N Ranganathsharma

ವಿದ್ವಾನ್ ಎನ್. ರಂಗನಾಥಶರ್ಮ

ವಿದ್ವಾನ್ ಎನ್. ರಂಗನಾಥಶರ್ಮ (೭-೪-೧೯೧೬ – ೨೫-೧-೨೦೧೪) ಸಂಸ್ಕೃತ ಮತ್ತು ಕನ್ನಡ ಭಾಷೆಗಳ ಹಿರಿಯ ವಿದ್ವಾಂಸರು.

ಜೀವನ: ಸಂಸ್ಕೃತ, ಕನ್ನಡ ಎರಡು ಭಾಷೆಗಳಲ್ಲೂ ಮಹಾನ್ ವಿದ್ವಾಂಸರೆನಿಸಿರುವ ರಂಗನಾಥ ಶರ್ಮರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ನಡಹಳ್ಳಿ ಗ್ರಾಮದಲ್ಲಿ ಎಪ್ರಿಲ್ ೭, ೧೯೧೬ರಂದು ಜನಿಸಿದರು. ಇವರ ತಂದೆ ವಿದ್ವಾನ್ ತಿಮ್ಮಪ್ಪನವರು. ತಾಯಿ ಜಾನಕಮ್ಮನವರು. ರಂಗನಾಥಶರ್ಮರ ಪ್ರಾಥಮಿಕ ವಿದ್ಯಾಭ್ಯಾಸ ನಡಹಳ್ಳಿಯಲ್ಲಿಯೂ, ಮಾಧ್ಯಮಿಕ ವಿದ್ಯಾಭ್ಯಾಸವು ಸೊರಬದಲ್ಲಿಯೂ ನೆರವೇರಿತು. ತಂದೆ ಹಾಗೂ ಚಿಕ್ಕಪ್ಪನವರು ಸಂಸ್ಕೃತದಲ್ಲಿ ಮಹಾನ್ ಪಂಡಿತರೆನಿಸಿದ್ದು ರಂಗನಾಥಶರ್ಮರ ಮೇಲೆ ಅಗಾಧ ಪ್ರಭಾವ ಬೀರಿತ್ತು.

