vishwanandini-009

ವಿಶ್ವನಂದಿನಿ ಲೇಖನ ಮಾಲೆ – 009

ಮಾಧ್ವರು ಎಂದರೆ ಹೇಗಿರಬೇಕು?

(ಈ ಹೆಸರಿನ ಲೇಖನಗುಚ್ಛಗಳಲ್ಲಿ ನಾವು ಮಾಧ್ವರು ಹೇಗಿರಬೇಕು, ಹೇಗಿರಬಾರದು ಎನ್ನುವದನ್ನು ವಿಶ್ಲೇಷಿಸುತ್ತ ಹೋಗುತ್ತೇನೆ)

ಪ್ರಶ್ನೆ ಅಂತಾ ಕೇಳುವ ಮುನ್ನ….

ಪ್ರಶ್ನೆ ಕೇಳುವದು ಎಂದಿಗೂ ನಮ್ಮನ್ನು ಸಣ್ಣವರನ್ನಾಗಿಸುವದಿಲ್ಲ. ಆದರೆ ಕೇಳುವ ಶೈಲಿ ನಮ್ಮನ್ನು ಸಣ್ಣವರನ್ನಾಗಿಸಿ ಬಿಡುತ್ತದೆ. ಕಾರಣ ಮಾತು ನಮ್ಮ ವ್ಯಕ್ತಿತ್ವದ ಪ್ರತಿಬಿಂಬ. ಆ ವ್ಯಕ್ತಿತ್ವ ಎಷ್ಟು ತೂಕದ್ದೊ ನಮ್ಮ ಮಾತೂ ಅಷ್ಟೇ ತೂಕದ್ದಾಗಿರುತ್ತದೆ. ನಾವು ಮಾಡುವ ಪ್ರಶ್ನೆಯ ಮೇಲೆ ನಮ್ಮ ಯೋಗ್ಯತೆ ಎಂಥದ್ದು, ಅಭಿರುಚಿ ಎಂಥದ್ದು ಅಂತೆಲ್ಲಾ ನಿರ್ಣಯಿಸಿ ಬಿಡಬಹುದು. ನಮಗಿರುವ ಜ್ಞಾನದ (?) ಆಳ ವಿಸ್ತಾರಗಳೆಷ್ಟು ಅಂತ ಅಳೆದುಬಿಡಬಹುದು.

ಸಂಧ್ಯಾವಂದನೆ ಏಕೆ ಮಾಡಬೇಕು, ಶ್ರಾದ್ಧದ ಉದ್ದೇಶವೇನು ಅಂತ ಧರ್ಮಾಚರಣೆಯ ವಿಷಯಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಮಾಡುವವರು ಸಾಮಾನ್ಯವಾಗಿ ‘‘ಉತ್ತರ ನಮಗೆ ಬೇಕಾದ್ದಲ್ಲ, ಮಕ್ಕಳಿಗೆ ಬೇಕಾದ್ದು. ನಮಗೆ ತಿಳಿದಿದೆ, ಆದರೆ ಹೇಳಲಿಕ್ಕೆ ಬರುವದಿಲ್ಲ, ನೀವು ಹೇಳಿದರೆ ನಮ್ಮ ಮಕ್ಕಳು ಕೇಳ್ತಾರೆ ’’ ಅನ್ನುವ ಧಾಟಿಯಲ್ಲೇ ಪ್ರಶ್ನೆ ಮಾಡುತ್ತಾರೆ. ‘‘ಈಗಿನ ಕಾಲದ ಮಕ್ಕಳು, ಪ್ರತಿಯೊಂದಕ್ಕೂ ಪ್ರಶ್ನೆ ಮಾಡ್ತಾರೆ, ತಿಳಿದುಕೊಳ್ಳದೇ ಏನನ್ನೂ ಮಾಡುವವರಲ್ಲ, ಅವರಿಗ್ಯಾರೂ ಸರಿಯಾಗಿ ತಿಳಿಸಿ ಹೇಳುವವರೇ ಇಲ್ಲ. ಸುಮ್ಮನೆ ದೇವರಿಗೆ ಪ್ರೀತಿಯಾಗುತ್ತೆ, ಶಾಸ್ತ್ರದಲ್ಲಿ ಹೇಳಿದಾರೆ, ಅದಕ್ಕಾಗಿ ಮಾಡಬೇಕು ಅಂತ ಹೇಳಿದರೆ ಅವರು ಒಪ್ಪುವದಿಲ್ಲ, ವೈಜ್ಞಾನಿಕ ಕಾರಣಗಳನ್ನು ನೀಡಿ’’ ಅಂತ ತಮ್ಮ ಮಕ್ಕಳನ್ನು ಜೀನಿಯಸ್ಸುಗಳ ತರಹ ಚಿತ್ರಿಸಿ, ನಿಮ್ಮ ಉತ್ತರವನ್ನು ಸುಲಭವಾಗಿ ಒಪ್ಪುವದಿಲ್ಲ ಅನ್ನುವ ಎಚ್ಚರಿಕೆಯನ್ನೂ ಕೊಟ್ಟಿರುತ್ತಾರೆ.

