valmiki

ವಾಲ್ಮೀಕಿ

ವಾಲ್ಮೀಕಿ ಎಂಬ ಋಷಿಯು ರಾಮಾಯಣ ಮಹಾಕಾವ್ಯದ ಕರ್ತೃ. ವಾಲ್ಮೀಕಿಯನ್ನು ಆದಿಕವಿ ಎಂದು ಕರೆಯಲಾಗಿದೆ.

ಶ್ರೀರಾಮ, ಸೀತಾದೇವಿ.

ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ನಮ್ಮ ದೇಶದಲ್ಲಿ ಈ ಹೆಸರುಗಳನ್ನು ಯಾರು ಕೇಳಿಲ್ಲ? ಶ್ರೀರಾಮನವಮಿ ದೊಡ್ಡ ಹಬ್ಬ. ರಾಮೋತ್ಸವಗಳನ್ನು ನಡೆಸಿ ಶ್ರೀರಾಮ ಮತ್ತು ಸೀತೆಯರ ಕಥೆಯನ್ನು ಜನ ಮತ್ತೆ ಮತ್ತೆ ಕೇಳುತ್ತಾರೆ. ಅವರನ್ನು ಭಕ್ತಿಯಿಂದ ಪೂಜಿಸುತ್ತಾರೆ.

ಶ್ರೀರಾಮ ಮತ್ತು ಸೀತಾದೇವಿಯರ ಕಥೆಯೇ ರಾಮಾಯಣ.

ಸ್ವಾರಸ್ಯವಾದ ಒಂದು ಸಂಗತಿ ಎಂದರೆ ಶ್ರೀ ರಾಮನೇ ರಾಮಾಯಣದ ಕಥೆಯನ್ನು ಕೇಳಿ ಸಂತೋಷಪಟ್ಟನು. ಅವನ ಮುಂದೆ ಆ ಕಥೆಯನ್ನು ಪದ್ಯರೂಪದಲ್ಲಿ ಇಂಪಾಗಿ ಹಾಡಿದವರು ಇಬ್ಬರು ಹುಡುಗರು – ಲವ, ಕುಶ. ಅವರು ತನ್ನ ಮಕ್ಕಳೆಂದು ಶ್ರೀರಾಮನಿಗೇ ತಿಳಿದಿರಲಿಲ್ಲ!

ರಾಮಾಯಣವನ್ನು ಬರೆದು, ಲವಕುಶರಿಗೆ ಹೇಳಿ ಕೊಟ್ಟವನು ಒಬ್ಬ ದೊಡ್ಡ ಋಷಿ ವಾಲ್ಮೀಕಿ. ಶ್ರೀರಾಮನ ಕಥೆಯನ್ನು ಇಷ್ಟು ಚೆನ್ನಾಗಿ ಹೇಳಿದ ಇವನು ಋಷಿಯಾದದ್ದು, ಕವಿಯಾದದ್ದು ಬಹು ಸ್ವಾರಸ್ಯದ ಕಥೆ.

ವಾಲ್ಮೀಕಿಯ ರಾಮಾಯಣವು ಸಂಸ್ಕೃತದಲ್ಲಿದೆ. ಅದು ಒಂದು ಬಹು ಸುಂದರವಾದ ಕಾವ್ಯ. ಇದಕ್ಕೂ ಮೊದಲು ನಮ್ಮಲ್ಲಿ ಕಾವ್ಯಗಳಿರಲಿಲ್ಲ. ಸಂಸ್ಕೃತದಲ್ಲಿ ಹುಟ್ಟಿದ ಮೊಟ್ಟಮೊದಲ ಕಾವ್ಯ ವಾಲ್ಮೀಕಿಯ ರಾಮಾಯಣ. ಆದ್ದರಿಂದ ಅದನ್ನು  ‘ಆದಿಕಾವ್ಯ’ ಎಂದು ಕರೆಯುತ್ತಾರೆ; ಅದನ್ನು ಬರೆದ ವಾಲ್ಮೀಕಿಯನ್ನು ‘ಆದಿಕವಿ’ ಎಂದು ಕರೆಯುತ್ತಾರೆ.

ವಾಲ್ಮೀಕಿಯ ರಾಮಾಯಣವನ್ನು ಹಾಡಬಹುದು. ಹಾಗೆ ನೋಡಿದಾಗ ಅದು ಕೋಗಿಲೆಯ ದನಿಯಂತೆ ಕಿವಿಗೆ ಬಹು ಇಂಪಾಗಿ ಇರುತ್ತದೆ. ಆದ್ದರಿಂದ ಅದನ್ನು ಬರೆದ ವಾಲ್ಮೀಕಿಯನ್ನು ‘ಕವಿ ಕೋಗಿಲೆ’ ಎಂದು ಕರೆಯುತ್ತಾರೆ. ವಾಲ್ಮೀಕಿ ಎಂಬ ಕೋಗಿಲೆಯು ಕವಿತೆಯೆಂಬ ಮರವನ್ನು ಏರಿ ಕುಳಿತಿದೆಯೆಂತೆ! ಅದು ‘ರಾಮ, ರಾಮ’ ಎಂದು ಇಂಪಾಗಿ ಹಾಡುತ್ತದೆಯಂತೆ! ವಾಲ್ಮೀಕಿಯ ರಾಮಾಯಣವನ್ನು ಓದುವವರು ಮೊದಲು ಈ ವಾಲ್ಮೀಕಿ ಕೋಗಿಲೆಗೆ ನಮಸ್ಕಾರ ಮಾಡುತ್ತಾರೆ, ಆಮೇಲೆ ಅದನ್ನು ಓದುತ್ತಾರೆ.

ರತ್ನಾಕರ ಹುತ್ತದಲ್ಲಿ ಹುಟ್ಟಿಬಂದ

ವಾಲ್ಮೀಕಿ ಎಂಬುದು ಆತನ ತಾಯಿ ತಂದೆಗಳು ಇಟ್ಟ ಹೆಸರಲ್ಲ. ಆತನ ನಿಜವಾದ ಹೆಸರು ರತ್ನಾಕರ ಎಂದು. ವಾಲ್ಮೀಕಿ ಎಂಬುದು ಅಂಕಿತ ನಾಮವಲ್ಲ, ಅನ್ವರ್ಥ ನಾಮ. ‘ವಲ್ಮೀಕ’ ಎಂದರೆ ಹುತ್ತ ಎಂದು ಅರ್ಥ. ಹುತ್ತದಿಂದ ಹುಟ್ಟಿ ಬಂದುದರಿಂದ ವಾಲ್ಮೀಕಿ ಎಂಬ ಹೆಸರು ಆತನಿಗೆ ಬಂದಿತು. ಆತ ಹುತ್ತದಿಂದ ಹೇಗೆ ಹುಟ್ಟಿಬಂದ? ಅದು ಒಂದು ಸೋಜಿಗದ, ಸುಂದರವಾದ ಕತೆ.

ವಾಲ್ಮೀಕಿಯು ಶ್ರೀರಾಮನು ಇದ್ದ ಕಾಲಕ್ಕೆ ತ್ರೇತಾಯುಗಕ್ಕೆ-ಸೇರಿದವನು. ಆ ಕಾಲದಲ್ಲಿ ಗಂಗಾ ನದಿಯ ದಡದ ಉದ್ದಕ್ಕೂ ದೊಡ್ಡ ಅಡವಿಯಿತ್ತು. ಅಲ್ಲಿ ಅನೇಕ ಋಷಿಗಳು ಆಶ್ರಮಗಳನ್ನು ಕಟ್ಟಿಕೊಂಡು, ತಪಸ್ಸು ಮಾಡುತ್ತಿದ್ದರು. ಅಂತಹವರಲ್ಲಿ ಪ್ರಚೇತಸ ಎಂಬ ಹೆಸರಿನ ಋಷಿಯೂ ಒಬ್ಬ. ಆತನಿಗೆ ರತ್ನಾಕರ ಎಂಬ ಹೆಸರಿನ ಒಬ್ಬ ಮಗ ಇದ್ದ. ಅವನು ಇನ್ನೂ ಎಳೆಯ ಹುಡುಗನಾಗಿದ್ದಾಗ ಒಂದು ದಿನ ಆಟವಾಡುತ್ತಾ ಕಾಡಿನೊಳಕ್ಕೆ ಹೋದ. ಅವನಿಗೆ ಹಾದಿ ತಪ್ಪಿತು. ಅವನು ದಿಕ್ಕುತೋಚದೆ ಅಳುತ್ತ ನಿಂತುಕೊಂಡ. ಆ ಹೊತ್ತಿಗೆ ಸರಿಯಾಗಿ ಒಬ್ಬ ಬೇಡನು ಬೇಟೆಯಾಡುತ್ತಾ ಅಲ್ಲಿಗೆ ಬಂದ. ಮುದ್ದು ಮುದ್ದಾಗಿದ್ದ ಆ ಹುಡುಗನನ್ನು ಅವನು ಎತ್ತಿಕೊಂಡು ಸಮಾಧಾನ ಮಾಡಿದ. ಆ ಬೇಡನಿಗೆ ಮಕ್ಕಳಿರಲಿಲ್ಲ. ಅವನು ಆ ಹುಡುಗನನ್ನು ಅಡವಿಯ ಮಧ್ಯದಲ್ಲಿದ್ದ ತನ್ನ ಗುಡಿಸಲಿಗೆ ಎತ್ತಿಕೊಂಡು ಹೋದ. ರತ್ನಾಕರನ ತಂದೆ ತನ್ನ ಮಗನಿಗಾಗಿ ಆಶ್ರಮದ ಸುತ್ತಮುತ್ತ ಹುಡುಕಿದ. ಅವನು  ಸಿಕ್ಕಲಿಲ್ಲ. ಮಗು ಯಾವುದೋ ಕಾಡುಮೃಗದ ಬಾಯಿಗೆ ತುತ್ತಾಗಿದೆ ಎಂದುಕೊಂಡು ಅವನೂ, ಅವನ ಹೆಂಡತಿಯೂ ಅತ್ತು ಅತ್ತು, ಸುಮ್ಮನಾದರು.

ಇತ್ತ ಬೇಡನೂ ಅವನ ಹೆಂಡತಿಯೂ ರತ್ನಾಕರನನ್ನು ಅಕ್ಕರೆಯಿಂದ ಬೆಳೆಸಿ ದೊಡ್ಡವನನ್ನಾಗಿ ಮಾಡಿದರು. ರತ್ನಾಕರನಿಗೆ ಹೆತ್ತ ತಾಯಿತಂದೆಗಳು ಮರೆತು ಹೋದರು. ಬೇಡನೇ ಅವನ ತಂದೆಯಾದ, ಆ ಬೇಡನ ಹೆಂಡತಿ ಅವನ ತಾಯಾದಳು. ಬೇಡನು ಅವನಿಗೆ ಬೇಟೆ ಯಾಡುವುದನ್ನು ಕಲಿಸಿದನು. ಜಾಣನಾದ ರತ್ನಾಕರ ಅದನ್ನು ಬಹುಬೇಗ ಕಲಿತುಕೊಂಡ. ಅವನು ಗುರಿ ತಪ್ಪದ ಬೇಟೆಗಾರನಾದ. ಅಡವಿಯ ಮೃಗಪಕ್ಷಿಗಳಿಗೆ ಅವನು ಯಮನಾದ. ಅವನಿಗೆ ಮದುವೆಯ ವಯಸ್ಸಾಯಿತು. ಸಾಕುತಂದೆಯಾದ ಬೇಡನು ಚೆಲುವೆಯಾದ ಒಬ್ಬ ಬೇಡರ ಹುಡುಗಿಯನ್ನು ತಂದು ಅವನಿಗೆ ಮದುವೆ ಮಾಡಿದ. ಕೆಲವು ವರ್ಷಗಳಲ್ಲಿಯೇ ಅವಳ ಹೊಟ್ಟೆಯಲ್ಲಿ ಹಲವು ಮಕ್ಕಳು ಹುಟ್ಟಿದರು. ಹೀಗಾಗಿ, ರತ್ನಾಕರನ ಸಂಸಾರ ಬೆಳೆದು ದೊಡ್ಡದಾಯಿತು. ಆ ಸಂಸಾರದವರಿಗೆಲ್ಲ ಅನ್ನ ಬಟ್ಟೆಗಳನ್ನು ಒದಗಿಸುವುದು ಅವನಿಗೆ ಬಹು ಕಷ್ಟವಾಯಿತು. ಅವನು ಕಳ್ಳತನಕ್ಕಿಳಿದನು. ಊರಿಂದ ಊರಿಗೆ ಹೋಗುವ ಪ್ರಯಾಣಿಕರನ್ನು ಅವನು ಹೆದರಿಸಿ ಅವರಲ್ಲಿ ಇದ್ದುದನ್ನೆಲ್ಲ ಸುಲಿಗೆ ಮಾಡುತ್ತಿದ್ದನು. ತನ್ನ ಕೆಲಸಕ್ಕೆ ಅಡ್ಡ ಬಂದರೆ ಅವರ ತಲೆಯನ್ನು ಒಡೆಯುವುದಕ್ಕೂ ಅವನು ಹೇಸುತ್ತಿರಲಿಲ್ಲ.

