ಹರಟೆ ಹೊಡೆಯೋಣ ಎಂದು ಕೂಡುವ ಮುನ್ನ…
ಶ್ರೀ ಮದಾನಂದತೀರ್ಥಭಗವತ್ಪಾದಾಚಾರ್ಯರ ಪರಂಪರೆಯ ತಪಸ್ವಿಗಳ ಒಂದೊಂದು ಚರ್ಯೆಯೂ ನಮ್ಮ ಬದುಕಿಗೆ ದಾರಿದೀಪ. ಅವರು ನಡೆದ ಹಾದಿಯಲ್ಲಿ ನಾವು ನಡೆದರೆ, ಅವರ ಬದುಕಿನ ಆದರ್ಶಗಳನ್ನು ನಾವು ಮೈಗೂಡಿಸಿಕೊಂಡರೆ ಪರಮಾತ್ಮ ಸುಲಭದಲ್ಲಿ ಒಲಿದುಬಿಡುತ್ತಾನೆ.
ಅದು ಶ್ರೀ ಯಾದವಾರ್ಯರ ಕಾಲ. “ಯನ್ನಿಷ್ಠಾಮವಲೋಕ್ಯ ಸರ್ವಯತಯೋ ಜಾತಾ ವಿವರ್ಣಾನನಾಃ” ಎಂಬ ಅದ್ವಿತೀಯ ಪ್ರಶಸ್ತಿಗೆ ಭಾಜನರಾದ ಶ್ರೀ ಯದುಪತ್ಯಾಚಾರ್ಯರ ಕಾಲ. ಶ್ರೀ ಯಾದವಾರ್ಯರು ಗೃಹಸ್ಥರು, ಸಂನ್ಯಾಸಿಗಳಲ್ಲ. ಆದರೆ, ಗೃಹಸ್ಥರಾಗಿದ್ದುಕೊಂಡೂ ಅವರು ಗಳಿಸಿದ್ದ ವೈರಾಗ್ಯ, ಮಾಡಿದ ತಪಸ್ಸು, ತೋರಿದ ವಿಷ್ಣುಭಕ್ತಿ, ಪಡೆದಿದ್ದ ಜ್ಞಾನಗಳನ್ನು ಕಂಡು ಯತಿಗಳೂ ಮೂಗಿನ ಮೇಲೆ ಬೆರಳಿಡುತ್ತಿದ್ದರು. ಅಂತಹ ಪರಮಾದ್ಭುತ ವ್ಯಕ್ತಿತ್ವ ನಮ್ಮ ಶ್ರೀ ಯಾದವಾರ್ಯರದು.
ಅವರು ಎಂದಿಗೂ ಯಾರ ಬಳಿಯೂ ಕೈಯೊಡ್ಡಿದವರಲ್ಲ. ಯಾರನ್ನೂ ದೇಹಿ ಎಂದವರಲ್ಲ. ಶ್ರೀಹರಿಯನ್ನೇ ನಂಬಿ, ನಿಶ್ಚಲವಾಗಿ ನಂಬಿ ಬದುಕು ಸವೆಸಿದವರು. ಅವರ ವೈರಾಗ್ಯ ಎಷ್ಟು ದೃಢವಾಗಿತ್ತೆಂದರೆ, ಅವರು ಒಂದೇ ಊರಿನಲ್ಲಿ ನೆಲೆಗೊಳ್ಳಲಿಲ್ಲ. ಬಹಳ ದಿವಸ ಇದ್ದರೆ ಆ ಊರಿನ ಮೇಲೇ ಅಭಿಮಾನ ಬೆಳೆದೀತು ಎಂದು ಊರಿಂದ ಊರಿಗೆ ಸಂಸಾರಸಮೇತ ಹೊರಟುಬಿಡುತ್ತಿದ್ದರು.