ನಾನು ಯಾವುದೇ ಪ್ರಶ್ನೆಗೆ ಉತ್ತರ ಹೇಳಬೇಕಾದರೂ ಆ ಪ್ರಶ್ನೆ ಮಾಡುವವನ ಮಾತಿನ ಧಾಟಿ, ಅವನು ನಿಂತಿರುವ ರೀತಿ, ಆ ಪ್ರಶ್ನೆ ಮತ್ತು ಉತ್ತರದ ಬಗ್ಗೆ ಅವನಿಗಿರುವ ಶ್ರದ್ಧೆ ಅಥವಾ ಉಡಾಫೆ ಇವುಗಳನ್ನು ಗಮನಿಸಿ ಅದಕ್ಕೆ ತಕ್ಕಂತೆ ಉತ್ತರ ನೀಡುತ್ತಿರುತ್ತೇನೆ. ಸುಮಾರು ವರ್ಷಗಳ ಹಿಂದೆ, ಒಂದು ಉಪನ್ಯಾಸದ ಮಂಗಳದ ದಿವಸ, ಪ್ರಾಯಃ ರಾಮಾಯಣದ ಮಂಗಳ ಅಂತ ನೆನಪು, ಕುರುಚಲುಗಡ್ಡದ ಮನುಷ್ಯನೊಬ್ಬ ಅತೀ ವಿನಯದಿಂದ ಹತ್ತಿರ ಬಂದು ನಿಮ್ಮನ್ನೊಂದು ಪ್ರಶ್ನೆ ಕೇಳಬೇಕು ಅಂದ. ಕೇಳಿ ಅಂದೆ. ಅದೇ ತಪ್ಪಾಯಿತು. ಆ ಮನುಷ್ಯ ವಾದಿರಾಜರ ಬಗ್ಗೆ ನಿಮ್ಮ ಅಭಿಪ್ರಾಯವೇನು ಅಂತ ಒಂದು ಅಸಡ್ಢಾಳ ಪ್ರಶ್ನೆ ಕೇಳಿದ್ದ. ವಾದಿರಾಜರ ಋಜುತ್ವದ ಬಗ್ಗೆ ಪಂಡಿತರಲ್ಲಿ ಚರ್ಚೆ ನಡೆಯುತ್ತಿದ್ದ ಸಮಯವದು. ‘‘ಒಬ್ಬೊಬ್ಬರು ಒಂದೊಂದು ರೀತಿ ಅಭಿಪ್ರಾಯ ಇಟ್ಟುಕೊಳ್ಳುವ ಹಾಗೆ ಬದುಕಿದವರಲ್ಲ ಅವರು. ಒಳಗೂ ಹೊರಗೂ ಒಂದೇ ರೀತಿ ಬದುಕಿದವರು’’ ಅಂತ ಹೇಳಿದ್ದೆ. ಆ ಪುಣ್ಯಾತ್ಮನಿಗೆ ಆ ಉತ್ತರವೇ ಅರ್ಥವಾಗಿರಲಿಲ್ಲ. ಕಾರಣ, ಅವನು ನಿರೀಕ್ಷಿಸಿದ್ದ ಸಿದ್ಧ ಉತ್ತರ ಅವನಿಗೆ ದೊರೆತಿರಲಿಲ್ಲ. ನಿಮಗೆ ನನ್ನ ಪ್ರಶ್ನೆಯೇ ಗೊತ್ತಾಗಿಲ್ಲ ಅನ್ನುವ ಹಾಗೆ ಮುಖ ಮಾಡಿ ‘ಅದಲ್ಲ, ಅವರ ಋಜುತ್ವದ ಬಗ್ಗೆ ನಿಮ್ಮ ಅಭಿಪ್ರಾಯವೇನು ’ ಅಂತ ಅರ್ಧ ಕ್ಷಣ ಮಾತ್ರ ನನ್ನ ಮುಖ ನೋಡಿ, ನನ್ನ ಅಕ್ಕ ಪಕ್ಕ ನಿಂತವರ ಕಡೆಯೆಲ್ಲಾ ಕಣ್ಣು ಹಾಯಿಸುತ್ತಾ ಪ್ರಶ್ನೆ ಮಾಡಿದ್ದ. ನಾನು ಎಷ್ಟು ಎತ್ತರದ ಪ್ರಶ್ನೆ ಮಾಡ್ತಿದೀನಿ ನೋಡಿ ಅನ್ನುವ ಭಾವ ಅವನ ಮುಖದಲ್ಲಿತ್ತು. ಅವನ ಸ್ವಭಾವ ಬತ್ತಲಾಗಿತ್ತು.

ಈ ತರಹದ ತುಂಬಾ ಜನರನ್ನು ನೋಡಿದ್ದೇನೆ. ಪಂಡಿತರ, ಸ್ವಾಮಿಗಳ ಮುಂದೆ ನಿಂತು ಚರ್ಚೆ ಮಾಡುವವರ ಧಾಟಿಯಲ್ಲಿ ಪ್ರಶ್ನೆ ಕೇಳುತ್ತಿರುತ್ತಾರೆ. ಅವರು ಏನೇ ಉತ್ತರ ಕೊಟ್ಟರೂ ಅದರ ವಿರುದ್ಧಪಕ್ಷದ ಮತ್ತೊಂದು ಪ್ರಶ್ನೆಯನ್ನು ಮುಂದಿಡುತ್ತಾರೆ. ಎದುರಿನವರ ಕಣ್ಣನ್ನು ದಿಟ್ಟಿಸಿ ಪ್ರಶ್ನೆ ಕೇಳುವದಿಲ್ಲ. ಅತ್ತಿತ್ತ ನಿಂತಿರುವ ಜನರನ್ನು ನೋಡುತ್ತ ನಾನೆಷ್ಟು ತಿಳಿದವನು ನೋಡಿ ಎಂಬ ಸಂದೇಶವನ್ನು ಕಣ್ಣಿನಲ್ಲಿಯೇ ರವಾನಿಸುತ್ತಿರುತ್ತಾರೆ. ಕೊಡುವ ಉತ್ತರದ ಬಗ್ಗೆ ಗಮನವೂ ಇರುವದಿಲ್ಲ. ನಮ್ಮ ಮಾತು ನಿಲ್ಲುತ್ತಿದ್ದ ಹಾಗೆಯೇ ಮತ್ತೊಂದು ಪ್ರಶ್ನೆ ನಾಲಿಗೆಯ ತುದಿಯಲ್ಲಿ ತಲೆ ಹೊರ ಹಾಕಿ ನಿಂತಿರುತ್ತದೆ. ನಾನು ನಿಖರವಾಗಿ ಮೂರನೆಯ ಉತ್ತರಕ್ಕೆ ಇಂಥವರ ಜತೆಯಲ್ಲಿ ಮಾತು ನಿಲ್ಲಿಸಿಬಿಡುವದನ್ನು ರೂಢಿಸಿಕೊಂಡಿದ್ದೇನೆ. ಉತ್ತರ ಖಾರವಾಗಿಯೇ ಇರುತ್ತದೆ.

‘‘ಅಭಿಪ್ರಾಯಗಳನ್ನು ಕೊಡಲಿಕ್ಕೆ ನಾನು ರಾಜಕಾರಣಿಯೂ ಅಲ್ಲ. ಶಾಸ್ತ್ರೀಯ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನಿಟ್ಟುಕೊಳ್ಳುವದಕ್ಕೆ ನಾನು ಕನ್ನಡ ಪುಸ್ತಕಗಳನ್ನು ಒದಿಕೊಂಡವನೂ ಅಲ್ಲ. ಈ ವಿಷಯದ ಬಗ್ಗೆ (ವಾದಿರಾಜರ ಋಜುತ್ವದ ಬಗ್ಗೆ) ನನಗೆ ಸ್ಪಷ್ಟವಾದ ನಿರ್ಣಯವಿದೆ. ಆ ನಿರ್ಣಯ ನಿಮಗೆ ಅರ್ಥವಾಗುವದಿಲ್ಲ. ಆದ್ದರಿಂದ ಹೇಳಿ ಉಪಯೋಗವಿಲ್ಲ’’ ಅಂತ ಅವನ ಮುಖವನ್ನೇ ದಿಟ್ಟಿಸಿ ನಿಧಾನವಾಗಿ ಆದರೆ ಧೃಢವಾಗಿ ಉತ್ತರಿಸಿದ್ದೆ.