ಕಿತ್ತು ತಿನ್ನುವ ಬಡತನದ ಮಧ್ಯೆಯೂ ಬಾಲಕ ರಂಗನಾಥಶರ್ಮರಲ್ಲಿ ಓದಿನ ಹಂಬಲ ಮನೆಮಾಡಿತ್ತು. ಅವರಿಗೆ ಇಂಗ್ಲಿಷ್ ಕಲಿಯುವುದಕ್ಕೆ ತುಂಬಾ ಆಸೆ ಇತ್ತು. ಆದರೆ ಹೈಸ್ಕೂಲು ಸೇರಲು ಅವಕಾಶ ಇದ್ದುದು ಸಮೀಪವೆಂದರೆ ಶಿವಮೊಗ್ಗದಲ್ಲಿ ಮಾತ್ರ. ಜೊತೆಗೆ ಊಟ-ವಸತಿಯ ಯೋಚನೆಯೂ ದೊಡ್ಡದಾಗಿತ್ತು. ಹೀಗಾಗಿ, ಕನ್ನಡ-ಸಂಸ್ಕೃತಗಳನ್ನು ಅಧ್ಯಯನ ಮಾಡಿದರೆ ಉಪಾಧ್ಯಾಯರ ವೃತ್ತಿಯಾದರೂ ದೊರೆತು ಹೊಟ್ಟೆ ಹೊರೆದೀತೆಂಬ ಯೋಚನೆಯಲ್ಲಿ ಅಗಡಿ ‘ಆನಂದವನ ಆಶ್ರಮ’ವನ್ನು ಸೇರಿದರು. ಅಲ್ಲಿ ಸಂಸ್ಕೃತ ಕಲಿಯುವವರಿಗೆ ಉಚಿತ ಊಟ-ವಸತಿ ಇದ್ದದ್ದು ಅವರಿಗೆ ಆಕರ್ಷಕವಾದ ಆಹ್ವಾನವಾಗೇನೋ ಒಲಿದುಬಂದಿತ್ತು. ಆದರೆ ಬಯಲು ಸೀಮೆಯ ಹುಡುಗನಿಗೆ ಅದು ಒಗ್ಗದ ಹವಾಮಾನವಾಗಿತ್ತು. ಹೀಗಾಗಿ ಮರಳಿ ಊರಿಗೆ ಬಂದು ಕೆಳದಿ ಸಂಸ್ಕೃತ ಪಾಠಶಾಲೆಗೆ ಸೇರಿದರು. ಅಲ್ಲಿ ಕಾವ್ಯಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮುಂದಿನ ದಾರಿ ಹಿಡಿದದ್ದು ಬೆಂಗಳೂರಿನ ಜಯಚಾಮರಾಜೇಂದ್ರ ಕಾಲೇಜಿನತ್ತ. ಅಲ್ಲಿ ಹನ್ನೊಂದು ವರ್ಷ ಸತತ ಸಂಸ್ಕೃತ ಕಲಿಕೆ ನಡೆಸಿ ವ್ಯಾಕರಣ, ಅಲಂಕಾರ ಶಾಸ್ತ್ರದಲ್ಲಿ ಪಾಂಡಿತ್ಯ ಗಳಿಸಿದರು. ಜೊತೆಗೆ ಖಾಸಗಿಯಾಗಿ ಮದರಾಸಿನ ವಿಶ್ವವಿದ್ಯಾಲಯದ ಕನ್ನಡ ವಿದ್ವತ್ ಮತ್ತು ಮೈಸೂರಿನ ಕನ್ನಡ ಪಂಡಿತ ಪರೀಕ್ಷೆ ಪದವಿಗಳನ್ನು ತಮ್ಮದಾಗಿಸಿಕೊಂಡರು. ವಾರಾನ್ನ, ಭಿಕ್ಷಾನ್ನ, ಸ್ವಯಂ ಪಾಕಗಳ ಮೂಲಕ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಅವರು ಓದಿನಲ್ಲಿ ಮಾತ್ರ ಸದಾ ಮುಂದೆ ಇದ್ದರು. ಊಟಕ್ಕೆ ತಟ್ಟೆ ಇಲ್ಲದೆ, ಎಲೆಗೆ ಕಾಸಿಲ್ಲದೆ ನೆಲದ ಮೇಲೆ ಊಟ ಮಾಡಿದ ದಿನಗಳೂ ಇತ್ತು.

ಅಧ್ಯಾಪನ: ೧೯೪೩ರ ವರ್ಷದಲ್ಲಿ ಹಾಸನದ ಮಾಧ್ಯಮಿಕ ಹಾಗೂ ಪ್ರೌಢಶಾಲೆಯಲ್ಲಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದ ವಿದ್ವಾನ್ ರಂಗನಾಥಶರ್ಮರು ಕಡೆಗೆ ತಾವು ಓದಿದ ಬೆಂಗಳೂರಿನ ಜಯಚಾಮರಾಜೇಂದ್ರ ಸಂಸ್ಕೃತ ಕಾಲೇಜಿನಲ್ಲಿ ೨೮ ವರ್ಷಗಳ ಕಾಲ ನಿರಂತರ ಸೇವೆ ಮಾಡಿ ವ್ಯಾಕರಣ ಶಾಸ್ತ್ರ, ಅಲಂಕಾರಶಾಸ್ತ್ರ ಬೋಧಕರಾಗಿ, ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.

ಸಾಹಿತ್ಯ ರಚನೆ: ಹಲವಾರು ಹಳೆಗನ್ನಡ ಕೃತಿಗಳನ್ನು ಆಧುನಿಕ ಕನ್ನಡಕ್ಕೆ ತಂದಿರುವ ಅವರ ಶ್ರೀಮದ್ವಾಲ್ಮೀಕಿರಾಮಾಯಣ, ವಿಷ್ಣು ಪುರಾಣ, ಶ್ರೀಮದ್ಭಾಗವತ ಮುಂತಾದ ಕೃತಿಗಳು ಅತ್ಯಂತ ಜನಪ್ರಿಯವಾದವು. ಡಿವಿಜಿ, ವಿ.ಸೀ, ಸೇಡಿಯಾಪು, ಕೆ.ಕೃಷ್ಣಮೂರ್ತಿ ಮುಂತಾದ ನಮ್ಮ ನಾಡಿನ ಪ್ರಸಿದ್ಧ ಸಾಹಿತಿಗಳ ಆತ್ಮೀಯರಾಗಿದ್ದ ರಂಗನಾಥ ಶರ್ಮರು ಭಾವ- ಬುದ್ಧಿಗಳ ಹದವಾದ ಮಿಶ್ರಣವುಳ್ಳ ಸಜ್ಜನರಾಗಿದ್ದಾರೆ.

