vishwanandini-011

ವಿಶ್ವನಂದಿನಿ ಲೇಖನ ಮಾಲೆ – 011

ಜೀವನಸುರಭಿ

ನಮ್ಮ ಮಧ್ವಶಾಸ್ತ್ರದಂತಹ ಶಾಸ್ತ್ರ ಮತ್ತೊಂದಿದ್ದರೆ ತೋರಿಸಿ

ದೇವರಲ್ಲಿ ಭಕ್ತಿ ಕೊಡು ಎಂದು ಪ್ರಾರ್ಥನೆ ಮಾಡಬೇಕು, ನಮಗೆ ಗೊತ್ತಿದೆ, ಜ್ಞಾನ ಕೊಡು ಎಂದು ಪ್ರಾರ್ಥನೆ ಮಾಡಬೇಕು ನಮಗೆ ಗೊತ್ತಿದೆ. ವೈರಾಗ್ಯವನ್ನು ಬೇಡಲೇಬೇಕು, ನಮಗೆ ಗೊತ್ತಿದೆ. ಕಷ್ಟಬಂದಾಗ ಭಗವಂತನನ್ನೇ ಬೇಡಬೇಕು, ವಿಧಿಯಿಲ್ಲ. ಕಾಮ್ಯಕರ್ಮವಾದರೂ ನಿಷಿದ್ಧವಲ್ಲ. ಬೇಡಿದರೆ ಅವನನ್ನು ಬೇಡೋಣ, ಆದರೆ, ಏನು ಮಾಡಿದರೂ ಸ್ವಾರ್ಥಕ್ಕೆ ಮಾಡುತ್ತಾನೆ ಎಂದು ಹೀಯಾಳಿಸುವ ಮಂದಿಯನ್ನಲ್ಲ.

ಆದರೆ, ಸ್ವಾಮಿ, ನನ್ನ ಹೆಂಡತಿಯಲ್ಲಿ ನನಗೆ ಸದಾ ಪ್ರೀತಿಯಿರುವಂತೆ ಮಾಡು, ಆ ಪ್ರೀತಿಯನ್ನು ಅಭಿವೃದ್ಧಗೊಳಿಸುವಂತೆ ಮಾಡು ಎಂದು ಪ್ರಾರ್ಥನೆ ಮಾಡಬಹುದೇ ಎಂದರೆ ಮಾಡಬಹುದು ಅಲ್ಲ, ಮಾಡಲೇಬೇಕು ಎನ್ನುತ್ತದೆ ಮಧ್ವಶಾಸ್ತ್ರ. ತಮ್ಮ ವೈರಾಗ್ಯದಿಂದ ಸಂನ್ಯಾಸಿಗಳಿಂದಲೂ ಹೊಗಳಿಸಿಕೊಂಡ ಶ್ರೀ ಯಾದವಾರ್ಯರು, ಸದಾ ನಿವೃತ್ತಕರ್ಮದಲ್ಲಿಯೇ ಆಸಕ್ತರಾದವರು, ವಿರಕ್ತಭೂಷಾಮಣಿ, ಆ ಮಹಾನುಭಾವರೇ ಸ್ವಯಂ ಈ ಪ್ರಾರ್ಥನೆಯನ್ನು ಮಾಡುತ್ತಾರೆ. ಮಾಡಿ ಪರಮಾತ್ಮನನ್ನು ಕೇಳಿಕೊಳ್ಳುತ್ತಾರೆ, “ಯಾವಾಗಲೂ ನನ್ನ ಹೆಂಡತಿಯಲ್ಲಿ ನನ್ನ ತುಂಬುಪ್ರೀತಿಯನ್ನು ಕರುಣಿಸು ಸ್ವಾಮಿ” ಎಂದು.

ದಾರೇಷು ಪುತ್ರೇಷು ಸುಹೃತ್ಸಮಿತ್ರಜನೇಷು ಶಿಷ್ಯೇಷು ಗುರೌ ಪ್ರಿಯೇಷು ।
ಪ್ರೀತಿರ್ಮಮ ಸ್ಯಾತ್ ಸತತಂ ಗರೀಯಸೀ ಪ್ರಿಯೇತರೇ ಪ್ರೀತಿವಿಪರ್ಯಯಃ ಸ್ಯಾತ್ ।।

ಓ ದೇವ, ನನ್ನ ಹೆಂಡತಿಯಲ್ಲಿ, ಮಕ್ಕಳಲ್ಲಿ, ಸಹೃದಯರಲ್ಲಿ, ಗೆಳೆಯರಲ್ಲಿ, ಶಿಷ್ಯರಲ್ಲಿ, ಗುರುಗಳಿಗೆ ಪ್ರಿಯರಾದ ಜನರಲ್ಲಿ ಯಾವಾಗಲೂ ತುಂಬು ಪ್ರೀತಿಯಿರಲಿ. ನಿನ್ನನ್ನು ದ್ವೇಷಮಾಡುವ, ಶಾಸ್ತ್ರವನ್ನು ದೂಷಣೆ ಮಾಡುವ, ಸಮಾಜಕಂಟಕರಾದ ಜನರಲ್ಲಿ ದ್ವೇಷವೂ ಇರಲಿ.

ಅದ್ಬುತವಾದ ಮಾತಿದು. ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ಅನುವ್ಯಾಖ್ಯಾನದಲ್ಲಿ ಹೇಳುತ್ತಾರೆ – ಮನುಷ್ಯನಿಗೆ ಅಪರೋಕ್ಷಜ್ಞಾನವಾಗಬೇಕಾಗದರೆ, ತನಗಿಂತ ಹಿರಿಯರಲ್ಲಿ ಭಕ್ತಿ ಮಾಡಿದಂತೆ ತನ್ನವರಲ್ಲಿ ಪ್ರೇಮವನ್ನೂ ಮಾಡಬೇಕು, ತನಗಿಂತ ಕಿರಿಯರಲ್ಲಿ ಕೃಪೆಯನ್ನೂ ತೋರಬೇಕು ಎಂದು.