‘‘ಅಲ್ಲಾ, ಅವರು ಆ ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ ’’ ಅಂತ ಪಂಡಿತರೊಬ್ಬರ ಹೆಸರನ್ನು ಉಲ್ಲೇಖಿಸಿ ಚರ್ಚೆಗಿಳಿಯಲು ಆರಂಭಿಸಿದ್ದ ಅವನ ಮಾತನ್ನು ಅರ್ಧಕ್ಕೇ ಕತ್ತರಿಸಿ ಹೇಳಿದ್ದೆ ‘‘ನೋಡಿ, ಹೀಗೆ ಕೆಲಸದವರು ಜಮಖಾನ ಎತ್ತಿ ದೀಪಗಳನ್ನು ಆರಿಸುತ್ತಿರುವ ಹಾಲಿನಲ್ಲಿ ನಿಂತು ಚರ್ಚೆ ಮಾಡುವ ವಿಷಯವಲ್ಲ ಇದು. ಮತ್ತೂ ನಿಮ್ಮಂಥವರ ಜತೆ ಚರ್ಚೆ ಮಾಡುವಷ್ಟು ದೊಡ್ಡವನೂ ನಾನಲ್ಲ’’ ಅವನಿಗರ್ಥವಾಗಿತ್ತು. ಸುಟ್ಟ ಬದನೇಕಾಯಿಯಂಥ ಮುಖ ಮಾಡಿಕೊಂಡು ಹೊರಟು ಹೋಗಿದ್ದ.

ನನಗಂಥಾ ಸಂದರ್ಭಗಳಲ್ಲಿ ತುಂಬ ಬೇಸರವಾಗುತ್ತದೆ. ಅನಾಯಾಸವಾಗಿ ಏರ್ಪೋರ್ಟಿನಲ್ಲಿ ಕೈಗೆ ಸಿಕ್ಕ ರಾಜಕಾರಣಿಯನ್ನು ನಿಲ್ಲಿಸಿ ಬೆಂಗಳೂರಿನ ಬಾಂಬ್ ಸ್ಫೋಟದ ಬಗ್ಗೆ ನಿಮ್ಮ ಅಭಿಪ್ರಾಯವೇನು ಅಂತ ಕೇಳುವ ಎಳಸು ಪತ್ರಕರ್ತರ ಧಾಟಿಯಲ್ಲಿ ಶಾಸ್ತ್ರೀಯ ವಿಷಯಗಳ ಬಗ್ಗೆ ಮಾತನಾಡುತ್ತಾರಲ್ಲಾ ಎಂದು. ಬಾಣಲೆಯ ಬಿಸಿ ತಡೆಯಲಾಗದೆ ಹಾರಿ ಹೊರ ಬಿದ್ದ ಅರೆ ಬೆಂದ ಜೋಳದ ಹಾಗಿನ ಜನ ಇವರು. ಆತುರದಲ್ಲಿ ಒಂದೆರಡು ಪುಸ್ತಕಗಳನ್ನು ಓದಿಕೊಂಡಿರುತ್ತಾರೆ. ಶಾಸ್ತ್ರಗ್ರಂಥಗಳ ಗಂಧವಿಲ್ಲದೆ, ಬರಿಯ ಪಂಡಿತರ ಸ್ವಾಮಿಗಳ ಒಡನಾಟದಲ್ಲಿದ್ದು ಅವರ ಖಾಸಗಿ ಬದುಕಿನ ಬಗ್ಗೆ ಹೀನಾಯವಾಗಿ ಮಾತನಾಡುವ ಮಂದಿಯ ಜತೆಯಲ್ಲಿ ಗಾಢ ಗೆಳೆತನವಿರುತ್ತದೆ. ತಿಳಿದದ್ದಕ್ಕಿಂತ ಹೆಚ್ಚಾಗಿ ಮಾತನಾಡುತ್ತಿರುತ್ತಾರೆ. ಅವರ ನಿಲುವಿನಲ್ಲೇ ಮತ್ತೊಬ್ಬರ ಬಗ್ಗೆ ತಿರಸ್ಕಾರವಿರುತ್ತದೆ. ತೀರ ಹೆಂಡತಿ ಮಕ್ಕಳೇ ಅವರ ಮಾತಿಗೆ ಬೆಲೆ ಕೊಡುತ್ತಿರುವದಿಲ್ಲ. ಅಂಥವರು ಏಕಾದಶೀ ಸಮಸ್ಯೆ, ಋಜುತ್ವದ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ.

ಪ್ರಶ್ನೆ ಕೇಳುವವರಿಗೆ ಒಂದು ಹಂತದ ಪಕ್ವತೆ ಇರಬೇಕು. ಇಲ್ಲವಾ, ಏನೂ ತಿಳಿಯದ ಮುಗ್ಧತೆ ಇರಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ಉತ್ತರದ ಬಗ್ಗೆ ಆಸಕ್ತಿಯಿರಬೇಕು. ಆ ವಿಷಯದ ಬಗ್ಗೆ ಶ್ರದ್ಧೆಯಿರಬೇಕು. ಅಂಥ ಪ್ರಶ್ನೆಗಳಿಗೆ ಮಾತ್ರ ನಾನು ಉತ್ತರಿಸುತ್ತೇನೆ.

