vishwanandini-010

ವಿಶ್ವನಂದಿನಿ ಲೇಖನ ಮಾಲೆ – 010

ತೀರ್ಥಯಾತ್ರಾಸುರಭಿ

(ಈ ಸುರಭಿಯಲ್ಲಿ ಎಲ್ಲ ತೀರ್ಥಕ್ಷೇತ್ರಗಳ ಮಾಹಾತ್ಮ್ಯವನ್ನು ಗುರ್ವನುಗ್ರಹದಿಂದ ನನಗೆ ತಿಳಿದಷ್ಟು ನೀಡುತ್ತೇನೆ)

ಶ್ರೀ ನಾಮಗಿರಿ ಕ್ಷೇತ್ರ

ಶ್ರೀಲಕ್ಷ್ಮೀನರಸಿಂಹಮಾಹಾತ್ಮ್ಯಮ್

ನಾಮಗಿರಿ ಅಥವಾ ನಾಮಕಲ್ಲು (ನಾಮಕ್ಕಲ್ ಎಂದು ತಮಿಳಿನಲ್ಲಿ) ಎಂದು ಹೆಸರಾದ ತಮಿಳುನಾಡಿನ ಕ್ಷೇತ್ರ ಪರಮಪವಿತ್ರವಾದ ಶ್ರೀಲಕ್ಷ್ಮೀನರಸಿಂಹಕ್ಷೇತ್ರ. ಈ ಕ್ಷೇತ್ರದ ಕುರಿತು ಉಳಿದೆಲ್ಲ ಮಾಹಿತಿಗಳನ್ನು ನೀಡುವದಕ್ಕಿಂತ ಮೊದಲು ಈ ಕ್ಷೇತ್ರದಲ್ಲಿನ ಶ್ರೀ ನರಸಿಂಹದೇವರ ಜಾಗೃತ ಸನ್ನಿಧಾನದ ಕುರಿತು ಬರೆಯಬೇಕು.

ಈ ಕ್ಷೇತ್ರದಲ್ಲಿ ಮುಖ್ಯಪ್ರಾಣದೇವರ, ಮಹಾಲಕ್ಷ್ಮೀದೇವಿಯ ಮತ್ತು ಶ್ರೀ ನರಸಿಂಹದೇವರ ಮೂರು ದೇವಾಲಯಗಳಿವೆ. ದೇವಸ್ಥಾನವನ್ನು ಪ್ರವೇಶಿಸಿದ ಪ್ರತಿಯೊಬ್ಬ ಭಕ್ತನಿಗೆ ದೇವರ ಸನ್ನಿಧಾನದ ಅನುಭವವಾಗುತ್ತದೆ. ನಾಮಗಿರಿಯಲ್ಲಿರುವ ವಿಗ್ರಹಗಳು ಬರಿಯ ಕಲ್ಲಿನ ವಿಗ್ರಹಗಳಲ್ಲ. ಭಗವಂತನ, ಮಹಾಲಕ್ಷ್ಮೀದೇವಿಯ, ಮುಖ್ಯಪ್ರಾಣದೇವರ ಪರಿಪೂರ್ಣ ಸನ್ನಿಧಾನವನ್ನು ಹೊತ್ತ ಪರಮಪವಿತ್ರ ಶಿಲೆಗಳು. ಅರ್ಚಕರ ಅಪರಿಮಿತ ಅಜ್ಞಾನ, ಯಾತ್ರಿಗಳು ಮಾಡುವ ಹೊಲಸು, ಸಿಬ್ಬಂದಿಯವರು ಮಾಡುವ ಮೈಲಿಗೆ, ಸರಕಾರದವರು ಹೊಲೆಗೆಡಿಸಿಟ್ಟಿರುವ ಸುತ್ತಲಿನ ಪರಿಸರ ಇವೆಲ್ಲದರ ಮಧ್ಯೆಯೂ ‘‘ನಾನು ಯಾವ ಪ್ರಾಕೃತ ಪದಾರ್ಥದ ಸಂಪರ್ಕವಿಲ್ಲದ, ಅದರ ದೋಷಗಳ ಪರಿಣಾಮವನ್ನು ಹೊಂದದ ಅಸಂಗ, ಅಪ್ರಾಕೃತ‘‘ ಎನ್ನುವದನ್ನು ಜ್ಞಾನಿಗಳಿಗೆ ತಿಳಿಸಿ ಹೇಳುತ್ತಿರುವಂತೆ ಶ್ರೀಹರಿ ಇಲ್ಲಿನ ಪ್ರತಿಮೆಗಳಲ್ಲಿ ಸನ್ನಿಹಿತನಾಗಿದ್ದಾನೆ. ಪೂರ್ಣ ಶ್ರದ್ಧೆಯಿಂದ, ನಿರ್ಮಲ ಭಕ್ತಿಯಿಂದ, ಶುದ್ಧ ಜ್ಞಾನದಿಂದ ಸಹಿತರಾಗಿ ಈ ದೇವಾಲಯವನ್ನು ಹೊಕ್ಕರೆ ಪರಮಾತ್ಮನ ಸನ್ನಿಧಾನ ನಮ್ಮ ಅನುಭವಕ್ಕೆ ಬರುವದರಲ್ಲಿ ಯಾವ ಸಂದೇಹವೂ ಇಲ್ಲ. ಒಂದೇ ಮಾತಿನಲ್ಲಿ ಹೇಳುವದಾದರೆ ನಾಮಗಿರಿಯಲ್ಲಿ ಬರಿಯ ದೇವಾಲಯವಿಲ್ಲ, ಇಲ್ಲಿರುವದು ಕೇವಲ ಕಲ್ಲಿನ ವಿಗ್ರಹಗಳಿಲ್ಲ, ಸ್ವಯಂ ಲಕ್ಷ್ಮೀನರಸಿಂಹದೇವರು ಇಲ್ಲಿ ಸಾಕ್ಷಾತ್ತಾಗಿ ಕುಳಿತುಕೊಂಡಿದ್ದಾರೆ. ಅವನ ಬಲಭಾಗದಲ್ಲಿ ಅವನಿಗೆ ಅಭಿಮುಖಳಾಗಿ ಅವನನ್ನು ಪೂಜೆ ಮಾಡುವದಕ್ಕಾಗಿಯೇ ಮಹಾಲಕ್ಷ್ಮೀದೇವಿಯು ಆಸೀನಳಾಗಿದ್ದಾಳೆ. ಎದುರಿಗೆ ಅವನ ಪಾದದಲ್ಲಿಯೇ ನೆಟ್ಟ ದೃಷ್ಟಿಯುಳ್ಳವರಾಗಿ ಶ್ರೀ ಮುಖ್ಯಪ್ರಾಣದೇವರು ನಿಂತಿದ್ದಾರೆ. ಭಗವಂತನ ಸತ್ಯಸನ್ನಿಧಾನದಿಂದ ಪವಿತ್ರವಾಗಿರುವ ಪುಣ್ಯಭೂಮಿ ಈ ನಾಮಗಿರಿಕ್ಷೇತ್ರ.

