vishwanandini-003

ವಿಶ್ವನಂದಿನಿ ಲೇಖನ ಮಾಲೆ – 003

ಶ್ರೀ ಪುರಂದರದಾಸಾರ್ಯರ ಮೂರ್ಖರಾದರು ಲೋಕದೊಳಗೆ ಎಂಬ ಹಾಡಿನ ಪಲ್ಲವಿಯ ಮತ್ತು ಮೊದಲ ನುಡಿಯ ಅರ್ಥವನ್ನು ಹಿಂದಿನ ಲೇಖನದಲ್ಲಿ ಅನುಸಂಧಾನ ಮಾಡಿದೆವು. ಈಗ ಎರಡನೆಯ ಪದ್ಯದ ಅರ್ಥ.

ಮೂರ್ಖರಾದರು ಇವರು ಲೋಕದೊಳಗೆಲ್ಲಾ
ಏಕದೈವವ ಬಿಟ್ಟು ಕಾಕು ದೈವವ ಭಜಿಸಿ ।। ಪ ।।

ಹಡೆದ ಮಕ್ಕಳ ಮಾರಿ ಒಡಲ ಹೊರೆವವ ಮೂರ್ಖ
ಮಡದಿ ಹುಟ್ಟಿದ ಮನೆಯೊಳಿರುವವನು ಮೂರ್ಖ
ಬಡತನವು ಬಂದಾಗ ಬೈದುಕೊಳ್ಳುವವ ಮೂರ್ಖ
ದೃಢಭಕ್ತಿಯಿಲ್ಲದವ ಕಡುಮೂರ್ಖನಯ್ಯ ।। ೨ ।।

ಹಡೆದ ಮಕ್ಕಳ ಮಾರಿ ಒಡಲ ಹೊರೆವವ ಮೂರ್ಖ

ಹಿಂದಿನ ನಾಲ್ಕು ಸಾಲುಗಳಲ್ಲಿ ಪರಮಾತ್ಮನನ್ನು ತಿಳಿಯದ ಮಂದಿಯಲ್ಲಿ ಹೇಗೆ ಮೂರ್ಖತನ ಮನೆ ಮಾಡುತ್ತದೆ ಎಂದು ತಿಳಿಸಿದ ಶೀ ಪುರಂದರದಾಸರು, ಈಗ, ಪರಮಾತ್ಮನಲ್ಲಿ ನಂಬುಗೆ ಇಲ್ಲದ ಮಂದಿ ಹೇಗೆ ಮೂರ್ಖರಾಗುತ್ತಾರೆ ಎನ್ನುವದನ್ನು ತಿಳಿಸುತ್ತಾರೆ

ಮನುಷ್ಯ ಮಕ್ಕಳನ್ನು ಮಾಡಿಕೊಳ್ಳುವದೇ ತನ್ನ ಸಂತಸಕ್ಕಾಗಿ, ಸಂತತಿಯನ್ನು ಮುಂದುವರೆಸುವದಕ್ಕಾಗಿ. ಮತ್ತು ಈ ಜಗತ್ತಿನಲ್ಲಿ ನಾವು ಮಕ್ಕಳಿಂದ ಅನುಭವಿಸುವಷ್ಟು “ಪರಿಶುದ್ಧ” ಸುಖವನ್ನು ಇನ್ಯಾವುದರಿಂದಲೂ ಅನುಭವಿಸಲು ಸಾಧ್ಯವಿಲ್ಲ. ಅದೊಂದು ನಲ್ಮೆಯ ಅನುಬಂಧ. ನಮ್ಮ ಕೆಲಸ, ಗೆಳೆಯರು, ಹೆಂಡತಿ ಇವೆಲ್ಲದರಿಂದ ಏನು ಸುಖ ದೊರೆಯುತ್ತದೆ, ಆ ಸುಖವನ್ನು ಕೆಲ ಸಂದರ್ಭಗಳಲ್ಲಿ ಅನುಭವಿಸಬಹುದು, ಆನುಭವಿಸದಿರಲಾಗಬಹುದು. ಆದರೆ, ನಮ್ಮ ಮನಸ್ಸು ಅದೆಂಥ ಹೊಯ್ದಾಟದಲ್ಲಿದ್ದರೂ, ನೋವಿನಲ್ಲಿದ್ದರೂ ಮುದ್ದು ಮಗುವಿನ ನಗು ನಮಗೆ ಸುಖ ನೀಡುತ್ತದೆ. ನಮ್ಮ ಮಗುವಲ್ಲದೇ ಇದ್ದರೂ ಬೇರೆಯ ಮಕ್ಕಳ ಆಟ ಪಾಠಗಳೂ ನಮ್ಮ ಮನಸ್ಸಿಗೆ ಸುಖವನ್ನು ನೀಡುತ್ತದೆ. ಇನ್ನು, ನಮ್ಮ ಮಕ್ಕಳು ನಮ್ಮ ಕೊರಳಿಗೆ ತಮ್ಮ ಕೈಗಳ ಹಾರವನ್ನು ಹಾಕಿ ಅಪ್ಪಿಕೊಂಡಾಗ, ಮುಖಕ್ಕೆ ಪ್ರೀತಿಯಿಂದ ಮುದ್ದಿಟ್ಟಾಗ ಆಗುವ ಸುಖ ಇನ್ಯಾವ ಲೌಕಿಕ ಸುಖಕ್ಕೆ ಸಾಟಿ? ಕಾರಣ, ಆ ಸುಖದಲ್ಲಿ ನಾವು ಸಂತೃಪ್ತಿಯ ತುಂಗವನ್ನು ಮುಟ್ಟಿಬಿಡುತ್ತೇವೆ.

