vishwanandini-007

ವಿಶ್ವನಂದಿನಿ ಲೇಖನ ಮಾಲೆ – 007

ಮತ್ತೊಬ್ಬರು ದುಃಖದಲ್ಲಿದ್ದಾಗ ಮಧ್ಯದಲ್ಲಿ ನುಸುಳುವ ಮುನ್ನ…..

ಏಕಚಕ್ರಾನಗರದ ಬ್ರಾಹ್ಮಣನ ಮನೆಯ ಘಟನೆಯನ್ನು ವಿವರಿಸಿ, ಗಂಡಸರು ಕಲಿಯಬೇಕಾದ ಪಾಠವನ್ನು, ಭೀಮಸೇನನ ಚರ್ಯೆಯನ್ನು ನಿರ್ಣಯಿಸುತ್ತ ಆಚಾರ್ಯರು ಕಲಿಸಿದ ಪಾಠವನ್ನು ತಿಳಿದೆವು. ಅದರ ಮುಂದಿನ ಭಾಗದಲ್ಲಿ ಕುಂತೀದೇವಿ ಕಲಿಸುವ ಮತ್ತೊಂದು ಪಾಠವನ್ನು ತಿಳಿಯೋಣ.

ಬ್ರಾಹ್ಮಣ ಮತ್ತು ಅವನ ಮನೆಯವರ ಅಳುವಿನ ಕಾರಣವನ್ನು ತಿಳಿಯಲು ಭೀಮಸೇನ ತಾಯಿಯನ್ನು ವಿನಂತಿಸುತ್ತಾನೆ. ಕುಂತಿ, ಅವರೆಲ್ಲರು ಅಳುತ್ತಿರುವ ಕೊಠಡಿಯ ಬಳಿ ಮರೆಯಾಗಿ ನಿಲ್ಲುತ್ತಾಳೆ. ಅವರ ನುಡಿಗಳನ್ನು ಆಲಿಸುತ್ತಾಳೆ. ಕಡೆಯಲ್ಲಿ ಆ ಮಗುವಿನ ಮಾತಿಗೆ ಅವರೆಲ್ಲರೂ ನಕ್ಕಾಗ ಅವಳು ಒಳ ಪ್ರವೇಶಿಸುತ್ತಾಳೆ.

ಇಲ್ಲಿ ತುಂಬ ಮಹತ್ತ್ವದ ಪ್ರಶ್ನೆಗಳಿವೆ, ಉತ್ತರವಾಗಿ ನಮ್ಮ ಬದುಕಿನಲ್ಲಿ ನಾವು ಅಳವಡಿಸಿಕೊಳ್ಳಬೇಕಾದ ಪಾಠಗಳಿವೆ.

ಮೊದಲಿಗೆ ಕುಂತಿ ಮರೆಯಾಗಿ ನಿಂತು ಮತ್ತೊಬ್ಬರ ಮಾತನ್ನು ಕೇಳಿದ್ದು ತರವೇ ? ತಪ್ಪಲ್ಲವೇ ಅದು ?

ಈ ಪ್ರಸಂಗದಲ್ಲಿ ಖಂಡಿತ ತಪ್ಪಲ್ಲ. ಮತ್ತೊಬ್ಬರು ಆಡುವ ಮಾತನ್ನು ಕದ್ದು ಕೇಳುವದು ತಪ್ಪಾದರೂ, ಕುಂತಿ ಅವರಿಗೆ ಸಹಾಯವನ್ನು ಮಾಡಲೇ ಹೋಗುತ್ತಿದ್ದಾಳೆ. ವೈದ್ಯ ಸೂಜಿಯನ್ನು ಚುಚ್ಚಿ ನೋವನ್ನುಂಟು ಮಾಡಿ ನೋವನ್ನು ಕಳೆಯುವಂತೆ ಇದು. ಮಹಾಭಾರತದಲ್ಲಿ ಸ್ವಯಂ ರುದ್ರದೇವರೇ ಈ ಮಾತನ್ನು ಹೇಳಿದ್ದಾರೆ. “ಅಭಿಸಂಧೇರಜಿಹ್ಮತ್ವಾತ್” ಒಂದು ಕರ್ಮ ಸತ್ಕರ್ಮ ಅಥವಾ ದುಷ್ಕರ್ಮ ಎಂದು ನಿರ್ಣಯ ಮಾಡುವಾಗ ಅ ಕರ್ಮದ ಹಿಂದಿನ ಉದ್ದೇಶವೂ ಪ್ರಧಾನ ಪಾತ್ರವನ್ನು ವಹಿಸುತ್ತದೆ. ಪಾಪ-ಪುಣ್ಯಗಳ ಕುರಿತು ವಿಶ್ವನಂದಿನಿಯ ಲೇಖನಮಾಲೆಯನ್ನು ಮಾತನಾಡುವಾಗಿ ಇದನ್ನು ವಿವರವಾಗಿ ವಿವರಿಸುತ್ತೇನೆ.