ಆಗಿನ ಕಾಲದ ಒಬ್ಬ ಸಿರಿವಂತನಿಗೆ ಇವರ ಬಗ್ಗೆ ತಿಳಿಯಿತು. ಯಾರ ಬಳಿಯೂ ಹೋಗಿ ಕೊಡಿ ಎಂದು ಕೇಳದ ಇವರಿಗೆ ದಾನ ಮಾಡಬೇಕು ಎಂದು ಅವನಿಗನ್ನಿಸಿತು. ದಾನ ಮಾಡಿದರೆ ಇಂಥಹವರಿಗೇ ದಾನ ಮಾಡಬೇಕು, ದಾನ ತೆಗೆದುಕೊಳ್ಳುವದನ್ನೇ ವೃತ್ತಿ ಮಾಡಿಕೊಂಡವರಿಗಲ್ಲ ಎಂದು ನಿಶ್ಚಯಿಸಿ, ಶ್ರೀ ಯಾದವಾರ್ಯರು ಯಾವ ಊರಿನಲ್ಲಿದ್ದರೋ ಆ ಊರಿಗೆ ಈ ಸಿರಿವಂತ ಬರುತ್ತಾನೆ. (ಕೆಲವರು ಈ ಶ್ರೀಮಂತನನ್ನು ದಿವಾನ್ ಪೂರ್ಣಯ್ಯ ಎನ್ನುತ್ತಾರೆ, ಅದು ತಪ್ಪು, ಪೂರ್ಣಯ್ಯನವರಿಗಿಂತ ಯಾದವಾರ್ಯರು ಸುಮಾರು ಒಂದು ಶತಮಾನಕ್ಕೆ ಹಿಂದಿನವರು)
ಬಂದ, ಯಾದವಾರ್ಯರು ತಮ್ಮ ಶಿಷ್ಯರಿಗೆ ಪಾಠ ಹೇಳುತ್ತ ಕುಳಿತಿದ್ದರು. ಇವನು ಸಾಷ್ಟಾಂಗ ನಮಸ್ಕಾರ ಮಾಡಿದ. ಯಾದವಾರ್ಯರು ಅವನ ಕಡೆಗೊಮ್ಮೆ ನೋಡಿದರು, ಶ್ರೀಮದಾಚಾರ್ಯರ ಶಾಸ್ತ್ರದ ಪಾಠ ನಡೆಯುತ್ತಿದೆ, ಕುಳಿತು ಕೇಳಿ ಎಂದರು, ಪಾಠ ಮುಂದುವರೆಸಿದರು. ಸಿರಿವಂತ ಪಾಠ ಮುಗಿಯುವವರೆಗೆ ಕಾದ, ಮುಗಿಯುತ್ತಿದ್ದಂತೆ ಸ್ವಾಮಿ ತಮ್ಮ ಬಳಿ ಮಾತನಾಡಬೇಕು ಎಂದ, ಯಾದವಾರ್ಯರು “ಶ್ರೀಹರಿಯನ್ನು ಪೂಜಿಸಬೇಕು”
ಎಂದು ಹೇಳಿ ಮಧ್ಯಾಹ್ನದ ಸ್ನಾನ ಮಾಡಿ ಪೂಜೆಗೆದ್ದರು. ಇಡಿಯ ಜೀವದ ಭಕ್ತಿಯಿಂದ ಯಾದವಾರ್ಯರು ವೇದವ್ಯಾಸದೇವರನ್ನು ನರಸಿಂಹದೇವರನ್ನು ಅರ್ಚಿಸುವ ಪರಿಯನ್ನು ಸಿರಿವಂತ ಕಣ್ಣಾರೆ ಕಂಡ. ಪೂಜೆಯಲ್ಲಿ ಈ ಪರಿ ತನ್ಮಯತೆ ಬರಲು ಸಾಧ್ಯವೇ ಎಂದು ಬೆರಗಾದ. ಪೂಜೆಯಾಯಿತು. ಶಿಷ್ಯರು ಈ ಸಿರಿವಂತ ಬ್ರಾಹ್ಮಣನನ್ನು ಊಟಕ್ಕೆ ಕೂಡಿಸಿದರು. ಸಾಮಾನ್ಯವಾದ ಅಡಿಗೆ. ಭಕ್ಷ್ಯವಿಲ್ಲ, ಭೋಜ್ಯವಿಲ್ಲ. ಒಂದೆರಡು ಜೋಳದ ರೊಟ್ಟಿಗಳು. ತಿನ್ನುತ್ತ ಸಿರಿವಂತ ಅಂದುಕೊಂಡ, ಪಾಪ ಬಹಳ ಬಡತನವಿದೆ, ಇವರು ಏನು ಕೇಳುತ್ತಾರೋ ಕೊಡಬೇಕು ಅಂತ ನಿಶ್ಚಯ ಮಾಡಿದ.
