ತತ್ವಸುರಭಿ
ಸಂಸಾರವನ್ನು ಗೆಲ್ಲಬೇಕಾದರೆ ನಾವಿದನ್ನು ಅನುಷ್ಠಾನಕ್ಕೆ ತರಲೇಬೇಕು.
ಉತ್ತಮ ಲೇಖಕರ ಲೇಖನಗಳನ್ನು ಓದಿದಾಗ, ಉತ್ತಮ ವಾಗ್ಮಿಗಳ ಮಾತನ್ನು ಆಲಿಸಿದಾಗ, ಅವರ ಕೆಲವು ಮಾತುಗಳು ಮನಸ್ಸಿನಸಲ್ಲಿ ಅಚ್ಚಳಿಯದೇ ನಿಂತುಬಿಡುತ್ತವೆ. ಅನೇಕ ಬಾರಿ ಅದನ್ನು ಮೆಲುಕು ಹಾಕುತ್ತಿರುತ್ತೇವೆ. ಐದು ಸಾವಿರವರ್ಷಗಳ ಹಿಂದೆ ಈ ಭರತಭೂಮಿಯಲ್ಲಿ ಒಬ್ಬ ವಾಗ್ಮಿ, ‘ವಾಗ್ವಿದಾಂವರ’ ಅವತರಿಸಿದ್ದ. ಅವನ ಒಂದು ಮಾತಲ್ಲ, ಅವನ ಇಡಿಯ ಗ್ರಂಥಕ್ಕೆ ಗ್ರಂಥ ಸಾಧಕನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದುಬಿಡುವ ಗ್ರಂಥ. ಆ ಗ್ರಂಥದ ಹೆಸರು ಭಗವದ್ಗೀತೆ. ಅದನ್ನು ಹೇಳಿದ ವಾಗ್ಮಿ ಶ್ರೀಕೃಷ್ಣ.
ಆ ಗೀತೆಯ ಪ್ರತಿಯೊಂದು ವಾಕ್ಯ, ಪ್ರತಿಯೊಂದು ಶಬ್ದ ಅನೇಕಾರ್ಥಗರ್ಭಿತ. ಅನೇಕಧ್ವನಿಗರ್ಭಿತ. ಅನೇಕತತ್ವಗರ್ಭಿತ. ನೀವು ದುಃಖದಲ್ಲಿದ್ದಾಗ ಗೀತೆಯನ್ನು ಓದಿ, ಗೀತಮ್ಮ ತಾಯಿಯಾಗಿಬಿಡುತ್ತಾಳೆ, ನಿಮ್ಮನ್ನು ಸಾಂತ್ವನಗೊಳಿಸುತ್ತಾಳೆ. ನೀವು ಜೀವನದ ಹೋರಾಟದಲ್ಲಿ ಬಳಲಿ, ಸೋತು ಗೀತೆಯನ್ನು ಓದಿ, ಗೀತಕ್ಕ ನಿಮ್ಮನ್ನು ಸಂತೈಸಿ ಹುರುದುಂಬಿಸುತ್ತಾಳೆ, ಹೋರಾಟ ಇನ್ನೂ ಮುಗಿದಿಲ್ಲ, ಸೋಲೊಪ್ಪಬೇಡ ಮುನ್ನುಗ್ಗು ಎಂದು ಹುರುದುಂಬಿಸುತ್ತಾಳೆ. ಜೀವನದಲ್ಲಿ ಗೆದ್ದು, ಸಂತಸದಿಂದ ನಲಿವಾಗ ಗೀತೆಯನ್ನು ಓದಿ, ಗೀತಾ ನಿಮ್ಮ ಮಡಿಲ ಮಗುವಾಗಿ ನಿಮ್ಮ ಸಂತಸವನ್ನು ನೂರ್ಪಟ್ಟು ಮಾಡುತ್ತಾಳೆ. ಇಡಿಯ ಜಗತ್ತಿನ ವಿಷಯ ಯಾವುದೂ ಬೇಡ ನನಗೆ ಶಾಶ್ವತ ತತ್ವಬೇಕು ಎಂದು ಗೀತೆಯ ಮುಂದೆ ಕೂಡಿ, ಗೀತಾದೇವಿ ನಿಮಗೆ ತತ್ವಾಮೃತವನ್ನು ಧಾರೆಯೆರೆಯುತ್ತಾಳೆ, ನೀವೆಷ್ಟು ಬಯಸುತ್ತೀರೋ ಅಷ್ಟು ಜ್ಞಾನವನ್ನು ನೀಡುತ್ತಾಳೆ. ಪರಮಾತ್ಮನ ಆ ನುಡಿ ನಮ್ಮ ಜೀವನದ ಅವಿಭಾಜ್ಯ ಅಂಗವಾದರೆ ಈ ಭವದ ಬೇಗೆಯಿಂದ ಪರಿಹಾರ ನಿಶ್ಚಿತ.
