಡಿಸುತ್ತೇವೆ, ಅದನ್ನೇ ಮಾಡಿಸುತ್ತೇವೆ, ಅದರ ಪ್ರತಿಭೆಯನ್ನು ಜಗತ್ತಿನ ಮುಂದೆ ಪ್ರದರ್ಶನಕ್ಕಿಟ್ಟಿರುತ್ತೇವೆ.

ಒಂದು ನಿಮಿಷ ನೀವು ಶ್ರೀ ಮಧ್ಯಗೇಹಾರ್ಯರಾಗಿ. ಮೂರು ವರ್ಷದ ಕೂಸಿಗೆ ಹಿಂದಿನ ದಿವಸ ಅಕ್ಷರಾಭ್ಯಾಸವಾಗಿದೆ. ಈ ದಿವಸ ಮಗ ಹಿಂದಿನ ಪಾಠ ಬೇಡ ಮುಂದಿನ ಪಾಠ ಹೇಳು ಎನ್ನುತ್ತಿದ್ದಾನೆ. ನಾವಾಗಿದ್ದರೆ, ಹತ್ತು ಜನರನ್ನು ಕರೆದು ತೋರಿಸಿ, ನೋಡಿ ನನ್ನ ಮಗ ಎಷ್ಟು ಬುದ್ಧಿವಂತ ಎಂದನ್ನುತ್ತಿದ್ದೆವು. ಅವನ ಪ್ರತಿಭೆಯನ್ನು ನಮ್ಮ ಬಡಾಯಿಯ ವಿಷಯವನ್ನಾಗಿ ಮಾಡಿಕೊಳ್ಳುತ್ತಿದ್ದೆವು. ಆದರೆ, ಶ್ರೀ ಮಧ್ಯಗೇಹಾರ್ಯರು ಹಾಗೆ ಮಾಡುವದಿಲ್ಲ. ಮಗನಲ್ಲಿ ಆ ರೀತಿಯ ಪ್ರತಿಭೆಯನ್ನು ಕಂಡಾಗ ಅವರು ತೋರಿದ ಎರಡು ಪ್ರತಿಕ್ರಿಯೆಗಳು ಪ್ರತಿಯೊಬ್ಬ ಸಾಧಕನಿಗೆ ಮತ್ತು ಪ್ರತಿಯೊಬ್ಬ ತಂದೆತಾಯಿಯಗಳಿಗೆ ಪಾಠವನ್ನು ಕಲಿಸುತ್ತದೆ.

ಲಿಪಿಕುಲಂ ನನು ತಾತ ಗತೇ ದಿನೇ ಲಿಖಿತಮೇವ ಪುನರ್ಲಿಖಿತಂ ಕುತಃ ।
ಇತಿ ನಿಜಪ್ರತಿಭಾಗುಣಭಾವಿತಂ ಹರಿಪದಸ್ಯ ವಚಸ್ತಮನಂದಯತ್ ।।

ಶಿಶುರಸೌ ಪ್ರತಿಭಾಂಬುಧಿರಿತ್ಯಲಂ ಜನಮನೋವಚನಗ್ರಹಪೀಡನಾ ।
ನ ಭವತಾದಿತಿ ತಂ ವಿಜನಸ್ಥಲೇ ಸ್ವತನಯಂ ಸಮಶಿಕ್ಷಯದೇಷಕಃ ।।

ಮೊದಲಿಗೆ ಶ್ರೀ ಮಧ್ಯಗೇಹಾರ್ಯರು ಕಣ್ಣು ಮುಚ್ಚಿ ಇದು ಅನಂತಾಸನನನ ದಯೆ ಎಂದು ಭಕ್ತಿಯಿಂದ ಸ್ಮರಿಸುತ್ತಾರೆ. “ಮದಧಿನಾಥದಯೋದಯಜಾ ಪ್ರತಿಭಾ ” ನನ್ನ ಮಗುವಿಗೆ ಇಷ್ಟು ಪ್ರತಿಭೆ ಬಂದದ್ದು ಶ್ರೀಹರಿಯ ಕರುಣದಿಂದ ಎಂದು.

