vishwanandini-005

ವಿಶ್ವನಂದಿನಿ ಲೇಖನ ಮಾಲೆ – 005

ಗ್ರಹಣಕಾಲದಲ್ಲಿ ಪಠಿಸಬೇಕಾದ ಶ್ಲೋಕಗಳ ಅರ್ಥಾನುಸಂಧಾನ

ಗ್ರಹಣದ ಸಂದರ್ಭದಲ್ಲಿ ಅಷ್ಟದಿಕ್ಕುಗಳಲ್ಲಿ ನೆಲೆನಿಂತು ನಮ್ಮನ್ನು ರಕ್ಷಿಸುವ ದೇವತೆಗಳನ್ನು ವಿಶೇಷವಾಗಿ ಪ್ರಾರ್ಥಿಸಬೇಕು ಎಂದು ಶಾಸ್ತ್ರ ತಿಳಿಸುತ್ತದೆ.

ಕೆಳಗಿನ ಶ್ಲೋಕಗಳನ್ನು ಅರ್ಥದ ಸಮೇತವಾಗಿ ಮೊದಲಿಗೆ ಒಂದೆರಡು ಬಾರಿ ಓದಿ, ಅದನ್ನು ಮನಸ್ಸಿಗೆ ತಂದು ಕೊಂಡು ಆ ಬಳಿಕ ಆ ಶ್ಲೋಕಗಳನ್ನು ಪಠಿಸುತ್ತಾ ಆ ದೇವತೆಗಳಿಗೆ ಅವರ ಅಂತರ್ಯಾಮಿಯಾದ ಭಗವಂತನಿಗೆ ನಮಸ್ಕಾರಗಳನ್ನು ಸಮರ್ಪಿಸಿ.

ಮೊಟ್ಟ ಮೊದಲಿಗೆ ಗುರುಗಳ, ಪರಮಗುರುಗಳ, ಗುರುಪರಂಪರೆಯ ಜ್ಞಾನಿಗಳ, ಶ್ರೀಮದಾಚಾರ್ಯರ, ವೇದವ್ಯಾಸದೇವರ ಪರಮಮಂಗಳ ರೂಪಗಳನ್ನು ನೆನೆದು ನಮಸ್ಕರಿಸಿ.

ಮೊದಲಿಗೆ ಪೂರ್ವದಿಕ್ಕಿಗೆ ಮುಖ ಮಾಡಿ ಎರಡೂ ಕೈಗಳನ್ನು ಜೋಡಿಸಿ, ಪೂರ್ವದಿಕ್ಕಿನಲ್ಲಿ ಸಮಸ್ತ ಋಷಿಮುನಿಗಳಿಂದ ಸೇವಿತರಾದ ಶ್ರೀ ಶಚೀಪತಿಯಾದ ಇಂದ್ರದೇವರಿದ್ದಾರೆ. ಅವರ ನಿಯಾಮಕರಾಗಿ ಭಾರತೀಪತಿ ಮುಖ್ಯಪ್ರಾಣದೇವರಿದ್ದಾರೆ. ಅವರ ನಿಯಾಮಕನಾಗಿ ಸ್ವಾಮಿ ಲಕ್ಷ್ಮೀಪತಿ ಉಪೇಂದ್ರ ಇದ್ದಾನೆ. ಅವರನ್ನು ಭಕ್ತಿಯಿಂದ ಸ್ಮರಿಸುತ್ತ ಕೆಳಗಿನ ಶ್ಲೋಕವನ್ನು ಹೇಳಿ.

ಯೋsಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ
ಸಹಸ್ರನಯನಃ ಶಕ್ರೋ ಗ್ರಹಪೀಡಾಂ ವ್ಯಪೋಹತು

ಕೈಯಲ್ಲಿ ವಜ್ರಾಯುಧವನ್ನು ಹಿಡಿದ, ಸಮಸ್ತದೇವತೆಗಳ ಒಡೆಯನಾದ, ಸಾವಿರ ಕಣ್ಣುಗಳ ಇಂದ್ರ, ಅವನ ಅಂತರ್ಯಾಮಿಯಾದ ಮಧ್ವೇಶ ಕೃಷ್ಣ ನನಗೆ ಮತ್ತು ನನ್ನವರಿಗೆ ಉಂಟಾಗುವ ಗ್ರಹಪೀಡೆಯನ್ನು ನಾಶ ಮಾಡಲಿ. ನಮಗೆ ಸಾಧನೆಗೆ ಬೇಕಾದ ಸಕಲ ಸಂಪತ್ತನ್ನು ಅನುಗ್ರಹಿಸಲಿ ಎಂದು ಪ್ರಾರ್ಥನೆ ಮಾಡಿ ನಮಸ್ಕಾರಗಳನ್ನು ಸಮರ್ಪಿಸಿ.

ಆ ಬಳಿಕ ಆಗ್ನೇಯ ದಿಕ್ಕಿಗೆ ತಿರುಗಿ. ಶ್ರೇಷ್ಠ ಕರ್ಮಗಳನ್ನು ಮಾಡಿದ ಶ್ರೇಷ್ಠ ಜೀವರಿಂದ ಸೇವಿತರಾದ ಶ್ರೀ ಸ್ವಾಹಾ-ಸ್ವಧಾಪತಿಯಾದ ಅಗ್ನಿದೇವರು ಆ ದಿಕ್ಕಿನಲ್ಲಿದ್ದು ಆ ದಿಕ್ಕಿನ ಒಡೆಯರಾಗಿ ನಮ್ಮನ್ನು ಸರ್ವದಾ ರಕ್ಷಣೆ ಮಾಡುತ್ತಿರುತ್ತಾರೆ. ಅವರ ಅಂತರ್ಯಾಮಿಯಾಗಿ ಭಾರತೀಪತಿ ಮುಖ್ಯಪ್ರಾಣದೇವರಿದ್ದಾರೆ. ಅವರ ಅಂತರ್ಯಾಮಿಯಾಗಿ ಸ್ವಾಮಿ ಹರಿಣೀಪತಿ ಪರಶುರಾಮನಿದ್ದಾನೆ. ಅವನಿಗೆ ಭಕ್ತಿಪೂರ್ಣ ನಮಸ್ಕಾರಗಳನ್ನು ಸಮರ್ಪಿಸಿ ಕೆಳಗಿನ ಶ್ಲೋಕವನ್ನು ಪಠಿಸಿ.

ಮುಖಂ ಯಃ ಸರ್ವದೇವಾನಾಂ ಸಪ್ತಾರ್ಚಿರಮಿತದ್ಯುತಿಃ
ಚಂದ್ರೋಪರಾಗಸಂಭೂತಾಂ ಗ್ರಹಪೀಡಾಂ ವ್ಯಪೋಹತು

ಸಮಸ್ತದೇವತೆಗಳೂ ಯಾರ ಮುಖಾಂತರ ನಮ್ಮಿಂದ ಹವಿಸ್ಸನ್ನು ಸ್ವೀಕರಿಸುತ್ತಾರೆಯೋ ಅಂತಹ ಮಹಾತೇಜಸ್ಸಿನ ಅಗ್ನಿದೇವರು ಚಂದ್ರಗ್ರಹಣದಿಂದ ಉಂಟಾಗುವ ತೊಂದರೆಯನ್ನು ವಿನಾಶಮಾಡಲಿ. ನಮಗೆ ಮಂಗಳವನ್ನು ನೀಡಲಿ. ನಮ್ಮಿಂದ ಯಜ್ಞಾದಿಸತ್ಕರ್ಮಗಳನ್ನು ಮಾಡಿಸಲಿ ಎಂದು ಪ್ರಾರ್ಥನೆ ಮಾಡಿ ನಮಸ್ಕಾರಗಳನ್ನು ಸಮರ್ಪಿಸಿ.