[sociallocker]

ಹೀಗಿರಲು, ಒಂದು ದಿನ ರತ್ನಾಕರನು ತನ್ನ ಬೇಟೆಗಾಗಿ ಹೆದ್ದಾರಿಯ ಪಕ್ಕದಲ್ಲಿ ಹೊಂಚುಹಾಕಿ ಕುಳಿತಿದ್ದನು. ಆ ದಿನ ನಾರದರು ಆ ಹಾದಿಯಲ್ಲಿ ನಡೆದು ಬರುತ್ತಿದ್ದರು. ಅವರ ಕೈಯಲ್ಲಿ ಒಂದು ವೀಣೆ ಇತ್ತು. ಅದನ್ನು ನುಡಿಸುತ್ತ ಅವರು ದೇವರ ನಾಮವನ್ನು ಹಾಡುತ್ತಿದ್ದರು. ಹೀಗೆ ಹಾಡುತ್ತ ಅವರು ಸಂತೋಷದಲ್ಲಿ ಮೈಮರೆತಿದ್ದರು. ಇದ್ದಕ್ಕೆ ಇದ್ದಂತೆ ರತ್ನಾಕರನು ಅವರ ಇದಿರಿಗೆ ನುಗ್ಗಿಬಂದ. ಅವನು ತನ್ನ ದೊಣ್ಣೆಯನ್ನು ಅಡ್ಡಹಿಡಿದು, “ಎಲೆ ಜೋಗಿ, ನಿನ್ನಲ್ಲಿ ಇರುವದನ್ನೆಲ್ಲ ನನಗೆ ಕೊಡು. ಇಲ್ಲದಿದ್ದರೆ, ನಿನ್ನ ತಲೆಯನ್ನು ಒಡೆಯುತ್ತೇನೆ” ಎಂದು ಅಬ್ಬರಿಸಿದ. ನಾರದರೇನು ಸಾಮಾನ್ಯರೆ? ಅವರ ದೇವ ಋಷಿಗಳು. ಸ್ವರ್ಗಲೋಕ, ಭೂಲೋಕ, ಪಾತಾಳಲೋಕಗಳಲ್ಲಿ ಸಂಚಾರ ಮಾಡುವವರು. ಅವರು ರತ್ನಾಕರನ ಅಬ್ಬರಕ್ಕೆ ಹೆದರಲಿಲ್ಲ. ಅವರು ನಗುನಗುತ್ತ, “ಅಯ್ಯ, ನನಲ್ಲಿರುವುದು ಇದು ಒಂದು ಹಳೆಯ ವೀಣೆ, ನಾನು ಉಟ್ಟ ಬಟ್ಟೆ, ಇಷ್ಟೆ. ನಿನಗೆ ಬೇಕಾದರೆ ಇವನ್ನು ತೆಗೆದುಕೊ. ಇಷ್ಟಕ್ಕಾಗಿ ನನ್ನ ತಲೆಯನ್ನು ಏಕೆ ಒಡೆಯುತ್ತಿ?” ಎಂದು ಕೇಳಿದರು. ನಾರದರ ಮಾತನ್ನು ಕೇಳಿ ರತ್ನಾಕರನಿಗೆ ಆಶ್ಚರ್ಯವಾಯಿತು. ಅವನು ತಲೆಯೆತ್ತಿ ಅವರ ಮುಖದ ಕಡೆ ನೋಡಿದ. ಅಲ್ಲಿ ಭಯವಿಲ್ಲ, ಕೋಪವಿಲ್ಲ; ಶಾಂತಿ ಇತ್ತು. ಅವರ ಮುಖದಲ್ಲಿ ಎಂತಹ ಕಳೆ! ಎಳೆಯ ಮಗುವಿನಂತೆ ಕೋಮಲವಾಗಿದ್ದ ಆ ಮುಖವನ್ನು ಕಂಡು ಅವನಿಗೆ ಅಚ್ಚರಿಯಾಯಿತು. ಅಂತಹ ಸುಂದರವಾದ ಮುಖವನ್ನು ಅವನು ಎಂದೂ ಕಂಡಿರಲಿಲ್ಲ. ಅದನ್ನು ಕಂಡು ರತ್ನಾಕರನ ಕಲ್ಲಿನಂತಹ ಮನಸ್ಸು ಬೆಣ್ಣೆಯಂತೆ ಆಯಿತು.

ರತ್ನಾಕರನು ನಾರದರ ಇದಿರಿಗೆ ನುಗ್ಗಿ ಬಂದು, ‘ಎಲೆ ಜೋಗಿ, ನಿನ್ನಲ್ಲಿ ಇರುವುದನ್ನೆಲ್ಲ ನನಗೆ ಕೊಡು. ಇಲ್ಲದಿದ್ದರೆ ನಿನ್ನ ತಲೆಯನ್ನು ಒಡೆಯುತ್ತೇನೆ’ ಎಂದು ಅಬ್ಬರಿಸಿದ.
ರತ್ನಾಕರನು ನಾರದರ ಇದಿರಿಗೆ ನುಗ್ಗಿ ಬಂದು, ‘ಎಲೆ ಜೋಗಿ, ನಿನ್ನಲ್ಲಿ ಇರುವುದನ್ನೆಲ್ಲ ನನಗೆ ಕೊಡು. ಇಲ್ಲದಿದ್ದರೆ ನಿನ್ನ ತಲೆಯನ್ನು ಒಡೆಯುತ್ತೇನೆ’ ಎಂದು ಅಬ್ಬರಿಸಿದ.

ನಾರದರು ಒಂದು ಮರದ ಕೆಳಗೆ ಕುಳಿತು ವೀಣೆಯನ್ನು ನುಡಿಸುತ್ತಾ ದೇವರ ನಾಮವನ್ನು ಹಾಡಿದರು. ಕೋಗಿಲೆಯ ದನಿಯಂತೆ ಅದು ಬಹು ಇಂಪಾಗಿತ್ತು. ಅದನ್ನು ಕೇಳಿ ರತ್ನಾಕರನ ಮನಸ್ಸು ಕರಗಿಹೋಯಿತು. ಇದನ್ನು ಗಮನಿಸಿದ ನಾರದರು ಹಾಡನ್ನು ನಿಲ್ಲಿಸಿ, “ಅಣ್ಣಯ್ಯ, ಕಳ್ಳತನ ಪಾಪಕರ, ಪ್ರಾಣಿಗಳನ್ನು ಕೊಲ್ಲುವುದೂ ಪಾಪಕರ. ಯಾಕಪ್ಪ ಈ ಕೆಟ್ಟ ಕೆಲಸಗಳನ್ನು ಮಾಡುತ್ತಿ? ಎಂದು ಅವನನ್ನು ಕೇಳಿದರು. ರತ್ನಾಕರನು “ಸ್ವಾಮಿ ನಾನೇನು ಮಾಡಲಿ? ನನ್ನ ಸಂಸಾರ ದೊಡ್ಡದು. ಮುಪ್ಪಿನ ತಾಯಿತಂದೆಗಳು ಇದ್ದಾರೆ. ನನ್ನ ಹೆಂಡತಿ ಮಕ್ಕಳು ಇದ್ದಾರೆ. ಅವರೆಲ್ಲ ನನ್ನ ಕಷ್ಟ ಸುಖಗಳಲ್ಲಿ ಭಾಗಿಗಳು. ಅವರಿಗೆಲ್ಲ ನಾನು ಅನ್ನ ಬಟ್ಟೆಗಳನ್ನು ಒದಗಿಸಬೇಕು. ನಾನು ಕಲಿತಿರುವುದು ಬೇಟೆ, ಕಳ್ಳತನ ಈ ಎರಡೇ. ಇವನ್ನು ಬಿಟ್ಟು ನಾನು ಏನು ಮಾಡಲಿ?” ಎಂದು ಪ್ರಶ್ನಿಸಿದನು. ನಾರದರು ನಗುತ್ತ “ಅಯ್ಯ, ನಿನ್ನ ಸಂಸಾರದಲ್ಲಿ ಯಾರಾದರೂ ನಿನ್ನ ಪಾಪದಲ್ಲಿ ಭಾಗಿಯಾಗುತ್ತಾರೆಯೆ? ನೀನು ಮನೆಗೆ ಹೋಗಿ ಅವರನ್ನು ಕೇಳಿಕೊಂಡು ಬಾ” ಎಂದರು. ಅವರು ತಪ್ಪಿಸಿಕೊಂಡು ಹೋಗಲು ಈ ಉಪಾಯವನ್ನು ಹೂಡಿರುವರೆಂದು ರತ್ನಾಕರ ಊಹಿಸಿದ. ನಾರದರಿಗೆ ಅದು ಅರ್ಥವಾಯಿತು. ಅವರು “ಮಗು, ನಿನಗೆ ನನ್ನಲ್ಲಿ ನಂಬಿಕೆ ಇಲ್ಲದಿದ್ದರೆ ನನ್ನನ್ನು ಈ ಮರಕ್ಕೆ ಕಟ್ಟಿಹಾಕಿ ಹೋಗು” ಎಂದರು. ರತ್ನಾಕರನಿಗೆ ಅದು ಸರಿಯೆಂದು ತೋರಿತು. ಅವನು ಅವರನ್ನು ಒಂದು ಮರಕ್ಕೆ ಕಟ್ಟಿಹಾಕಿ ತನ್ನ ಮನೆಗೆ ಹೋದನು.

ಮನೆಗೆ ಬಂದು ರತ್ನಾಕರನು ಮೊದಲು ತಂದೆಯ ಬಳಿಗೆ ಹೋಗಿ, “ಅಪ್ಪಾ, ನಾನು ಕಳ್ಳತನ ಮಾಡಿ ನಿಮಗೆಲ್ಲ ಹೊಟ್ಟೆ, ಬಟ್ಟೆಗಳಿಗೆ ಒದಗಿಸುತ್ತಿದ್ದೇನೆ. ಅದು ಪಾಪವಂತೆ! ಆ ಪಾಪದಲ್ಲಿ ನೀವೂ ಭಾಗಿಗಳಲ್ಲವೆ?” ಎಂದು ಕೇಳಿದನು. ತಂದೆಯು ಕೋಪಗೊಂಡು “ಛೀ ಪಾಪಿ, ಅಂತಹ ಕೆಟ್ಟ ಕೆಲಸಮಾಡಬಾರದು. ನಿನ್ನ ಪಾಪದಲ್ಲಿ ನಾನು ಭಾಗಿಯಾಗಲೆ? ಎಂದಿಗು ಇಲ್ಲ. ನೀನು ಮಾಡಿದುದನ್ನು ನೀನೇ ಅನುಭವಿಸು” ಎಂದನು. ರತ್ನಾಕರನು ತಾಯಿಯ ಬಳಿಗೆ ಬಂದು, “ಅಮ್ಮ, ನನ್ನ ಪಾಪದಲ್ಲಿ ನೀನು ಭಾಗಿಯಾಗುವೆ ಅಲ್ಲವೆ?” ಎಂದು ಪ್ರಶ್ನಿಸಿದನು. ಆಕೆಯೂ ಅವನನ್ನು ಬೈದು ಅಟ್ಟಿದಳು. ಅವನ ಪಾಪದಲ್ಲಿ ಭಾಗಿಯಾಗಲು ಆಕೆ ಒಪ್ಪಲಿಲ್ಲ. ಆಮೇಲೆ ಅವನು ತನ್ನ ಹೆಂಡತಿಯ ಹತ್ತಿರಕ್ಕೆ ಹೋಗಿ “ಏನೇ, ನಾನು ನಿನಗೂ, ನಿನ್ನ ಮಕ್ಕಳಿಗೂ ಅನ್ನ ಬಟ್ಟೆಗಳನ್ನು ಹೇಗೆ ಸಂಪಾದಿಸುತ್ತೇನೆ, ಗೊತ್ತೆ? ಕಳ್ಳತನದಿಂದ. ನಾನು ಕಳ್ಳತನ ಮಾಡುವುದು ನಿಮಗಾಗಿ. ಆದ್ದರಿಂದ ನನ್ನ ಪಾಪದಲ್ಲಿ ನೀವೂ ಭಾಗಿಗಳಾಗುವಿರಿ, ಅಲ್ಲವೆ?” ಎಂದು ಕೇಳಿದನು. ಆಕೆ ಮುಖವನ್ನು ಸೊಟ್ಟಮಾಡಿಕೊಂಡು, “ಇದೆಂತಹ ಮಾತು? ಪಾಪಕ್ಕೂ ನಮಗೂ ಏನೂ ಸಂಬಂಧ? ನೀನು ನನ್ನ ಗಂಡ, ನನ್ನ ಮಕ್ಕಳು ನಿನ್ನ ಮಕ್ಕಳು. ನಮ್ಮನೆಲ್ಲ ಅನ್ನ ಬಟ್ಟೆ ಕೊಟ್ಟು ಕಾಪಾಡುವುದು ನಿನ್ನ ಕರ್ತವ್ಯ” ಎಂದಳು.

ಈಗ ರತ್ನಾಕರನ ಕಣ್ಣು ತೆರೆಯಿತು. ತನ್ನ ಪಾಪಕ್ಕೆಲ್ಲ ತಾನು ಒಬ್ಬನೇ ಹೊಣೆ, ಮತ್ತಾರೂ ಭಾಗಿಗಳಾಗುವುದಿಲ್ಲ. ಇದು ಅರ್ಥವಾಗುತ್ತಲೆ ಅವನು ನಾರದರ ಹತ್ತಿರಕ್ಕೆ ಓಡಿಹೋದನು. ಅವರ ಕಟ್ಟುಗಳನ್ನು ಬಿಚ್ಚಿದನು. ಆಳುತ್ತ, ಅಳುತ್ತಾ, ಅವನು ತನ್ನ ಮನೆಯಲ್ಲಿ ನಡೆದುದನ್ನೆಲ್ಲ ಹೇಳಿದನು. ಆಮೇಲೆ ಅವನು “ಸ್ವಾಮಿ, ಈಗ ನನ್ನ ಗತಿ ಎನು? ಇದುವರೆಗೆ ನಾನು ಮಾಡಿದ ಪಾಪಗಳನ್ನು ಹೇಗೆ ತೊಳೆದುಕೊಳ್ಳಲಿ? ನನಗೆ ನೀವೇ ದಿಕ್ಕು” ಎಂದು ಹೇಳಿ ನಾರದರಿಗೆ ಅಡ್ಡಬಿದ್ದನು. ಅವರು ಅವನನ್ನು ಮೇಲಕ್ಕೆ ಎಬ್ಬಿಸಿದರು. ಅವನ ಕಣ್ಣೀರನ್ನು ಒರೆಸಿದರು. ಅವನನ್ನು ಕುರಿತು “ಮಗು, ಹೆದರಬೇಡ. ನಿನ್ನ ಪಾಪವೆಲ್ಲ ತೊಳೆದುಹೋಗುವ ಉಪಾಯವನ್ನು ಹೇಳಿಕೊಡುತ್ತೇನೆ” ಎಂದು ಸಮಾಧಾನ ಮಾಡಿದರು.