ಆ ಗೀತೆ, ನೂರಾರು ನಲ್ನುಡಿಗಳ ನಿಧಿ. ಮತ್ತೆಮತ್ತೆ ಮೆಲುಕುಹಾಕಬೇಕಾದ ನುಡಿಗಳು. ಅಂತಹ ನುಡಿಮಾಲೆಯಲ್ಲಿ ಒಂದು ರತ್ನವಿದೆ. ಬೆಲೆ ಕಟ್ಟಲಾಗದ ರತ್ನ. ಒಂದರ್ಥದಲ್ಲಿ ಜಗದ್ಗುರುವಾದ ಪರಮಾತ್ಮ ನಮಗೊಡ್ಡಿರುವ ಸವಾಲು. ನಾವು ಗೆಲ್ಲಲೇಬೇಕಾದ, ಒಂದಲ್ಲ ಒಂದು ದಿವಸ ಗೆಲ್ಲುವ ಸವಾಲು. ಜಯ ನಮಗೇ ನಿಶ್ಚಿತ. ಅದು ಮನಮುಟ್ಟುವಂತೆ ಪಾಠ ಹೇಳಿದ ಗುರುಗಳು ನಮ್ಮನ್ನು ಗೆಲ್ಲಿಸಲಿಕ್ಕೇ ಪರೀಕ್ಷೆಯನ್ನು ಒಡ್ಡಿದಂತೆ. ಆ ಮಾತು ಸಾಧನದ ಯಾವ ಹಂತದಲ್ಲಿ ನಾವಿದ್ದೇವೆ ಎನ್ನುವದನ್ನು ತಿಳಿಸುತ್ತದೆ. ಆ ಮಾತು ಭಗವಂತನಿಂದ ನಾವೆಷ್ಟು ದೂರವಿದ್ದೇವೆ ಎನ್ನುವದನ್ನು ಹೇಳುತ್ತದೆ. ಆ ಮಾತು ಸಂಸಾರಸಾಗರದಲ್ಲಿ ನಾವೆಷ್ಟು ಆಳದಲ್ಲಿ ಮುಳುಗಿದ್ದೀವಿ ಎನ್ನುವದನ್ನು ಮನಗಾಣಿಸುತ್ತದೆ. ಆ ಮಾತು ನಮ್ಮನ್ನು ಅದೇ ಸಾಗರದಿಂದ ಮೇಲೆದ್ದು ಬರಲು ಪ್ರೇರಿಸುತ್ತದೆ. ಆ ಮಾತು ಈಜಾಡುವ ಕೈಗೆ ಆನೆಯ ಬಲವನ್ನು ನೀಡುತ್ತದೆ. ಆ ಮಾತು ನಮ್ಮ ಜೀವನದ ನಿತ್ಯಮಂತ್ರವಾಗಬೇಕು. ಆ ಮಾತು –
ಶಕ್ನೋತೀಹೈವ ಯಃ ಸೋಢುಂ ಪ್ರಾಕ್ ಶರೀರವಿಮೋಕ್ಷಣಾತ್
ಕಾಮಕ್ರೋಧೋದ್ಭವಂ ವೇಗಂ ಸ ಯುಕ್ತಃ ಸ ಸುಖೀ ನರಃ
ದೇವರ ಪೂಜೆ ಮಾಡುತ್ತ ಕುಳಿತಿರುತ್ತೇವೆ, ಸಣ್ಣ ಮನೆ, ಪಕ್ಕದಲ್ಲೇ ಹೆಂಡತಿ ಅಡಿಗೆ ಮಾಡುತ್ತಿರುತ್ತಾಳೆ. ಇದ್ದಲಿ ಉರಿಯುತ್ತ ಸಿಡಿದು ಒಂದು ಸಣ್ಣ ಕಿಡಿ ನಮ್ಮ ಮೇಲೆ ಹಾರುತ್ತದೆ. ದೇವರ ಪೂಜೆ ಮಾಡುತ್ತಿದ್ದೇವೆ ಎನ್ನುವದನ್ನೂ ಮರೆತು ಅವಳ ಮೇಲೆ ಕಿರುಚಾಡುತ್ತೇವೆ. ಬಾಯಿಗೆ ಬಂದಹಾಗೆ ಬಯ್ಯುತ್ತೇವೆ. ಸಮಾಧಾನದಿಂದ ಪೂಜೆ ಮಾಡಲೂ ಬಿಡುವದಿಲ್ಲ ಎನ್ನುತ್ತೇವೆ.
