ಮೂರ್ಖರಾದರು ಇವರು ಲೋಕದೊಳಗೆಲ್ಲಾ
ಏಕದೈವವ ಬಿಟ್ಟು ಕಾಕು ದೈವವ ಭಜಿಸಿ ॥
ಶ್ರೀ ಪುರಂದರದಾಸರ ಕೃತಿಗಳ ಮೌಲಿಕತೆ ಅಸಾಧಾರಣವಾದದು. ಅವರು ಯಾವುದೇ ಲೌಕಿಕ ವಿಷಯದ ಕುರಿತು ಮಾತನಾಡಿದರೂ ಅಲ್ಲಿಯೂ ಭಗವಂತನ ಮಾಹಾತ್ಮ್ಯವನ್ನೇ ಹೇಳುತ್ತಾರೆ. ಮೂರ್ಖತನ ಎನ್ನುವದು ಮನುಷ್ಯನಲ್ಲಿನ ಒಂದು ದೋಷ. ಬದುಕಿನ ನೂರಾರು ಪ್ರಸಂಗಗಳಲ್ಲಿ ಮನುಷ್ಯರು ಮೂರ್ಖರಂತೆ ವರ್ತಿಸುತ್ತಿರುತ್ತಾರೆ. ಆದರೆ ಆ ಮೂರ್ಖತನ ನಮಗೆ ಬರುವದಕ್ಕೂ, ಬಾರದಿರುವದಕ್ಕೂ ಭಗವಂತನೊಂದಿಗೆ ನಂಟನ್ನು ತೋರಿಸಿಕೊಡುತ್ತಾರೆ, ಶ್ರೀ ಪುರಂದರದಾಸರು.
ಠ
ಏಕದೈವ ಎಂದರೆ ಸ್ವತಂತ್ರನಾದ ಶೀಹರಿ. ಕಾಕುದೈವಗಳು ಎಂದರೆ ಸುಳ್ಳುದೇವತೆಗಳು ಅಥವಾ ಕ್ಷುದ್ರದೇವತೆಗಳು. (ಕಾಕು ಎನ್ನುವ ಶಬ್ದಕ್ಕೆ ಸುಳ್ಳು ಮತ್ತು ಕೆಡುಕು, ನೀಚ ಎಂಬ ಎರಡು ಅರ್ಥಗಳಿವೆ. ಇದಲ್ಲದೇ, ಧ್ವನಿಯ ಏರಿಳಿತಗಳಿಗೂ (ಕಾಕುಸ್ವರ), ವ್ಯಂಗ್ಯವಾದ ಧ್ವನಿಗೂ ಕಾಕು ಎಂದು ಹೆಸರು.) ಶಾಸ್ತ್ರಗಳ ಅಧ್ಯಯನವನ್ನು ಮಾಡುತ್ತ ವಿಹಿತವಾದ ಕ್ರಮದಲ್ಲಿ ಭಗವಂತನನ್ನು ಆರಾಧಿಸಿದಾಗ ಮಾತ ನಾವು ಬದುಕಿನ ಪ್ರತಿಯೊಂದು ಹಂತದಲ್ಲಿಯೂ ತಿಳುವಳಿಕೆಯಿಂದ ವರ್ತಿಸಲು ಸಾಧ್ಯ. ಕಾಕುದೇವತೆಗಳನ್ನು ಭಜಿಸುತ್ತ ಕುಳಿತರೆ ಶಾಸ್ತ್ರದ ಅಧ್ಯಯನವೂ ನಡೆಯುವದಿಲ್ಲ, ಶುದ್ಧ ತಿಳುವಳಿಕೆಯೂ ಬರುವದಿಲ್ಲ. ಬದುಕಿನ ಪ್ರತಿಯೊಂದು ಮಜಲಿನಲ್ಲಿಯೂ ಮೂರ್ಖರಂತೆ ವರ್ತಿಸುತ್ತೇವೆ.
“ಇವರು” ಮುಂದೆ ಹೇಳುವ ಎಲ್ಲ ಜನರೂ,
“ಲೋಕದೊಳಗೆಲ್ಲಾ ಮೂರ್ಖರಾದರು” ಇಡಿಯ ಜಗತ್ತಿನಲ್ಲಿ ಮೂರ್ಖರು ಎಂದು ಪ್ರ ಸಿದ್ಧರಾಗಿದ್ದಾರೆ.
ಅದಕ್ಕೆ ಕಾರಣ
“ಏಕದೈವವ ಬಿಟ್ಟು” ಶ್ರೀಹರಿಯನ್ನು ದೂರ ಮಾಡಿ
“ಕಾಕುದೈವವ ಭಜಿಸಿ” ಸುಳ್ಳುದೇವತೆಗಳನ್ನು, ಅಥವಾ ಕ್ಷುದ್ರದೇವತೆಗಳನ್ನು ಭಜಿಸಿ.
ವಂಟಿಯಲಿ ಹೆಂಡತಿಯ ಬಿಡುವಾತ ಮೂರ್ಖ
ನೆಂಟರಿಗೆ ಸಾಲವನು ಕೊಡುವಾತ ಮೂರ್ಖ
ಗಂಟನೊಬ್ಬರ ಕೈಯಲಿಡುವಾತ ಮೂರ್ಖ
ತುಂಟನಾದವನು ತಾ ಕಡುಮೂರ್ಖನಯ್ಯ ।। 1 ।।
“ವಂಟಿಯಲಿ ಹೆಂಡತಿಯ ಬಿಡುವಾತ ಮೂರ್ಖ”
ಹೆಂಡತಿಯ ಜೊತೆಯಲ್ಲಿ ಯಾವಾಗಲೂ ಇರಲು ಸಾಧ್ಯವೇ ಇಲ್ಲ. ಕೆಲಸಕಾರ್ಯಗಳಿಗಾಗಿ ಹೊರಹೋಗಲೇಬೇಕು. ಆ ರೀತಿಯಾಗಿ ಬಿಟ್ಟು ಹೋಗಬಾರದು ಎಂದಲ್ಲ ಇಲ್ಲಿನ ಅರ್ಥ.
