ವಾಟ್ಸಪ್‌ ಕಥೆ: ಹೆಣ್ಣಿನ ಸಮಾನತೆ
ವಾಟ್ಸಪ್‌ ಕಥೆ: ಹೆಣ್ಣಿನ ಸಮಾನತೆ

ವಾಟ್ಸಪ್‌ ಕಥೆ: ಹೆಣ್ಣಿನ ಸಮಾನತೆ

ಹೆಂಗಸಿನ ಬುದ್ಧಿ ಮೊಳಕಾಲು ಕೆಳಗೆ ಎಂಬ ಗಾದೆಯನ್ನೂ ಸಹ ದೂಷಿಸುತ್ತ, ‘ಹೆಣ್ಣು ಹೆರಲಿಕ್ಕೆಂದೇ ಇರುವ ಯಂತ್ರವಲ್ಲ, ಅಡುಗೆ ಮನೆಗೆ ಸೀಮಿತಳಲ್ಲ. ಗಂಡಿಲ್ಲದೆಯೂ ಹೆಣ್ಣು ಪರಿಪೂರ್ಣಳು. ಪುರುಷನೆಂಬ ವೃಕ್ಷ ಕ್ಕೆ ಹಬ್ಬುವ ಬಳ್ಳಿಯಲ್ಲ ಹೆಣ್ಣು, ಅವನ ಅಸ್ತಿತ್ವವನ್ನು ಹಿಡಿದು ಭದ್ರಗೊಳಿಸುವ ಬೇರು ಹೆಣ್ಣು. ಹೆಣ್ಣು ಗಂಡು ಪ್ರಕೃತಿಯ ದೃಷ್ಟಿಯಲ್ಲಿ ಸರಿ ಸಮಾನರಾಗಿರುವಾಗ ಸಾಮಾಜಿಕವಾಗಿ ಸಮಾನತೆ ಹೆಣ್ಣಿಗೇಕೆ ದೊರೆಯುತ್ತಿಲ್ಲ’ ಎಂದೆಲ್ಲ ಭಯಂಕರ ಭಾಷಣಕ್ಕೆ ನಿಂತರೆ ಅವಳನ್ನು ಮೀರಿಸಲು ಯಾರಿಂದಲೂ ಶಕ್ಯವಿಲ್ಲ.
ಮರುದಿನ ಪ್ರತಿಷ್ಠಿತ ಕಾಲೇಜಿನಲ್ಲಿ ‘ಹೆಣ್ಣಿಗೆ ಸಮಾನತೆ ಬೇಕೇ ಬೇಡವೇ’ ಎಂಬ ವಿಷಯದ ಮೇಲಿನ ಚರ್ಚಾಸ್ಪರ್ಧೆಯಲ್ಲಿ ವಿಷಯದ ಕುರಿತು ವಿದ್ಯಾರ್ಥಿಗಳನ್ನುದ್ದೇಶಿಸಿ ನಾಲ್ಕು ಮಾತುಗಳನ್ನಾಡಲು ಅವಳಿಗೆ ಕರೆಯವಿತ್ತು. ತಯಾರಾಗಬೇಡವೇ??

ಕೈ ಕಾಲು, ಅಪ್ಪರ್‌ ಲಿಪ್‌, ಚಿನ್‌ ಗಳಲ್ಲಿ ಗಂಡಸಿನಂತೆಯೇ ಬೆಳೆದ ದಟ್ಟ ಕೂದಲಿನಿಂದ ಮುಕ್ತಿ ಪಡೆಯಲು ಬ್ಯೂಟಿ ಪಾರ್ಲರ್ರಿಗೆ ಓಡಿದಳು.
*
ಫೇಸ್‌ಬುಕ್ಕಿನಲ್ಲಿ ಒಂದು ದಿನ ಅವನು ಅವಳನ್ನು ನೋಡಿದ. ಚೆಂದವಿದ್ದಾಳೆ ಎನ್ನಿಸಿತು. ಅವನು ಕಳುಹಿಸಿದ ಫ್ರೆಂಡ್‌ ರಿಕ್ವೆಸ್ಟ್‌ಗೆ ಅವಳಿಂದ ಒಪ್ಪಿಗೆಯೂ ಸಿಕ್ಕಿತು. ಪರಿಚಯದ ಹೆಸರಲ್ಲಿ ಮಾತಿಗೂ ಇಳಿದ, ಮಾತಲ್ಲ ಸಂದರ್ಶನಕ್ಕೇ ಇಳಿದ.. ಹೆಸರು, ಊರು, ಕೆಲಸ, ಗಂಡ ಮಕ್ಕಳು, ಹವ್ಯಾಸ.. ಹೀಗೇ ಏನೇನೋ ಸಾವಿರ..