ದಿನಪತ್ರಿಕೆಯಲ್ಲಿ ಏನನ್ನೋ ಓದುತ್ತ ಕುಳಿತಿರುತ್ತೇವೆ. ಯಾವುದೋ ಗಂಭೀರವಿಷಯವಿರುತ್ತದೆ. ಭೂಕಂಪವೋ, ಚಂಡಮಾರುತವೋ ಆಗಿ ಸಾವಿರಾರು ಜನ ಸಾವನ್ನಪ್ಪಿರುತ್ತಾರೆ. ಮನಸ್ಸಿಗೆ ಬೇಸರವಾಗಿರುತ್ತದೆ. ಪುಟವನ್ನು ತಿರುಗಿಸುತ್ತೇವೆ. ಯಾವುದೋ ಹುಡುಗಿಯ ಚಿತ್ರ ಅಲ್ಲಿರುತ್ತದೆ. ಮನುಷ್ಯ ಬೇಸರವನ್ನೂ ಮರೆತು ಆಸೆಯಿಂದ ಆ ಚಿತ್ರವನ್ನು ನೋಡುತ್ತಾನೆ. ಆಗಲೇ ಕಾಮ ಭುಗಿಲೆದ್ದು ಬಿಡುತ್ತದೆ.
ಶ್ರೀಕೃಷ್ಣ ಈ ವಿಷಯದ ಬಗ್ಗೆ ಮಾತನಾಡುತ್ತಿದ್ದಾನೆ.
ಒಂದಲ್ಲ ಒಂದು ದಿವಸ ಎಲ್ಲರೂ ಸಾಯಲೇಬೇಕು. ನಾವು ಸಾಯುತ್ತೇವೆ. ಯಾವ ದೇಹದ ಮೇಲೆ ಒಂದು ಸಣ್ಣ ಬೆಂಕಿಯ ಕಿಡಿ ಬಿದ್ದಾಗ ಹೆಂಡತಿಯ ಮೇಲೆ ಅಗ್ನಿಪರ್ವತವನ್ನೇ ಸುರಿಸಿದ್ದೆವೋ ಅದೇ ದೇಹವನ್ನು ಹೊತ್ತು ಚಿತೆಯ ಮೇಲಿಟ್ಟು, ಸರಿಯಾಗಿ ಸುಡಲಿ ಅಂತ ತುಪ್ಪವನ್ನು ಸುರಿದು ಬೆಂಕಿಯಿಡುತ್ತಾನೆ ಮಗ. ಮೂರಾಳು ಉದ್ದಕ್ಕೆ ಬೆಂಕಿ ಹೊತ್ತಿ ಉರಿಯುತ್ತದೆ. ಧಗದ್ಧಗಿತ ಬೆಂಕಿಯಲ್ಲಿ ನಮ್ಮ ಆರಡಿ ದೇಹ ಬೂದಿಯಾಗಿ ಬದಲಾಗಿ ಬಿಡುತ್ತದೆ. ನಾವು ಅರಚುವದಿಲ್ಲ. ಚೀರುವದಿಲ್ಲ, ರೇಗುವದಿಲ್ಲ. ಯಾಕೆಂದರೆ, ದೇಹವನ್ನು ಬಿಟ್ಟಾಗಿದೆ. ನಮಗೆ ನೋವಾಗುತ್ತಿಲ್ಲ.
ಅದೇ ಹೆಣದ ಮುಂದೆ ಅದೆಂಥ ಸುರಸುಂದರಿ ಬಂದು ನಿಂತರೂ ಅ ದೇಹಕ್ಕೆ ವಿಕಾರವಿಲ್ಲ. ತೆಪ್ಪಗೆ ಕೊರಡಿನಂತೆ ಬಿದ್ದಿರುತ್ತದೆ. ಅದೇ ದೇಹವನ್ನು ಶ್ರೀಗಂಧದ ಕಟ್ಟಿಗೆಗಳಲ್ಲಿ ಸುಟ್ಟರೂ, ಬಂಗಾರದ ಚಿತೆಯಲ್ಲಿ ಎತ್ತಿಕೊಂಡು ಹೋದರೂ, ರತ್ನದ ಅಭಿಷೇಕವನ್ನೇ ಅದಕ್ಕೆ ಮಾಡಿಸಿದರೂ ನಮಗೆ ವಿಕಾರವಾಗುವದಿಲ್ಲ. ಕಾರಣ, ದೇಹವನ್ನು ಬಿಟ್ಟಾಗಿದೆ, ಅಭಿಮಾನ ನಶಿಸಿಹೋಗಿದೆ.