ಯಾರಿಗೆ ಪ್ರತೀನಿತ್ಯ ದೇವರಪೂಜೆ ಮಾಡಲು ಸಾಧ್ಯವಾಗುತ್ತಿಲ್ಲ, ಯಾರಿಗೆ ಸಾಧನೆಯಲ್ಲಿ ಅಡೆತಡೆಗಳು ಎದುರಾಗುತ್ತಿವೆ, ಯಾರಿಗೆ ಹಣದ ಸಮಸ್ಯೆಯಿದೆ, ಯಾರಿಗೆ ಮೇಲಿನ ಅಧಿಕಾರಿಗಳಿಂದ ಕಿರುಕುಳವಿದೆ ಅಂತಹವರು ಭಕ್ತಿಯಿಂದ ನಾಮಗಿರಿಯ ಯಾತ್ರೆಯನ್ನು ಮಾಡಿಬನ್ನಿ. ಪರಮಾತ್ಮ ನಮ್ಮನ್ನು ಉದ್ಧರಿಸಲೇ ಇಲ್ಲಿ ಲಕ್ಷ್ಮೀಸಮೇತನಾಗಿದ್ದಾನೆ. ಅವನ ಅನುಗ್ರಹ ಪಡೆದರೆ ಸಕಲ ಅಭೀಷ್ಟಗಳೂ ದೊರೆಯುತ್ತವೆ.

ಕ್ಷೇತ್ರದ ಇತಿಹಾಸ

ಅನಂತ ಜೀವರಾಶಿಗಳ ಉದ್ಧೃತಿಯನ್ನೇ ಬಯಸುವ ಕರುಣಾಳುವಾದ ಮಹಾಲಕ್ಷ್ಮೀದೇವಿ ತನ್ನ ಭಕ್ತರ ಉದ್ಧಾರಕ್ಕಾಗಿ ಈ ಕ್ಷೇತ್ರದಲ್ಲಿನ ಕಮಲಾಲಯ ಎಂಬ ಸರೋವರದ ದಡದಲ್ಲಿ ನೆಲೆನಿಂತು, ಜನರ ಕಣ್ಣಿಗೆ ಕಾಣದೇ ತನ್ನ ಕಣ್ಣಿಗೆ ಮಾತ್ರ ಕಾಣಿಸುತ್ತಿದ್ದ ನರಸಿಂಹದೇವರ ನಿರಂತರ ಸೇವೆಯನ್ನು ಮಾಡುತ್ತಿರುತ್ತಾಳೆ. ನಿತ್ಯಮುಕ್ತಳಾದರೂ, ಪರಮಾತ್ಮನ ಪರಿಪೂರ್ಣ ಪ್ರೇಮಕ್ಕೆ ಪಾತ್ರಳಾಗಿದ್ದರೂ, ಭಕ್ತಜನರ ಉದ್ಧಾರಕ್ಕಾಗಿ ತಪಸ್ಸಿನಲ್ಲಿ ನಿರತಳಾಗಿರುತ್ತಾಳೆ.