ಇತ್ತ ಹಾಲು ಕಾಯಿಸುತ್ತಾ ಅವನ ಪ್ರಶ್ನೆಗಳಿಗೆಲ್ಲ ಶಾಂತಿಯಿಂದ ಉತ್ತರಿಸಿಯಾದ ಮೇಲೆ ‘ಕೆಲಸ ಬಹಳವಿದೆ’ ಎಂದು ಹೇಳಿ ಸಂಭಾಷಣೆ ಮುಗಿಸಲು ನೋಡಿದಳು ಅವಳು.

ಅವನೋ ‘ಹೆಂಗಸರಿಗೂ ಅವರದ್ದೇ ಆದ ಆಸಕ್ತಿ ಇರುತ್ತದೆ, ಕೆಲವು ಹವ್ಯಾಸ-ಅಭ್ಯಾಸಗಳಿರುತ್ತವೆ. ಪುರುಷ ಪ್ರಧಾನ ಸಮಾಜದಲ್ಲಿ ಅವುಗಳನ್ನು ಹತ್ತಿಕ್ಕುವುದು ಸ್ವಲ್ಪ ಮಾತ್ರವೂ ಸರಿಯಲ್ಲ. ಮನೆಗೆಲಸದಲ್ಲಿ ಅವಳನ್ನು ಹೊರ ಜಗತ್ತಿನಿಂದ ದೂರ ಸರಿಸುವುದು ಯಾರೂ ಒಪ್ಪುವಂಥದ್ದಲ್ಲ.. ಮದುವೆ ಎಂಬುದು ಬಂಧನವಾಗಬಾರದು, ಅವಳಿಷ್ಟವನ್ನು ಪೋಷಿಸುವ ಬದುಕಾಗಬೇಕು. ಹೆಂಡತಿಗೆ ಉಸಿರಾಡುವಷ್ಟಾದರೂ ಸ್ಪೇಸ್‌ ಕೊಡಬೇಕು’ ಎಂದೆಲ್ಲ ಅವಳಿಗಾಗಿ ಟೈಪಿಸಿ ಶುಭ ದಿನ ಎಂದು ಕೊನೆಯಲ್ಲಿ ಸೇರಿಸಿದ ಸಂದೇಶವನ್ನು ಕಳಿಸಿದ.
ಅವನ ಮೆಸೇಜ್‌ ಓದುತ್ತಿದ್ದ ಅವಳು ‘ಹೌದಲ್ಲ, ಹೊಳೆದೇ ಇರಲಿಲ್ಲ’ ಎಂದುಕೊಂಡು ಕಲ್ಪನೆಗಿಳಿದಳು. ಒಲೆಯ ಮೇಲಿದ್ದ ಹಾಲು ಉಕ್ಕಿ ಚೆಲ್ಲುತ್ತಲಿತ್ತು.

ಅವಳೊಂದಿಗಿನ ಚಾಟಿಂಗ್‌ ಮುಗಿಸಿ ಮಕ್ಕಳ ಕೆಲಸದಲ್ಲಿ ನಿರತಳಾಗಿದ್ದ ತನ್ನ ಹೆಂಡತಿಯ ಫೇಸ್ಬುಕ್‌ ಅಕೌಂಟ್‌ ತೆರೆದು ಅವನು ಅಪ್ಡೇಟ್‌ ಮಾಡತೊಡಗಿದ.
*
ಅವಳಿಗೆ ಮದುವೆಯಾದ ಹೊಸತು. ಅಡುಗೆ ಮಾಡಿಯೇ ಗೊತ್ತಿಲ್ಲ. ಒಂದಿಷ್ಟು ಪಾಕ ಪುಸ್ತಕ ಕೊಂಡಳು. ಪುಸ್ತಕ ಓದಿ ಅಡುಗೆ ಮಾಡುವುದನ್ನು ಕಲಿತಳು.

ದಿನ, ತಿಂಗಳು, ವರ್ಷ ಕಳೆದು ಬಸುರಿಯಾದಳು. ದೇಹದಲ್ಲಿ, ಮಾನಸಿಕವಾಗಿ ಆಗುವ ಬದಲಾವಣೆಗಳೆಲ್ಲ ಅವಳಿಗೆ ಹೊಸತು. ಸಂಬಂಧಪಟ್ಟ ಹಲವು ಪುಸ್ತಕಗಳನ್ನು ಕೊಂಡು ಓದಿ ತಿಳಿದುಕೊಂಡಳು.