ನಾರದರು ರತ್ನಾಕರನಿಗೆ ರಾಮನಾವನ್ನು ಹೇಳಿ ಕೊಟ್ಟರು. ಆದರೆ ‘ರಾಮ’ ಎಂದು ಹೇಳಲು ಅವನ ನಾಲಗೆ ತಿರುಗದು. ಆಗ ನಾರದರಿಗೆ ಒಂದು ಉಪಾಯ ಹೊಳೆಯಿತು. ಅವರು ಆ ಮೂಢನಿಗೆ ಒಂದು ಮರವನ್ನು ತೋರಿಸಿ “ಅದು ಏನು?” ಎಂದು ಕೇಳಿದರು. ಅವನು ‘ಮರ’ ಎಂದ. ‘ಮರ’ ಎಂಬ ಮಾತನ್ನು ಬೇಗ ಬೇಗ ಹೇಳುವಂತೆ ಅವರು ರತ್ನಾಕರನಿಗೆ ತಿಳಿಸಿದರು. ಅವನು ಹಾಗೆ ಮಾಡಿದಾಗ, ‘ಮರಾ’ ಎಂಬುದು ತಿರುಗುಮುರುಗಾಗಿ ‘ರಾಮ’ ಎಂದಾಯಿತು. ಅವರು ಅವನ ಬಾಯಲ್ಲಿ ಮತ್ತೆ ಮತ್ತೆ ‘ರಾಮ’ ಎಂದು ಹೇಳಿಸಿದರು.

ಆಮೇಲೆ ಅವರು ಅವನನ್ನು ಒಂದು ಮರದ ಕೆಳಗೆ ಕೂರಿಸಿ, “ಮಗು, ನೀನು ಒಂದೇ ಸಮನಾಗಿ ರಾಮ ನಾಮವನ್ನು ಜಪ ಮಾಡುತ್ತ ಇಲ್ಲಿಯೇ ಕುಳಿತಿರು .  ನಾನು ಮತ್ತೊಮ್ಮೆ ಇಲ್ಲಿಗೆ ಬರುತ್ತೇನೆ. ಅಲ್ಲಿಯವರೆಗೆ ನೀನು ಇಲ್ಲಿಂದ ಮೇಲಕ್ಕೆ ಏಳಬೇಡ” ಎಂದು ಹೇಳಿ ಹೊರಟು ಹೋದರು.

ರತ್ನಾಕರನು ರಾಮನಾಮವನ್ನು ಜಪಿಸುತ್ತಾ ಕುಳಿತನು. ಆತನ ಕಣ್ಣು ಮುಚ್ಚಿದವು. ಮನಸ್ಸು ಜಪದಲ್ಲಿ ಸೇರಿಹೋಯಿತು. ಆತ ಮೈಮರೆತ. ಊಟವಿಲ್ಲ, ನಿದ್ರೆಯಿಲ್ಲ; ದಿನಗಳ ಮೇಲೆ ದಿನಗಳುರುಳಿದವು. ಎಷ್ಟೋ ವರ್ಷಗಳು ಕಳೆದುಹೋದವು. ಆತನ ಸುತ್ತಲೂ ಹುತ್ತ ಬೆಳೆಯಿತು. ಆತನು ಯಾರಿಗೂ ಕಾಣಿಸುತ್ತಿರಲಿಲ್ಲ.

ಹೀಗಿರಲು ಒಂದು ದಿನ ನಾರದರ ಸವಾರಿ ಮತ್ತೆ ಅತ್ತ ಕಡೆಗೆ ಬಂದಿತು. ಅವರಿಗೆ ರತ್ನಾಕರನು ಹುತ್ತದೊಳಗೆ ಇರುವನೆಂದು ತಿಳಿದಿತ್ತು. ಅವರು ಬಹು ಎಚ್ಚರಿಕೆಯಿಂದ ಆ ಹುತ್ತರವನ್ನೆಲ್ಲ ಕಿತ್ತು ಹಾಕಿದರು. ಆದರೂ ರತ್ನಾಕರನಿಗೆ ಎಚ್ಚರವಾಗಲಿಲ್ಲ. ಅವನು ತಪಸ್ಸಿನಲ್ಲಿ ಮುಳುಗಿ ಹೋಗಿದ್ದನು. ನಾರದರು ಅವನ ಕಿವಿಯಲ್ಲಿ ‘ರಾಮ ರಾಮ’ ಎಂದು ಕೂಗಿ ಹೇಳಿದರು. ಆಗ ಅವನು ಕಣ್ಣು ತೆರೆದ. ತನ್ನ ಇದಿರಿನಲ್ಲಿ ನಾರದರು ನಿಂತಿದ್ದುದು ಅವನಿಗೆ ಕಾಣಿಸಿತು.  ಕುಳಿತಲ್ಲಿಂದಲೇ ಅವನು ಅವರಿಗೆ ಕೈಮುಗಿದ. ನಾರದರು ಅವನನ್ನು ಕೈಹಿಡಿದು ಮೇಲಕ್ಕೆ ಎಬ್ಬಿಸಿದರು. ಅವರು ಅವನ ಮೈಯನ್ನೆಲ್ಲಾ ಒಮ್ಮೆ ಮೃದುವಾಗಿ ಸವರಿದರು. ಅದರಿಂದ ರತ್ನಾಕರನಿಗೆ ಹೊಸ ಜೀವ ಬಂದಂತಾಯಿತು. ಅವನು ಅವರಿಗೆ ಅಡ್ಡ ಬಿದ್ದನು. ನಾರದರು ಅವನನ್ನು ಎತ್ತಿ ತಬ್ಬಿಕೊಂಡರು. ಅವನನ್ನು ಕುರಿತು ಅವರು, “ರತ್ನಾಕರ, ನೀನು ಧನ್ಯ! ನಿನ್ನ ತಪಸ್ಸಿಗೆ ದೇವರು ಮೆಚ್ಚಿದ್ದಾನೆ. ನೀನು ಈಗ ಬ್ರಹ್ಮ ಋಷಿಯಾಗಿರುವೆ. ನೀನು ಹುತ್ತದಲ್ಲಿ ಹುಟ್ಟಿ ಹೊರಗೆ ಬಂದಿರುವೆ. ಆದ್ದರಿಂದ ಇಂದಿನಿಂದ ನಿನ್ನ ಹೆಸರು ‘ವಾಲ್ಮೀಕಿ ಎಂದು ಪ್ರಸಿದ್ಧವಾಗಲಿ” ಎಂದು ಹೇಳಿದರು.

ನಾರದರ ಮಾತುಗಳನ್ನು ಕೇಳಿ ವಾಲ್ಮೀಕಿಯ ಕಣ್ಣಿನಲ್ಲಿ ಸಂತೋಷದ ನೀರು ಹರಿಯಿತು. ಆತನು “ಸ್ವಾಮಿ, ಇದೆಲ್ಲ ನಿಮ್ಮ ಕೃಪೆ. ಸಜ್ಜನರ ಸಹವಾಸದಿಂದ ಮನುಷ್ಯ ಉದ್ಧಾರವಾಗುತ್ತಾನೆ. ಇದಕ್ಕೆ ನಾನೆ ಸಾಕ್ಷಿ” ಎಂದು ಹೇಳಿ ಮತ್ತೊಮ್ಮೆ ಅವರಗೆ ನಮಸ್ಕರಿಸಿದನು. ನಾರದರು ಆತನನ್ನು ಹರಸಿ ಅಲ್ಲಿಂದ ಹೊರಟುಹೋದರು.

ವಾಲ್ಮೀಕಿ ಋಷಿಯು ಗಂಗಾನದಿಯ ಹತ್ತಿರದಲ್ಲಿ ತನ್ನ ಆಶ್ರಮವನ್ನು ಮಾಡಿಕೊಂಡನು. ಆತನ ಕೀರ್ತಿ ಎಲ್ಲ ಕಡೆಗೆ ಹಬ್ಬಿತು. ಅನೇಕ  ಋಷಿಗಳು ತಮ್ಮ ಸಂಸಾರಗಳೊಡನೆ ಬಂದು ಆತನ ಆಶ್ರಮದಲ್ಲಿ ನೆಲೆಸಿದರು. ಅವರ ಮಕ್ಕಳು ವಾಲ್ಮೀಕಿಯ ಶಿಷ್ಯರಾದರು. ವಾಲ್ಮೀಕಿ ಋಷಿಯು ಆ ಶಿಷ್ಯರಿಗೆಲ್ಲ ವಿದ್ಯೆಯನ್ನು ಹೇಳಿಕೊಡುತ್ತಿದ್ದನು.

ಹೀಗಿರಲು, ಒಂದು ದಿನ ಶ್ರೀರಾಮನು ತನ್ನ ಹೆಂಡತಿಯಾದ ಸೀತೆ, ತಮ್ಮನಾದ ಲಕ್ಷ್ಮಣ ಇವರೊಡನೆ ವಾಲ್ಮೀಕಿಯ ಆಶ್ರಮಕ್ಕೆ ಬಂದ. ಅವರ ಪರಿಚಯವಾಗುತ್ತಲೇ ವಾಲ್ಮೀಕಿಯ ಸಂತೋಷಕ್ಕೆ ಕೊನೆ ಮೊದಲಿಲ್ಲವಾಯಿತು. ಆತನು ಸಡಗರದಿಂದ ತನ್ನ ಶಿಷ್ಯರೊಡನೆ ಅವರನ್ನು ಪರಿಪರಿಯಾಗಿ ಉಪಚರಿಸಿದನು. ಅವರಿಗೆ ಕೈಕಾಲುಗಳನ್ನು ತೊಳೆದುಕೊಳ್ಳಲು ಶಿಷ್ಯರು ನೀರನ್ನು ಕೊಟ್ಟರು. ಆಮೇಲೆ ಅವರನ್ನು ಚಾಪೆಗಳ ಮೇಲೆ ಕೂಡಿಸಿ, ತಿನ್ನಲು ಶುಚಿರುಚಿಯಾದ ಹಣ್ಣುಗಳನ್ನೂ ಕುಡಿಯಲು ನೊರೆಹಾಲನ್ನೂ ನೀಡಿದರು. ಪ್ರಯಾಣದ ಆಯಾಸ ತೀರಿದ ಮೇಲೆ ಶ್ರೀರಾಮನು ತನ್ನ ಕಥೆಯನ್ನು ಹೇಳಿದನು. ತಂದೆಯ ಮಾತನ್ನು ಉಳಿಸುವುದಕ್ಕಾಗಿ ಆತನು ಸೀತೆ ಲಕ್ಷ್ಮಣರೊಡನೆ ವನವಾಸಕ್ಕೆ ಬಂದಿದ್ದನು.  ಅದನ್ನು ಕೇಳಿ ವಾಲ್ಮೀಕಿ ಋಷಿಗೆ ಸಂತೋಷವಾಯಿತು. ಆತನು ಶ್ರೀರಾಮನೊಡನೆ, “ರಾಮಚಂದ್ರ! ನಿನ್ನಂತಹ ಸತ್ಯವಂತರು ಯಾರಿದ್ದಾರೆ? ತಂದೆಯ ಮಾತನ್ನು ಉಳಿಸುವುದಕ್ಕಾಗಿ ನೀನು ರಾಜ್ಯವನ್ನು ಬಿಟ್ಟೆ, ರಾಜನಾಗುವುದನ್ನು ಬಿಟ್ಟು ಅಡವಿಗೆ ಹೊರಟುಬಂದೆ. ನೀನು ಸಾಮಾನ್ಯ ಮಾನವನಲ್ಲ. ನೀನು ಸಾಕ್ಷಾತ್‌ ದೇವರು. ನಿನ್ನ ನಾಮದ ಮಹಿಮೆಯಿಂದ ಬೇಡನಾಗಿ ಪಾಪಿಯಾಗಿದ್ದ ನಾನು ಬ್ರಹ್ಮ ಋಷಿಯಾದೆ.  ನಿನ್ನ ಲೀಲೆ ಬಹು ದೊಡ್ಡದು” ಎಂದು ಹೊಗಳಿದನು.  ಶ್ರೀರಾಮನು ಆತನ ಮಾತಿಗೆ ಉತ್ತರ ಕೊಡಲಿಲ್ಲ. ಸುಮ್ಮನೆ ಮುಗುಳ್ನಕ್ಕನು. ಆತನು ವಾಲ್ಮೀಕಿಯೊಡನೆ “ಮಹಾಋಷಿಗಳೇ, ನಾವು ನಿಮ್ಮ ಆಶ್ರಮದ ಹತ್ತಿರದಲ್ಲಿಯೇ ವಾಸಮಾಡಬೇಕೆಂದು ಬಂದಿದ್ದೇವೆ. ನಿಮ್ಮ ಆಶ್ರಮಕ್ಕೆ ಹತ್ತಿರದಲ್ಲಿರುವ ಒಂದು ಸ್ಥಳವನ್ನು ತೋರಿಸಿ” ಎಂದು ಕೇಳಿಕೊಂಡನು. ವಾಲ್ಮೀಕಿಯ ಆಶ್ರಮಕ್ಕೆ ಹತ್ತಿರದಲ್ಲಿಯೇ ‘ಚಿತ್ರಕೂಟ’ ಎಂಬ ಒಂದು ಬೆಟ್ಟವಿತ್ತು. ಅದರಲ್ಲಿಯೇ ಬಗೆಬಗೆಯ ಹೂವಿನ ಗಿಡಗಳಿದ್ದುವು, ಹಣ್ಣಿನ ಮರಗಳಿದ್ದುವು. ಅದು ಬಲು ಸುಂದರವಾಗಿತ್ತು. ವಾಲ್ಮೀಕಿಯು ಶ್ರೀರಾಮನಿಗೆ ಆ ಬೆಟ್ಟವನ್ನು ತೋರಿಸಿದನು. ಶ್ರೀರಾಮನು ತನ್ನ ತಮ್ಮ, ಹೆಂಡತಿಯರೊಡನೆ ಆ ಬೆಟ್ಟದಲ್ಲಿ ಕೆಲಕಾಲ ನೆಲೆಸಿದ್ದನು.