ಮರುಳ ಮುನಿಯನ ಕಗ್ಗದ ಬಗ್ಗೆ ಡಿವಿಜಿಯವರು `ಮರುಳ ಮುನಿಯನು ನಾನು ಮಂಕುತಿಮ್ಮನ ತಮ್ಮ’ ಎಂದು ಹೇಳಿದ್ದಾರೆ. ಮರುಳ ಮುನಿಯ ಪ್ರಕಟಗೊಂಡಿದ್ದು ಡಿವಿಜಿಯವರು ನಿಧನರಾದ ನಂತರ. ಡಿವಿಜಿ ಅವರ ಸಂಗ್ರಹದಲ್ಲಿದ್ದ ಮರುಳಮುನಿಯನನ್ನು ಪತ್ತೆ ಮಾಡಿ ಕನ್ನಡ ಲೋಕಕ್ಕೆ ನೀಡಿದ್ದು ಅವರ ಸುದೀರ್ಘ ಕಾಲದ ಒಡನಾಡಿಗಳಾಗಿದ್ದ ವಿದ್ವಾಂಸ ಎನ್.ರಂಗನಾಥ ಶರ್ಮರು. ಒಂದರ್ಥದಲ್ಲಿ ಮಂಕುತಿಮ್ಮನ ತಮ್ಮ ಎಂದರೆ ಅವರೆ.

ವಿದ್ವಾನ್ ರಂಗನಾಥಶರ್ಮರು ಸಂಸ್ಕೃತ, ಕನ್ನಡ ಭಾಷೆಗಳೆರಡರಲ್ಲೂ ರಚಿಸಿದ ಕೃತಿಗಳ ಸಂಖ್ಯೆ ಐವತ್ತಕ್ಕೂ ಹೆಚ್ಚಿನದು. ಸಂಸ್ಕೃತ ಗ್ರಂಥಗಳು: ಗುರು ಪರಂಪರಾಚರಿತಮ್, ಸಂಸ್ಕೃತ ಪ್ರಥಮ ಪ್ರವೇಶ: ಶ್ರೀಬಾಹುಬಲಿ ವಿಜಯಂ (ನಾಟಕ), ಏಕಚಕ್ರಂ (ನಾಟಕ) ಮುಂತಾದುವು. ಕನ್ನಡ ಗ್ರಂಥಗಳು ಭಾಷಾಂತರ ಪಾಠ: ಲೌಕಿಕ ನ್ಯಾಯಗಳು, ಹೊಸಗನ್ನಡ ವ್ಯಾಕರಣ, ವಾಲ್ಮೀಕಿ ಮುನಿಗಳ ಹಾಸ್ಯ ಪ್ರವೃತ್ತಿ, ವರದಹಳ್ಳಿ ಶ್ರೀಧರ ಸ್ವಾಮಿಗಳು, ಶ್ರೀರಾಮಚಂದ್ರ, ಸೂಕ್ತಿ-ವ್ಯಾಪ್ತಿ ಮೊದಲಾದುವು. ಅನುವಾದಗಳು- ಶ್ರೀಮದ್‌ವಾಲ್ಮೀಕಿ ರಾಮಾಯಣ (ಏಳು ಕಾಂಡಗಳು) ಅಮರ ಕೋಶ, ವಿದುರ ನೀತಿ, ಶ್ರೀಮದ್ ಭಾಗವತ (ದಶಮಸ್ಕಂದ), ಪ್ರಾರ್ಥನಾ ಶ್ಲೋಕಗಳು, ವಿಷ್ಣು ಪುರಾಣ, ಶ್ರುತಿ ಸಾರ ಸಮುದ್ಧರಣ, ವಾಕ್ಯ ಪದೀಯ ಮುಂತಾದವು. ಇವುಗಳೆಲ್ಲದರ ಜೊತೆಗೆ ಶರ್ಮರು ಹಲವಾರು ಗ್ರಂಥಗಳ ಸಂಪಾದನೆಯನ್ನೂ ಮಾಡಿದ್ದಾರೆ.