ಆ ಬ್ರಾಹ್ಮಣನ ಮನೆಯವರೆಲ್ಲ ಅಳುತ್ತಿರುವದು ಸ್ಪಷ್ಟವಾಗಿ ಕೇಳುತ್ತಿದೆ. ಆದರೆ, ಕುಂತಿ ಒಮ್ಮೆಲೇ ಪ್ರವೇಶ ಮಾಡಿ ಯಾಕೆ ಅಳುತ್ತಿದ್ದೀರಿ ಎಂದು ಕೇಳುವದಿಲ್ಲ.

ಇದರಿಂದ ಕಲಿಯಬೇಕಾದ ಮೊದಲ ಪಾಠ. ನಾವು ಸಹಾಯ ಮಾಡಲಿಕ್ಕೆ ಹೋಗಲಿಕ್ಕಿಂತ ಮುಂಚೆ, ಸಹಾಯ ಮಾಡುತ್ತೇವೆ ಎಂದು ಭರವಸೆ ನೀಡುವದಕ್ಕಿಂತ ಮುಂಚೆ ನಮಗೆ ಅವರ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವೇ ಎನ್ನುವದನ್ನು ತಿಳಿದುಕೊಳ್ಳಬೇಕು. ನಮ್ಮ ದೊಡ್ಡಸ್ತಿಕೆಯನ್ನು ತೋರಿಸಿಕೊಳ್ಳಲು ನಾನು ನಿನ್ನ ಸಮಸ್ಯೆ ಪರಿಹರಿಸುತ್ತೇನೆ, ಏನು ಅಂತ ಹೇಳು ಎಂದು ಬಡಾಯಿ ಕೊಚ್ಚಿಕೊಳ್ಳಬಾರದು. ಅವನ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲದಿದ್ದರೆ ಮೊದಲಿಗೆ ವಚನಭಂಗದ ದೋಷ. ಅದಕ್ಕಿಂತ ಮುಖ್ಯವಾಗಿ ಅವರ ಮುಂದೆಯೇ ಅವಮಾನ. ಹೀಗಾಗಿ, ಅವರ ಸಮಸ್ಯೆ ಪರಿಹಾರ್ಯವೇ ಅಥವಾ ಅಪರಿಹಾರ್ಯವೇ ಎನ್ನುವದನ್ನು ಮೊದಲಿಗೆ ತಿಳಿಯಬೇಕು. ಅದು ತಿಳಿಯಬೇಕು ಎಂದರೆ ಅವರ ಮಾತನ್ನು ಕುಂತಿ ಕೇಳಲೇಬೇಕು. ಮತ್ತೊಬ್ಬರಾಡುವ ಮಾತುಗಳನ್ನು ವಿಷಯಸಂಗ್ರಹಕ್ಕಾಗಿ ಅಥವಾ ಅವರನ್ನು “ಆಡಿಕೊಳ್ಳಲಿಕ್ಕಾಗಿ” ಅಥವಾ ಅದರಿಂದ ಅವರನ್ನು ಮತ್ತಷ್ಟು ತೊಂದರೆಗೆ ಈಡು ಮಾಡಲಿಕ್ಕಾಗಿ ಕೇಳುವದು, ತಪ್ಪಷ್ಟೇ ಅಲ್ಲ, ಪರಮನೀಚತನ. ಕುಂತೀದೇವಿ ಅದಕ್ಕಾಗಿ ಕೇಳಿದ್ದಲ್ಲ. ಅವರ ಸಮಸ್ಯೆಯನ್ನು ಪರಿಹರಿಸಲಿಕ್ಕಾಗಿ ಕೇಳಿದ್ದು.