ಊಟವಾಯಿತು, ಶ್ರೀ ಯಾದವಾರ್ಯರು ಪುಸ್ತಕ ತೆಗೆದಿಟ್ಟುಕೊಂಡು ಕುಳಿತರು. ಸಿರಿವಂತ ಅವರನ್ನು ಮಾತನಾಡಿಸಲು ಬಂದ, ನಮಸ್ಕಾರ ಮಾಡಿ “ಸ್ವಾಮಿ, ತಮಗೆ ದಾನ ನೀಡಲು ಬಂದಿದ್ದೇನೆ, ತಮಗೇನು ಬೇಕು ಕೇಳಿ” ಎಂದ. ಯಾದವಾರ್ಯರು “ಶ್ರೀಹರಿ” ಎಂದಷ್ಟೇ ಹೇಳಿ ಮತ್ತೆ ಗ್ರಂಥದ ಅಧ್ಯಯನದಲ್ಲಿ ತಲ್ಲೀನರಾದರು. ಅವನಿದ್ದಾನೆ ಎನ್ನುವದೂ ಸಹ ಯಾದವಾರ್ಯರ ಗಮನಕ್ಕೆ ಬರಲಿಲ್ಲ. ಸಿರಿವಂತ ಕಾದ, ಕಾದ, ಯಾದವಾರ್ಯರು ತಲೆಯೆತ್ತಲೇ ಇಲ್ಲ. ಶಿಷ್ಯರು ವಿಶ್ರಾಂತಿ ಮುಗಿಸಿ ಬಂದರು, ಮತ್ತೆ ಪಾಠ ಆರಂಭವಾಯಿತು. ಸಂಜೆಯಾಯಿತು, ರಾತ್ರಿಯಾಗಲಿಕ್ಕೆ ಬಂತು ಯಾದವಾರ್ಯರು ತಮ್ಮ ಕಾರ್ಯವನ್ನು ಬಿಟ್ಟು ಮತ್ತೊಂದು ಮಾತನ್ನೇ ಆಡರು, ತಲೆಯೆತ್ತಿ ನೋಡರು. ಸಿರಿವಂತನಿಗೆ ಆಶ್ಚರ್ಯವಾಯಿತು. ಇವರಿಗೆ ಇಷ್ಟು ಬಡತನವಿದೆ, ನಾನು ತಾನಾಗಿ ಇವರಿಗೆ ದಾನ ನೀಡಲು ಬಂದಿದ್ದೇನೆ, ಇವರು ಏನನ್ನೂ ಕೇಳುತ್ತಿಲ್ಲವಲ್ಲ, ನೀಡಿದರೆ ಇವರಿಗೆ ದಾನ ನೀಡಬೇಕು ಎಂದು ನಿಶ್ಚಯ ಮಾಡಿ, ಮತ್ತೆ ನಾಳೆ ಭೇಟಿಯಾಗೋಣ ಎಂದು ಹೊರಟ.
ಮಾರನೆಯ ದಿವಸ ಬಂದ, ಇದೇ ಘಟನೆಗಳು ಪುನರಾವರ್ತನೆಯಾಯಿತು. ಆದರೆ, ಈ ದಿವಸ ಯಾದವಾರ್ಯರು ಅವನ ಕಡೆಗೆ ಒಮ್ಮೆಯಾದರೂ ಕಣ್ಣೆತ್ತಿ ನೋಡಲಿಲ್ಲ. ಸಿರಿವಂತನಿಗೆ ನಿಶ್ಚಯವಾಯಿತು. ನಾನು ಕೇಳಿದ್ದು ಸತ್ಯ. ಇವರು ವಿರಕ್ತಶಿಖಾಮಣಿಗಳು. ಇವರಿಗೆ ದಾನ ನೀಡಿದರೆ ನನ್ನ ಸಂಪತ್ತು ಸಾರ್ಥಕ. ಆದರೆ, ಇವರಿಗೆ ಏನು ನೀಡುವದು, ಹಣವನ್ನು ನೀಡುವದಾ, ಭೂಮಿಯನ್ನು ನೀಡುವದಾ, ಏನನ್ನು ನೀಡುವದು ಎಷ್ಟು ನೀಡುವದು ಅಂತ ತಿಳಿಯದೇ ಒದ್ದಾಡಿದ. ಇವರು ಏನು ಬೇಕು, ಎಷ್ಟು ಬೇಕು ಎಂತಾದರೂ ತನ್ನ ಮುಂದೆ ಹೇಳಬಾರದೇ ಅಂತ ಬೇಸರಪಟ್ಟುಕೊಂಡ.
