Wednesday , 24 April 2024
whatsapp

ವಾಟ್ಸಾಪ್‌ನಿಂದಲೇ ಹಣ ಕಳುಹಿಸಿ, ಸ್ವೀಕರಿಸಿ

ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸಾಪ್‌ ಇದೀಗ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಈ ವರೆಗೆ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಹೆಚ್ಚು ಬಳಕೆಯಾಗುತ್ತಿದ್ದ ವಾಟ್ಸಾಪ್‌ ಇನ್ನು ಮುಂದೆ ಬ್ಯಾಂಕಿಂಗ್‌ ರೀತಿಯಲ್ಲೂ ತನ್ನ ಬಳಕೆದಾರರಿಗೆ ನೆರವಾಗಲಿದೆ. ಈಗಾಗಲೇ, ಹೊಸ ಹೊಸ ಫೀಚರ್‌ಗಳ ಮೂಲಕ ಹೆಚ್ಚೆಚ್ಚು ಗ್ರಾಹಕರನ್ನು ಸೆಳೆದಿರುವ ಈ ವಾಟ್ಸಾಪ್‌, ಪೇಮೆಂಟ್ಸ್‌ ಸರ್ವಿಸ್‌ ಮೂಲಕ ಮತ್ತೊಂದು ಹಂತಕ್ಕೆ ಹೋಗುವ ಗುರಿಯನ್ನು ಹಾಕಿಕೊಂಡಿದೆ. ಎಲ್ಲವೂ ಯೋಜಿತ ರೀತಿಯಲ್ಲಿ ನಡೆದರೆ ಮುಂದಿನ ತಿಂಗಳು ಹೊತ್ತಿಗೆ ಅಂದರೆ ಫೆಬ್ರವರಿಯಲ್ಲಿ ವಾಟ್ಸಾಪ್‌ ಮೂಲಕವೇ ಗ್ರಾಹಕರು ತಮ್ಮ ಹಣವನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು.

ಭಾರತ ಡಿಜಿಟಲ್‌ ಕ್ರಾಂತಿಯಲ್ಲಿ ಮುಳುಗಿರುವಾಗಲೇ ಜಾಗತಿಕವಾಗಿ ತನ್ನದೇ ಆದ ವೈಭವವನ್ನು ಹೊಂದಿರುವ ವಾಟ್ಸಾಪ್‌ ಕೂಡ ಈ ಹಣಕಾಸು ಸೇವೆ ನೀಡಲು ಮುಂದಾಗಿರುವುದು, ಡಿಜಿಟಲ್‌ ಕ್ರಾಂತಿಯ ವಿಸ್ತರಿತ ಭಾಗವೇ ಆಗಿದೆ ಎಂದು ವಿಶ್ಲೇಷಿಸಬಹುದು. ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ಈಗಾಗಲೇ ಎಲ್ಲ ತಯಾರಿಯನ್ನು ಮಾಡಿಕೊಂಡಿದ್ದು, ಇದಕ್ಕೆ ಬೇಕಾದ ಅನುಮತಿಯನ್ನು ಭಾರತ ಸರಕಾರದಿಂದ ಕಳೆದ ವರ್ಷವೇ ಪಡೆದುಕೊಂಡಿದೆ. ಪೇಮೆಂಟ್‌ ಫೀಚರ್‌ ಮೂಲಕ ವಾಟ್ಸಾಪ್‌ ಈಗಾಗಲೇ ಇಂಥ ಸೇವೆಯನ್ನು ಒದಗಿಸುತ್ತಿರುವ ಗೂಗಲ್‌ನಂಥ ಜಾಗತಿಕ ಕಂಪನಿಗಳ ಸಾಲಿಗೆ ಸೇರಲಿದೆ. ವಾಟ್ಸಾಪ್‌ಗಿರುವ ಅನುಕೂಲಕರ ಸಾಧ್ಯತೆ ಎಂದರೆ, ಅದು ಈಗಾಗಲೇ ಭಾರತದಲ್ಲಿ ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಸಂದೇಶ ರವಾನೆಯಲ್ಲಿ ಅದಕ್ಕೀಗ ಪರ್ಯಾಯವೇ ಇಲ್ಲ. ಸಾಂಪ್ರದಾಯಿಕ ಎಸ್ಸೆಮ್ಮೆಸ್‌ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಜನರು ವಾಟ್ಸಾಪ್‌ ಮೇಲೆ ಅವಲಂಬಿತರಾಗಿದ್ದಾರೆ. ಹಾಗಾಗಿ, ಈ ಪೇಮೆಂಟ್ಸ್‌ ಸೇವೆ ಕೂಡ ಇದೇ ರೀತಿ ಜನಪ್ರಿಯತೆಯನ್ನು ಪಡೆದುಕೊಳ್ಳಲಿದೆ ಎಂಬ ಲೆಕ್ಕಾಚಾರವಿದೆ. ಸದ್ಯ ಟ್ರಯಲ್‌ ಆ್ಯಂಡ್‌ ಎರರ್‌ನಲ್ಲಿರುವ ಈ ಸೇವೆ ಪರಿಪೂರ್ಣತೆಯೊಂದಿಗೆ ಮುಂದಿನ ತಿಂಗಳು ಬಳಕೆಗೆ ದೊರೆಯಲಿದೆ.