ಪಕ್ವತೆ ಇರಬೇಕು ಅಂದೆನಲ್ಲ, ಆ ಪಕ್ವತೆಯೇನೂ ತೀರ ದೊಡ್ಡ ಮಟ್ಟದ್ದಲ್ಲ. ಶಾಸ್ತ್ರಗ್ರಂಥಗಳನ್ನು ಓದಿಕೊಂಡು, ಹತ್ತಾರು ವರ್ಷಗಳ ಅನುಷ್ಠಾನದ ನಂತರ ಬರುವಂಥ ಪಕ್ವತೆಯಲ್ಲ. ಸಂಧ್ಯಾವಂದನೆ ಏಕೆ ಮಾಡಬೇಕು ಎಂಬ ಪ್ರಶ್ನೆಯನ್ನು ಕೇಳುತ್ತಿದ್ದೀರಿ ಎಂದರೆ, ಸಂಧ್ಯಾವಂದನೆ ಅಂದರೆ ಏನು ಅಂತ ತಿಳಿದಿರಬೇಕು. ಅರ್ಘ್ಯ, ಜಪ, ತರ್ಪಣ ( ಇದು ತಿಲತರ್ಪಣವಲ್ಲ. ಸಂಧ್ಯಾವಂದನೆಯಲ್ಲಿ ಒಂದು ಪ್ರಧಾನವಾದ ಅಂಗ. ಈ ದಿವಸಗಳಲ್ಲಿ ಇದು ಮರೆಯಾಗಿದೆ) ಉಪಸ್ಥಾನಗಳ ಬಗ್ಗೆ ಕೇಳಿಯಾದರೂ ಗೊತ್ತಿರಬೇಕು. ಆಚಮನ, ಪ್ರಾಣಾಯಾಮಗಳನ್ನು ಒಂದೆರಡು ಬಾರಿಯಾದರೂ ಮಾಡಿರಬೇಕು. ಕನಿಷ್ಠಪಕ್ಷ ಸಂಧ್ಯಾವಂದನೆಯ ಹೆಸರಿನಲ್ಲಿ ನಾಕು ನಿಮಿಷವಾದರೂ ದೇವರ ಮನೆಯಲ್ಲಿ ಕುಳಿತು ಗೊತ್ತಿರಬೇಕು. ಆಗ ನೀವು ಮಾಡುವ ಪ್ರಶ್ನೆಗೊಂದು ನೆಲೆಯಿರುತ್ತದೆ. ನಾಕಾರು ಬಾರಿಯಾದರೂ ಸಂಧ್ಯಾವಂದನೆ ಮಾಡಿದ್ದರೆ, ಏಕಾಚಮನವೇಕೆ? ದ್ವಿರಾಚಮನವೇಕೆ ? ಮಾರ್ಜನದ ಉದ್ದೇಶವೇನು ಎಂಬ ಪ್ರಶ್ನೆಗಳು ನಿಮ್ಮಲ್ಲಿ ಒಡಮೂಡಿರುತ್ತವೆ. ಮತ್ತು ಉತ್ತರ ಹೇಳಬೇಕಾದರೆ ಅವರು ಆ ಶಬ್ದಗಳನ್ನು ಬಳಸಿದರೆ ನಿಮಗೆ ಸುಲಭವಾಗಿ ಅರ್ಥವಾಗುತ್ತದೆ. ಅದು ಬಿಟ್ಟು ನೆಗಡಿ ಹಿಡಿದಾಗ ಸ್ವಲ್ಪ ಬಿಸಿಲಿಗೆ ಬಂದತಕ್ಷಣ ಇದ್ದಕ್ಕಿದ್ದ ಹಾಗೆ ಸೀನುವ ಹಾಗೆ ಎದುರಿಗೊಬ್ಬ ಪಂಡಿತ ಸಿಕ್ಕ ತಕ್ಷಣ ಪ್ರಶ್ನೆ ಮಾಡಿಬಿಡಬಾರದು. ಪ್ರಶ್ನೆಗೆ ಉತ್ತರ ಪಡೆಯುವದು ಎಂದರೆ ಪ್ರಾಣಿಯೊಂದು ಆಹಾರವನ್ನು ಬೇಟೆಯಾಡಿದ ಹಾಗೆ. ತುಂಬ ಚಂಚಲವಾದ ಹುಳವನ್ನೇ ದಿಟ್ಟಿಸಿ ಧೇನಿಸಿತ್ತಾ ಕುಳಿತ ಕಪ್ಪೆ, ಆಯವಾದ ಸಮಯಕ್ಕಾಗಿ ಕಾದು, ನಾಲಿಗೆ ಚಾಚಿ ಗಸಕ್ಕನೇ ಹಿಡಿದು ಬಿಡುತ್ತದಲ್ಲ ಹಾಗಿರಬೇಕು ಉತ್ತರ ಪಡೆಯುವದಕ್ಕಾಗಿ ತಪನೆ. ತನಗೆ ಬರುವಷ್ಟು ಅರೆಬರೆ ಸಂಧ್ಯಾವಂದನೆಯನ್ನೇ ಒಂದೆರಡು ವಾರ ಮಾಡಿ, ಸಂಬಂಧಪಟ್ಟ ಪುಸ್ತಕಗಳನ್ನು ತಡಕಾಡಿ, ಸಮರ್ಥವಾಗಿ ಉತ್ತರಿಸಬಲ್ಲ ಪಂಡಿತರನ್ನು ಹುಡುಕಿಕೊಂಡು ಹೋಗಿ, ಶ್ರದ್ಧೆಯಿಂದ ಪ್ರಶ್ನೆ ಕೇಳಬೇಕು. ಸರಿಯಾದ ಉತ್ತರ ಸಿಗುತ್ತದೆ. ಅಷ್ಟೆ ಅಲ್ಲ. ಅದು ಪರಿಣಾಮ ಬೀರುತ್ತದೆ.

ನನ್ನ ಪರಿಚಯದ ಒಬ್ಬ ವ್ಯಕ್ತಿ ಹಾಗೆ ಮಾಡುತ್ತಿರುತ್ತಾರೆ. ಸಂತೋಷವಾಗುತ್ತದೆ. ಶಾಸ್ತ್ರದ ಬಗ್ಗೆ ತುಂಬ ತಿಳಿದುಕೊಂಡ ವ್ಯಕ್ತಿಯೇನಲ್ಲ. ಮೊದಲಿಗೆ ಇಸ್ಕಾನಿನ ಪ್ರಭಾವಕ್ಕೆ ಒಳಗಾಗಿದ್ದವರು. ಅಲ್ಲಿನ ಪುಸ್ತಕಗಳನ್ನು ಸಾಕಷ್ಟು ಖರೀದಿಸಿಟ್ಟಿದ್ದಾರೆ. ವಾರವೆಲ್ಲಾ ಆ ಪುಸ್ತಕಗಳನ್ನು ಓದಿ ಸಣ್ಣ ನೋಟ್ಸ್ ಮಾಡಿಕೊಂಡು, ಒಂದು ಹಾಳೆಯಲ್ಲಿ ಪ್ರಶ್ನೆಗಳನ್ನು ಬರೆದುಕೊಂಡು ಬಂದು ಕೇಳುತ್ತಿರುತ್ತಾರೆ. ತೀರ ತವಕಪಡಿಸಿದ ಪ್ರಶ್ನೆಯಿದ್ದರೆ ತಡೆಯಲಾಗದೆ ಫೋನ್ ಮಾಡಿಯೇ ಕೇಳಿಬಿಡುತ್ತಾರೆ. ನಾನು ಉತ್ತರಿಸುತ್ತೇನೆ. ಕಾರಣ ಅವರಿಗೆ ಅದರ ಬಗೆಗೊಂದು ಶ್ರದ್ಧೆಯಿದೆ. ಅದಕ್ಕಾಗಿ ಉತ್ತರ ಪಡೆಯುವ ಅರ್ಹತೆಯಿದೆ.