ಗಂಡಹೆಂಡತಿ ಜಗಳವಾಡುತ್ತಾರೆ. ಇಬ್ಬರಿಗೂ ಮುನಿಸುಂಟಾಗುತ್ತದೆ. ಆ ಸಂದರ್ಭದಲ್ಲಿ ಮಾತ್ರ ಎಂದಿಗೂ ಹೆಂಡತಿಯನ್ನು ಒಂಟಿಯಾಗಿ ಬಿಡತಕ್ಕದ್ದಲ್ಲ. ಕಾರಣ, ಕೋಮಲೆಯಾದ, ಸಾಧ್ವಿಯಾದ ಹೆಣ್ಣು ಕೇವಲ ಭಿನ್ನಾಭಿಪ್ರಾಯಗಳಿಗೆ ಜಗಳವಾಡುತ್ತಾಳಷ್ಟೇ ಹೊರತು, ಗಂಡನನ್ನೇ ತೊರೆದು ಹೋಗುವ ಮನಸ್ಸು ಅವಳಿಗಿರುವದಿಲ್ಲ. ಅವಳಿಗೆ ಗಂಡನೇ ಆಸರೆ. ಆದರೆ, ಒಂದಷ್ಟು ತಿದ್ದುಕೊಳ್ಳುವ ಬಯಕೆಯಷ್ಟೇ. ಹೀಗಾಗಿ, ಜಗಳವಾಡಿದಾಗ ತಪ್ಪು ಯಾರದೇ ಇರಲಿ, ಅವಳನ್ನು ಒಂಟಿಯಾಗಿ ಬಿಡತಕ್ಕದ್ದಲ್ಲ. ಕಾರಣ ಒಂಟಿಯಾದಷ್ಟೂ ಹೆಣ್ಣು ಅಧೀರಳಾಗುತ್ತಾಳೆ. ಮರಕ್ಕೆ ಅಪ್ಪಿನಿಂತ ಬಳ್ಳಿ ಮರದಿಂದ ದೂರವಾದರೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತದೆ. ಅವಳು ಅಧೀರಳಾಗಿ ಮನಸ್ಸನ್ನೇ ಮುರಿದುಕೊಂಡು ಬಿಟ್ಟರೆ ಅದನ್ನು ಸರಿಪಡಿಸಲು ಸಾಧ್ಯವೇ ಇಲ್ಲ. ಬಳ್ಳಿ ತಾನಾಗಿ ಮರಕ್ಕೆ ಅಪ್ಪಿ ನಿಂತು ಬೆಳೆದಿರುತ್ತದೆ. ಅದನ್ನು ಒಮ್ಮೆ ಕಿತ್ತು ಹಾಕಿದರೆ, ಏನು ಹರಸಾಹಸ ಮಾಡಿದರೂ ಮೊದಲಿನಂತೆ ಅದನ್ನು ಮರಕ್ಕೆ ಅಪ್ಪಿಸಿ ನಿಲ್ಲಿಸಲಿಕ್ಕೆ ಸಾಧ್ಯವಿಲ್ಲ.
ಮತ್ತು ಇದರಿಂದ ಹೆಣ್ಣಿಗಿಂತ ತುಂಬ ನಷ್ಟ ಗಂಡಸಿಗೇ. ಏಕೆಂದರೆ, ಒಮ್ಮೆ ಹೆಣ್ಣು ತನ್ನ ಗಂಡನನ್ನು ತನ್ನ ಮನಸ್ಸಿನಿಂದ ತೆಗೆದುಹಾಕಿದಳು ಎಂತಾದಲ್ಲಿ ಗಂಡಿನ ಧೈರ್ಯ, ಸಾಹಸಗಳೇ ಉಡುಗಿಬಿಡುತ್ತದೆ. ಗಂಡಸು ತನ್ನ ಅಪಾರ ಸಾಮರ್ಥ್ಯವನ್ನು ಗಳಿಸುವದೇ ಹೆಂಡತಿಯ ಪ್ರೀತಿಯಿಂದ. ಅದನ್ನೇ ಕಳೆದುಕೊಂಡು ಬಿಟ್ಟರೆ ಅವನ ಅಂತಃಸತ್ವವೇ ಉಡುಗಿಬಿಡುತ್ತದೆ. ಅವನು ಕೆಲಸಕ್ಕೇ ಬಾರದವನಾಗಿಬಿಡುತ್ತಾನೆ. ಹೀಗಾಗಿ, ಯಾವುದೋ ಒಂದು ಜಗಳ ಉಂಟಾದ ತಕ್ಷಣ ಬೇರೆಯಾಗುವ ಮಾತನ್ನಾಡಬಾರದು ಮತ್ತು ಹೆಂಡತಿಯನ್ನಂತೂ ಒಂಟಿಯಾಗಿ ಬಿಟ್ಟು ಹೋಗುವ ನಿರ್ಧಾರ ಮಾಡಬಾರದು. ಅದು ದಾಂಪತ್ಯವನ್ನೇ ನಾಶಮಾಡುವ ಮೂರ್ಖತನದ ಕೆಲಸ. ಭಿನ್ನಾಭಿಪ್ರಾಯವಿದ್ದಾಗ, ಮುನಿಸಿಕೊಂಡೇ ಜೊತೆಯಲ್ಲಿದ್ದು (ಇಬ್ಬರೂ ಮಾತನಾಡದೇ, ಒಬ್ಬರೊಬ್ಬರ ಕೆಲಸ ಮಾಡಿಕೊಡುತ್ತಾ ಅದರಿಂದ ಉಂಟಾಗುವ ಕಚಗುಳಿಯನ್ನು ಅನುಭವಿಸಬೇಕು) ತಮ್ಮ ದಡ್ಡತನಕ್ಕೆ ತಾವೇ ನಕ್ಕು ಒಂದಾಗಬೇಕು. ದಾಂಪತ್ಯ ಮುಂದುವರೆಯಬೇಕು.