ಮುಂದಿನ ತಿಂಗಳು ಲಾಂಚ್‌

ವಾಟ್ಸಾಪ್‌ ಮೂಲಕ ಹಣ ಪಾವತಿ ಮಾಡುವ ಸೌಲಭ್ಯ ಫೆಬ್ರವರಿಯಿಂದಲೇ ಆರಂಭವಾಗಲಿದೆ. ಎಕನಾಮಿಕ್‌ ಟೈಮ್ಸ್‌ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕಂಪನಿಯು ಈಗಾಗಲೇ ಪೇಮೆಂಟ್‌ ಸೌಲಭ್ಯದ ಪರೀಕ್ಷೆಯನ್ನು ತನ್ನ ಸಹಯೋಗಿ ಕಂಪನಿಗಳೊಂದಿಗೆ ನಡೆಸುತ್ತಿದ್ದು, ಫೆಬ್ರವರಿಯ ಅಂತ್ಯಕ್ಕೆ ಗ್ರಾಹಕರ ಬಳಕೆಗೆ ದೊರೆಯಲಿದೆ. ಒಂದೊಮ್ಮೆ ಈ ಸೌಲಭ್ಯ ಯಶಸ್ಸು ಕಂಡರೆ ಈಗಾಗಲೇ ಮಾರುಕಟ್ಟೆಯಲ್ಲಿರುವ ಪೇಟಿಎಂ, ಗೂಗಲ್‌ ತೇಜ್‌, ಸರಕಾರದ ಭೀಮ್‌ ಆ್ಯಪ್‌ಗೆ ಪ್ರಬಲ ಪ್ರತಿಸ್ಪಧಿರ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಟಾಪ್‌ ಲೇಯರ್‌

ವರದಿಯ ಪ್ರಕಾರ ವಾಟ್ಸಾಪ್‌ ಟಾಪ್‌ ಲೇಯರ್‌ ರೀತಿ ಕೆಲಸ ಮಾಡಲಿದೆ. ಹಣ ರವಾನಿಸುವವನು ಮತ್ತು ಅದನ್ನು ಸ್ವೀಕರಿಸುವವನನ್ನು ವಾಟ್ಸಾಪ್‌ ಬ್ಯಾಕ್‌ ಎಂಡ್‌ನಲ್ಲಿ ಗುರುತಿಸಲಿದೆ. ಜತೆಗೆ, ಈ ಆ್ಯಪ್‌ ಬ್ಯಾಂಕುಗಳ ಜತೆ ಸಂಯೋಜನೆಗೊಂಡಿರುವುದರಿಂದ ಗ್ರಾಹಕರ ಬ್ಯಾಂಕ್‌ ಖಾತೆಯನ್ನೂ ಗುರುತಿಸಲಿದೆ. ಅಂತಿಮವಾಗಿ, ಯೂನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌(ಯುಪಿಐ) ಇಡೀ ವ್ಯವಹಾರವನ್ನು ಮುಗಿಸಲು ನೆರವು ನೀಡುತ್ತದೆ. ತನ್ನ ಸಹಯೋಗಿ ಬ್ಯಾಂಕ್‌ಗಳ ಜತೆ ವಾಟ್ಸಾಪ್‌ ಅನೇಕ ಹಂತದಲ್ಲಿ ಯುಪಿಐ ಆಧರಿತ ಸಿಸ್ಟಮ್‌ ಅನ್ನು ರೂಪಿಸುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಯುಪಿಐಗೇ ಮಣೆ