ಎರಡು ಮೂರು ದಿವಸಗಳು ಹೀಗೇ ಕಳೆದವು. ಶ್ರೀ ಯಾದವಾರ್ಯರು ತನ್ನನ್ನು ಮಾತನಾಡಿಸದೇ ಇದ್ದದನ್ನು ಕಂಡು ಈ ಸಿರಿವಂತ ಬೇರೆಯ ಉಪಾಯವನ್ನು ಮಾಡಿದ. ಯಾದವಾರ್ಯರ ಬಳಿ ಅಧ್ಯಯನ ಮಾಡುತ್ತಿದ್ದ ಶ್ರೀ ಬಿದರಹಳ್ಳಿ ಶ್ರೀನಿವಾಸಾಚಾರ್ಯರನ್ನು ಭೇಟಿಯಾಗೋಣ ಅಂತ ನಿಶ್ಚಯಿಸಿದ. ಆದರೆ, ಯಾದವಾರ್ಯರ ಮನೆಯಲ್ಲಿ ಸಾಧ್ಯವಿಲ್ಲ. ಅಲ್ಲಿ ಶಾಸ್ತ್ರದ ಕುರಿತು ಮಾತು ಬಿಟ್ಟರೆ ಮತ್ತೊಂದು ಮಾತಿಲ್ಲ ಹೀಗಾಗಿ ಅವರು ಗುರುಗಳ ಮನೆಗೆ ಬರಲಿಕ್ಕಿಂತ ಮೊದಲಿಗೇ ಅವರನ್ನು ಭೇಟಿಯಾಗಲು ನಿರ್ಧರಿಸಿ ಮಾರನೆಯ ದಿವಸ ಶ್ರೀ ಶ್ರೀನಿವಾಸಾಚಾರ್ಯರು (ಮುಂದೆ ಶ್ರೀನಿವಾಸತೀರ್ಥರು ಎಂದು ಪ್ರಸಿದ್ಧರಾದವರು) ಪಾಠಕ್ಕೆ ಬರುವ ವೇಳೆಗೆ ಅವರನ್ನು ಭೇಟಿಯಾದ.
“ತಾವು ಏನಾದರೂ ಮಾಡಿ ಗುರುಗಳ ಮನಸ್ಸನ್ನು ತಿಳಿದು ನನಗೆ ಹೇಳಬೇಕು, ನನಗೆ ಅವರಿಗೆ ದಾನ ಮಾಡುವ ಮನಸ್ಸಿದೆ. ಅವರ ಏನು ಬೇಕು ಕೇಳಿ ತಿಳಿಸಿ“
ಶ್ರೀನಿವಾಸಾಚಾರ್ಯರು ಮರುನುಡಿದರು.
“ನಮ್ಮ ಗುರುಗಳು ಯಾರ ಬಳಿ ಏನನ್ನೂ ಕೇಳುವದಿಲ್ಲ, ತೆಗೆದುಕೊಳ್ಳುವದಿಲ್ಲ, ನೀವು ಹೊರಡಬಹುದು“
ಇಲ್ಲ, ನಾನವರಿಗೆ ನೀಡಲೇಬೇಕಾಗಿದೆ, ದಯವಿಟ್ಟು ಕೃಪೆ ಮಾಡಿ, ಏನು ಕೊಟ್ಟರೆ ನಿಮ್ಮ ಗುರುಗಳಿಗೆ ಸಂತೋಷವಾಗುತ್ತದೆ ಎನ್ನುವದನ್ನು ತಿಳಿಸಿ ” ಎಂದು ಸಿರಿವಂತ ಗೋಗರೆದ.
ಎಷ್ಟು ಹೊತ್ತು ಮಾತನಾಡಿದರೂ ಸಿರಿವಂತ ಪಟ್ಟನ್ನು ಬಿಡುತ್ತಿಲ್ಲ. ಪಾಠಕ್ಕೆ ಸಮಯವಾಗುತ್ತಿರುವದನ್ನು ಕಂಡ ಶ್ರೀನಿವಾಸಾಚಾರ್ಯರು,
“ಒಂದು ಕೆಲಸ ಮಾಡಿ, ಗುರುಗಳ ಪೂಜೆಗೆ ತುಳಸಿಯನ್ನು ಬಹಳ ಅಪೇಕ್ಷಿಸುತ್ತಾರೆ. ಪೂಜೆಗೆ ತುಳಸಿ ಹೆಚ್ಚಿದ್ದಷ್ಟೂ ಅವರ ಮುಖದಲ್ಲಿ ಆನಂದ ಹೆಚ್ಚಾಗುತ್ತದೆ, ಹೀಗಾಗಿ ನಿಮಗೆ ನೀಡಲೇಬೇಕು ಎಂದು ಅಪೇಕ್ಷೆ ಇದ್ದರೆ ಊರಿನ ಹೊರಗೆ ಯಾರಿಗೂ ತೊಂದರೆಯಾಗದ ಸ್ಥಳದಲ್ಲಿ ತುಳಸಿಯನ್ನು ಬೆಳೆಸುವ ವ್ಯವಸ್ಥೆ ಮಾಡಿ. ನಾವು ಹೋಗಿ ತುಳಸಿ ತರುತ್ತೇವೆ. ಇಷ್ಟು ಮಾಡಬಹುದು, ಆದರೆ ದಾನವನ್ನು ಗುರುಗಳು ತೆಗೆದುಕೊಳ್ಳುವದಿಲ್ಲ”
ಇಷ್ಟು ಹೇಳಿ, ಶ್ರೀನಿವಾಸಾಚಾರ್ಯರು ಅವನ ಉತ್ತರಕ್ಕೂ ಕಾಯದೇ, ಪಾಠಕ್ಕಾಗಿ ಗುರುಗಳ ಮನೆಗೆ ಧಾವಿಸಿದರು.