ಆ ಬಳಿಕ ದಕ್ಷಿಣ ದಿಕ್ಕಿಗೆ ತಿರುಗಿ. ಸಮಸ್ತಪಿತೃಗಳಿಂದ ಸೇವಿತರಾದ ಶ್ಯಾಮಲಾಪತಿಯಾದ ಯಮಧರ್ಮದೇವರು ದಕ್ಷಿಣದಿಕ್ಪತಿಯಾಗಿ ನಮ್ಮನ್ನು ರಕ್ಷಿಸುತ್ತಿದ್ದಾರೆ. ಅವರ ಅಂತರ್ಯಾಮಿಯಾಗಿ ಭಾರತೀಪತಿಮುಖ್ಯಪ್ರಾಣದೇವರಿದ್ದಾರೆ. ಅವರ ಅಂತರ್ಯಾಮಿಯಾಗಿ ಹರಿಣೀಪತಿ ಪರಶುರಾಮ ಮತ್ತು ಸೀತಾಪತಿ ರಾಮಚಂದ್ರ ಈ ಎರಡು ರೂಪಗಳಿಂದ ನಮ್ಮ ಸ್ವಾಮಿ ಇದ್ದಾನೆ. ಇವರೆಲ್ಲರಿಗೆ ಭಕ್ತಿಪೂರ್ಣ ನಮಸ್ಕಾರಗಳನ್ನು ಮಾಡಿ ಕೆಳಗಿನ ಶ್ಲೋಕವನ್ನು ಪಠಿಸಿ.

ಯಃ ಕರ್ಮಸಾಕ್ಷೀ ಲೋಕಾನಾಂ ಧರ್ಮೋ ಮಹಿಷವಾಹನಃ
ಯಮಶ್ಚಂದ್ರೋಪರಾಗೋತ್ಥಾಂ ಗ್ರಹಪೀಡಾಂ ವ್ಯಪೋಹತು

ಅನಂತಜೀವರು ಮಾಡುವ ಸಕಲಕರ್ಮಗಳಿಗೂ ಸಾಕ್ಷಿಯಾದ, ಮಹಿಷವಾಹನರಾದ ಶ್ರೀ ಯಮಧರ್ಮದವೇರು ನನಗೆ ಮತ್ತು ನನ್ನ ಕುಟುಂಬಕ್ಕೆ ಉಂಟಾಗಬಹುದಾದ, ಗ್ರಹಣದ ಪೀಡೆಯನ್ನು ಕಳೆದು ನಮ್ಮನ್ನು ರಕ್ಷಿಸಲಿ. ನಮ್ಮ ಆಯುಷ್ಯ ಸಾಧನೆಗೆ ಉಪಯೋಗ ಬೀಳುವಂತೆ ಅನುಗ್ರಹಿಸಲಿ, ಎಂದು ಪ್ರಾರ್ಥಿಸಿ ನಮಸ್ಕಾರಗಳನ್ನು ಸಮರ್ಪಸಿ.

ಆ ಬಳಿಕ ನೈಋತ್ಯ ದಿಕ್ಕಿಗಿ ತಿರುಗಿ. ಕೈಗಳನ್ನು ಜೋಡಿಸಿ. ಅಲ್ಲಿ ಸಮಸ್ತ ರಾಕ್ಷಸರು ಎಂಬ ಹೆಸರುಳ್ಳ ಸಜ್ಜೀವರಿಂದ ಸೇವಿತರಾದ (ಮೋಕ್ಷಯೋಗ್ಯರಲ್ಲಿಯೂ ರಾಕ್ಷಸರು ಎಂಬ ಹೆಸರಿನ ಜೀವರ ಗುಂಪಿದೆ ಎಂದು ಶ್ರೀಮಟ್ಟೀಕಾಕೃತ್ಪಾದರು ನಿರ್ಣಯಿಸಿದ್ದಾರೆ) ನಿಋೃತಿದೇವತೆಯಿದ್ದಾರೆ. ಅವರ ಅಂತರ್ಯಾಮಿಯಾಗಿ ಭಾರತೀಪತಿಮುಖ್ಯಪ್ರಾಣದೇವರಿದ್ದಾರೆ. ಅವರ ಅಂತರ್ಯಾಮಿಯಾಗಿ ಸ್ವಾಮಿ ಲಕ್ಷ್ಮೀನರಸಿಂಹನಿದ್ದಾನೆ. ಅವರೆಲ್ಲಿಗೆ ಭಕ್ತಿಪೂರ್ಣ ನಮಸ್ಕಾರಗಳನ್ನು ಸಲ್ಲಿಸಿ ಕೆಳಗಿನ ಶ್ಲೋಕವನ್ನು ಪಠಿಸಿ.