ಇದಕ್ಕೂ ನಿಮ್ಮ ದೇವರಿಗೂ ಏನು ಸಂಬಂಧ ಎಂದರೆ, ಇದೆ ಎನ್ನುತ್ತಾರೆ ಪುರಂದರದಾಸರು. ನಮ್ಮ ದೇವರು ಮನುಷ್ಯರಿಗಾಗಿ ಈ ಲೀಲೆಯನ್ನೂ ಮಾಡಿ ತೋರಿಸಿದ್ದಾನೆ. ಭೃಗುಋಷಿಗಳು ಒದ್ದರು ಎನ್ನುವ ಕಾರಣಕ್ಕೆ ಲಕ್ಷ್ಮೀದೇವಿ ಮುನಿಸಿಕೊಂಡಂತೆ ಮಾಡಿ ಹೊರಟುಬಿಡುತ್ತಾಳೆ. ಅವಳನ್ನು ಒಂಟಿಯಾಗಿ ಬಿಡಬಾರದು ಎಂದು ಪರಮಾತ್ಮ ತಾನೂ ಭೂಮಿಗೆ ಬರುತ್ತಾನೆ. ಇಬ್ಬರೂ ಮುನಿಸಿಕೊಂಡಿದ್ದಾರೆ. ಇಬ್ಬರಿಗೂ ಮತ್ತೊಬ್ಬರು ಎಲ್ಲಿದ್ದಾರೆ ಎನ್ನುವದು ಗೊತ್ತಿದೆ. ಆದರೂ ಭೇಟಿಯಾಗದೇ ಒಬ್ಬರಿಗೊಬ್ಬರು ಸಹಾಯವನ್ನು ಮಾಡುತ್ತಿರುತ್ತಾರೆ. ಶೀಹರಿ ಲಕ್ಷ್ಮೀದೇವಿಯ ಸೇವೆಗೆ ಸೂರ್ಯ ಚಂದ್ರರನ್ನು ನಿಯಮಿಸಿದರೆ, ಲಕ್ಷ್ಮೀದೇವಿ ಬ್ರಹ್ಮದೇವರನ್ನು ಹಸುವಾಗಿಸಿ ಅದರ ಹಾಲನ್ನು ಶ್ರೀನಿವಾಸನಿಗೆ ನೀಡಿಸುತ್ತಾಳೆ. ಹೀಗೇ ಅನೇಕ ವರ್ಷಗಳ ಕಾಲ ನಡೆದ ಬಳಿಕ, ಲಕ್ಷ್ಮೀದೇವಿಯ ಮನವೊಲಿಸಲು ಅವಳು ಸೀತೆಯಾಗಿದ್ದಾಗ ವೇದವತಿಗೆ ನೀಡಿದ ವರವನ್ನು ಪೂರೈಸಲು ಸಿದ್ಧನಾಗುತ್ತಾನೆ, ಪದ್ಮಾವತಿಯನ್ನು ಮದುವೆಯಾಗುವ ನೆಪದಲ್ಲಿ ಇಬ್ಬರೂ ಒಂದಾಗುತ್ತಾರೆ. ಪರಮಾತ್ಮ ಅವಳನ್ನು ತನ್ನ ಎದೆಯ ಮೇಲೇ ಧರಿಸಿರುವದನ್ನು ತೋರಿಸುತ್ತ ಇಂದಿಗೂ ಏಕದೈವನಾಗಿ ವಿರಾಜಮಾನನಾಗಿದ್ದಾನೆ. ತಿರುಪತಿಯ ಬೆಟ್ಟದ ಮೇಲೆ ಲಕ್ಷ್ಮೀದೇವಿಯ ಗುಡಿಯಿಲ್ಲ. ಆವಳನ್ನು ಎದೆಯಲ್ಲಿಯೇ ಧರಿಸಿದ್ದಾನೆ. ಗಂಡಹೆಂಡಿರ ಜಗಳದಿಂದ ಪ್ರೀತಿಯೇ ಜಾಸ್ತಿಯಾಗುತ್ತದೆ, ಜಾಸ್ತಿಯಾಗಬೇಕು ಎನ್ನುವದನ್ನು ತೋರಲು ವೈಕುಂಠದಲ್ಲಿ ಕಾಲಬಳಿ ಕುಳಿತಿದ್ದ ಲಕ್ಷ್ಮಿಯನ್ನು ಈಗ ಹೃದಯದಲ್ಲಿಯೇ ಧರಿಸಿ ಏಕದೈವನಾಗಿ ಇದ್ದಾನೆ. ಲಕ್ಷ್ಮೀದೇವಿಯೂ ಅಷ್ಟೆ, ಋಷಿ ಎದೆಗೆ ಒದ್ದ ಎಂದು ಸಿಟ್ಟಿಗೆ ಬಂದವಳಂತೆ ನಟಿಸಿದ್ದಳು, ಪರಮಾತ್ಮನ ಹಾರ್ದವನ್ನು ತಿಳಿದು ಹೃದಯದಲ್ಲೇ ನೆಲೆಗೊಂಡಳು. ಯಾವ ವಸ್ತು ಜಗಳಕ್ಕೆ ಕಾರಣವಾಗಿತ್ತೋ ಅದೇ ವಸ್ತು ಈಗ ಪ್ರೀತಿಯ ತಾಣವಾಯಿತು. ಗಂಡಹೆಂಡರಿಗೆ ಲಕ್ಷ್ಮೀನಾರಾಯಣರು ಕಲಿಸಿದ ದಿವ್ಯಪಾಠ.
ಕಾರಣ, ಗಂಡ ತಪ್ಪು ಮಾಡಿರುತ್ತಾನೆ, ಅದನ್ನು ಒಪ್ಪಿ, ಸಂಧಾನ ಮಾಡಿ ಗಂಡ ಹೆಂಡಿರು ಒಂದಾಗಿರುತ್ತಾರೆ. ಆದರೆ, ಅಸಾಧ್ವಿಯಾದ ಹೆಣ್ಣು ಗಂಡನ ಆ ತಪ್ಪನ್ನೇ ತನ್ನ ಅಸ್ತ್ರವನ್ನಾಗಿ ಮಾಡಿಕೊಂಡು ಅವನನ್ನು ಕಾಡಿಸುತ್ತಿರುತ್ತಾಳೆ. ನಮ್ಮಮ್ಮ ಲಕ್ಷ್ಮೀದೇವಿ ಹಾಗೆ ಮಾಡಲಿಲ್ಲ. ಗಂಡನ ತಪ್ಪನ್ನು (ಪರಮಾತ್ಮ ತಪ್ಪು ಮಾಡಿಲ್ಲ, ಲಕ್ಷ್ಮೀದೇವಿ ಮುನಿಸಿಕೊಂಡಿಲ್ಲ, ಅವರಿಗೆ ವಿಯೋಗವಿಲ್ಲ ಇದು ತತ್ವ. ನಮಗಾಗಿ ಆಡಿ ತೋರಿದ ನಾಟಕದಲ್ಲಿ ಹೀಗೆ ನಡೆಯಿತು ಎನ್ನುವದನ್ನು ಮರೆಯಬಾರದು) ಒಪ್ಪಿ, ಅವನನ್ನು ಅಪ್ಪಿ ನಿಂತಳು. ಎಂದಿಗೂ ಹೀಯಾಳಿಸಲಿಲ್ಲ. ಗಂಡನ ತಪ್ಪನ್ನು ಉಪಯೋಗಿಸಿಕೊಂಡು ತನ್ನ ಬೇಳೆ ಬೇಯಿಸಿಕೊಳ್ಳುವ ಕ್ಷುದ್ರ ಕಾರ್ಯಕ್ಕೆ ಮುಂದಾಗಲಿಲ್ಲ.
