ವಿಶ್ವನಂದಿನಿ ಲೇಖನ ಮಾಲೆ – 006

ಜೀವನಸುರಭಿ

ಶ್ರೀಮದಾಚಾರ್ಯರು ಹೇಳಿಕೊಟ್ಟ ಜೀವನದ ಪಾಠಗಳು

ಮತ್ತೊಬ್ಬರ ಮನೆಗೆ ಕಾಲಿಡುವ ಮುನ್ನ….

ನಮ್ಮಲ್ಲಿ ಅದೆಷ್ಟು ದಡ್ಡತನ, ಮೂರ್ಖತನಗಳು ಮನೆ ಮಾಡಿರುತ್ತವೆ ಎಂದರೆ ನಮ್ಮಿಂದ ಮತ್ತೊಬ್ಬರಿಗೆ ಅದೆಷ್ಟು ತೊಂದರೆಯಾಗುತ್ತದೆ ಎನ್ನುವದನ್ನೂ ಯೋಚಿಸದೇ ವರ್ತಿಸುತ್ತಿರುತ್ತೇವೆ. ನಮ್ಮ ಮಾತಿನಿಂದ ಮತ್ತೊಬ್ಬರಿಗೆ ಹಿಂಸೆಯಾಗಬಹುದಾ ಎನ್ನುವದನ್ನು ಒಂದು ಬಾರಿಯೂ ಯೋಚಿಸುವದಿಲ್ಲ. ನಮ್ಮ ಚರ್ಯೆ ಮತ್ತೊಬ್ಬರಿಗೆ ಅಸಹ್ಯ ನೀಡುತ್ತದೆಯಾ ಎನ್ನುವದರ ತಲೆ ಕೆಡಿಸಿಕೊಳ್ಳದೇ ಇಲ್ಲ. ಈ ರೀತಿಯಾಗಿ ಬದುಕುತ್ತಿದ್ದರೆ ನಾವು ಸರ್ವಥಾ ಸಾಧಕರಲ್ಲ. ನಮ್ಮನ್ನು ಪರಮಾತ್ಮ ಎಡಗಣ್ಣಿನಿಂದಲೂ ನೋಡುವದಿಲ್ಲ. ಕಾರಣ, ಪರಮಾತ್ಮ ಸಜ್ಜನರಿಗೆ ಮಾತ್ರ ಒಲಿಯುತ್ತಾನೆ. ಮತ್ತೊಬ್ಬ ಸಜ್ಜನನಿಗೆ ಹಿಂಸೆ ಕೊಡುವ ಮನುಷ್ಯ ಸಜ್ಜನನೇ ಅಲ್ಲ.

ಸಾಧನೆ ಎಂದರೆ ಬರೀ ಮೂಗು ಹಿಡಿದು ಕುಳಿತು ಮಂತ್ರವನ್ನು ಜಪಿಸುವದಲ್ಲ. ನಮ್ಮ ಜೀವನದಲ್ಲಿನ ಪ್ರತಿಯೊಂದು ಚರ್ಯೆಯೂ ಸಾಧನೆಯೇ. ಇಷ್ಟೇ ಮೋಕ್ಷಸಾಧನೆಯಾಗಬಹುದಾದ ಚರ್ಯೆಗಳನ್ನು ಅನರ್ಥಸಾಧನವನ್ನಾಗಿ ಮಾಡಿಕೊಳ್ಳುತ್ತಿರುತ್ತೇವೆ. ನಮ್ಮ ಅಕ್ಕಪಕ್ಕದವರಿಗೂ ಕಿರಿಕಿರಿ ಉಂಟು ಮಾಡುತ್ತಿರುತ್ತೇವೆ.

ಶ್ರೀಮದಾಚಾರ್ಯರು ತಾತ್ಪರ್ಯನಿರ್ಣಯದಲ್ಲಿ ಭೀಮಸೇನ, ಕುಂತಿಯರ ಚರ್ಯೆಯನ್ನು ನಿರ್ಣಯಿಸುವ ಪ್ರಸಂಗದಲ್ಲಿ ನಮ್ಮ ಬದುಕಿಗೊಂದು ಅದ್ಭುತ ಪಾಠವನ್ನು ಹೇಳಿಕೊಟ್ಟಿದ್ದಾರೆ.