ಕೃಷ್ಣ ಹೇಳುತ್ತಾನೆ, ಅರ್ಜುನ, ಕಾಮ ಕ್ರೋಧಗಳ ವೇಗ ಅತಿಯಾದದ್ದು. ಅವು ಅಬ್ಬರಿಸಿ ಬರುವ ಚಂಡಮಾರುತದಂತೆ. ಆ ಕಾಮಕ್ರೋಧಗಳ ವೇಗವನ್ನು ಮನುಷ್ಯ ತಡೆಯಬಲ್ಲನಾದರೆ, ಸತ್ತ ಮೇಲಲ್ಲ, ಸಾಯುವದಕ್ಕಿಂತ ಮುಂಚೆ, ಪ್ರಾಕ್ ಶರೀರವಿಮೋಕ್ಷಣಾತ್, ಆ ಕಾಮಕ್ರೋಧಗಳ ವೇಗಕ್ಕೆ ಎದೆಯೊಡ್ಡಿ ನಿಂತು ಆ ಕಾಮಕ್ರೋಧಗಳ ತಲೆಯ ಮೇಲೆ ಕಾಲನ್ನಿಡಬಹುದಾದರೆ ಅವನು ಗೆದ್ದುಬಿಡುತ್ತಾನೆ. ಸ ಯುಕ್ತಃ. ಸಃ ಸುಖೀ. ಆ ಮನುಷ್ಯನೇ ಯೋಗಿ. ಆ ಮನುಷ್ಯನೇ ಸುಖಿ.
ಸಾಧನೆ ಎನ್ನುವದು ಒಂದೇ ದಿವಸದಲ್ಲಿ ಮಾಡಿ ಮುಗಿಸುವ ಕೆಲಸವಲ್ಲ. ಅದಕ್ಕೆ ಜನ್ಮಜನ್ಮಾಂತರಗಳ ಅಭ್ಯಾಸ ಬೇಕು. ತಪಸ್ಸು ಬೇಕು. ಆ ತಪಸ್ಸನ್ನು ಇಂದಿನಿಂದ ಆರಂಭಿಸಬೇಕು. ಈ ಕಾಮಕ್ರೋಧಗಳಲ್ಲಿ ಮೊದಲಿಗೆ ಕ್ರೋಧವನ್ನು ತೆಗೆದುಕೊಳ್ಳಿ. ಇದನ್ನು ಪೂರ್ಣ ಬಿಡಲು ಸಾಧ್ಯವಿಲ್ಲವಾ, ಒಂದೊಂದಾಗಿ ಬಿಡುತ್ತ ಬನ್ನಿ. ಕನಿಷ್ಠಪಕ್ಷ, ದೇವರ ಪೂಜೆಗೆ ಕುಳಿತಾಗ ನಾನು ವದರಾಡುವದಿಲ್ಲ ಎಂದು ನಿಶ್ಚಯ ಮಾಡಿ. ದೇವರ ಪೂಜೆ ಎಂದರೆ ನಮ್ಮ ಬಿಂಬರೂಪಿಯಾದ ಪರಮಾತ್ಮನನ್ನು ಪ್ರತಿಮೆಯಲ್ಲಿ ಆವಾಹಿಸಿ ಅರ್ಚಿಸುವದು. ನಮ್ಮ ಮನೆಗೆ ಹಿರಿಯರು ಬಂದಾಗ, ಗುರುಗಳು ಬಂದಾಗ ಅತಿಥಿಗಳು ಬಂದಾಗ ನಾವು ಕಿರುಚಾಡುತ್ತೇವೆಯಾ, ಇಲ್ಲ. ಅಂದ ಮೇಲೆ ಸರ್ವೋತ್ತಮನಾದ ಜಗದ್ಗುರು, ಸ್ವಾಮಿ, ಅಂತರ್ಯಾಮಿ ಪ್ರತಿಮೆಯಲ್ಲಿ ನಮ್ಮ ಪೂಜೆಯನ್ನು ಸ್ವೀಕರಿಸುತ್ತ ಕುಳಿತಾಗ ವದರಾಡುವದು ಮಹಾಪರಾಧ. ಆಗ ವದರಾಡುವದರಿಂದ ಕೇವಲ ಮನಸ್ಸು ಕಲುಷಗೊಳ್ಳುವದಷ್ಟೇ ಅಲ್ಲ, ಮಹತ್ತರವಾದ ಪಾಪ ಸಹಿತ ಬರುತ್ತದೆ. ಕ್ರೋಧವನ್ನು ನಿಯಂತ್ರಿಸಿ. ಸಿಟ್ಟನ್ನು ಸುಟ್ಟುಹಾಕಿ.