ಶ್ರೀನಿವಾಸಾಚಾರ್ಯರು ಶ್ರೀ ಯಾದವಾರ್ಯರ ಅಚ್ಚುಮೆಚ್ಚಿನ ಶಿಷ್ಯರು. ಆದರೆ ಎಷ್ಟು ಪ್ರೀತಿಯ ಶಿಷ್ಯರಾದರೂ ಪಾಠಕ್ಕೆ ವಿಳಂಬ ಮಾಡುವಂತಿಲ್ಲ. ಪ್ರೀತಿ ಏನಿದ್ದರೂ, ಪಾಠದ ವಿಷಯದಲ್ಲಿ, ಬುದ್ಧಿವಂತಿಕೆಯ ವಿಷಯದಲ್ಲಿಯಷ್ಟೇ. ಪಾಠಕ್ಕೆ ಬರುತ್ತಿದ್ದಂತೆ ಯಾದವಾರ್ಯರು “ಯಾಕಿಷ್ಟು ಹೊತ್ತು” ಎಂದು ಕೇಳುವಂತೆ ಕಣ್ಣಲ್ಲೇ ಗದರಿಸಿದರು. ಅಂಜಿದ ಶ್ರೀನಿವಾಸತೀರ್ಥರು ಚುಟುಕಾಗಿ ನಡೆದ ಘಟನೆಯನ್ನು ವಿವರಿಸಿ ಕ್ಷಮೆ ಕೇಳಿದರು. ಆಗ ಯಾದವಾರ್ಯರು ಶ್ರೀನಿವಾಸತೀರ್ಥರಿಗೆ ಹೇಳಿದ ಮಾತು,
“ದಡ್ಡಾ, ಅವನ ಬಳಿ ಆ ಹದಿನೈದು ನಿಮಿಷ ಮಾತನಾಡುವ ಬದಲು ಆ ಸಮಯದಲ್ಲಿ ವಿಷ್ಣುಸಹಸ್ರನಾಮಪಠನೆ ಮಾಡಿದ್ದರೆ, ಶ್ರೀಮದಾಚಾರ್ಯರ ಸ್ತೋತ್ರ ಹೇಳಿದ್ದರೆ ನೂರಾರು ಜನ್ಮದ ಪಾಪ ಕಳೆಯುತ್ತಿತ್ತಲ್ಲೋ, ಹದಿನೈದು ನಿಮಿಷಗಳನ್ನು ವ್ಯರ್ಥ ಮಾಡಿಬಿಟ್ಟೆಯಲ್ಲೋ“
ಶ್ರೀನಿವಾಸತೀರ್ಥರು ಸಾಷ್ಟಾಂಗವೆರಗಿ ಕ್ಷಮೆ ಕೇಳುತ್ತಾರೆ, ಪಾಠ ಆರಂಭವಾಗುತ್ತದೆ.
ಇದು ಯಾದವಾರ್ಯರು ಬದುಕುತ್ತಿದ್ದ ರೀತಿ. ಬದುಕಿನ ಒಂದು ಕ್ಷಣವೂ ವಿಷ್ಣುಸ್ಮರಣೆಯಿಲ್ಲದೆ ಕಳೆಯಬಾರದು, ವ್ಯರ್ಥವಾಗಿ ಕಳೆಯಬಾರದು, ಅದರಲ್ಲಿಯೂ ಲೌಕಿಕ ಸುಖ ಸಂತೋಷಗಳನ್ನು ಪಡೆಯಲಿಕ್ಕೆ ಕಳೆಯಬಾರದು, ಹರಟೆಗಂತೂ ಸರ್ವಥಾ ಕಳೆಯಬಾರದು ಎನ್ನುವ ತತ್ವವನ್ನು ಅದ್ಭುತವಾಗಿ ಜೀವನದಲ್ಲಿ ಅಳವಡಿಸಿಕೊಂಡು ಬದುಕಿದ ರೀತಿ.