ಪಾಂಡವರು ಏಕಚಕ್ರಾನಗರದಲ್ಲಿ ಒಬ್ಬ ಬ್ರಾಹ್ಮಣನ ಮನೆಯಲ್ಲಿ ವಾಸವಿದ್ದ ಸಂದರ್ಭ. ಆ ಬ್ರಾಹ್ಮಣನ ಮನೆಯಲ್ಲಿ ಒಟ್ಟು ನಾಲ್ಕು ಜನ. ಗಂಡ, ಹೆಂಡತಿ, ಆರೇಳು ವರ್ಷದ ಮಗಳು, ಒಂದೆರಡು ವರ್ಷದ ಮಗ. ಒಂದು ದಿವಸ ಆ ಬ್ರಾಹ್ಮಣನ ಮನೆಯಿಂದ ಜೋರಾಗಿ ಅಳುವ ಧ್ವನಿ ಕೇಳುತ್ತದೆ. ಆ ಮನೆಯ ಯಜಮಾನನೇ ಬಿಕ್ಕಳಿಸಿ ಅಳುವದು ಕುಂತಿ ಭೀಮರಿಗೆ ಕೇಳುತ್ತದೆ. ಪರಮಸಾಧ್ವಿಯಾದ ಕುಂತಿ ಇವರ ದುಃಖವೇನೆಂದು ತಿಳಿದುಕೊಂಡು ಪರಿಹರಿಸಲೇ ಬೇಕೆಂದು ಭೀಮನಿಗೆ ಹೇಳುತ್ತಾನೆ. ಆಗ ಭೀಮ ಅವರ ದುಃಖವೇನೆಂದು ತಿಳಿದು ಬರಲು ತಾಯಿಗೆ ತಿಳಿಸುತ್ತಾನೆ. “ಜ್ಞಾಯತಾಮಸ್ಯ ಯದ್ ದುಃಖಂ ಯತಶ್ಚೈವ ಸಮುತ್ಥಿತಮ್” “ಅಮ್ಮಾ, ಇವರ ದುಃಖವೇನೆಂದು ತಿಳಿಯಲ್ಪಡಲಿ, ನಾನು ಪರಿಹರಿಸುತ್ತೇನೆ.”

ಕುಂತಿ, ಅವರು ಅಳುತ್ತಿರುವ ಕೊಠಡಿಯ ಹೊರಗೆ ಬಚ್ಚಿಟ್ಟುಕೊಂಡು ನಿಂತು, ಅವರ ಮಾತನ್ನೆಲ್ಲ ಕೇಳುತ್ತಾಳೆ. ಬಕಾಸುರನಿಗೆ ಒಂದು ನರಬಲಿಯನ್ನು ನೀಡಬೇಕು. ಬ್ರಾಹ್ಮಣ ತಾನೇ ಹೋಗುತ್ತೇನೆ ಎನ್ನುತ್ತಾನೆ. ಹೆಂಡತಿ, ನೀವು ಬೇಡ ನಾನು ಹೋಗುತ್ತೇನೆ ಎನ್ನುತ್ತಾಳೆ. ಮಗಳು ನೀವಿಬ್ಬರೂ ಬೇಡ ನಾನು ಹೋಗುತ್ತೇನೆ ಎನ್ನುತ್ತಾಳೆ. ಯಾರೋ ಒಬ್ಬರು ಹೋಗಲೇಬೇಕು ಎನ್ನುವ ದುಃಖದಲ್ಲಿ ಅವರೆಲ್ಲ ಬಿಕ್ಕಳಿಸಿ ಅಳುವಾಗ ಆ ಸಣ್ಣ ಕೂಸು, ಕೈಯಲ್ಲಿ ಹುಲ್ಲನ್ನು ಹಿಡಿದು ನೀವ್ಯಾರೂ ಹೋಗಬೇಡಿ, ನನ್ನನು ಕಳುಹಿಸಿ, ನಾನೂ ಹೋಗಿ ಈ ಕಡ್ಡಿಯಿಂದ ಆ ಬಕನನ್ನು ಕೊಂದು ಬರುತ್ತೇನೆ ಎಂದು ಮುದ್ದುಮುದ್ದಾಗಿ ಹೇಳುತ್ತದೆ. ಅಂಥ ದುಃಖದ ಪರಿಸ್ಥಿತಿಯಲ್ಲಿಯೂ ಆ ಎಲ್ಲರೂ ಮಗುವಿನ ಮಾತಿಗೆ ನಗುತ್ತಾರೆ. ಆಗ ಕುಂತಿ ಒಳಗೆ ಪ್ರವೇಶಿಸುತ್ತಾಳೆ.