ಮತ್ತೂ ಒಂದು ಪ್ರಮೇಯವನ್ನು ಆಚಾರ್ಯರು ತಿಳಿಸುತ್ತಾರೆ, ಮನುಷ್ಯರು (ಸ್ವರೂಪದಲ್ಲಿಯೂ ಸಂನ್ಯಾಸಿಗಳಾದವರನ್ನು ಹೊರತುಪಡಿಸಿ) ಮೋಕ್ಷದಲ್ಲಿಯೂ ಹೆಂಡತಿಯಿಂದ ಒಡಗೂಡಿಯೇ ಇರುತ್ತಾರೆ, ಎಂದು. ಅಂದ ಮೇಲೆ, ನಮ್ಮ ಸಾಧನೆಯೂ ಅವಳೊಟ್ಟಿಗೆ ಆಗಬೇಕು. ನಮ್ಮ ಮೋಕ್ಷವೂ ಅವಳೊಟ್ಟಿಗೆ ಆಗಬೇಕು. ನಮ್ಮ ಸಾಧನೆಗೆ ಸಹಾಯವಾಗಿ ನಿಲ್ಲುವ ಆ ಹೆಂಡತಿಯನ್ನು ಮನಃಪೂರ್ವಕವಾಗಿ ಪ್ರೀತಿಸುವದೂ ಸಹ, ಭಗವತ್ಪೂಜೆಯೇ, ಅದನ್ನು ಪ್ರಾರ್ಥಿಸುವದು, ನಿಷಿದ್ಧವಂತೂ ಸರ್ವಥಾ ಅಲ್ಲ, ಸಕಾಮಕರ್ಮವೂ ಅಲ್ಲ, ಶುದ್ಧವಾದ ನಿವೃತ್ತಕರ್ಮವೇ. ಕಾರಣ, ಹೆಂಡತಿಯಿಲ್ಲದೆ ಗಂಡನಿಗೆ ಸಾಧನೆಯಿಲ್ಲ, ಗಂಡನಿಲ್ಲದೆ ಹೆಂಡತಿಗೆ ಸಾಧನೆಯಿಲ್ಲ.

ನಮ್ಮ ಪರಮಾದ್ಭುತ ಪರಂಪರೆಯಲ್ಲಿ ದಾಂಪತ್ಯವನ್ನು ಅತ್ಯುತ್ಕೃಷ್ಟವಾಗಿ ಪಾಲಿಸಿದ ಮಹಾನುಭಾವರು ಸಾವಿರಾರು. ಇಂದು ನಮ್ಮ ಪರಂಪರೆಯಲ್ಲಿ ಏನೆಲ್ಲ ಮಹಾವಿಭೂತಿಪುರುಷರನ್ನು ಕಾಣುತ್ತೇವಲ್ಲಾ, ಶ್ರೀರಾಘವೇಂದ್ರಸ್ವಾಮಿಗಳು, ಶ್ರೀ ವಾದಿರಾಜರು, ಶ್ರೀ ಚಂದ್ರಿಕಾಚಾರ್ಯರು ಮುಂತಾದವರು, ಅವರೆಲ್ಲರೂ ಈ ರೀತಿಯ ಪರಮಾದ್ಭುತದಾಂಪತ್ಯವನ್ನು ಪಾಲಿಸಿದ ಮಹಾನುಭಾವರ ಮಕ್ಕಳೇ. ಆ ರೀತಿಯ ದಾಂಪತ್ಯವಿದ್ದ ಕಾರಣಕ್ಕೇ ಈ ರೀತಿಯ ಮಹಾನುಭಾವರನ್ನು ಮಕ್ಕಳನ್ನಾಗಿ ಪಡೆದರು.

ಶ್ರೀ ಚಂದ್ರಿಕಾಚಾರ್ಯರ ತಾಯಿಯನ್ನೇ ತೆಗೆದುಕೊಳ್ಳಿ. ಕಲಿಯುಗದ ಸಾವಿತ್ರೀದೇವಿ ಆಕೆ. ಸತ್ಯವಾನ ಸತ್ತಾಗ ಆ ಸಾವಿತ್ರೀದೇವಿ ಯಮಧರ್ಮನನ್ನು ಪ್ರಾರ್ಥಿಸಿ, ತನ್ನ ಪಾತಿವ್ರತ್ಯದ ಪ್ರಭಾವದಿಂದ ಗಂಡನನ್ನು ಮರಳಿ ಪಡೆದರೆ ಈ ಕಲಿಯುಗದ ಸಾವಿತ್ರೀದೇವಿ, ಶ್ರೀ ಬ್ರಹ್ಮಣ್ಯತೀರ್ಥರ ಅನುಗ್ರಹವನ್ನು ಪಡೆದು ಸತ್ತ ಗಂಡನನ್ನೂ ತಿರುಗಿಪಡೆದರು. ನಾವು ಇದು ಬ್ರಹ್ಮಣ್ಯತೀರ್ಥರ ಮಾಹಾತ್ಮ್ಯ ಎಂದಷ್ಟೇ ಹೇಳಿ ಸುಮ್ಮನಾಗಿಬಿಡುತ್ತೇವೆ. ನಿಜ ಶ್ರೀ ಬ್ರಹ್ಮಣ್ಯತೀರ್ಥರ ಸಾಟಿಯಿಲ್ಲದ ಮಹಾಮಹಿಮೆಯಿದು. ಆದರೆ, ಅವರ ಆ ಭೂರಿ ಅನುಗ್ರಹಕ್ಕೆ ಪಾತ್ರರಾಗಬೇಕಾದರೆ, ಅವರ ಕರುಣಾಕಟಾಕ್ಷವನ್ನು ಪಡೆಯಬೇಕಾದರೆ, ಸತ್ತ ಗಂಡನನ್ನು ಮರಳಿ ಪಡೆಯುವ ಮಾಂಗಲ್ಯಭಾಗ್ಯ ಆ ತಾಯಿಗಿರಬೇಕಲ್ಲವೇ. ಶ್ರೀಮಚ್ಚಂದ್ರಿಕಾಚಾರ್ಯರಂತಹ ಲೋಕೋತ್ತರಪುರುಷರನ್ನು ಮಗನನ್ನಾಗಿ ಪಡೆಯುವಷ್ಟು ಮಹಾಯೋಗ್ಯತೆ ಅವರಲ್ಲಿರಬೇಕಲ್ಲವೇ?