ರಕ್ಷೋಗಣಾಧಿಪಃ ಸಾಕ್ಷಾತ್ ನೀಲಾಂಜನಸಮಪ್ರಭಃ
ಖಡ್ಗಹಸ್ತೋsತಿಭೀಮಶ್ಚ ಗ್ರಹಪೀಡಾಂ ವ್ಯಪೋಹತು

ರಾಕ್ಷಸರು ಎಂಬ ಸಜ್ಜೀವರ ಗಣಕ್ಕೆ ಅಧಿಪತಿಯಾದ, ಕಡುಗಪ್ಪು ಮೈಬಣ್ಣದ, ಕೈಯಲ್ಲಿ ಖಡ್ಗವನ್ನು ಹಿಡಿದ, ದುಷ್ಟರಾಕ್ಷಸರಿಗೆ ಭಯಂಕರನಾದ ನಿಋೃತಿ ಈ ಗ್ರಹಣದಿಂದ ಉಂಟಾದ ಪೀಡೆಯನ್ನು ಕಳೆಯಲಿ. ನಮ್ಮ ಸಾಧನ ಮಾರ್ಗದಲ್ಲಿ ವಿಘ್ನವನ್ನು ತಂದೊಡ್ಡುವ ರಾಕ್ಷಸರನ್ನು ವಿನಾಶ ಮಾಡಲಿ. ನಮ್ಮನ್ನು ಸದಾ ಸನ್ಮಾರ್ಗದಲ್ಲಿರಲಿ ಎಂದು ಭಕ್ತಿಯಿಂದ ಪ್ರಾರ್ಥಿಸಿ ನಮಸ್ಕಾರಗಳನ್ನು ಸಮರ್ಪಿಸಿ.

ಆ ಬಳಿಕ ಪಶ್ಟಿಮ ದಿಕ್ಕಿಗೆ ತಿರುಗಿ, ಸಮಸ್ತ ನದೀನದಗಳಿಂದ ಸೇವಿತರಾದ ಗಂಗಾಪತಿಯಾದ ವರುಣದೇವರು ಪಶ್ಚಿಮ ದಿಕ್ಕಿಗೆ ಅಧಿಪತಿಯಾಗಿ ನಮ್ಮನ್ನು ರಕ್ಷಣೆ ಮಾಡುತ್ತಿದ್ದಾರೆ. ಅವರ ಅಂತರ್ಯಾಮಿಯಾಗಿ ಭಾರತೀಪತಿ ಮುಖ್ಯಪ್ರಾಣದೇವರಿದ್ದಾರೆ. ಅವರ ಅಂತರ್ಯಾಮಿಯಾಗಿ ಲಕ್ಷ್ಮೀಪತಿ ಮತ್ಸ್ಯನಿದ್ದಾನೆ. ಅವರೆಲ್ಲರಿಗೆ ನಮಸ್ಕಾರಗಳನ್ನು ಸಮರ್ಪಿಸಿ ಭಕ್ತಿಯಿಂದ ಕೆಳಗಿನ ಶ್ಲೋಕವನ್ನು ಪಠಿಸಿ.