ಪೂರ್ಣವಾಗಿ ಬಿಡಲು ಸಾಧ್ಯವಿಲ್ಲವಾ, ಕಡೇಪಕ್ಷ, ಸರಿಯಾದ ಕಾರಣಕ್ಕೆ ಸಿಟ್ಟಿಗೆ ಬನ್ನಿ. ಮಗ ಅವನೀತಿಯಿಂದ ಮಾತನಾಡುತ್ತಿದ್ದರೆ, ದಾರಿತಪ್ಪುತ್ತಿದ್ದರೆ ಅವಶ್ಯವಾಗಿ ಸಿಟ್ಟಿಗೆ ಬನ್ನಿ, ಅವನಿಗೆ ಗದರಿಸಿ ಬುದ್ಧಿ ಹೇಳಿ. ಮಗಳು ಮೂರ್ಖತನದಿಂದ ವರ್ತಿಸಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾಳಾ, ಅವಳನ್ನು ಗದರಿಸಿ ಹಾದಿಗೆ ತನ್ನಿ. ಹೆಂಡತಿ, ಮಾತನಾಡಬಾರದ್ದನ್ನು ಮಾತನಾಡುತ್ತ, ಮಾಡಬಾರದನ್ನು ಮಾಡುತ್ತ ಊರಿನ ಸುದ್ದಿಯನ್ನೆಲ್ಲ ಹರಡಿಕೊಂಡು ಮನೆಯನ್ನು ಮಾರುಕಟ್ಟೆಯಂತೆ ಮಾಡುತ್ತಿದ್ದಾಳಾ, ಸಿಟ್ಟಿಗೆ ಬನ್ನಿ, ಅವಳನ್ನು ದಾರಿಗೆ ತನ್ನಿ. ನೀವೇ ನಿಮ್ಮ ಕರ್ತವ್ಯವನ್ನು ನಿಭಾಯಿಸುತ್ತಿಲ್ಲವಾ, ಹಾದಿ ತಪ್ಪಿದ್ದೀರಾ. ಬಾಯಿಗೆ ಬಂದಂತೆ ಮಾತನಾಡುತ್ತೀರಾ, ಬುದ್ಧಿ ಇಲ್ಲದಂತೆ ವರ್ತಿಸುತ್ತೀರಾ, ಜೀವನದಲ್ಲಿ ಶಿಸ್ತನ್ನು ರೂಢಿ ಮಾಡಿಕೊಂಡಿಲ್ಲಿವಾ ಅವಶ್ಯವಾಗಿ ನಿಮ್ಮ ಮೇಲೇ ನೀವೇ ಸಿಟ್ಟಿಗೆ ಬನ್ನಿ. ನಿಮ್ಮನ್ನು ನೀವು ತಿದ್ದುಕೊಳ್ಳಿ. ನಿಮ್ಮನ್ನು ನೀವು ಶಿಕ್ಷಿಸಿಕೊಳ್ಳಿ.
ಅದು ಬಿಟ್ಟು, ದಾರಿಯಲ್ಲಿ ಯಾರೋ ಜೋರಾಗಿ ಗದ್ದಲ ಮಾಡುತ್ತಿದ್ದಾರೆ ಅಂತ, ಮಗ ಹತ್ತು ನಿಮಿಷ ಜಾಸ್ತಿ ಆಟ ಆಡಿದ ಅಂತ, ಮಗಳು ಗೋಡೆಯ ಮೇಲೆ ಗೀಚಿದಳು ಅಂತ, ಹೆಂಡತಿಯ ಕೈತಪ್ಪಿ ಸೌಟು ಕೆಳಗೆ ಬಿತ್ತು ಅಂತ ಮನೆಯಲ್ಲಿ ರೌದ್ರಾವತಾರ ತಾಳಬೇಡಿ. ಸಿಟ್ಟು ಬರುತ್ತೆ ನಿಜ. ಅದನ್ನು ತಡೆಯಿರಿ. ಕೃಷ್ಣ ಅದನ್ನೇ ಹೇಳುತ್ತಿರುವದು. ಕಾಮಕ್ರೋಧಗಳ ವೇಗವನ್ನು ತಡೆಹಿಡಿ. ನಿಲ್ಲಿಸು.