ಶ್ರೀವಾದಿರಾಜರ ತಂದೆತಾಯಿಯರನ್ನು ತೆಗೆದುಕೊಳ್ಳಿ. ಸ್ವಯಂ ಶ್ರೀ ವಾಗೀಶತೀರ್ಥರು ಹೇಳುತ್ತಾರೆ, ನಿಮ್ಮಲ್ಲಿ ಹುಟ್ಟುವ ಮಗನನ್ನು ನನಗೆ ಒಪ್ಪಿಸಬೇಕು ಅಂತ. ಅಂದಮೇಲೆ, ಆ ಗಂಡಹೆಂಡತಿಯರಲ್ಲಿ ಅದೆಷ್ಟು ದೊಡ್ಡ ಯೋಗ್ಯತೆಯಿರಬೇಡ. ಅವರ ಪರಿಶುದ್ಧ ಪ್ರೇಮದ ಕೂಸಾಗಿ ನಮಗೆ ವಾದಿರಾಜಗುರುಸಾರ್ವಭೌಮರು ದೊರೆತರು, ಮಹಾಜ್ಞಾನಿಗಳಾದ ಶ್ರೀ ಸುರೋತ್ತಮತೀರ್ಥಶ್ರೀಪಾದಂಗಳವರು ದೊರೆತರು.

ನಮ್ಮ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರ ತಂದೆತಾಯಿಯರ ವಿಷಯಕ್ಕೆ ಬನ್ನಿ. ಲೋಕೋತ್ತರವ್ಯಕ್ತಿತ್ವದ ದಂಪತಿಗಳವರು. ಪರಸ್ಪರಪ್ರೇಮದ ಸಾಕಾರಮೂರ್ತಿಗಳು. ಒಂದು ಮಗುವಿಗಾಗಿ ಹನ್ನೆರಡು ವರ್ಷ ಪಾಜಕದಿಂದ ಪ್ರತೀನೀತ್ಯ ಇಪ್ಪತ್ತು ಮೈಲಿ ನಡೆದು ಉಡುಪಿಯ ಅನಂತಾಸನನ ಸೇವೆ ಮಾಡೋಣ ಎಂದು ಶ್ರೀ ಮಧ್ಯಗೇಹಾರ್ಯರು ನಿರ್ಧಾರ ಮಾಡಿದರೆ ಅವರಿಗೆ ಹೆಗಲಾಗಿ ನಿಲ್ಲುತ್ತಾರೆ ಆ ತಾಯಿ. ಅವರ ಆ ತಪಸ್ಸನ್ನು ನಾವು ಊಹೆ ಸಹಿತ ಮಾಡಲು ಸಾಧ್ಯವಿಲ್ಲ. ಮಧ್ಯದಲ್ಲಿ ಎರಡು ಮಕ್ಕಳು ಹುಟ್ಟಿ ಸಾಯುತ್ತಾರೆ, ಆ ಮೇಲೆ ಒಬ್ಬ ಶ್ರೇಷ್ಠ ಮಗಳು ಹುಟ್ಟಿ ಬರುತ್ತಾಳೆ. ಅಷ್ಟಾದರೂ ನನಗೆ ವೇದಾಂತಶಾಸ್ತ್ರದ ಉಪದೇಶ ಮಾಡುವ ಮಗ ಬೇಕೇ ಬೇಕು ಎಂದು ಆ ದಂಪತಿಗಳು ತಪಸ್ಸು ಮಾಡಿ, ಫಲವನ್ನು ಪಡೆದು ನಮಗೆ ನೀಡಿದ್ದಾರೆ. ಶ್ರೀಮದಾಚಾರ್ಯರಂತಹ ಜೀವೋತ್ತಮ ಚೇತನ ಅವರಲ್ಲಿ ಅವತರಿಸಿದರು ಎಂದರೆ ಆವರಿಬ್ಬರ ತಪಸ್ಸು ಎಷ್ಟು ಹಿರಿದಾಗಿರಬೇಡ.

ಆ ದಂಪತಿಗಳಲ್ಲಿದ್ದ ಬಾಂಧವ್ಯದ ಬಗ್ಗೆ ನಮ್ಮ ನಾರಾಯಣಪಂಡಿತಾಚಾರ್ಯರು ಪರಮಾದ್ಭುತವಾಗಿ ಮಾತನಾಡಿದ್ದಾರೆ. ಎರಡನೆಯ ಸರ್ಗದ ಉಪನ್ಯಾಸದಲ್ಲಿ ಅದನ್ನು ವಿವರಿಸಿದ್ದೇನೆ. ಒಬ್ಬ ಮಾಧ್ವಗಂಡಸು ಒಬ್ಬ ಮಾಧ್ವ ಹೆಂಗಸು ಹೇಗಿರಬೇಕು ಎಂದು ತಿಳಿಯುವ ಅಪೇಕ್ಷೆ ನಿಮಗಿದ್ದರೆ, ಒಬ್ಬ ಮಾಧ್ವ ದಂಪತಿಗಳ ದಾಂಪತ್ಯ ಹೇಗಿರಬೇಕು ಎಂದು ತಿಳಿಯುವ ಅಪೇಕ್ಷೆ ನಿಮಗಿದ್ದರೆ, ಲೋಕೋತ್ತರವ್ಯಕ್ತಿತ್ವದ ಮಕ್ಕಳನ್ನು ಪಡೆಯುವ ಅಪೇಕ್ಷೆ ನಿಮಗಿದ್ದರೆ ಆ ಭಾಗದ ಉಪನ್ಯಾಸವನ್ನೋಮ್ಮೆ ಕೇಳಿ. (www.vishwanandini.com ನಲ್ಲಿ ಉಚಿತವಾಗಿ ಸಿಗುತ್ತದೆ.) ದಿವ್ಯದಾಂಪತ್ಯದ ಕಥೆಯದು.