ಸ್ವಯಂ ಮುಖ್ಯಪ್ರಾಣದೇವರು ಹನುಮಂತರೂಪದಿಂದ ತಪೋನಿರತಳಾದ ತನ್ನ ತಾಯಿಯ ಸೇವೆಯನ್ನು ಭಕ್ತಿಯಿಂದ ಮಾಡುತ್ತಿರುತ್ತಾರೆ. ಜಗತ್ತಿನ ತಂದೆತಾಯಿಗಳನ್ನು ಈ ಸ್ಥಳದಲ್ಲಿಯೇ ಶಾಶ್ವತವಾಗಿ ನೆಲೆಗೊಳಿಸಿ ಈ ಕ್ಷೇತ್ರವನ್ನು ಅನೇಕ ಸಾಧಕರ ಸಾಧನಭೂಮಿಯನ್ನಾಗಿ ಮಾಡಲು ಹನುಮಂತದೇವರು ಅಪೇಕ್ಷೆ ಪಡುತ್ತಾರೆ. ಆದರೆ ಯೋಗಿಗಳ ಕಣ್ಣಿಗೆ ಮಾತ್ರ ಗೋಚರವಾಗುವ ಈ ಲಕ್ಷ್ಮೀ ನಾರಾಯಣರು ಮನುಷ್ಯರ ಸೇವೆಗೆ, ಮನುಷ್ಯರ ದೃಷ್ಟಿಗೆ ನಿಲುಕಬೇಕಾದರೆ ಒಂದು ವಿಗ್ರಹದಲ್ಲಿ ಅವರು ಸನ್ನಿಹಿತರಾಗಬೇಕು. ಒಂದು ಮಾಧ್ಯಮದ ಮುಖಾಂತರವೇ ದೇವತೆಗಳು ಮನುಷ್ಯರ ಮುಖಾಂತರ ಪೂಜಾ ಸೇವಾದಿಗಳನ್ನು ಸ್ವೀಕರಿಸಿ ಅವರಿಗೆ ವರಪ್ರದರಾಗುತ್ತಾರೆ. ಹೀಗಾಗಿ ಭಗವಂತನನ್ನು ಒಂದು ಶಿಲೆಯಲ್ಲಿ ಸನ್ನಿಹಿತನಾಗಿರುವಂತೆ ಪ್ರಾರ್ಥಿಸಬೇಕು. ಆದರೆ ಭಗವಂತ ಕಂಡಕಂಡಲ್ಲಿ ಕಾಣುವ ಅಶುದ್ಧವಾದ ಪದಾರ್ಥಗಳಲ್ಲಿ ತನ್ನ ಸನ್ನಿಧಾನವನ್ನು ಎಂದಿಗೂ ಪ್ರಕಟ ಮಾಡುವದಿಲ್ಲ. ಅದಕ್ಕಾಗಿ ದೇವತೆಗಳ ಸನ್ನಿಧಾನವಿರುವ ಶುದ್ಧವಾದ ಶಿಲೆಯನ್ನೇ ಆರಿಸಿ ತರಬೇಕು. ಮತ್ತು ಲಕ್ಷ್ಮೀದೇವಿಗೆ ಮಾತ್ರ ಗೋಚರನಾಗಿ ಉಳಿದವರಿಗೆ ಅಗೋಚರನಾಗಿರುವ ಭಗವಂತನನ್ನು ಇಲ್ಲಿ ನೆಲೆಗೊಳಿಸಬೇಕಾಗಿದೆ. ಅದಕ್ಕಾಗಿ ಗಂಡಕೀನದಿಯಲ್ಲಿರುವ ಲಕ್ಷ್ಮೀದೇವಿಗೆ ಮಾತ್ರ ಗೋಚರನಾಗುವ (ಅರ್ಥಾತ್ ಆ ನದಿಯಲ್ಲಿರುವ ಕಲ್ಲು ಕಲ್ಲುಗಳಲ್ಲಿ ತನ್ನ ಸನ್ನಿಧಾನವನ್ನು ತುಂಬಿರುವ) ಭಗವಂತನ ಆವಾಸಸ್ಥಾನಗಳಲ್ಲಿ ಒಂದಾಗಿರುವ ಗಂಡಕೀ ನದಿಯ ಶಿಲೆಯನ್ನೇ ಹೊತ್ತು ತರುತ್ತೇನೆ ಎಂದು ಆಲೋಚಿಸಿ ಹನುಮಂತದೇವರು ಗಂಡಕೀನದಿಗೆ ತೆರಳುತ್ತಾರೆ. ಆ ನದಿಯಲ್ಲಿ ಸ್ನಾನ ಮಾಡಿ ನಾಮಗಿರಿ ಕ್ಷೇತ್ರದಲ್ಲಿದ್ದು ಭಗವಂತನ ಸನ್ನಿಧಾನವನ್ನು ಹೊಂದಬಲ್ಲ ಶಿಲೆ ದೊರೆಯಲಿ ಎಂದು ಲಕ್ಷ್ಮೀನರಸಿಂಹದೇವರನ್ನೇ ಪ್ರಾರ್ಥಿಸುತ್ತಾರೆ. ಅದ್ಯಾವ ದೇವತೆ ಅದೆಷ್ಟು ಸಾವಿರ ವರ್ಷಗಳಿಂದ ಬಂಡೆಗಲ್ಲನ ರೂಪದಲ್ಲಿದ್ದು ತನ್ನಲ್ಲಿ ಭಗವಂತನ ಸನ್ನಿಧಾನ ತುಂಬಿರಲಿ ಎಂದು ಪ್ರಾರ್ಥಿಸುತ್ತಿದ್ದನೋ, ಆ ಬಂಡೆಗಲ್ಲಿನ ರೂಪದಲ್ಲಿದ್ದ ದೇವೆತೆ ಹನುಮಂತದೇವರ ದೃಷ್ಟಿಗೆ ಬೀಳುತ್ತಾನೆ.

ಕಾರಣ, ಬೃಹದ್ಭಾಷ್ಯದಲ್ಲಿ ಶ್ರೀಮದಾಚಾರ್ಯರು ಒಂದು ಅಪೂರ್ವವಾದ ಸಂಗತಿಯನ್ನು ತಿಳಿಸುತ್ತಾರೆ

‘‘ಪರ್ವತಾಃ ಸಿಕತಾಶ್ಚೈವ ನದ್ಯಃ ಕೂಪಾಃ ಸರಾಂಸಿ ಚ |
ಹವಿಃ ಕಪಾಲಯೂಪಾದ್ಯಾಃ ದೇವತಾಃ ಏವ ಚ’’

‘‘ಭಾವಿ, ಕೆರೆ, ಸರೋವರ, ಮಣ್ಣು, ಮರಳು, ಕಲ್ಲು, ಬಂಡೆ, ಗುಡ್ಡ, ಬೆಟ್ಟ, ಪರ್ವತ ಈ ಎಲ್ಲವೂ ದೇವತಾಮಯವೇ’’ ಅಂದರೆ ಒಬ್ಬೊಬ್ಬ ದೇವತೆಯೇ ವಿಶೇಷ ಕಾರಣಗಳಿಂದ ಆಯಾಯ ರೂಪದಲ್ಲಿ ಅಭಿವ್ಯಕ್ತನಾಗಿರುತ್ತಾನೆ.

ಹೀಗೆ, ದೇವಸ್ಥಾನ ಮಂಟಪ ಮುಂತಾದ ಯಾವ ಚಿಹ್ನೆಗಳಿಲ್ಲದ ಬರಿಯ ಸಾಮಾನ್ಯ ಬೆಟ್ಟ ಗುಡ್ಡಗಳೇ ಅಷ್ಟೇಕೆ ಮಣ್ಣು ಮರಳಿನ ಕಣಗಳೇ ದೇವತಾಪ್ರತೀಕಗಳಾಗಿರುವಾಗ, ಭಗವಂತನ ವಿಶೇಷ ಸನ್ನಿಧಾನವುಳ್ಳ ವಸ್ತು ನಿಶ್ಚಿತವಾಗಿ ಮತ್ತು ವಿಶೇಷವಾಗಿ ದೇವತಾಮಯವಾಗಿರುತ್ತದೆ.

ಆದ್ದರಿಂದ ಅದ್ಯಾವ ದೇವತೆ ಈ ನಾಮಗಿರಿಯ ಪ್ರದೇಶದಲ್ಲಿದ್ದು ಭಗವಂತನ ಸನ್ನಿಧಾನವನ್ನು ಹೊತ್ತು ಮೆರೆಯಬೇಕು ಎಂಬ ಅಪೇಕ್ಷೆಯಿಂದ ಆ ಗಂಡಕೀ ನದಿಯ ಗರ್ಭದಲ್ಲಿ , ಬಂಡೆಗಲ್ಲಿನ ರೂಪದಲ್ಲಿ ತಪಸ್ಸು ಮಾಡುತ್ತಿದ್ದನೋ, ಆ ದೇವತೆಯ ತಪೋ ಭಕ್ತಿಗಳಿಗೆ ಮೆಚ್ಚಿ ಸರ್ವಜ್ಞರಾದ ಶ್ರೀ ಹನುಮಂತದೇವರು ಆ ಪವಿತ್ರವಾದ, ಗಾತ್ರದಲ್ಲಿ ಒಂದು ಸಣ್ಣ ಬೆಟ್ಟದಷ್ಟಿದ್ದ ಸಾಲಿಗ್ರಾಮಶಿಲೆಯನ್ನು ಹೊತ್ತು ತಂದು ನಾಮಗಿರಿಕ್ಷೇತ್ರದ ಕಮಲಾಲಯ ಸರೋವರದಲ್ಲಿ ಭಗವದಾರಾಧನೆ ಮಾಡುತ್ತಿದ್ದ ಲಕ್ಷ್ಮೀದೇವಿಗೆ ನೀಡುತ್ತಾರೆ.