ಅಷ್ಟೇ ಅಲ್ಲ, ಆ ಮಕ್ಕಳನ್ನು ನಾವು ಸುಸಂಸ್ಕತರನ್ನಾಗಿ, ಬುದ್ಧಿವಂತರನ್ನಾಗಿ ಬೆಳೆಸಿದರೆ, ಆ ಮಕ್ಕಳ ಪ್ರತಿಯೊಂದು ಯಶಸ್ಸೂ ನಮಗೆ ಸುಖವನ್ನೀಯುತ್ತದೆ. ಹಡೆದ ಮಗಳು ತೊಡೆಯ ಮೇಲಾಡಿ, ಕಾಲ್ಗೆಜ್ಜೆ ಹಾಕಿಕೊಂಡು ಮನೆಯೆಲ್ಲ ನಡೆದಾಡಿ, ಬಣ್ಣಬಣ್ಣದ ಬಟ್ಟೆ ತೊಟ್ಟು ಮನತುಂಬಿ ನಲಿದಾಡಿ ಒಂದು ದಿವಸ ಮತ್ತೊಬ್ಬರ ಮನೆ ಸೇರಿ ಆ ಮನೆಯ ನಲ್ಮೆಯ ಸೊಸೆಯಾಗಿ ಮೊಮ್ಮಗುವನ್ನು ತಂದು ಕೈಯಲ್ಲಿಟ್ಟಾಗ, ಅವಳು ಸಮರ್ಥವಾಗಿ ಸಂಸಾರವನ್ನು ನಿಭಾಯಿಸಿಕೊಂಡು ಹೋಗುತ್ತಿರುವದನ್ನು ಕಂಡಾಗ ಆದ್ಯಾವ ತಂದೆಯ ಮನಸ್ಸಿಗೆ ಸುಖವಾಗದೇ ಇರುವದಿಲ್ಲ ? ಹೀಗಾಗಿ, ಮಕ್ಕಳು ಎಂದರೆ ನಮ್ಮ ಸುಖದ ಸೆಲೆ. ಅವರನ್ನು ಆ ರೀತಿ ಬೆಳೆಸಿಕೊಳ್ಳಬೇಕಾದ್ದು ನಮ್ಮ ಕರ್ತವ್ಯವಷ್ಟೇ.

ಹೀಗೆ ಜೀವನವಿಡೀ ನಮಗೆ ಸುಖವನ್ನು ನೀಡುವ, ಸತ್ತ ಮೇಲೂ ನಮ್ಮನ್ನು ನೆನೆಯುವ, ನಮ್ಮ ನಿರಂತರ ಸುಖದ ನೆಲೆಯಾದ ಮಕ್ಕಳನ್ನು ಹಣಕ್ಕಾಗಿ ಮಾರಿಕೊಳ್ಳವವನು ಮೂರ್ಖ. ಅದೂ ನಮ್ಮ ಹೊಟ್ಟೆ ತುಂಬಿಸಿ ಕೊಳ್ಳುವದಕ್ಕಾಗಿ ಮಕ್ಕಳನ್ನು ಮಾರಿಕೊಳ್ಳುವದು ಕಡು ಮೂರ್ಖತನ.

ಏಕೆಂದರೆ ಪುರಂದರದಾಸರು ಮನುಷ್ಯ ತನ್ನ ಜೀವನದಲ್ಲಿ ಕಲಿಯಬೇಕಾದ ಒಂದು ಮಹತ್ತ್ವದ ಪಾಠವನ್ನು ಇಲ್ಲಿ ತಿಳಿಸುತ್ತಿದ್ದಾರೆ ಗಂಡಸರು ಮಕ್ಕಳನ್ನು ಮಾಡಿಕೊಳ್ಳುವದು ಕೇವಲ ಗಂಡಸ್ತನದ ದ್ಯೋತಕವಲ್ಲ. ಅದು ಅವನಿಗೆ ಅವನ ಮೇಲಿರುವ ನಂಬಿಕೆಯ ಕುರುಹು.

ನೋಡಿ, ನಮ್ಮ ಮಕ್ಕಳು ನಮ್ಮನ್ನು ಸರ್ವಾತ್ಮನಾ ಆಶ್ರಯಿಸಿದವರು. ಮಕ್ಕಳಿಗೆ ನಾವು ಉಣಿಸಿದರೆ ಉಂಟು, ಬಟ್ಟೆ ತಂದು ಉಡಿಸಿದರೆ ಉಂಟು, ನಾವು ಆಡಿಸಿದರೆ ಉಂಟು, ಇಲ್ಲದಿದ್ದರೆ ಇಲ್ಲ. ಅಂದರೆ, ಮನುಷ್ಯ ಮಕ್ಕಳನ್ನು ಮಾಡಿಕೊಳ್ಳುವದಕ್ಕಿಂತ ಮುಂಚೆ ತನಗೆ ಮಕ್ಕಳನ್ನು ಸಾಕುವಷ್ಟು ಶಕ್ತಿಯಿದೆಯಾ ಎಂದು ಹತ್ತಾರು ಬಾರಿ ಪರೀಕ್ಷಿಸಿಕೊಳ್ಳಬೇಕು. ಮಕ್ಕಳನ್ನು ಹಡೆದು ಮಕ್ಕಳನ್ನು ಸಾಕಲಾಗದೆ ಹೆಣಗುವದು ಮೂರ್ಖತನ. ಹೇಗೋ ಬೆಳೆಯುತ್ತಾರೆ, ಹೇಗೋ ಬೆಳೆಸಿದರಾಯಿತು ಎಂದಂದುಕೊಳ್ಳುವದು ಕಡುಮೂರ್ಖತನ. ಹೀಗೇ ಬೆಳೆಸಬೇಕು, ನನ್ನ ಮಕ್ಕಳಿಗೆ ನಾನು ಇಷ್ಟೆಲ್ಲವನ್ನು ನೀಡಬೇಕು ಎಂದು ಮಕ್ಕಳನ್ನು ಬೆಳೆಸಲು “ಸಿದ್ಧರಾಗಿ” ಮನುಷ್ಯ ಮಕ್ಕಳನ್ನು ಮಾಡಿಕೊಳ್ಳಬೇಕು. ಮಕ್ಕಳನ್ನು ಪಡೆಯುವದು ನಮಗೆ ನಮ್ಮ ಸಾಮರ್ಥ್ಯದಲ್ಲಿರುವ ನಂಬಿಕೆಯ ಪ್ರತಿರೂಪ ಎನ್ನುವದನ್ನು ಎಂದಿಗೂ ಮರೆಯಬಾರದು, ಎಂದೆಂದಿಗೂ ಮರೆಯಬಾರದು.