ನಮ್ಮಲ್ಲಿ ಹೆಂಡತಿಯನ್ನು ನಿಕೃಷ್ಟವಾಗಿ ಕಾಣುವ ಮಂದಿಯೇ ಬಹಳ. ಅಡಿಗೆಗಾಗಿ, ಮಕ್ಕಳಿಗಾಗಿ, ಸುಖಕ್ಕಾಗಿ ಉಪಯೋಗ ಬೀಳುವ ‘ವಸ್ತು’ ಎಂದು ನೋಡುವ ಮೂರ್ಖರೇ ಬಹಳ. ಹೆಂಡತಿ ನಮ್ಮ ಗೆಳತಿ. ಜೀವದ ಗೆಳತಿ. ಕ್ಲೇಶವಾದ ಸಾಧನೆಯ ಮಾರ್ಗದಲ್ಲಿ ಜೊತೆಯಾಗಿ ನಡೆಯುವ ಜೊತೆಗಾರ್ತಿ. ನಮ್ಮ ಸಾಧನೆಯ ಭಾರವನ್ನು ಹಗುರಾಗಿಸುವ ಆಪ್ತೆ.

ಬರಿಯ ಪಾರಮಾರ್ಥಿಕ ದೃಷ್ಟಿಯಿಂದಷ್ಟೇ ಅಲ್ಲ, ಲೌಕಿಕ ದೃಷ್ಟಿಯಿಂದಲೂ ಹೆಂಡತಿ ನಮ್ಮ ಗೌರವವನ್ನು ಹೆಚ್ಚಿಸುವ ಸಂಪತ್ತು. ಅವಳಿದ್ದರೆ ಲೋಕ ನಮ್ಮನ್ನು ನೋಡುವ ದೃಷ್ಟಿಯೇ ಬೇರೆ.

ನಮ್ಮ ಪರಮಪೂಜ್ಯ ಮಾಹುಲೀ ಆಚಾರ್ಯರು (ಶ್ರೀ ಮಾಹುಲೀ ವಿದ್ಯಾಸಿಂಹಾಚಾರ್ಯರು) ಮದುವೆಯ ಕುರಿತು ಹೇಳಿದ ಮಾತು ಇವತ್ತಿಗೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಕುಳಿತಿದೆ. ಆಚಾರ್ಯರು ಒಮ್ಮೆ ಮುಂಬೈನ ಲೋಕಲ್ ಟ್ರೇನನಲ್ಲಿ ಬರುವಾಗ ಅವರ ಪಕ್ಕದಲ್ಲಿ ಕುಳಿತ ಒಬ್ಬ ವ್ಯಕ್ತಿ ಆಚಾರ್ಯರನ್ನು ಲೋಕಾಭಿರಾಮವಾಗಿ ಮಾತನಾಡಿಸಿದನಂತೆ, ಬ್ರಾಹ್ಮಣರು, ಬ್ರಾಹ್ಮಣರ ಕಾರ್ಯ ಎಂದರೆ ಸ್ವಲ್ಪ ತಿರಸ್ಕಾರವಿದ್ದ ಮನುಷ್ಯ,
ಆಚಾರ್ಯರ, ಮತ್ತು ಆಚಾರ್ಯರ ಕಾರ್ಯಗಳ ಕುರಿತು ತಿಳಿದ ಬಳಿಕ ಒಂದು ಪ್ರಶ್ನೆ ಕೇಳಿದನಂತೆ, ನಿಮಗೆ ಮದುವೆಯಾಗಿದೆಯಾ ಎಂದು. ಆಚಾರ್ಯರು ಹೌದು, ಎಂದು ಉತ್ತರಿಸಿದರೆ ಆತನ ಮಾತಿನ ಚರ್ಯೆಯೇ ಬದಲಾಯಿತಂತೆ. ಮೊದಲಿದ್ದ ತಿರಸ್ಕಾರ ಹೋಗಿ ಗೌರವದಿಂದ ಮಾತನಾಡಿದಂತೆ.

ಆಚಾರ್ಯರು ಈ ಘಟನೆಯನ್ನು ವಿವರಿಸಿ ನಮಗೆ ಹೇಳಿದ್ದರು. ಜನರಿಗೆ ಮದುವೆಯಾದ ವ್ಯಕ್ತಿಯ ಮೇಲೆ ಬರುವಷ್ಟು ಗೌರವ ವಿಶ್ವಾಸಗಳು, ಮದುವೆಯಾಗದೇ ಇರುವವರ ಮೇಲೆ ಬರುವದಿಲ್ಲ. ಮದುವೆ ಮನುಷ್ಯನಿಗೆ ಗೌರವ ವಿಶ್ವಾಸಗಳನ್ನು ತಂದು ಕೊಡುತ್ತದೆ. ಮದುವೆಯಾದ ವ್ಯಕ್ತಿಯನ್ನು ನಂಬುತ್ತದೆ ಸಮಾಜ. ಮದುವೆಯಾಗದೇ ಇದ್ದರೆ ಗುಂಡುಗೋವಿ, ಹಿಂದಿಲ್ಲ ಮುಂದಿಲ್ಲ ಎನ್ನುವ ಸಮಾಜ, ಮದುವೆಯಾದರೆ ಒಂದು ವಿಶಿಷ್ಟ ವಿಶ್ವಾಸವನ್ನು ತೋರುತ್ತದೆ.

ನೀವು ಒಬ್ಬರೇ ಎಲ್ಲಿಯಾದರೂ ಹೋಗಿ, ನಿಮಗೆ ಸಿಗುವ ಗೌರವವನ್ನು ನೋಡಿ. ನಿಮ್ಮ ಹೆಂಡತಿಯ ಜೊತೆ ಹೋಗಿ. ಸಿಗುವ ಗೌರವ ನೋಡಿ. ಹೆಂಡತಿ ನಮ್ಮ ಸಂಪತ್ತು. ನಮ್ಮ ಗೌರವ. ಗಂಡಸಿಗೆ ಈ ಮರ್ಯಾದೆ ವಿಶ್ವಾಸಗಳು ನಮಗೆ ದೊರೆಯುವದು ಹೆಂಡತಿಯಿಂದ.