ಪರಮಾತ್ಮನ ಸನ್ನಿಧಾನವನ್ನು ಪಡೆಯಲಿರುವ ಆ ಭಾರೀ ಶಿಲೆಯನ್ನು ಲಕ್ಷ್ಮೀದೇವಿ ಆದರದಿಂದ ಸ್ವೀಕರಿಸುತ್ತಾಳೆ. ಹನುಮಂತದೇವರ ಕರಸ್ಪರ್ಶದಿಂದ ಪವಿತ್ರವಾಗಿದ್ದ ಆ ಬಂಡೆಯನ್ನು ಮಹಾಲಕ್ಷ್ಮೀದೇವಿ ಸ್ಪರ್ಶಿಸುತ್ತಿದ್ದ ಹಾಗೆಯೇ ಪರಮಾತ್ಮ ಆ ಶಿಲೆಯಲ್ಲಿ ಒಡಮೂಡುತ್ತಾನೆ. ಆ ಶಿಲೆಯನ್ನು ಹನುಮಂತದೇವರಿಂದ ಸ್ವೀಕರಿಸುವ ಸಂದರ್ಭದಲ್ಲಿ ಮಹಾಲಕ್ಷ್ಮೀದೇವಿಯ ಮನಸ್ಸು ಭಗವಂತನ ನರಸಿಂಹರೂಪವನ್ನು ನೆನೆಯುತ್ತಿರುತ್ತದೆ. ಅವಳ ನಾಲಿಗೆ ನರಸಿಂಹ ನಾಮವನ್ನು ಜಪಿಸುತ್ತಿರುತ್ತದೆ. ಹೀಗಾಗಿ ಮಹಾಲಕ್ಷ್ಮೀದೇವಿಗೆ ಮಾತ್ರ ಗೋಚರನಾಗುತ್ತಾ ಅವಳ ಸಂಗಡವೇ ಇದ್ದ ನರಸಿಹರೂಪದ ಭಗವಂತ ತನ್ನ ಪರಮಾದ್ಭುತವಾದ ನರಸಿಂಹರೂಪದಿಂದಲೇ ಆ ಬೃಹತ್ ಶಿಲೆಯ ಕೆಳಭಾಗದಲ್ಲಿ ಒಡಮೂಡಲಾರಂಭಿಸುತ್ತಾನೆ. ಲಕ್ಷ್ಮೀ-ಮುಖ್ಯಪ್ರಾಣರ ಸೇವೆ ಭಕ್ತಿಗಳಿಗೆ ಮೆಚ್ಚಿ ಸಮಗ್ರ ಭಕ್ತವೃಂದವನ್ನು ಅನುಗ್ರಹಿಸುವದಕ್ಕಾಗಿ ಭಗವಂತ ಸಕಲರಿಗೂ ಕಾಣುವಂತೆ ಅಲ್ಲಿ ಗೋಚರನಾಗುತ್ತಿದ್ದಂತೆಯೇ ಭಗವಂತನ ಬಲಭಾಗದಲ್ಲಿ ಬ್ರಹ್ಮದೇವರು, ಎಡಭಾಗದಲ್ಲಿ ರುದ್ರದೇವರು ನಿಂತು ಸ್ತೋತ್ರ ಮಾಡಲಾರಂಭಿಸುತ್ತಾರೆ. ಸೂರ್ಯ ಚಂದ್ರರು, ಎಡಬಲಗಳಲ್ಲಿ ನಿಂತು ಛಾಮರವನ್ನು ಬೀಸಲಾರಂಭಿಸುತ್ತಾರೆ. ಸನಕಸನಂದನರು ವೇದಮಂದ್ರಗಳಿಂದ ಭಗವಂತನ ಸ್ತೋತ್ರ ಮಾಡಲಾರಂಭಿಸುತ್ತಾರೆ. ಈ ಪವಿತ್ರಕ್ಷಣದ ಈ ಪ್ರಸಂಗ ಹೀಗೆಯೇ ಶಾಶ್ವತವಾಗಿರಬೇಕು ಎಂದು ಬಯಸಿದ ಮಹಾಲಕ್ಷ್ಮೀದೇವಿ ಆ ದೇವತೆಗಳಿಗೆ ಅದೇ ಬಂಡೆಯಲ್ಲಿ ಅದೇ ಕ್ರಮದಲ್ಲಿ ಒಡಮೂಡಲು ಆಜ್ಞಾಪಿಸುತ್ತಾಳೆ. ತಮ್ಮ ಸೌಭಾಗ್ಯಸಂವರ್ಧಕವಾದ ಲಕ್ಷ್ಮೀದೇವಿಯ ಆಜ್ಞೆಯನ್ನು ಸ್ವೀಕರಿಸಿದ ದೇವತೆಗಳೂ ಹಾಗೆಯೇ ಕಲ್ಲಿನಲ್ಲಿ ಒಡಮೂಡಿ ನರಹರಿಯ ಸೇವೆಯನ್ನು ಇಂದಿಗೂ ಮಾಡುತ್ತಿದ್ದಾರೆ.

ಮಹಾಲಕ್ಷ್ಮೀದೇವಿಯ ನರಸಿಂಹನ ನಾಮಸ್ಮರಣೆಯನ್ನು ಮಾಡುತ್ತಿದ್ದ ಹಾಗೆಯೇ ನರಸಿಂಹರೂಪ ಈ ಬೆಟ್ಟದಲ್ಲಿ ಅಭಿವ್ಯಕ್ತನಾಗಿದ್ದರಿಂದ ಈ ಬೆಟ್ಟಕ್ಕೆ ನಾಮಗಿರಿ ಎಂದೇ ಹೆಸರಾಯಿತು. ಮುಂದೆ ಇಡಿಯ ಪ್ರದೇಶಕ್ಕೆ ನಾಮಗಿರಿ ನಾಮಕಲ್ ಎಂಬ ಹೆಸರೇ ಶಾಶ್ವತವಾಯಿತು.