ಹೀಗೆ, ನಮ್ಮ ಸಾಮರ್ಥ್ಯದ ಕುರಿತು ನಮಗೆ ನಮ್ಮ ಮೇಲಿರುವ ನಂಬಿಕೆಯನ್ನು ಸಾಬೀತು ಪಡಿಸುವ ಮಕ್ಕಳನ್ನೇ ನಮ್ಮ ಹೊಟ್ಟೆಯನ್ನು ಹೊರೆದು ಕೊಳ್ಳುವದಕ್ಕಾಗಿ ಮಾರಿ ಕೊಳ್ಳುವದು ಕಡು ಮೂರ್ಖತನ. ನಾವು ಕೈಲಾಗದವರು ಎಂದು ಜಗತ್ತಿನ ಮುಂದೆ ಸಾಬೀತು ಪಡಿಸುವ ಮೂರ್ಖತನ.

ಯಾರನ್ನು ನಾವು ಸಾಕಲಿಕ್ಕಾಗಿ ಭೂಮಿಗೆ ತಂದೆವೋ, ಅವರನ್ನೇ ಮಾರಿ ನಮ್ಮನ್ನು ಸಾಕಿಕೊಳ್ಳುವದು ಮೂರ್ಖತನವಲ್ಲವೇ ?
ನಮ್ಮ ಮೇಲೆ ನಂಬಿಕೆಯಿದೆ ಎಂತಾದ ಮೇಲೆ, ನಮ್ಮ ಮಕ್ಕಳನ್ನು ನಾವು ಸಾಕಿಯೇ ಸಾಕುತ್ತೇವೆ. ಮಾರುವದಿಲ್ಲ.

ಶೀಮಧ್ವಸಿದ್ಧಾಂತದ ರೀತಿಯಲ್ಲಿ ನಮ್ಮ ಭಗವಂತನನ್ನು ಭಜಿಸುವ ಮಂದಿ ಎಂದಿಗೂ ಪೌರುಷದ ಬಗ್ಗೆ ಅರ್ಥಾತ್ ಪುರುಷಪ್ರಯತ್ನದ ಬಗ್ಗೆ ಅವಜ್ಞೆಯನ್ನು ತಾಳುವದಿಲ್ಲ, ತಮ್ಮ ಕರ್ತವ್ಯದಿಂದ ವಿಮುಖರಾಗುವದಿಲ್ಲ.

ಆಶಾಸ್ತ್ರೀಯವಾಗಿ ದೇವರನ್ನು ಭಜಿಸುವ ಮಂದಿ ಎಲ್ಲವನ್ನೂ ದೇವರ ಮೇಲೆ ಹಾಕಿ, ಇದು ದೇವರು ಮಾಡಿದ್ದು, ಮಾಡಿಸಿದ್ದು ಎಂದು ಅವನ ಕಡೆಗೆ ಬೆಟ್ಟು ಮಾಡುತ್ತಾರೆ. ಈ ರೀತಿ ಆಶಾಸ್ತ್ರೀಯವಾದ ಆಚರಣೆಗಳನ್ನು ಮಾಡುತ್ತಾರೆ. ಪರಮಾತ್ಮನನ್ನು ಶಾಸ್ತ್ರೀಯವಾಗಿ ಭಜಿಸುವ ಮಂದಿ ಇದು ಪರಮಾತ್ಮ ನೀಡಿದ ಸೌಭಾಗ್ಯ ಎಂದು ತಿಳಿದು ಕಡುಕಷ್ಟದಲ್ಲಿಯೂ ಮಕ್ಕಳನ್ನು ಸಾಕುತ್ತಾರೆ, ಬೆಳೆಸುತ್ತಾರೆ, ಸುಸಂಸ್ಕತರನ್ನಾಗಿ ಮಾಡುತ್ತಾರೆ. ವೈಷ್ಣವರನ್ನಾಗಿ ಮಾಡುತ್ತಾರೆ.

ಮಡದಿ ಹುಟ್ಟಿದ ಮನೆಯೊಳಿರುವವನು ಮೂರ್ಖ

ನಮ್ಮ ಮೇಲೆ ನಮಗೆ ನಂಬಿಕೆಯಿಲ್ಲ ಎನ್ನುವದನ್ನು ಸಾಬೀತು ಪಡಿಸುವ ಮತ್ತೊಂದು ಹಾಸ್ಯಾಸ್ಪದವಾದ, ನಿಂದಾಸ್ಪದವಾದ ಕಾರ್ಯ, ಹೆಂಡತಿಯ ಮನೆಯಲ್ಲಿ ವಾಸವಾಗಿರುವದು, ಈ ಜಗತ್ತಿನಲ್ಲಿ ಅತ್ಯಂತ ಅವಮಾನಕರವಾದ ವಿಷಯಗಳಲ್ಲಿ ಇದು ಮೊದಲಸಾಲಿನಲ್ಲಿ ಬರುವಂತಹುದು.

ಮದುವೆ ಎಂದರೇನು, ಹೆಂಡತಿಯನ್ನು ಸಾಕುತ್ತೇನೆ ಎಂದು ಬಾಂಧವರ ಮುಂದೆ, ಅಗ್ನಿಯ ಮುಂದೆ ಪ್ರತಿಜ್ಞೆ ಮಾಡಿ ಹೆಣ್ಣನ್ನು ಸ್ವೀಕರಿಸುವದು. ನಮ್ಮ ಮೇಲೆ ನಂಬುಗೆಯಿಟ್ಟು ಹುಟ್ಟಿದ ಮನೆಯನ್ನೇ ಬಿಟ್ಟು ಬರುವ ಹೆಂಡತಿಯನ್ನು ಮತ್ತೆ ಅಲ್ಲಿಗೆ ಕರೆದುಕೊಂಡು ಹೋಗಿ ಅಲ್ಲಿಯೇ ವಾಸ ಮಾಡುವದು ಪರಮ ಮೂರ್ಖತನವಲ್ಲವೇ?