ಹೀಗೆ, ಲೌಕಿಕಜೀವನಕ್ಕೂ, ಪಾರಮಾರ್ಥಿಕಕ್ಕೂ ಹೆಗೆಲೆಣೆಯಾಗಿ ನಿಂತು ನಮ್ಮನ್ನು ಪ್ರೀತಿಸಬಲ್ಲಂತಹ ಹೆಂಡತಿಯನ್ನು ಪಡೆಯುವದೂ ಸಹ ಪೂರ್ವಜನ್ಮದ ಸುಕೃತವೇ. ಈಗ ನಾವು ನಮ್ಮ ಹೆಂಡತಿಯನ್ನು ಹೇಗೆ ನೋಡಿಕೊಳ್ಳುತ್ತೇವೆಯೋ, ಹಾಗೆ ಮುಂದಿನ ಜನ್ಮದಲ್ಲಿ ನಮ್ಮ ದಾಂಪತ್ಯವಿರುತ್ತದೆ. ಹಿಂದಿನದರಂತೆ ಈಗ ಇದೆ.

ನಾವು ಗೃಹಸ್ಥರಾಗಿ ಸಾಧನೆ ಮಾಡಬೇಕೆಂದರೆ ಹೆಂಡತಿಯ ಸಹಕಾರವಿಲ್ಲದೆ ಸಾಧ್ಯವೇ ಇಲ್ಲ. ಅವಳು ನಮ್ಮೊಟ್ಟಿಗೆ ಹೆಜ್ಜೆ ಹಾಕಿದರೆ ಮಾತ್ರ ನಾವು ಮುನ್ನಡೆಯಲು ಸಾಧ್ಯ.

ಇಂಥ ಸಾಧ್ವಿಯಾದ, ಸಾಧಕಿಯಾದ ಹೆಂಡತಿ ದೊರೆಯುವದು ಹೇಗೆ?

ಮಧ್ವಶಾಸ್ತ್ರ ಉತ್ತರವನ್ನು ನೀಡುತ್ತದೆ –

ಮೊದಲನೆಯದು ನಾವು ಅಂತಹ ಸಾಧ್ವಿಯನ್ನು ಪಡೆಯುವ ಯೋಗ್ಯತೆಯುಳ್ಳವರಾಗಿರಬೇಕು.

ಎರಡನೆಯದು ಅಂತಹ ಸದ್ಬುದ್ಧಿಯ ಹೆಣ್ಣನ್ನೇ ಹುಡುಕಿ ಮದುವೆಯಾಗಬೇಕು. ಅದಕ್ಕಾಗಿ ಮಹಾಪ್ರಯತ್ನವನ್ನೇ ಮಾಡಬೇಕು. ರೂಪವನ್ನು ನೋಡಿ, ಅಥವಾ ಕೀಳು ವರದಕ್ಷಿಣೆಯ ಆಸೆಗೆ ಅಥವಾ ಎಲ್ಲರೂ ಮದುವೆಯಾಗ್ತಾರೆ ನಾನೂ ಅಗಬೇಕು ಎನ್ನುವ ಪರಮದಡ್ಡತನದ ಕಾರಣಕ್ಕಷ್ಟೇ ಮದುವೆಯಾದರೆ ಆ ರೀತಿಯ ಹೆಂಡತಿ ಸಿಗುವದಾದರೂ ಹೇಗೆ.

ಮೂರನೆಯದಾಗಿ, ಲಕ್ಷ್ಮೀಶ-ಭಾರತೀಶ-ಪಾರ್ವತೀಶರ ಮತ್ತು ಗುರುಗಳ ಅಪಾರ ಅನುಗ್ರಹ ನಮ್ಮ ಮೇಲಿರಬೇಕು.

ಅದನ್ನೇ ಶ್ರೀ ಯಾದವಾರ್ಯರು ಪ್ರಾರ್ಥನೆ ಮಾಡಿದ್ದು – ಸ್ವಾಮಿ ನನ್ನ ಹೆಂಡತಿಯಲ್ಲಿ ನನಗೆ ಗರೀಯಸೀ ಪ್ರೀತಿಯನ್ನು (ತುಂಬುಪ್ರೇಮವನ್ನು) ಕರುಣಿಸು. ಅದ್ಭುತವಾದ ಮಾತು. ಮೇಲಿನ ಮೂರನ್ನೂ ಕೂಡಿಸಿ ಹೇಳಿದ ಮಾತು. ಶ್ರೀ ಯಾದವಾರ್ಯರ ವಚನಗಳು ಅಂದರೇ ಹಾಗೆ, ಹತ್ತಾರು ರತ್ನದಂತಹ ವಿಷಯಗಳನ್ನು ಒಡಲಲ್ಲಿ ಹೊತ್ತು ಹೊಳೆಯುವ ರತ್ನಗರ್ಭಸಾಲಿಗ್ರಾಮಗಳು.

ನೋಡಿ, ಹಡೆದ ಮನೆಯನ್ನು ಬಿಟ್ಟು, ಒಡ ಹುಟ್ಟಿದವರನ್ನು ಬಿಟ್ಟು ನಮ್ಮೊಡನೆ ನಡೆದು ಬಂದುಬಿಡುವ – ಪರಮಾತ್ಮನ ಪ್ರೀತಿಯ ಸೃಷ್ಟಿ – ಆ ಹೆಣ್ಣು ನಮ್ಮಿಂದ ಅಪೇಕ್ಷಿಸುವದು ಒಂದನ್ನೇ, ಭರಪೂರ ಪ್ರೀತಿಯನ್ನೇ. ಆಸ್ತಿಯನ್ನು ನೋಡಿ, ರೂಪವನ್ನು ನೋಡಿ ಅಥವಾ ಅಂತಸ್ತನ್ನು ನೋಡಿ ಲೆಕ್ಕಾಚಾರ ಹಾಕಿ ಪ್ರೀತಿಸುವ ಮದುವೆಯಾಗುವ ಹೆಣ್ಣಿನ ಬಗ್ಗೆ ನಾನು ಸರ್ವಥಾ ಮಾತನಾಡುತ್ತಿಲ್ಲ. ಗಂಡನಿಂದ ಕೇವಲ ಪ್ರೀತಿಯನ್ನು ಅಪೇಕ್ಷಿಸಿ, ಅವನ ಸಾಧನೆಗೆ ಹೆಗಲಾಗಿ ನಾನೂ ದೇವರನ್ನು ಕಾಣಬೇಕು, ಅದಕ್ಕಾಗಿ ಪ್ರಯತ್ನ ಪಡಬೇಕು ಎನ್ನುವ ಸಾತ್ವಿಕ ಹೆಣ್ಣಿನ ಬಗ್ಗೆ ಮಾತನಾಡುತ್ತಿದ್ದೇನೆ.