ಕಂಡಕಂಡವರೊಡನೆ ಗಂಟೆಗಟ್ಟಲೆ ವ್ಯರ್ಥವಾಗಿ ಹರಟೆ ಹೊಡೆಯುವಾಗ ಶ್ರೀ ಯಾದವಾರ್ಯರ ಈ ಮಾತು ನಮಗೆ ನೆನಪಾಗಬೇಕು.
ಸಿಗಲಾರದ ಲೌಕಿಕ ಸುಖಕ್ಕೆ ಹರಸಾಹಸ ಮಾಡುತ್ತ, ಒದ್ದಾಡುವ ಮುನ್ನೊಮ್ಮೆ ಈ ಘಟನೆ ನೆನಪಾಗಬೇಕು.
ಹಾಡಿದರೆ ಎನ್ನೊಡೆಯನ ಹಾಡುವೆ, ಬೇಡಿದರೆ ಎನ್ನೊಡೆಯನ ಬೇಡುವೆ ಎನ್ನುವ ಎತ್ತರವನ್ನು ಮುಟ್ಟಲಿಕ್ಕೆ ಇಂದಿನಿಂದಲೇ ಪ್ರಯತ್ನ ಪಡಬೇಕು.
ನಿಜ, ಯಾದವಾರ್ಯರ ಜೀವನದ ಈ ಮಹಾ ಆದರ್ಶವನ್ನು ಒಂದೇ ಬಾರಿ ಮೈಗೂಡಿಸಿಕೊಳ್ಳಲು ಸಾಧ್ಯವಿಲ್ಲ, ಆದರೆ, ವ್ಯರ್ಥವಾಗಿ ಹೋಗುವ ಇಪ್ಪತ್ತನಾಲ್ಕುಗಂಟೆಗಲ್ಲಿ ಹದಿನೈದುನಿಮಿಷವನ್ನಾದರೂ ಸಾರ್ಥಕವಾಗಿ ಉಪಯೋಗಿಸಬಹುದಲ್ಲ? ಯಾದವಾರ್ಯರು ಇಪ್ಪತ್ತನಾಲ್ಕುಗಂಟೆಗಳಲ್ಲಿ ಹದಿನೈದು ನಿಮಿಷವನ್ನೂ ವ್ಯರ್ಥ ಹೋಗಲು ಬಿಡುತ್ತಿರಲಿಲ್ಲ, ಆದರೆ, ನಾವು ಇಪ್ಪತ್ತನಾಲ್ಕು ಗಂಟೆಗಳಲ್ಲಿ ಹದಿನೈದು ನಿಮಿಷವನ್ನಾದರೂ ಸಾರ್ಥಕವಾಗಿ ಕಳೆದರೆ ಭಗವಂತ ನೀಡಿದ ಸಾಧನಶರೀರ ಸ್ವಲ್ಪಮಟ್ಟಿಗಾದರೂ ಸಾರ್ಥಕವಾಗುತ್ತದೆ.