ಸ್ವಾಯಂಭುವ ಮನು – ಮನುಷ್ಯರ ಮೂಲಪುರುಷ – ನಮಗೆಲ್ಲ ಒಂದು ಸಂವಿಧಾನವನ್ನು ಹಾಕಿದ್ದಾನೆ. “ಅಪ್ಯಕಾರ್ಯಶತಂ ಕೃತ್ವಾ ಭರ್ತವ್ಯಾ ಮನುರಬ್ರವೀತ್” ಮನುಷ್ಯ ಕೊಲೆ, ಕಳ್ಳತನ, ಸುಲಿಗೆಯಂತಹ ಕುಕೃತ್ಯಗಳನ್ನು ಮಾಡಿಯಾದರೂ ತನ್ನ ಹೆಂಡತಿ ಮಕ್ಕಳನ್ನು ಸಾಕಬೇಕು ಎಂದು. ಹಾಗಂತ ಇದನ್ನು ಕುಕೃತ್ಯವನ್ನು ಮಾಡು ಎಂಬ ವಿಧಿಯಲ್ಲ, ನಮ್ಮನ್ನು ನಂಬಿದವರನ್ನು ನಾವು ಸಾಕಲೇ ಬೇಕು, ಆ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು ಎಂಬ ಆದೇಶ.

ಪಾಪಕರ್ಮಗಳನ್ನು ಮಾಡುವದರಿಂದ ಅವಶ್ಯವಾಗಿ ಪಾಪ ಬಂದೇ ಬರುತ್ತದೆ. ನೀನು ಕಳ್ಳತನ ಮಾಡಿದ್ದಕ್ಕಾಗಿ ನಿನಗೆ ಸರ್ವಥಾ ಶಿಕ್ಷೆ ಕಾದಿದೆ, ಅದನ್ನು ಅನುಭವಿಸು, ಆದರೆ, ಆ ಶಿಕ್ಷೆಯ ಭೀತಿಗೊಳಗಾಗಿ ನೀನು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಹಾಗಿಲ್ಲ. ಮೊದಲಿಗೆ ಪಾಪಕರ್ಮ ಮಾಡಿ ಅವರನ್ನು ಸಾಕು. ಆನಂತರ ಆ ಪಾಪಕ್ಕೆ ಶಿಕ್ಷೆಯನ್ನೂ ಅನುಭವಿಸು. ಶಿಕ್ಷೆ ಬೇಡ ಎಂತಾದಲ್ಲಿ ನಿನಗೆ ಯೋಗ್ಯವಾದ, ಭಗವಂತನಿಗೆ ಪ್ರಿಯವಾದ ವೃತ್ತಿಯನ್ನು ಮಾಡಿ ಹೆಂಡತಿ ಮಕ್ಕಳನ್ನು ಸಾಕು. ಹೀಗೆ, ಹೆಂಡತಿಯನ್ನು ಚನ್ನಾಗಿ ನೋಡಿಕೊಳ್ಳುವದು ನಮ್ಮ ಪ್ರತಿಷ್ಠೆಯ ವಿಷಯ. ಅಂತಹುದರಲ್ಲಿ ಅವಳು ಬಿಟ್ಟ ಮನೆಗೇ ಹೋಗಿ ಬದುಕುವದು ಅವಮಾನದ ವಿಷಯ.

ಇನ್ನು, ಅತ್ತೆಮಾವನ ಮನೆಯಲ್ಲಿ ಎರಡು ಮೂರು ದಿವಸ ಇರುವದು ಚೆನ್ನ. ಆ ಬಳಿಕ, ಆಗುವ ಅವಮಾನ, ತಿರಸ್ಕಾರಗಳು ಜಗತ್ಪ್ರಸಿದ. ಅದನ್ನು ವಿವರಿಸಿ ಹೇಳಬೇಕಾಗಿಲ್ಲ. ಇನ್ನು ಅತ್ತೆಮಾವಂದಿರು ಕಡೆಯವರೆಗೂ ಪ್ರೀತಿಯಿಂದಲೇ ಅಳಿಯನನ್ನು ಸಾಕಿದರೂ, ನಮ್ಮ ಮಗಳಿಗೆ ಒಂದ್ಹೊತ್ತಿನ ಊಟಕ್ಕೆ ಹಾಕುವ ಯೋಗ್ಯತೆ ಇಲ್ಲದವನನ್ನು ಅಳಿಯನನ್ನಾಗಿ ಮಾಡಿಕೊಂಡೆವಲ್ಲ ಎಂದು ಮನಸ್ಸಿನಲ್ಲಿ ಕೊರಗುತ್ತಲೇ ಇರುತ್ತಾರೆ. ಇನ್ನು ಕೈ ಹಿಡಿದ ಮಡದಿಗಂತೂ ಹೋದಲ್ಲಿ ಬಂದಲ್ಲಿ ಅವಮಾನ. ಗೆಳೆಯ ಗೆಳತಿಯರ ಮಧ್ಯದಲ್ಲಿ ಅವಮಾನ. ಅಕ್ಕ ತಂಗಿಯರ, ಅತ್ತಿಗೆ ನಾದಿನಿಯರ ಮುಂದೆ ಅವಮಾನ. ಇಷ್ಟು ಜನರಿಗೆ ದುಃಖ ನೀಡುವ ಮಾವನ ಮನೆಯ ವಾಸವನ್ನು ಗಂಡಸಾದವನು ಮಾಡುವದಿಲ್ಲ, ಮೂರ್ಖರು ಮಾಡುತ್ತಾರೆ.