ನಮ್ಮ ಜೀವನದ ಪ್ರತಿಯೊಂದು ಯಶಸ್ಸೂ, ಪ್ರತಿಯೊಂದು ಸುಖ, ಪ್ರತಿಯೊಂದು ಉನ್ನತಿಯೂ ಪರಮಾತ್ಮನ ಅನುಗ್ರಹ ಎನ್ನುವ ಎಚ್ಚರ ನನಗಿರಬೇಕು. ಮಗ ಒಳ್ಳೆಯ ಕೆಲಸ ಮಾಡಿದಾಗ, ನೋಡು ನನ್ನ ಮಗ ಹೇಗೆ ಮಾಡಿದಾನೆ ಎಂದು, ಮಗ ತಪ್ಪು ಮಾಡಿದಾಗ ನೀಡು ನಿನ್ನ ಮಗ ಹೀಗೆ ಅಂತ ಹೆಂಡತಿಯನ್ನು ಮೂದಲಿಸುವ ಮೂರ್ಖತ ಇರಬಾರದು. ಮಗ ಸರಿ ಮಾಡಿದರೆ ನಮ್ಮ ಕರ್ತವ್ಯವನ್ನು ನಾವು ಸರಿಯಾಗಿ ನಿಭಾಯಿಸಿದ್ದೇವೆ ಎಂದರ್ಥ. ಅದನ್ನು ಹರಿಗೊಪ್ಪಿಸಬೇಕು. ಮಕ್ಕಳಲಿ ಅನ್ಯಾದೃಶವಾದ ಪ್ರತಿಭೆ ಕಂಡಾಗ ಹರಿ-ಗುರುಗಳ ಕಾರುಣ್ಯ ಎಂದು ಭಕ್ತಿಯಿಂದ ಚಿಂತಿಸಬೇಕು. ಅವನ ಪ್ರತಿಭೆ ನಮ್ಮ ಬಡಾಯಿಗೆ ಕಾರಣವಾಗಬಾರದು. ಇದು ಶ್ರೀ ಮಧ್ಯಗೇಹಾರ್ಯರು ಸಾಧಕನಿಗೆ ಕಲಿಸುವ ದೊಡ್ಡ ಪಾಠ.

ಇದಕ್ಕಿಂತ ದೊಡ್ಡದಾಗಿ, ಅವರು ಎಲ್ಲ ತಂದೆತಾಯಿಯರಿಗೆ ಪಾಠ ಹೇಳುತ್ತಾರೆ. ಮಗ ಆ ರೀತಿ ಹೇಳಿದ ತಕ್ಷಣ ಅವರ ಮನಸ್ಸು ಆನಂದದಿಂದ ಕುಣಿದಾಡಿಬಿಡುತ್ತದೆ. “ವಚಸ್ತಮನಂದಯತ್” ಮಕ್ಕಳ ಯಶಸ್ಸನ್ನು ಕಂಡು ನಾವು ಮನಸಾರೆ ಸುಖಿಸಬೇಕು. ಹೃತ್ಪೂರ್ವಕವಾಗಿ ಆನಂದಿಸಬೇಕು. ಮಗುವಿನ ಪ್ರತಿಭೆಯನ್ನು ಗುರುತಿಸುವ ಬುದ್ಧಿ ನಮ್ಮಲ್ಲಿರಬೇಕು. ಪಕ್ಕದ ಮನೆಯವನ ಮಗಳು ಶಾಲೆಯಲ್ಲಿ ಚನ್ನಾಗಿ ಓದುತ್ತಾಳೆ, ಹೀಗಾಗಿ ನನ್ನ ಮಗಳೂ ಚನ್ನಾಗಿ ಓದಲೇಬೇಕು, ಅವಳು ಎಷ್ಟೇ ಚನ್ನಾಗಿ ಹಾಡಿದರೂ, ಮತ್ತೊಂದು ಪ್ರತಿಭೆಯನ್ನು ತೋರಿದರೂ ಉಪಯೋಗವಿಲ್ಲ ಎನ್ನುವ ಮೂರ್ಖತನ ಸರ್ವಥಾ ಇರಬಾರದು. ಮೊದಲಿಗೆ ಪ್ರತಿಭೆಯನ್ನು ಗುರುತಿಸುವ ಯೋಗ್ಯತೆ ನಮ್ಮಲ್ಲಿರಬೇಕು. ಆ ಪ್ರತಿಭೆಯನ್ನು ಕಂಡು ಆನಂದಿಸುವ ಗುಣ ನಮಗಿರಬೇಕು.