ಸಿಟ್ಟಿಗೆ ಬರುವ ಕಾರಣವಿದ್ದರೆ, ಸಿಟ್ಟಿಗೆ ಬಾ. ಆದರೆ ಕಂಡಕಂಡದ್ದಕ್ಕೆ ಲ್ಲ ಸಿಟ್ಟು ಮಾಡುತ್ತ ಕುಳಿತರೆ ನಿನ್ನ ಸಿಟ್ಟಿಗೂ ಬೆಲೆಯಿಲ್ಲ, ನಿನಗೂ ಬೆಲೆಯಿಲ್ಲ, ಕೃಷ್ಣ ಹೇಳುತ್ತಾನೆ, ನಿನ್ನ ಜನ್ಮಕ್ಕೂ ಬೆಲೆಯಿಲ್ಲ. ಸಾಯಲಿಕ್ಕಿಂತ ಮುಂಚೆ ಸಿಟ್ಟಿನ ವೇಗವನ್ನು ತಡೆಯಬೇಕು.
ಹಾಗೆಯೇ ಕಾಮ. ಕಶ್ಯಪರು ಭಾಗವತದಲ್ಲಿ ಒಂದು ಅದ್ಭುತ ಮಾತನ್ನು ಹೇಳುತ್ತಾರೆ. ಸಂನ್ಯಾಸಿಗಳು, ಯೋಗಿಗಳು ಕಾಮವನ್ನು ಗೆಲ್ಲಲಿಕ್ಕೆ ಹರಸಾಹಸ ಪಡುತ್ತಾರೆ, ನಾವು ಗೃಹಸ್ಥರು ಕಾಮವನ್ನು ಅನುಭವಿಸುತ್ತಲೇ ಕಾಮವನ್ನು ಗೆಲ್ಲುತ್ತೇವೆ ಎಂದು. ಶ್ರೀ ಜಗನ್ನಾಥದಾಸರು ಹರಿಕಥಾಮೃತಸಾರದಲ್ಲಿ ಮುತ್ತಿನಂಥ ಮಾತೊಂದನ್ನು ಬರೆಯುತ್ತಾರೆ. ಹೆಣ್ಣು ಗಂಡನೊಡನೆ ಅದೆಷ್ಟೇ ಸರಸವಾಡಿದರೂ ಅವಳು ಜಿತೇಂದ್ರಿಯಳೇ ಎಂದು. ಹಾಗೆ, ನಮ್ಮ ಕಾಮವನ್ನು ನಮ್ಮ ಹೆಂಡತಿಗೆ, ನಮ್ಮ ಗಂಡನಿಗೆ ಸೀಮಿತಗೊಳಿಸಿಕೊಳ್ಳಬೇಕು. ಹೆಣ್ಣುಕತ್ತೆಯನ್ನೂ ಕಂಡರೂ, ನಾಯಿಗಳ ಮೈಥುನವನ್ನೂ ಕಂಡರೂ ವಿಕಾರವಾಗುವಷ್ಟು ಕೀಳುತನ ನಮಗೆ ಬರಬಾರದು. ಕಂಡಕಂಡ ಹೆಣ್ಣನ್ನು ನೋಡಿದಾಗ ಕಾಮ ತೋರಬಾರದು. ನಮ್ಮ ಕಾಮ ಧರ್ಮಸಮ್ಮತವಾದ ಕಾಮವಾಗಿರಬೇಕು. ಗಂಡ ಹೆಂಡತಿಯರು ಸುಖ ಪಟ್ಟು ಮಲಗಿದ ನಂತರ, “ರುಕ್ಮಿಣಿಯರಸ, ಈ ಸುಖ ನೀನು ನೀಡಿದ್ದು ಸ್ವಾಮಿ, ನಿನ್ನದೇ ” ಎಂದು ಅವನಿಗೆ ನಮ್ಮ ಮೈಥುನದ ಯಜ್ಞವನ್ನೂ ಸಮರ್ಪಿಸುವ ದೊಡ್ಡಸ್ತಿಕೆ ನಮ್ಮಲ್ಲಿರಬೇಕು. ಕಾಮದ ಕಾವು ಆರಿದ ತಕ್ಷಣ ಅ ಕಾಮದ ಕೆಲಸಕ್ಕೆ ನಾವೇ ಅಸಹ್ಯ ಪಟ್ಟುಕೊಳ್ಳುವಂತಾಗಬಾರಗದು.
ನಿಜ, ಕಾಮ ಕ್ರೋಧಗಳು ಅಂದರೆ ಸುಮ್ಮನಲ್ಲ. ಅವು ಜ್ವಾಲಾಮುಖಿಯಂತೆ ಭುಗಿಲೇಳುತ್ತದೆ. ಚಂಡಮಾರುತದಂತೆ ಬೀಸಿ ಬರುತ್ತವೆ. ಪ್ರಳಯಕಾಲದ ಮಳೆಯಂತೆ ಭೋರ್ಗರೆಯುತ್ತವೆ. ಅದಕ್ಕೇ ಕೃಷ್ಣ ವೇಗ ಎನ್ನುವ ಶಬ್ದವನ್ನು ಬಳಸುತ್ತಾನೆ. ಆದರೂ ನಾವದರ ವೇಗವನ್ನು ತಡೆಯಲೇಬೇಕು.