ಶೀ ಪುರಂದರದಾಸರೇ ಮತ್ತೊಂದು ಪದ್ಯದಲ್ಲಿ ಮಾವನ ಮನೆಯಲ್ಲಿ ವಾಸ ಮಾಡುವ ವ್ಯಕ್ತಿ ಅನುಭವಿಸುವ ಹೀನಾಯ ಅವಸ್ಥೆಯನ್ನು ಹಾಸ್ಯಮಯವಾಗಿ ಚಿತ್ರಿಸಿದ್ದಾರೆ

ಹೆಣ್ಣು ಕೊಟ್ಟತ್ತೆ ಮಾವಂದಿರ ಮನೆಯಲ್ಲಿ ಸೇರಿಯಿರುವರೆ ಎಲೆ ಮನುಜ ।

ಬಂದ ಮೊದಲು ಇತ್ತ ಬನ್ನಿ ಕುಳ್ಳಿರೆಂದು ಬಲು ಉಪಚರಿಸುವರು
ಅಂದಿನ ಮರುದಿನ ಬಂದ ಸ್ನೇಹಿತರನ್ನ ಕಂಡಂತೆ ಕಾಣುವರೋ
ಬಂದ ಮೂವರಲ್ಲಿ ಪರದೇಶಿಯ ಕಂಡಂತೆ ಸಡ್ಡೆ ಮಾಡದೆ ಇಹರೋ
ಮುಂದೆ ನಾಲ್ಕು ದಿವಸ ಇದ್ದರೆ ಮಾನಭಂಗ ಮಾಡಿ ಮಾತಾಡುವರೋ ।। ೧ ।।

ಐದನೇ ದಿನ ಆಕಳು ಬರಲಿಲ್ಲ ಅರಸಿ ತರಬೇಕೆಂಬರೋ
ಈದೆಮ್ಮೆಗೆ ಕಲಗಚ್ಚನಿಕ್ಕದೆ ಎಲ್ಲಿ ಹೋದಿರೆಂಬರೋ
ಬೀದಿಯಲ್ಲಿ ಕಸ ಬೆಟ್ಟದಂತೆ ಬಿದ್ದಿದೆ ಭೇದವೇ ನಿಮಗೆಂಬರೋ
ಹಾದಿಯಲಿ ಬೆಳೆದಿರುವ ಹುಲ್ಲುಗಳ ಕಿತ್ತು ತರಬಾರದಿತ್ತೆ ಎಂಬರೋ ।। ೨ ।।

ಷಷ್ಠಿಯ ದಿನದಲ್ಲಿ ಅಟ್ಟಡಿಗೆಲ್ಲ ಆರಿ ಹೋಯಿತು ಎಂಬರೋ
ಎಷ್ಟೆಂತ ನಿಮ್ಮ ಛಾನಸ ಏಳಬಾರದೆ ಎಂಬರೋ
ಅಷ್ಟಮ ಶನಿಯಿದು ಬಿಟ್ಟು ಹೋಗದು ನಮಗಳವಿಲ್ಲ ಎಂತೆಂಬರೋ
ಇಷ್ಟು ಬಿಟ್ಟು ಶ್ರೀ ಪುರಂದರವಿಠಲನ ಇಹಪರವಿರಿಸಿಕೊಳ್ಳೋ ಮನುಜ ।। ೩ ।।

(ಸಂಸ್ಕತದ ಶದ್ಧೆ ಕನ್ನಡದಲ್ಲಿ ಸಡ್ಡೆ. ಈದ ಕರುಹಾಕಿದ ಎಮ್ಮೆ ಈದೆಮ್ಮೆ. ಈದೆಮ್ಮೆಯ ಸೇವೆ ಮಾಡುವದು ತುಂಬ ಕಿರಿಕಿರಿಯ ಕೆಲಸ. ಹೀಗಾಗಿ ಮನೆಯ ಯಜಮಾನ ಅದನ್ನು ಮಾಡದೆ ಆಳುಗಳಿಗೆ ಮಾಡಲು ಹೇಳುತ್ತಾನೆ. ಆ ರೀತಿಯ ಹೇವರಿಕೆಯ ಕೆಲಸಗಳನ್ನು ಮನೆಯಲ್ಲಿ ಠಿಕಾಣಿ ಹೂಡಿದ ಅಳಿಯನಿಗೆ ಹೇಳುತ್ತಾರೆ ಎಂದರ್ಥ. ಬೀದಿಯ ಕಸಕ್ಕೆ ಬೆಲೆಯಿಲ್ಲದಿರುವಷ್ಟೇ ಅಲ್ಲ, ಅದನ್ನು ನೋಡಿ ಅದನ್ನು ಹಾಕಿದ ಜನ ತಾವೇ ವಾಕಿರಿಸಿಕೊಳ್ಳುತ್ತಾರೆ. ಹಾಗೆ, ತಾವೇ ನಲಿದು ತಂದ ಅಳಿಯ ಸೋಮಾರಿಯಾಗಿ ತಮ್ಮ ಮನೆ ಸೇರಿದಾಗ ಮಾವನ ಮನೆಯವರು ಹೀಗೆ ಆಡಿಕೊಳ್ಳುತ್ತಾರೆ.