ನಾಗಪಾಶಧರೋ ದೇವಃ ಸದಾ ಮಕರವಾಹನಃ
ಸ ಜಲಾಧಿಪತಿರ್ದೇವಃ ಗ್ರಹಪೀಡಾಂ ವ್ಯಪೋಹತು

ಹಾವನ್ನೇ ಪಾಶವನ್ನಾಗಿ ಹಿಡಿದ, ಮೊಸಳೆಯನ್ನು ವಾಹನವನ್ನಾಗಿ ಮಾಡಿಕೊಂಡ ಜಗತ್ತಿನ ಎಲ್ಲ ನೀರಿಗೂ ಒಡೆಯರಾದ ಗಂಗಾಪತಿ ವರುಣದೇವರು ಗ್ರಹಣದ ಸಕಲಪೀಡೆಯನ್ನೂ ನಿವಾರಿಸಲಿ. ನಮ್ಮ ಸಾಧನೆಗೆ ಉತ್ತಮವಾದ, ಶುದ್ಧವಾದ ನೀರು ದೊರೆಯುವಂತೆ ಅನುಗ್ರಹಿಸಲಿ ಎಂದು ಭಕ್ತಿಯಿಂದ ಪ್ರಾರ್ಥನೆ ಮಾಡಿ ನಮಸ್ಕಾರಗಳನ್ನು ಸಮರ್ಪಿಸಿ.

ಆ ಬಳಿಕ ವಾಯವ್ಯ ದಿಕ್ಕಿಗೆ ತಿರುಗಿ. ಪ್ರಾವಹೀಪತಿಯಾದ ಪ್ರವಹವಾಯುದೇವರು ಅಲ್ಲಿದ್ದು ನಮ್ಮನ್ನು ಕಾಪಾಡುತ್ತಿರುತ್ತಾರೆ. ಅವರ ಅಂತರ್ಯಾಮಿಯಾಗಿ ಭಾರತೀಪತಿ ಮುಖ್ಯಪ್ರಾಣದೇವರಿದ್ದಾರೆ. ಅವರ ಅಂತರ್ಯಾಮಿಯಾಗಿ ಸ್ವಾಮಿ ರುಗ್ಮಿಣೀಪತಿ ಶ್ರೀಕೃಷ್ಣನಿದ್ದಾನೆ. ಅವರಿಗೆ ಭಕ್ತಿಪೂರ್ಣನಮಸ್ಕಾರಗಳನ್ನು ಸಲ್ಲಿಸಿ ಕೆಳಗಿನ ಶ್ಲೋಕವನ್ನು ಪಠಣ ಮಾಡಿ.

ಪ್ರಾಣರೂಪೋ ಹಿ ಲೋಕಾನಾಂ ಸದಾ ಕೃಷ್ಣಮೃಗಪ್ರಿಯಃ
ವಾಯುಶ್ಚಂದ್ರೋಪರಾಗೋತ್ಥಾಂ ಗ್ರಹಪೀಡಾಂ ವ್ಯಪೋಹತು

ಸಮಸ್ತ ಜಗತ್ತಿಗೆ ಉಸಿರನ್ನು ನೀಡುವ, ತಮಗೆ ಪ್ರಿಯವಾದ ಜಿಂಕೆಯನ್ನು ವಾಹನವನ್ನಾಗಿ ಮಾಡಿಕೊಂಡಿರುವ ಪ್ರವಹವಾಯುದೇವರು ಗ್ರಹಣದಿಂದ ಉಂಟಾಗುವ ಪೀಡೆಯನ್ನು ಕಳೆದು ನಮ್ಮನ್ನು ಸಾಧನಮಾರ್ಗದಲ್ಲಿರಸಲಿ. ನಮ್ಮ ಪ್ರತಿಯೊಂದು ಉಸಿರೂ ಜ್ಞಾನಾರ್ಜನೆಗೆ ಉಪಯೋಗವಾಗುವಂತೆ ಅನುಗ್ರಹಿಸಲಿ ಎಂದು ಭಕ್ತಿಯಿಂದ ಪ್ರಾರ್ಥಿಸಿ ನಮಸ್ಕಾರಗಳನ್ನು ಸಮರ್ಪಿಸಿ.