ಇನ್ನು ಮೂರನೆಯ ಗುಂಪಿನ ಜನ. ಮುಗ್ಧತೆಯಿಂದ ಪ್ರಶ್ನೆ ಕೇಳುವವರು. ಅಂಥವರು ತಮ್ಮ ಪ್ರಶ್ನೆ ಪ್ರಾಥಮಿಕ ಮಟ್ಟದ್ದು ಅಂತ ಸಂಕೋಚಪಟ್ಟುಕೊಳ್ಳುತ್ತಲೇ ಮಾತು ಆರಂಭಿಸುತ್ತಾರೆ. ಮತ್ತು ಇದರ ಬಗ್ಗೆ ನನಗೇನೂ ಗೊತ್ತಿಲ್ಲ ಅಂತ ಸಂಕೋಚವಿಲ್ಲದೇ ತಿಳಿಸಿಬಿಡುತ್ತಾರೆ. ಅವರಿಗೆ ಉತ್ತರ ಪಡೆಯುವಲ್ಲಿ ಕಾತರತೆ ಇರುತ್ತದೆ. ಇನ್ನೂ ವಿಷಯದ ಕುರಿತು ಶ್ರದ್ಧೆ ಮೂಡಿರುವದಿಲ್ಲ, ಆದರೆ ಗೌರವ, ಕುತೂಹಲಗಳು ಇರುತ್ತವೆ. ಅಂಥವರ ಪ್ರಶ್ನೆಗಳಿಗೆ ಉತ್ತರ ನೀಡಲಿಕ್ಕೆ ನನಗಂತೂ ತುಂಬ ಸಂತೋಷ. ಕಾರಣ ನಾಲ್ಕು ವರ್ಷದ ಮಗುವಿಗೆ ‘‘ಅಪ್ಪಾ, ಹಕ್ಕಿ ಯಾಕೆ ಕಿರುಚುತ್ತೆ’’ ಅಂತ ಪ್ರಶ್ನೆ ಮಾಡುವಾಗ ಇರುವ ಮುಗ್ಧತೆ ಅವರಿಗಿರುತ್ತದೆ. ಮಗುವಿಗೆ ನೀಡುವಷ್ಟೇ ತಾಳ್ಮೆಯಿಂದ ಉತ್ತರಿಸಬೇಕು.

ಆದರೆ ಈ ಮೂರೂ ಜನರ ಗುಂಪಿಗೆ ಸೇರದೆ ನಮ್ಮ ಮಕ್ಕಳಿಗಾಗಿ ಉತ್ತರ ಕೊಡಿ, ಮತ್ತೊಬ್ಬರಿಗಾಗಿ ಕೊಡಿ ಅಂತ ಇನ್ನೊಬ್ಬರ ಹೆಸರಿನಲ್ಲಿ ಪ್ರಶ್ನೆ ಕೇಳುತ್ತಾರಲ್ಲಾ, ಅವರ ಬಗ್ಗೆ ನನಗೆ ತುಂಬ ಅಲ್ಲದಿದ್ದರೂ ಕೆಂಪಿರುವೆ ಕಚ್ಚಿದಾಗ ಉರಿ ಆಗುತ್ತದಲ್ಲ ಅಷ್ಟು ಪುಟ್ಟ ಗಾತ್ರದ ಸಿಟ್ಟು ಬರುತ್ತದೆ. ಕಾರಣ, ಉತ್ತರ ನಿಜವಾಗಿಯೂ ಅವರಿಗೇ ಬೇಕಾಗಿರುತ್ತದೆ. ಸ್ವಲ್ಪ ಮಟ್ಟಿನ ತಿಳುವಳಿಕೆಯೂ ಇರುತ್ತದೆಯಾದ್ದರಿಂದ ಉತ್ತರವೂ ಅರ್ಥಮಾಡಿಕೊಳ್ಳಬಲ್ಲರು. ಆದರೆ ಪ್ರಶ್ನೆ ಕೇಳುವವರೆಲ್ಲಾ ಸಣ್ಣವರು ಅನ್ನುವ ಕೀಳಿರಿಮೆಗೆ ಅವರು ಒಳಗಾಗಿರುತ್ತಾರೆ. ‘‘ನನಗೆ ಗೊತ್ತು, ಆದರೆ ಹೇಳಲಿಕ್ಕೆ ಬರಲ್ಲ. ನೀವೇ ಹೇಳಿ’’ ಅಂತ ಬಡಪಾಯಿ ಗೆಳೆಯನಿಗೆ ಬ್ಯಾಟಿಂಗ್ ಮಾಡುವ ಛಾನ್ಸ್ ಕೊಡುವ ಪ್ರಬಲನ ಹಾಗೆ ಪಂಡಿತರಿಗೆ ಛಾನ್ಸ್ ಕೊಟ್ಟಿರುತ್ತಾರೆ.