ಶೋಕದಿಂದ ಶ್ಲೋಕ ಶ್ಲೋಕದಿಂದ ರಾಮಾಯಣ

ವಾಲ್ಮೀಕಿ ಬ್ರಹ್ಮಋಷಿಯಾದ ಕಥೆಯಂತೆ, ಆತನು ರಾಮಾಯಣವನ್ನು ಬರೆದ ಕಥೆಯೂ ಬಲು ರಮ್ಯವಾಗಿದೆ. ಒಂದು ದಿನ ನಾರದರು ವಾಲ್ಮೀಕಿಯ ಆಶ್ರಮಕ್ಕೆ ಬಂದರು. ಅವರನ್ನು ಕಂಡು ವಾಲ್ಮೀಕಲಿಗೆ ಬಲು ಸಂತೋಷವಾಯಿತು. ಆತನು ಅವರನ್ನು ಭಕ್ತಿಯಿಂದ ಉಪಚಾರಮಾಡಿ, ಹಾಲು ಹಣ್ಣುಗಳನ್ನು ಕೊಟ್ಟನು. ಆಮೇಲೆ ಅವರನ್ನು ಎತ್ತರವಾದ ಒಂದು ಮಣೆಯ ಮೇಲೆ ಕುಳ್ಳಿರಿಸಿದನು. ವಾಲ್ಮೀಕಿಯೂ ಆತನ ಶಿಷ್ಯರೂ ನಾರದರ ಇದಿರಿಗೆ ಕೈಜೋಡಿಸಿ ಕುಳಿತುಕೊಂಡರು. ವಾಲ್ಮೀಕಿಯು ದೇವ ಋಷಿಯಾದ ನಾರದರನ್ನು ಕುರಿತು, “ಸ್ವಾಮಿ, ನೀವು ಮೂರು ಲೋಕಗಳನ್ನೂ ಸುತ್ತುವವರು. ನಿಮಗೆ ಎಲ್ಲ ಲೋಕಗಳ ಸಮಾಚಾರವೂ ಗೊತ್ತು. ಆದ್ದರಿಂದ ನಾನು ಕೇಳುವ ಪ್ರಶ್ನೆಗೆ ನೀವು ಉತ್ತರ ಕೊಡಬಲ್ಲಿರಿ. ಹೇಳಿರಿ, ಈ ಭೂಲೋಕದಲ್ಲಿ ಇರುವ ಮನುಷ್ಯರಲ್ಲೆಲ್ಲ ಅತ್ಯಂತ ಗುಣವಂತನಾದ ಮಹಾಪುರುಷನು ಯಾರು? ಸದಾ ಸತ್ಯವನ್ನೇ ನುಡಿಯುವ, ಸದಾ ಶಾಂತವಾಗಿರುವ ಮಹಾನುಭಾವನು ಯಾರು? ಹಿತವನ್ನು ಕೋರುತ್ತಾ, ಎಲ್ಲರಿಗೂ ಪ್ರಿಯನಾದವನು ಯಾರು? ದೇವತೆಗಳಿಗೂ ಕೂಡ ಮೆಚ್ಚುಗೆಯಾಗುವಂತಹ ನಡೆನುಡಿಗಳು ಯಾರಲ್ಲಿವೆ? ಜಗತ್ತಿನಲ್ಲೆಲ್ಲಾ ಅತ್ಯಂತ ಶೂರನೆಂದೂ, ಶ್ರೇಷ್ಠನೆಂದೂ ಕೀರ್ತಿವಂತನಾಗಿರುವವನು ಯಾರು?” ಎಂದು ಕೇಳಿದನು.

ವಾಲ್ಮೀಕಿಯ ಪ್ರಶ್ನೆಗೆ ಉತ್ತರವಾಗಿ ನಾರದರು ಶ್ರೀರಾಮನ ಹೆಸರನ್ನು ಹೇಳಿದರು. ಅಷ್ಟೇ ಅಲ್ಲ, ಶ್ರೀರಾಮನು ದಶರಥನ ಹಿರಿಯ ಮಗನಾಗಿ ಹುಟ್ಟಿದುದು, ಸೀತಾದೇವಿಯನ್ನು ಮದುವೆಯಾದುದು, ತಂದೆಯ ಮಾತನ್ನು ಉಳಿಸುವುದಕ್ಕಾಗಿ ಹದಿನಾಲ್ಕು ವರ್ಷ ವನವಾಸಕ್ಕೆ ಹೋದುದು, ಆಗ ರಾವಣರು ಸೀತೆಯನ್ನು ಕದ್ದುಕೊಂಡು ಹೋದುದು, ಶ್ರೀರಾಮನು ಆ ರಕ್ಕಸನನ್ನು ಕೊಂದುದು, ಸೀತಾ ಲಕ್ಷ್ಮಣರೊಡನೆ ಅಯೋಧ್ಯೆಗೆ ಹಿಂದಿರುಗಿದುದು, ಕಡೆಯಲ್ಲಿ ಶ್ರೀರಾಮನಿಗೆ ಪಟ್ಟಾಭಿಷೇಕವಾದುದು ಇದೆಲ್ಲವನ್ನೂ ನಾರದರು ವಾಲ್ಮೀಕಿಗೆ ವಿವರವಾಗಿ ತಿಳಿಸಿದರು. ಅವರು ಹೇಳಿದ ಕಥೆಯನ್ನು ಕೇಳಿ ವಾಲ್ಮೀಕಿಗೆ ಬಲು ಸಂತೋಷವಾಯಿತು.  ಆತನು ನಾರದರನ್ನು ಬಾಯಿತುಂಬ ಹೊಗಳಿ ನಮಸ್ಕಾರ ಮಾಡಿದನು. ಅವರು ಆತನನ್ನು ಹರಸಿ ಅಲ್ಲಿಂದ ಹೊರಟುಹೋದರು.

ವಾಲ್ಮೀಕಿಯು ರಾಮಾಯಣವನ್ನು ಮೊಟ್ಟಮೊದಲು ಹೇಳಿಕೊಟ್ಟುದು ಶ್ರೀರಾಮನ ಮಕ್ಕಳಾದ ಲವ ಮತ್ತು ಕುಶರಿಗೆ
ವಾಲ್ಮೀಕಿಯು ರಾಮಾಯಣವನ್ನು ಮೊಟ್ಟಮೊದಲು ಹೇಳಿಕೊಟ್ಟುದು ಶ್ರೀರಾಮನ ಮಕ್ಕಳಾದ ಲವ ಮತ್ತು ಕುಶರಿಗೆ

ನಾರದರು ಹೊರಟ ಸ್ವಲ್ಪ ಹೊತ್ತಿನ ನಂತರ ವಾಲ್ಮೀಕಿಯು ಸ್ನಾನಕ್ಕೆಂದು ಗಂಗಾನದಿಗೆ ಹೊರಟನು. ಆತನ ಮಡಿಪಂಚೆಯನ್ನೂ, ಸ್ನಾನದ ತಂಬಿಗೆಯನ್ನೂ ಹಿಡಿದುಕೊಂಡು ಭರದ್ವಾಜನೆಂಬ ಶಿಷ್ಯನೂ ಆತನ ಜೊತೆಯಲ್ಲಿ ಹೊರಟನು. ಹಾದಿಯಲ್ಲಿ ಅವರಿಗೆ ತಮಸಾ ತೀರ್ಥ ಕಾಣಿಸಿತು. ಆ ತೀರ್ಥದ ನೀರು ತುಂಬ ತಿಳಿಯಾಗಿತ್ತು. ವಾಲ್ಮೀಕಿಯು ಶಿಷ್ಯನೊಡನೆ, “ಮಗು, ಆ ನೀರು ಸಜ್ಜನರ ಮನಸ್ಸಿನಂತೆ ಎಷ್ಟು ನಿರ್ಮಲವಾಗಿದೆ! ಇಂದು ನಾನು ಇಲ್ಲಿಯೇ ಸ್ನಾನಮಾಡುತ್ತೇನೆ” ಎಂದು ಹೇಳಿದನು. ಭರದ್ವಾಜನಿಂದ ಆತನು ಸ್ನಾನದ ಪಂಚೆಯನ್ನು ಕೈಗೆ ತೆಗೆದುಕೊಂಡನು.

ವಾಲ್ಮೀಕಿಯು ಸ್ನಾನಕ್ಕೆ ಇಳಿಯಲು ಸರಿಯಾದ ಸ್ಥಳವನ್ನು ಹುಡುಕುತ್ತಿದ್ದನು. ಆಗ ಆತನಿಗೆ ಹಕ್ಕಿಗಳ ಇಂಪಾದ ದನಿ ಕೇಳಿಸಿತು. ಆತನು ತಲೆಯೆತ್ತಿ ನೋಡಿದನು. ಮೇಲೆ ಎರಡು ಕ್ರೌಂಚ ಪಕ್ಷಿಗಳು ಜೊತೆಜೊತೆಯಾಗಿ ಹಾರಾಡುತ್ತಿದ್ದವು. ಗಂಡು-ಹೆಣ್ಣಿನ ಆ ಜೋಡಿಯನ್ನು ನೋಡಿ ವಾಲ್ಮೀಕಿಗೆ ಬಲು ಸಂತೋಷವಾಯಿತು. ಅಷ್ಟರಲ್ಲಿಯೇ ಆ ಜೊತೆಯೆ ಹಕ್ಕಿಗಳಲ್ಲಿ ಒಂದು ಬಾಣದ ಪೆಟ್ಟಿನಿಂದ ಕೆಳಗೆ ಬಿತ್ತು. ಅದು ಗಂಡು ಹಕ್ಕಿ. ಅದನ್ನು ಕಂಡು, ಅದರ ಜೊತೆಯ ಹೆಣ್ಣು ಹಕ್ಕಿ ಸಂಕಟದಿಂದ ಚೀರುತ್ತಿತ್ತು. ಈ ದೃಶ್ಯವನ್ನು ನೋಡಿ ದಯಾಮಯನಾದ ವಾಲ್ಮೀಕಿಯ ಕರುಳು ಕರಗಿತು. ಆ ಗಂಡು ಹಕ್ಕಿಯನ್ನು ಹೊಡೆದವರಾರೆಂದು ಆತ ಸುತ್ತಲೂ ನೋಡಿದ. ಹತ್ತಿರದಲ್ಲಿಯೇ ಬಿಲ್ಲು ಬಾಣಗಳನ್ನು ಹಿಡಿದಿದ್ದ ಒಬ್ಬ ಬೇಡ ಕಾಣಿಸಿದ. ಅವನೇ ಮಾಂಸದ ಆಸೆಯಿಂದ ಹಕ್ಕಿಯನ್ನು ಹೊಡೆದಿದ್ದವನು. ವಾಲ್ಮೀಕಿ ಋಷಿಗೆ ಅವನ ಮೇಲೆ ಬಲು ಕೋಪ ಬಂದಿತು. ಆತನ ಬಾಯಿಂದ,

ಜೋಡಿ ಹಕ್ಕಿಯಲೊಂದ ಕೊಂದ ಬೇಡ
ನೀನಿನ್ನು ಬಹುಕಾಲ ಬದುಕಬೇಡ

ಎಂಬ ಮಾತು ಹೊರಬಂದವು. ಆತ ಹೇಳಿದುದು ಸಂಸ್ಕೃತದಲ್ಲಿ. ಅದನ್ನು ಶ್ಲೋಕ ಎಂದು ಕರೆಯುತ್ತಾರೆ. ಶೋಕದಿಂದ ಶ್ಲೋಕ ಹುಟ್ಟಿಬಂದಿತ್ತು.

ಹಕ್ಕಿಯ ಮೇಲಿನ ಕರುಣೆಯಿಂದ ಬೇಡನಿಗೆ ತಾನು ಶಾಪ ಕೊಟ್ಟುದಕ್ಕಾಗಿ ವಾಲ್ಮೀಕಿಗೆ ವ್ಯಸನವಾಯಿತು. “ನಾನು ಎಂತಹ ಕೆಲಸ ಮಾಡಿದೆ!” ಎಂದು ಆತನು ಮಿಡುಕಿಕೊಂಡನು. ಆತನ ತನ್ನ ನೋವನ್ನು ಶಿಷ್ಯನ ಮುಂದೆಯೂ ಹೇಳಿಕೊಂಡನು. ತನ್ನ ಬಾಯಿಂದ ಬಂದ ಮಾತು ಶ್ಲೋಕ ಅಥವಾ ಪದ್ಯರೂಪದಲ್ಲಿ ಇರುವುದು ಆತನಿಗೆ ಗೊತ್ತಾಯಿತು. ಅದನ್ನು ನೆನೆದ ಆತನಿಗೆ ಅಚ್ಚರಿಯೂ ಆಯಿತು. ಅದನ್ನೇ ಯೋಚಿಸುತ್ತಾ ಆತ ಸ್ನಾನ ಮಾಡಿದನು. ತನ್ನ ನಿತ್ಯಕರ್ಮಗಳನ್ನು ಮಾಡಿ ಮುಗಿಸಿದನು. ಆಗಲೂ ಆತನಿಗೆ ಅದೇ ಯೋಚನೆಯೇ. ತನ್ನ ಆಶ್ರಮಕ್ಕೆ ಹಿಂದಿರುಗಿ ಬರುತ್ತಿರುವಾಗಲೂ ಆತನಿಗೆ ಶ್ಲೋಕದ ಯೋಚನೆಯೇ. ಆಶ್ರಮಕ್ಕೆ ಬಂದ ಮೇಲೆ ಸಹ ಅದೇ ಯೋಚನೆ.