ಆ ಬಳಿಕ ಉತ್ತರ ದಿಕ್ಕಿಗೆ ತಿರುಗಿ. ಅಲ್ಲಿ ಸಮಸ್ತ ಯಕ್ಷ ಗಂಧರ್ವರಿಂದ ಸೇವಿತರಾದ ಋದ್ಧಿಪತಿ ಕುಬೇರದೇವರಿದ್ದಾರೆ. ಅವರ ಅಂತರ್ಯಾಮಿಯಾಗಿ ಮುಖ್ಯಪ್ರಾಣದೇವರಿದ್ದಾರೆ. ಅವರ ಅಂತರ್ಯಾಮಿಯಾಗಿ ಲಕ್ಷ್ಮೀಪತಿ ಕಲ್ಕಿಯಿದ್ದಾನೆ. ಅವರೆಲ್ಲರಿಗೂ ನಮಸ್ಕಾರಗಳನ್ನು ಸಮರ್ಪಿಸಿ ಕೆಳಗಿನ ಶ್ಲೋಕವನ್ನು ಪಠಿಸಿ.

ಯೋsಸೌ ನಿಧಿಪತಿರ್ದೇವಃ ಖಡ್ಗಶೂಲಗದಾಧರಃ
ಚಂದ್ರೋಪರಾಗಕಲುಷಂ ಧನದೋsತ್ರ ವ್ಯಪೋಹತು

ಸಂಪತ್ತಿಗೆ ಒಡೆಯರಾದ, ಕೈಯಲ್ಲಿ ಕತ್ತಿ, ಶೂಲ, ಗದೆಗಳನ್ನು ಹಿಡಿದ ಋದ್ಧಿಪತಿ ಕುಬೇರದೇವರು ಚಂದ್ರಗ್ರಹಣದಿಂದ ಉಂಟಾದ ಕಾಲುಷ್ಯವನ್ನು ದೂರ ಮಾಡಲಿ. ನಮ್ಮ ಸಾಧನೆಗೆ ಅನುಕೂಲವಾಗುವಂತೆ ಸಂಪತ್ತನ್ನು ನೀಡಲಿ. ಎಂದಿಗೂ ನಮ್ಮಿಂದ ಅಪಾತ್ರರಿಗೆ ದಾನವನ್ನು ಮಾಡಿಸದಿರಲಿ, ಎಂದು ಪ್ರಾರ್ಥನೆ ಮಾಡಿ ನಮಸ್ಕಾರಗಳನ್ನು ಸಲ್ಲಿಸಿ. (ಕುಬೇರನ ಅನುಗ್ರಹವಿದ್ದರೆ ನಮ್ಮಿಂದ ಅಪಾತ್ರದಾನ ನಡೆಯುವದಿಲ್ಲ, ಮತ್ತು ಹಣ ಕಳೆದುಹೋಗುವದಿಲ್ಲ. )

ಆ ಬಳಿಕ ಈಶಾನ್ಯದಿಕ್ಕಿಗೆ ತಿರುಗಿ ಕೈಜೋಡಿಸಿ. ಸಮಸ್ತ ಭೂತಗಣಗಳಿಂದ, ದೇವತಾಪುಂಗವರಿಂದ ಪೂಜಿತರಾದ ಶ್ರೀ ಉಮಾಪತಿಯಾದ ರುದ್ರದೇವರು ಈಶಾನ್ಯದಿಕ್ಕಿಗೆ ಅಧಿಪತಿಯಾಗಿ ಕುಳಿತು ನಮ್ಮನ್ನು ರಕ್ಷಣೆ ಮಾಡುತ್ತಿರುತ್ತಾರೆ. ಅವರ ಅಂತರ್ಯಾಮಿಯಾಗಿ ಭಾರತೀಪತಿಮುಖ್ಯಪ್ರಾಣದೇವರಿದ್ದಾರೆ. ಅವರ ಅಂತರ್ಯಾಮಿಯಾಗಿ ಜಯಾಪತಿ ಸಂಕರ್ಷಣನಿದ್ದಾನೆ. ಅವರೆಲ್ಲರಿಗೂ ನಮಸ್ಕಾರಗಳನ್ನು ಮಾಡಿ ಕೆಳಗಿನ ಶ್ಲೋಕವನ್ನು ಪಠಿಸಿ.