ಇದಕ್ಕಿಂತ ಮುಖ್ಯವಾಗಿ, ಮಗುವಿನ ಆ ಪ್ರತಿಭೆಯನ್ನು ನೂರು ಜನರ ಮುಂದೆ ಪ್ರದರ್ಶನಕ್ಕಿಡಬಾರದು. ಶ್ರೀ ಮಧ್ಯಗೇಹಾರ್ಯರು ಮಗನ ಪ್ರತಿಭೆಯನ್ನು ಕಂಡು ಆನಂದಿತರಾಗುತ್ತಾರೆ. ಆದರೆ ಮೈಮರೆಯುವದಿಲ್ಲ. ಮನೆಯ ಜಗುಲಿಯ ಮೇಲೆ ಕುಳಿತವರು, ಮಗನನ್ನು ಮನೆಯ ಒಳಗೆ ಕರೆದುಕೊಂಡು ಹೋಗಿ, ಯಾರೂ ಮನೆಯಲ್ಲಿ ಇಲ್ಲದಾಗ ಮಾತ್ರ ಅವನಿಗೆ ಪಾಠ ಹೇಳಲು ಆರಂಭಿಸುತ್ತಾರೆ. ನಾವು ಕಲಿಯಲೇಬೇಕಾದ ಅದ್ಭುತವಾದ ಪಾಠವಿದು.

ನನ್ನ ಪರಿಚಯದ ತುಂಬಾ ಜನರ ಮನೆಯಲ್ಲಿ ಇದನ್ನು ನೋಡಿದ್ದೇನೆ. ಒಂದು ಘಟನೆಯನ್ನು ಹೇಳುತ್ತೇನೆ. ಹೀಗೊಬ್ಬಹುಡುಗ ಇದ್ದ. ಮೂರ್ನಾಲ್ಕು ವರ್ಷ ವಯಸ್ಸಿನಲ್ಲಿಯೇ ಅವನ ದೇಹದಲ್ಲಿ ಅದ್ಭುತ flexibility ಇತ್ತು. ಬಿಲ್ಲಿನಂತೆ ಮೈ ಬಗ್ಗಿಸುತ್ತಿದ್ದ. ಉಸಿರು ಹಿಡಿದು ಎಂಟತ್ತು ಲಾಗಾ ಹೊಡೆಯುತ್ತಿದ್ದ. ಸರ್ಕಸ್ಸಿನ ಹುಡುಗರಂತೆ ಬಲಗಾಲಿನ ಮೇಲೆ ನಿಂತು ಎಡಗಾಲನ್ನು ಎಡಗೈಯಿಂದ ಹಿಡಿದು ಬಲಗೈಯನ್ನು ಮೇಲಕ್ಕೆತ್ತಿ ನಿಲ್ಲುತ್ತಿದ್ದ. ನೋಡುವವರಿಗೆ ಮೈ ಜುಮ್ಮನಿಸುವಂತೆ ಅವನ ಮೈಯಲ್ಲಿ flexibility ಇತ್ತು. ಅವರ ಅಪ್ಪ ಅಮ್ಮ ಎಲ್ಲಿ ಹೋದರೂ ಮಗನ ಈ ಸರ್ಕಸ್ಸನ್ನು ಪ್ರದರ್ಶನಕ್ಕಿಡುತ್ತಿದ್ದರು. ಮದುವೆ ಮನೆಗೆ ಹೊದರೂ, ಮುಂಜಿಗೆ ಹೋದರೂ ಎಲ್ಲೆಲ್ಲಿಯೂ ಇದು ನಡೆದೆ ಇರುತ್ತಿತ್ತು. ನೋಡಿದವರೆಲ್ಲ ಹೊಗಳುತ್ತಿದ್ದರು. ಮಗುವಿಗೆ ಮೊದಲು ಖುಷಿಯಾಗುತ್ತಿತ್ತು. ಮಾಡು ಎಂದಾಗಲೆಲ್ಲ ಮಾಡುತ್ತಿದ್ದ. ಬೆಳೆಯುತ್ತಿದ್ದಂತೆ ದುರಹಂಕಾರ ಬಂತು. ಮಾಡು ಎಂದರೂ ಮಾಡುತ್ತಿರಲಿಲ್ಲ. ತನಗೇನಾದರೂ ಬೇಕಾದರೆ, ಯಾರನ್ನಾದರೂ ಮೆಚ್ಚಿಸಬೇಕಾದರೆ ಅವರ ಮುಂದೆ ಮಾತ್ರ ಇದನ್ನು ಮಾಡುತ್ತಿದ್ದ. ಆಮೇಲೆ ಅದೂ ನಿಂತು ಹೋಯಿತು. ಇವತ್ತು ದೇಹದಲ್ಲಿ ಆ ಗುಣವೂ ಇಲ್ಲ. ಆದರೆ, ದುರಹಂಕಾರವೇ ಮೈವೆತ್ತ ಮೂರ್ತಿಯಾಗಿದ್ದಾನೆ.