ಹೀಗೆ ವಾಲ್ಮೀಕಿ ತನ್ನ ಬಾಯಿಂದ ಬಂದ ಶ್ಲೋಕವನ್ನೇ ಕುರಿತು ಯೋಚಿಸುತ್ತಿರಲು, ಬ್ರಹ್ಮದೇವನು ಆತನಿಗೆ ಪ್ರತ್ಯಕ್ಷನಾದನು. ಆ ದೇವದೇವನು ವಾಲ್ಮೀಕಿಯೊಡನೆ, “ಎಲೆ ಬ್ರಹ್ಮ ಋಷಿಯೇ, ನನ್ನ ಇಷ್ಟದಂತೆಯೇ ನಿನ್ನ ಬಾಯಿಂದ ಆ ಶ್ಲೋಕ ಹುಟ್ಟಿಬಂತು. ಆ ಶ್ಲೋಕದ ರೂಪದಲ್ಲಿಯೇ ನೀನು ರಾಮಾಯಣವನ್ನು ಬರೆ. ಹೇಗಿದ್ದರೂ ನಾರದರು ರಾಮಾಯಣದ ಕಥೆಯನ್ನು ನಿನಗೆ ಹೇಳಿದ್ದಾರೆ. ಆ ಕಥೆ ಹೇಗೆ ನಡೆಯಿತೋ ಹಾಗೆಯೇ ನಿನ್ನ ಕಣ್ಣಿಗೆ ಕಾಣಿಸುತ್ತದೆ. ನೀನು ಹೇಳುವುದೆಲ್ಲವೂ ಸತ್ಯವೇ ಆಗಿರುತ್ತದೆ. ನಿನ್ನ ನುಡಿ ಸತ್ಯವಾಗುತ್ತದೆ. ಜಗತ್ತಿನಲ್ಲಿ ನದಿಗಳೂ, ಪರ್ವತಗಳೂ ಇರುವಷ್ಟು ಕಾಲವೂ ರಾಮಾಯಣವನ್ನು ಜನರು ಓದುತ್ತಾರೆ” ಎಂದು ಹರಸಿದನು. ಹೀಗೆ ಹರಸಿ ಬ್ರಹ್ಮದೇವನು ಮಾಯವಾದನು.

ವಾಲ್ಮೀಕಿಯು ರಾಮಾಯಣವನ್ನು ಬರೆದನು. ಅದನ್ನು ಆತನು ಮೊಟ್ಟಮೊದಲು ಹೇಳಿಕೊಟ್ಟುದು ಶ್ರೀರಾಮನ ಮಕ್ಕಳಿಗೆ. ಆ ಮಕ್ಕಳ ಹೆಸರು ಲವ ಮತ್ತು ಕುಶ ಎಂದು. ಅವರು ಅವಳಿ ಜವಳಿಯಾಗಿ ವಾಲ್ಮೀಕಿಯ ಆಶ್ರಮದಲ್ಲಿಯೇ ಹುಟ್ಟಿ ಬೆಳೆದವರು. ರಾಜನ ಮಕ್ಕಳಾದ ಅವರು ಆಶ್ರಮದಲ್ಲಿ ಹುಟ್ಟಿ ಬೆಳೆದುದು ಏಕೆ? ಅದೂ ಒಂದು ರಸವತ್ತಾದ ಕಥೆಯೇ.

ಶ್ರೀರಾಮನ ರಾಣಿ ವಾಲ್ಮೀಕಿಯ ಆಶ್ರಮಕ್ಕೆ

ಶ್ರೀರಾಮನು ರಾವಣನನ್ನು ಕೊಂದು ಸೀತೆ ಲಕ್ಷ್ಮಣರೊಡನೆ ಅಯೋಧ್ಯೆಗೆ ಹಿಂತಿರುಗಿದ ಮೇಲೆ, ಆತನಿಗೆ ಪಟ್ಟಾಭಿಷೇಕವಾಯಿತು. ಆತನು ಕೋಸಲ ದೇಶದ ರಾಜನಾದನು. ಸೀತಾದೇವಿಯು ಆತನ ಪಟ್ಟದ ರಾಣಿಯಾದಳು. ಈ ರಾಜರಾಣಿಯರು ರಾಜ್ಯಭಾರ ಮಾಡುತ್ತಾ ಸುಖವಾಗಿದ್ದರು. ರಾಮನ ರಾಜ್ಯದಲ್ಲಿ ಪ್ರಜೆಗಳೆಲ್ಲರೂ ಸುಖಸಂತೋಷಗಳಲ್ಲಿ ನಲಿಯುತ್ತಿದ್ದರು. ಹೀಗೆ ಬಹುಕಾಲವಾದ ಮೇಲೆ ಸೀತಾದೇವಿ ಗರ್ಭಿಣಿಯಾದಳು. ಆಕೆಯಿಂದ ತನ್ನ ವಂಶ ಬೆಳೆಯುವುದೆಂದು ಶ್ರೀರಾಮನಿಗೆ ಬಲು ಸಂತೋಷವಾಯಿತು. ಆತನು ಒಂದು ದಿನ ಆಕೆಯೊಡನೆ “ಸೀತಾ, ಗರ್ಭಿಣಿಯಾದ ನಿನಗೆ ಯಾವ ಬಯಕೆ ಇದ್ದರೂ ಹೇಳು, ನಾನು ಅದನ್ನು ನಡೆಸಿಕೊಡುತ್ತೇನೆ” ಎಂದನು. ಸೀತೆಯು ಮುಗುಳ್ನಗುತ್ತಾ “ಸ್ವಾಮಿ, ನನಗೆ ಇನ್ನಾವ ಬಯಕೆ? ನಿಮ್ಮ ಸುಖವೇ ನನ್ನ ಬಯಕೆ. ನಿಮ್ಮ ಪ್ರೇಮವೇ ನನ್ನ ಬಯಕೆ. ಆದರೂ ಒಂದು ಸಣ್ಣ ಅಪೇಕ್ಷೆ ಇದೆ. ಹಿಂದೆ ನಾವು ವನವಾಸದಲ್ಲಿ ಇದ್ದಾಗ, ಋಷಿಗಳ ಆಶ್ರಮಕ್ಕೆ ಹೋಗುತ್ತಿದ್ದೆವು. ಆಗ ಋಷಿಗಳ ಹೆಂಡತಿಯರಿಗೆ ಏನನ್ನೂ ಕೊಡಲು ಆಗಲಿಲ್ಲ. ಈಗ ಅಲ್ಲಿಗೆ ಹೋಗಿ ಋಷಿಪತ್ನಿಯರಿಗೆ ಕೈತುಂಬ ದಾನ ಮಾಡಬೇಕು, ಅವರ ಜೊತೆಯಲ್ಲಿ ಕೆಲಕಾಲ ಕಳೆಯಬೇಕು ಎಂದು ನನ್ನ ಬಯಕೆ” ಎಂದಳು. ಶ್ರೀರಾಮನು ಅದನ್ನು ನಡೆಸಿಕೊಡುವುದಾಗಿ ಸಂತೋಷದಿಂದ ಒಪ್ಪಿಕೊಂಡನು.

ಮೇಲಿನ ಸಂಗತಿ ನಡೆದ ಮೇಲೆ ಕೆಲವು ದಿನಗಳು ಕಳೆದವು. ಆಮೇಲೆ ಒಂದು ದಿನ ಬೆಳಗ್ಗೆ ಶ್ರೀರಾಮನು ರಾಜಕಾರ್ಯಗಳನ್ನು ನಡೆಸುತ್ತಾ ತನ್ನ ಕೊಠಡಿಯಲ್ಲಿ ಕುಳಿತಿದ್ದನು. ಆಗ ಒಬ್ಬ ಗೂಢಾಚಾರನು ಅವನ ಬಳಿಗೆ ಬಂದನು. ರಾತ್ರಿ ವೇಷವನ್ನು ಬದಲಾಯಿಸಿಕೊಂಡು, ಜನರಾಡುವ ಮಾತುಗಳನ್ನು ಕೇಳಿ, ಅದನ್ನು ರಾಜನಿಗೆ ತಿಳಿಸುವುದು ಆ ಗೂಢಚಾರದ ಕೆಲಸ. ಅವನು ಹಿಂದಿನ ರಾತ್ರಿ ಕೆಲವು ಜನ ಶ್ರೀರಾಮನನ್ನು ದೂರುತ್ತಿದ್ದುದನ್ನು ಕೇಳಿದ್ದ. ತಾನು ಕೇಳಿದುದನ್ನು ರಾಜನಿಗೆ ಹೇಳುವುದು ಅವನ ಕೆಲಸ. ಆದ್ದರಿಂದ ಅವನು ಶ್ರೀರಾಮನನ್ನು ಕುರಿತು, “ಮಹಾಸ್ವಾಮಿ, ಅಯೋಧ್ಯೆಯ ಜನರೆಲ್ಲರೂ ನಿಮ್ಮನ್ನು ಹೊಗಳುತ್ತಾರೆ. ಆದರೆ ಕೆಲವು ಜನ ನಿಮ್ಮ ಒಂದು ಕಾರ್ಯವನ್ನು ಅನ್ಯಾಯವೆಂದು ದೂರುತ್ತಾರೆ. ಸೀತಾ ಮಾತೆ ರಾವಣನ ಅರಮನೆಯಲ್ಲಿ ಸೆರೆಯಾಳಾಗಿದ್ದವಳು. ರಾವಣನು ರಾಕ್ಷಸ, ತುಂಬ ಕೆಟ್ಟವನು; ಅವನ ಸೆರೆಯಲ್ಲಿದ್ದ ಸೀತೆ ಎಂತಹವಳೋ? ಆಕೆಯನ್ನು ಶ್ರೀರಾಮನು ಹಿಂದಕ್ಕೆ ಕರೆತಂದುದು ತಪ್ಪು. ಹೀಗೆಂದು ಕೆಲವು ಜನ ಆಡಿಕೊಳ್ಳುತ್ತಿದ್ದುದನ್ನು ನಾನು ಕೇಳಿದೆ” ಎಂದು ಹೇಳಿದನು.

ಗೂಢಚಾರನು ತಂದ ಸುದ್ಧಿಯನ್ನು ಕೇಳಿ ಶ್ರೀರಾಮನಿಗೆ ಬಲು ಸಂಕಟವಾಯಿತು. ಸೀತಾದೇವಿ ಶ್ರೀರಾಮನನ್ನು ಸದಾ ಧ್ಯಾನಮಾಡುತ್ತ ಇದ್ದ ಬಹು ಶುದ್ಧ ಮನಸ್ಸಿನವಳು ಎಂದು ಶ್ರೀರಾಮನಿಗೆ ಗೊತ್ತು. ಆದರೇನು? ರಾಜನಾದವನು ಪ್ರಜೆಗಳಿಗೆ ಸಂತೋಷವಾಗುವಂತೆ, ಸಮಾಧಾನವಾಗುವಂತೆ ನಡೆದುಕೊಳ್ಳಬೇಕು. ಅದು ಒಳ್ಳೆಯ ರಾಜನ ಲಕ್ಷಣ. ಆದ್ದರಿಂದ ಶ್ರೀರಾಮನು ಸೀತೆಯನ್ನು ಬಿಟ್ಟು ಬಿಡಬೇಕೆಂದು ನಿಶ್ಚಯಿಸಿದನು. ಆತನು ತಮ್ಮನಾದ ಲಕ್ಷ್ಮಣನನ್ನು ತನ್ನ ಬಳಿಗೆ ಕರೆಸಿದನು. ಗೂಢಚಾರನು ಹೇಳಿದುದನ್ನೆಲ್ಲಾ ಆತನಿಗೆ ತಿಳಿಸಿದನು. ಒಡನೆಯೇ ಸೀತಾದೇವಿಯನ್ನು ಕರೆದೊಯ್ದು ವಾಲ್ಮೀಕಿ ಋಷಿಯ ಆಶ್ರಮದ ಬಳಿಯಲ್ಲಿ ಬಿಟ್ಟು ಬರುವಂತೆ ತಿಳಿಸಿದನು. ಅಣ್ಣನ ಅಪ್ಪಣೆಯನ್ನು ಕೇಳಿ ಲಕ್ಷ್ಮಣನಿಗೆ ಸಿಡಿಲು ಬಡಿದಂತಾಯಿತು. ಆತನು ಶ್ರೀರಾಮನ ಮನಸ್ಸನ್ನು ತಿರುಗಿಸಲು ಪ್ರಯತ್ನಿಸಿದನು. ಆದರೆ ಶ್ರೀರಾಮನು ಹಿಡಿದು ಹಟವನ್ನು ಬಿಡಲಿಲ್ಲ. ಬೇರೆಯ ದಾರಿ ಇಲ್ಲದುದರಿಂದ ಲಕ್ಷ್ಮಣನು ಅತ್ತಿಗೆಯನ್ನು ಕರೆದೊಯ್ಯಲೇಬೇಕಾಯಿತು. ಆತನು ರಥವನ್ನು ತಂದು ಸೀತೆಯ ಅರಮನೆಯ ಹತ್ತಿರ ನಿಲ್ಲಿಸಿದನು. ತಾನು ಋಷಿಗಳ ಆಶ್ರಮದಲ್ಲಿರಬೇಕೆಂದು ಹೇಳಿದುದರಿಂದ ಶ್ರೀರಾಮನು ತನ್ನ ಬಯಕೆಯನ್ನು ಈಡೇರಿಸಿದನೆಂದು ಆಕೆಯ ಭಾವನೆ. ಆಕೆಯ ಸಡಗರವೇ ಸಡಗರ. ಆಶ್ರಮದಲ್ಲಿರುವ ಮುತ್ತೈದೆಯರಿಗೆ ಕೊಡುವುದಕ್ಕೆಂದು ಅರಿಸಿನ, ಕುಂಕುಮ, ಬಳೆ, ಬಂಗಾರದ ಒಡವೆ ಮೊದಲಾದವುಗಳನ್ನು ಆಕೆ ಮೂಟೆ ಕಟ್ಟಿಕೊಂಡಳು. ಮನೆಯಲ್ಲಿ ಎಲ್ಲರಿಗೂ ಆಶ್ರಮಕ್ಕೆ ಹೋಗಿಬರುವುದಾಗಿ ಹೇಳಿದಳು. ಶ್ರೀರಾಮನು ಅರಮನೆಯಲ್ಲಿರಲಿಲ್ಲ. ಆತನಿಗೆ ತಿಳಿಸುವಂತೆ ಅತ್ತೆಯಾದ ಕೌಸಲ್ಯೆಗೆ ಹೇಳಿ, ಆಕೆ ರಥವನ್ನು ಹತ್ತಿದಳು. ಲಕ್ಷ್ಮಣನನೇ ಸಾರಥಿಯಾಗಿ ಅದನ್ನು ನಡೆಸಿದನು.

