Vasumathi Udupi

ವಸುಮತಿ ಉಡುಪ

ವಸುಮತಿ ಉಡುಪ (೧೮-೪-೧೯೪೮): ಪ್ರಖ್ಯಾತ ಕಥೆಗಾರ್ತಿ ವಸುಮತಿ ಉಡುಪರು ಹುಟ್ಟಿದ್ದು ಹೊಸನಗರ ತಾಲ್ಲೂಕಿನ ‘ನಗರ’ದಲ್ಲಿ. ತಂದೆ ಕಿರಣಗೆರೆ ರಂಗಾಭಟ್ಟರು, ತಾಯಿ ತ್ರಿಪುರಾಂಬ. ಪಿ.ಯು.ವರೆಗೆ ಓದಿದ್ದು ತೀರ್ಥಹಳ್ಳಿಯಲ್ಲಿ. ಪಿ.ಯು. ಮುಗಿಯುತ್ತಿದ್ದಂತೆ ಮದುವೆಯಾಗಿ ಓದು ಅನಿವಾರ‍್ಯವಾಗಿ ಕಂಡ ಮುಕ್ತಾಯ. ಪತಿಗೆ ಸರಿಗಟ್ಟುವ ಆಶಯದಿಂದ ತೊಡಗಿಸಿಕೊಂಡದ್ದು ಬರವಣಿಗೆಯಲ್ಲಿ. ಬರಹಗಾರರೆಲ್ಲರಂತೆ ಬರೆಯಲು ಪ್ರಾರಂಭಿಸಿದ್ದು ಕವಿತೆಯಿಂದಲಾದರೂ ಆಯ್ದುಕೊಂಡದ್ದು ಕಥಾಕ್ಷೇತ್ರ. ಜನಪ್ರಿಯ ಸಾಹಿತ್ಯ ಅಥವಾ ಮತ್ತಾವುದೇ ಸಾಹಿತ್ಯವೆನ್ನದೆ, ಯಾವ ‘ಇಸಂ’ಗೂ ಒಳಪಡದೆ, ಸುತ್ತಮುತ್ತಲಿನ ಪ್ರಪಂಚದಲ್ಲಿ ಕಾಣಸಿಗುವ ಮಧ್ಯಮ, ಕೆಳಮಧ್ಯಮ ವರ್ಗದ ನೋವು ನಲಿವುಗಳೇ ಇವರ ಕಥೆಯ ಜೀವಾಳ. ಅಕ್ಕಪಕ್ಕದಲ್ಲಿ ಕಂಡ ವ್ಯಕ್ತಿಗಳೇ ನಾಯಕ, ನಾಯಕಿಯರಾದರೂ ಗುರುತು ಸಿಗದಂತೆ ಮಾರ್ಪಡಿಸಿ ಕಥೆಯಾಗಿಸುವ ಕಲೆ, ಸುತ್ತಲಿನ ಸಮಸ್ಯೆಗಳಿಗೆ ಸ್ಪಂದಿಸುವ ಪರಿ, ಯಾರಿಗೂ ನೋವುಂಟು ಮಾಡದ ಧ್ಯೇಯ, ಈ ನಿಲುವಿನಿಂದ ಒಡಮೂಡಿದ ಕಥೆಗಳು ಇನ್ನೂರ ಐವತ್ತಕ್ಕೂ ಹೆಚ್ಚು.