ಇದು ಅವನ ತಪ್ಪಲ್ಲ. ಅವರಪ್ಪ ಅಮ್ಮನ ತಪ್ಪು.

ನೋಡಿ. ಪ್ರತಿಭೆ ಎನ್ನುವದು ಅಂಕುರವಿದ್ದಂತೆ. ಅದು ಮೊಳಕೆ. ‘ಹುಚ್ಚ ಹುರಳೀಗಿಡ ಹಾಕಿ ಕಿತ್ಕಿತ್ ನೋಡಿದ್ನಂತೆ’ ಎಂಬ ಗಾದೆಯಂತೆ ಮೊಳಕೆಯೊಡೆಯುತ್ತಿರುವ ಸಸಿಯನ್ನು ನಾವಷ್ಟೇ ನೋಡಿ, ಮುಟ್ಟಿ ಆನಂದಿಸಬೇಕು. ನೂರು ಜನರನ್ನು ಕರೆಸಿ ನೋಡಿನೋಡಿ ಅಂತ ಹೇಳಿ ಅವರ ಕೈಯಲ್ಲಿ ಮುಟ್ಟಿಸಿದರೆ ಆ ಮೊಳಕೆ ಅಲ್ಲೇ ನಶಿಸಿಬಿಡುತ್ತದೆ.