ಹೀಗೆ ಭಕ್ತಜನರ ಮೇಲಿನ ಅನುಗ್ರಹದಿಂದ ಮಹಾಲಕ್ಷ್ಮೀದೇವಿ ಇಲ್ಲಿ ನರಸಿಂಹನ ಸನ್ನಿಧಾನವನ್ನು ನೆಲೆಗೊಳಿಸುತ್ತಾಳೆ. ಮುಖ್ಯಪ್ರಾಣದೇವರು ತಮ್ಮ ಕೈಂಕರ್ಯವನ್ನು ಸಮರ್ಪಿಸುತ್ತಾರೆ. ಬಳಿಕ, ಈ ಕ್ಷೇತ್ರದ ಅದೇವತೆಯಾಗಿ ಈ ಕ್ಷೇತ್ರದಲ್ಲಿ ನಿಂತು ತಪಸ್ಸು ಮಾಡುತ್ತಾ ಭಗವಂತನನ್ನು ಪ್ರತಿಷ್ಠಾಪಿಸಿದ ಕಾರಣಕ್ಕಾಗಿ ಲಕ್ಷ್ಮೀದೇವಿ ತಾನೇ ಪರಮಾತ್ಮನ ನಿತ್ಯಪೂಜೆಯನ್ನು ಮಾಡಬೇಕೆಂದು ಸಂಕಲ್ಪಿಸುತ್ತಾಳೆ. ಅದಕ್ಕಾಗಿ ಭಗವಂತನ ಬಲಭಾಗದಲ್ಲಿ ಭಗವಂತನ ಪ್ರತಿಮೆ ಇರುವ ಸ್ಥಳಕ್ಕಿಂತಲೂ ಕೆಳಗೆ ಭಗವದಭಿಮುಖವಾಗಿ ತಾನು ನೆಲೆಗೊಳ್ಳುತ್ತಾಳೆ.

ಆದರೆ, ನರಸಿಂಹದೇವರು ಮಹಾಲಕ್ಷ್ಮೀದೇವಿಯ ಪೂರ್ಣ ಭಕ್ತಿಗೆ ಮೆಚ್ಚಿ ಅವಳ ಮೇಲಿನ ಪೂರ್ಣ ಪ್ರೇಮದಿಂದ ಲಕ್ಷ್ಮೀದೇವಿಯನ್ನು ತನ್ನ ಹೃದಯದಲ್ಲಿ ಧರಿಸುತ್ತಾರೆ. ಹೀಗಾಗಿ ನಾಮಕಲ್ಲಿನ ಲಕ್ಷ್ಮೀನರಸಿಂಹನನ್ನು ಕೇವಲ ನರಸಿಂಹ ಎಂದು ಕರೆಯಬಾರದು, ಲಕ್ಷ್ಮೀನರಸಿಂಹ ಎಂದೇ ಕರೆಯಬೇಕು.

ಹೀಗೆ ಲಕ್ಷ್ಮೀದೇವಿ ಒಂದು ರೂಪದಿಂದ ನರಸಿಂಹವಿಗ್ರಹದ ಹೃದಯಭಾಗದಲ್ಲಿ, ಮತ್ತೊಂದು ರೂಪದಿಂದ ಭಗವಂತನ ಬಲಭಾಗದಲ್ಲಿ ಅವನ ಎದುರಾಗಿ ಕುಳಿತು ಆ ನಾರಾಯಣನ ಅರ್ಚನೆಯನ್ನು ಮಾಡುತ್ತಿದ್ದಾಳೆ.

ಆದ್ದರಿಂದಲೇ ಸಾಮಾನ್ಯವಾಗಿ ಉಳಿದೆಲ್ಲ ದೇವಸ್ಥಾನಗಳಲ್ಲಿ ಕಾಣುವಂತೆ ಲಕ್ಷ್ಮೀ ನಾರಾಯಣರ ವಿಗ್ರಹಗಳು ಒಂದೇ ಮುಖವಾಗಿ ಇಲ್ಲಿ ಕಾಣುವದಿಲ್ಲ, ಬದಲಾಗಿ ಭಗವಂತನ ಎದುರಾಗಿ ಅವನನ್ನು ಅರ್ಚನೆ ಮಾಡುವ ಭಕ್ತ ಕುಳಿತುಕೊಳ್ಳುವ ಹಾಗೆ ಮಹಾಲಕ್ಷ್ಮೀದೇವಿ ನರಸಿಂಹನಿಗೆ ಅಭಿಮುಖಳಾಗಿ ಕುಳಿತಿದ್ದಾಳೆ.

ಅದೇ ರೀತಿ ಶ್ರೀಲಕ್ಷ್ಮೀನರಸಿಂಹದೇವಸ್ಥಾನದ ಎದುರು ನರಸಿಂಹನ ಪಾದಕ್ಕಿಂತಲೂ ೩೨ ಅಡಿಗಳ ಕೆಳಗೆ ಮುಖ್ಯಪ್ರಾಣದೇವರು ನರಸಿಂಹನ ಪಾದಗಳನ್ನು ಕಾಣುತ್ತಾ ಕೈಮುಗಿದು ನಿಂತ ಪ್ರಾಣದೇವರ ೩೨ ಅಡಿಗಳ ಭವ್ಯ ವಿಗ್ರಹವಿದೆ. ಎಡಗಾಲನ್ನು ಸ್ವಲ್ಪ ಮಡಿಸಿ ವಿನಯದ ಭಂಗಿಯನ್ನು ಪ್ರಕಟ ಮಾಡಿ ಎರಡೂ ಕೈಗಳನ್ನೂ ಭಕ್ತಿಯಿಂದ ಜೋಡಿಸಿ ನಿಂತ ವಿಗ್ರಹ. ಎದ್ದು ಕಾಣುವ ಜನಿವಾರದಿಂದ, ದಪ್ಪ ಮೀಸೆಯಿಂದ, ದುಂಡು ಕಣ್ಗಳ ದಿಟ್ಟ ನಿಲುವಿನ ಪರಮಸುಂದರ ಮೂರುತಿ.