ಇಷ್ಟು ನಡೆದ ಘಟನೆ.

ಇಲ್ಲಿ ಕೆಲವು ತಾತ್ವಿಕ ಪ್ರಶ್ನೆಗಳಿವೆ.

ಭೀಮ, ಕ್ಷತ್ರಿಯ. ಜನರ ದುಃಖವನ್ನು ತಿಳಿದುಕೊಂಡು ಪರಿಹರಿಸುವದು ಅವನ ಕರ್ತವ್ಯ. ಅವನು ತಾನೇ ಬ್ರಾಹ್ಮಣನ ಮನೆಯ ಒಳಗೆ ಹೋಗದೆ, ಒಳಗೆ ಹೋಗಿ ಅಳುವಿಗೆ ಕಾರಣವೇನೆಂದು ತಿಳಿದು ಬಾ ಎಂದು ಹೇಳುತ್ತಾನೆ. ಇದು ಎಷ್ಟರ ಮಟ್ಟಿಗೆ ಸರಿ. ತಾನೇ ಹೋಗಿ ಕೇಳುವದನ್ನು ಬಿಟ್ಟು ತಾಯಿಯಯನ್ನು ಯಾಕಾಗಿ ಕಳುಹಿಸಿದ?

ಅದಕ್ಕೆ ಶ್ರೀಮದಾಚಾರ್ಯರು ಉತ್ತರ ನೀಡುತ್ತ ಗಂಡಸರಿಗೆ ಒಂದು ದಿವ್ಯಪಾಠವನ್ನು ಹೇಳಿಕೊಡುತ್ತಾರೆ. ಇದನ್ನು ಅರ್ಥ ಮಾಡಿಕೊಂಡು ಅನುಷ್ಠಾನಕ್ಕೆ ತಂದರೆ ನಮ್ಮ ಸುತ್ತಮುತ್ತಲಿನ ಎಲ್ಲ ಹೆಣ್ಣುಮಕ್ಕಳಿಗೂ ನಮ್ಮ ಮೇಲೆ ಗೌರವ ಮೂಡುತ್ತದೆ. ಅಷ್ಟೇ ಅಲ್ಲ, ತಾಯಿಯಾಗಿ ನಮ್ಮನ್ನು ಹಡೆದು, ಬೆಳೆಸಿ, ಲಾಲಿಸಿ, ಮುದ್ದಿಸಿ, ಹೆಂಡತಿಯಾಗಿ ಪ್ರೀತಿಸಿ, ರಮಿಸಿ, ಮಗಳಾಗಿ, ಅಕ್ಕ ತಂಗಿಯರಾಗಿ ನಮ್ಮ ಮೇಲೆ ಒಲವಿನ ಮಹಾಪೂರವನ್ನೇ ಹರಿಸುವ ಹೆಣ್ಣುಮಕ್ಕಳಿಗೆ ನಾವು ಸಲ್ಲಿಸಬೇಕಾದ ಗೌರವ. ಶ್ರೀಮದಾಚಾರ್ಯರ ಪಾದಗಳನ್ನು ನೆನೆದು ಭೀಮನ ಚರ್ಯೆ ನಮ್ಮ ಚರ್ಯೆಯಾಗಲಿ, ಭೀಮನ ಬುದ್ಧಿ ನಮಗೆ ಬರಲಿ ಎಂದು ಪ್ರಾರ್ಥಿಸಿ ಅವರ ಪರಮ ಪರಮಮಂಗಳ ನಿರ್ಣಯವನ್ನು ತಿಳಿಯೋಣ –