ಸೀತಾದೇವಿ, ಲಕ್ಷ್ಮಣರು ಕುಳಿತಿದ್ದ ರಥ ವೇಗವಾಗಿ ಹರಿದು ಗಂಗಾನದಿಯ ದಡವನ್ನು ಸೇರಿತು. ಅದರ ಹತ್ತಿರದಲ್ಲಿಯೇ ವಾಲ್ಮೀಕಿ ಋಷಿಯ ಆಶ್ರಮ. ಆದರೆ ಲಕ್ಷ್ಮಣನು ಆಶ್ರಮಕ್ಕೆ ಹೋಗಲಿಲ್ಲ. ಆಶ್ರಮದ ಹತ್ತಿರವಿದ್ದ ಅಡವಿಯಲ್ಲಿ ರಥದಿಂದ ಕೆಳಕ್ಕೆ ಇಳಿದನು. ಆತನು ಸೀತಾದೇವಿಯನ್ನು ಇಳಿಸಿದನು. ಆಮೇಲೆ ಆತನು ಕಣ್ಣೀರು ಸುರಿಸುತ್ತಾ, “ಅಮ್ಮ, ಶ್ರೀರಾಮನು ನಿನ್ನನ್ನು ಅಡವಿಯಲ್ಲಿ ಬಿಟ್ಟು ಬರುವಂತೆ ಹೇಳಿದ್ದಾನೆ. ಅಯೋಧ್ಯೆಯ ಕೆಲವು ಜನ ನಿನ್ನ ವಿಷಯವಾಗಿ ಅನುಮಾನದಿಂದ ಕೆಟ್ಟ ಮಾತನ್ನಾಡಿದ್ದಾರೆ. ನಿನ್ನನ್ನು ರಾವಣನ ಸೆರೆಯಿಂದ ಹಿಂದಕ್ಕೆ ಕರೆತಂದುದಕ್ಕಾಗಿ ಅವರು ಶ್ರೀರಾಮನನ್ನು ನಿಂದಿಸುತ್ತಿದ್ದಾರೆ. ರಾಜನಾದವನು ಪ್ರಜೆಗಳಿಗೆ ಮೆಚ್ಚಿಗೆಯಾಗುವಂತೆ ಬಾಳಬೇಕು. ಆದ್ದರಿಂದಲೇ ಆತನು ನಿನ್ನನ್ನು ತ್ಯಾಗ ಮಾಡಿದ್ದಾನೆ. ಇದರಿಂದ ಆತನಿಗೆ ಬಹಳ ಸಂಕಟವಾಗಿದೆ. ಆದರೂ ಕರ್ತವ್ಯಕ್ಕಾಗಿ ಸಂಕಟವನ್ನು ತಡೆದುಕೊಂಡಿದ್ದಾನೆ. ಆತನ ಅಪ್ಪಣೆಯಂತೆ ನಾನು ನಡೆದುಕೊಂಡಿದ್ದೇನೆ. ನಿನ್ನನ್ನು ಅಡವಿಯ ಪಾಲು ಮಾಡುತ್ತಿರುವ ನಾನು ಪರಮಪಾಪಿ. ನನ್ನನ್ನು ಕ್ಷಮಿಸು ತಾಯಿ” ಎಂದು ಹೇಳಿದನು. ಆತನು ಸೀತೆಗೆ ಅಡ್ಡಬಿದ್ದನು. ಆಳುತ್ತಿದ್ದ ಆಕೆಯನ್ನು ಬಿಟ್ಟು ಅಯೋಧ್ಯೆಗೆ ಹಿಂತಿರುಗಿದನು.

ಲಕ್ಷ್ಮಣನ ಮಾತುಗಳನ್ನು ಕೇಳಿ ಸೀತಾದೇವಿಗೆ ಸಿಡಿಲುಬಡಿದಂತಾಗಿತ್ತು. ಆಕೆ ಲಕ್ಷ್ಮಣ ಹೋದ ದಿಕ್ಕನ್ನೇ ಕೆಲಹೊತ್ತು ನೋಡುತ್ತಾ ನಿಂತುಕೊಂಡಳು. ಆಕೆಯ ಬಾಯಿಂದ ನಿಟ್ಟುಸಿರು ಬಂದಿತು. ಆಕೆ ನಿಲ್ಲಲಾರದೆ ನೆಲದ ಮೇಲೆ ಕುಪ್ಪೆಯಾಗಿ ಕುಳಿತಳು. ಆಕೆಗೆ ತನ್ನ ಬಾಳಿನ ಕಥೆಯೆಲ್ಲ ನೆನಪಿಗೆ ಬಂದಿತು. ಗಂಡನೇ ದೇವರೆಂದು ಬಾಳಿದ ತನಗೆ ಈ ಗತಿ ಆಗಬೇಕೆ? ಸೀತಾದೇವಿ ಅತ್ತಳು, ಅತ್ತಳು, ಒಂದೇ ಸಮನಾಗಿ ಅತ್ತಳು. ಇಷ್ಟಾದರೂ ಆಕೆ ಗಂಡನನ್ನು ದೂಷಿಸಲಿಲ್ಲ. ತನ್ನ ಅದೃಷ್ಟ ಕೆಟ್ಟದ್ದು ಎಂದು ಆಕೆ ಅಂದುಕೊಂಡಳು. ತುಂಬಿದ ಬಸುರಿಯಾದ ಆಕೆ ಪ್ರಯಾಣದ ಆಯಾಸದಿಂದಲೂ, ಹೊಟ್ಟೆಗೆ ಅನ್ನವಿಲ್ಲದುದರಿಂದಲೂ, ಮನಸ್ಸಿನ ಸಂಕಟದಿಂದಲೂ ನಲುಗಿ ಹೋಗಿದ್ದಳು. ಆಕೆಗೆ ಗಾಢವಾದ ನಿದ್ದೆ ಬಂದಿತು. ಅಲ್ಲಿಯೇ ಒಂದು ಮರದ ಕೆಳಗೆ ಮಲಗಿಕೊಂಡಳು.

ಸಂಜೆಯ ಹೊತ್ತಿಗೆ ಸೀತಾದೇವಿ ನಿದ್ದೆಯಿಂದ ಮೇಲಕ್ಕೆ ಎದ್ದಳು. ಮುಂದೆ ತಾನು ಏನು ಮಾಡಬೇಕೆಂಬುದು ಆಕೆಗೆ ಗೊತ್ತಾಗಲಿಲ್ಲ. ಆಕೆ ಗಟ್ಟಿಯಾಗಿ ಅಳುತ್ತಾ ಕುಳಿತಳು. ಆ ವೇಳೆಗೆ ಸರಿಯಾಗಿ ವಾಲ್ಮೀಕಿಯ ಶಿಷ್ಯರು ಹೂವು ಪತ್ರೆಗಳನ್ನು ಹುಡುಕುತ್ತ ಅಡವಿಗೆ ಬಂದಿದ್ದರು. ಅವರಿಗೆ ಸೀತಾದೇವಿಯ ಅಳುವು ಕೇಳಿಸಿತು.  ಅದರ ದನಿಯನ್ನು ಹಿಡಿದು ಅವರು ಆಕೆಯ ಬಳಿಗೆ ಬಂದರು. ಅವರು ಆಕೆಯನ್ನು ಕುರಿತು, “ಅಮ್ಮ ನೀನು ಯಾರು? ಅಡವಿಯಲ್ಲಿ ಒಬ್ಬಳೇ ಏಕೆ ಅಳುತ್ತಿರುವೆ? ನಾವು ವಾಲ್ಮೀಕಿಯ ಶಿಷ್ಯರು. ಸಂಶಯಪಡಬೇಡ. ಹತ್ತಿರದಲ್ಲಿಯೆ ನಮ್ಮ ಗುರುಗಳ ಆಶ್ರಮವಿದೆ. ನಮ್ಮ ಜೊತೆಯಲ್ಲಿ ಅಲ್ಲಿಗೆ ಬಾ, ತಾಯಿ” ಎಂದರು. ವಾಲ್ಮೀಕಿ ಋಷಿಯ ಹೆಸರನ್ನು ಕೇಳುತ್ತಲೇ ಸೀತೆಗೆ ಸ್ವಲ್ಪ ಸಮಾಧಾನವಾಯಿತು. ಆಕೆಗೆ ಧೈರ್ಯವು ಬಂದಿತು . ಆಕೆಯು ಆ ಶಿಷ್ಯರ ಜೊತೆಯಲ್ಲಿ ವಾಲ್ಮೀಕಿ ಋಷಿಯ ಆಶ್ರಮಕ್ಕೆ ಹೊರಟಳು.

ಸೀತಾದೇವಿಯು ವಾಲ್ಮೀಕಿ ಋಷಿಗಳನ್ನು ಕಂಡೊಡನೆಯೆ ಭಕ್ತಿಯಿಂದ ಅವರಿಗೆ ನಮಸ್ಕರಿಸಿದಳು. ಆಕೆ ತನ್ನ ಕಥೆಯನ್ನೆಲ್ಲ ಅಳುತ್ತಳುತ್ತ ಅವರ ಮುಂದೆ ಹೇಳಿಕೊಂಡಳು. ಅದನ್ನು ಕೇಳಿ ವಾಲ್ಮೀಕಿ ಋಷಿ ಬಹುವಾಗಿ ಮರುಗಿದನು. ಆತನು ಸೀತೆಯನ್ನು ಪರಿಪರಿಯಾಗಿ ಸಮಾಧಾನ ಮಾಡಿದನು. ಆಕೆಯನ್ನು  ಆಶ್ರಮದಲ್ಲಿ ಇಟ್ಟುಕೊಳ್ಳುವುದಾಗಿ ಭರವಸೆಯಿತ್ತನು. ತನ್ನ ಆಶ್ರಮದಲ್ಲಿ ಋಷಿಪತ್ನಿಯರ ವಶಕ್ಕೆ ಆಕೆಯನ್ನು ಒಪ್ಪಿಸಿದನು. ಮಹಾಪತಿವ್ರತೆಯಾದ ಆಕೆಯನ್ನು ಬಹು ಎಚ್ಚರಿಕೆಯಿಂದ ನೋಡಿಕೊಳ್ಳಬೇಕೆಂದು ಆತನು ಅವರಿಗೆ ತಿಳಿಸಿದನು.

ಕೆಲವು ದಿನಗಳು ಉರುಳಿ ಹೋಗುವಷ್ಟರಲ್ಲಿ ಸೀತಾದೇವಿಗೆ ಹೆರಿಗೆಯ ದಿನಗಳಾದವು. ಆಕೆಯು ಒಂದು ಶುಭ ದಿನದಲ್ಲಿ, ಶುಭ ನಕ್ಷತ್ರದಲ್ಲಿ ಇಬ್ಬರು ಮಕ್ಕಳನ್ನು ಹೆತ್ತಳು. ಆ ಮಕ್ಕಳು ಬೆಳದಿಂಗಳಿಂದ ಮಾಡಿದ ಬೊಂಬೆಗಳಂತೆ ಸುಂದರವಾಗಿ ಇದ್ದವು. ಅವನ್ನು ನೋಡಿ ವಾಲ್ಮೀಕಿಗೆ ಬಹು ಸಂತೋಷವಾಯಿತು. ಅವು ಹುಟ್ಟಿದ ಹತ್ತನೆಯ ದಿನ ಆತನು ‘ಲವ, ‘ಕುಶ’ ಎಂದು ಆ ಮಕ್ಕಳಿಗೆ ನಾಮಕರಣ ಮಾಡಿದನು. ಆಶ್ರಮದಲ್ಲಿ ಇರುವವರಿಗೆಲ್ಲ ಆ ಮಕ್ಕಳನ್ನು ಕಂಡರೆ ಬಹು ಅಕ್ಕರೆ. ಒಬ್ಬರಲ್ಲ ಮತ್ತೊಬ್ಬರು ಆ ಮಕ್ಕಳನ್ನು ಎತ್ತಿಕೊಂಡು ಮುದ್ದಾಡುತ್ತಿದ್ದರು. ಅವರ ಈ ಅಕ್ಕರೆಯನ್ನು ಕಂಡು ಸೀತೆ ಹಿರಿಹಿರಿ ಹಿಗ್ಗುತ್ತಿದ್ದಳು. ಮುದ್ದಾದ ಆ ಮಕ್ಕಳನ್ನು ಕಂಡು ತನ್ನ ದುಃಖವನ್ನು ಮರೆಯುತ್ತಿದ್ದಳು. ಇದನ್ನು ಕಂಡು ವಾಲ್ಮೀಕಿಗೆ ಎಷ್ಟೋ ಸಮಾಧಾನ.