ಶ್ರೀಮಧ್ಯಗೇಹಾರ್ಯರು ಮಾಡಿದ್ದನ್ನು ಗಮನಿಸಿ, ಮಗನನ್ನು ಒಳಗೆ ಕರೆದುಕೊಂಡು ಹೋಗಿ, ಮನೆಯಲ್ಲಿಯೂ ಯಾರಿಲ್ಲದಾಗ ಪಾಠ ಹೇಳಲು ಆರಂಭಿಸುತ್ತಾರೆ. “ವಿಜನಸ್ಥಲೇ ಸ್ವತನಯಂ ಸಮಶಿಕ್ಷಯದೇಷಕಃ” ಕಾರಣ, ಹಿಂದಿನ ದಿವಸ ಪಾಠ ಹೇಳಿದ್ದನ್ನು ಮಗ ಕಲಿತಿದ್ದಾನೆ, ಅದು ಪ್ರತಿಭೆಯ ಅಂಕುರ. ಅದಕ್ಕೆ ನೀರೆರೆಯಬೇಕು, ಗೊಬ್ಬರ ಹಾಕಬೇಕು, ಪೋಷಿಸಬೇಕು. ಪಾಠ ಹೇಳಿದ್ದನ್ನಲ್ಲ, ಪಾಠ ಹೇಳದ್ದನ್ನೂ ಅರ್ಥ ಮಾಡಿಕೊಳ್ಳುವ ಶಕ್ತಿ ಅವನಿಗೆ ಬರಬೇಕು. ನೂರು ಜನರು ಒಂದು ವಾಕ್ಯವನ್ನು ಓದಿರುತ್ತಾರೆ, ಆದರೆ ಅವರ್ಯಾರಿಗೂ ಅರ್ಥವಾಗದ ಅದ್ಭುತ ಅರ್ಥವನ್ನು ಕಾಣುವ ಕಾಣ್ಕೆಯ ಶಕ್ತಿ ಅವನಿಗೆ ಬರಬೇಕು, ಎಂದು ತಿಳಿದು ಶ್ರೀ ಮಧ್ಯಗೇಹಾರ್ಯರು ಏಕಾಂತದಲ್ಲಿ ಪಾಠ ಹೇಳುತ್ತಾರೆ. ಇಡಿಯ ದರ್ಶನಪ್ರಪಂಚದಲ್ಲಿಯೇ ಯಾರೂ ಕಾಣದ್ದನ್ನು ಕಂಡ, ಯಾರೂ ಹೇಳದ್ದನ್ನು ಹೇಳಿದ, ಯಾರಿಗೂ ಮಾಡಲಿಕ್ಕೆ ಸಾಧ್ಯವಾಗದ್ದನ್ನು ಮಾಡಿದ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರಾಗಿ ಆ ವಾಸುದೇವ ತಯಾರಾಗುತ್ತಾನೆ.

ನಿಜ, ಶ್ರೀಮದಾಚಾರ್ಯರು, ವಾಯುದೇವರು. ಅವರಿಗೆ ಯಾರ ಶಿಕ್ಷಣದ ಅಗತ್ಯವೂ ಇಲ್ಲ. ಆದರೆ, ಅವರ ಅವತಾರ ಮನುಷ್ಯ ಶಿಕ್ಷಣಕ್ಕಾಗಿಯೇ ಇರುವದು. “ಮರ್ತ್ಯಾವತಾರಸ್ತ್ವಿಹ ಮರ್ತ್ಯಶಿಕ್ಷಣಮ್” ಅವರ ಚರ್ಯೆಯನ್ನು ಅವರ ತಂದೆತಾಯಿಯರ, ಅವರ ಶಿಷ್ಯರ ಚರ್ಯೆಯನ್ನು ನೋಡಿ ನಾವು ಬದುಕನ್ನು ರೂಪಿಸಿಕೊಳ್ಳಬೇಕು.

ಮಕ್ಕಳಿಗೆ ಇನ್ನೂ ಹೊಗಳಿಕೆಯನ್ನು ಅರ್ಥ ಮಾಡಿಕೊಳ್ಳದ ವಯಸ್ಸಿನಲ್ಲಿ ಜನರಿಂದ ಹೊಗಳಿಕೆಯನ್ನು ನೀಡಿಸಬೇಡಿ. ಮಕ್ಕಳು ನಮ್ಮ ಪ್ರದರ್ಶನದ ಗೊಂಬೆಗಳಲ್ಲ. ಮಕ್ಕಳ ಪ್ರತಿಭೆ ನಮ್ಮ ಬಡಾಯಿಯ ವಿಷಯವಲ್ಲ. ಮಕ್ಕಳು ನಮ್ಮ ಹೆಮ್ಮೆಯಾಗಬೇಕು. ಅವರ ಪ್ರತಿಭೆ ಹೆಮ್ಮರವಾಗಿ ಬೆಳೆದು ನಿಲ್ಲಬೇಕು. ಅದಕ್ಕೆ ನಾವು ನೀರೆರದು ಪೋಷಿಸಬೇಕು. ಮುಂದೊಂದು ದಿನ ಅ ಮೊಳಕೆ ಬೆಳದು ಹೆಮ್ಮರವಾದಾಗ ನಿಮ್ಮವರನ್ನೆಲ್ಲ ಕರೆದು ತೋರಿಸಿ, ಇವನು ನನ್ನ ಮಗ ಎಂದು. ಆಗ ಅದು ಶಾಶ್ವತವಾದ ಕೀರ್ತಿ.