ಶ್ರೀನರಸಿಂಹದೇವರು ಸಾವಿರಾರು ಅಡಿ ಅಗಲ ಎತ್ತರದ ದೊಡ್ಡ ಸಾಲಿಗ್ರಾಮಶಿಲೆಯಲ್ಲಿ ಒಡಮೂಡಿರುವದರಿಂದ ಇಡಿಯ ಆ ಗುಡ್ಡಕ್ಕೆ ದೇವಸ್ಥಾನ ಕಟ್ಟುವದು ಮನುಷ್ಯನಿಗೆ ಅಸಾಧ್ಯ. ಗೋಪುರವಿಲ್ಲದ ಗುಡಿಯಲ್ಲಿ ಭಗವಂತ ನೆಲೆಗೊಂಡಿರುವದರಿಂಗ ನಾನೂ ಗೋಪುರವಿಲ್ಲದೇ ಇರುತ್ತೇನೆ ಎಂದು ಸದಾ ಭಗವದನುಚರನಾದ ಭಗವತ್ಕಿಂಕರನಾದ ಮುಖ್ಯಪ್ರಾಣ ಸಂಕಲ್ಪ ಮಾಡುತ್ತಾನೆ. ಹೀಗಾಗಿ ಮುಖ್ಯಪ್ರಾಣವಿಗ್ರಹದ ಸುತ್ತಮುತ್ತಲೂ ದೇವಸ್ಥಾನ ನಿರ್ಮಾಣವಾಗಿದ್ದರೂ ಮೂರ್ತಿಯ ಸ್ಥಳದಲ್ಲಿ ಛಾವಣಿಯಿಲ್ಲ. ತೆರೆದ ಸ್ಥಳದಲ್ಲಿಯೇ ಅವನ ಪೂಜೆ ಆರಾಧನೆಗಳು ನಡೆಯುತ್ತವೆ.

ಈ ಕ್ಷೇತ್ರದ ಸಂದರ್ಶನಕ್ಕೆ ಬರುವವರು ಮೊದಲಿಗೆ ಮುಖ್ಯಪ್ರಾಣನನ್ನು ಕಂಡು ನಮಿಸಿ, ಸ್ತುತಿಸಿ, ಬಳಿಕ ಶ್ರೀಲಕ್ಷ್ಮೀನರಸಿಂಹದೇಗುಲವನ್ನು ಪ್ರವೇಶಿಸಬೇಕು. ಪ್ರಧಾನ ದೇಗುಲದ ಬಲಭಾಗದಲ್ಲಿರುವ ಮಹಾಲಕ್ಷ್ಮೀದೇವಿಯ ಆಲಯವನ್ನು ಪ್ರವೇಶಿಸಿ, ಬಲಗೈಯಿಂದ ಅಭಯವನ್ನು ಎಡಗೈಯಿಂದ ವರವನ್ನು ಪ್ರಸಾದಿಸುತ್ತಿರುವ ಪದ್ಮಾಸನಸ್ಥಳಾದ ವಿಶಾಲಕ್ಷಿಯಾದ ಮಹಾಲಕ್ಷ್ಮಿಯನ್ನು ಸಂದರ್ಶಿಸಿ ವಂದಿಸಿ ಸ್ತುತಿಸಬೇಕು.

ಆ ಬಳಿಕ ಪೂರ್ಣ ಭಕ್ತಿಯಿಂದ ನರಸಿಂಹ ದೇಗುಲವನ್ನು ಪ್ರವೇಶಿಸಿ ಅದ್ಭುತವಾದ, ಮನಸೂರೆಗೊಳ್ಳುವ ಭಂಗಿಯಲ್ಲಿ ಕುಳಿತಿರುವ, ಮೇಲಿನ ಎರಡು ಕೈಗಳಲ್ಲಿ ಶಂಖ ಛಕ್ರಗಳನ್ನು ಧರಿಸಿ, ಕೆಳಗಿನ ಎಡಗೈಯನ್ನು ತೊಡೆಯ ಮೇಲಿಟ್ಟು, ಬಲಗೈಯ ಬೆರಳುಗಳನ್ನು ಮಡಿಸಿ ಅಂಗೈಯಲ್ಲಿನ ರಕ್ತಕಲೆಯನ್ನು ಭಕ್ತರಿಗೆ ತೋರಿಸುತ್ತಿರುವ ( ಅರ್ಚಕರು ಮಂಗಳಾರತಿಯ ಬೆಳಕನ್ನು ಆ ಹಸ್ತದ ಸಮೀಪದಲ್ಲಿಟ್ಟು ಆ ಕಡುಗಪ್ಪು ಕಲ್ಲಿನಲ್ಲಿ ಸ್ಪಷ್ಟವಾಗಿ ಕಾಣುವ ಕೆಂಪು ಕಲೆಯನ್ನು ತೋರಿಸುತ್ತಾರೆ) ಹಿರಣ್ಯಕಶಿಪುವನ್ನು ಕೊಂದು ಪ್ರಹ್ಲಾದನನ್ನು ಸಲಹಿದಂತೆ ನಿಮ್ಮ ದುರಿತಗಳನ್ನು ಕಳೆದು ಅನುಗ್ರಹಿಸುತ್ತೇನೆ ಎಂಬ ಮಾತನ್ನು ಆ ಮೂಲಕ ಹೇಳುತ್ತಿರುವ, ಎಡಗಾಲನ್ನು ಮಡಚಿ ಬಲತೊಡೆಯ ಬಳಿಯಲ್ಲಿಟ್ಟು ಬಲಗಾಲನ್ನು ಪಾದಪೀಠದ ಮೇಲಿನ ದಿವ್ಯಾಕೃತಿಯ ಪ್ರಸನ್ನ ನರಸಿಂಹನನ್ನು ಸಂದರ್ಶಿಸಬೇಕು.

ನರಸಿಂಹನ ವಿಗ್ರಹ ಬಹಳ ಎತ್ತರವಾಗಿದ್ದು ಭಯಂಕರವಾಗಿ ಕಂಡರೂ ಭಕ್ತಿಯಿಂದ ದಿಟ್ಟಿಸಿದಾಗ ಹಸನ್ಮುಖದ ಪ್ರಸನ್ನದೃಷ್ಟಿಯ ಭಕ್ತವರದ ನರಸಿಂಹದೇವರ ದರ್ಶನವಾಗುತ್ತದೆ.