ಲವಕುಶರು ಶುಕ್ಲಪಕ್ಷದ ಚಂದ್ರನಂತೆ ದಿನ ದಿನಕ್ಕೂ ಬೆಳೆದು ಬಾಲಕರಾದರು. ವಾಲ್ಮೀಕಿಯು ತಾನೇ ಆ ಮಕ್ಕಳಿಗೆ ಅಕ್ಷರಗಳನ್ನು ಹೇಳಿಕೊಟ್ಟನು. ಓದುವುದನ್ನೂ, ಬರೆಯುವುದನ್ನೂ ಕಲಿಸಿದನು, ದೇವರ ಸ್ತೋತ್ರಗಳನ್ನು ಬಾಯಿಪಾಠ ಮಾಡಿಸಿದನು. ಆ ಮಕ್ಕಳ ದನಿ ಬಹು ಇಂಪಾಗಿತ್ತು. ಸ್ತೋತ್ರಗಳನ್ನು ಆ ಮಕ್ಕಳು ಹಾಡುತ್ತಿದ್ದರೆ ಸುತ್ತಮುತ್ತಲಿನವರು ಬಾಯಿ ಬಿಟ್ಟುಕೊಂಡು ಅದನ್ನು ಕೇಳುತ್ತಿದ್ದರು. ವಾಲ್ಮೀಕಿಯು ಆ ಮಕ್ಕಳನ್ನು ಕರೆದೊಯ್ದು ಸೀತಾದೇವಿಯ ಇದಿರಿನಲ್ಲಿ ಹಾಡಿಸುತ್ತಿದ್ದನು. ಅದನ್ನು ಕೇಳಿ ಆಕೆಗೆ ಅಮೃತವನ್ನು ಕುಡಿದಷ್ಟು ಸಂತೋಷವಾಗುತ್ತಿತ್ತು.

ಲವಕುಶರಿಗೆ ಎಂಟು ವರ್ಷ ವಯಸ್ಸಾಯಿತು. ವಾಲ್ಮೀಕಿ ಋಷಿಯು ಅವರಿಗೆ ಉಪನಯನವನ್ನು ಮಾಡಿದನು. ಅವರಿಗೆ ವೇದವನ್ನು ಹೇಳಿಕೊಟ್ಟನು. ಆ ವೇಳೆಗೆ ತನ್ನ ರಾಮಾಯಣವನ್ನೂ ಬರೆದು ಮುಗಿಸಿದ್ದನು. ಅದನ್ನು ಆ ಹುಡುಗರಿಗೆ ಹೇಳಿಕೊಟ್ಟನು. ಅವರು ಅದನ್ನು ಬಾಯಿಪಾಠ ಮಾಡಿದರು. ಅವರು ಬಹು ಇಂಪಾಗಿ ಹಾಡುತ್ತಿದ್ದರು. ಅದನ್ನು ಕೇಲಿ ವಾಲ್ಮೀಕಿಗೆ ಬಹು ಸಂತೋಷವಾಯಿತು. ಸೀತಾದೇವಿಯ ಮುಂದೆಯೂ ಆತನು ಅದನ್ನು ಹಾಡಿಸಿದನು. ರಾಮಾಯಣದ ಕಥೆ, ಆ ಮಕ್ಕಳ ಹಾಡುಗಾರಿಕೆ , ಆ ಇಂಪಾದ ದನಿ, ಆಕೆಯ ಮನಸ್ಸನ್ನು ಕರಗಿಸಿತು. ಆಕೆ ಸಂತೋಷದಿಂದ ಕಣ್ಣೀರನ್ನು ಕರೆದಳು. ಆ ಮಕ್ಕಳ ಹಾಡುಗಾರಿಕೆಯಿಂದ ರಾಮಾಯಣದ ಕಥೆಗೆ ಮೆರಗು ಬಂದಿತು. ಅದನ್ನು ನೋಡಿ ವಾಲ್ಮೀಕಿಗೆ ಬಹು ಹೆಮ್ಮೆಯಾಯಿತು. ತನ್ನ ಆಶ್ರಮಕ್ಕೆ ಬಂದವರ ಮುಂದೆ ಎಲ್ಲ ಆತನು ಲವಕುಶರಿಂದ ರಾಮಾಯಣವನ್ನು ಹಾಡಿಸುತ್ತಿದ್ದನು.

ಶ್ರೀರಾಮ ರಾಮಾಯಣವನ್ನು ಕೇಳಿದ

ಇತ್ತ ಶ್ರೀರಾಮನ ಮಕ್ಕಳು ದಿನದಿನಕ್ಕೂ ತಮ್ಮ ವಿದ್ಯಾಭ್ಯಾಸದಲ್ಲಿ ಮುಂದುವರೆಯುತ್ತಿರುವಾಗ ಅತ್ತ ಶ್ರೀರಾಮನು ರಾಜಕಾರ್ಯದಲ್ಲಿ ಮುಂದುವರೆಯುತ್ತಿದ್ದನು. ಆತನಿಗೆ ಅಶ್ವಮೇಧ ಯಾಗವನ್ನು ಮಾಡಬೇಕೆನ್ನಿಸಿತು. ಆಗಿನ ಕಾಲದಲ್ಲಿ ಅಶ್ವಮೇಧ ಯಾಗವೆಂದರೆ ಸಾಮಾನ್ಯವಾದ ಯಾಗವಲ್ಲ. ಅದು ರಾಜರ ಜೀವನದ ಆದರ್ಶ. ಲೋಕದಲ್ಲೆಲ್ಲಾ ಬಹುಶೂರನಾದ ರಾಜನು ಮಾತ್ರ ಅದನ್ನು ಮಾಡಿ ಮುಗಿಸಬಹುದು. ಯಾಗ ಮಾಡುವ ರಾಜನು ತನ್ನ ಪಟ್ಟದ ಕುದುರೆಯನ್ನು ಪೂಜೆ ಮಾಡಿಬಿಡುತ್ತಾನೆ. ಅದು ಮನಸ್ಸಿಗೆ ಬಂದ ಹಾಗೆ ದೇಶದೇಶಗಳಲ್ಲೆಲ್ಲಾ ತಿರುಗಿಕೊಂಡು ಹೋಗುತ್ತದೆ ಶೂರನಾದ ರಾಜನು ಅದನ್ನು ಕಟ್ಟಿಹಾಕಬಹುದು. ಹಾಗೆ ಕಟ್ಟಿಹಾಕಿದ ರಾಜನೊಡನೆ ಯುದ್ಧ ಮಾಡಿ ಗೆಲ್ಲಬೇಕು. ಹೀಗೆ ಜಗತ್ತಿನ ರಾಜರನ್ನೆಲ್ಲಾ ಜಯಿಸಿ ಚಕ್ರವರ್ತಿಯಾಗಬೇಕು. ಕುದುರೆಯು ಎಲ್ಲ ದೇಶಗಳಲ್ಲಿಯೂ ಸಂಚಾರಮಾಡಿಕೊಂಡು ಬಂದ ಮೇಲೆ ಅದರ ಯಜಮಾನನು ಯಾಗವನ್ನು ಮಾಡಬೇಕು. ಶ್ರೀರಾಮನು ಇಂತಹ ಯಾಗವನ್ನು ಕೈಕೊಂಡನು. ಲೋಕದ ಎಲ್ಲ ರಾಜರೂ ಆತನಿಗೆ ಕಪ್ಪ, ಕಾಣಿಕೆಗಳನ್ನು ಕೊಟ್ಟರು. ಆತನು ಚಕ್ರವರ್ತಿಯಾದನು. ಆಮೇಲೆ ದೊಡ್ಡ ಯಾಗವನ್ನು-ಅಶ್ವಮೇಧಯಾಗ-ಮಾಡಿದ. ಆ ಯಾಗಕ್ಕಾಗಿ ದೇಶದಲ್ಲಿದ್ದ ಎಲ್ಲ ಋಷಿಗಳನ್ನೂ ಕರೆಸಿದ. ವಾಲ್ಮೀಕಿ ಋಷಿಗೂ ಕರೆಹೋಯಿತು. ಆತನು ತನ್ನ ಶಿಷ್ಯರೊಡನೆ ಯಾಗಕ್ಕೆ ಬಂದನು.

ಶ್ರೀರಾಮನ ಯಾಗವು ಹಲವು ದಿನಗಳವರೆಗೆ ಸಂಭ್ರಮದಿಂದ ಜರುಗಿತು. ಬಡಬಗ್ಗರು ಹೊಟ್ಟೆತುಂಬ ಅನ್ನವನ್ನೂ, ಮೈತುಂಬ ಬಟ್ಟೆಯನ್ನೂ ಪಡೆದು ತೃಪ್ತರಾದರು. ಬ್ರಾಹ್ಮಣರೂ, ಋಷಿಗಳೂ ದಾನ ದಕ್ಷಿಣೆಗಳಿಂದ ತಣಿದು ಹೋದರು. ಯಾಗವು ಮುಗಿದ ದಿನ ರಾತ್ರಿ ಋಷಿಗಳೆಲ್ಲರೂ ಒಟ್ಟಿಗೆ ನೆರೆದಿರುವಾಗ, ವಾಲ್ಮೀಕಿಯು ತನ್ನ ರಾಮಾಯಣವನ್ನು ಓದುವಂತೆ ಲವಕುಶರಿಗೆ ಹೇಳಿದನು. ವಾಲ್ಮೀಕಿಯ ಶಿಷ್ಯರಲ್ಲಿ ಒಬ್ಬನು ಸೊಗಸಾಗಿ ಕೊಳಲನ್ನು ಬಾರಿಸುತ್ತಿದ್ದನು. ಆ ಕೊಳಲಿನ ಶ್ರುತಿಯಲ್ಲಿ ಲವಕುಶರು ರಾಮಾಯಣವನ್ನು ಹಾಡಲು ಮೊದಲು ಮಾಡಿದರು. ಅದೊಂದು ತುಮಬು ಬೆಳದಿಂಗಳಿನ ರಾತ್ರಿ. .ನೆರೆದ ಬ್ರಾಹ್ಮಣರೂ, ಋಷಿಗಳೂ ಆ ಮಕ್ಕಳ ರಾಮಾಯಣವಾಚನವನ್ನು ಕೇಳುತ್ತ ನಲಿದರು. ರಾತ್ರಿಯೆಲ್ಲ ಪಠಣವಾಯಿತು. ಸಂತಸಗೊಂಡ ಋಷಿಗಳೂ ಬ್ರಾಹ್ಮಣರೂ ಆ ಮಕ್ಕಳಿಗೆ ಬಹುಮಾನಗಳನ್ನು ನೀಡಿದರು. ಕೆಲವರು ತಮ್ಮ ಕೃಷ್ಣಾಜಿನವನ್ನು ಕೊಟ್ಟೆರು. ಕೆಲವರು ತಮ್ಮ ಯೋಗದಂಡವನ್ನು ಕೊಟ್ಟರು, ಮತ್ತೆ ಕೆಲವರು ತಾವು ಹೊದೆದಿದ್ದ ವಸ್ತ್ರವನ್ನೇ ಕೊಟ್ಟರು. ಹೊಸ ಜನಿವಾರಗಳನ್ನು ಕೊಟ್ಟರು. ತನ್ನ ಕಾವ್ಯಕ್ಕೂ ತನ್ನ ಶಿಷ್ಯರ ವಾಚನಕ್ಕೂ ಬಂದ ಈ ಮೆಚ್ಚುಗೆಯನ್ನು ಕಂಡು ವಾಲ್ಮೀಕಿ ಸಂತಸದ ಕಡಲಿನಲ್ಲಿ ತೇಲಿಹೋದನು.

ರಾತ್ರಿ ಲವಕುಶರು ಹಾಡುತ್ತಿದ್ದಾಗ ಶ್ರೀರಾಮನು ತನ್ನ ಬಿಸಿಲಮಹಡಿಯ ಮೇಲೆ ಮಲಗಿದ್ದ. ಆತನಿಗೆ ಮಕ್ಕಳ ಹಾಡು ಕೇಳಿಸಿತು. ಆತನ ಕಿವಿಯಲ್ಲಿ ಅಮೃತವನ್ನು ಸುರಿದಂತಾಯಿತು. ಮರುದಿನ ಬೆಳಗ್ಗೆ ಆತನು ಆ ಮಕ್ಕಳಿಗೆ ಹೇಳಿ ಕಳುಹಿಸಿದನು. ಅವರು ರಾಮನ ಬಳಿಗೆ ಹೋದರು. ಶ್ರೀರಾಮನು ಅವರನ್ನು ಮತ್ತೆ ರಾಮಾಯಣವನ್ನು ಹಾಡುವಂತೆ ಕೇಳಿದನು. ಅವರು ಹಾಡಿದರು. ತನ್ನ ಬಾಳ ಕಥೆಯನ್ನು ಕೇಳುತ್ತ ಹೋದಂತೆ ಆತನಿಗೆ ಬಹು ಸಂತೋಷವಾಯಿತು. ಸೀತೆಯ ಕಥೆ ಬಂದಾಗಲೆಲ್ಲ ಆತನ ಕಣ್ಣಲ್ಲಿ ನೀರು ಹರಿಯಿತು. ಪಾಪ, ಆ ಹೆಣ್ಣಿಗೆ ಎಂತಹ ಕಷ್ಟ! ತನ್ನ ಕೈಹಿಡುದು ಆಕೆ ಯಾವ ಸುಖವನ್ನು ಅನುಭವಿಸಿದಳು? ಬಾಳೆಲ್ಲ ಕಷ್ಟಮಯ. ಶ್ರೀರಾಮನು ಕಣ್ಣನ್ನು ಒರೆಸಿಕೊಂಡು, ಗದ್ಗದ ಕಂಠದಿಂದ ಆ ಮಕ್ಕಳನ್ನು “ನೀವಾರು?” ಎಂದು ಕೇಳಿದನು. ಅವರು ಹೇಳಿದರು, “ನಾವು ಸೀತಾದೇವಿಯ ಮಕ್ಕಳು. ವಾಲ್ಮೀಕಿಯ ಶಿಷ್ಯರು” ಎಂದು.