ಇಲ್ಲದಿದ್ದರೆ, ನನ್ನ ಮಗ ಸಣ್ಣವನಿದ್ದಾಗ ತುಂಬ ಚೂಟಿಯಿದ್ದ, ಈಗ ಹೀಗಾಗಿದ್ದಾನೆ ಅಂತ ದುಃಖ ಪಡುವ ಅವಸ್ಥೆ ಬರುತ್ತದೆ. ಸಹವಾಸದಿಂದ ಕೆಟ್ಟ, ಮತ್ತೊಂದರಿಂದ ಹೀಗಾಯಿತು ಎನ್ನುತ್ತೇವೆ. ಇಡಬಾರದ ವಯಸ್ಸಿನಲ್ಲಿ ಪ್ರತಿಭೆಯನ್ನು ಪ್ರದರ್ಶನಕ್ಕಿಟ್ಟ ನಮ್ಮ ತಪ್ಪು ಎಂದು ನಮಗೇ ಅರ್ಥವೇ ಆಗಿರುವದಿಲ್ಲ.

ಮತ್ತೂ ಒಂದು ವಿಷಯವಿದೆ ಇಲ್ಲಿ. ಕೆಲವು ಬಾರಿ ನಮ್ಮ ಮಕ್ಕಳ ಪ್ರತಿಭೆಯನ್ನು ಕಂಡು ಮತ್ಸರಿಸುವವರು ಇರುತ್ತಾರೆ. ನಮ್ಮ ಮಕ್ಕಳು ಹೀಗಿಲ್ಲವೇ ಎಂದು ಕೊರಗುವವರೂ ಇರುತ್ತಾರೆ. ಕೆಲವು ಬಾರಿ ಅವರ ಕೊರಗು-ಮಾತ್ಸರ್ಯಗಳೇ ದೃಷ್ಟಿಯಾಗಿ ನಮ್ಮ ಮಕ್ಕಳ ಪ್ರತಿಭೆಯನ್ನು ಸುಟ್ಟು ಹಾಕಿಬಿಡುತ್ತದೆ.

ಹಾಗಂತ, ಮಕ್ಕಳ ಪ್ರತಿಭೆಯನ್ನು ಯಾರಿಗೂ ತೋರಲೇಬಾರದು ಅಂತ ಅಲ್ಲ. ಮಗು ಯಾವ ಕ್ಷೇತ್ರದಲ್ಲಿ ಪ್ರತಿಭೆ ತೋರುತ್ತಿದೆಯೋ ಆ ಕ್ಷೇತ್ರದಲ್ಲಿನ ಹಿರಿಯರಿಗೆ ಕರೆದುಕೊಂಡು ತೋರಿಸಿ. ಅದನ್ನು ಬೆಳೆಸಲು ಅವರಿಂದ ಸಲಹೆಗಳನ್ನು ಪಡೆಯಿರಿ. ಸಾಧ್ಯವಾದರೆ ಅವರಿಂದಲೇ ಮಗುವಿನ ಪ್ರತಿಭೆಯನ್ನು ಮತ್ತಷ್ಟು ಬೆಳೆಸಲು ಸಾಧ್ಯವಾ ಆಲೋಚಿಸಿ. ಅಷ್ಟೇ ಅಲ್ಲ, ಹೃತ್ಪೂರ್ವಕವಾಗಿ ಆಶೀರ್ವದಿಸುವ ಹಿರಿಯರ ಬಳಿ, ಗುರುಗಳ ಬಳಿ ವಿನಯದಿಂದ ವಿನಂತಿಸಿಕೊಂಡು ಅವರ ಆಶೀರ್ವಾದವನ್ನು ಮಗುವಿಗೆ ಕೊಡಿಸಿ. ಅವರ ಹಾರೈಕೆಯ ಬಲದಿಂದ ಮಗು ಮತ್ತಷ್ಟು ಪ್ರತಿಭಾವಂತನಾಗಿ ಬೆಳೆಯುತ್ತಾನೆ.