ಜಗಳವಾದಾಗ, ಒಬ್ಬರನ್ನೊಬ್ಬರು ಬಿಟ್ಟಿರಬೇಡಿ, ಜೊತೆಯಲ್ಲಿಯೇ ಇದ್ದು ಒಬ್ಬರಿಗೊಬ್ಬರು ನೆರವಾಗಿ ಆ ಬಳಿಕ ಮತ್ತಷ್ಟು ಗಾಢವಾಗಿ ಪ್ರೀತಿಸುತ್ತ ಬದುಕಿ ಎನ್ನುವದನ್ನು ತೋರಿಸಿಕೊಡುತ್ತಾರೆ ಈ ಶ್ರೀ ಶ್ರೀನಿವಾಸರು. ಆ ಪರಮಾತ್ಮನನ್ನು ನಂಬಿದವರು, ನಂಬಿ ಅವನಂತೆ ನಡೆಯುವವರು ಮೂರ್ಖರಾಗುವದಿಲ್ಲ. ತಿಳುವಳಿಕೆಯುಳ್ಳವರಂತೆ ವರ್ತಿಸುತ್ತಾರೆ.
ಕ್ಷುದ್ರದೇವತೆಗಳನ್ನು ಒಲಿಸಿ ಒಬ್ಬರನ್ನೊಬ್ಬರು ಔಷಧಿಗಳಿಂದ, ಮಂತ್ರಗಳಿಂದ ವಶಪಡಿಸಿಕೊಂಡವರು, ಅಥವಾ ಸುಳ್ಳುದೇವತೆಗಳಾದ ರೂಪ-ಹಣಗಳಿಗಾಗಿ ಒಬ್ಬರನ್ನೊಬ್ಬರು ಮದುವೆಯಾದವರು ಈ ರೀತಿಯ ಮಾರ್ಗವನ್ನು ಅನುಸರಿಸದೇ ಬೇರೆಯಾಗುತ್ತಾರೆ, ಪರಸ್ಪರರ ದ್ವೇಷದಲ್ಲಿ, ವಿಚ್ಛೇದನದಲ್ಲಿ ಮದುವೆಯನ್ನು ಕೊನೆಗಾಣಿಸುತ್ತಾರೆ.
ಅದಕ್ಕಾಗಿ ಭಗವಂತನನ್ನು ಬಿಡಬಾರದು. ಅವನನ್ನು ತಿಳಿಸಿಕೊಡುವ ಶಾಸ್ತ್ರವನ್ನು ಓದಬೇಕು. ಓದಿ, ಅವನು ತೋರಿಕೊಟ್ಟ ರೀತಿಯಲ್ಲಿ ಬದುಕನ್ನು ರೂಪಿಸಿಕೊಳ್ಳಬೇಕು. ಅದನ್ನು ಬಿಟ್ಟು ಮೂರ್ಖರನ್ನು ಅನುಸರಿಸಹೋದರೆ ನಾವೂ ಮೂರ್ಖರಾಗುತ್ತೇನೆ. ಏಕದೈವವ ಬಿಟ್ಟು ಕಾಕುದೈವವ ಭಜಿಸದವರೆಲ್ಲ ಮೂರ್ಖರಾದರು ಲೋಕದೊಳಗೆ.
“ನೆಂಟರಿಗೆ ಸಾಲವನು ಕೊಡುವಾತ ಮೂರ್ಖ”
ನೆಂಟರು ಎಂದರೆ ನಂಟುಳ್ಳವರು. ನಮಗೆ ಯರ ಜೋತೆ ಬಾಂಧವ್ಯವಿದೆಯೋ ಅವರೊಡನೆ ಸಾಲದ ವ್ಯವಹಾರ ಸರ್ವಥಾ ಮಾಡಬಾರದು. ಸಾಲ ಎಂದರೇನು? ನಮಗೆ ಆವಶ್ಯಕತೆಯಿರುವಷ್ಟು ಹಣ ನಮ್ಮ ಬಳಿ ಇಲ್ಲದಿರುವಾಗ, ಆ ಹಣವನ್ನು ಮತ್ತೊಬ್ಬರ ಬಳಿಯಿಂದ ತಂದು ಆ ಹಣಕ್ಕೆ ಮತ್ತಷ್ಟು ಹಣ ಸೇರಿಸಿ ಅವರಿಗೆ ತಿರುಗಿಸಿ ನೀಡುವದು. ಬಾಂಧವ್ಯ ಎಂದರೇನು ? ಒಬ್ಬರಿಗೊಬ್ಬರು ನೆರವಾಗುವದು. ಆಪತ್ತಿಗಾದವನೇ ನಂಟ. ನಮ್ಮ ಬಂಧು ನಮಗೆ ನಿಜವಾಗಿಯೂ ನಂಟನಾಗಿದ್ದಾನೆ ಎಂದರೆ ಅವನ ಆಪತ್ತಿಗೆ ನಾವು ಸಹಾಯಕರಾಗಲೇಬೇಕು. ಅದು ಬಿಟ್ಟು ನಂಟ ಆಪತ್ತಿನಲ್ಲಿದ್ದಾಗ ಅವನಿಗೆ ಹಣ ನೀಡಿ ಅವನಿಂದ ಬಡ್ಡಿಯನ್ನು ಅಪೇಕ್ಷಿಸುವ ವ್ಯವಹಾರಕ್ಕಿಳಿಯುವದು ನಂಟಸ್ತನದ ಮೂಲಕ್ಕೇ ಬೆಂಕಿಯಿಟ್ಟಹಾಗೆ.