‘‘ಉಗ್ರೊsಪ್ಯನುಗ್ರ ಏವಾಯಂ ಸ್ವಭಕ್ತಾನಾಂ ನೃಕೇಸರೀ |
ಕೇಸರೀವ ಸ್ವಪೋತಾನಾಮನ್ಯೇಷಾಮುಗ್ರವಿಗ್ರಹಃ ॥

ಸಿಂಹ ಉಳಿದ ಪ್ರಾಣಿಗಳಿಗೆ ಭಯಂಕರವಾಗಿ ಗೋಚರಿಸಿದರೂ, ತನ್ನ ಮಕ್ಕಳಿಗೆ ಭಯಂಕರವಲ್ಲ. ಹಾಗೆಯೇ ಪಾಪಿಷ್ಠರಿಗೆ ನರಸಿಂಹ ಉಗ್ರನಾಗಿ ಕಂಡರೂ ತನ್ನ ಭಕ್ತರಿಗೆ ಪ್ರಸನ್ನನಾಗಿಯೇ ಕಾಣಿಸುತ್ತಾನೆ, ಎಂಬ ಮಾತಿಗೆ ನಾಮಕಲ್ಲಿನ ನರಸಿಂಹ ನಿಜವಾದ ನಿದರ್ಶನ.

ನಾಮಗಿರಿಕ್ಷೇತ್ರದ ಇತರ ವಿಶೇಷಗಳು

ನಾಮಗಿರಿಯಲ್ಲಿ ಶ್ರೀ ರಾಘವೇಂದ್ರಸ್ವಾಮಿಗಳು

ಈ ಪರಮಪವಿತ್ರವಾದ ಕ್ಷೇತ್ರವನ್ನು ಮತ್ತು ಶ್ರೀಲಕ್ಷ್ಮೀನರಸಿಂಹದೇವರನ್ನು ಶ್ರೀರಂಗದಿಂದ ಉಡುಪಿಗೆ ಯಾತ್ರೆ ಹೊರಟಿದ್ದ ಶ್ರೀರಾಘವೇಂದ್ರಸ್ವಾಮಿಗಳು ಸಂದರ್ಶಿಸಿದರು, ಮತ್ತು ಒಂದು ರಾತ್ರಿ ಅಲ್ಲಿಯೇ ವಾಸವಿದ್ದರು ಎಂಬ ಉಲ್ಲೇಖ ಶ್ರೀರಾಘವೇಂದ್ರ ವಿಜಯದ ಎಂಟನೆಯ ಸರ್ಗದಲ್ಲಿದೆ.

‘‘ನಾಮಪರ್ವತಮುಪೇತ್ಯ ನೃಸಿಂಹಂ ನಾಮಸಂಸ್ಮೃತಿಧುತಾಘಜನೌಘಮ್ |
ತಂ ಪ್ರಣಮ್ಯ ತರುಣಾರ್ಕಸಮಾಭಂ ತಾಂ ನಿಶಾಮಿಹ ಗುರುರ್ವಸತಿ ಸ್ಮ ’’ ॥ ೮/೩ ॥

‘‘ಉತ್ತರದೇಶದ ಯಾತ್ರೆಗಾಗಿ ಶ್ರೀರಂಗನಾಥನ ಅನುಜ್ಞೆಯನ್ನು ಪಡೆದು ಅವನ ಕರುಣಾಕವಚವನ್ನು ಹೊತ್ತು ಹೊರಟ ಶ್ರೀ ರಾಘವೇಂದ್ರಸ್ವಾಮಿಗಳು ಮೊದಲಿಗೆ ನಾಮಗಿರಿಕ್ಷೇತ್ರಕ್ಕೆ ಬಂದು ಅಲ್ಲಿ ಸನ್ನಿಹಿತನಾಗಿದ್ದ, ತನ್ನ ನಾಮಸ್ಮರಣೆ ಮಾಡುವ ಜನರ ಪಾಪವನ್ನು ಪರಿಹರಿಸುವ, ಮುಂಜಾವಿನ ಸೂರ್ಯನಂತೆ ಪ್ರಭಾವಲಯದಿಂದ ಕಂಗೊಳಿಸುತ್ತಿದ್ದ ಶ್ರೀಲಕ್ಷ್ಮೀನೃಸಿಂಹನಿಗೆ ನಮಸ್ಕರಿಸಿ ಆ ರಾತ್ರಿಯನ್ನು ಆ ಭಗವಂತನ ಸನ್ನಿಯಲ್ಲಿಯೇ ಕಳೆಯುತ್ತಾರೆ’’

ಶ್ರೀ ಸೋಸಲೆ ವ್ಯಾಸರಾಯಮಠದಲ್ಲಿ ಆಗಿಹೋದ ಶ್ರೇಷ್ಠ ಜ್ಞಾನಿಗಳಾದ ಶ್ರೀ ವಿದ್ಯಾರತ್ನಾಕರತೀರ್ಥಶ್ರೀಪಾದಂಗಳವರು ನಾಮಗಿರಿಯಲ್ಲಿ ಅನೇಕ ವರ್ಷಗಳ ಕಾಲ ವಾಸವಿದ್ದವರು. ಅವರಿಗೆ ನಾಮಗಿರಿಯ ‘ಶ್ರೀಮನ್’ ನರಸಿಂಹ ಇಷ್ಟದೈವನಾಗಿದ್ದ. ಅವರು ಲಕ್ಷ್ಮೀನೃಸಿಂಹನ ಕುರಿತು ಐದು ಪದ್ಯಗಳ ಒಂದು ಸುಪ್ರಭಾತವನ್ನೂ ರಚಿಸಿದ್ದಾರೆ. ತುಂಬ ಸುಂದರವಾಗಿ ಶ್ರೀಲಕ್ಷ್ಮೀನೃಸಿಂಹನ ಮಾಹಾತ್ಮ್ಯವನ್ನು ಸಂಗ್ರಹಿಸಿ ಆ ಒಡೆಯನಿಗೆ ಸುಪ್ರಭಾತವನ್ನು ಹೇಳುವ ಭಕ್ತಿಪೂರ್ಣ ಕೃತಿ. ವಿಶ್ವನಂದಿನಿಯ ಸ್ತೋತ್ರಸುರಭಿಯಲ್ಲಿ ಅದನ್ನು ಅನುವಾದಿಸಿ ನೀಡುತ್ತೇನೆ.