ಪ್ರಶಸ್ತಿ ಗೌರವಗಳು: ಮಹಾಮಹೋಪಾಧ್ಯಾಯ, ವಿದ್ಯಾವಾರಿಧಿ ಮುಂತಾದ ಬಿರುದುಗಳಿಗೆ ಮೌಲ್ಯತಂದಿರುವ ವಿದ್ವಾನ್ ಎನ್.ರಂಗನಾಥ ಶರ್ಮರು ನಮ್ಮ ನಡುವೆ ಇರುವ ಅತಿ ಹಿರಿಯ ವ್ಯಾಕರಣ ವಿದ್ವಾಂಸರು. ವಿದ್ವಾನ್ ರಂಗನಾಥಶರ್ಮರಿಗೆ ಅನೇಕ ಗೌರವ ಪ್ರಶಸ್ತಿಗಳು ಸಂದಿವೆ. ಆದಿಚುಂಚನಗಿರಿಯಲ್ಲಿ ನಡೆದ ಕರ್ನಾಟಕ ಸಂಸ್ಕೃತ ಪರಿಷತ್ತಿನ ಐದನೆಯ ಸಮ್ಮೇಳನದ ಅಧ್ಯಕ್ಷತೆ, ಸಂಸ್ಕೃತ ಅಧ್ಯಾಪನೆಗೆ ರಾಷ್ಟ್ರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಂಸ್ಕೃತ ವಿದ್ವಾಂಸರಿಗೇ ಮೀಸಲಾದ ರಾಷ್ಟ್ರ ಪ್ರಶಸ್ತಿ, ಡಿ.ವಿ. ಜಿ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ ಮುಖ್ಯವಾದುವು. ೧೯೯೪ರ ವರ್ಷದಲ್ಲಿ ವಿದ್ವಾನ್ ರಂಗನಾಥ ಶರ್ಮರಿಗೆ ‘ರಂಗಾಭಿನಂದನ’ ಎಂಬ ಅಭಿನಂದನ ಗ್ರಂಥವನ್ನು ಸಲ್ಲಿಸಲಾಗಿದೆ.

ಹಿರಿಯ ವಯಸ್ಸಿನಲ್ಲೂ ಕ್ರಿಯಾಶೀಲ: ತಮ್ಮ ೯೮ ನೇ ವಯಸ್ಸಿನ ಕೊನೆಯ ದಿನಗಳವರೆವಿಗೂ ಅವರು ತಮ್ಮ ಚುರುಕುತನವನ್ನು ಉಳಿಸಿಕೊಂಡಿದ್ದಾರು. ಮಾರ್ಚ್ 24, ೨೧೦೩ರಂದು ಡಿ. ವಿ. ಜಿ ಅವರ ಆತ್ಮೀಯ ಒಡನಾಡಿಯಾಗಿದ್ದ ವಿದ್ವಾನ್ ರಂಗನಾಥಶರ್ಮರಿಗೆ, ಮೈಸೂರಿನಲ್ಲಿ ನಡೆದ ಡಿ. ವಿ. ಜಿ ಅವರ ೧೨೫ನೇ ಜನ್ಮದಿನದ ನೆನಪಿನ ಸಮಾರಂಭದಲ್ಲಿ ಡಿ. ವಿ. ಜಿ. ಪ್ರಶಸ್ತಿ ಗೌರವವನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ, ವಿದ್ವಾನ್ ರಂಗನಾಥಶರ್ಮರು ಸುಮಾರು ಒಂದು ಘಂಟೆಯ ಕಾಲ ವಿದ್ವತ್ಪೂರ್ಣವೂ ಉಲ್ಲಾಸಪೂರ್ಣವೂ ಆದ ಉಪನ್ಯಾಸವನ್ನು ನೀಡಿದ್ದು ಈ ಹಿರಿಯರ ಚೈತನ್ಯಪೂರ್ಣ ವ್ಯಕ್ತಿತ್ವಕ್ಕೆ ಮೆರುಗು ಇಟ್ಟಂತೆ ಇತ್ತು.