ಮಕ್ಕಳಾದವು. ಮಕ್ಕಳ ಹಠವನ್ನು ನಿಭಾಯಿಸುವುದು ಹೇಗೆ, ಅವರ ಮೊಂಡುತನವನ್ನು ಸ್ವೀಕರಿಸುವುದು ಹೇಗೆ, ತಿದ್ದುವುದು-ಶಿಕ್ಷಿಸುವುದು ಹೇಗೆ ಎಂದು ಗೊಂದಲಕ್ಕೆ ಬಿದ್ದಳು. ಗೊಂದಲ ನಿವಾರಣೆಗಾಗಿ ಮಕ್ಕಳ ವರ್ತನೆಯ ಮೇಲಿನ ಪುಸ್ತಕಗಳನ್ನು ಕೊಂಡು ತಂದಳು.
ಒಂದು ಪುಸ್ತಕದಲ್ಲಿ ಮಕ್ಕಳಿಗೆ ಬಹಳ ಆದ್ಯತೆ ನೀಡುವುದು ಸಲ್ಲ ಎಂದಿತ್ತು, ಮತ್ತೊಂದು ಪುಸ್ತಕದಲ್ಲಿ ಮಕ್ಕಳನ್ನು ನಿರ್ಲಕ್ಷಿಸಿದರೆ ಹಾನಿ ಎಂದಿತ್ತು. ಗೋಜಲಾಯಿತು ಎಂದೆಣಿಸಿ ಮತ್ತೂ ಒಂದು ಹೊರೆ ಮಕ್ಕಳನ್ನು ಸಾಕುವುದರ ಮೇಲಿನ ಪುಸ್ತಕಗಳನ್ನು ಕೊಂಡು ತಂದಳು. ಓದಿ ಓದಿ ತಾನೇ ಒಂದು ಪುಸ್ತಕ ಬರೆಯುವಷ್ಟು ತಯಾರಾದಳು..

ಅಷ್ಟರಲ್ಲಾಗಲೇ ಅವಳ ಮಕ್ಕಳು ಅಮ್ಮನ ಮಡಿಲು ಸಿಗುತ್ತಿಲ್ಲವೆಂದು ದಿಂಬನ್ನು ಹಿಡಿದು ಮಲಗುವುದನ್ನೇ ರೂಢಿಸಿಕೊಂಡಿದ್ದರು.
*
ಪ್ರಾಯದ ಕಾಲದಲ್ಲಿ ಅವಳಲ್ಲಿಯೂ ಬಿಸಿ ರಕ್ತ ಹರಿಯುತ್ತಿತ್ತು. ಸೇರಿಗೆ ಸವ್ವಾಸೇರು ಬೆರೆಸುವ ಕಿಚ್ಚು ಅವಳಿಗೂ ಇತ್ತು. ಕೊಟ್ಟ ಮನೆಗೆ ಹೊಂದಿಕೊಂಡಿರುವುದೆಂದರೆ ಹೇಳಿಸಿಕೊಂಡಿರುವುದಲ್ಲ, ಯಾರ ಕೊಂಕನ್ನೂ ಕೇಳುವ ಅಗತ್ಯ ತನಗಿಲ್ಲ ಎಂದು ಸೊಸೆಯಾಗಿ ಸಿಡಿದೆದ್ದಿದ್ದಳು.

ಸೊಸೆಯಾದ ಮೇಲೆ ಒಂದು ದಿನ ಅತ್ತೆಯೂ ಆಗಬೇಕಲ್ಲವೇ!!

ಮೊನ್ನೆಯಷ್ಟೇ ಮನೆ ತುಂಬಿಸಿಕೊಂಡ ಸೊಸೆಗೆ ಹೊಸ ಮನೆಗೆ ಹೇಗೆ ಹೊಂದಿಕೊಂಡು ನಡೆಯಬೇಕು ಎಂಬ ಹಿತನುಡಿಗಳನ್ನು ಅವಳು ಹೇಳತೊಡಗಿದಳು.

ಹಾಸಿಗೆಯಲ್ಲಿ ಕೆಮ್ಮುತ್ತ ಕೊನೆಯ ದಿನಗಳನ್ನೆಣಿಸುತ್ತ ಮಲಗಿದ ಅವಳ ಅತ್ತೆ ತಪ್ಪು ತನ್ನ ಕಡೆಯಿಂದಲೂ ಬಹಳಷ್ಟಿತ್ತು ಎಂದು ತನ್ನ ತಪ್ಪುಗಳನ್ನು ಲೆಕ್ಕ ಹಾಕುತ್ತಿದ್ದಳು.

– ಛಾಯಾ ಭಟ್‌ಪ (https://vijaykarnataka.indiatimes.com/lavalavk/weekly-magazine/story/stories-in-kannada/articleshow/59712870.cms)

ಇವುಗಳೂ ನಿಮಗಿಷ್ಟವಾಗಬಹುದು

king

ಆತ್ಮ ಚೌರ್ಯ

ಒಬ್ಬ ದೊರೆ. ಅವನಿಗೊಬ್ಬ ವೃದ್ಧ ಸೇವಕ. ಚಿಕ್ಕ ಮಗುವಾದಾಗಿನಿಂದಲೂ ಅವನನ್ನು ಎತ್ತಿ ಬೆಳೆಸಿದವನು. ಈಗ ಅವನಿಗೆ ವಯಸ್ಸಾಗಿದೆ. ಆದರೂ ಬೆಳಿಗ್ಗೆ …

Leave a Reply

Your email address will not be published. Required fields are marked *