ಅಟ್ಟಿದ ಮಾಡಿದ ಅಡಿಗೆ ಅಟ್ಟಡಿಗೆ. ಬಿಸಿಯಾಗಿ ಮಾಡಿದ ಅಡಿಗೆಯೆಲ್ಲ ನಿಮಗೆ ಕಾದು ಆರಿಹೋಗುತ್ತಿದೆ, ಕೆಲಸಕ್ಕೆ ಬಾರದ ನಿಮ್ಮ ಛಾನಸ ಮಡಿವಂತಿಕೆ, ಪೂಜೆ ಎಷ್ಟಂತ? ಊಟಕ್ಕೆ ಏಳಬಾರದೆ ಎಂದು ಅಳಿಯನ ಶ್ರದ್ಧಾವಂತಿಕೆ, ಆಚಾರಗಳನ್ನೂ ನಿಂದಿಸುವರು ಎಂದರ್ಥ. ಛಾನಸ ಎಂದರೆ ಆಚಾರವಿಚಾರಗಳಲ್ಲಿನ ನಿಷ್ಠೆ. ಅಳವಿಲ್ಲ, ಇವನ ಜೊತೆ ಏಗುವದು ನಮಗೆ ಸಾಧ್ಯವಿಲ್ಲ. ಇಂಥ ಅವಮಾನಕ್ಕೆ ಒಳಗಾಗಬೇಡ, ಇಹದಲ್ಲಿ ಮಾನ ನೀಡುವ, ಮಾನವನ್ನು ನೀಡಿಸುವ ಪರದಲ್ಲಿ ಮೋಕ್ಷವೆಂಬ ಮಹಾಸಮ್ಮಾನವನ್ನೇ ಕರುಣಿಸುವ ಪುರಂದರವಿಠಲನ್ನ ಭಜಿಸಯ್ಯ ಮನುಜ )

ಇದೆಲ್ಲವೂ ಸಾಮರ್ಥ್ಯವಿಲ್ಲದೇ ಮಾವನಮನೆಯನ್ನು ಸೇರಿದ ಅಳಿಯನ ಕುರಿತ ಮಾತು. ಅನಿವಾರ್ಯ ಕಾರಣಗಳಿಂದ ಅಥವಾ, ಅತ್ತೆ ಮಾವಂದಿರ ಹಿತದ ದೃಷ್ಟಿಯಿಂದ ಮಾವನ ಮನೆಯಲ್ಲಿರುವ ಯೋಗ್ಯ, ಸಮರ್ಥ ವ್ಯಕ್ತಿಯ ಕುರಿತಾದದ್ದಲ್ಲ.

ಬಡತನವು ಬಂದಾಗ ಬೈದುಕೊಂಬುವ ಮೂರ್ಖ

ಹೀಗೆ, ನಾವೇ ಬುದ್ಧಿಪೂರ್ವಕವಾಗಿ ಮಾಡಿಕೊಂಡ ಮಕ್ಕಳನ್ನು ಮಾರುವದು ಮೂರ್ಖತನ, ಬಯಸಿಬಯಸಿ ಮದುವೆಯಾದ ಮಡದಿಯ ಮನೆಯಲ್ಲಿರುವದು ಮೂರ್ಖತನ ಎಂದ ದಾಸರು, ವಿಧಿ ನಮ್ಮ ಜೊತೆ ಆಟವಾಡಿದಾಗ ನಾವು ದಡ್ಡತನವನ್ನು ತೋರುವದು ಮೂರ್ಖತನ ಎನ್ನುತ್ತಾರೆ.

ಬಡತನ ನಮ್ಮ ಪೂರ್ವಜನ್ಮದ ಪಾಪದ ಫಲವಷ್ಟೇ ಅಲ್ಲ, ಈ ಜನ್ಮದ ಅಜ್ಞಾನ-ಅಹಂಕಾರ- ಸೋಮಾರಿತನ ಇವುಗಳ ಫಲ. ಪೂರ್ವಜನ್ಮದಲ್ಲಿ ನಾವು ಮಾಡಿದ ಕುಕೃತ್ಯಗಳೇ ನಮಗೆ ಅಜ್ಞಾನವನ್ನಿತ್ತು, ಅಹಂಕಾರ ನೀಡಿ, ಸೋಮಾರಿಗಳನ್ನಾಗಿ ಮಾಡಿ ದರಿದ್ರನ್ನಾಗಿಸುತ್ತವೆ.

ನಿಜ, ಬಡತನಕ್ಕಿಂತ ದೊಡ್ಡದಾದ ದುಃಖ ಮತ್ತೊಂದಿಲ್ಲ ಅದು ಎಲ್ಲ ಅವಮಾನಗಳ ಮೂಲ. ಅನ್ನ ತಿನ್ನಬೇಕಾದರೂ ಕಣ್ಣಲ್ಲಿ ನೀರು ತರಿಸುವ ನೋವು. ನಮ್ಮ ಸದ್ಗುಣಗಳಿಗೆ ಬೆಲೆಯಿಲ್ಲದಂತೆ ಮಾಡುವ ಮಸಿ.

ಆದರೆ, ಘೋರವಾದ ಕಲಿಯುಗ ಸಕಲ ದುರ್ಗುಣಗಳ ಆಗರವಾಗಿದ್ದರೂ, ಸಮಸ್ತ ಪಾಪಿಗಳ ನೆಲೆಯಾಗಿದ್ದರೂ, ಮೋಕ್ಷಸಾಧನೆಗೆ ಅತ್ಯುತ್ತಮವಾದ ಕಾಲ ಎಂದಾದಂತೆ, ನಮ್ಮನ್ನು ನಿಕೃಷ್ಟರನ್ನಾಗಿ ಮಾಡಿಬಿಡುವ ಈ ಬಡತನಕ್ಕೆ ನಮ್ಮನ್ನು ಉತ್ಕ ೃ ಷ್ಟರನ್ನಾಗಿ ಮಾಡುವ ಸಾಮರ್ಥ್ಯವೂ ಇದೆ.