ಮತ್ತು, ವ್ಯವಹಾರದ ದೃಷ್ಟಿಯಿಂದಲೂ ಇದು ಸಲ್ಲ. ಎರಡಕ್ಕೆ ಎರಡು ಸೇರಿದರೆ ನಾಲ್ಕು ಎನ್ನುವ ಕರಾರುವಾಕ್ಕುತನ ಇದ್ದಾಗ ಮಾತ್ರ ವ್ಯವಹಾರ. ನಂಟರಿಗೆ ಸಾಲ ಕೊಟ್ಟು ಅವರು ಹೇಳಿದ ಸಮಯಕ್ಕೆ ತಿರುಗಿ ಕೊಡದೇ ಹೋದರೆ ನಮಗೂ ಸಮಸ್ಯೆ, ಮತ್ತು ನಂಟಸ್ತನಕ್ಕೂ ಸಂಚಕಾರ. ಕರಾರುವಾಕ್ಕುತನದ ವ್ಯವಹಾರ ತೋರಿದರೆ ನೆಂಟಸ್ತನ ಸೊರಗುತ್ತದೆ, ನೆಂಟಸ್ತನದಿಂದ ಅನುಕಂಪ ತೋರಿದರೆ ವ್ಯವಹಾರ ಬಾಡುತ್ತದೆ. ಹೀಗಾಗಿ ನೆಂಟಸ್ತನ ಮತ್ತು ವ್ಯವಹಾರ ಎನ್ನುವದು ಹಾವು ಮುಂಗುಸಿಗಳಿದ್ದಂತೆ, ಅವನ್ನು ಜೋಡಿ ಮಾಡಬಾರದು.
ಹಾಗಾದರೆ, ನೆಂಟರು ಕಷ್ಟದಲ್ಲಿದ್ದಾಗ ಸಹಾಯ ಮಾಡಲೇ ಬಾರದೇ ಎಂದರೆ, ಅದೂ ತಪ್ಪು. ನೆಚ್ಚಿನ ನೆಂಟ ಸಂಕಟದಲ್ಲಿದ್ದಾಗ ಕೈಕಟ್ಟಿ ಕೂರಬಾರದು. ಅವನ ಕಷ್ಟಕ್ಕೆ ಹೆಗಲಾಗಬೇಕು. ಅವನಿಗೆ ಹಣದ ಸಮಸ್ಯೆಯಿದ್ದರೆ ಇನ್ನೂ ಹೆಚ್ಚಿನ ಹಣವನ್ನು ಸಂಪಾದಿಸುವಲ್ಲಿ ನೆರವಾಗು. ಹಣ ನೀಡುವ ಅನಿವಾರ್ಯತೆಯೇ ಇದ್ದರೆ, ಸಾಲವಾಗಿ ನೀಡಬೇಡ. ಬಡ್ಡಿಗಂತೂ ಸರ್ವಥಾ ನೀಡಬೇಡ. ಸಹಾಯವಾಗಿ ನೀಡು. ನಾನೇ ಬಡವನಿದ್ದೇನೆ, ಅವನಿಗೆ ನೀಡಿದರೆ ನನಗೇ ತೊಂದರೆ ಎಂದರೆ, ಸಾಲವಾಗಿ ನೀಡಿದರೂ ಸಮಯದ ನಿರ್ಬಂಧ ಮಾಡಿ ನೀಡಬೇಡ. ಒಟ್ಟಿನಲ್ಲಿ ನಿನ್ನ ನೆಂಟಸ್ತನಕ್ಕೆ ಧಕ್ಕೆ ಬರುವ ಯಾವ ವ್ಯವಹಾರವನ್ನೂ ಮಾಡಬೇಡ. ಮಾಡುವವ ಮೂರ್ಖ.
ಇದಕ್ಕೂ ನಿಮ್ಮ ದೇವರಿಗೂ ಏನು ಸಂಬಂಧ ಎಂದರೆ. ಇದೆ. ಪರಮಾತ್ಮ ಮತ್ತು ದೇವತೆಗಳು ಅವತರಿಸಿ ಬರುವದೇ ನಮ್ಮ ಉದ್ಧಾರಕ್ಕಾಗಿ. ನಮ್ಮ ಜೀವನ ಹೇಗಿರಬೇಕು ಎನ್ನುವದನ್ನು ತೋರಿಸುವದಕ್ಕಾಗಿ.
ಪಾಂಡವರು ರಾಜ್ಯಭಷ್ಟರಾಗಿ ಕಾಡಿಗೆ ಹೋಗುತ್ತಾರೆ. ನಂಟ ಶೀಕೃಷ್ಣ ಒಡನೆಯೇ ಹೋಗಿ ಅವರನ್ನು ಕಾಣುತ್ತಾನೆ. ಅವರ ಹೆಂಡತಿ ಮಕ್ಕಳನ್ನು ಸಾಕುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾನೆಯೇ ಹೊರತು, ನಮ್ಮ ರಾಜ್ಯದ ಸಮೀಪದ ಕಾಡಿಗೆ ಬಂದಿದ್ದುಬಿಡಿ ಎನ್ನುವದಿಲ್ಲ, ಸ್ವಾಮಿ. ಅವರಿಗೆ ದ್ವಾರಕೆಯಿಂದ ಅಕ್ಕಿಬೇಳೆಗಳನ್ನು ಕೊಟ್ಟು ಕಳುಹಿಸುವದಿಲ್ಲ. ಬದಲಾಗಿ, ಅವರಿಗೆ ಅಕ್ಷಯಪಾತ್ರೆಯನ್ನು ಪಡೆಯುವ ರೀತಿಯನ್ನು ಧೌಮ್ಯರ ಮುಖಾಂತರ ತೋರಿಸಿ ಕೊಡುತ್ತಾನೆ. ಹಿಂದೆ ಮದುವೆಗಳ ಸಂದರ್ಭದಲ್ಲಿ ರಾಶಿರಾಶಿ ಉಡುಗೊರೆಗಳನ್ನು ನೀಡಿದ ಕೃಷ್ಣ ಈಗ ಮನೆಯೇ ಇಲ್ಲದ ಅವರಿಗೆ ಅದನ್ನು ನೀಡಲು ಹೋಗುವದಿಲ್ಲ. ಅವರು ಯುದ್ಧಕ್ಕೆ ಸಹಾಯ ಮಾಡು ಎಂದು ಬಂದರೆ, ತಾನೇ ಬಂಡಿಯ ಹೋವನಾಗಿ ಅವರಿಗೆ ಸಹಾಯಕ್ಕೆ ನಿಲ್ಲುತ್ತಾನೆ, ಹೊರತು ಅವರಿಗೆ ಸೈನ್ಯದ ಸರಬರಾಜು ಮಾಡಿ ಕೈತೊಳೆದುಕೊಳ್ಳುವದಿಲ್ಲ.