” ಸ್ತ್ರೀಬಾಲಸಂಯುತಗೃಹೇ ಶಿಶುಲಾಲನಾದೌ ಲಜ್ಜೇದಿತಿ ಸ್ಮ ಜನನೀಮವದನ್ನಚಾಗಾತ್”

ಸಣ್ಣ ಮಕ್ಕಳಿರುವ ಮನೆಗೆ, ಕೊಠಡಿಗೆ ಪರಪುರುಷನಾದವನು ದಿಢೀರನೇ ನುಗ್ಗಿಬಿಡಬಾರದು. ಮಕ್ಕಳಿಗೆ ಹಾಲು ಕುಡಿಸುತ್ತಲೋ, ಅವರಿಗೆ ಬಟ್ಟೆ ಬದಲಾಯಿಸುತ್ತಲೋ, ಅಥವಾ ಆ ಮಕ್ಕಳನ್ನು ತಮ್ಮಿಷ್ಟದಂತೆ ಆಡಿಸುತ್ತಲೋ ಇರುವ ಹೆಣ್ಣುಮಕ್ಕಳು ದಿಢೀರನೇ ಪರಪುರುಷ ಬಂದಾಗ ಗಡಿಬಿಡಿಯಾಗುತ್ತಾರೆ, ನಾಚಿಕೆ ಪಟ್ಟುಕೊಳ್ಳುತ್ತಾರೆ. ಅವರ ಮನಸ್ಸಿಗೆ ದುಗುಡವಾಗುತ್ತದೆ. ಸಾಧ್ವಿಯಾದ ಹೆಣ್ಣಿಗೆ ಭರಿಸಲಾಗದಷ್ಟು ಯಾತನೆಯಾಗುತ್ತದೆ. ಆ ಸಾಧ್ವಿಗೆ ಆ ಮಾನಸಿಕ ಹಿಂಸೆಯನ್ನು ನೀಡುವದರಿಂದ ಅನರ್ಥ ನಿಶ್ಚಿತ. ಹೀಗಾಗಿ, ನಾವು ಮತ್ತೊಬ್ಬರ ಮನೆಗೆ ಹೋಗಬೇಕಾದರೆ ಮೊದಲಿಗೆ ಅವರಿಗೆ ತಿಳಿಸಿ ಹೋಗಬೇಕು. ಅವರ ಮನೆಯ ಪರಿಸ್ಥಿತಿಯನ್ನು ಅರಿಯಬೇಕು. ಅದರಲ್ಲಿಯೂ ಒಬ್ಬಳೇ ಹೆಣ್ಣಿರುವ ಮನೆಗೆ ಎಂದಿಗೂ ಯಾವ ಕಾರಣಕ್ಕೂ ಹೋಗಬಾರದು.

ಹೀಗಾಗಿ ಭೀಮಸೇನ, ತಾನು ಹೋಗದೇ ಅಮ್ಮನನ್ನು ವಿನಂತಿಸುತ್ತಾನೆ, ಅಮ್ಮಾ ನೀನು ಹೋಗಿ ಏನು ಎಂದು ತಿಳಿದು ಬಾ ಎಂದು. ಮತ್ತು ಇದು ತಾಯಿಗೆ ಭೀಮ ಮಾಡಿದ ಆಜ್ಞೆಯೂ ಅಲ್ಲ. ಮಹಾಭಾರತದಲ್ಲಿ ಈ ಮಾತು ಎಷ್ಟು ಸ್ಪಷ್ಟವಾಗಿದೆ ಎಂದರೆ ಭೀಮ “ಹೋಗಿ ತಿಳಿದು ಬಾ” ಎಂದು ಹೇಳುವದಿಲ್ಲ. ಅಮ್ಮನ ಮುಂದೆ ನಿಂತು “ಅವರ ಅಳುವಿಗೆ ಕಾರಣ (ನಿನ್ನಿಂದ) ತಿಳಿಯಲ್ಪಡಲಿ” ಎನ್ನುತ್ತಾನೆ. ಭೀಮನ ಮಾತಿನಲ್ಲಿಯೂ ಅದೆಷ್ಟು ಸೌಜನ್ಯ. ಕಾರಣ, ನಾವು ಮಾಡಬೇಕಾದ ಕೆಲಸವನ್ನು ಬೇರೆಯವರಿಗೆ ಹೇಳುವದೇ ಅಪರಾಧ. ಅದರಲ್ಲಿಯೂ ಹಿರಿಯರಿಗೆ, ತಾಯಿಗೆ ಹೇಳುವದು ಅಪರಾಧ. ಹೀಗಾಗಿ, ಭೀಮ ತಿಳಿದು ಬಾ ಎನ್ನದೆ ನಿನ್ನಿಂದ ತಿಳಿಯಲ್ಪಡಲಿ ಎಂದು ವಿನಯದಿಂದ ನುಡಿಯುತ್ತಾನೆ.