ಸದ್ಯ ಆನ್‌ಲೈನ್‌ ಹಣದ ವ್ಯವಹಾರಗಳಲ್ಲಿ ಯೂನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌(ಯುಪಿಐ) ಪ್ಲಾಟ್‌ಫಾರ್ಮ್‌ಗೆ ಅಧಿಕ ಬೇಡಿಕೆ ಇದೆ. ದೇಶದಲ್ಲಿ ಯುಪಿಐ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪೇಮೆಂಟ್ಸ್‌ ಸಾಧನವಾಗಿದೆ. ಒಂದು ಮೂಲದ ಪ್ರಕಾರ, 2017ರ ಡಿಸೆಂಬರ್‌ನಲ್ಲಿ ಯುಪಿಐ ಪ್ಲಾಟ್‌ಫಾರ್ಮ್‌ ಮೂಲಕವೇ 145 ದಶಲಕ್ಷ ವ್ಯವಹಾರಗಳು ನಡೆದಿವೆ. ಹಾಗಾಗಿ, ವಾಟ್ಸಾಪ್‌ ಪೇಮೆಂಟ್ಸ್‌ ಟ್ರಾನ್ಸ್‌ಫರ್‌ಗೂ ಯುಪಿಐ ಫ್ಲಾಟ್‌ಫಾರ್ಮ್‌ ಆಗಿ ಕಾರ್ಯನಿರ್ವಹಿಸುತ್ತಿದೆ.

ಪ್ರಮುಖ ಬ್ಯಾಂಕುಗಳ ಜತೆ ಒಪ್ಪಂದ

ವಾಟ್ಸಾಪ್‌ ಈಗಾಗಲೇ ತನ್ನ ಈ ಪೇಮೆಂಟ್‌ ಸೌಲಭ್ಯಕ್ಕಾಗಿ ಅನೇಕ ಭಾರತೀಯ ಬ್ಯಾಂಕುಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದರಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕುಗಳಿವೆ. ಸದ್ಯದ ವರದಿಯಂತೆ, ಸಾರ್ವಜನಿಕ ವಲಯದ ಬೃಹತ್‌ ಬ್ಯಾಂಕ್‌ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ಆ್ಯಕ್ಸಿಸ್‌ ಬ್ಯಾಂಕುಗಳ ಜತೆ ವಾಟ್ಸಾಪ್‌ ಒಪ್ಪಂದ ಮಾಡಿಕೊಂಡಿದ್ದು, ಈ ಬ್ಯಾಂಕುಗಳ ಸಹಯೋಗದಿಂದ ತನ್ನ ಪೇಮೆಂಟ್ಸ್‌ ಸೌಲಭ್ಯವನ್ನು ಜಾರಿಗೆ ತರಲಿದೆ.

2017ರಲ್ಲಿ ಸರಕಾರದಿಂದ ಅನುಮತಿ

ಸಾಮಾಜಿಕ ಜಾಲತಾಣಗಳ ಪೈಕಿ ವಾಟ್ಸಾಪ್‌ ಅನ್ನು ವ್ಯಾಪಕವಾಗಿ ಭಾರತದಲ್ಲಿ ಬಳಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಫೇಸ್‌ಬುಕ್‌, 2017ರಲ್ಲೇ ಭಾರತ ಸರಕಾರದಿಂದ ವಾಟ್ಸಾಪ್‌ ಪೇಮೆಂಟ್‌ ಸೌಲಭ್ಯ ಕಲ್ಪಿಸಲು ಅನುಮತಿ ಪಡೆದುಕೊಂಡಿದೆ. ಇದೀಗ ಅದರ ಅನುಷ್ಠಾನ ಮಾತ್ರ ಬಾಕಿ ಉಳಿದಿದೆ.