ದಾಸಸಾಹಿತ್ಯದಲ್ಲಿ ನಾಮಗಿರಿ

ಶ್ರೀ ಪುರಂದರದಾಸರು ಶ್ರೀ ನಾಮಗಿರಿಯ ಕ್ಷೇತ್ರಕ್ಕೆ ಯಾತ್ರೆ ಬಂದಿದ್ದಾಗ, ‘‘ಸಿಂಹರೂಪನಾದ ಶ್ರೀಹರಿ, ಹೇ ನಾಮಗಿರೀಶನೇ’’ ಎಂಬ ಪದದಿಂದ ಭಗವಂತನನ್ನು ಸ್ತುತಿಸಿದ್ದಾರೆ.

ಸಿಂಹರೂಪನಾದ ಶ್ರೀಹರಿ ।

ಒಮ್ಮನದಿಂದ ನಿಮ್ಮನು ಭಜಿಸಲು
ಸಮ್ಮತದಿಂದಲಿ ಕಾಯುವನೆಂದ ಹರಿ ॥ ಅನು ॥

ತರಳನು ಕರೆಯೆ ಸ್ತಂಭವು ಬಿರಿಯೆ ತುಂಬ ಉಗ್ರವನು ತೋರಿದನು |
ಕರಳನು ಬಗೆದು ಕೊರಳೊಳಗಿತ್ತು ತರಳನ ಸಲಹಿದ ಶ್ರೀ ನರಸಿಂಹನ ॥ ೧ ॥

ಭಕ್ತರೆಲ್ಲ ಕೂಡಿ ಬಹುದೂರ ಓಡಿ ಪರಮಶಾಂತವನು ಬೇಡಿದರು |
ಕರೆದು ತನ್ನ ಸಿರಿಯನು ಎದೆಯೊಳು ಕುಳಿಸಿದ ಪರಮ ಹರಷವನು ಪೊಂದಿದ ಶ್ರೀಹರಿ ॥ ೨ ॥

ಜಯ ಜಯ ಜಯವೆಂದು ಹೂವನು ತಂದು ಹರಿ ಹರಿಯೆಂದು ಸುರರೆಲ್ಲ ಸುರಿಸೆ |
ಭಯನಿವಾರಣ ಭಾಗ್ಯಸ್ವರೂಪ ಪರಮಪುರುಷ ಶ್ರೀ ಪುರಂದರವಿಠಲನು ॥ ೩ ॥

ಮಹಾಲಕ್ಷ್ಮೀದೇವಿ ಪರಮಾತ್ಮನ ವಕ್ಷಸ್ಥಲದಲ್ಲಿ ನೆಲೆಗೊಂಡ ಬಗೆಯನ್ನು ಅದೆಷ್ಟು ಸುಂದರವಾಗಿ ದಾಸರು ಇಲ್ಲಿ ನಿರೂಪಿಸಿದ್ದಾರೆ, ಗಮನಿಸಿ. ಪರಮಾತ್ಮ ನರಸಿಂಹರೂಪದಲ್ಲಿ ಪ್ರಹ್ಲಾದನ ಸ್ತೋತ್ರದಿಂದ ಶಾಂತನಾದಂತೆ ತೋರಿದ್ದು ಒಂದು ಲೀಲೆ. ಪ್ರಹ್ಲಾದನ ಮೇಲೆ, ರುದ್ರದೇವರ ಮೇಲೆ, ವಾಯು ಬ್ರಹ್ಮರ ಮೇಲೆ ಮಾಡುವ ಅನುಗ್ರಹಕ್ಕಿಂತ ಅನಂತಪಟ್ಟು ಮಿಗಿಲಾದ ಅನುಗ್ರಹವನ್ನು ಮಹಾಲಕ್ಷ್ಮೀದೇವಿಯ ಮೇಲೆ ಮಾಡುತ್ತಾನೆ ಎಂಬ ಶ್ರೀಮದಾಚಾರ್ಯರ ಸಿದ್ಧಾಂತವನ್ನು ಅದೆಷ್ಟು ಅದ್ಭುತವಾಗಿ ದಾಸರು ಇಲ್ಲಿ ಚಿತ್ರಿಸಿದ್ದಾರೆ.

ಶ್ರೀ ನಾಮಗಿರಿಕ್ಷೇತ್ರದ ಸ್ಮರಣೆಯಿಂದ, ಕಮಲಾಲಯ ಸರೋವರದ ಸ್ಮರಣೆಯಿಂದ, ಪುರಂದರ ದಾಸರ ಸ್ಮರಣೆಯಿಂದ, ಶ್ರೀ ವಿದ್ಯಾರತ್ನಾಕರತೀರ್ಥರ ಶ್ರೀ ರಾಘವೇಂದ್ರಸ್ವಾಮಿಗಳ ಸ್ಮರಣೆಯಿಂದ, ಹನುಮಂತದೇವರ ಸ್ಮರಣೆಯಿಂದ, ನಾಮಗಿರಿಯಮ್ಮ ಲಕ್ಷ್ಮೀದೇವಿಯ ಸ್ಮರಣೆಯಿಂದ, ಸರ್ವೋತ್ತಮ ನಾಮಗಿರೀಶ ಲಕ್ಷ್ಮೀನೃಸಿಂಹನ ಸ್ಮರಣೆಯಿಂದ ಉಂಟಾದ ಪುಣ್ಯವನ್ನು ಗುರುಗಳ ಪಾದಕ್ಕೊಪ್ಪಿಸಿಕೊಳ್ಳೋಣ.

ಶ್ರೀನಾಮಗಿರಿಕ್ಷೇತ್ರದ ಯಾತ್ರೆಯ ಸೌಭಾಗ್ಯ ಸದಾ ನಿಮಗಿರಲಿ ಎಂಬ ಹಾರೈಕೆಯೊಂದಿಗೆ

– ವಿಷ್ಣುದಾಸ ನಾಗೇಂದ್ರಾಚಾರ್ಯ

ಇವುಗಳೂ ನಿಮಗಿಷ್ಟವಾಗಬಹುದು

vishwanandini-020

ವಿಶ್ವನಂದಿನಿ ಲೇಖನ ಮಾಲೆ – 020

ಶ್ರೀಕನಕದಾಸರ ಹರಿಭಕ್ತಿಸಾರ ವಿಷ್ಣುದಾಸರ ಸಾರಾಮೃತವ್ಯಾಖ್ಯಾನದೊಂದಿಗೆ ಪದ್ಯ – ೨ ದೇವದೇವ ಜಗದ್ಭರಿತ ವಸು- ದೇವಸುತ ಜಗದೇಕನಾಥ ರ- ಮಾವಿನೋದಿತ ಸಜ್ಜನಾನತ …

Leave a Reply

Your email address will not be published. Required fields are marked *