ನಮಗೆ ಇನ್ನೊಬ್ಬರಿಗೆ ಸಹಾಯ ಮಾಡುವ ಪರಿಸ್ಥಿತಿ ಬಂದಾಗ ದೇವರಂತೆ ವರ್ತಿಸುತ್ತೇವೆ. ನಾವೇ ದೊಡ್ಡವರು ಎಂಬಂತೆ ಮಾತನಾಡುತ್ತೇವೆ. ಮನುಷ್ಯನ ದುರಂಹಂಕಾರದ ಉತ್ತುಂಗವನ್ನು ಕಾಣಬೇಕೆಂದರೆ, ಅವನು ಮತ್ತೊಬ್ಬರಿಗೆ ಸಹಾಯ ಮಾಡುವಾಗ ಕಾಣಬಹುದು. ಇವನಿಂದ ಒಂದಷ್ಟು ಸಹಾಯ ಮತ್ತೊಬ್ಬರಿಗೆ ಆಗುತ್ತಿದೆ ಎಂದರೆ ಅವರ ಮನೆಯವರ ಮೇಲೆಲ್ಲಾ ತನ್ನ ಅಧಿಕಾರ, ದರ್ಪವನ್ನು ತೋರುತ್ತಾನೆ, ಹೀಯಾಳಿಸುತ್ತಾನೆ. ಆದರೆ, ಭೀಮ ಎಂದಿಗೂ ಹೀಗೆ ವರ್ತಿಸಲಿಲ್ಲ.

ಅವನು, ಆ ಬರಿಯ ಬ್ರಾಹ್ಮಣನಿಗಲ್ಲ, ಆ ಇಡಿಯ ಪ್ರಾಂತಕ್ಕೆ ಕಂಟಕನಾಗಿದ್ದ ಬಕನನ್ನು ಕೊಂದುಬಂದರೂ ಮತ್ತೊಬ್ಬರಿಗೆ ವಿಷಯ ಸಹಿತ ಹೇಳುವದಿಲ್ಲ. ತನ್ನ ಕರ್ತವ್ಯವನ್ನು ತಾನು ಮಾಡಿ ಸುಮ್ಮನಾಗುತ್ತಾನೆ. ಅಮ್ಮನ ಬಳಿಯೂ ವಿನಯದಿಂದ ಮಾತನಾಡುತ್ತಾನೆ. ಕಂಡಕಂಡ ವಿಷಯಕ್ಕೆಲ್ಲ ತಂದೆತಾಯಿಯರ ಮೇಲೆ ರೇಗುವ, ರೇಗಿ ತಮ್ಮನ್ನು ತಾವು ಧಾರ್ಮಿಕರು ಎಂದು ಕರೆದು ಕೊಳ್ಳುವವರು ಈ ಘಟನೆಯಿಂದ ಪಾಠವನ್ನು ಕಲಿಯಬೇಕು.