ತಡೆಯಲು ಸಾಧ್ಯವೇ ಎಂದರೆ, ಹೌದು ಸಾಧ್ಯ ಎನ್ನುತ್ತಾರೆ, ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು. ಇಲ್ಲಿನ ಇಹೈವ ಎನ್ನುವ ಶಬ್ದಕ್ಕೆ ವ್ಯಾಖ್ಯಾನ ಮಾಡುತ್ತ ಮನುಷ್ಯಶರೀರದಲ್ಲಿಯೇ ಈ ಕಾಮಕ್ರೋಧಗಳನ್ನು ಗೆಲ್ಲಲು ಸಾಧ್ಯ ಎಂದು ಭರವಸೆಯನ್ನೀಯುತ್ತಾರೆ ಆ ಸರ್ವಜ್ಞಾಚಾರ್ಯರು.
ಆ ಕಾಮ ಕ್ರೋಧಗಳು ಜ್ವಾಲಾಮುಖಿಯಾಗಿ ಎದ್ದರೆ ಅದರೆ ತಲೆಯ ಮೇಲೆ ಕಾಲನ್ನಿಟ್ಟು ಅದನ್ನು ತುಳಿಯಬೇಕು ನಾವು. ಅದು ಚಂಡಮಾರುತದಂತೆ ಬೀಸಿದರೆ ಅದಕ್ಕೆ ಎದೆಯೊಡ್ಡಿ ನಿಂತು ಅದರ ರಭಸವನ್ನು ತಡೆಯಬೇಕು ನಾವು. ಅದು ಪ್ರಳಯಕಾಲದ ಮಳೆಯಂತೆ ಭೋರ್ಗರೆದರೆ ಗಂಗೆಯನ್ನು ಜಟೆಯಲ್ಲಿ ಕಟ್ಟಿಹಾಕಿದ ಧೂರ್ಜಟಿಯಂತೆ ನಾವು ಅದನ್ನು ಹಿಡಿದು ಹಿಡಿತದಲ್ಲಿಟ್ಟುಕೊಳ್ಳಬೇಕು.
ಸರಿ, ನಾವು ಮಾಡುತ್ತೇವೆ. ಮಾಡುವ ಮನಸ್ಸಿದೆ. ಆದರೆ ಸಾಧ್ಯವಾಗುತ್ತಿಲ್ಲ. ನಮ್ಮದು ಜ್ವಾಲಾಮುಖಿಯಲ್ಲಿ ಭಸ್ಮವಾಗುವ ಮನಸ್ಸು. ಚಂಡಮಾರುತದಲ್ಲಿ ನಲುಗಿ ಹೋಗುವ ಮನಸ್ಸು. ಭೋರ್ಗರೆತದ ಪ್ರವಾಹದಲ್ಲಿ ಕೊಚ್ಚಿ ಹೋಗುವ ಮನಸ್ಸು. ಇದನ್ನು ನಿಯಂತ್ರಿಸುವದು ಹೇಗೆ ಎಂದರೆ, ಶ್ರೀಕೃಷ್ಣ ಅದಕ್ಕೂ ಉತ್ತರವನ್ನು ನೀಡದೇ ಇರುವದಿಲ್ಲ. ಅವನು ಗುರು, ಜಗದ್ಗುರು. ನಮ್ಮನ್ನು ಗೆಲ್ಲಿಸಲೇ ನಮಗೆ ಪರೀಕ್ಷೆ ಒಡ್ಡುವ ಪ್ರೀತಿಯ ಗುರು. ಈ ಪರೀಕ್ಷೆಯನ್ನು ಗೆಲ್ಲುವ ಉಪಾಯವನ್ನೂ ಸೂಚಿಸುತ್ತಾನೆ – ಮತ್ಪರಃ ಸಂಯತೇಂದ್ರಿಯಃ. ಯಾರು ಆ ಶ್ರೀಹರಿಯನ್ನೇ ಸರ್ವೋತ್ತಮ ಎಂದು ತಿಳಿದು ನಿರಂತರ ಅವನ ಸ್ಮರಣೆ ಮಾಡುತ್ತಾರೆಯೋ ಅವರಿಗೆ ಇಂದ್ರಿಯಜಯ ಕಟ್ಟಿಟ್ಟ ಬುತ್ತಿ. ನಿರಂತರ ವಿಷ್ಣುಸ್ಮರಣೆಯೇ ನಮ್ಮಿಂದ ಈ ಕಾಮಕ್ರೋಧಗಳ ವೇಗವನ್ನು ತಡೆಸುತ್ತದೆ.