ಪಾಂಡವರೂ ಅಷ್ಟೆ, ತಮಗೆ ಕಷ್ಟ ಬಂದಾಗ ಯಾವ ನೆಂಟರ ಬಳಿಯೂ ಹೋಗಿ ಹಣ, ಸಂಪತ್ತುಗಳನ್ನು ಬೇಡುವದಿಲ್ಲ. ಪ್ರಭಾಸಕ್ಕೆ ತೀರ್ಥಯಾತ್ರೆಗೆ ಬಂದಾಗ, ಪಾಂಡವರ ಕಷ್ಟವನ್ನು ಕಂಡು ಬಲರಾಮ, ಸಾತ್ಯಕಿಯರು ನಾವೀಗಲೇ ದುರ್ಯೋಧನನನ್ನು ಕೊಂದು ರಾಜ್ಯವನ್ನು ಅಭಿಮನ್ಯುವಿಗೆ ನೀಡಿರುತ್ತೇವೆ ಎಂದರೆ, ಧರ್ಮಭೀಮರು ಒಪ್ಪಿಕೊಳ್ಳುವದಿಲ್ಲ. ಸುಲಭವಾಗಿ ಬಂದ ಸಹಾಯಕ್ಕೆ ಕೈಯೊಡ್ಡಿ ನಿಲ್ಲುವದಿಲ್ಲ. ತಮ್ಮ ಆತ್ಮಾಭಿಮಾನವನ್ನು ಕಾಪಾಡಿಕೊಳ್ಳುತ್ತಾರೆ, ಪಾಂಡವರು ತಮ್ಮ ಬಾಹುಬಲದಿಂದ ಸಂಪಾದಿಸಿದ್ದನ್ನು ಅನುಭವಿಸುವವರೇ ಹೊರತು ಮತ್ತೊಬ್ಬರ ಬಳಿ ಬೇಡಿ ಬದುಕುವವರಲ್ಲ ಎನ್ನುವದನ್ನು ಲೋಕಕ್ಕೆ ತೋರಿಕೊಡುತ್ತಾರೆ. ಹಾಗೆಯೇ ನಾವೂ ಸಹ, ಎಂತಹುದೇ ಕಷ್ಟವಿದ್ದರೂ ಹೋರಾಡಲು ಸಿದ್ಧರಾಗಬೇಕು. ನಮಗೆ ಮೀರಿದ ವಿಷಯಗಳಲ್ಲಿ ಸಹಾಯ ಮಾಡಲು ಅವಿಜ್ಞಾತಸಖನಾದ ಶ್ರೀಕೃಷ್ಣ ಇದ್ದೇ ಇದ್ದಾನೆ. ಯಾರನ್ನೋ ನಮಗೆ ನಂಟರನ್ನಾಗಿಸಿ ನಮ್ಮ ಹೊರೆಯ ಭಾರವನ್ನು ಕಡಿಮೆ ಮಾಡುತ್ತಾನೆ.
ಎಲ್ಲರ ನೆಂಟನಾದ ಪರಮಾತ್ಮ ನಡೆದ ದಾರಿಯಿದು. ಸರ್ವಶಕ್ತನನ್ನೇ ನೆಂಟನನ್ನಾಗಿ ಪಡೆದ ಪಾಂಡವರು ನಡೆದ ದಾರಿಯಿದು. ಆ ದಾರಿಯಲ್ಲಿ ನಡೆಯುವವರು ಬುದ್ಧಿವಂತರು. ನೆಂಟಸ್ತನದಲ್ಲಿ ಸಾಲ ತಂದು ಮುಖ ಮುರಿದುಕೊಂಡು ಬದುಕುವವರು ಮೂರ್ಖರು.
“ಗಂಟನೊಬ್ಬರ ಕೈಯಲಿಡುವಾತ ಮೂರ್ಖ”
ನಾವು ಸಂಪಾದಿಸಿದ ಹಣವನ್ನು ನಮ್ಮ ಕೈಯಲ್ಲಿ ಇಟ್ಟುಕೊಳ್ಳದೇ, ಅಥವಾ ನಮ್ಮ ಹೆಂಡತಿ ಮಕ್ಕಳ ಸುಪರ್ದಿಯಲ್ಲಿಡದೇ ಮತ್ತೊಬ್ಬರ ಕೈಯಲ್ಲಿಡುವವನು ಮೂರ್ಖ.
ಹಿಂದಿನ ಯುಗಗಳಲ್ಲಿ ಹಣವನ್ನು ತನಗೆ ವಿಶ್ವಾಸವಿರುವ ವ್ಯಕ್ತಿಯ ಕೈಯಲ್ಲಿ ನೀಡಿ ನನ್ನ ಹೆಂಡತಿ ಮಕ್ಕಳಿಗೆ ನೀಡಿ ಎಂದು ಹೇಳುತ್ತಿದ್ದರು. ಯಾಜ್ಞವಲ್ಕ ಮುಂತಾದ ಮಹರ್ಷಿಗಳು ತಮ್ಮ ಗಂಥಗಳಲ್ಲಿ ಅಲ್ಲಿ ನಡೆಯಬೇಕಾದ ವ್ಯವಹಾರದ ಕುರಿತು ಸಾಕಷ್ಟು ಹೇಳಿದ್ದಾರೆ. ಆದರೆ, ಈ ಧರ್ಮ, ಕಲಿಯುಗದಲ್ಲಿ ಅನುಸರಿಸಲು ಸಾಧ್ಯವಿಲ್ಲ. ಮಹಾಭಾರತವೇ ಈ ತತ್ವವನ್ನು ಪ್ರತಿಪಾದನೆ ಮಾಡಿ ತೋರಿಸಿದೆ. ಕಾರಣ, ಕಲಿಯುಗದಲ್ಲಿ ಶುದ್ಧ ಮನಸ್ಸಿನ ಬುದ್ಧಿ ಇರುವ ಜನರು ಪಾಯಃ ಇರುವದೇ ಇಲ್ಲ. ಹಣ ತಮ್ಮ ಬಳಿ ಬಂದ ಬಳಿಕ ಪೂರ್ವದಲ್ಲಿ ಸಜ್ಜನರಾಗಿದ್ದರೂ ಅವರ ಮನಸ್ಸು ಪರಿವರ್ತನೆಯಾಗಿಬಿಡುತ್ತದೆ. ಹೀಗಾಗಿ ಹಣ ಯಾರಿಗೆ ತಲುಪಬೇಕೋ ಅವರಿಗೆ ನೀಡುವದೇ ಬುದ್ಧಿವಂತಿಕೆಯೆ ಹೊರತು ಮತ್ತೊಬ್ಬರ ಕೈಯಲ್ಲಿ ಇಡುವವನು ಮೂರ್ಖ.