ಕುಂತಿ ನೇರವಾಗಿ ಒಳಗೆ ಹೋಗಿದ್ದರೆ, ಯಾಕೆ ಅಳುತ್ತಿದ್ದೀರಿ, ಎಂದು ಕೇಳುತ್ತಿದ್ದಳು. ಅವರು ನಿನಗ್ಯಾಕೆ ತಾಯಿ, ನೀನು ಹೋಗು ಎಂದು ಹೇಳಿದ್ದರೆ. ಅಥವಾ, ಕುಂತಿ ನಾನು ನಿಮ್ಮ ಸಮಸ್ಯೆಯನ್ನು ಪರಿಹರಿಸುತ್ತೇನೆ ನಿಮ್ಮ ದುಃಖ ಹೇಳಿ ಎಂದು ಹೇಳಿದ ಬಳಿಕ ಬ್ರಾಹ್ಮಣನ ದುಃಖವನ್ನು ಪರಿಹರಿಸಲು ಸಾಧ್ಯವಿಲ್ಲದಿದ್ದಿದ್ದರೆ. ಹೀಗಾಗಿ ನಯಜ್ಞಳಾದ (ಅಂದರೆ, ಯಾವಾಗ ಹೇಗೆ ನಡೆದುಕೊಳ್ಳಬೇಕು ಎನ್ನುವ ತಿಳುವಳಿಕೆಯುಳ್ಳ) ತಾಯಿ ಕುಂತಿ ಮೊದಲಿಗೆ ಮರೆಯಲ್ಲಿ ನಿಲ್ಲುತ್ತಾಳೆ. ಬಕನ ವಿಷಯವನ್ನು ತಿಳಿಯುತ್ತಾಳೆ. ಈ ಬಕನನ್ನು ನನ್ನ ಭೀಮ ಕೊಲ್ಲಬಲ್ಲ ಎಂಬ ನಿಶ್ಚಯ ಅವಳಿಗಿರುತ್ತದೆ. ಅದಕ್ಕಾಗಿ ಅವಳು ಆ ನಂತರ ಒಳಗೆ ಪ್ರವೇಶಿಸಿ ಅವರ ದುಃಖವನ್ನು ಪರಿಹರಿಸಿಯೇ ಬರುತ್ತಾಳೆ.

ಮೊದಲಿಗೆ ಸಮಸ್ಯೆ ಏನೆಂದು ತಿಳಿಯಬೇಕು. ಆ ನಂತರ ಅದು ಪರಿಹರಿಸಲಿಕ್ಕೆ ಸಾಧ್ಯವಾ ಯೋಚಿಸಬೇಕು. ಅ ನಂತರ ಅದನ್ನು ನಮ್ಮ ಕೈಯಲ್ಲಿ ಪರಿಹರಿಸಲು ಸಾಧ್ಯವಾ ಎಂದು ಆಲೋಚಿಸಬೇಕು. ಆ ನಂತರ ವಚನ ನೀಡಬೇಕು. ಕಡೆಯಲ್ಲಿ ಸಮಸ್ಯೆಯನ್ನು ಪರಿಹರಿಸಿ ಅವರ ಮುಖದಲ್ಲಿ ಮುಗುಳ್ನಗು ಮೂಡಿಸಿ ನಾವು ಹಿಂದಕ್ಕೆ ಬರಬೇಕು. ಇದು ಕುಂತಿ ಕಲಿಸುವ ಪಾಠ.