ಇನ್ನೂ ಒಂದು ಪಂಗಡವಿದೆ. ಅವರಿಗೆ ಪ್ರಶ್ನೆಗಳೇ ಹುಟ್ಟುವದಿಲ್ಲ. ಪ್ರಶ್ನೆ ಮಾಡುವವರನ್ನಂತೂ ಯಾವುದೋ ಲೋಕದ ಪ್ರಾಣಿಗಳ ಹಾಗೆ ನೋಡುತ್ತಿರುತ್ತಾರೆ. ಅಪ್ಪ ಸತ್ತಾಗ ಪುರೋಹಿತರಿಗೆ ಎಲ್ಲವೂ ಶಾಸ್ತ್ರೋಕ್ತ(?) ವಾಗಿ ಆಗಬೇಕು, ಮಾಡಬೇಕಾದ್ದನ್ನೆಲ್ಲ ಮಾಡಿಸಿ ಅಂತ ಹೇಳ್ತಿರ್ತಾರಲ್ಲಾ, ಸಾಮಾನ್ಯವಾಗಿ ಅಂಥವರು ಈ ಗುಂಪಿಗೆ ಸೇರುತ್ತಾರೆ. ಅವರು ಪುರೋಹಿತನ ಪಾಂಡಿತ್ಯ-ಮೌಢ್ಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುವವರಲ್ಲ. ಮಡಿ ಮೈಲಿಗೆಗಳ ಬಗ್ಗೆ ಕನಸಿನಲ್ಲಿಯೂ ಗೊತ್ತಿರುವದಿಲ್ಲ. ಹೃದಯದ ಬಡಿತ ಪರೀಕ್ಷಿಸುವ ಡಾಕ್ಟರು ಜೋರಾಗಿ ಉಸಿರೆಳೆದುಕೊಳ್ಳಿ ಎಂದಾಗ ಸ್ವಲ್ಪ ಏರುಪೇರಾದರೂ ಈ ಡಾಕ್ಟರು ತಪ್ಪು ನಿರ್ಣಯಕ್ಕೆ ಬಂದುಬಿಟ್ಟಾನು ಎಂಬ ಗಾಬರಿಯಿಂದ ಶ್ರದ್ಧಾಪೂರ್ವಕವಾಗಿ ಉಸಿರೆಳೆದುಕೊಳ್ಳುವವರ ಹಾಗೆ ಪುರೋಹಿತರು ಹೇಳಿದಂತೆ ಮಾಡುತ್ತಿರುತ್ತಾರೆ. ಪ್ರಾಣಾಯಾಮ ಮಾಡಿ ಎಂದರೆ ಎರಡೂ ಮೂಗುಗಳ ದ್ವಾರಬಂಧನ ಮಾಡಿ, ಕಣ್ಗಳನ್ನು ಮುಚ್ಚಿ ಅಕ್ಷರಶಃ ಧ್ಯಾನಮಗ್ನರಂತೆ ಕುಳಿತುಬಿಡುತ್ತಾರೆ. ಅವರ ಒಂದೊಂದು ಕ್ರಿಯೆಗಳೂ, ಅವತಾರಗಳೂ ನೋಡುವವರಿಗೆ ಹಾಸ್ಯಾಸ್ಪದವಾಗಿ ಕಾಣುತ್ತಿರುತ್ತವೆ. ಅದಕ್ಕೆಲ್ಲ ಕಾರಣ, ಅವರಿಗೆ ಮಾಡುವ ಕಾರ್ಯದ ಬಗ್ಗೆ ಸರಿಯಾದ ತಿಳುವಳಿಕೆಯಿರುವದಿಲ್ಲ, ಗೌರವವಿರುವದಿಲ್ಲ. ಉಪನಯನದ ದಿವಸ ಹಚ್ಚಿಕೊಂಡು ಬಿಟ್ಟ ಗೋಪೀಚಂದನವನ್ನು ಮತ್ತೆ ಕೈಯಲ್ಲಿ ಹಿಡಿಯುತ್ತಿರುವದು ಅಪ್ಪನ ಹೆಣದ ಮುಂದೆಯೇ. ಈ ಎಲ್ಲ ಕಾರ್ಯಗಳನ್ನೂ ಬದುಕಿರುವ ಅಮ್ಮನ ತೃಪ್ತಿಗೋಸ್ಕರವೋ, ಬಂಧುಗಳ ಮುಂದಿನ ಗೌರವಕ್ಕಾಗಿಯೋ, ತನ್ನನ್ನು ತಾನು ನಾಸ್ತಿಕ ಎಂದು ಉದ್ಘೋಷಿಸಿಕೊಳ್ಳಲಾಗದ ಹೇಡಿತನದಿಂದಲೋ ಮಾಡುತ್ತಿರುತ್ತಾರೆ. ಅಂಥವರಿಗೆ ವಿಷಯವೇ ಗೊತ್ತಿರುವದಿಲ್ಲವಾದ್ದರಿಂದ ಪ್ರಶ್ನೆಯೂ ಹುಟ್ಟುವದಿಲ್ಲ. ಮತ್ತೆ ಆ ಕ್ರಿಯೆಗಳನ್ನು ಮಾಡುವ ಆಲೋಚನೆಯೇ ಇರುವದಿಲ್ಲವಾದ್ದರಿಂದ ಹುಟ್ಟಿದ ಪ್ರಶ್ನೆಗಳನ್ನೂ ಕೇಳುವದಿಲ್ಲ. ಈಗ ಮಾಡಿ ಕೈ ತೊಳೆದುಕೊಂಡರಾಯಿತು ಎಂಬ ಮನೋಭಾವದವರು.

ನೀವು ಕಡೆಯ ಗುಂಪಿನವರಲ್ಲದಿದ್ದರೆ ಒಂದು ಮಾತು ನೆನಪಿನಲ್ಲಿರಲಿ, ನಾವು ಮಾಡುವ ಪ್ರಶ್ನೆ, ಅದನ್ನು ಕೇಳುವ ರೀತಿ ಅಷ್ಟೇಕೆ ? ನಾವು ನಡೆಯುವದು ಕೂಡುವದು ಎಲ್ಲವೂ ನಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತಿರುತ್ತವೆ. ನಮ್ಮದು ತೂಕದ ವ್ಯಕ್ತಿತ್ವವಾಗಬೇಕಾದರೆ ಇಂಥ ಸಣ್ಣ ಪುಟ್ಟ ವಿಷಯಗಳ ಬಗ್ಗೆ ತೀರ ಜಾಗರೂಕರಾಗಿರಬೇಕು. ಪ್ರಶ್ನೆ ಕೇಳುವ ಮುನ್ನ ಪ್ರಶ್ನೆಯ ಬಗ್ಗೆ ತಿಳಿದುಕೊಂಡಿರುವ ಹಾಗೆ ಉತ್ತರ ಪಡೆಯುವ ಅರ್ಹತೆಯನ್ನೂ ಗಳಿಸಿಕೊಂಡಿರಬೇಕು. ಜ್ಯೌತಿಷ ಶಾಸ್ತ್ರದಲ್ಲಿ ಒಂದು ನಿಯಮವಿದೆ. ಮಹತ್ತ್ವದ ನಿರ್ಣಯವನ್ನು ತೆಗೆದುಕೊಳ್ಳುವದಕ್ಕಾಗಿ ಜ್ಯೋತಿಷಿಯನ್ನು ಪ್ರಶ್ನಿಸಬೇಕಾದರೆ ಅನುಸರಿಸಬೇಕಾದ ನಿಯಮ. ಮೊದಲಿಗೆ ತನಗೆ ಆಪ್ತನಾಗಬಲ್ಲ, ತಾನು ನೀಡುವ ದಕ್ಷಿಣೆಯನ್ನಷ್ಟೇ ಬಯಸದೇ ಹಿತವನ್ನೂ ಬಯಸುವ ಸಾತ್ವಿಕನಾದ ಜ್ಯೋತಿಷಿಯನ್ನು ಗುರುತಿಸಿಕೊಂಡಿರಬೇಕು. ಒಂದು ಒಳ್ಳೆಯ ದಿವಸ ಮುಂಜಾವಿನಲ್ಲಿಯೇ ದೇವರ ಪೂಜೆಯನ್ನು ಮುಗಿಸಿ, ಹೂ ಹಣ್ಣು ದಕ್ಷಿಣೆಗಳ ಸಮೇತ ಜ್ಯೋತಿಷಿಯ ಬಳಿಗೆ ಹೋಗಿ ಅವನಿಗೆ ನಮಸ್ಕರಿಸಿ ಪೂರ್ವಾಭಿಮುಖನಾಗಿ ಕುಳಿತು ಪ್ರಶ್ನೆ ಮಾಡಬೇಕು. ಆಗ ಮಾತ್ರ ಗ್ರಹದೇವತೆಗಳು ಪ್ರಸನ್ನರಾಗಿ ಸರಿಯಾದ ಮಾರ್ಗವನ್ನು ತೋರಿಸುತ್ತಾರೆ. ಜ್ಯೌತಿಷದಲ್ಲಿ ಪ್ರಶ್ನೆಗಳ ಕುರಿತೇ ಒಂದು ಗ್ರಂಥ ಬರೆದಿರುವ ನೀಲಕಂಠ ಈ ಮಾತನ್ನು ಹೇಳುತ್ತಾನೆ