ಇನ್ನು ಹಣವನ್ನು ಬೇರೆಯವರ ಬಳಿಯಲ್ಲಿ ನೀಡುವ ಅನಿವಾರ್ಯತೆಯೇ ಇದ್ದರೆ, ಒಬ್ಬರ ಕೈಯಲ್ಲಿ ಇಡಬಾರದು, ನಾಲ್ಕು ಜನರನ್ನು ಸೇರಿಸಿ ಅವರೆಲ್ಲರಿಗೂ ತಿಳಿಯುವಂತೆ ಹಣವನ್ನಿರಿಸಬೇಕು, ಮತ್ತು ಯಾರಿಗೆ ಅದು ತಲುಪಬೇಕಾಗಿದೆಯೋ ಅದನ್ನು ಸ್ಪಷ್ಟವಾಗಿ ತಿಳಿಸಿರಬೇಕು. ಅದು ಬಿಟ್ಟು ಒಬ್ಬನಲ್ಲಿಯೇ ವಿಶ್ವಾಸವಿಟ್ಟು ಹಣವಿಟ್ಟರೆ ಅದು ತಲುಪಬೇಕಾದವರಿಗೆ ತಲುಪವದಿಲ್ಲ. ನಾಕಾರು ಜನರ ಕೈಯಲ್ಲಿ ಹಣವಿದ್ದಾಗ ಒಬ್ಬರು ಮತ್ತೊಬ್ಬರಿಗಂಜಿಯಾದರೂ ಹಣವನ್ನು ಮತ್ತೊಬ್ಬರಿಗೆ ಮುಟ್ಟಿಸುತ್ತಾರೆ.
ಈ ವಾಕ್ಯಕ್ಕೆ ಇದಕ್ಕಿಂತ ಹೆಚ್ಚಿನದಾದ ಒಂದು ಅರ್ಥವಿದೆ. ನಮ್ಮ ಹಣದ ಗಂಟನ್ನು ನಾವು ಎಂದಿಗೂ ಕೂಡಿಡಬಾರದು. ಹಣವನ್ನು ತನ್ನ ಜೀವನಕ್ಕಾಗಿ ಉಪಯೋಗಿಸಬೇಕು, ಇಲ್ಲವೇ ಆ ಹಣವನ್ನು ಮೂಲವಾಗಿಟ್ಟುಕೊಂಡು ತನ್ನ ಉದ್ಯಮದಲ್ಲಿ ತೊಡಗಿಸಿ ವೃದ್ಧಿ ಮಾಡಿಕೊಳ್ಳಬೇಕು. ಮತ್ತು ದೀನರಿಗೆ ಸಹಾಯ ಮಾಡುತ್ತ, ಯೋಗ್ಯರಾದ ಪಾತ್ರರಾದ ಸಜ್ಜನರಿಗೆ ದಾನ ಮಾಡುತ್ತ ಅದನ್ನು ನೀಡಿದ ಭಗವಂತನಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು. ಅದು ಬಿಟ್ಟು ಅದನ್ನು ಎಂದಿಗೂ ಕೂಡಿಡಬಾರದು, ಮತ್ತೊಬ್ಬರ ಕೈಯಲ್ಲಂತೂ ನೀಡಲೇ ಬಾರದು.
ಇದಕ್ಕೂ ಭಗವಂತನಿಗೂ ಏನಾದರೂ ಸಂಬಂಧವಿದೆಯೇ, ಎಂದರೆ ಅವಶ್ಯವಾಗಿ ಇದೆ. ಪರಮಾತ್ಮ ಪರಶುರಾಮನ ರೂಪದಲ್ಲಿ ಸಮಗ್ರ ಜಗತ್ತನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತಾನೆ. ಆ ಯಾವ ಹಣವನ್ನೂ ತಾನಿಟ್ಟುಕೊಳ್ಳದೇ ಭುವಿಯ ಬಾಹ್ಮಣರನ್ನೆಲ್ಲ ಕರೆದು ಅವರಿಗೆ ನೀಡುತ್ತಾನೆ. ಒಬ್ಬರಿಗೆ ಮಾತ್ರ ನೀಡದೇ ಎಲ್ಲರಿಗೆ ಹಂಚಿದ ಭಗವಂತ. ಅವನ ದಾರಿಯಲ್ಲಿ ನಾವು ನಡೆಯಬೇಕು.
“ತುಂಟನಾದವನು ತಾ ಕಡುಮೂರ್ಖನಯ್ಯ”
ತುಂಟ ಎಂದರೆ ಕುಚೇಷ್ಟೆ ಮಾಡುವವನು. ಮಕ್ಕಳು ತುಂಟತನ ಮಾಡಿದಾಗ ಒಂದು ಹಂತಕ್ಕೆ ಸಹಿಸಿಕೊಳ್ಳಬಹುದು. ಅದರೆ, ಹುಡುಗ ಬೆಳೆಯುತ್ತ ಬೆಳೆಯುತ್ತ ತಾನು ತುಂಟನೇ ಆಗಿಬಿಟ್ಟರೆ ಅವನು ಬರಿಯ ಮೂರ್ಖನಲ್ಲ, ಕಡುಮೂರ್ಖನಾಗುತ್ತಾನೆ.
ಪರಮಾತ್ಮ ಕೃಷ್ಣಾವತಾರದಲ್ಲಿ ತುಂಟತನ ತೋರಿದ ನಿಜ. ಆದರೆ, ಅವನು ತೋರಿದ ತುಂಟತನ ಗೋಕುಲದ ಗೋಪಿಕೆಯರಿಗೆ ಬೇಕಾಗಿತ್ತು. ಅವನ ತುಂಟತನವನ್ನು ಅನುಭವಿಸಲಿಕ್ಕಾಗಿಯೇ ಹುಟ್ಟಿಬಂದ ಅಪ್ಸರಸೆಯರು ಅವರು.