ಯೋsಸಾವಿಂದುಧರೋ ದೇವಃ ಪಿನಾಕೀ ವೃಷವಾಹನಃ
ಚಂದ್ರೋಪರಾಗಪಾಪಾನಿ ಸ ನಾಶಯತು ಶಂಕರಃ

ಚಂದ್ರನನ್ನು ತಲೆಯಲ್ಲಿ ಮುಡಿದ, ಕೈಯಲ್ಲಿ ಪಿನಾಕವನ್ನು ಹಿಡಿದ, ಭಜಿಸುವ ಜನರಿಗೆ ದಾಪಂತ್ಯದ ಸುಖವನ್ನು ಕರುಣಿಸುವ ಪಾರ್ವತೀಪತಿ ರುದ್ರದೇವರು ಚಂದ್ರಗ್ರಹಣದಿಂದ, ನನಗೆ, ನನ್ನವರಿಗೆ, ಜಗತ್ತಿಗೆ ಉಂಟಾಗುವ ಪೀಡೆಯನ್ನು ಕಳೆಯಲಿ. ಸಾಧನಮಾರ್ಗದಲ್ಲಿ ನಡೆಯುವ ಮನಸ್ಸನ್ನಿತ್ತು ನಮ್ಮನ್ನು ಉದ್ಧರಿಸಲಿ. ಹೀಗೆ ಭಕ್ತಿಪೂರ್ವಕವಾಗಿ ಪ್ರಾರ್ಥಿಸಿ, ನಮಸ್ಕಾರಗಳನ್ನು ಸಲ್ಲಿಸಿ.

ಆ ಬಳಿಕ ಪೂರ್ವಕ್ಕೆ ತಿರುಗಿ, ಎರಡೂ ಕೈಗಳನ್ನು ಮೇಲೆತ್ತಿ ಮಣ್ಣು, ಮರಳು, ಕಲ್ಲು, ನೀರು, ಗುಡ್ಡ, ಪರ್ವತ, ಸಮುದ್ರಗಳು, ಲೋಕಗಳು, ಬ್ರಹ್ಮಾಂಡ, ಅವ್ಯಾಕೃತಆಕಾಶ ಆ ಎಲ್ಲದರಲ್ಲಿ ಅಣುವಿನಲ್ಲಿ ಅಣುವಾಗಿ, ಮಹತ್ತಿನಲ್ಲಿ ಮಹತ್ತಾಗಿ ನೆಲೆನಿಂತ ಲಕ್ಷ್ಮೀನಾರಾಯಣನನ್ನು ನೆನೆಯುತ್ತ ಕೆಳಗಿನ ಶ್ಲೋಕವನ್ನು ಪಠಿಸಿ.

ತ್ರೈಲೋಕ್ಯೇ ಯಾನಿ ಭೂತಾನಿ ಸ್ಥಾವರಾಣಿ ಚರಾಣಿ ಚ
ಬ್ರಹ್ಮವಿಷ್ಣ್ವರ್ಕರುದ್ರಾಶ್ಚ ದಹಂತು ಮಮ ಪಾತಕಮ್