ಇದಕ್ಕಿಂತ ಹೆಚ್ಚಿನದಾಗಿ, ಪರಮದರಿದ್ರ ಮಡಿಪಂಚೆಯೊಂದನ್ನು, ಯಾವುದು ಅಂಗವಸ್ತ್ರವಾಗಲಿಕ್ಕೂ ಸಾಧ್ಯವಿಲ್ಲವೋ ಅದನ್ನೇ ಮಡಿಪಂಚೆಯಂತೆ ಮಾಡಿ ಅಸಹ್ಯವಾಗಿ ಉಟ್ಟು, ಓಡಾಡುವ ಜನ ಪಾಠವನ್ನು ಕಲಿಯಬೇಕು. ಮಠಗಳಲ್ಲಿ ಪೂಜೆ ಮಾಡುವಾಗ, ಸಮಾರಾಧನೆಗಳಲ್ಲಿ ಬಡಿಸುವಾಗ ಒಟ್ಟಾರೆ ಮಡಿಯ ಕೆಲಸವನ್ನು ಮಾಡುವಾಗ ಅಸಹ್ಯವಾಗಿ ಬಟ್ಟೆಯುಟ್ಟು ಹೆಣ್ಣು ಮಕ್ಕಳ ಮುಂದೆ ಓಡಾಡುವ ಜನ ಭೀಮನಿಂದ ಪಾಠ ಕಲಿಯಬೇಕು. ನಮ್ಮ ಬಟ್ಟೆ, ನಮ್ಮ ಮಾತು, ನಮ್ಮ ವರ್ತನೆ ಎಂದಿಗೂ ಯಾರಿಗೂ – ವಿಶೇಷವಾಗಿ ಹೆಣ್ಣುಮಕ್ಕಳಿಗೆ – ಅಸಹ್ಯ ಹುಟ್ಟಿಸಬಾರದು.

ನೀವು ಸಮಾರಾಧನೆಯಲ್ಲಿ ಬಡಿಸುವದೇ ಆದರೆ, ಮಠಗಳಲ್ಲಿ ಮಡಿಪಂಚೆಯುಟ್ಟು ಓಡಾಡುವದೇ ಆದರೆ, ನಿಮ್ಮ ಸೊಂಟದಿಂದ ಮೊಣಕಾಲಿನವರಗೆ ನಿಮ್ಮ ದೇಹವನ್ನು ಮುಚ್ಚುವಂತಿರುವ ದೊಡ್ಡ ಮಡಿಪಂಚೆಯನ್ನುಡಿ. ಅಸಹ್ಯವಾಗಿ ಮೈ ಕಾಣುವಂತೆ ಉಡಬಾರದು. ಅಸಹ್ಯವಾಗಿ ವರ್ತಿಸಬಾರದು. ಆ ರೀತಿಯಾಗಿರುವ ಗಂಡಸಿನ ಬಗ್ಗೆ ಹೆಣ್ಣಿಗೆ ಎಂದಿಗೂ ಗೌರವ ಉಂಟಾಗುವದಿಲ್ಲ. ಪ್ರೀತಿಯಂತೂ ಸರ್ವಥಾ ಹುಟ್ಟುವದಿಲ್ಲ.

ಮತ್ತೊಬ್ಬರ ಮನೆಯೊಳಗೆ ಕಾಲಿಡುವದಕ್ಕಿಂತ ಮುಂಚೆ, ಭೀಮನ ಚರ್ಯೆ ನೆನಪಿರಲಿ. ಈ ಮನೆಯಲ್ಲಿ ಮಕ್ಕಳಿದ್ದಾರಾ ? ಮಕ್ಕಳ ಲಾಲನೆ ಪೋಷಣೆಯಲ್ಲಿ ಹೆಣ್ಣುಮಕ್ಕಳು ತೊಡಿಗಿಕೊಂಡಿರಬಹುದಾ? ನಾನು ಒಳಗೆ ಹೋಗುವದಿರಿಂದ ಯಾರಿಗಾದರೂ ಕಿರಿಕಿರಿಯಾಗಬಹುದಾ? ಹೋಗುವ ಅನಿವಾರ್ಯತೆಯಿದ್ದಲ್ಲಿ, ನಿಮ್ಮ ಹೆಂಡತಿಯನ್ನೋ, ಮಗಳನ್ನೋ, ಅಕ್ಕ ತಂಗಿಯರನ್ನೋ, ತಾಯಿಯನ್ನೋ, ಅಥವಾ ಅಲ್ಲಿರುವ ಮತ್ತೊಬ್ಬ ಹೆಣ್ಣು ಮಗಳನ್ನೋ ಒಳ ಹೋಗಿ ನಿಮ್ಮ ಕೆಲಸ ಮಾಡಿಕೊಂಡು ಬರಲು ವಿನಂತಿಸಿ. ಆಗ ಒಳ ಹೋದ ಹೆಣ್ಣಿಗೂ, ಒಳಗಿದ್ದ ಹೆಣ್ಣಿಗೂ ನಿಮ್ಮ ಮೇಲೆ ಅಪಾರವಾದ ಗೌರವ ಮೂಡಿ ಬರುತ್ತದೆ. ನಿಮ್ಮನ್ನು ತಂದೆಯಂತೆ ಗೌರವಿಸುತ್ತಾರೆ. ನೀವಿದ್ದರೆ ಯಾವ ಭಯವಿಲ್ಲ ಎಂಬ ಭರವಸೆಯಲ್ಲಿರುತ್ತಾರೆ.