ತಂದೆಯಾದವನು ಮಗುವನ್ನು ತನ್ನ ಎದೆಯ ಮೇಲೆ ನಿಲ್ಲಿಸಿಕೊಳ್ಳುತ್ತಾನೆ, ಮುಖದ ಮೇಲೆ ನಿಲ್ಲಿಸಿಕೊಳ್ಳುತ್ತಾನೆ, ಅದರಿಂದ ತುಳಿಸಿಕೊಳ್ಳುತ್ತಾನೆ. ಅದು ತಾನಾಗಿಯೇ ಬಯಸಿ ಮಾಡಸಿಕೊಳ್ಳುತ್ತಿರುವದು. ಆದರೆ, ಅದೇ ಕೂಸು ಸ್ವಲ್ಪ ದೊಡ್ಡದಾದಮೇಲೆ ತಾನಾಗಿಯೇ ಬಂದು ಮಲಗಿದ್ದ ಅಪ್ಪನ ಎದೆಯನ್ನು ಮುಖವನ್ನು ತುಳಿದರೆ ಅಪ್ಪ ಅದನ್ನು ಸಹಿಸುವದಿಲ್ಲ. ಹಾಗೆ, ಪರಮಾತ್ಮನ ತುಂಟತನದ ಲೀಲೆಗಳನ್ನು ಕಾಣಲಿಕ್ಕಾಗಿಯೇ, ಕಂಡು ಆನಂದಿಸಲಿಕ್ಕಾಗಿಯೋ ಅಪ್ಸರಸೆಯರು ಗೋಪಿಕೆಯರಾಗಿ ಹುಟ್ಟಿ ಬಂದಿದ್ದರು. ಅವರಿಗೆ ಪರಮಾತ್ಮ ತುಂಟತನ ತೋರಿದ. ಕಂಡಕಂಡವರ ಬಳಿಯಲ್ಲಲ್ಲ. ಗೋಕುಲದ ಗೋಪಿಕೆಯರ ಬಳಿ ತುಂಟನಾಗಿ ನಡೆದುಕೊಂಡ ಪರಮಾತ್ಮ ಇಂದ್ರಪಸ್ಥದಲ್ಲಿದ್ದಾಗ, ಹಸ್ತಿನಾವತಿಗೆ ಬಂದಾಗ ಅಲ್ಲಿನ ಹೆಣ್ಣುಮಕ್ಕಳೊಂದಿಗೆ ಆ ರೀತಿ ವರ್ತಿಸಲಿಲ್ಲ, ಸರ್ವಥಾ ವರ್ತಿಸಲಿಲ್ಲ.
ಹಾಗೆ, ನಮ್ಮ ಕುಚೇಷ್ಟೆಗಳೇ ಮತ್ತೊಬ್ಬರಿಗೆ ಬೇಕಾದಾಗ ಅದು ಸಹ್ಯವಾದ ತುಂಟತನವಾಗುತ್ತದೆ. ಆದರೆ, ಎದುರಿನವಿರಿಗೆ ಹಿಂಸೆಯಾಗುವಂತೆ ನಾವೆ ತುಂಟರಾಗಿಬಿಟ್ಟರೆ ಆಗ ಮೂರ್ಖರಾಗುತ್ತೇವೆ, ಅಷ್ಟೇ ಅಲ್ಲ ಕಡುಮೂರ್ಖರು ಎಂದು ಪ್ರಸಿದ್ಧರಾಗುತ್ತೇವೆ.
ಇದು ತುಂಬ ಮಹತ್ತ್ವದ ಮಾತು. ಮನುಷ್ಯ ಏಕಾಂತದಲ್ಲಿ ಹೇಗಿರಬೇಕು, ತನ್ನ ಹೆಂಡತಿಯ ಸಂಗಡ ಹೇಗಿರಬೇಕು, ಸಮಾಜದ ಮಧ್ಯದಲ್ಲಿ ಹೇಗಿರಬೇಕು ಎನ್ನುವದನ್ನು ತಿಳಿದಿರಬೇಕು. ಏಕಾಂತದಲ್ಲಿ ತನ್ನ ತುಂಟತನಗಳು, ಕುಚೇಷ್ಟೆಗಳು, ಮಾತುಗಳು ಹೆಂಡತಿಗೆ ಇಷ್ಟವಾದರೂ ಅದನ್ನು ಹತ್ತು ಜನರ ಮಧ್ಯದಲ್ಲಿ ತೋರಿಸುವದು ಮೂರ್ಖತನ. ಹಾಗೆಯೇ ಹೆಂಡತಿಯನ್ನು ಹೊರತು ಪಡಿಸಿ ಮತ್ತೊಬ್ಬರ ಬಳಿ ತೋರಿಸುವದು ಕಡು ಮೂರ್ಖತನ.
ಶ್ರೀಕೃಷ್ಣ ಗೋಪಿಕೆಯರಿಗೆ ತುಂಟನಾದ. ಯಶೋದೆಗೆ ಮಗನಾದ. ಗೋಪಾಲಕರಿಗೆ ಗೆಳೆಯನಾದ. ನಂದ-ಯಶೋದೆಯರಿಗೆ ಮುದ್ದಿನ ಕೂಸಾದ. ಅಕ್ರೂರ-ಉದ್ದವರಿಗೆ ದೈವನಾದ. ಪಾಂಡವರಿಗೆ ಬಾಂಧವನಾದ. ಜನರಿಗೆ ರಮಣೀಯನಾದ. ಹೊರತು ಎಲ್ಲರ ಬಳಿ ಒಂದೇ ರೀತಿ ಇರಲಿಲ್ಲ. ಹಾಗೆಯೇ ನಮಗೂ ಎದುರಿನವರಿಗೂ ಎಷ್ಟು ಸಂಬಂಧವೋ ಅಷ್ಟು ಮಾತ್ರ ನಮ್ಮನ್ನು ತೋರಿಕೊಳ್ಳಬೇಕು. ತುಂಟತನ ಒಬ್ಬರಿಗೆ ಇಷ್ಟ ಎಂದು ನಾವು ತುಂಟರೇ ಆಗಿಬಿಟ್ಟರೆ ಕಡುಮೂರ್ಖರಾಗುತ್ತೇವೆ.
ಈ ಲೇಖನವನ್ನು ಸಮಯವಾದಾಗ ಮುಂದುವರೆಸುತ್ತೇನೆ.
ಇಂಥಹ ದಿವ್ಯನೀತಿಗಳನ್ನು ಉಪದೇಶಿಸಿದ ನಮ್ಮ ಶ್ರೀ ಪುರಂದರದಾಸರಿಗೆ ಹಾಗೂ ಅವರ ಅಂತರ್ಯಾಮಿಯಾದ ಗುರುನಾಥ ಮಧ್ವೇಶ ಪುರಂದರವಿಠ್ಠಲನಿಗೆ ಅನಂತ ನಮನಗಳನ್ನು ಸಮರ್ಪಿಸೋಣ.