ಸಮಗ್ರ ಸಾವರಣ ಬ್ರಹ್ಮಾಂಡದಲ್ಲಿ ಇರುವ ಪ್ರತಿಯೊಂದು ಪದಾರ್ಥದಲ್ಲಿ ಇರುವ ದೇವತೆಗಳು, ಅವರನ್ನು ನಿಯಮಿಸುವ ಪಾರ್ವತೀಶ ರುದ್ರದೇವರು, ಅವರನ್ನು ನಿಯಮಸುವ ಭಾರತೀಶ ಪ್ರಾಣದೇವರು, ಎಲ್ಲರ ಪಿತಾಮಹ ಶಾರದಾಪತಿ ಬ್ರಹ್ಮದೇವರು ಸರ್ವರೊಡೆಯ ಎಲ್ಲರಂತರ್ಯಾಮಿ, ಭಕ್ತವತ್ಸಲ, ಭಕ್ತಾಪರಾಧಸಹಿಷ್ಣು, ಕರುಣಾವಾರಿಧಿ ಲಕ್ಷ್ಮೀನಾರಾಯಣ ಇವರೆಲ್ಲರೂ ನನ್ನಲ್ಲಿರುವ ಪಾಪಗಳನ್ನು ಕಳೆಯಲಿ. ನನ್ನ ಆಪತ್ತುಗಳನ್ನು ಪರಿಹರಿಸಲಿ. ನನಗೆ ಸಾಧನಯೋಗ್ಯವಾದ ಸಂಪತ್ತನ್ನು ಕರುಣಿಸಿಲಿ. ನನ್ನನ್ನು ಸದಾ ಸಾಧನಮಾರ್ಗದಲ್ಲಿ ನಡೆಸಲಿ ಎಂದು ಪ್ರಾರ್ಥಿಸಿ.

ಆ ಬಳಿಕ ನಮ್ಮ ಗುರುಗಳಿಂದ ಆರಂಭಿಸಿಕೊಂಡು ವೇದವ್ಯಾಸದೇವರವರೆಗಿನ ಸಮಸ್ತ ಗುರುಗಳನ್ನೂ ನೆನೆದು, ಅವರಿತ್ತ ಜ್ಞಾನ ಭಕ್ತಿ ವೈರಾಗ್ಯಗಳನ್ನು ಅವರ ಪಾದಕ್ಕೇ ಸಮರ್ಪಿಸಿ, ಮತ್ತಷ್ಟು ನೀಡುವಂತೆ ಪ್ರಾರ್ಥಿಸಿ, ಈ ಗ್ರಹಣಕಾಲದ ಪ್ರಾರ್ಥನೆಯಿಂದ ಉಂಟಾದ ಪುಣ್ಯವನ್ನು ಆ ಗುರುಗಳ ಪಾದಕ್ಕೊಪ್ಪಿಸಿ.

ಅನೇನ ಆಗತಂ ಯತ್ ಪುಣ್ಯಂ ತದಾಪ್ನೋತು ಗುರುರ್ಮಮ.

ಈ ಲೇಖನದಿಂದ ನನ್ನ ಗುರುಗಳು ಪ್ರೀತರಾಗಲಿ, ಗುರುಪರಂಪರೆ ಪ್ರೀತವಾಗಲಿ, ಶ್ರೀಮದಾಚಾರ್ಯರು ಪ್ರೀತರಾಗಲಿ. ಸಮಸ್ತಗುರುವಾದ ವೇದವ್ಯಾಸದೇವರು, ಜಗದ್ಗುರುವಾದ ನಮ್ಮ ಉಡುಪಿನ ಚೆಲ್ವ ಸಿರಿಕೃಷ್ಣ ಪ್ರೀತನಾಗಲಿ.

ಇವುಗಳೂ ನಿಮಗಿಷ್ಟವಾಗಬಹುದು

vishwanandini-020

ವಿಶ್ವನಂದಿನಿ ಲೇಖನ ಮಾಲೆ – 020

ಶ್ರೀಕನಕದಾಸರ ಹರಿಭಕ್ತಿಸಾರ ವಿಷ್ಣುದಾಸರ ಸಾರಾಮೃತವ್ಯಾಖ್ಯಾನದೊಂದಿಗೆ ಪದ್ಯ – ೨ ದೇವದೇವ ಜಗದ್ಭರಿತ ವಸು- ದೇವಸುತ ಜಗದೇಕನಾಥ ರ- ಮಾವಿನೋದಿತ ಸಜ್ಜನಾನತ …

Leave a Reply

Your email address will not be published. Required fields are marked *