ಈ ಬಡತನ ಬಂದಾಗ, ನಮ್ಮ ಅಹಂಕಾರ ಮೆತ್ತಗಾಗಿರುತ್ತದೆ. ನಮ್ಮ ಸೊಕ್ಕಿನ ನುಡಿಗಳು ಮರೆಯಾಗಿರುತ್ತವೆ. ನಾವು ಬಾಗುವದನ್ನು ಕಲಿಯುತ್ತೇವೆ. ಎಲ್ಲದಕ್ಕಿಂತ ಮುಖ್ಯವಾಗಿ, ನಾವು ಪರಮಾತ್ಮನ ಕುರಿತು ಚಿಂತನೆ ಮಾಡಲು “ಸಮಯ” ನೀಡುವ ಸಮಯ ಬಡತನದ ಸಮಯ. ಶ್ರೀಮಂತರಿಗೆ ಶಾಸ್ತ್ರದ ಬಗ್ಗೆ, ದೇವರ ಬಗ್ಗೆ ತಿಳಿದುಕೊಳ್ಳುವ ಸಮಯವೆಲ್ಲಿರುತ್ತದೆ. ಲಕ್ಷರೂಪಾಯಿ ಕೊಟ್ಟು ಶ್ರೀಮಂತ ಪಾಠಪ್ರವಚನದ ಮಂದಿರ ಕಟ್ಟಿಸಬಹುದು, ಆದರೆ ಆ ಮಂದಿರದಲ್ಲಿ ಶ್ರದ್ಧೆಯಿಂದ ಪಾಠಪ್ರವಚನದಲ್ಲಿ ಭಾಗಿಯಾಗಿ ಭಗವಂತನನ್ನು ತಿಳಿಯುವವನು ಬಡವನೇ. ಶ್ರೀಮಂತನಿಗೆ ಅದೆಲ್ಲದಿಕ್ಕೆ ಸಮಯವಿರುವದಿಲ್ಲ!

ಹೀಗೆ ನಮ್ಮ ಮನಸ್ಸನ್ನು ತಿದ್ದುವ ಸಾಮರ್ಥ್ಯವುಳ್ಳ ಈ ಬಡತನ ಬಂದಾಗ ಅದರ ಸದ್ಗುಣವನ್ನು ಉಪಯೋಗಿಸಿಕೊಂಡು ನಮ್ಮನ್ನು ನಾವು ತಿದ್ದಿಕೊಂಡುಬಿಡಬೇಕು, ನಮ್ಮ ಮನಸ್ಸನ್ನು ಭಗವತ್ಪ್ರವಣವನ್ನಾಗಿ ಮಾಡಿಬಿಡಬೇಕು. ಬಡತನವನ್ನು ಭಾಗ್ಯವನ್ನಾಗಿ ಕಾಣಬೇಕು, ಕಾರಣ ಭಗವಂತನ ಬಗ್ಗೆ ಮನಸ್ಸನ್ನು ತಿರುಗಿಸುವ ದಿವ್ಯಶಕ್ತಿ ಬಡತನಕ್ಕಿದೆ.

ಬಡತನ ವಿಧಿ ನಮ್ಮ ಮೇಲೆ ಸುರಿಸುವ ಕಷ್ಟಕಾಲವಲ್ಲ, ಸಜ್ಜನರ ಮನಸ್ಸಿನಲ್ಲಿ ಭಕ್ತಿಯನ್ನು ಬೆಳೆಸಲು ಪರಮಾತ್ಮ ಸುರಿಸುವ ಮಳೆಗಾಲ. ಮೂರ್ಖಮಂದಿ ಮಳೆ ಬಂದಾಗ ಬಾಗಿಲು ಜಡಿದು ಒಳಗೆ ಕುಳಿತು “ಹಾಳು ಮಳೆಯೆ” ಅಂತ ಬೈದುಕೊಳ್ಳುತ್ತಾರೆ, ತಿಳಿದ ಮಂದಿ ಮಳೆ ಬಂದಾಗ ಹಿಗ್ಗಿ ಹೊಲಕ್ಕಿಳಿದು, ಕೈಕಾಲು ಕೆಸರು ಮಾಡಿಕೊಂಡು ಫಸಲಿನ ಬೀಜ ಬಿತ್ತಿಯೇ ಬಿಡುತ್ತಾರೆ.

ಮೂರ್ಖರಾಗಬೇಕೋ, ತಿಳಿದವರಾಗಬೇಕೋ ನಮಗೆ ಬಿಟ್ಟದ್ದು.

ದೃಢಭಕ್ತಿಯಿಲ್ಲದವ ಕಡುಮೂರ್ಖನಯ್ಯ

ಇನ್ನು ನಮ್ಮ ನಂಬಿಕೆಯ ಪೂರ್ಣರೂಪದ ಕುರಿತು ಭಕ್ತಿಯ ಕುರಿತು ಶ್ರೀ ದಾಸರು ಮಾತನಾಡುತ್ತಾರೆ. ನಂಬಿಕೆ ಎನ್ನುವ ಏನು ಭಾವನೆಯಿದೆ ಅದರ ಉತ್ತುಂಗದ ಮಟ್ಟ ಅದು ನಾವು ಶೀಹರಿಯಲ್ಲಿ ಮಾಡುವ ಭಕ್ತಿ.

ಈ ಪರಮಾತ್ಮತತ್ವ ಎನ್ನುವದು ತುಂಬ ವಿಚಿತ್ರವಾದ ತತ್ವ. ಪರಮಾತ್ಮನನ್ನು ನಾವು ಕಂಡಿಲ್ಲ. ಅವನು ನೋಡಲು ಹೇಗಿದ್ದಾನೆ, ನಾವು ನೋಡಿಲ್ಲ. ಅವನು ಹೇಗೆ ಮಾತನಾಡುತ್ತಾನೆ, ಅವನ ಧ್ವನಿ ಹೇಗಿದೆ ನಮಗೆ ಗೊತ್ತಿಲ್ಲ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅವನ ದೇವರು ಎನ್ನುವ ಹೆಸರನ್ನು ಹೊರತು ಪಡಿಸಿ ನಮಗೇನೂ ಗೊತ್ತಿಲ್ಲ. ಆದರೂ, ಅವನ ಕುರಿತು ನಾವು ಮಾತನಾಡಿದರೆ ಚಕಿತರಾಗುತ್ತೇವೆ. ನಮ್ಮ ಅನುಭವಕ್ಕೆ ಗೋಚರವೇ ಆಗದ ಅವನ ಮಾಹಾತ್ಮ್ಯವನ್ನು ಕೇಳಿದಾಗ, ತಿಳಿದಾಗ ರೋಮಾಂಚಗೊಳ್ಳುತ್ತೇವೆ. ಆವನ ಕಾರುಣ್ಯದ ಕುರುಹುಗಳನ್ನು ಕಂಡಾಗ ಗದ್ಗದಿತರಾಗುತ್ತೇವೆ. ಅವನು ಯಾರೆಂಬುದು ಎನ್ನುವದನ್ನು ತಿಳಿಯದೆಯೇ ಅವನ ಕುರಿತು ಮಾತನಾಡಲು, ಚರ್ಚಿಸಲು, ಮತ್ತಷ್ಟು ಅವನ ಕುರಿತು ತಿಳಿಯಲು ಉತ್ಸುಕರಾಗುತ್ತೇವೆ. ಹೀಗೆ ತಾನ್ಯಾರೆಂಬುದನ್ನೇ ತೋರದೇ ಎಲ್ಲರನ್ನೂ ಆಕರ್ಷಿಸುವ ಚುಂಬಕವಸ್ತು ನಮ್ಮ ನಾರಾಯಣ.