ಶ್ರೀ ಯಾದವಾರ್ಯರೊಬ್ಬರಷ್ಟೇ ಅಲ್ಲ, ಈ ಘಟನಾವಳಿಯಲ್ಲಿ ಬರುವ ಶ್ರೀನಿವಾಸತೀರ್ಥರೂ ನಮಗೆ ಪಾಠ ಕಲಿಸುತ್ತಾರೆ. ಹದಿನೈದು ನಿಮಿಷ ವ್ಯರ್ಥ ಮಾಡಿದೆಯಲ್ಲೋ ದಡ್ಡಾ, ಅಂದರೆ ತಪ್ಪಾಯಿತು ಎಂದು ಸಾಷ್ಟಾಂಗವೆರಗಿದರು. “ನಾನು, ತುಳಸಿ ಬೆಳೆಸಲಿಕ್ಕೆ ಅನುಕೂಲ ಮಾಡಿದ್ದೇನೆ, ಅದೂ ದೇವರ ಸೇವೆಯಲ್ಲವೇ” ಎಂದು ಮರುಪ್ರಶ್ನೆ ಮಾಡಲಿಲ್ಲ. ಕಾರಣ, ವಿಷ್ಣುಸಹಸ್ರನಾಮದ ಪಠಣ ಪಾರಾಯಣಗಳಿಂದ ಸಕಲ ಅಭೀಷ್ಟಗಳೂ – ತುಳಸಿಯೂ ಸಹ – ತಾನಾಗಿಯೇ ದೊರೆಯುತ್ತವೆ. ಅದನ್ನು ನೀಡುವ ಜವಾಬ್ದಾರಿ ಪರಮಾತ್ಮನದು. ನಮ್ಮದೇನಿದ್ದರೂ ವಿಷ್ಣುಸ್ಮರಣೆ, ವಿಷ್ಣುಸೇವೆಯಷ್ಟೇ ಎನ್ನುವದನ್ನು ಶ್ರೀ ಶ್ರೀನಿವಾಸತೀರ್ಥರು ಮನಗಂಡಿದ್ದರು. ಹೀಗಾಗಿ ಅವರು ದಡ್ಡತನದ ಪ್ರಶ್ನೆಗಳನ್ನು ಮಾಡಲಿಲ್ಲ. ಗುರುಗಳಿಗೆ ಎದುರಾಡಲಿಲ್ಲ.
ಆ ಸಿರಿವಂತ ಸಹಿತ ನಮಗೆ ದೊಡ್ಡ ಪಾಠ ಕಲಿಸಿ ಹೋಗುತ್ತಾನೆ. ನಮಗೆ ನಮ್ಮ ಮಧ್ಯದಲ್ಲಿ ಯೋಗ್ಯರು ಯಾರು, ಅಯೋಗ್ಯರು ಯಾರು ಎಂದು ಗೊತ್ತೇ ಇರುತ್ತದೆ. ಯೋಗ್ಯರಿಗೆ, ಪಾತ್ರರಿಗೆ ಮಾತ್ರ ಸಹಾಯ ಮಾಡಬೇಕು ಎನ್ನುವದೂ ನಮಗೆ ಗೊತ್ತಿರುತ್ತದೆ. ಜೀವನಕ್ಕೆ ಬೇಕಾದ ವಸ್ತುಗಳು ಯಾವುವು ಎನ್ನುವದೂ ನಮಗೆ ಗೊತ್ತಿರುತ್ತದೆ. ಆದರೂ ಅವರು ಕೇಳಲಿ ಎನ್ನುವ ವಿಚಿತ್ರ ಮನಸ್ಥಿತಿ ಇರುತ್ತದೆ.
ದಾನಕ್ಕೆ ಯೋಗ್ಯರಾದ ಪಾತ್ರರು ದೊರಕಿದಾಗ, ನಿಸ್ಪೃಹರಾದ ಸದಾ ಭಗವದಾರಾಧನೆಯಲ್ಲಿ, ಶಾಸ್ತ್ರಾಧ್ಯಯನದಲ್ಲಿ ತತ್ಪರರಾದ ವಿಷ್ಣುಭಕ್ತರು ದೊರಕಿದಾಗ ಏನು ದಾನ ಮಾಡಬೇಕು ಎಂದಿದೆಯೋ ಅದನ್ನು ಅವರ ಪಾದದ ಬಳಿಯಲ್ಲಿಟ್ಟು ನಮಸ್ಕಾರ ಮಾಡಿ ಬಂದುಬಿಡಬೇಕು. ಅವರು ಕೇಳಲಿ, ಕೊಡೋಣ ಎನ್ನುವ ಮನೋಭಾವ ಸರ್ವಥಾ ಇರಬಾರದು. ಕಾರಣ ಅಂತಹ ಮಹನೀಯರು ಎಂದಿಗೂ ಕೇಳುವದಿಲ್ಲ. ಆದರೆ, ಭಕ್ತಿಯಿಂದ ಅವರ ಪಾದಕ್ಕೆ ಸಮರ್ಪಿಸಿದರೆ ಅವರು ಅನುಗ್ರಹ ಮಾಡಿ ಅವಶ್ಯವಾಗಿ ಸ್ವೀಕರಿಸುತ್ತಾರೆ. ಕಾರಣ, ಅವರು ನೋಡುವದು ನಾವು ನೀಡುವ ಪದಾರ್ಥವನ್ನಲ್ಲ, ನೀಡಬೇಕಾದರೆ ನಮಗಿರಬೇಕಾದ ವಿನಯವನ್ನು, ಭಕ್ತಿಯನ್ನು. ನಾನು ನೀಡುತ್ತೇನೆ, ನೀವು ಕೇಳಿ ಎನ್ನುವದು ಅವಿನಯದ ಲಕ್ಷಣ.