ಭದ್ರತೆಗೆ ಪ್ರಥಮ ಆದ್ಯತೆ

ಆನ್‌ಲೈನ್‌ ವ್ಯವಹಾರಗಳಲ್ಲಿ ಸುರಕ್ಷ ತೆ ಪ್ರಮುಖ ಪಾತ್ರ ವಹಿಸುತ್ತದೆ. ಪೇಮೆಂಟ್ಸ್‌ ಸೌಲಭ್ಯ ಆರಂಭಕ್ಕೂ ಮುಂಚೆ ಸುರಕ್ಷ ತೆಯ ಅನೇಕ ಅನುಮಾನಗಳನ್ನು ಈಡೇರಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ವಾಟ್ಸಾಪ್‌ ಜತೆ ಒಪ್ಪಂದ ಮಾಡಿಕೊಂಡಿರುವ ಬ್ಯಾಂಕ್‌ವೊಂದರ ಅಧಿಕಾರಿಯೊಬ್ಬರು ಎಕನಾಮಿಕ್‌ ಟೈಮ್ಸ್‌ಗೆ ತಿಳಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಗ್ರಾಹಕರ ಬ್ಯಾಂಕಿಂಗ್‌ ಮಾಹಿತಿಯ ಸೋರಿಕೆಯಾಗದಂತೆ ಕಾಯ್ದುಕೊಳ್ಳುವುದು ಪ್ರಮುಖ ಎನಿಸಿಕೊಳ್ಳುತ್ತದೆ. ಎಲ್ಲ ಮಾಹಿತಿಯನ್ನು ರಕ್ಷಿಸುವುದಕ್ಕಾಗಿ ಇದೆಲ್ಲವೂ ಅಗತ್ಯವಾಗಿದೆ. ಕಿರು ಸಂದೇಶಗಳನ್ನು ಕಳುಹಿಸುವ ರೀತಿಯಲ್ಲಿ ಅತ್ಯಂತ ಸರಳವಾಗಿ ಹಣ ರವಾನೆ ಕೂಡ ಸಾಧ್ಯವಾಗುವ ಈ ಹೊತ್ತಿನಲ್ಲಿ ಗ್ರಾಹಕರ ಮಾಹಿತಿ ಸೋರಿಕೆಯಾಗದಂತೆಯೂ ನೋಡಿಕೊಳ್ಳುವುದು ಮುಖ್ಯವಾಗುತ್ತದೆ. ಹಾಗಾಗಿ, ಈ ಸೇವೆ ಆರಂಭಕ್ಕೆ ಮುಂಚೆಯೇ ಸುರಕ್ಷ ತೆಗೆ ಸಂಬಂಧಿಸಿದ ಎಲ್ಲ ಕ್ರಮಗಳನ್ನು ವಾಟ್ಸಾಪ್‌ ಕೈಗೊಳ್ಳುತ್ತಿದೆ.

ಪೇಟಿಎಂ, ಭೀಮ್‌, ಗೂಗಲ್‌ ತೇಜ್‌ಗೆ ಪ್ರತಿಸ್ಪರ್ಧಿ

ಒಂದೊಮ್ಮೆ ಪೂರ್ಣ ಪ್ರಮಾಣದಲ್ಲಿ ವಾಟ್ಸಾಪ್‌ ಪೇಮೆಂಟ್‌ ಸರ್ವಿಸ್‌ ಲಾಗೂ ಆದರೆ ಮಾರುಕಟ್ಟೆಯಲ್ಲಿ ಸ್ಪರ್ಧೆ ಏರ್ಪಡಲಿದೆ. ಈಗಾಗಲೇ ತಮ್ಮ ಅಸ್ತಿತ್ವವನ್ನು ಹೊಂದಿರುವ ಪೇಟಿಎಂ, ಗೂಗಲ್‌ನ ತೇಜ್‌, ಕೇಂದ್ರ ಸರಕಾರದ ಭೀಮ್‌ ಆ್ಯಪ್‌ಗಳ ಜತೆ ವಾಟ್ಸಾಪ್‌ ಸ್ಪರ್ಧೆ ನಡೆಸಬೇಕಾದ ಅನಿವಾರ್ಯತೆ ಉಂಟಾಗಲಿದೆ. ಆದರೆ, ಸಂತೋಷದ ಸಂಗತಿ ಎಂದರೆ, ಈ ಎಲ್ಲ ಆ್ಯಪ್‌ಗಳಿಗಿಂತ ವಾಟ್ಸಾಪ್‌ ರೀಚ್‌ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಅದು ಪೇಮೆಂಟ್‌ ಸರ್ವಿಸ್‌ನಲ್ಲೂ ಮುಂಚೂಣಿಯನ್ನು ಕಾಯ್ದುಕೊಳ್ಳಲಿದೆ ಎಂಬ ವಿಶ್ಲೇಷಣೆಯನ್ನು ತಜ್ಞರು ಮಾಡುತ್ತಿದ್ದಾರೆ.