ವಿನೋದಪೂರ್ಣ ವ್ಯಕ್ತಿತ್ವ: ವಿನೋದ ಪೂರ್ಣ ಮನೋಭಾವದವರಾದ ಶರ್ಮರು ತಮ್ಮ ಬಗ್ಗೆ ಈ ರೀತಿ ವಿನೋದ ಮಾಡಿಕೊಳ್ಳುವುದಿತ್ತು:

ಚೆಪ್ಪಲಿಯೊ ಇರಲಿಲ್ಲ, ರೊಕ್ಕ ಮೊದಲೇ ಇಲ್ಲ
ಇಪ್ಪತ್ತು ಮನೆಗಳಲಿ ಭಿಕ್ಷೆಯನು ಬೇಡಿ
ಸೊಪ್ಪು ಸಿಪ್ಪೆಗಳನ್ನು ಚಪ್ಪರಿಸಿ ತಿಂದೆಯೆಲೊ
ಮುಪ್ಪಿನಲಿ ತೆಪ್ಪಗಿರು ಬೊಪ್ಪ ಮೇಲಿಹನು” ಎಂದು ಹೇಳಿಕೊಳ್ಳುತ್ತಿದ್ದರು.

ಸಜ್ಜನಿಕೆ: ಒಮ್ಮೆ ಶತಾವಧಾನಿ ಗಣೇಶ್, ಪತ್ರಕರ್ತ ಸಂತೋಷಕುಮಾರ ಗುಲ್ವಾಡಿ ಹಾಗೂ ಸೂರ್ಯ ಪ್ರಕಾಶ ಪಂಡಿತರು ಶರ್ಮರ ಮನೆಗೆ ಹೋಗಿದ್ದರು. ಸಾಕಷ್ಟು ನೈವೇದ್ಯ ಸೇವಿಸಿ, ಮಾತನಾಡಿ ಹೊರಟಾಗ ಗೇಟಿನವರೆಗೂ ಶರ್ಮರು ಬಂದರು. ಆಗ ಅಲ್ಲಿದ್ದ ವಾಹನವನ್ನು ಗಮನಿಸಿ ಗುಲ್ವಾಡಿ ಅವರಿಗೆ ನೀವೇ ಡ್ರೈವ್ ಮಾಡಿಕೊಂಡು ಬಂದಿರಾ ಎಂದು ಪ್ರಶ್ನಿಸಿದರು. ಇಲ್ಲ ಡ್ರೈವರ್ ಇದ್ದಾನೆ ಎಂದು ಗುಲ್ವಾಡಿ ಉತ್ತರಿಸಿದಾಗ ಛೇ ಎಂತಹ ಕೆಲಸವಾಯಿತು. ಇಷ್ಟು ಹೊತ್ತು ಹೊರಗೆ ಕಾದಿದ್ದ ಚಾಲಕನಿಗೆ ಏನೂ ಕೊಡಲಿಲ್ಲವಲ್ಲ ಎಂದು ಪೇಚಾಡಿದ ಶರ್ಮರು ಯಾರು ಎಷ್ಟೇ ಸಮಜಾಯಿಷಿ ಹೇಳಿದರೂ ಕೇಳದೆ ಚಾಲಕನನ್ನು ಕರೆದು ಹಣ್ಣು ಹಂಪಲು ಕೊಟ್ಟು ತಣಿಸಿದರು. ಶರ್ಮರದ್ದು ಈಗಲೂ ಅಂತದ್ದೇ ಮಗುವಿನಂತ ಮನಸ್ಸು.

ವಿದಾಯ: ಡಾ, ಎನ್. ರಂಗನಾಥಶರ್ಮರು ಜನವರಿ ೨೫, ೨೦೧೪ರಂದು ಈ ಲೋಕವನ್ನಗಲಿದರು. wiki

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 4.9 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

Indira Halambi

ಇಂದಿರಾ ಹಾಲಂಬಿ (ಗಿರಿವಾಸಿನಿ)

ಇಂದಿರಾ ಹಾಲಂಬಿ (ಗಿರಿವಾಸಿನಿ) (೧೫.೧೦.೧೯೩೪): ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿರುವರಲ್ಲದೆ ಪ್ರಕಾಶಕಿಯಾಗಿಯೂ ಕನ್ನಡ ಸಾಹಿತ್ಯದ …

Leave a Reply

Your email address will not be published. Required fields are marked *