ಮನುಷ್ಯನಿಗೆ ಹಾಳು ಮಾಡಲಿಕ್ಕೆ ಸುಲಭವಾಗಿ ಹಣ ದೊರೆಯುತ್ತದೆ, ಕಳೆದು ಹೋಗಲಿಕ್ಕೆ ಹಣ ದೊರೆಯುತ್ತದೆ, ಭೋಗ ಮಾಡಲಿಕ್ಕೂ ಸಹ ಒಂದಷ್ಟು ದೊರೆಯುತ್ತದೆ, ಆದರೆ ದಾನ ಮಾಡಲಿಕ್ಕೆ ಧನ ದೊರೆಯುವದು ದುರ್ಲಭ. ದಾನ ಮಾಡಲಿಕ್ಕ ಹಣವಿದ್ದಾಗಲೂ, ಅದನ್ನು ಭಕ್ತಿವಿನಯಗಳಿಂದ ಸಮರ್ಪಿಸುವ ಬುದ್ಧಿ ಬರುವದು ಇನ್ನೂ ದುರ್ಲಭ. ಇವೆಲ್ಲ ಇದ್ದಾಗಲೂ ಅದನ್ನು ಸ್ವೀಕರಿಸಬಲ್ಲ ಪಾತ್ರಜನರು ಸಿಗುವದು ಕಷ್ಟ. ದಾನ ತೆಗೆದುಕೊಳ್ಳುವ ಮಂದಿ ಸಾವಿರಾರು ಸಿಗುತ್ತಾರೆ. ಆದರೆ ದಾನವನ್ನು ಸ್ವೀಕರಿಸಿ ನಮ್ಮನ್ನು ಪಾಪಕೂಪದಿಂದ ಉದ್ದರಿಸುವ ಮಹಾನುಭಾವರು ಸಿಗುವದು ಅತ್ಯಂತ ಅತ್ಯಂತ ದುರ್ಲಭ. ಅಂತಹವರು ದೊರೆತಾಗ, ಅವರೇ ಕೇಳಲಿ ಎಂದು ಕಾಯಬಾರದು. ನಮ್ಮ ಯೋಗ್ಯತೆಯಂತೆ ನಮ್ಮ ಬಳಿ ಒಂದು ತುಳಸೀದಳವಿದ್ದರೂ ಅವರಿಗೊಪ್ಪಿಸಿ ಕೃಷ್ಣಾರ್ಪಣವೆನ್ನಬೇಕು.
ಮನುಷ್ಯಜನ್ಮ ಅತ್ಯಂತ ದುರ್ಲಭ. ಅದರಲ್ಲಿಯೂ ವೈಷ್ಣವಜನ್ಮ ಅತ್ಯಂತ ಅತ್ಯಂತ ದುರ್ಲಭ. ಆ ವೈಷ್ಣವಜನ್ಮ ದೊರೆತಾಗ ಶಾಸ್ತ್ರದ ಅಧ್ಯಯನ, ವಿಷ್ಣುಸ್ಮರಣೆಗಳು ದೊರೆಯುವದು ಕೋಟಿಗೊಬ್ಬರಿಗೆ. ಅ ಕೋಟಿಗೊಬ್ಬರಲ್ಲಿ ನಾವಾಗುವಂತೆ ಶ್ರೀ ಶ್ರೀನಿವಾಸತೀರ್ಥರಲ್ಲಿ ಮತ್ತು ಶ್ರೀ ಯಾದವಾರ್ಯರಲ್ಲಿ ಅತ್ಯಂತ ವಿನಮ್ರತೆಯಿಂದ ಪ್ರಾರ್ಥನೆ ಮಾಡೋಣ.
ಈ ಗುರುದ್ವಯರ ಸ್ಮರಣೆಯಿಂದ ಉಂಟಾದ ಪುಣ್ಯವನ್ನು ಗುರುಗಳ ಪಾದಕ್ಕೆ ಸಮರ್ಪಿಸೋಣ, ನಿರಂತರ ಗುರಸ್ಮರಣೆಯಿರಲಿ ಎಂದು ಪ್ರಾರ್ಥಿಸೋಣ.
“ಪ್ರೀಯತಾಂ ವಿಷ್ಣುರಿತ್ಥಮ್”
– ವಿಷ್ಣುದಾಸ ನಾಗೇಂದ್ರಾಚಾರ್ಯ.