ನೀವು ಬೇಕಾದರೆ ಪರೀಕ್ಷೆ ಮಾಡಿ. ಈ ಕ್ಷಣದಿಂದ “ಶ್ರೀ ಗುರುಭ್ಯೋ ನಮಃ” ಪರಮಮಂಗಳ ಮಂತ್ರವನ್ನು ಜಪಮಾಡಲು ಆರಂಭಿಸಿ. ಮನಸ್ಸಿಟ್ಟು ಜಪ ಮಾಡಿ. ಜಿತೇಂದ್ರಿಯರಾದ ಶ್ರೀ ರಾಘವೇಂದ್ರಸ್ವಾಮಿಗಳನ್ನು, ಶ್ರೀ ವಾದಿರಾಜರನ್ನು, ಶ್ರೀ ಚಂದ್ರಿಕಾಚಾರ್ಯರನ್ನು, ಶ್ರೀಮಟ್ಟೀಕಾಕೃತ್ಪಾದರನ್ನು, ಶ್ರೀಮದಾಚಾರ್ಯರನ್ನು ಸ್ಮರಿಸುತ್ತ ಜಪ ಮಾಡಿ. ಹೆಣ್ಣುಮಕ್ಕಳೂ ಮಾಡಿ, ಗಂಡಸರೂ ಮಾಡಿ. ಈ ದಿವಸವೇ ನಿಮ್ಮ ಕಾಮ ನಿಮ್ಮ ಹತೋಟಿಗೆ ಬರುವದನ್ನು, ನಿಮ್ಮ ಸಿಟ್ಟು ನಿಮ್ಮ ಹತೋಟಿಗೆ ಬರುವದನ್ನು ಕಾಣುತ್ತೀರಿ. ನಿರಂತರ ಜಪ ಮಾಡಿ ಅದು ವಶವೇ ಆಗಿಬಿಡುತ್ತದೆ. ಕುಳಿತಾಗ, ನಿಂತಾಗ, ನಡೆದಾಡುವಾಗ, ಮಾತನಾಡುವಾಗ ಸಕಲಕಾಲದಲ್ಲಿಯೂ ಗುರುಗಳ ಸ್ಮರಣೆ ಮಾಡಿ, ಆ ಜಗದ್ಗುರು ಶ್ರೀಕೃಷ್ಣ ನಮಗೊಡ್ಡಿರುವ ಸವಾಲನ್ನು ಗೆಲ್ಲುತ್ತೇವೆ. ನಾವು ಗೆಲ್ಲುವದೇ ಬೇಕಾಗಿದೆ ಆ ಭಗವಂತನಿದೆ.
ಪ್ರತೀನಿತ್ಯ ಬೆಳಿಗ್ಗೆ ಎದ್ದ ತಕ್ಷಣ ಮೇಲಿನ ಶ್ಲೋಕವನ್ನು ಪಠಣ ಮಾಡಿ. ಈ ಒಂದು ದಿವಸ ನಾನು ಕಾಮಕ್ರೋಧಗಳನ್ನು ಗೆಲ್ಲುತ್ತೇನೆ, ಎಂದು. ಮಧ್ಯದಲ್ಲಿ ಮನಸ್ಸು ಕೋತಿಯಂತೆ ಕುಣಿಯುತ್ತದೆ. ಆಗ ಶ್ರೀ ಗುರುಭ್ಯೋ ನಮಃ ಎಂಬ ಮಹಾಮಂತ್ರವನ್ನು ಜಪಿಸಿ. ಶ್ರೀಮದಾಚಾರ್ಯರನ್ನು ನೆನೆಯಿರಿ. ಗುರುಮಂತ್ರದ ದಂಡ ಆ ಕೋತಿಯನ್ನು ಹತೋಟಿಗೆ ತಂದು ನಮ್ಮ ವಶಕ್ಕೆ ನೀಡುತ್ತದೆ.
ಕಾಮಕ್ರೋಧಗಳ ವಿರುದ್ಧದ ಈ ಸಮರದಲ್ಲಿ ನಿಮಗೆ ಜಯವಾಗಲಿ, ಎಂದು ಮನಃಪೂರ್ವಕವಾಗಿ ಹಾರೈಸಿ ಲೇಖನವನ್ನು ಮುಗಿಸುತ್ತೇನೆ. ನೀವು ಗುರುಗಳ ಸ್ಮರಣೆಯನ್ನು ಆರಂಭಸಿ. ಜಪ ಆರಂಭಸಿ.