ತಸ್ಮಾನ್ನೃಪಃ ಕುಸುಮರತ್ನಫಲಾಗ್ರಹಸ್ತಃ ಪ್ರಾತಃ ಪ್ರಣಮ್ಯ ವರಯೇದಪಿ ಪ್ರಾಙ್ಮುಖಸ್ಥಃ |
ಹೋರಾಂಗಶಾಸ್ತ್ರಕುಶಲಾನ್ ಹಿತಕಾರಿಣಶ್ಚ ಸಂಗೃಹ್ಯ ದೈವಕಗಣಾನ್ ಸಕೃದೇವ ಪೃಚ್ಛೇತ್ ॥

ನಶ್ವರವಾದ ಬದುಕಿಗೆ ಸಂಬಂಧಪಟ್ಟ ಒಂದು ಪ್ರಶ್ನೆಯನ್ನು ಕೇಳಬೇಕಾದರೇ ಈ ಪರಿಯ ಶ್ರದ್ಧೆ ಆವಶ್ಯಕವಿದ್ದಾಗ ಸಂಧ್ಯಾವಂದನೆಯಂತಹ ಮೋಕ್ಷಸಾಧನ ಕರ್ತವ್ಯದ ಕುರಿತು, ಆಚಾರ್ಯರ ಶಾಸ್ತ್ರದ ಪ್ರಮೇಯಗಳ ಕುರಿತು ಪ್ರಶ್ನೆ ಮಾಡುವಾಗ ಎಷ್ಟು ಶ್ರದ್ಧೆಯಿರಬೇಕು, ನೀವೇ ಹೇಳಿ.

ಮತ್ತು, ಇದೇನು ಹೊಸ ವಿಷಯವಲ್ಲ. ಎಷ್ಟು ದಿವಸಗಳು ಜ್ಯೋತಿಷಿಗಳ ಮನೆಬಾಗಿಲಲ್ಲಿ ನೀವು ಗಂಟೆಗಟ್ಟಲೇ ಕುಳಿತಿಲ್ಲ ? ಅದ್ಯಾವುದೋ ಊರಲ್ಲಿ ಯಾರೋ ಪ್ರಶ್ನೆ ಹಾಕ್ತಾರಂತೆ ಅಂತ (ಅಂದರೆ ನಾವು ಹಾಕಿದ ಪ್ರಶ್ನೆಗೆ ಉತ್ತರ ಹೇಳ್ತಾರಂತೆ ಅಂತ ಅರ್ಥ) ಯಾರೋ ದೈವಪ್ರೇರಿತರಾಗಿ ಉತ್ತರ ಹೇಳ್ತಾರಂತೆ ಅಂತ ನೂರಾರು ರೂಪಾಯಿ ಖರ್ಚ ಮಾಡಿಕೊಂಡು ಹೋಗಿ, ಮೈ ದಣಿಯೆ ಕಾದು ನಿಂತು ಪ್ರಶ್ನೆ ಕೇಳಿ ಬಂದಿಲ್ಲ? ಅದು ತಪ್ಪು ಅಂತ ಖಂಡಿತ ನಾನು ಹೇಳುತ್ತಿಲ್ಲ. ಜೀವನದ ಸವಾಲು, ಕಷ್ಟ ಸುಖಗಳ ಸವಾಲು ಅವಶ್ಯವಾಗಿ ಕೇಳಿ. ಒಳ್ಳೆಯದಾಗಲಿ ನಿಮಗೆ. ಆದರೆ ಒಬ್ಬ ಜ್ಯೋತಿಷಿಯನ್ನು ಕೇಳಬೇಕಾದರೆ ಶ್ರದ್ಧೆ ವಿನಯ ಭಕ್ತಿಗಳಿಂದ ಮುದುಡಿ ಕೇಳಿ, ಜೀವದ ಉದ್ಧಾರಕ್ಕೆ ಕಾರಣವಾಗುವ ಪ್ರಶ್ನೆಗಳನ್ನು ಮಾತ್ರ ಉಡಾಫೆ, ದುರಹಂಕಾರ, ನನ್ನನ್ನು ಸಣ್ಣವನು ಎಂದು ತಿಳಿದುಬಿಟ್ಟಾರು ಎಂಬ ಕಸಿವಿಸಿ, ಪಂಡಿತರನ್ನು ಕಿಚಾಯಿಸುವ ಸಣ್ಣತನಗಳ ಜತೆಯಲ್ಲಿ ಕೇಳುವದು ತಪ್ಪಲ್ಲವಾ ಎಂಬುದಷ್ಟೇ ನನ್ನ ಪ್ರಶ್ನೆ.

ಷಟ್ಪ್ರಶ್ನೋಪನಿಷತ್ ಅಂತ ಒಂದು ಉಪನಿಷತ್ತಿದೆ. ಶಾಸ್ತ್ರಗ್ರಂಥಗಳ ಬಗ್ಗೆ ಸ್ವಲ್ಪ ತಿಳುವಳಿಕೆಯಿದ್ದರೂ ಆ ಹೆಸರನ್ನು ನೀವು ಕೇಳಿರುತ್ತೀರಿ. ಶ್ರೀಮದಾಚಾರ್ಯರು ಆ ಉಪನಿಷತ್ತಿಗೆ ಭಾಷ್ಯವನ್ನು ರಚಿಸಿದ್ದಾರೆ. ಆ ಉಪನಿಷತ್ತು ಆರು ಪ್ರಶ್ನೆಗಳನ್ನು ಕುರಿತದ್ದು. ಭಗವಂತನ ಮತ್ತು ಮುಖ್ಯಪ್ರಾಣದೇವರ ಮಾಹಾತ್ಮ್ಯವನ್ನು ಉತ್ತರವಾಗಿ ಹೊಂದಿರುವ ಪ್ರಶ್ನೆಗಳವು. ಅವುಗಳಿಗೆ ಉತ್ತರ ಪಡೆಯಲಿಕ್ಕಾಗಿ ಆರು ಜನ ಋಷಿಕುಮಾರರು ಪಿಪ್ಪಲಾದ ಮಹರ್ಷಿಗಳ ಬಳಿ ಬರುತ್ತಾರೆ. ನಿಮ್ಮನ್ನು ಪ್ರಶ್ನೆ ಕೇಳಬೇಕು ಎಂದಾಗ ಪಿಪ್ಪಲಾದರು ಏನು ಹೇಳುತ್ತಾರೆ ಗೊತ್ತೆ ? ‘‘ಸಂವತ್ಸರಂ ಸಂವತ್ಸ್ಯಥ’’ ‘ಒಂದು ವರ್ಷ ಬ್ರಹ್ಮಚರ್ಯದಲ್ಲಿದ್ದು ಸೇವೆ ಮಾಡಿರಿ. ಆ ಬಳಿಕ ಪ್ರಶ್ನೆ ಕೇಳಿ’ ಅಂತರ್ಯಾಮಿಯ ಕುರಿತ ಒಂದು ಸಣ್ಣ ಪ್ರಶ್ನೆಯೂ ನಮ್ಮನ್ನು ಎತ್ತರಕ್ಕೆ ಕರೆದೊಯ್ಯುತ್ತದೆ. ಆದ್ದರಿಂದ ಆ ಪ್ರಶ್ನೆಯ ಬಗ್ಗೆ ಅಷ್ಟು ಆದರವಿರಬೇಕು, ಉತ್ತರಕ್ಕಾಗಿ ತಪಿಸಬೇಕು ಎಂದವರ ಅಭಿಮತ.