ಸೀತಾದೇವಿಯ ಹೆಸರನ್ನು ಕೇಳುತ್ತಲೇ ಶ್ರೀರಾಮನು ಮೆಟ್ಟಿಬಿದ್ದ. “ತಾನು ಅಡವಿಗೆ ಅಟ್ಟಿದ ಸೀತೆ ಈ ಮಕ್ಕಳನ್ನು ಹೆತ್ತಳೇ? ಇವರು ತನ್ನ ಮಕ್ಕಳೇ?” ಎಂದು ಆತನ ಮನದಲ್ಲಿಯೇ ನೆನೆದ. ಒಡನೆಯೇ ಆತನು ವಾಲ್ಮೀಕಿ ಋಷಿಗೆ ಹೇಳಿಕಳುಹಿಸಿದ. ಆತ ಬಂದನು. ಶ್ರೀರಾಮನು ಮತ್ತೊಮ್ಮೆ ಆ ಮಕ್ಕಳ ವಿಚಾರವನ್ನು ವಾಲ್ಮೀಕಿಯ ಬಾಯಿಂದ ಸಮಗ್ರವಾಗಿ ಕೇಳಿದನು. ಆತನಿಗೆ ಸೀತೆಯನ್ನು  ಮತ್ತೆ ಹಿಂದಕ್ಕೆ ಕರೆಸಬೇಕೆಂದು ಆಸೆಯಾಯಿತು. ಸೀತೆಯನ್ನು ಅಲ್ಲಿಗೆ ಕರೆತರುವಂತೆ ವಾಲ್ಮೀಕಿಯನ್ನು ಬೇಡಿಕೊಂಡನು; ಆಕೆಯನ್ನು ಮತ್ತೆ ತನ್ನ ರಾಣಿಯಾಗಿ ಮಾಡಿಕೊಳ್ಳುವೆನೆಂದು ಮಾತುಕೊಟ್ಟನು.

ವಾಲ್ಮೀಕಿಯು ತನ್ನ ಶಿಷ್ಯರನ್ನು ತನ್ನ ಆಶ್ರಮಕ್ಕೆ ಕಳುಹಿಸಿ ಸೀತೆಯನ್ನು ಅಲ್ಲಿಗೆ ಕರೆಸಿದನು. ಶ್ರೀರಾಮನು ಸೀತೆಯನ್ನು ಕುರಿತು, “ಸೀತಾ, ನೀನು ನನ್ನನ್ನು ಮಾತ್ರ ಪ್ರೀತಿಸಿದೆ, ನಿಜವಾಗಿಯೂ ಪತಿವ್ರತೆಯೆಂದು ಇಲ್ಲಿ ನೆರೆದಿರುವ ಋಷಿಗಳೆಲ್ಲರ ಮುಂದೆ ಪ್ರಮಾಣ ಮಾಡು. ನಿನ್ನನ್ನು ಶಂಕಿಸುವ ಜನರ ಸಂದೇಹ ನಿವಾರಣೆಯಾಗಲಿ. ನಾನು ನಿನ್ನನ್ನು ಮತ್ತೆ ಸ್ವೀಕರಿಸುತ್ತೇನೆ” ಎಂದು ಹೇಳಿದನು. ವಾಲ್ಮೀಕಿ ಋಷಿಯು ಇದನ್ನು ಪ್ರತಿಭಟಿಸಿದನು. ಆತನು ಶ್ರೀರಾಮನೊಡನೆ, “ಹೇ ಸ್ವಾಮಿ, ಸೀತೆ ಪರಮ ಪತಿವ್ರತೆ, ಮತ್ತೆಮತ್ತೆ ಆಕೆಯನ್ನು ಪರೀಕ್ಷಿಸಬೇಡ. ನೆರೆದ ಜನರೆಲ್ಲರ ಮುಂದೆ ಆಕೆ ಪ್ರಮಾಣ ಮಾಡಬೇಕೆ? ಆಕೆಯ ಮನಸ್ಸಿಗೆ ಈಗಾಗಲೇ ಬಹು ನೋವಾಗಿದೆ. ಮತ್ತೆ ಮತ್ತೆ ನೋವನ್ನು ಮಾಡಬೇಡ. ನೀನು ಸಾಕ್ಷಾತ್‌ ಮಹಾವಿಷ್ಣು, ಆಕೆ ಮಹಾಲಕ್ಷ್ಮೀ. ಪರೀಕ್ಷೆ ಬೇಡ” ಎಂದು ಬೇಡಿಕೊಂಡನು. ಆದರೆ ಶ್ರೀರಾಮನು ಅದಕ್ಕೆ ಒಪ್ಪಲಿಲ್ಲ. “ಜನರ ಸಂದೇಹ ನಿವಾರಣೆಯಾಗಲು ಅದು ಅಗತ್ಯ” ಎಂದನು.

ಸೀತೆಯನ್ನು ಕರೆತರುವಂತೆ ಶ್ರೀರಾಮನು ವಾಲ್ಮೀಕಿಯನ್ನು ಬೇಡಿಕೊಂಡನು.
ಸೀತೆಯನ್ನು ಕರೆತರುವಂತೆ ಶ್ರೀರಾಮನು ವಾಲ್ಮೀಕಿಯನ್ನು ಬೇಡಿಕೊಂಡನು.

ಶ್ರೀರಾಮನ ಹಟವನ್ನು ಕಂಡು ಸೀತೆಗೆ ನಾಚಿಕೆಯಾಯಿತು. ಆಕೆಯು ತಲೆ ತಗ್ಗಿಸಿಕೊಂಡು ನಿಂತವಳು ತಲೆಯೆತ್ತಲಿಲ್ಲ. ಕಣ್ಣಲ್ಲಿ ನೀರು ಕೋಡಯಾಗಿ ಹರಿಯಿತು. ಆ ಮಾಹಾಪತಿವ್ರತೆಯ ಪರೀಕ್ಷೆ ನಡೆಯುವುದನ್ನು ನೋಡಲೆಂದು ದೇವತೆಗಳೆಲ್ಲಾ ಸ್ವರ್ಗದಿಂದ ಕೆಳಗಿಳಿದು ಬಂದರು. ಸೀತೆಯು ಆ ದೇವತೆಗಳ ಮತ್ತು ಋಷಿಗಳ ಇದಿರಿನಲ್ಲಿ, “ನಾನು ಶ್ರೀರಾಮನನ್ನು ಹೊರತು ಮತ್ತಾರನ್ನೂ ಮನಸ್ಸಿನಲ್ಲಿ ಚಿಂತಿಸಿಲ್ಲವಾದರೆ, ಹೇ ತಾಯಿ, ಭೂದೇವಿ, ಬಾಯಿ ತರೆ. ದೇಹ ಮತ್ತು ಮನಸ್ಸುಗಳಿಂದ ಶ್ರೀರಾಮನನ್ನು ಸದಾ ನಾನು ಪೂಜಿಸುದುದು ನಿಜವಾದರೆ, ಹೇ ತಾಯಿ, ಭೂದೇವಿ, ಬಾಯಿತೆರೆ ನನ್ನ ಮಾತು ಸತ್ಯವಾಗಿದ್ದರೆ ಹೇ ತಾಯಿ, ಭೂದೇವಿ, ನಿನ್ನ ಬಾಯಿ ತೆರೆ” ಎಂದು ಬೇಡಿಕೊಂಡಳು. ಹಾಗೆ ಆಕೆ ಪ್ರಮಾಣ ಮಾಡುತ್ತಿರುವಂತೆಯೇ ಭೂಮಿಯು ಬಿರಿಯಿತು. ಅದರೊಳಗಿನಿಂದ ಸಿಂಹಾಸನವೊಂದು ಮೇಲೆದ್ದಿತು. ಭೂದೇವಿ ಅದರ ಮೇಲೆ ಕುಳಿತಿದ್ದಳು. ನಾಲ್ಕು ಸರ್ಪಗಳು ಅದನ್ನು ಹೊತ್ತಿದ್ದುವು. ಭೂದೇವಿಯು ಸೀತಾದೇವಿಯನ್ನು ಬಾಚಿ ತಬ್ಬಿಕೊಂಡಳು. ಮರುನಿಮಿಷದಲ್ಲಿ ಸಿಂಹಾಸನದೊಡನೆ ಸೀತಾದೇವಿಯೂ, ಭೂದೇವಿಯೂ ಭೂಮಿಯೊಳಕ್ಕೆ ಇಳಿದು ಹೋದರು. ಬಾಯಿ ತೆರದಿದ್ದ ಭೂಮಿ ಮತ್ತೆ ಬಾಯಿಮುಚ್ಚಿತು.

ಸೀತಾದೇವಿಯು ಭೂಮಿಯಲ್ಲಿ ಅಡಗಿಹೋದುದನ್ನು ಕಂಡು ಶ್ರೀರಾಮನಿಗೆ ಬಲು ಸಂಕಟವಾಯಿತು. ಆತನು ಗಟ್ಟಿಯಾಗಿ ಅತ್ತನು. ಸೀತೆ ಭೂದೇವಿಯ ಮಗಳು. ಆಕೆ ಮತ್ತೆ ತಾಯಿಯ ಗರ್ಭದಲ್ಲಿ ಸೇರಿ ಹೋಗಿದ್ದಳು. ಶ್ರೀರಾಮನು ಅತ್ತೆಯಾದ ಭೂದೇವಿಯನ್ನು ಕುರಿತು ತನ್ನ ಹೆಂಡತಿಯನ್ನು ಮತ್ತೆ ಕರುಣಿಸುವಂತೆ ಬೇಡಿಕೊಂಡನು, ತನ್ನನ್ನು ತಾನೇ ಹಳಿದುಕೊಂಡನು, ಹಂಬಲಿಸಿದನು, ರೇಗಿ ಕೂಗಾಡಿದನು. ಆದರೆ ಎಲ್ಲವೂ ವ್ಯರ್ಥವಾಯಿತು. ಆ ವೇಳೆಗೆ ಬ್ರಹ್ಮದೇವರು ಅಲ್ಲಿ ಪ್ರತ್ಯಕ್ಷನಾಗಿ ಶ್ರೀರಾಮನನ್ನು ಸಮಾಧಾನ ಮಾಡಿದನು. “ಶ್ರೀರಾಮ, ನೀನು ಮಾನವನಲ್ಲ, ಸಾಕ್ಷಾತ್‌ ನಾರಾಯಣ. ರಾವಣನ್ನು ಕೊಲ್ಲುವುದಕ್ಕಾಗಿ ಹುಟ್ಟಿದ್ದೆ. ಆ ಕೆಲಸ ಮುಗಿಯಿತು. ನೀನಿನ್ನು ವೈಕುಂಠಕ್ಕೆ ಹೊರಡು. ನಿನ್ನ ಹೆಂಡತಿಯಾದ ಸೀತಾದೇವಿಯು ಲಕ್ಷ್ಮಿಯ ರೂಪದಿಂದ ಅಲ್ಲಿ ನಿನಗಾಗಿ ಕಾದಿದ್ದಾಳೆ” ಎಂದು ಬ್ರಹ್ಮದೇವನು ಹೇಳಿದನು. ಆಗ ಶ್ರೀರಾಮನಿಗೂ ಆ ಮಾತು ನಿಜವೆಂದು ಗೊತ್ತಾಯಿತು. ಆತನು ಸಮಾಧಾನಗೊಂಡನು. ನೆರೆದ ದೇವತೆಗಳೂ ಋಷಿಗಳೂ ಅಚ್ಚರಿಪಟ್ಟರು. ಶ್ರೀರಾಮನು ಬ್ರಹ್ಮದೇವನ ಮಾತಿನಂತೆ ಕೆಲವು ದಿನಗಳಲ್ಲಿಯೇ ಭೂಮಿಯಿಂದ ವೈಕುಂಠಕ್ಕೆ ತೆರಳಿದನು.

ವಾಲ್ಮೀಕಿ ಋಷಿಯ ಕಥೆ ಬಹು ಅರ್ಥವತ್ತಾದುದು. ಸಜ್ಜನರ ಸಹವಾಸದಿಂದ ಜನರು ಉದ್ಧಾರವಾಗುವರು ಎಂಬುದಕ್ಕೆ ಆತನು ಬಹುದೊಡ್ಡ ಸಾಕ್ಷಿ. ನಾರದರ ಸಹವಾಸದಿಂದ ಆತನು ಬ್ರಹ್ಮ ಋಷಿಯಾದ; ಎಂದಿಗೂ ಜನ ಮರೆಯಲಾಗದ ರಾಮಾಯಣವನ್ನು ಜಗತ್ತಿಗೆ ಕೊಟ್ಟ. ಪ್ರಪಂಚದ ಮಹಾಕಾವ್ಯಗಳಲ್ಲಿ ಅದು ಒಂದಾಗಿದೆ. ಇತರ ದೇಶಗಳ ಜನ ತಮ್ಮ ಭಾಷೆಗಳಲ್ಲಿ ಅದನ್ನು ಓದುತ್ತಾರೆ. ರಾಮಾಯಣವು ನಮ್ಮ ಜನರ ಬಾಳನ್ನು ತಿದ್ದಿಕೊಳ್ಳಲು ದೊಡ್ಡ ಸಾಧನವಾಗಿದೆ. ಅದನ್ನು ನೀಡಿದ ವಾಲ್ಮೀಕಿಯನ್ನು ನಾವು ಎಂದಿಗೂ ಮರೆಯಲಾರೆವು. ಆ ಋಷಿ ಕವಿಗೆ ನಮ್ಮ ನಮಸ್ಕಾರ ಸಲ್ಲಲಿ.

ಲೇಖಕರು: ತ.ಸು. ಶಾಮರಾಯ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಮುಖ್ಯ ಸಂಪಾದಕರು: ಎಲ್. ಎಸ್. ಶೇಷಗಿರಿ ರಾವ್
ಕಣಜ[/sociallocker]

HappySatisfiedUnhappy

Click on a face to provide feedback on my performance!

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 4.93 ( 3 votes)

ಇವುಗಳೂ ನಿಮಗಿಷ್ಟವಾಗಬಹುದು

ಶಬರಿ ಕೇಳುತ್ತಾಳೆ

ರಾವಣನನ್ನು ಸಂಹಾರ ಮಾಡುವ ನೆಪದಿಂದಲಾದರೂ ನೀನು ಇಲ್ಲಿಗೆ ಬಂದೆಯಲ್ಲ, ಇಲ್ಲ ಅಂದರೆ ಎಲ್ಲಿ ಬರುತ್ತಿದ್ದೆ ಸ್ವಾಮಿ? ಶ್ರೀರಾಮ ಸ್ವಲ್ಪ ಗಂಭೀರ …

Leave a Reply

Your email address will not be published. Required fields are marked *