ಶ್ರೀಮಧ್ಯಗೇಹಾರ್ಯರನ್ನು ಮದುವೆಯಾದ ಆ ಮಹಾತಾಯಿ, ಸಂಪತ್ತನ್ನು ನೋಡಿ ಮದುವೆಯಾಗುವದಿದ್ದರೆ ಮಧ್ಯಗೇಹಾರ್ಯರನ್ನು ಮದುವೆಯೇ ಆಗುತ್ತಿರಲಿಲ್ಲ. ಸಂಪತ್ತನ್ನೇ ನೋಡಿ ಮದುವೆಯಾಗುವದಿದ್ದರೆ, ಮತ್ಸ್ಯಯಂತ್ರವನ್ನು ಭೇದಿಸಿದ ಬ್ರಾಹ್ಮಣನ ವೇಷದಲ್ಲಿದ್ದ ಅರ್ಜುನನ ಕೊರಳಿಗೆ ಮಾಲೆಯನ್ನು ಹಾಕುತ್ತಿರಲಿಲ್ಲ ದ್ರೌಪದಿ. ರೂಪವನ್ನೇ ನೋಡಿ ಮದುವೆಯಾಗುವದಿದ್ದರೆ, ದೇವಹೂತಿ ಜಟೆಗಟ್ಟಿದ ಕರ್ದಮರನ್ನು ಮದುವೆಯಾಗುತ್ತಿರಲಿಲ್ಲ, ಸುಕನ್ಯೆ ಕುರುಡ ಚ್ಯವನರನ್ನು ಮದುವೆಯಾಗುತ್ತಿರಲಿಲ್ಲ.

ಈ ಎಲ್ಲರ ದಾಂಪತ್ಯವೂ ಅನುಕರಣೀಯವಾಯಿತು. ಯಾಕಾಗಿ, ಅಷ್ಟು ಪ್ರೇಮ ಅವರಿಬ್ಬರಲ್ಲಿ ಇರುತ್ತಿತ್ತು. ಈ ವ್ಯಕ್ತಿ ಭರಪೂರ ಪ್ರೇಮವನ್ನು ಹರಿಸುವ ಚಿಲುಮೆ ಎಂದು ಮನವರಿಕೆಯಾದರೆ, ಹೆಣ್ಣು ಅವನಿಗಾಗಿ ತಪಸ್ಸು ಮಾಡಿ ಮದುವೆಯಾಗುತ್ತಾಳೆ. ಹಿಮವಂತನ ಮಗಳು ಉಮೆಗೆ ಎಲ್ಲರೂ ಬುದ್ದಿ ಹೇಳುತ್ತಾರೆ, ಕಾಮವನ್ನು ಸುಟ್ಟುಹಾಕಿದ, ಮೈಗೆಲ್ಲ ಭಸ್ಮ ಬಳಿದುಕೊಂಡ, ಹೆಣಗಳ ಚಿತೆಯ ಮೇಲೆ ಕೂಡುವ, ಯಾವಾಗಲೂ ಧ್ಯಾನ ಮಾಡುವ ಶಿವನನ್ನು ಯಾಕೆ ಮದುವೆಯಾಗುತ್ತೀ, ಬೇಡ ಎಂದು. ಅದರೆ ಅವಳು ಕೇಳುವದಲಿಲ್ಲ. ಅನೇಕ ವರ್ಷಗಳ ವರೆಗೆ ಕಠಿಣ ತಪಸ್ಸು ಮಾಡಿ ಶಿವನ ಮನದನ್ನೆಯಾಗುತ್ತಾಳೆ, ಇಡಿಯ ಜಗತ್ತಿಗೆ ದಾಂಪತ್ಯದ ಸುಖವನ್ನು ಕರುಣಿಸುವ ಶಿವಾನಿಯಾಗುತ್ತಾಳೆ. ಯಾಕೆ, ಶಿವೆಗೆ ಗೊತ್ತಿತ್ತು, ಶಿವನಲ್ಲಿ ಬತ್ತದ ಪ್ರೇಮದ ಚಿಲುಮೆಯಿದೆ ಎಂದು.

ಮರ ರೆಂಬೆ ಕೊಂಬೆಗಳಿಂದ ಸಮೃದ್ಧವಾಗಿ ಬೆಳೆದು ನಿಂತಿದ್ದರೆ ಹಕ್ಕಿಗಳು ತಾವಾಗಿ ಬಂದು ವಾಸ ಮಾಡುತ್ತವೆ. ಹಾಗೆ, ಹೆಂಡತಿಯನ್ನು ತುಂಬುಮನಸ್ಸಿನಿಂದ ಪ್ರೀತಿಸುವ ಹೃದಯ ನಮ್ಮಲ್ಲಿದ್ದರೆ ಸಾಧಕಿಯಾದ ಸಾಧ್ವಿಯಾದ ಹೆಂಡತಿ ತಾನಾಗಿ ದೊರೆಯುತ್ತಾಳೆ. ಅದನ್ನೇ ಯಾದವಾರ್ಯರು ಪ್ರಾರ್ಥಿಸಿದರು, ದಾರೇಷು ಗರೀಯಸೀ ಪ್ರೀತಿರ್ಮಮ ಸ್ಯಾತ್ ಎಂದು. ಸ್ವಾಮಿ, ನನ್ನ ಹೆಂಡತಿಯನ್ನು ನಾನು ಪರಿಪೂರ್ಣವಾಗಿ ಪ್ರೀತಿಸುವಂತೆ ಮಾಡು ಎಂದು.