ಮುಖ್ಯವಾಗಿ ಅರ್ಥಮಾಡಿಕೊಳ್ಳಬೇಕಾದ ಮಾತು. ಹೇಗೆ ನಾವು ಪುಟ್ಟ ವಯಸ್ಸಿನ ಕಂದನಿಗೆ ಮದುವೆ ಮಾಡದೇ ಅವನು ಮದುವೆಯ “ವಯಸ್ಸಿಗೆ” ಬಂದಾಗ ಮದುವೆ ಮಾಡುತ್ತೇವೆಯೋ ಹಾಗೆಯೇ, ಹೇಗೆ, ಹುಟ್ಟಿದ ತಕ್ಷಣ ಅದಕ್ಕೆ ಅನ್ನ ತಿನ್ನಿಸದೇ ಅದಕ್ಕೆ ಜೀರ್ಣ ಮಾಡಿಕೊಳ್ಳುವ ಶಕ್ತಿ ಬಂದ ನಂತರ ಅನ್ನ ತಿನ್ನಿಸುತ್ತೇವೆಯೋ ಹಾಗೆಯೋ ಅವನಿಗೆ ಹೊಗಳಿಕೆಯನ್ನು ಅನುಭವಿಸುವ, ಜೀರ್ಣಮಾಡಿಕೊಳ್ಳುವ ಶಕ್ತಿ ಬಂದಾಗ ಹೊಗಳಿಕೆ ಬರುವಂತೆ ಮಾಡಬೇಕು. ಇಲ್ಲದ್ದಿದ್ದರೆ ಹುಟ್ಟಿದ ಮಗುವಿಗೆ ಖಾರದ ಪದಾರ್ಥ, ಕರಿದ ಪದಾರ್ಥ ತಿನ್ನಿಸಿದರೆ ಆಗುವ ಅನರ್ಥವೇ ಆಗುತ್ತದೆ.

ನಮ್ಮ ಮಗು, ಅದು ನಾವೇ ರಕ್ಷಣೆ ಮಾಡಬೇಕು. ಅದರ ಪ್ರತಿಭೆಯನ್ನು ಚಿವುಟಬಾರದು. ನೀರೆರದು ಗೊಬ್ಬರ ಹಾಕಿ ಹೆಮ್ಮರವನ್ನಾಗಿ ಮಾಡಬೇಕು.

ನಮ್ಮ ಮಾಧ್ವಸಮುದಾಯದ ಮಕ್ಕಳು ಅದ್ವಿತೀಯ ಪ್ರತಿಭಾವಂತರಾಗಲಿ, ಅಂತಹ ಮಕ್ಕಳನ್ನು ಹಡೆದು ಬೆಳೆಸಿದ ಕೀರ್ತಿ ನಿಮ್ಮ ಪಾಲಿಗಿರಲಿ ಎಂಬ ಹಾರೈಕೆಯೊಂದಿಗೆ

– ವಿಷ್ಣುದಾಸ ನಾಗೇಂದ್ರಾಚಾರ್ಯ.

ಇವುಗಳೂ ನಿಮಗಿಷ್ಟವಾಗಬಹುದು

vishwanandini-020

ವಿಶ್ವನಂದಿನಿ ಲೇಖನ ಮಾಲೆ – 020

ಶ್ರೀಕನಕದಾಸರ ಹರಿಭಕ್ತಿಸಾರ ವಿಷ್ಣುದಾಸರ ಸಾರಾಮೃತವ್ಯಾಖ್ಯಾನದೊಂದಿಗೆ ಪದ್ಯ – ೨ ದೇವದೇವ ಜಗದ್ಭರಿತ ವಸು- ದೇವಸುತ ಜಗದೇಕನಾಥ ರ- ಮಾವಿನೋದಿತ ಸಜ್ಜನಾನತ …

Leave a Reply

Your email address will not be published. Required fields are marked *