ಆ ದೇವನ ಅತೀ ದೊಡ್ಡ ಆಟವೆಂದರೆ ಸೃಷ್ಟಿಯಲ್ಲ. ಸಂಹಾರವಲ್ಲ. ತಾನು ಮರೆಯಾಗಿದ್ದುಕೊಂಡು ಕೇವಲ ನಮ್ಮ ಶ್ರದ್ಧೆಯ ಮುಖಾಂತರ ನಮಗೆ ತೋರಿಗೊಳ್ಳುವ ಆಟ. ಈ ಭಗವಂತನ ಮತ್ತು ನಮ್ಮ ಮಧ್ಯ ಇರುವ ಒಂದೇ ಕೊಂಡಿ, ಅದು ನಂಬಿಕೆ, ಶ್ರದ್ಧೆ, ಭಕ್ತಿ.

ನಾವು ಯಾವುದೋ “ಮಾಪತೋಪ” ಎಂಬ ಅಕ್ಷರಗಳನ್ನು ಮೇಲಿಂದ ಮೇಲೆ ಜಪ ಮಾಡಲು ಸಾಧ್ಯವಿಲ್ಲ. ಅದೇ, ರಾಮ ರಾಮ ಎಂಬ ಹೆಸರನ್ನು ಅದೆಷ್ಟು ಬಾರಿ ಹೇಳುತ್ತೇವೆಯೋ ಅಷ್ಟು ನಮಗೆ ಆನಂದವಾಗುತ್ತದೆ, ನಮ್ಮ ಮನಸ್ಸು ಪ್ರಫುಲ್ಲವಾಗುತ್ತದೆ, ಮನಸ್ಸಿನಲ್ಲಿ ಶಾಂತಿ ಮನೆ ಮಾಡುತ್ತದೆ. ಇದು ದೇವರ ಅಸ್ತಿತ್ವದ ಮೊದಲ ಕುರುಹು. ದೇವರ ಅದ್ಭುತ ಸಾಮರ್ಥ್ಯದ ಕುರುಹು. ನಮಗಾದ ಸುಖವನ್ನು ಆಧಾರವಾಗಿಟ್ಟುಕೊಂಡು ನಾವು ಮಾಡಿದ ಜಪ ಸತ್ಯ ಎಂದು ನಂಬಬೇಕು. ಆ ಮೊದಲ ನಂಬಿಕೆಯನ್ನು ಎಳೆಯಾಗಿಟ್ಟುಕೊಂಡು, ಶಾಸ್ತ್ರದಿಂದ ಭಗವಂತನ ಬಗ್ಗೆ ನಿಖರವಾಗಿ ತಿಳಿಯುತ್ತ ಆ ನಂಬಿಕೆಯನ್ನು ಶ್ರದ್ಧೆಯನ್ನಾಗಿ ಪರಿವರ್ತಿಸಕೊಳ್ಳಬೇಕು, ಆ ಶಾಸ್ತ್ರದ ಅರ್ಥವನ್ನು ಜೀವನದಲ್ಲಿ ಅನುಷ್ಠಾನ ಮಾಡುತ್ತ ಶ್ರದ್ಧೆಯನ್ನು ಭಕ್ತಿಯನ್ನಾಗಿ ಬದಲಿಸಿಕೊಂಡು, ಭಕ್ತಿಯನ್ನು ದೃಢಭಕ್ತಿಯನ್ನಾಗಿ ಮಾಡಿಕೊಂಡು ಹರಿಯನ್ನು ಸಾಕ್ಷಾತ್ತಾಗಿ ಕಾಣಬೇಕು. ಇದರಲ್ಲಿಯೇ ಮನುಷ್ಯ ಜೀವನದ ಸಾರ್ಥಕತೆ ಅಡಗಿದೆ. “ಬ್ರಹ್ಮಾವಬೋಧಧಿಷಣಮ್” ಅದನ್ನು ತೊರೆದು ಅರ್ಥಾತ್ ದೃಢಭಕ್ತಿಯನ್ನು ಮಾಡದೇ ಬದುಕಿದರೆ ಕಡುಮೂರ್ಖರಾಗುತ್ತೇವೆ.

ಇವುಗಳೂ ನಿಮಗಿಷ್ಟವಾಗಬಹುದು

vishwanandini-020

ವಿಶ್ವನಂದಿನಿ ಲೇಖನ ಮಾಲೆ – 020

ಶ್ರೀಕನಕದಾಸರ ಹರಿಭಕ್ತಿಸಾರ ವಿಷ್ಣುದಾಸರ ಸಾರಾಮೃತವ್ಯಾಖ್ಯಾನದೊಂದಿಗೆ ಪದ್ಯ – ೨ ದೇವದೇವ ಜಗದ್ಭರಿತ ವಸು- ದೇವಸುತ ಜಗದೇಕನಾಥ ರ- ಮಾವಿನೋದಿತ ಸಜ್ಜನಾನತ …

Leave a Reply

Your email address will not be published. Required fields are marked *