ದಾಖಲೆ ಮೆಸೇಜ್‌

ಈ ತಿಂಗಳಲ್ಲಿ ವಾಟ್ಸಾಪ್‌ ಒಂದು ದಾಖಲೆ ಬರೆದಿದೆ. ಅದೇನೆಂದರೆ, ಈ ಆಪ್‌ ಬಳಸುತ್ತಿರುವ ಸಕ್ರಿಯ ಬಳಕೆದಾರರ ಸಂಖ್ಯೆ ಮಾಸಿಕ 1500 ಕೋಟಿಯಂತೆ. ಈ ವರ್ಷದ ಆರಂಭದಲ್ಲಿ ವಾಟ್ಸ್ಯಾಪ್‌ ಇನ್ನೊಂದು ದಾಖಲೆ ಬರೆಯಿತು. ಅದೇನೆಂದರೆ, ವಾಟ್ಸಾಪ್‌ನಲ್ಲಿ ವಿನಿಮಯವಾದ ಹೊಸ ವರ್ಷದ ಶುಭಾಶಯಗಳ ಸಂಖ್ಯೆ 7000 ಕೋಟಿಯಂತೆ! ಈ ಸಂಖ್ಯೆಗಳ ದಾಖಲೆಯು ಹೊಸ ಫೀಚರ್‌ಗಳನ್ನು ತೆರೆಯಲು ವಾಟ್ಸಾಪ್‌ಗೆ ಸ್ಫೂರ್ತಿ ನೀಡಿದೆ. ವಾಟ್ಸಾಪ್‌ ಪೇಮೆಂಟ್‌ ವ್ಯವಸ್ಥೆಯ ಚಾಲನೆಗೆ ಶೀಘ್ರಗತಿ ಸಿಗಲು ಇದೂ ಒಂದು ಕಾರಣ. ಈ ಸಂದೇಶಗಳನ್ನು ಕಳಿಸಿದವರಲ್ಲಿ ಶೇಕಡಾ ಒಂದು ಮಂದಿ ಪೇಮೆಂಟ್‌ ಫೀಚರ್‌ ಕಳಿಸಿದರೂ ಸಾಕು, ವಾಟ್ಸಾಪ್‌ ಜಗತ್ತಿನಲ್ಲೇ ಅತಿ ದೊಡ್ಡ ಆನ್‌ಲೈನ್‌ ಪೇಮೆಂಟ್‌ ಕಂಪನಿಯಾಗಿಬಿಡುತ್ತದೆ.

– ಮಲ್ಲಿಕಾರ್ಜುನ ತಿಪ್ಪಾರ

https://vijaykarnataka.indiatimes.com/tech/news/money-transaction-through-whatsapp/articleshow/62773746.cms

ಇವುಗಳೂ ನಿಮಗಿಷ್ಟವಾಗಬಹುದು

How to make money on YouTube

ಯೂಟ್ಯೂಬ್ನಲ್ಲಿ ಹಣ ಗಳಿಸುವುದು ಹೇಗೆ?

ಯೂಟ್ಯೂಬ್ನಲ್ಲಿ ಹಣ ಗಳಿಸುವುದು ಹೇಗೆ ಎಂದು ತಿಳಿಯಲು ಪ್ರಯತ್ನಿಸುತ್ತಿದ್ದೀರಾ? ಯೂಟ್ಯೂಬ್ನಲ್ಲಿ ವೀಡಿಯೊಗಳಿಂದ ಹಣಗಳಿಸಲು ದೊಡ್ಡ ಅವಕಾಶವಿದೆ. ಯುಟ್ಯೂಬ್ಗೆ ಅಪಾರ ಸಂಖ್ಯೆಯ …

Leave a Reply

Your email address will not be published. Required fields are marked *