ಅವಿವಾಹಿತ ಹೆಣ್ಣೊಬ್ಬಳ ಮಾನಸಿಕ ತುಮಲವನ್ನು ಚಿತ್ರಿಸಿದಾಗ ಉಟ್ಟ ಬಟ್ಟೆಯೊಡನೇ ಬಂದರೂ ಜವಾಬ್ದಾರಿ ಹೊರುವೆನೆನ್ನುವ, ಆಜೀವ ಕಾರಾಗೃಹ ಶಿಕ್ಷೆಗೊಳಗಾದವನೊಬ್ಬ ಇವರ ಕಥೆಗಳನ್ನೆಲ್ಲಾ ಕಳುಹಿಸೆನ್ನುವ, ಡಾಕ್ಟರೊಬ್ಬರು ಆತ್ಮಹತ್ಯೆ ಪ್ರಯತ್ನದಿಂದ ವಿಮುಖರಾಗುವ ಲೇಖಕಿಗೆ ಪತ್ರ ಬರೆದ ಪ್ರತಿಕ್ರಿಯೆಗಳಿವೆಯೆಂದರೆ ಇವರ ಕಥೆಗಳ ನೈಜತೆಯ ಆಳ-ವಿಸ್ತಾರದ ಅರಿವಾದೀತು. ಇತರ ಲೇಖಕರಂತೆ ಎಂದೂ ‘ಮೂಡ್’ಗಾಗಿ ಕಾಯದೆ, ಸಮಯಾವಕಾಶಕ್ಕಾಗಿ ಕಾಯ್ದು, ಬಿಡುವಿನ ವೇಳೆಯನ್ನು ಬರವಣಿಗೆಯಿಂದ ಸಾರ್ಥಕ ಪಡಿಸಿಕೊಂಡು ಖುಷಿಪಡುವ ಲೇಖಕಿ.

ಪ್ರಕಟಿತ ಕೃತಿಗಳು: ಕಾದಂಬರಿಗಳು-ಪರಿವರ್ತನೆ, ಸಂಬಂಧಗಳು, ಅನವರತ, ಅವ್ಯಕ್ತ ಮುಂತಾದುವು. ಕಥಾಸಂಕಲನ-ಬಂದನಾ ಹುಲಿರಾಯನು, ವಿಕಲ್ಪ, ಶೇಷ ಪ್ರಶ್ನೆ. ಪ್ರಬಂಧ ಸಂಕಲನ-ಸೀತಾಳದಂಡೆ. ಇವು ಪ್ರಕಟಿತ ಕೃತಿಗಳು. ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ. ಕಥೆಗಳು ಹಿಂದಿ, ತೆಲುಗು ಭಾಷೆಗೂ ಅನುವಾದಗೊಂಡಿವೆ. ಕೆಲವು ನಾಟಕವಾಗಿ ಪರಿವರ್ತಿತವಾಗಿವೆ. ಹಲವಾರು ಕಥೆಗಳು ಆಕಾಶವಾಣಿ, ದೂರದರ್ಶನದಲ್ಲಿ ಪ್ರಸಾರಗೊಂಡಿವೆ.

ಸಂದ ಪ್ರಶಸ್ತಿಗಳು: ಅಳಸಿಂಗ ಪ್ರಶಸ್ತಿ, ರಾಮಕ್ಕ ಪದ್ಮಕ್ಕ ಗ್ರಂಥಾಲಯ ಕಾದಂಬರಿ ಬಹುಮಾನ, ಮುಂಬೈ ಕನ್ನಡಿಗರ ಕೂಟದ ಮಕ್ಕಳ ನಾಟಕ ರಚನಾ ಸ್ಪರ್ಧೆಯಲ್ಲಿ ಬಹುಮಾನ, ಕಥಾರಂಗಂ ಸಂಸ್ಥೆಯಿಂದ ಕನ್ನಡ ಕವಿತಾ ಪ್ರಶಸ್ತಿ, ದು.ನಿಂ. ಬೆಳಗಲಿ ಸಾಹಿತ್ಯ ಪ್ರಶಸ್ತಿ ಮುಂತಾದುವು.
ಲೇಖಕರು: ವೈ.ಎನ್. ಗುಂಡೂರಾವ್‌, ಕಣಜ

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 4.8 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

Indira Halambi

ಇಂದಿರಾ ಹಾಲಂಬಿ (ಗಿರಿವಾಸಿನಿ)

ಇಂದಿರಾ ಹಾಲಂಬಿ (ಗಿರಿವಾಸಿನಿ) (೧೫.೧೦.೧೯೩೪): ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಪೂರಕವಾದ ಹಲವಾರು ಪ್ರಕಾರಗಳಲ್ಲಿ ಕೃತಿ ರಚಿಸಿರುವರಲ್ಲದೆ ಪ್ರಕಾಶಕಿಯಾಗಿಯೂ ಕನ್ನಡ ಸಾಹಿತ್ಯದ …

Leave a Reply

Your email address will not be published. Required fields are marked *