ಮೊನ್ನೆಯ ಸೌಪರ್ಣೀಶಬ್ದಾರ್ಥದ ಉಪನ್ಯಾಸದಲ್ಲಿ, ಬನ್ನಂಜೆಯ ಶಿಷ್ಯನೊಬ್ಬ ಬನ್ನಂಜೆಯ ಮುಂದೆ ಕುಳಿತು ಮೂರ್ಖನಂತೆ ನಗಾಡಿಕೊಂಡು ಅವರನ್ನು ಪ್ರಶ್ನೆ ಮಾಡಿದ್ದನ್ನು ನೀವೆಲ್ಲ ಕೇಳಿದ್ದೀರಿ. ಮಹಾಭಾರತ ಎನ್ನುವ ಶಬ್ದದ ಅರ್ಥವನ್ನು ತಿಳಿಯುವದರಿಂದ ಮಹತ್ತರಪಾಪಗಳ ವಿಮುಕ್ತಿಯಾಗುತ್ತದೆ ಎಂದು ಶ್ರೀಮದಾಚಾರ್ಯರು ಗೀತಾಭಾಷ್ಯದಲ್ಲಿ ಹೇಳುತ್ತಾರೆ. “ನಿರುಕ್ತಮಸ್ಯ ಯೋ ವೇದ ಸರ್ವಪಾಪೈಃ ಪ್ರಮುಚ್ಯತೇ” ಎಂದು. ಹಾಗೆಯೇ, ಸುಪರ್ಣೀ, ಸೌಪರ್ಣಿ ಎನ್ನುವ ಶಬ್ದದ ಅರ್ಥವನ್ನು ತಿಳಿಯುವದರಿಂದ, ಪಾಪ ಪರಿಹಾರವಾಗುತ್ತದೆ. ಉನ್ನತಿಯಾಗುತ್ತದೆ. ವೇದಾಭಿಮಾನಿದೇವತೆಯಾದ ಗರುಡಪತ್ನಿಯ ಹೆಸರಿನ ಅರ್ಥವನ್ನು ತಿಳಿಯುವದರಿಂದ ಭಗವಂತ ಪ್ರೀತನಾಗುತ್ತಾನೆ. ಅಷ್ಟೇಅಲ್ಲ, ಸ್ವಯಂ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ಭರತನ ಭಾರ್ಯೆ ಆದ್ದರಿಂದಲೇ ಭಾರತೀ ಎಂದು ಭಾರತೀಶಬ್ದದ ಅರ್ಥವನ್ನು ತಿಳಿಸಿದ್ದಾರೆ. ಅಂತಹ ಸರ್ವಶ್ರೇಷ್ಠ ಪ್ರಮೇಯದ ಪ್ರಶ್ನೆಯನ್ನು ಮಾಡಬೇಕಾದರೆ, ತಿರಸ್ಕಾರದಿಂದ ನಗಾಡಿಕೊಂಡು ಪ್ರಶ್ನೆ ಮಾಡುವದು ಆ ವ್ಯಕ್ತಿಯ ಎತ್ತರ ಏನು ಎನ್ನುವದನ್ನು ಸಾಬೀತು ಪಡಿಸುತ್ತದೆ.

ಕೋಗಿಲೆ ಹೇಗೆ ಹಾಡಬೇಕು ಎನ್ನುವದನ್ನು ಕಲಿಸುವಂತೆ ಕತ್ತೆ ಹೇಗೆ ಹಾಡಬಾರದು ಎನ್ನುವದನ್ನೂ ಕಲಿಸುತ್ತದೆ.

ಶ್ರೀಮದಾಚಾರ್ಯರ ಸಿದ್ಧಾಂತದ ಕುರಿತು ಪ್ರಶ್ನೆ ಮಾಡುವಾಗ ಇಡಿಯ ಜೀವದ ಎಚ್ಚರದಿಂದ ಪ್ರಶ್ನೆಯನ್ನು ಮಾಡಬೇಕು.

ನಾವು ಎಷ್ಟು ಶ್ರದ್ಧೆ, ಉತ್ಸಾಹ, ಗೌರವಗಳಿಂದ ಪ್ರಶ್ನೆ ಕೇಳುತ್ತೀವೋ, ಅಷ್ಟು ಆಚಾರ್ಯರಿಗೆ ಪ್ರಿಯರಾಗುತ್ತೇವೆ ಮತ್ತು ನಮಗೆ ಸರಿಯಾದ ಉತ್ತರವನ್ನು ನೀಡಿಸುತ್ತಾರೆ.

– ವಿಷ್ಣುದಾಸ ನಾಗೇಂದ್ರಾಚಾರ್ಯ

ಇವುಗಳೂ ನಿಮಗಿಷ್ಟವಾಗಬಹುದು

vishwanandini-020

ವಿಶ್ವನಂದಿನಿ ಲೇಖನ ಮಾಲೆ – 020

ಶ್ರೀಕನಕದಾಸರ ಹರಿಭಕ್ತಿಸಾರ ವಿಷ್ಣುದಾಸರ ಸಾರಾಮೃತವ್ಯಾಖ್ಯಾನದೊಂದಿಗೆ ಪದ್ಯ – ೨ ದೇವದೇವ ಜಗದ್ಭರಿತ ವಸು- ದೇವಸುತ ಜಗದೇಕನಾಥ ರ- ಮಾವಿನೋದಿತ ಸಜ್ಜನಾನತ …

Leave a Reply

Your email address will not be published. Required fields are marked *