ಇಷ್ಟೇ ಅಲ್ಲ, ಇದಕ್ಕಿಂತ ದೊಡ್ಡದಾದ ಒಂದು ಮಾನವೀಯತೆಯ ಪಾಠವನ್ನು ಕುಂತೀದೇವಿ ಕಲಿಸುತ್ತಾಳೆ. ಅವಳು ತಕ್ಷಣದಲ್ಲಿ ಕೊಠಡಿಯ ಒಳಗೆ ಪ್ರವೇಶಿಸದಿರಲಿಕ್ಕೆ ಮತ್ತೂ ಒಂದು ಕಾರಣವಿದೆ. ಮತ್ತೊಬ್ಬರು ಅಳುತ್ತಿರುವಾಗ ನಾವು ಮಧ್ಯದಲ್ಲಿ ಪ್ರವೇಶಿಸಬಾರದು. ನಮ್ಮ ಮಕ್ಕಳು, ತಂದೆತಾಯಿಗಳಂತ ಹತ್ತಿರದ ಸಂಬಂಧಿಗಳು ದುಃಖದಿಂದ ಅಳುವಾಗ ಹೋಗಿ ಅವರನ್ನು ಅಪ್ಪಿ ಮೊದಲು ಸಾಂತ್ವನ ಮಾಡಬೇಕು, ಅದು ಬೇರೆ ಮಾತು. ಅದರೆ ನಮ್ಮ ಸಂಬಂಧಿಗಳಲ್ಲದ, ತೀರ ಹತ್ತಿರದವರೂ ಅಲ್ಲದ ವ್ಯಕ್ತಿಗಳು ಅಳುವಾಗ ಮಧ್ಯದಲ್ಲಿ ಪ್ರವೇಶಿಸಿ ಅವರ ಅಳುವಿಗೆ ವಿಘ್ನ ತರಬಾರದು. ಅಳು ಎಷ್ಟೋ ಬಾರಿ ಮನಸ್ಸನ್ನು ಹಗುರ ಮಾಡಿಬಿಡುತ್ತದೆ. ಮನಸ್ಸನ್ನು ಖಾಲಿ ಮಾಡಿಕೊಳ್ಳುವ ಅಳುವನ್ನು ಅಳುತ್ತಿದ್ದಾಗ ಸುಮ್ಮನಿರಬೇಕು. ಅದು ಬಿಟ್ಟು ನಿಲ್ಲಿಸಿನಿಲ್ಲಿಸಿ ಎಂದು ಹೇಳಬಾರದು. (ಅಳುವಿನಲ್ಲಿ ಎಷ್ಟು ವಿಧವಿದೆ, ಎದುರಿನವರು ಯಾಕಾಗಿ ಅಳುತ್ತಿದ್ದಾರೆ ಎನ್ನುವ ಪರಿಜ್ಞಾನವಿದ್ದಾಗ ಇದು ಸಾಧ್ಯ. ಅದು ಅತ್ತವರಿಗಷ್ಟೇ ಗೊತ್ತಾಗುವ ವಿಷಯ.)

ಈ ಸೂಕ್ಷ್ಮಗಳ ಪರಿಚಯವಿದ್ದ ಕುಂತೀದೇವಿ ದಿಢೀರನೇ ಒಳಗೆ ಪ್ರವೇಶಿಸುವದಿಲ್ಲ. ಬಾಗಿಲಲ್ಲಿ ನಿಲ್ಲುತ್ತಾಳೆ. ಮೊದಲಿಗೆ ಬ್ರಾಹ್ಮಣ ದನಿಯೆತ್ತಿ ಅಳುತ್ತಾನೆ. ಹೆಂಡತಿ ಅಳುತ್ತಾಳೆ. ಮಗಳು ಅಳುತ್ತಾಳೆ. ಕೂಡಿ ಅಳುತ್ತಾರೆ. ಕಡೆಯಲ್ಲಿ ಹುಲ್ಲನ್ನು ಹಿಡಿದ ಅವರ ಮಗ ನಾನು ಬಕನನ್ನು ಕೊಲ್ತೇನೆ, ನೀವ್ಯಾಕೆ ಅಳ್ತೀರಿ ಎಂದು ಹೇಳಿದಾಗ ಎಲ್ಲರೂ ಆ ಕ್ಷಣಕ್ಕೆ ಬೆಟ್ಟದಂತಹದ ದುಃಖವನ್ನು ಮರೆತು ನಗುತ್ತಾರೆ. ವಾತಾವರಣ ತಿಳಿಯಾದದ್ದನ್ನು ಕಂಡ ಅಮ್ಮ ಕುಂತಿ ಒಳಗೆ ಪ್ರವೇಶಿಸುತ್ತಾಳೆ.