ಆ ಪ್ರೀತಿ ನಮ್ಮಲ್ಲಿದ್ದರೆ, ಆ ಪ್ರೀತಿಗೆ ಯೋಗ್ಯಳಾದ ಹೆಣ್ಣನ್ನು ನಾವು ಹುಡುಕುತ್ತೇವೆ. ಸಿಕ್ಕ ಹೆಣ್ಣಿಗೆ ತಾಳಿ ಕಟ್ಟಲು ಮುಂದಾಗುವದಿಲ್ಲ. ನನ್ನ ಸಾಧನೆಗೆ ಅನುಕೂಲಳಾದ ಹೆಣ್ಣು ಬೇಕು ಎಂದು ಪ್ರಯತ್ನ ಪಡುತ್ತೇವೆ. ಕರ್ದಮರು ಪರಮಾತ್ಮನನ್ನು ಮಗನನ್ನಾಗಿ ಪಡೆಯುವ ಸಂಕಲ್ಪ ಮಾಡುತ್ತಾರೆ. ಅದಕ್ಕಾಗಿ ಅವರು ಹತ್ತು ಸಾವಿರ ವರ್ಷಗಳ ಕಾಲ ತಪಸ್ಸು ಮಾಡುತ್ತಾರೆ. ದೇವರೊಲಿದು ಬಂದರೆ, ಅವರು ಬೇಡುವದೇನು ಗೊತ್ತೆ, ಸ್ವಾಮಿ, “ನನ್ನ ಸಾಧನೆಗನುಕೂಲಳಾದ ಪತ್ನಿಯನ್ನು ಕರುಣಿಸು” ಹೆಂಡತಿಗಾಗಿ ತಪಸ್ಸು ಮಾಡಿದವರ ಮತ ನಮ್ಮದು! ಕರ್ದಮರ ಯೋಗಸಾಮರ್ಥ್ಯಕ್ಕೆ ಒಂದು ಹೆಣ್ಣನ್ನು ಮದುವೆಯಾಗುವದು ಕಷ್ಟವಾಗಿತ್ತೆ, ಖಂಡಿತ ಅಲ್ಲ. ಕಪಿಲರೂಪಿ ಪರಮಾತ್ಮನನ್ನು ಗರ್ಭದಲ್ಲಿ ಹೊತ್ತು ನೀಡುವ ಸಾಧ್ವಿ ಅವಳಿಗೆ ಬೇಕಾಗಿದ್ದಳು ಅದಕ್ಕಾಗಿ ತಪಸ್ಸನ್ನೇಮಾಡಿದರು.

ಇನ್ನು ನಮ್ಮಲ್ಲಿ ಪ್ರೀತಿ ಬರಬೇಕಾದರೆ, ಬಂದ ಪ್ರೀತಿ ಶಾಶ್ವತವಾಗಿ ಉಳಿಯಬೇಕಾದರೆ, ಸಾಧ್ವಿ ಹೆಣ್ಣು ದೊರೆಯಬೇಕಾದರೆ, ದೊರೆತ ಹೆಣ್ಣಿನೊಡಗಿನ ದಾಂಪತ್ಯ ವಿಷ್ಣುಪ್ರೀತಿಕರವಾಗಿ ನಡೆಯಬೇಕಾದರೆ ಆ ಪ್ರೀತಿಯ ಒರತೆ ಎಂದಿಗೂ ನಿಲ್ಲಬಾರದು. ದಾಂಪತ್ಯದಲ್ಲಿ ಇಬ್ಬರೂ ತಪ್ಪು ಮಾಡುವದು ಸಹಜ. ಆದರೂ ಒಬ್ಬರನ್ನೊಬ್ಬರು ಒಪ್ಪಿಕೊಂಡು, ಒಬ್ಬರನ್ನೋಬ್ಬರು ತಿದ್ದಿಕೊಂಡು, ಒಬ್ಬರೊಬ್ಬರಿಗೆ ಹೆಗಲಾಗಿ ನಿಂತರೇ ದಾಂಪತ್ಯ ಮುಂದುವರೆಯುವದು. ಅದೆಲ್ಲದಕ್ಕೂ ಹರಿ-ಗುರುಗಳ ಕಾರುಣ್ಯವೇ ಬೇಕು. ಅದ ಬೇಡಿದರು, ಆ ಹರಿಗುರುಗಳನ್ನೇ ಬೇಡಿದರು ಶ್ರೀ ಯಾದವಾರ್ಯರು ತುಂಬು ಪ್ರೀತಿಯನ್ನು ನೀಡು ಸ್ವಾಮಿ ಎಂದು.

ಮತ್ತು ನಮ್ಮ ಮಧ್ವಶಾಸ್ತ್ರ ಎಂದಿಗೂ ಕೃತಘ್ನತೆಯನ್ನು ಒಪ್ಪುವದಿಲ್ಲ. ಬಲವಾಗಿ ನಿಂದಿಸುತ್ತದೆ. ಇಂಥ ಹೆಂಡತಿ, ನಮ್ಮ ಸಾಧನೆಯ ಸನ್ಮಾರ್ಗದಲ್ಲಿ ಜೊತೆಗಾರ್ತಿಯಾದ ಹೆಂಡತಿಯನ್ನು ಅಭಿನಂದಿಸುವದೂ ಸಹ ಸತ್ಕರ್ಮವೇ. ಅದಕ್ಕಾಗಿ, ಹಾಡಿದರೆ ಎನ್ನೊಡೆಯನ ಹಾಡುವೆ ಎಂದು ಹರಿ-ಗುರು-ದೇವತೆಗಳನ್ನು ಬಿಟ್ಟು ಬೇರೊಬ್ಬ ನರರನ್ನು ಸ್ತುತಿಸದ ನಮ್ಮ ಶ್ರೀ ಪುರಂದರದಾಸರು, ಪರಮಾತ್ಮನನ್ನು ಸ್ತುತಿಸುವ ನಾಲಿಗೆಯಲ್ಲಿ ಆ ಸಾಧ್ವಿ ಹೆಂಡತಿಯನ್ನು ಹೊಗಳುತ್ತಾರೆ, ಆ ಮೂಲಕ ನಾವು ಅವಳ ಸೇವೆಯನ್ನು ಪ್ರೀತಿಯಿಂದ ಸ್ಮರಿಸುವದೂ ಪರಮಾತ್ಮನಿಗೆ ಪ್ರೀತಿಕರ ಎನ್ನುವದನ್ನು ತೋರಿಸಿಕೊಡುತ್ತಾರೆ.