ನಮ್ಮ ಭೀಮಣ್ಣ ಎಂದಿಗೂ ಹೆಂಗಸರಿಗೆ ನಾಚಿಕೆಯಾಗುವಂತೆ ವರ್ತಿಸುತ್ತಿರಲಿಲ್ಲ. ಎಂದಿಗೂ ಎದುರಿನವರಿಗೆ ಕಿರಿಕಿರಿ ಉಂಟು ಮಾಡಲಿಲ್ಲ. ಆ ಭೀಮಣ್ಣನ ಮತದವರು ನಾವು. ಅವನು ನಡೆದಂತೆ ನಡೆಯಬೇಕಾದವರು. ಅವನ ಅನುಗ್ರಹ ನಮ್ಮ ಮೇಲಿರಲಿ, ನಮ್ಮ ಚರ್ಯೆಗಳು ಉದಾತ್ತವಾಗಿರಲಿ ಎಂದು ಪ್ರಾರ್ಥಿಸಿಕೊಂಡು ಈ ಲೇಖನವನ್ನು ನನ್ನ ಗುರುಗಳ ಅಂತರ್ಯಾಮಿಯಾದ ಮಧ್ವಪತಿ ಶ್ರೀವಿಷ್ಣುನಾಮಕನಾದ ಉಡುಪಿನ ಚೆಲ್ವಕೃಷ್ಣನಿಗೆ ಸಮರ್ಪಿಸುತ್ತೇನೆ.

ಮುಂದಿನ ಲೇಖನದಲ್ಲಿ ಕುಂತಿ ಸಹಿತ ಯಾಕಾಗಿ ಒಳಗೆ ಒಮ್ಮೆಲೇ ಪ್ರವೇಶಿಸಲಿಲ್ಲ, ಯಾಕೆ ಮರೆಯಲ್ಲಿ ನಿಂತು ಅವರ ಮಾತನ್ನು ಆಲಿಸಿದಳು ಎನ್ನುವ ಪ್ರಶ್ನೆಗೆ ಉತ್ತರವನ್ನು ಪಡೆಯೋಣ. ಶ್ರೀಮದಾಚಾರ್ಯರು ಬದುಕಿನ ಮತ್ತೊಂದು ಪಾಠವನ್ನು ಕಲಿಸಿದ್ದಾರೆ, ಅದನ್ನು ತಿಳಿಯೋಣ.

ಇವುಗಳೂ ನಿಮಗಿಷ್ಟವಾಗಬಹುದು

vishwanandini-020

ವಿಶ್ವನಂದಿನಿ ಲೇಖನ ಮಾಲೆ – 020

ಶ್ರೀಕನಕದಾಸರ ಹರಿಭಕ್ತಿಸಾರ ವಿಷ್ಣುದಾಸರ ಸಾರಾಮೃತವ್ಯಾಖ್ಯಾನದೊಂದಿಗೆ ಪದ್ಯ – ೨ ದೇವದೇವ ಜಗದ್ಭರಿತ ವಸು- ದೇವಸುತ ಜಗದೇಕನಾಥ ರ- ಮಾವಿನೋದಿತ ಸಜ್ಜನಾನತ …

Leave a Reply

Your email address will not be published. Required fields are marked *