ಅಂದರೆ, ಮತ್ತೊಬ್ಬರು ದುಃಖವನ್ನು ಅನುಭವಿಸುವಾಗ ನಾವು ಮಧ್ಯದಲ್ಲಿ ಪ್ರವೇಶಿಸುವದರಿಂದ ದುಃಖ ಜಾಸ್ತಿಯಾಗುವದಾದರೆ, ಅಥವಾ ಅವರಿಗೆ ಮುಜುಗರವಾಗುವದಾದರೆ ಸರ್ವಥಾ ಹೋಗಬಾರದು. ನಮ್ಮಿಂದ ಅವರ ದುಃಖವನ್ನು ಪರಿಹರಿಸಲು ಸಾಧ್ಯವಿದ್ದರೂ ಸರಿಯಾದ ಸಮಯದಲ್ಲಿ ಅದನ್ನು ಹೇಳಬೇಕು. ಪರಿಹಾರ ಮಾಡುವ ದುರಹಂಕಾರವನ್ನಂತೂ ಎಂದಿಗೂ ತೋರಬಾರದು.

ಮುಖ್ಯವಾಗಿ ನಮ್ಮ ಹೆಣ್ಣುಮಕ್ಕಳು ಈ ಪಾಠವನ್ನು ಕಲಿಯಬೇಕು. ಸಂಬಂಧಿಕರ, ಪಕ್ಕದ ಮನೆಯವರ, ಸಂಬಂಧ ಇರುವ, ಸಂಬಂಧ ಇಲ್ಲದಿರುವ ಎಲ್ಲರ ದುಃಖದ ಬಗ್ಗೆಯೂ ತಿಳಿದುಕೊಳ್ಳುವ ವಿಚಿತ್ರ ವರ್ತನೆಯನ್ನು ಮೈಗೂಡಿಸಿಕೊಂಡಿರುವವರು ಕಲಿಯಬೇಕು.

ನಮ್ಮಿಂದ ಇನ್ನೊಬ್ಬರಿಗೆ ಅನುಕೂಲ ಮಾಡಲು ಸಾಧ್ಯವಾದರೆ ಮಾಡೋಣ, ಮಾಡಲು ಸಾಧ್ಯವಿಲ್ಲ ಎಂತಾದರೆ, ಕನಿಷ್ಠ ಪಕ್ಷ ಅವರ ದುಃಖವನ್ನಾದರೂ ಜಾಸ್ತಿ ಮಾಡುವದು ಬೇಡ. ಬೇಡದ ಸಮಯದಲ್ಲಿ ಮನೆಯೊಳಗೆ ನುಗ್ಗಿ ಅವರಿಗೆ ಮುಜುಗುರ ಮಾಡುವದು ಬೇಡ.

ಇವುಗಳೂ ನಿಮಗಿಷ್ಟವಾಗಬಹುದು

vishwanandini-020

ವಿಶ್ವನಂದಿನಿ ಲೇಖನ ಮಾಲೆ – 020

ಶ್ರೀಕನಕದಾಸರ ಹರಿಭಕ್ತಿಸಾರ ವಿಷ್ಣುದಾಸರ ಸಾರಾಮೃತವ್ಯಾಖ್ಯಾನದೊಂದಿಗೆ ಪದ್ಯ – ೨ ದೇವದೇವ ಜಗದ್ಭರಿತ ವಸು- ದೇವಸುತ ಜಗದೇಕನಾಥ ರ- ಮಾವಿನೋದಿತ ಸಜ್ಜನಾನತ …

Leave a Reply

Your email address will not be published. Required fields are marked *