ಆ ಹೆಂಡತಿ ಸಂತತಿ ಸಾವಿರವಾಗಲಿ, ದಂಡಿಗೆ ಬೆತ್ತ ಹಿಡಿಸಿದಳಯ್ಯ,
ಆ ಪತ್ನೀಕುಲ ಸಾವಿರವಾಗಲಿ ಗೋಪಾಳಬುಟ್ಟಿ ಹಿಡಿಸಿದಳಯ್ಯ ಎನ್ನುತ್ತಾರೆ.

ಅಷ್ಟೇ ಅಲ್ಲ, ಹೆಂಡತಿಯ ಪ್ರೀತಿಯಲ್ಲಿ ಮೈಮರೆತು ದೇವರನ್ನು ಮರೆಯುವ ಹಾಗಿಲ್ಲ. ಪರಮಾತ್ಮನೇ ಎಲ್ಲರಲ್ಲಿ ನಿಂತು ಈ ಕಾರ್ಯ ಮಾಡಿಸಿದವನು ಎನ್ನುವ ಮಧ್ವಶಾಸ್ತ್ರದ ಅದ್ಭುತ ಪ್ರಮೇಯವನ್ನೂ ಹೇಳುತ್ತಾರೆ, ಸರಸಿಜಾಕ್ಷ ಪುರಂದರವಿಠಲನು ತುಳಸೀಮಾಲೆ ಹಾಕಿಸಿದನು ಎಂದು. ಪರಮಾತ್ಮನೇ ಎಲ್ಲವನ್ನು ಮಾಡಿಸಿದ್ದು. ಹೆಂಡತಿಯಲ್ಲಿ ನಿಂತು ಪ್ರೀತಿಸುವವನೂ ಅವನೇ, ನಮ್ಮಲ್ಲಿ ನಿಂತು ಅವಳಿಗೆ ಪ್ರೀತಿಯನ್ನು ಹರಿಸುವವನೂ ಅವನೇ.

ಈಗ ಹೇಳಿ, ಯಾವ ಹೆಂಡತಿಯಿಂದ ನಾವು ಸಮಾಜದಲ್ಲಿ ಗೌರವವನನ್ನೂ ಪಡೆಯುತ್ತೇವೆಯೋ, ಸಾಧನೆಯಲ್ಲಿಯೂ ಮುನ್ನಡೆಯುತ್ತೇವೆಯೋ ಅವಳಲ್ಲಿ ಪ್ರೇಮ ಕೊಡು ಎಂದು ಹೇಳಿಕೊಟ್ಟ ಮಧ್ವಶಾಸ್ತ್ರಕ್ಕೆ, ಪರಮಾತ್ಮನನ್ನು ಹೊಗಳುವ ನಾಲಿಗೆಯಿಂದ ನಮ್ಮ ಆ ಪ್ರೇಮದ ಪುತ್ಥಳಿಯನ್ನು ಅಭಿನಂದಿಸಬೇಕು ಎಂದು ಹೇಳಿಕೊಟ್ಟ ಮಧ್ವಶಾಸ್ತ್ರಕ್ಕೆ ಮತ್ತೊಂದು ಶಾಸ್ತ್ರ ಸಾಟಿಯುಂಟೇ ?

ಲೋಕದ ಮಧ್ಯದಲ್ಲಿದ್ದೇ ಸಾಧನೆಯ ಸಕಲ ಮಾರ್ಗವನ್ನೂ ತೋರಿಕೊಟ್ಟ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರಿಗೆ, ಅವರು ಕೊಟ್ಟ ನಿಧಿಯನ್ನು ತೆಗೆದುಕೊಟ್ಟ ಶ್ರೀಮಟ್ಟೀಕಾಕೃತ್ಪಾದರಿಗೆ, ಅವರು ಕೊಟ್ಟ ಜ್ಞಾನವನ್ನು ಬಿಡಿಸಿದ ಬಾಳೆಹಣ್ಣಿನಂತೆ ನಮಗೆ ನೀಡಿದ ಶ್ರೀ ಪುರಂದರದಾಸರಿಗೆ, ಶ್ರೀ ಯಾದವಾರ್ಯರಿಗೆ, ಈ ರೀತಿಯ ದಾಂಪತ್ಯವನ್ನು ಪರಿಪಾಲಿಸಿದ ಸಾವಿರಾರು ಮಾಧ್ವಮಹನೀಯರಿಗೆ ಸಾಷ್ಟಾಂಗ ನಮಸ್ಕಾರಗಳನ್ನು ಸಲ್ಲಿಸಿ ಪ್ರಾರ್ಥಿಸಿ ಬೇಡಿಕೊಳ್ಳೋಣ, ಸಾಧಕಿಯಾದ, ಸಾಧ್ವಿಯಾದ ಹೆಣ್ಣು ನನಗೆ ಹೆಂಡತಿಯಾಗಿ ಬರಲಿ, ಅವಳನ್ನು ನಾನು ತುಂಬುಪ್ರೀತಿಯಿಂದ ಕಾಣುವಂತಾಗಲಿ, ನಮ್ಮ ದಾಂಪತ್ಯ ವಿಷ್ಣುಪ್ರೀತಿಕರವಾಗಿರಲಿ ಎಂದು.

ನಿಮ್ಮೆಲ್ಲರ ದಾಂಪತ್ಯ ಸುಖಮಯವಾಗಿರಲಿ ಎಂಬ ಹಾರೈಕೆಯೊಂದಿಗೆ

– ವಿಷ್ಣುದಾಸ ನಾಗೇಂದ್ರಾಚಾರ್ಯ.

ಇವುಗಳೂ ನಿಮಗಿಷ್ಟವಾಗಬಹುದು

vishwanandini-020

ವಿಶ್ವನಂದಿನಿ ಲೇಖನ ಮಾಲೆ – 020

ಶ್ರೀಕನಕದಾಸರ ಹರಿಭಕ್ತಿಸಾರ ವಿಷ್ಣುದಾಸರ ಸಾರಾಮೃತವ್ಯಾಖ್ಯಾನದೊಂದಿಗೆ ಪದ್ಯ – ೨ ದೇವದೇವ ಜಗದ್ಭರಿತ ವಸು- ದೇವಸುತ ಜಗದೇಕನಾಥ ರ- ಮಾವಿನೋದಿತ ಸಜ್ಜನಾನತ …

Leave a Reply

Your email address will not be published. Required fields are marked *